ಅನಾಮಿಕಳ ಆತ್ಮ ವೃತ್ತಾಂತ

ನಮ್ಮ ಓದುಗರೊಬ್ಬರು ಬರೆದ ಪ್ರಥಮ ಕತೆ [ನೀಳ್ಗತೆ]

ಪೋಲೀಸ ಪೇದೆಯ ಪುತ್ರಿಯಾದ ಕಾವ್ಯ ದೇವರಾಜ್‌ ಇಲ್ಲಿ ತನ್ನ ಅಪ್ಪ- ಅಮ್ಮನ ಬಗ್ಗೆ ಮನ ಕರಗುವ ಹಾಗೆ ಆಪ್ತವಾಗಿ ಬರೆದಿದ್ದಾರೆ.

ಇದೊಂದು ಸತ್ಯ ಕತೆ

ಕತೆ ಎಲ್ಲಿ? ಹೇಗೆ? ಹುಟ್ಟುತ್ತದೆ ಎಂದು ಹೇಳಲಾಗುವುದಿಲ್ಲ. ಅದಕ್ಕೆ ಪದವಿ ಬೇಕಿಲ್ಲ. ವಿಶ್ವವಿದ್ಯಾಲಯಗಳ ಖುರ್ಚಿ ಬೇಕಿಲ್ಲ ಅಲ್ಲಿದ್ದವರಷ್ಟೇ ಬರೆಯುತ್ತಾರೆಂಬುದಿಲ್ಲ. ಅಥವಾ ಶಿಕ್ಷಕ- ಪ್ರಾಧ್ಯಪಕರಷ್ಟೇ ಬರೆಯುತ್ತಾರೆಂದಲ್ಲ. ಪ್ರತಿಯೊಬ್ಬರಲ್ಲೂ ಕತೆ ಅಡಗಿರುತ್ತದೆ. ಆದರೆ ಅದನ್ನು ಹೇಗೆ ಹೇಳಬೇಕೆಂಬ ಹೊಳವು ಮಾತ್ರ ಎಲ್ಲರಿಗೂ ಗೊತ್ತಿರುವುದಿಲ್ಲ. ಅದಕ್ಕೇ ನಾವು ಪ್ರತಿಭೆ ಅನ್ನುವುದು. ಅದು ಇದ್ದವರಷ್ಟೇ ಬರೆಯಲು ಸಾಧ್ಯವಾಗುವುದು. ಹಾಗಾಗಿ ಕೆಲವರು ಮಾತ್ರ ಕತೆಗಾರರಾಗುತ್ತಾರೆ. ಕೆಲವರು ಮಾತ್ರ ಕವಿಗಳಾಗುತ್ತಾರೆ. ಹೆಚ್ಚಿನ ಹೊಳವು ಗೊತ್ತಿದ್ದವರು ಪ್ರಶಸ್ತಿ, ಗೌರವಗಳನ್ನೂ ಪಡೆಯುತ್ತಾರೆ. ಇತ್ತೀಚೆಗೆ ಶಿಕ್ಷಕ ಸಾಹಿತಿಗಳು, ಶಿಕ್ಷಕೇತರ ಸಾಹಿತಿಗಳು ಎಂದು ಎರಡು ಭಾಗಗಳನ್ನು ಬುದ್ಧಿವಂತರು ಮಾಡಿದ್ದಾರೆ. ಜಾತಿ ರಾಜಕಾರಣ ಮಾಡುವವರು ಇದ್ದಾರಲ್ಲ ಹಾಗೆ.

ಇದನ್ನು ಹೇಳುವುದಕ್ಕೆ ಕಾರಣವಿದೆ. ಶ್ರೀಮತಿ ಕಾವ್ಯ ದೇವರಾಜ್‌ ಅವರು ಒಬ್ಬ ಗೃಹಿಣಿ. ಸೋಕಾಲ್ಡ ಮಂದಿ ಇಂಥವರಿಗೆ ಹೌಸ್‌ ವೈಫ್‌ನೋ ಇಲ್ಲಾ ಹೌಸ್‌ ಮೇಕರ್‌ ಎಂತಲೋ ಕರೆಯುತ್ತಾರೆ. ಆದರೆ ಇವರಿಗಿರುವ ಬರವಣಿಗೆಯ ತುಡಿತ ಅಗಾಧವಾದದ್ದು. ಮನಸ್ಸಿನ ನೋವುಗಳನ್ನು ಹೊರ ಹಾಕಲು ಇವರು ಬಳಸಿಕೊಂಡದ್ದು ಕಥಾ ರೂಪದ ವೃತ್ತಾಂತವನ್ನು. ಮೊದಲೇ ಹೇಳಿ ಬಿಡುತ್ತೇನೆ. ಇವರು ಯಾವ ದೊಡ್ಡ ಸಾಹಿತಿಯ ಮಗಳೂ ಅಲ್ಲ, ಯೂನಿವರ್ಸಿಟಿ ಪ್ರೊಫೆಸರ ಮಗಳೂ ಅಲ್ಲ. ಅಂಥಲ್ಲಿ ಕೆಲಸವನ್ನೂ ಮಾಡುವುದಿಲ್ಲ. ದೊಡ್ಡ ಡಿಗ್ರಿ, ‘ ಡಾ’ ಪದವಿಯನ್ನೂ ಗಳಿಸಿಲ್ಲ. ಸೀದಾ-ಸಾದಾ ಗೃಹಿಣಿ. ತನ್ನ ಮನಸ್ಸಿನ ತುಡಿತವನ್ನು ಬರವಣಿಗೆಯಲ್ಲಿ ತೋಡಿಕೊಂಡಿದ್ದಾರೆ. ಇದು ನೋಡಿ ನಮ್ಮನ್ನು ಅಚ್ಚರಿಗೊಳಿಸಿದ್ದು. ಅವರು ನಮಗೆ ಬರೆದ ವೃತ್ತಾಂತ ರೂಪದ ಕತೆ ಅವರ ಮೊದಲ ಬರವಣಿಗೆ. ಈ ಹಿಂದೆ ಅವರು ಏನನ್ನೂ ಬರೆದಿಲ್ಲ. ಬರೆದು ಪ್ರಕಟಿಸಿಲ್ಲ. ನಮ್ಮ ಆಕೃತಿ ಮ್ಯಾಗಝಿನ್‌ಗೆ ಮೊದಲು ಬರೆದದ್ದೇ ಇದು. ವಿಮರ್ಶಕರು ಹೇಳುವ ಹಾಗೆ ಇಲ್ಲಿ ಕಥಾ-ತಂತ್ರ, ನಿರೂಪಣಾ ಕೌಶಲ್ಯ, ಭಾಷಾ ಬಳಕೆ ಇತ್ಯಾದಿ, ಕತೆಯ ಆರಂಭ, ಮತ್ತು ಕೊನೆ ಇತ್ಯಾದಿಗಳ ಬಗ್ಗೆ ಏನೂ ಗೊತ್ತಿಲ್ಲದ ಕಾವ್ಯರವರು ಬರೆಯುತ್ತ ಹೋಗಿದ್ದಾರೆ. ಅವರ ಬರವಣಿಗೆಯೇ ನಮಗೆ ಅಚ್ಚರಿ ಹುಟ್ಟಿಸಿದ್ದು. ಕಾವ್ಯ ಹೇಳಿಕೇಳಿ ಒಬ್ಬ ಪೋಲೀಸನ ಮಗಳು. ಪೊಲೀಸ ಅಪ್ಪನ ಧೈರ್ಯ, ತಾಳ್ಮೆ ಇವರಿಗೂ ಇದೆ. ಅದು ಬರವಣಿಗೆಯ ಉದ್ದಕ್ಕೂ ಕಾಣುತ್ತ ಹೋಗುತ್ತದೆ. ಆಕೃತಿ ಮ್ಯಾಗಝಿನ್‌ಗೆಂದೇ ಬರೆದ ಕಾವ್ಯ ದೇವರಾಜ್‌ ರ ಈ ವೃತ್ತಾಂತವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಕತೆ ನೀಳ್ಗತೆಯಂತಿದ್ದರೂ ಕತೆಯ ಅಂತಃಕರಣ ಎಲ್ಲರೆದೆ ತಟ್ಟುವುದಂತೂ ಖಂಡಿತ.

ಓದಿ ನೋಡಿ. ‘ ಅನಾಮಿಕಳ ಆತ್ಮ ವೃತ್ತಾಂತ, * ನನ್ನ ಕತೆ [ಒಂದು ನೀಳ್ಗತೆ]

ಅನಾಮಿಕಳ ಆತ್ಮ ವೃತ್ತಾಂತ [ನೀಳ್ಗತೆ]

* ಕಾವ್ಯ ದೇವರಾಜ್‌ ಬರೆದ ಮೊದಲ ಕತೆ.

ಕತೆಯೊಳಗೆ ಇಳಿಯುವ ಮುನ್ನ

ಪ್ರತಿಯೊಬ್ಬರ ಜೀವನದಲ್ಲಿ ಪ್ರಭಾವ ಮೂಡಿಸಿದ ಯಾರಾದರೂ ಒಬ್ಬ ವ್ಯಕ್ತಿ ಇದ್ದೇ ಇರುತ್ತಾರೆ. ಅವರ ಆದರ್ಶ ಗುಣ ನಮ್ಮಲ್ಲಿ ಅಚ್ಚೊತ್ತಿರುತ್ತದೆ. ಅವರು ಜೀವನದಲ್ಲಿ ರೂಢಿಸಿಕೊಂಡ ರೀತಿ-ನೀತಿಗಳು, ಸಾಧಿಸಿದ ಯಶಸ್ಸು ಕಂಡಾಗ ನಾವೂ ಹಾಗೇ ಆಗಬೇಕು ಎಂದು ಬಯಸುತ್ತೇವೆ. ನಾನು ಹೆಚ್ಚು ಪ್ರಭಾವಿತಳಾದದ್ದು ನನ್ನ ಅಪ್ಪ- ಅಮ್ಮರಿಂದ. ಸಾಧಾರಣವಾಗಿ ನನ್ನ ಹಾಗೆ ಎಲ್ಲ ಹೆಣ್ಣು ಮಕ್ಕಳೂ ಅಪ್ಪ- ಅಮ್ಮನನ್ನು ಪ್ರೀತಿಸುತ್ತಾರೆ. ನಮಗೆಲ್ಲ ಬದುಕಿನ ಪ್ರಭಾವಲಯ ರೂಪಿಸಿಕೊಟ್ಟವರೇಅವರಲ್ಲವೆ? ಅವರು ಬೆಳೆಸಿದ ಹಾಗೆ ಬೆಳೆದಿರುತ್ತೇವೆ ಎಂಬ ನಂಬುಗೆ ನನ್ನದು. ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನುತ್ತಾರೆ. ಹಾಗೆಯೇ ಮಕ್ಕಳಿಗೆ ಅಪ್ಪ-ಅಮ್ಮರೇ ದೈವ ಎಂಬುದನ್ನು ಕಟುವಾಗಿ ನಂಬಿದವಳು ನಾನು. ಅವರೇ ನನ್ನ ಪಾಲಿಗೆ ರಾಮಾಯಣ. ಅವರೇ ನನ್ನ ಪಾಲಿನ ಭಗವದ್ಗೀತೆ. ಅವರ ಸರಳತೆ, ಗಂಭೀರವಾದ ವ್ಯಕ್ತಿತ್ವ, ಜೀವನದಲ್ಲಿ ಬಂದೆರಗುವ ನೋವಿನಲ್ಲೂ ನಗುವ-ನಗಿಸುವ ಅವರ ವಿವೇಕ, ಹಾಸಿಗೆಯಿದ್ದಷ್ಟು ಕಾಲು ಚಾಚಿ, ಜೀವನ ನಡೆಸುವ ಅವರ ಜಾಣ್ಮೆ ಮಗಳಾದ ನನ್ನಲ್ಲಿ ಅವರ ಆದರ್ಶ ಮೂರ್ತಿಯನ್ನು ಕಟೆದು ರೂಪಿಸಿದೆ. . ನನ್ನ ಜೀವನದಲ್ಲಿ ಪ್ರಭಾವ ಬೀರಿದವರು, ನನಗೆ ಸ್ಫೂರ್ತಿಯಾದವರು ನನ್ನ ಅಪ್ಪ- ಅಮ್ಮ ಎಂದು ಗಟ್ಟಿಯಾಗಿ ಹೇಳಬಲ್ಲೆ.

ಇದು ನನ್ನ ಅಪ್ಪನ ಕತೆ …

ನನ್ನ ತಂದೆಯ ಹೆಸರು ಶಿವಣ್ಣ. ಮೂಲತಃ ಮಂಡ್ಯ ಜಿಲ್ಲೆಯ ಒಂದು ಪುಟ್ಟ ಗ್ರಾಮದಿಂದ ಬಂದವರು. ಅವರ ದುರ್ದೈವ ನೋಡಿ. ಮೂರು ತಿಂಗಳ ಮಗುವಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡು ತಬ್ಬಲಿತನದ ನೋವುಂಡರು. ಮನೆಯಲ್ಲಿ ಹಾಸಿ ಹೊದ್ದುಕೊಳ್ಳುವಷ್ಟು ಬಡತನ. ಅಜ್ಜನಿಗೆ ಗದ್ದೆ ಕೆಲಸ. ಇರುವ ಒಂದಷ್ಟು ಎಕರೆಯಲ್ಲಿ ಗೇಯ್ದದ್ದೇ ಬಂತು. ಹೊಟ್ಟೆ ತುಂಬುತ್ತಿರಲಿಲ್ಲ. ಅಂಥದ್ದರಲ್ಲಿ ಪರದೇಸಿ ಮಗುವನ್ನೂ ಸಾಕಿಕೊಂಡು ಶಿವ ಶಿವ ಅನ್ನುತ್ತ ಜೀವನ ಸಾಗಿಸಿದರು.

ಅಪ್ಪನಿಗೆ ಒಬ್ಬ ಅಣ್ಣ, ಒಬ್ಬ ಅಕ್ಕ ಇದ್ದರು. ಹಾಗೆ ನೋಡಿದರೆ ಅವರೇ ಅಪ್ಪನನ್ನು ಸಾಕಿದ್ದು. ಅಕ್ಕ ತಾಯಿಯಂತೆ ನೋಡಿ ಕೊಂಡಳು. ಅಪ್ಪ, ಅಣ್ಣ ಹೇಗೂ ಗಂಡಸರು. ಅವರಿಗೆ ಹೊರಗಿನ ಓಡಾಟವೇ ಜಾಸ್ತಿಯಾಗಿತ್ತು. ಆಗಿನ ಕಾಲದಲ್ಲಿ ಈಗಿನಂತೆ ಸರಕಾರದ ಯಾವ ಸಹಾಯವೂ ಇರಲಿಲ್ಲ. ಬರೀ ಇವರಿಗಷ್ಟೇ ಅಲ್ಲ. ಅರೆಹೊಟ್ಟೆ ಹಸಿವು ಊರಿಗೇ ಇತ್ತು. ಹಾಗೂ ಹೀಗೂ ಅಪ್ಪ ದೊಡ್ಡವನಾಗಿ ಸರಕಾರಿ ಶಾಲೆಗೂ ಹೋಗಲು ಸುರು ಮಾಡಿದ. ಜೊತೆಗೆ ಗದ್ದೇ ಕೆಲಸವೂ ಇತ್ತು. ಬಡತನದ ಗೋಳಿನಲ್ಲಿಯೇ ಅಪ್ಪನಿಗೆ ಹತ್ತನೇ ತರಗತಿವರೆಗೆ ಓದಿಸಿದರು.

ಅಲ್ಲಿಯವರೆಗೆ ಓದಿದ್ದೇನೋ ಆಯಿತು. ಆದರೆ ಮುಂದೆ? ಮುಂದೆ ಓದಬೇಕೆಂದರೆ ಬೇರೆ ಊರಿಗೆ ಹೋಗಬೇಕು. ಅದಕ್ಕಾಗಿ ಹಣ ಬೇಕು. ಹಣದ ಮಾತು ಬರುತ್ತಲೇ ಮನೆಯಲ್ಲಿ ಒಂದೇ ನಿರ್ಧಾರ. ಇನ್ನು ಓದಿದ್ದು ಸಾಕು ಎಂದು. ಹತ್ತನೇ ಕ್ಲಾಸು ಓದಿದ್ದಾನೆಂದರೆ ಆಗಿನ ಕಾಲದಲ್ಲಿ ಹುಡುಗಾಟವಾಗಿರಲಿಲ್ಲ. ಮೈಸೂರಿಗೆ ಹೋಗಿ ಚಾಕರಿ ಹಿಡಿಯುವುದೇ. ಎಲ್ಲರೂ ಸೇರಿ ಅಪ್ಪನಿಗೆ ಅದನ್ನೇ ಹೇಳಿದರು. ಅಪ್ಪ ಮನೆ ಬಿಟ್ಟರು. ಮೈಸೂರಿಗೆ ಬಂದು, ಹತ್ತನೆ ಕ್ಲಾಸು ಓದಿದ್ದೇನೆ ಎಂದು ಹೇಳಿಕೊಂಡು ಕೆಲಸದ ಬೇಟೆ ಸುರು ಮಾಡಿದರು. ಆಗ ಗೊತ್ತಾಯಿತು ನೋಡಿ. ಪ್ರಪಂಚ ಅಂದ್ರೆ ಏನೂ ಅಂತ. ಅಪ್ಪ ಹೌಹಾರಿ ಹೋದರು. ಸರಕಾರೀ ಶಾಲೆಯ ಹತ್ತನೇ ಕ್ಲಾಸಿನ ಓದು ಯಾತಕ್ಕೂ ಬರುವುದಿಲ್ಲ ಎಂದು.

ಮೈಸೂರಿನಲ್ಲಿ ಅಪ್ಪ ಹೊಟ್ಟೆ ಪಾಡಿಗಾಗಿ ಮಾಡದ ಕೆಲಸಗಳೇ ಇರಲಿಲ್ಲ. ಮಂಡಿ ಅಂಗಡಿಗಳಲ್ಲಿ ಕೆಲಸ ಮಾಡುತ್ತ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಕಟ್ಟುತ್ತ, ಏನಾದರೂ ಅನ್ನಕ್ಕೆ ದಾರಿ ಸಿಕ್ಕೀತೇನೋ ಎಂದು ಹಂಬಲಿಸಿದರು. ಅವರ ಪರಿಶ್ರಮದ ಫಲವೇನೋ. ಒಂದೇ ಬಾರಿಗೆ ಮಿಲಿಟರಿ ಮತ್ತು ರೇಲ್ವೆ ಇಲಾಖೆಯ ಪೋಲೀಸ ಪರೀಕ್ಷೆಗಳಲ್ಲಿ ಪಾಸಾಗಿ ಬಿಟ್ಟರು. ಅಪ್ಪ ಖುಶಿಯಾದರು. ಆಗ ಬೆಳ್ಳನ್ನ ಬೆಳಗಾಯಿತೂ… ಎಂದು ಲತಾ ಮಂಗೇಶ್ವರ ಹಾಡು ನೆನಪಿಸಿಕೊಂಡು ಹಾಡಿಕೊಂಡರಂತೆ. ಆದರೆ ಅವರ ಅಣ್ಣ ಮತ್ತು ಅಪ್ಪ ಮಿಲಿಟರಿ ಸೇರಲು ಒಪ್ಪದ ಕಾರಣ ಪೋಲೀಸ ಇಲಾಖೆ ಸೇರಿದರು. ಕೊನೆಗೂ ಹತ್ತನೇ ಕ್ಲಾಸು ಅನ್ನದ ದಾರಿಗೆ ಕಾರಣ ಆಯಿತು. ಇಷ್ಟು ಅಪ್ಪನ ಕತೆ.

ಮುಗಿಲು ಕತ್ತರಿಸಿ ಬಿತ್ತು…

ಗಡಿಯಾರದ ಮುಳ್ಳು ಒಂದೇ ಕಡೆ ನಿಲ್ಲುವುದಿಲ್ಲ. ಚಕ್ರ ತಿರುಗುತ್ತಿತ್ತು. ನನ್ನ ತಂಗಿ ಹುಟ್ಟಿದ ಎಂಟನೇ ವರ್ಷಕ್ಕೆ ಸರಿಯಾಗಿ ಅಮ್ಮ ಖಾಯಿಲೆ ಬಿದ್ದರು. ಅದೇನು ಸುಡುಗಾಡು ಖಾಯಿಲೆಯೋ. ಅಪ್ಪ ಗಾಬರಿಯಾಗಿ ಅಲ್ಲಿ ಇಲ್ಲಿ ಸುತ್ತಾಡಿ ತೋರಿಸಿದರು. ಅವರಿಗೆ ಅಮ್ಮ ಅಂದರೆ ಪಂಚ ಪ್ರಾಣ. ಅವರಿಲ್ಲದೆ ಕ್ಷಣವೂ ಇರಲಾರರು. ಡ್ಯೂಟಿಗೆ ಹೋದಾಗಲೂ ನಾಲ್ಕು ಬಾರಿ ಕೇಳೋರು. ಅಮ್ಮ ‘ ‘ ‘ ‘ ಏನ್‌ ಮಾಡತೈತೇ ಮಗಾ ಅಂತ. ಇವತ್ತು ರಾತ್ರೀಗೆ ಬಾಡು ಊಟ ಮಾಡುವಾ. ಹಾಂ. ಅಮ್ಮಂಗೆ ಹೇಳ್ಬಿಡು ‘ – ಅಂತಿದ್ರು. ಕೊನೆಗೆ ಡಾಕ್ಟರು ಹೆಸರಿಟ್ಟದ್ದು ಅದು ಹೃದಯ ಸಂಬಂಧಿ ಖಾಯಿಲೆ ಎಂದು. ಅಪ್ಪ ಕುಸುದು ಬಿದ್ದರು. ನಾನು, ನನ್ನ ತಂಗಿ ಮೂಗಿನ ಮೇಲೆ ಬೆರಳಿಟ್ಟು ಏನದು ಹಂಗಂದ್ರೆ ಎಂದು ಯೋಚಿಸಿದೆವು. ವಿಷಯ ಪಕ್ಕಾ ತಿಳಿದಾಗ ಮನೆಯ ಮೇಲೆ ಮೋಡವೇ ಉದುರಿ ಬಿದ್ದಂತಾಯಿತು. ತಂಗಿ ಮತ್ತು ನಾನು ಒಂದೆಡೆ ಕೂತು ಅತ್ತೆವು. ಅಪ್ಪ ಎಲ್ಲ ಅಳುವನ್ನೂ ಇಂಗಿಸಿಕೊಂಡು ಬಿಟ್ಟಿದ್ದರು. ಆಗ ನಾನಿನ್ನೂ ನಾಲ್ಕನೇ ತರಗತಿ. ನನ್ನ ತಂಗಿ ಎರಡನೇ ತರಗತಿ. ಯಾವುದು ಏನು, ಎತ್ತ, ಎಂದು ತಿಳಿಯದ ವಯಸ್ಸು ಇಬ್ಬರದೂ. ಅಲ್ಲಿಯವರೆಗೂ ಸುಖೀ ಕುಟುಂಬವೇ ಆಗಿತ್ತು ನಮ್ಮದು. ಗಂಡು ಮಕ್ಕಳಿಲ್ಲ ಎಂಬ ಕೊರಗೇ ಇರಲಿಲ್ಲ ಇಬ್ಬರಲ್ಲೂ.

ಸಂಬಂಧಿಕರು ವಿಷಯ ತಿಳಿದು ಬಂದು ಹೋಗ ತೊಡಗಿದರು. ಅಮ್ಮಣ್ಣಿಗೆ ಎದೆ ರೋಗವಂತೆ. ಭೋ ಹುಶಾರು ಕಣಮ್ಮೋ ಎಂದು ಹೆದರಿಸಿ ಹೋಗುವವರೇ ಜಾಸ್ತಿ ಆದರು. ಹೆದರಿಕೇನೇ ಗೊತ್ತಿಲ್ಲದ ನಾವು ಈಗ ಹೆದರತೊಡಗಿದೆವು. ಅವತ್ತು ರಾತ್ರಿಯಿಡೀ ಒದ್ದಾಡಿದ ಅಮ್ಮನನ್ನು ಬೆಳಿಗ್ಗೇನೇ ಅಪ್ಪ ಆಸ್ಪತ್ರೆಗೆ ಕರೆದೊಯ್ದರು. ಡಾಕುಟ್ರು ಎಲ್ಲಾ ನೋಡಿ ಹೇಳಿದ ಮಾತು ಈಟಿಯಿಂದ ಎಲ್ಲರೆದೆ ತಿವಿದಂಗಾತು.

 

‘ ನೋಡಿ ಇವ್ರೇ, ಪೇಶಂಟು ಕಂಡೀಶನ್ನು ಫೈನಲ್ ಸ್ಟೇಜಿಗೆ ಬಂದಿದೆ. ಯಾವ ಹೊತ್ತಿಗಾದರೂ ಪ್ರಾಣ ಹೋಗಬಹುದು. ಆರೈಕೆ ನಮ್ಮದು. ಭಾರ ಮೇಲಿನವನದು. ಇಷ್ಟು ಗಂಟೆ, ಇಷ್ಟು ದಿನ, ಇಷ್ಟು ನಿಮಿಷ ಅಂತ ಹೇಳಲು ಬರುವುದಿಲ್ಲ. ಸುಮ್ಮನೆ ದುಡ್ಡು ಖರ್ಚು ಯಾಕೆ ಖರ್ಚು ಮಾಡ್ತೀರಿ. ಹೇಳಿಕೇಳಿ ಪೋಲೀಸು’ ಎಂದು ಕೈ ಜಾಡಿಸಿಬಿಟ್ಟರು.

 

ಅದನ್ನು ಕೇಳಿದ್ದೇ ತಡ. ಅಪ್ಪ ತಲೆ ಮೇಲೆ ಕೈ ಹೊತ್ತು ಕೂತು ಬಿಟ್ಟರು. ಸ್ವಲ್ಪ ಸಮಯ ಯಾರೊಂದಿಗೂ ಮಾತಾಡಲಿಲ್ಲ. ಸಂಬಂಧಿಕರು ಮೆಲ್ಲಗೆ ದನಿಗೂಡಿಸಿದರು. ಹೌದು. ಪೋಲೀಸ ಕೆಲಸದಲ್ಲಿ ಏನಿರತ್ತೆ? ಅವಳ ಅದೃಷ್ಟ. ಗಂಡನನ್ನೂ ಕಂಡಳು. ಮಕ್ಕಳನ್ನೂ ಕಂಡಳು. ಮುತೈದೆ ಸಾವು ಒಳ್ಳೇದು ಅಂದರು ಕೆಲವರು. ನಾನು ತಂಗಿಯನ್ನು ಬಿಗಿದಪ್ಪಿ ಅತ್ತೆ. ಕೂಡಲೇ ಮೇಲೆದ್ದ ಅಪ್ಪ ಜೋರಾಗಿ ಹೇಳಿದ್ರು. ‘ ಇಲ್ಲ. ಈ ಡಾಕಟ್ರು ಸರಿ ಇಲ್ಲ. ಇವರ ಹತ್ರ ಏನೂ ಆಗೋದಿಲ್ಲ. ಅವ್ಳು ಉಳೀಬೇಕು. ಉಳೀತಾಳೆ. ನಾನು ಬಿಡೋದಿಲ್ಲ. ಇವರೊಬ್ರಾ ಇರೋದು? ಇನ್ನೊಬ್ಬ ಡಾಕುಟ್ರ ಹತ್ತಿರ ಹೋಗತೀನಿ. ನನ್ನ ಹೆಂಡ್ತೀನ ಉಳಿಸ್ಕೋತೀನಿ ‘ ಎಂದು ಎದ್ದೇ ಬಿಟ್ರು. ಎಲ್ಲ ಪೆಚ್ಚಾಗಿ ನೋಡಿದ್ರು ಅಷ್ಟೇಯ. ಎಲ್ಲಿ ಹೋದರೂ ಅದೇ ಉತ್ತರ.

ಅಪ್ಪ ಯಾರ್ಯಾರೋ ಹೇಳಿದ ಕಡೆ ಅಮ್ಮನನ್ನು ಕಟ್ಟಿಕೊಂಡು ಓಡಾಡಿದರು. ನನ್ನ ಹೆಂಡ್ತೀನ ಬದುಕಿಸಿ ಎಂದು ಗೋಳಿಟ್ಟರು. ಡ್ಯೂಟಿಗೆ ರಜೆ ಹಾಕಿದ್ರು. ಮನೇಲಿ ನಾನು ನನ್ನ ತಂಗಿ ಸರಿಯಾಗಿ ಊಟವನ್ನೂ ಮಾಡದೆ ಕೂತೆವು. ಆದರೆ ಅಪ್ಪನ ಪರಿಶ್ರಮ ಫಲ ಕೊಡಲಿಲ್ಲ. ಯಾವ ಡಾಕ್ಟರೂ ಅಮ್ಮ ಬದುಕುತ್ತಾಳೆಂದು ಹೇಳಲಿಲ್ಲ. ಎಲ್ಲರದೂ ಒಂದೇ ಉತ್ತರವಾಯಿತು. ಸರಿ. ಇಲ್ಲಿಂದ ಅಪ್ಪನಿಗೆ ಸಾಲದ ಹೊರೆ ಸುರು ಆಯಿತು. ಬರ ಬರುತ್ತ ಸಾಲ ಕೊಡುವವರೂ ಹಿಂದೇಟು ಹಾಕತೊಡಗಿದರು. ಅಪ್ಪನಿಗೆ ಬೇರೆ ದಾರೀನೆ ಕಾಣಲಿಲ್ಲ. ಅಮ್ಮನನ್ನು ಅದೆಲ್ಲಿ ಕಳೆದುಕೊಂಡೇ ಬಿಡುತ್ತೇನೋ ಎಂದು ಗಾಬರಿ ಆದರು. ಸಮಾಧಾನ ಹೇಳಲು ಬಂದವರಿಗೆ ಇವರು ಕೇಳುತ್ತಿದ್ದುದು ಒಂದೇ ಮಾತು. ನನ್ನ ಹೆಂಡ್ತಿ ಬದುಕ್ತಾಳಲ್ವ? ಎಂದು. ನನ್ನ ಹೆಂಡ್ತಿ ದೂರಾಗಬಾರದು. ನನ್ನ ಚಿಕ್ಕ ಮಕ್ಕಳು ಅನಾಥ ಆಗಬಾರದು. ತಬ್ಬಲಿ ಆಗಬಾರದು ಎಂದೆಲ್ಲ ಗೋಗರೆಯುತ್ತಿದ್ದರು.

ಅಪ್ಪ ತಾವು ಆರು ತಿಂಗಳು ಮಗುವಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡವರು. ಅದರ ನೋವು ಏನು ಎಂದು ಅವರಿಗೆ ಮಾತ್ರ ಗೊತ್ತಿತ್ತು. ಆ ಸ್ಥಿತಿ ತನ್ನ ಮಕ್ಕಳಿಗೆ ಬರಬಾರದು ಎಂದು ಹಂಬಲಿಸುತ್ತಿದ್ದರು. ಮತ್ತು ಎತ್ತಲೋ ಮುಖ ಮರೆ ಮಾಡಿ ಅಳುತ್ತಿದ್ದರು. ಅದನ್ನು ಗಮನಿಸಿದ ನಾನು, ತಂಗೀನೂ ಅಳುತ್ತಿದ್ದೆವು.

ನಾನು ಎಲ್ಲಾ ದೇವರಿಗೂ ಹರಕೆ ಹೊತ್ತೆ. ಮದ್ದೂರಮ್ಮ, ಭೀಷ್ಟಮ್ಮ, ಚೌಡಮ್ಮ, ಚಾಮುಂಡೇಶ್ವರಿ ಯಾವ ದೇವರೂ ಉಳಿಯಲಿಲ್ಲ. ಅಮ್ಮ ಹುಷಾರಾದ್ರೆ ಗುಡೀಗೆ ಬಂದು ಹರಕೆ ತೀರಸ್ತೀನಿ ಅಂತ ಬೇಡ್ಕೊಂಡೆ. ನಾನಷ್ಟೇ ಅಲ್ಲ, ಮನೆಯಲ್ಲಿ ಅಪ್ಪ, ತಂಗಿ, ಮಾವ ಎಲ್ಲರೂ ದೇವರತ್ತ ಮುಖ ಮಾಡಿದರು.

ನಮ್ಮ ಮೊರೆ ದೇವರಿಗೆ ಮುಟ್ಟಿತು

ನನ್ನ ಮಾವ ಒಬ್ಬರು ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದರು. ಅವರು ಅಮ್ಮನನ್ನು ನೋಡಲು ಮೈಸೂರಿಗೆ ಬಂದರು. ಅಮ್ಮನ ಸ್ಥಿತಿ ನೋಡಿ ಅವರಿಗೂ ಸಂಕಟವಾಯಿತು. ದೈವ ಪ್ರೇರಣೆಯೋ ಏನೋ. ಅವರೊಂದು ಸಲಹೆ ಕೊಟ್ಟರು. ಬೆಂಗಳೂರಿನ ವೈಟ್‌ ಫೀಲ್ಡನಲ್ಲಿರುವ ಪುಟಪರ್ತಿ ಸಾಯೀಬಾಬಾ ಆಸ್ಪತ್ರೆಗೆ ಒಂದ್ಸಲ ಸೇರಿಸಿ ನೋಡಿ. ಹಣವೇನೂ ಖರ್ಚಾಗುವುದಿಲ್ಲ. ಅಲ್ಲಿಯೂ ಒಳ್ಳೆಯ ಡಾಕ್ಟರಿದ್ದಾರೆ. ಅಂದರು. ಯಾರು ಏನು ಹೇಳಿದರೂ ಅಪ್ಪ ಅದನ್ನು ಮಾಡಲು ಸಿದ್ಧರಿದ್ದರು. ಕೂಡಲೇ ಅಮ್ಮನನ್ನು ಮೈಸೂರಿನಿಂದ ಬೆಂಗಳೂರಿಗೆ ಕರೆದೊಯ್ದರು. ಅಮ್ಮ ಸಾಯಿಬಾಬಾ ಆಸ್ಪತ್ರೆಯಲ್ಲಿ ಸೇರಿದರು. ನಮ್ಮ ಆತಂಕ ಇಮ್ಮಡಿಸಿತು.

ಸಾಯಿಬಾಬಾ ಆಸ್ಪತ್ರೆಯ ರೀತಿ ರಿವಾಜೇ ಬೇರೆ. ಅಲ್ಲಿಗೆ ವಿದೇಶಿ ವೈದ್ಯರು ಇಷ್ಟಿಷ್ಟು ದಿನಕ್ಕೆಂದು ಬಂದು ಹೋಗುತ್ತಾರೆ. ಅಲ್ಲಿ ಅವರು ಮಾಡುವ ಸೇವೆಗೆ ರೋಗಿಗಳಿಂದ ಬಿಡಿಗಾಸೂ ತಗೆದುಕೊಳ್ಳುವುದಿಲ್ಲ. ಅಲ್ಲಿರುವ ಸಿಬ್ಬಂದಿಯೂ ಅಷ್ಟೇ. ಸೇವಾರ್ಥವಾಗಿ ಬಂದು ರೋಗಿಗಳ ಸೇವೆ ಮಾಡಿ ಹೋಗುತ್ತಾರೆ. ಅಲ್ಲಿ ಅಮ್ಮನಿಗೆ ಒಂದು ವಿದೇಶಿ ನುರಿತ ವೈದ್ಯರ ತಂಡ ಪರೀಕ್ಷಿಸಿತು. ತಕ್ಷಣವೇ ಆಪರೇಶನ್‌ ಮಾಡಬೇಕೆಂದು ನಿರ್ಧರಿಸಿತು. ಮಾಡಿಯೂ ಬಿಟ್ಟರು. ಹೃದಯಕ್ಕೆ ಅದೇನೋ ಫೇಸ್‌ ಮೇಕರ್‌ ಅಂತ ಅಳವಡಿಸಿದರು. ಅದು ಯಶಸ್ವಿಯೂ ಆಯಿತು. ಎಲ್ಲ ಉಚಿತ. ದೇವರೇ ನಮ್ಮ ಮೊರೆಯನ್ನು ಕೇಳಿಸಿಕೊಂಡು ವಿದೇಶೀ ವೈದ್ಯರನ್ನು ಕಳಿಸಿದನೇನೋ. ಆಪರೇಶನ್‌ ಏನೋ ಯಶಸ್ವಿಯಾಯಿತು. ಸರಿ. ಆದರೆ ಅಮ್ಮನ ದೇಹ ಬಹಳ ನಾಜೂಕಾಯಿತು. ಭಾರ ಎತ್ತುವಂತಿರಲಿಲ್ಲ. ವಿದ್ಯುತ್‌ ಉಪಕರಣದ ಹತ್ತಿರ ನಿಲ್ಲುವುದು, ಅಂಥವನ್ನು ಉಪಯೋಗಿಸುವುದು ನಿಷಿದ್ಧವಾಯಿತು. ದೂರ ಪ್ರಯಾಣ ಮಾಡುವುದು ಬೇಡ ಅಂದರು.

ಅಮ್ಮನ ಸಾವಿನ ಭಯ ಸ್ವಲ್ಪ ದೂರಾಯಿತು. ಅಮ್ಮ ಮತ್ತೆ ಮನೆಗೆ ಬಂದಳು. ನಗುವಿನ ಗೆರೆ ಹೊತ್ತು. ನಮ್ಮ ಮೊರೆ ದೇವರಿಗೆ ತಲುಪಿತೇನೋ.

ನಮ್ಮದು ಮಧ್ಯಮ ವರ್ಗದ ಕುಟುಂಬವಾದರೂ ಅಪ್ಪ ನಮಗೆ ಯಾತಕ್ಕೂ ಕಡಿಮೆ ಮಾಡಿರಲಿಲ್ಲ. ಹಾಸಿಗೆ ಇದ್ದಷ್ಟೇ ಕಾಲು ಚಾಚುವುದನ್ನು ಕಲಿಸಿದ್ದರು. ಬರುವ ಕಷ್ಟಗಳನ್ನೆಲ್ಲ ಅವರೇ ಉಂಡು ನಮ್ಮ ಪಾಲಿಗೆ ಸುಖ ನೀಡಿದರು. ಅಮ್ಮನಿಗೆ ಚಿಕ್ಕ ಕೆಲಸ ಮಾಡಿದರೂ ಆಯಾಸವಾಗುತ್ತಿತ್ತು. ಹಾಗಾಗಿ ಅಪ್ಪನೇ ಮನೆಯಲ್ಲಿದ್ದಾಗ ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು ಮಾಡುತ್ತಿದ್ದರು. ನಾನು, ತಂಗಿ ಅದಕ್ಕೆಲ್ಲ ಸಹಾಯ ಮಾಡುತ್ತಿದ್ದೆವು. ಅವರಾದರೂ ಎಷ್ಟು ದಿನಾಂತ ಮನೆಯಲ್ಲಿರುತ್ತಾರೆ. ಅನ್ನ ಕೊಡುವ ಕೆಲಸಕ್ಕೆ ಹೋಗಲೇ ಬೇಕಲ್ಲ. ಮತ್ತೆ ಯೂನಿಫಾರ್ಮ ತೊಟ್ಟು ಡ್ಯೂಟಿಗೆ ಹೊರಟರು. ಹಾಗೆ ಹೋಗುವಾಗ ಅಮ್ಮನಿಗೆ ಹೇಳುತ್ತಿದ್ದರು. ನೀನೇನು ಕೆಲಸ ಮಾಡಬೇಡ. ಡ್ಯೂಟಿ ಮುಗಿಸಿ ನಾನೇ ಬಂದು ಮಾಡುತ್ತೇನೆ ಅನ್ನುತ್ತಿದ್ದರು. ನಮ್ಮ ಕೆಲಸಕ್ಕೂ ಬಿಡುತ್ತಿರಲಿಲ್ಲ.. ನಮ್ಮ ತಲೆ ಬಾಚುವುದು. ಸ್ಕೂಲಿಗೆ ಡಬ್ಬಿ ಕಟ್ಟುವುದು. ಬಟ್ಟೆ ಇಸ್ತ್ರಿ ಮಾಡುವುದು ಇತ್ಯಾದಿಗಳನ್ನೆಲ್ಲ ಅವರೇ ಮಾಡುತ್ತಿದ್ದರು. ನಮಗೆ ಸಹಿಸಲಾಗಲಿಲ್ಲ. ಅಪ್ಪ ಡ್ಯೂಟಿಗೆ ಹೋದ ಸಂದರ್ಭದಲ್ಲಿ ಅದು-ಇದು ಮಾಡುತ್ತಿದ್ದೆವು. ಅದನ್ನು ನೋಡಿ ಅಮ್ಮ ಕಣ್ಣೀರು ಹಾಕುತ್ತಿದ್ದರು. ಇದ್ದೂ ಸತ್ತಂಗಾದೆ ಅನ್ನುತ್ತಿದ್ದರು ನೋವಿನಿಂದ.

ಅಮ್ಮ ಯಾವಾಗಲೂ ಅಪ್ಪನಿಗೆ ಒಂದು ಮಾತು ಹೇಳುತ್ತಿದ್ದರು. ಯಾವ ಜನ್ಮದಲ್ಲಿ ಪುಣ್ಯ ಮಾಡಿದ್ದೆನೋ ನೋಡಿ. ನೀವು ಸಿಕ್ಕಿದಿರಿ. ನಾನು ಮಾಡಬೇಕಾದ ಕೆಲಸಾನೂ ನೀವೇ ಮಾಡುತ್ತಿದ್ದೀರಿ. ಎಂದು ಕಣ್ಣೀರಾಗುತ್ತಿದ್ದಳು. ಅಪ್ಪನೇ ಆಕೆಗೆ ಸಮಾಧಾನ ಹೇಳುತ್ತಿದ್ದರು.

ಅಪ್ಪ ಪಡುತ್ತಿದ್ದ ಕಷ್ಟ ನೋಡಿ ಎಷ್ಟೋ ಜನ ಸಲಹೆ ಕೊಟ್ಟರು. ‘ ಸುಮ್ನೆ ಇನ್ನೊಂದು ಮದುವೆ ಆಗಿ ಬಿಡಿ. ಎಷ್ಟೂಂತ ಏಗ್ತೀರಾ? ‘

ಎಂದು. ಅಪ್ಪ ಅದನ್ನೆಲ್ಲ ಕಿವಿ ಮೇಲೆ ಹಾಕಿಕೊಳ್ಳುತ್ತಿರಲಿಲ್ಲ. ಆದರೆ ಅಮ್ಮ ಮಾತ್ರ ಮೌನವಾಗಿ ನೆಲ ನೋಡುತ್ತಿದ್ದಳು. ಅದೂ ಸರಿ ಅನಿಸಿರ ಬಹುದೇನೋ ಆಕೆಗೆ. ಆದರೆ ಅಪ್ಪ ಸುತಾರಾಂ ಒಪ್ಪಲಿಲ್ಲ. ಅವರಿಗೆ ಅಮ್ಮ, ನಾನು, ನನ್ನ ತಂಗಿ ಬಿಟ್ಟರೆ ಪ್ರಪಂಚವೇ ಇರಲಿಲ್ಲ. ಎಂಥ ತ್ಯಾಗ ಅವರದು. ಅವರ ಜಾಗದಲ್ಲಿ ಬೇರೆಯವರಿದ್ದರೆ ತಕ್ಷಣ ಇನ್ನೊಂದು ಮದುವೆಯಾಗಿ ಕ್ರಮೇಣ ನಮ್ಮನ್ನು ಅನಾಥರನ್ನಾಗಿ ಮಾಡದೇ ಇರುತ್ತಿರಲಿಲ್ಲ. ಕಷ್ಟಕ್ಕೆ ಮಿಡಿಯುವ ಹೃದಯ, ಇದ್ದುದರಲ್ಲಿಯೇ ಖುಷಿಯಿಂದ ಜೀವನ ನಡೆಸುವ ಶೈಲಿ, ಅಹಂಕಾರ, ದುರಾಸೆ ಇಲ್ಲದ ಮೇರು ವ್ಯಕ್ತಿತ್ವ. ಅಪ್ಪ ನಮ್ಮ ಕಣ್ಣ ಮುಂದಿನ ಆದರ್ಶ ವ್ಯಕ್ತಿಯಾಗಿದ್ದರು. ಇಂಥಹ ಗಂಡ, ಇಂಥಹ ಅಪ್ಪ ಎಲ್ಲಿ ಸಿಕ್ಕಾರು.

ಮತ್ತೆ ಮನೆಯ ಮೇಲೆರಗಿತು ಕರಿ ನೆರಳು

ಹತ್ತು ವರ್ಷ ಹೀಗೇ ಕಳೆದವು. ನಾನು ನನ್ನ ತಂಗಿ ನೋವುಗಳನೆಲ್ಲ ಮರೆತಿದ್ದೆವು. ಅಮ್ಮ ಹುಷಾರಾಗಿದ್ದುದನ್ನು ನೋಡಿ ನಮಗೆಲ್ಲ ಖುಶಿಯಾಗಿ ಹೋಗಿತ್ತು. ಅಮ್ಮ ಎಂದೆಂದೂ ಹೀಗೇ ಇರಲಿ ಎಂದು ಹಾರೈಸಿದೆವು. ಆದರೆ ಎಲ್ಲವೂ ಅಂದುಕೊಂಡಂತೆ ನಡೆಯುವದಿಲ್ಲ ನೋಡಿ. ಬಯಸುವುದೊಂದು. ಆಗುವುದೊಂದು. ಇದ್ದಕ್ಕಿದ್ದಂತೆ ಮತ್ತೆ ಅಮ್ಮನ ಆರೋಗ್ಯ ಮತ್ತೆ ಹದಗೆಟ್ಟಿತು. ನಿದ್ದೆ- ಊಟ ಎಲ್ಲ ನಿಂತು ಹೋದವು. ತಡಮಾಡದೆ ನಾವು ಅಮ್ಮನನ್ನು ಮತ್ತೆ ಬೆಂಗಳೂರಿನ ಸಾಯಿಬಾಬಾ ಆಸ್ಪತ್ರೆಗೆ ಕರೆದೊಯ್ದೆವು. ಮತ್ತದೇ ಪರೀಕ್ಷೆ. ಹೃದಯ ಮತ್ತು ಹಿಂದೆ ಜೋಡಿಸಿದ್ದ ಫೇಸ ಮೇಕರ್‌ ಮಶೀನ್‌ ಎರಡೂ ವೀಕ್‌ ಆಗಿವೆ ಅಂದರು. ಸುಸಜ್ಜಿತ ಆಸ್ಪತ್ರೆಯಲ್ಲಿ ಉಚಿತ ಸೇವೆ ಅನ್ನುವುದೇ ಒಂದು ಪವಾಡ ಈಗಿನ ಕಾಲದಲ್ಲಿ. ಅಂಥ ಪವಾಡವನ್ನು ಸಾಯಿಬಾಬಾ ಮಾಡುತ್ತಾನೇನೋ.

ತಡಮಾಡದೇ ಮತ್ತೆ ಆಪರೇಶನ್‌ ಮಾಡಿ ಮತ್ತೆ ಫೇಸ್‌ ಮೇಕರ್‌ ಜೋಡಿಸಿದರು. ಅಮ್ಮನ ಹೃದಯ ಕವಾಟುಗಳು ಎಂದಿನಂತೆ ಮತ್ತೆ ಕಲಸ ಸುರು ಮಾಡಿದವು. ಆದರೆ ಡಾಕ್ಟರು ಒಂದು ಎಚ್ಚರಿಕೆ ಕೊಟ್ಟರು. ಇನ್ನು ಹೆಚ್ಚು ಜೋಪಾನವಾಗಿ ನೋಡಿಕೊಳ್ಳಬೇಕು. ಇನ್ನೊಮ್ಮೆ ಆಪರೇಶನ್‌ ಮಾಡಲಾಗುವುದಿಲ್ಲ ಅಂದರು. ಅಪ್ಪನ ಜವಾಬ್ದಾರಿ, ಆತಂಕಗಳು ಇನ್ನೂ ಹೆಚ್ಚಿದವು. ನಾನು ನನ್ನ ತಂಗಿ ಸಪ್ಪೆ ಮುಖ ಹಾಕಿಕೊಂಡು ಮತ್ತೆ ದೇವರತ್ತ ನೋಡಿದೆವು.

ದೇವರಿಗೆ ನಮ್ಮ ಮೇಲೆ ಕೋಪ

ಎರಡನೆಯ ಬಾರಿ ಆಪರೇಶನ್‌ ಆದ ಮೇಲೆ ಅಮ್ಮ ಮಂಕಾಗಿ ಹೋದರು. ದೇಹದ ನೋವು ಕಡಿಮೆ ಆಗಿದ್ದರೂ ಅಮ್ಮ ಏನೋ ಗಾಢವಾಗಿ ಚಿಂತಿಸುತ್ತಿರುವಂತೆ ಕಾಣುತ್ತಿತ್ತು. ಅವರ ಆತ್ಮ ವಿಶ್ವಾಸ ಕ್ಷೀಣಿಸುತಿತ್ತೇನೋ. ಬಾಯಿ ಬಿಟ್ಟು ಏನೂ ಹೇಳುತ್ತಿರಲಿಲ್ಲ. ಮಾನಸಿಕವಾಗಿ ಕುಗ್ಗಿದರು. ಅದೇ ಕಾರಣವೇನೋ. ಒಂದು ವಾರ ಚನ್ನಾಗಿದ್ದರೆ ಇನ್ನೊಂದು ವಾರ ಮಂಕಾಗಿರುತ್ತಿದ್ದರು. ಹಾಗಾಗಿ ಆಗಾಗ ಮತ್ತೆ ಆಸ್ಪತ್ರೆ ಸೇರಿಸಬೇಕಾಗಿ ಬರುತ್ತಿತ್ತು. ಕೆಲವೊಮ್ಮೆ ಮೂರ್ನಾಲ್ಕು ದಿನ ಅಲ್ಲೇ ಇರಬೇಕಾಗುತ್ತಿತ್ತು. ಆದರೆ ಅಪ್ಪ ಯಾವತ್ತೂ ಅಮ್ಮನ ಧೈರ್ಯ ಕುಸಿಯದಂತೆ ನೋಡಿಕೊಂಡರು. ಅಮ್ಮನ ಮುಂದೆ ಯಾವತ್ತೂ ಸೋತವರಂತೆ ನಡೆದು ಕೊಳ್ಳಲಿಲ್ಲ. ಅಮ್ಮನ ಮುಂದೆ ನಗುತ್ತಲೇ ಓಡಾಡುತ್ತಿದ್ದರು. ಅಮ್ಮ ತಮಗೆಂದೂ ಭಾರವಾಗಿಲ್ಲ ಎಂದು ತೋರಿಸಿಕೊಳ್ಳುತ್ತಿದ್ದರು.

ಅದೊಂದು ದಿನ ಆಸ್ಪತ್ರೆಯಲ್ಲಿ ಅಮ್ಮ ಅಪ್ಪನ ಕೈ ಹಿಡಿದುಕೊಂಡು ಕಣ್ಣಲ್ಲಿ ನೀರು ತಂದು ಹೇಳಿದಳು. ‘ ನೋಡಿ… ನಾನು ಇನ್ನೆಷ್ಟು ದಿನ ಬದುಕುತ್ತೇನೋ ಗೊತ್ತಿಲ್ಲ. ನಾನಿರುವಾಗಲೇ ಕಾವ್ಯಾಳ ಮದುವೆ ಮಾಡಿಬಿಡಿ. ಚಿಕ್ಕೋಳ ಮದ್ವೆ ನಾನು ನೋಡೋ ಹಾಗೋ ಕಾಣ್ತಿಲ್ಲ. ಒಂದನ್ನಾದ್ರೂ ಬೇಗ ಮುಗ್ಸಿ’ ಅಂದಳು ಕಣ್ಣಲ್ಲಿ ನೀರು ತುಂಬಿಕೊಂಡು. ಅಪ್ಪ ತಲೆ ತಗ್ಗಿಸಿ ಯೋಚಿಸಿದರು. ಸರಿ ಅಷ್ಟೇ. ನಾನು ನಿರಾಕರಿಸಿದರೂ ಕೇಳದೆ ನನಗೆ ಮದುವೆ ಗೊತ್ತು ಮಾಡಿಯೇ ಬಿಟ್ಟರು ಅಪ್ಪ. ನಾನು ತಂಗಿಯಮುಂದೆ ಕೂತು ಅತ್ತೆ. ಅಮ್ಮನ್ನ ಬಿಟ್ಟು ನಾನು ಹೋಗೋಲ್ಲ ಅಂದೆ. ತಂಗಿ ಮೌನವಾಗಿ ನನ್ನ ತಲೆ ನೇವರಿಸಿದಳು. ನಾನು ಅಮ್ಮನ ಮಡಿಲಲ್ಲಿ ತಲೆಯಿಟ್ಟು ಗೊಳೋ ಅಂದೆ. ಅಮ್ಮ ಆ ನೋವಿನಲ್ಲೂ ನಕ್ಕು ಧೈರ್ಯ ಹೇಳಿದಳು. ಅಚ್ಚರಿಯೆಂದರೆ ನನ್ನ ಮದುವೆ ಗೊತ್ತಾದದ್ದೇ ತಡ. ಅಮ್ಮ ತನಗೇನೂ ಆಗೇ ಇಲ್ಲ ಎಂಬಂತೆ ಚೇತರಿಸಿಕೊಂಡು ಬಿಟ್ಟರು. ಹಾಗೂ ಹೀಗೂ ನನ್ನ ಮದುವೆ ನಡದೇ ಬಿಟ್ಟಿತು.

ಕವಲು ದಾರಿಯಲ್ಲಿ

ಮದುವೆ ಆದದ್ದರಿಂದ ನಾನು ಅನಿವಾರ್ಯವಾಗಿ ಕೆಲವು ದಿನವಾದರೂ ಅಮ್ಮನಿಂದ ದೂರವಿರಬೇಕಾಯಿತು. ನನ್ನ ಪತಿ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದರು. ನನ್ನ ತಂಗಿ ಅಮ್ಮನ ಜವಾಬ್ದಾರಿ ಜೊತೆಗೆ ತನ್ನದೂ ಹೊರಬೇಕಾಯಿತು. ಅಪ್ಪನಿಗೆ ಒಳಗೇ ಚಿಂತೆ ಕೊರೆಯುತ್ತಿತ್ತು. ನಾನು ಇನ್ನು ಅಲ್ಲಿ ಇರುವುದಿಲ್ಲ ಎಂಬ ಸತ್ಯದ ಅರಿವಾದಾಗ ಅವರೂ ಹೈರಾಣಾಗಿದ್ದರು. ಅಮ್ಮ ಆಗಾಗ ನಿಟ್ಟುಸಿರು ಬಿಡುತ್ತಿದ್ದಳು. ನಾನು ಭಾರವಾದ ಮನಸ್ಸಿನಿಂದಲೇ ಗಂಡನ ಮನೆಗೆ ಹೋದೆ. ಗಂಡನ ಮನೆಯ ಜವಾಬ್ದಾರಿ ಒಂದು ಕಡೆಗಾದರೆ, ಅಮ್ಮನ ಬಗ್ಗೆ ಚಿಂತೆ ಇನ್ನೊಂದು ಕಡೆಗೆ. ನಾನು ಕವಲು ದಾರಿಯಲ್ಲಿ ನಿಂತ ಅನುಭವವಾಗತೊಡಗಿತು. ಒಬ್ಬಳೇ ಕೂತು ಅತ್ತು ಬಿಟ್ಟೆ. ಆಗ ನನ್ನ ಪತಿಯೇ ಸಮಾಧಾನಿಸುತ್ತಿದ್ದರು. ಮದುವೆಯಾದ ಎರಡು ಎಲ್ಲರೂ ನೋವಿನಲ್ಲೇ ಉಂಡು ಅದರಲ್ಲೇ ಕೈ ತೊಳೆದುಕೊಂಡೆವು.

ಎರಡು ವರ್ಷ ಅಮ್ಮ ಹುಷಾರಾಗೇ ಇದ್ದಳು. ಅದೊಂದೇ ದೊಡ್ಡ ಸಮಾಧಾನ. ಬಹಳ ದಿನಗಳ ನಂತರ ಅಮ್ಮನ ಮುಖದಲ್ಲಿ ನಗು ಕಂಡಿದ್ದೆ. ಈ ನಡುವೆ ನನಗೂ ಅವಳಿ-ಜವಳಿ ಮಕ್ಕಳಾದವು. ಕಾಲ ಚಕ್ರ ನಿಲ್ಲುವುದಿಲ್ಲ. ಅದು ಉರುಳುತ್ತಲೇ ಇರುತ್ತದೆ. ಯಾವುದೂ ನಿಲ್ಲುವುದಿಲ್ಲ. ನಾನು ಒಂದು ವಾರ ಅಮ್ಮನ ಮನೆಯಲ್ಲಿ, ಇನ್ನೊಂದು ವಾರ ಗಂಡನ ಮನೆಯಲ್ಲಿರುತ್ತಿದ್ದೆ. ಅಪ್ಪ ತನ್ನ ಡ್ಯೂಟಿಯೊಂದಿಗೆ ಮನೆಯ ಜವಾಬ್ದಾರಿ ಬಿಟ್ಟಿರಲಿಲ್ಲ. ಒಂದು ರೀತಿ ನಮ್ಮ ಪಾಲಿಗೆ ಅವು ಸಂತೋಷದ ದಿನಗಳು. ಆದರೆ ಆ ಸಂತೋಷ ಹೆಚ್ಚು ದಿನ ಇರಲಿಲ್ಲ. ಅಮ್ಮನ ಆರೋಗ್ಯ ಮತ್ತೆ ಬಿಗಡಾಯಿಸಿತು. ನಮ್ಮ ಕಷ್ಟದ ದಿನಗಳು ಮತ್ತೆ ಸುರುವಾದವೇನೋ ಎಂಬ ಭಯ ಸುರುವಾಯಿತು ಎಲ್ಲರಿಗೆ. ನಾನು ಮಕ್ಕಳೊಂದಿಗೆ ತವರು ಮನೆಗೆ ದೌಡಾಯಿಸಿದೆ.

ಅಮ್ಮನನ್ನು ಮತ್ತೆ ಆಸ್ಪತ್ರೆಗೆ ಸೇರಿಸಿದೆವು. ಎರಡು ದಿನ ಅಲ್ಲಿ. ಎರಡು ದಿನ ಮನೆಯಲ್ಲಿ. ಮತ್ತೆ ಆಸ್ಪತ್ರೆ. ನಿದ್ದೆ ನೀರಡಿಕೆ ಎಲ್ಲವೂ ಮರೆತು ಹೋದವು. ನಾನು, ನನ್ನ ತಂಗಿ ತುಂಬ ಸಂಕಟಪಟ್ಟ, ಮತ್ತು ಕಣ್ಣೀರು ಹಾಕಿದ ದಿನಗಳು ಅವು. ಮಕ್ಕಳ ನೋವು ತಾಯಿಯ ಕರುಳಿಗೆ ತಿಳಿಯದಿರುತ್ತದೆಯೇ? ಎಲ್ಲರದೂ ಮೂಕ ರೋಧನವಾಗಿತ್ತು ಆಗ.

ಅಪ್ಪನನ್ನು ಚನ್ನಾಗಿ ನೋಡಿಕೋ ಕಂದ…!

ಯಾರೂ ಇಲ್ಲದ ಸಮಯ ನೋಡಿ ಅಮ್ಮ ಹತ್ತಿರ ಬರಲು ಸನ್ನೆ ಮಾಡುತ್ತಿದ್ದಳು. ನಾನು ಓಡಿ ಹೋಗಿ ಅವಳ ಮುಖ ನೋಡುತ್ತ ಕುಳಿತಾಗ ಅಮ್ಮ ಸೋತ ದನಿಯಲ್ಲಿ ಹೇಳುತ್ತಿದ್ದಳು. – ‘ ಕಾವ್ಯಾ… ಅಪ್ಪನ್ನ, ತಂಗೀನ ಚೆಂದಾಗಿ ನೋಡ್ಕ ಮಗಾ…’ ಇಷ್ಟು ಹೇಳಿದ್ದಕ್ಕೇ ಅಮ್ಮ ಸುಸ್ತಾಗಿ ಬಿಡುತ್ತಿದ್ದಳು. ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕಣ್ಣೀರಾಗುತ್ತಿದ್ದಳು.

ತಂಗಿ ನನ್ನ ಎರಡೂ ಮಕ್ಕಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಳು. ಆಗಾಗ ಅಮ್ಮನ ಬಳಿ ಹೋಗಿ ಅಜ್ಜಿಯನ್ನು ನಗಿಸುವ ಪ್ರಯತ್ನವನ್ನೂ ಮಾಡುತ್ತಿದ್ದವು. ನನ್ನ ಮಕ್ಕಳ ಆಟ-ತುಂಟಾಟಗಳು ಅಮ್ಮನಿಗೆ ಖುಷಿಕೊಡುತ್ತಿದ್ದವು. ಹಾಗಾಗಿ ಮದುವೆ ಆಗಿದ್ದರೂ ನಾನು ಹೆಚ್ಚು ಕಾಲ ಅಮ್ಮನ ಮನೆಯಲ್ಲೇ ಇರುತ್ತಿದ್ದೆ. ನನ್ನ ಪತಿಯೂ ಅಮ್ಮನಿಗೆ ಮಗನಂತೆಯೇ ಇದ್ದರು. ಅವರ ಸಹಕಾರದಿಂದ ನಾನು ಇಂಥ ಸ್ಥಿತಿಯಲ್ಲಿ ಅಮ್ಮನೊಟ್ಟಿಗೆ ಇರಲು ಸಾಧ್ಯವಾಯಿತು. ನಿನ್ನ ತಂಗಿಗೂ ಇಂಥ ಗಂಡನೇ ಸಿಗಲಿ ತಾಯಿ ಎಂದು ಅಮ್ಮ ಹಾರೈಸಿಕೊಳ್ಳುತ್ತಿದ್ದಳು. ಅಮ್ಮನ ಆರೋಗ್ಯ ಸುಧಾರಿಸಲಿಲ್ಲ. ಮತ್ತೆ ಬಿಗಡಾಯಿಸಿತು. ನಾನು ಮೈಸೂರಿಗೆ ಹೋದವಳು ಅಮ್ಮನೊಂದಿಗೆ ಅಲ್ಲಿಯೇ ಇರಬೇಕಾಯಿತು. ಕೊನೆಗೆ ಮತ್ತೆ ಬೆಂಗಳೂರಿನ ಪುಟಪರ್ತಿ ಸಾಯಿಬಾಬ ಆಸ್ಪತ್ರೆಗೆ ತಂದು ಸೇರಿಸಿದೆವು. ಅಲ್ಲಿಯ ವೈದ್ಯರು ಕೂಲಂಕುಷವಾಗಿ ಪರೀಕ್ಷಿಸಿ ಒಂದೇ ಮಾತು ಹೇಳಿದರು.

ದೇಹ ತುಂಬ ಜರ್ಜಿತವಾಗಿದೆ. ಕೊನೆಯ ಪ್ರಯತ್ನ ಎಂದು ಒಂದು ಸಣ್ಣ ಆಪರೇಶನ್‌ ಮಾಡುತ್ತೇವೆ. ಬದುಕಿದರೆ ನಿಮ್ಮ ಅದೃಷ್ಟ. ಇಲ್ಲದಿದ್ದರೆ ಎಲ್ಲವೂ ಭಗವಂತನ ಆಟವೆಂದು ಕೈಮುಗಿದು ಬಿಡಿ. ನೀವು ಸಾಕಷ್ಟು ಪ್ರಯತ್ನ ಮಾಡಿದ್ದೀರಿ.

ಅಂದು ಬಿಟ್ಟರು. ನಮಗೆ ದಿಕ್ಕೇ ತೋಚಲಿಲ್ಲ. ನಾನೂ, ನನ್ನ ತಂಗಿ ಭೂಮಿಗಿಳಿದು ಹೋದೆವು. ಅಪ್ಪ ಏನೂ ಮಾತಾಡದ ಸ್ಥಿತಿಯಲ್ಲಿದ್ದರು. ಡಾಕ್ಟರು ಆಪರೇಶನ್‌ ಮಾಡಿಯೇ ಬಿಟ್ಟರು. ಅದು ಸಕ್ಸೆಸ್ಸೋ ಇಲ್ಲೋ ಅಂತ ಹೇಳುವ ಧೈರ್ಯ ಮಾತ್ರ ಯಾರೂ ಮಾಡಲಿಲ್ಲ. ನಮ್ಮ ಪ್ರಯತ್ನ ನಾವು ಮಾಡಿದ್ದೇವೆ. ಉಳಿದದ್ದು ಅವನಿಚ್ಛೆ ಎಂದು ಸಾಯಿಬಾಬಾನತ್ತ ನೋಡಿದರು. ಮತ್ತು ಈಗ ಮನೆಗೆ ಕರೆದೊಯ್ಯಿರಿ ಎಂದೂ ಹೇಳಿದರು.

ಅಪ್ಪ ಅಮ್ಮನನ್ನು ಬಿಟ್ಟು ಕದಲಲಿಲ್ಲ. ನಮ್ಮನ್ನು ಹತ್ತಿರವೂ ಸೇರಿಸದೆ ತಾವೇ ಅಮ್ಮನ ಸೇವೆಗೆ ನಿಂತರು. ಅಮ್ಮ ಮಾತಾಡಲೂ ಆಗದೆ ಒಳಗೇ ನೊಂದುಕೊಳ್ಳುತ್ತಿದ್ದರು. ಒಳಗಿನ ನೋವಿಗೆ ಮೊಮ್ಮಕ್ಕಳತ್ತ ಗಮನವೂ ಹೋಗುತ್ತಿರಲಿಲ್ಲ. ಅಪ್ಪ ಅಮ್ಮನ ಪ್ರೀತಿಯನ್ನು ನೋಡಿ ವೈದ್ಯರೂ ಮೂಕ ವಿಸ್ಮಿತರಾಗಿದ್ದರು. ಆಸ್ಪತ್ರೆಯಿಂದ ಹೊರಡುವಾಗ ಅದೇಕೋ ಅಮ್ಮ ಇಡೀ ಆಸ್ಪತ್ರೆಯನ್ನೊಮ್ಮೆ ಇಡಿಯಾಗಿ ಕಣ್ತುಂಬಿಕೊಂಡು ನೋಡಿದರು. ಅವರ ಕಣ್ಣಲ್ಲಿ ವಿದಾಯದ ವಿಷಣ್ಣತೆ ಎದ್ದು ಕಾಣುತ್ತಿತ್ತು. ಅವರನ್ನು ಮೌನವಾಗಿ ಮನೆಗೆ ಕರೆದುಕೊಂಡು ಬಂದೆವು.

ಮನೆಗೆ ಬಂದ ಮುತೈದೆ

ಮನೆಗೆ ಬಂದಾಗ ಅಮ್ಮ ಪೂರ್ತಿ ನಿಸ್ತೇಜಗೊಂಡಿದ್ದರು. ನಿಶ್ಶಕ್ತಿಯೂ ಆವರಿಸಿತ್ತು. ಊಟ ನಿದ್ದೆ ಎಲ್ಲವೂ ಕ್ರಮ ತಪ್ಪಿದ್ದವು. ಅಪ್ಪನೇ ಒತ್ತಾಯ ಮಾಡಿ ತಾವೇ ಕೈ ತುತ್ತು ತಿನ್ನಿಸತೊಡಗಿದರು. ಸೇಬು, ಮೋಸಂಬಿ ಹಣ್ಣು ತಿನ್ನಿಸುತ್ತಿದ್ದರು. ಅಮ್ಮನಿಗೆ ರಾತ್ರ ನಿದ್ದೆ ಬರುತ್ತಿರಲಿಲ್ಲ. ಅಪ್ಪ ಸದಾ ಅಮ್ಮನ ಬಳಿಯೇ ಕುಳಿತಿರುತಿದ್ದರು. ಅಮ್ಮನೊಂದಿಗೆ ನಿದ್ದೆ ಮಾಡದೆ ಹಾಗೇ ಮಲಗಿರುತ್ತಿದ್ದರು. ಅದನ್ನು ಕಂಡು ನಮಗೆ ಗಾಬರಿಯೂ ಆಗುತ್ತಿತ್ತು. ರಾತ್ರಿಯೆಲ್ಲಾ ನಿದ್ದೆ ಇಲ್ಲ. ಹಗಲು ಡ್ಯೂಟಿಗೆ ಬೇರೆ ಹೋಗಬೇಕು. ಅವರ ಆರೋಗ್ಯವೂ ಅದೆಲ್ಲಿ ಹದಗೆಡುತ್ತದೋ ಎಂಬ ಗಾಬರಿ ನಮಗೆ. ಹಗಲೊತ್ತು ನಾನು, ಮತ್ತು ನನ್ನ ತಂಗಿ ಅಮ್ಮನ ಜೊತೆ ಕೂಡುತ್ತಿದ್ದೆವು. ನನ್ನ ತಂಗಿ ಅಮ್ಮನನ್ನು ನೋಡಿಕೊಳ್ಳುವ ಕಾರಣಕ್ಕೆ ಕಾಲೇಜನ್ನು ಬಿಟ್ಟಳು. ಮನೆಯಲ್ಲಿ ನಾನು , ತಂಗಿ ಅಪ್ಪ ಇದ್ದರೂ ಮನೆ ಗವ್‌ಗುಡುತ್ತಿತ್ತು. ನನ್ನ ಮಕ್ಕಳನ್ನು ಬೆಂಗಳೂರಲ್ಲಿ ಕೆ.ಜಿ. ಸ್ಕೂಲಿಗೆ ಸೇರಿಸಬೇಕಾಯಿತು. ್ದರಿಂದ ನಾನು ಮಕ್ಕಳೊಂದಿಗೆ ಬೆಂಗಳೂರಲ್ಲಿರಬೇಕಾಯಿತು. ಮೈಸೂರಲ್ಲಿ ಅಮ್ಮನೊಂದಿಗೆ ಅಪ್ಪ, ತಂಗಿ ಮಾತ್ರ ಇದ್ದರು. ಅಮ್ಮ ತಂಗಿಯ ಮದುವೆಯನ್ನು ನೋಡುತ್ತೇನೋ ಇಲ್ಲೋ ಎಂದು ಕೊರಗತೊಡಗಿದರು. ನನಗೆ ಸಂಕಟವೋ ಸಂಕಟ. ಮಕ್ಕಳಿಗಾಗಿ ಬೆಂಗಳೂರಲ್ಲಿರಬೇಕೋ. ಇಲ್ಲ ಅಮ್ಮನಿಗಾಗಿ ಮೈಸೂರಲ್ಲಿ ಇರಬೇಕೋ ತಿಳಿಯದೆ ಒದ್ದಾಡಿದೆ. ತಡೆಯಲಾರದೆ ಮಕ್ಕಳನ್ನು ಬೆಂಗಳೂಲ್ಲಿಯೇ ಬಿಟ್ಟು ಮೈಸೂರಿಗೆ ಓಡಿದೆ.

ಪ್ರೀತಿಯ ಅಮ್ಮನನ್ನು ನೋಡಿ ಕಣ್ಣೀರು ಕೋಡಿಯಾಯಿತು…

ಅಮ್ಮ ತುಂಬ ಸೊರಗಿ ಹೋಗಿದ್ದರು. ಕಣ್ಣು ಗುಳಿಗಳು ಒಳಸೇರಿದ್ದವು. ದೇಹ ಉಸಿರಾಡುತ್ತಿತ್ತಷ್ಟೇ. ನನ್ನನ್ನು ನೋಡಿ ಅಮ್ಮನ ಕಣ್ಣುಗುಡ್ಡೆ ಹೊರಳಾಡಿದವು. ನೋಡಿ ಸಂಕಟಪಟ್ಟೆ. ದುಃಖ ಉಮ್ಮಳಿಸಿತು. ತಂಗಿ ಅಳುತ್ತಲೇ ಹೇಳಿದಳು.

‘ ಎರಡು ದಿನದಿಂದ ಅಮ್ಮ ಊಟವನ್ನೇ ಬಿಟ್ಟಿದ್ದಾಳೆ. ರಾತ್ರಿ ಹೊತ್ತು ನಿದ್ದೇನೂ ಮಾಡ್ತಿಲ್ಲ. ಗಂಜೀನೂ ಕುಡೀತಿಲ್ಲ ‘

ತಂಗಿಯ ಜೊತೆ ನಾನೂ ಕಣ್ಣೀರಾದೆ. ಅಪ್ಪ ಚಿಂತಿತರಾಗಿದ್ದರು. ಅವರಿಗೂ ಸರಿಯಾಗಿ ಊಟ ನಿದ್ದೆಯಿರಲಿಲ್ಲ. ನಾನು ಬಂದ ದ್ದರಿಂದ ಅವರಿಗೆ ತುಸು ಧೈರ್ಯ ಬಂದಿತ್ತೇನೋ. ಏನೋ ಒಂದಿಷ್ಟು ಉಂಡರು. ಅಮ್ಮ ರಾತ್ರಿ ಹೊತ್ತು ದಿಂಬಿಗೆ ಒರಗಿ ಕುಳಿತಿರು ತ್ತಿದ್ದರೆ ಅಪ್ಪನೂ ಹಾಗೇ ಕುಳಿತಿರುತ್ತಿದ್ದರು. ನಾನೇ ಒತ್ತಾಯಿಸಿ ಅವರಿಗೆ ಮಲಗಲು ಅನುವು ಮಾಡಿಕೊಡುತ್ತಿದ್ದೆ. ಅಮ್ಮ ಸನ್ನೆ ಮೂಲಕ ನನ್ನ ಮಕ್ಕಳನ್ನು ಕೇಳಿದರು. ಅವರಿಗೆ ಮೊಮ್ಮಕ್ಕಳನ್ನು ನೋಡುವಾಸೆ ಆಗಿತ್ತೇನೋ. ನನಗೆ ಅಳು ತಡೆಯ ಲಾಗಲಿಲ್ಲ. ಅತ್ತೆ. ನನ್ನತ್ತ ನೋಡಿದ ಅಮ್ಮನೂ ಅತ್ತಳು. ಒಳ ಬಂದ ತಂಗಿಯ ಕಣ್ಣೀರು ಬತ್ತಿ ಹೋಗಿತ್ತು. ಎಚ್ಚರವಾಗೇ ಇದ್ದ ಅಪ್ಪ ಎಲ್ಲವನ್ನೂ ಗಮನಿಸುತ್ತಿದ್ದರು. ನಾನು ಮೆಲ್ಲನೆ ಅವರ ಹತ್ತಿರ ಹೋಗಿ ಹೇಳಿದೆ.

‘ ಅಪ್ಪ, ಎಲ್ಲ ಡಾಕ್ಟರುಗಳೂ ಆದ್ರು. ಅಮ್ಮ ಹುಷಾರಾಗುವಂತೆ ಕಾಣ್ತಿಲ್ಲ. ಈಗ ನೀವು ಧೈರ್ಯ ತಗೋಬೇಕು’

ಅದನ್ನು ಕೇಳಿದ ಅಪ್ಪ ನನ್ನನ್ನು ದುರುಗುಟ್ಟಿ ನೋಡಿದರು.

‘ ಏನು ಕಾವ್ಯ… ಅಮ್ಮ ಸತ್ತೇ ಹೋಗ್ತಾಳೆ ಅಂತೀಯ? ಇಲ್ಲ. ಆಕೆ ನಮ್ಮ ನಡುವೆ ಬದುಕಬೇಕು. ಅವಳು ಒಂದು ಕಡೆ ಕೂತಿರಲಿ. ಅಷ್ಟೇ ಸಾಕು ನಂಗೆ. ಆನೇ ಬಲ ಬರುತ್ತೆ.’

ಅಪ್ಪ ಹಾಗಂದಾಗ ನನಗೆ ತಡೆದುಕೊಳ್ಳಲಾಗಲಿಲ್ಲ. ಅಮ್ಮನ ಮೇಲೆ ಅಪ್ಪನಿಗಿರುವ ಅಗಾಧ ಪ್ರೀತಿಯ ಅರಿವಾಗಿ ತಲೆ ತಗ್ಗಿಸಿದೆ. ಬಾಲ್ಯದಲ್ಲಿ ಅವರು ತಾಯಿಯನ್ನು ಕಳೆದುಕೊಂಡು ಬೆಳೆದವರು. ಈಗ ಹೆಂಡತಿಯನ್ನೂ ಕಳೆದುಕೊಳ್ಳಲು ತಯಾರಿರಲಿಲ್ಲ. ಮುಂದೆ ಒಂದೆರಡು ದಿನಕ್ಕೆ ಅದೇನು ಪವಾಡವೋ. ಅಮ್ಮ ಮಾತಾಡಲು ಸುರು ಮಾಡಿದರು. ನಿಧಾನವಾಗಿ ಊಟವನ್ನೂ ಮಾಡ ಹತ್ತಿದರು. ಅಪ್ಪನ ಮುಖದಲ್ಲಿ ನಗು ಅರಳತೊಡಗಿತು. ಆಗ ನನಗೆ ಬೆಂಗಳೂರಿನಲ್ಲಿ ಬಿಟ್ಟು ಬಂದಿದ್ದ ಮಕ್ಕಳ ನೆನಪಾಯಿತು. ಹೇಗೂ ಅಮ್ಮ ಹುಷಾರಾಗ್ತಿದಾರೆ. ಎರಡು ದಿನ ಬೆಂಗಳೂರಿಗೆ ಹೋಗಿ ಮಕ್ಕಳನ್ನು ನೋಡಿ ಬರ್ತೀನಿ ಅಪ್ಪ ಅಂದೆ. ಬೇಡ ಅನ್ನಲಿಲ್ಲ. ಮತ್ತೆ ಬರುವಾಗ ಮಕ್ಕಳನ್ನೂ ಕರೆದುಕೊಂಡು ಬಾ ಎಂದು ಹೇಳಿ ನನ್ನನ್ನು ಹೊರಡಲು ಹೇಳಿದರು. ಅಮ್ಮ ನನ್ನನ್ನು ಅಪ್ಪಿಕೊಂಡು ಕಳಿಸಿಕೊಟ್ಟರು.

ಬದಲಾದ ದಿನಗಳು

ನಾನು ಬೆಂಗಳೂರಿಗೆ ಬಂದು ಹದಿನೈದು ದಿನಗಳಿರಬಹುದು. ತಂಗಿ ಕಲ್ಪನಾ ದಿನವೂ ಪೋನು ಮಾಡಿ ಅಮ್ಮನ ಆರೋಗ್ಯದ ಬಗ್ಗೆ ವರದಿ ಮಾಡುತ್ತಿದ್ದಳು.

ಅಮ್ಮ ಹುಷಾರಾಗಿದ್ದಳು. ಊಟ ನಿದ್ದೆ ಹೊತ್ತಿಗೆ ಸರಿಯಾಗಿ ಮಾಡುತ್ತಿದ್ದಳಂತೆ. ಏನೂ ಚಿಂತಿಸುವುದು ಬೇಡ ಎಂದು ಅಪ್ಪನೂ ಪೋನು ಮಾಡಿ ಹೇಳಿದರು. ಎಲ್ಲ ನಿರಾಳಾಗಿದ್ದೆವು. ಈ ನಡುವೆ ನನ್ನ ಹುಟ್ಟು ಹಬ್ಬ ಬಂದದ್ದೂ ನನ್ನ ಅರಿವಿಗೆ ಬಂದಿರಲಿಲ್ಲ. ಅಮ್ಮನೇ ಮೈಸೂರಿನಿಂದ ಪೋನು ಮಾಡಿ ವಿಶ್‌ ಮಾಡಿದಾಗಲೇ ಗೊತ್ತಾದದ್ದು. ಅಮ್ಮ ವಿಶ್‌ ಮಾಡಿದ ಖುಶಿಗೆ ನಾನು ಆಕಾಶದಲ್ಲಿ ಹಾರಾಡಿ ಬಿಟ್ಟೆ.

ಅದೇ ಖುಶಿಯಲ್ಲಿ ಅಮ್ಮನ ಪೋನಿಗೆ ಮರಳಿ ಕರೆ ಮಾಡಿದೆ. ಅದರಲ್ಲಿ ಕರೆನ್ಸಿ ಇತ್ತೋ ಇಲ್ಲವೋ. ಅಮ್ಮ ಪೋನು ಎತ್ತಲಿಲ್ಲ. ಮತ್ತೆ ಮತ್ತೆ ಕಾಲ್‌ ಮಾಡಿದೆ. ನನಗೆ ಅಮ್ಮನೊಂದಿಗೇ ಮಾತಾಡುವ ಬಯಕೆಯಾಗಿತ್ತು. ಕಡೆಗೆ ಪೋನು ಎತ್ತಿಕೊಂಡವರು ನನ್ನ ಮಾವ. ಊರಲ್ಲಿದ್ದವರು ಅಮ್ಮನನ್ನು ನೋಡಲು ಬಂದಿದ್ದರು. ಅವರು ಹೇಳಿದರು.

ಕಾವ್ಯ… ನಾನು ಊರಿಂದ ಇವತ್ತು ಬೆಳಿಗ್ಗೆ ಬಂದೆ. ನಿನಗೇ ಮಾಡ್ತಿದ್ದೆ ಈಗ. ನೀನು ನಿಲ್ಲ ಬೇಡ. ತಕ್ಷಣ ಎಲ್ರೂ ಬಂದ್ಬಿಡಿ. ಎಂದವರೇ ಪೋನು ಕಟ್‌ ಮಾಡಿದರು. ನನಗೆ ಗಾಬರಿಯಾಯಿತು. ಾವ ಸರಿಯಾಗಿ ಮಾತನಾಡಲಿಲ್ಲ. ಏನನ್ನೂ ಹೇಳಲಿಲ್ಲ. ಕರೆ ಯಾಕೆ ಕಟ್‌ ಮಾಡಿದರು ಎಂದು ಚಿಂತಿಸಿದೆ. ತಡಮಾಡದೆ ಅಪ್ಪನಿಗೆ ಕಾಲ್‌ ಮಾಡಿದೆ. ಎಷ್ಟು ಸಲ ಮಾಡಿದರೂ ಅವರು ಎತ್ತಿಕೊಳ್ಳಲಿಲ್ಲ. ನನಗೆ ಇನ್ನಷ್ಟು ಗಾಬರಿಯಾಗಿ ಕೂಡಲೇ ತಂಗಿ ಕಲ್ಪನಾಗೆ ಪೋನು ಮಾಡಿದೆ. ಆಕೆ ಕರೆ ತಗೆದುಕೊಂಡಳು. ನನ್ನ ಗಾಬರಿಯ ದನಿಗೆ ಆಕೆ ವಿಚಲಿತಳಾಗಲಿಲ್ಲ.

‘ ಅಪ್ಪ ಹೊರಗೋಗೈತೆ ಅಕ್ಕ. ಅವರ ಪೋನು ನನ್ನ ಹತ್ರ ಇದೆ. ಸೈಲೆಂಟ ಮಾಡಿಟ್ಟೀದೀನಿ. ನೀನು ಬೇಗ ಬಂದ್‌ ಬಿಡು’ ಅಂದು ಪೋನು ಕೆಳಗಿಟ್ಟಳು. ನನಗೆ ಅಚ್ಚರಿ ಆತಂಕ ಸುರು ಆಯಿತು. ಸಲ್ಪ ಸಮಯದ ನಂತರ ಮಾವನೇ ಪೋನು ಮಾಡಿದರು. ಎತ್ತಿಕೊಂಡರೆ ಮಾವ ಅಳುತ್ತಿದ್ದರು. ‘ ಏನಾಯ್ತು ಮಾವ, ಅಳ್ತೀದೀಯ? ಏನಾಯ್ತೂಂತ ಹೇಳು ಮಾವ’ – ಎನ್ನುತ್ತ ಅವರ ಜೊತೆ ನಾನೂ ಅಳತೊಡಗಿದೆ. ಅವರು ಬರೀ ಅಮ್ಮ… ‘ ಅಮ್ಮ ‘ ಅನ್ನುತ್ತಿದ್ದರೇ ವಿನಃ ಬೇರೇನೂ ಮಾತಾಡುತ್ತಿರಲಿಲ್ಲ. ಕಡೆಗೆ ಮಾವ ಅಳುತ್ತಲೇ ‘ ಅಮ್ಮ ಹೋಯ್ತು ಕಂದಾ….’ ಎಂದು ಜೋರಾಗಿ ಅಳತೊಡಗಿದರು. ನಾನು ಕಾಲ್‌ ಕಟ್‌ ಮಾಡಿ ಅಪ್ಪನ ಪೋನಿಗೆ ಕರೆ ಮಾಡಿದೆ. ಈಗ ಯಾರೋ ತಗೆದುಕೊಂಡು ಹೇಳಿದರು. ನಿಮ್ಮಮ್ಮನಿಗೆ ಬಿ.ಪಿ. ಲೋವ್‌ ಆಗಿದೆ. ಯಾವುದಕ್ಕೂ ನೀನು ಹೊರಟು ಬಂದು ಬಿಡು ಎಂದು ಹೇಳು ಕಾಲ್‌ ಕಟ್‌ ಮಾಡಿದರು.

ಮನಸ್ಸು ವಿಲ ವಿಲ ಒದ್ದಾಡಿತು.

ನನಗೆ ಏನು ಮಾಡಲೂ ತಿಳಿಯಲಿಲ್ಲ. ಆಫೀಸಿಗೆ ಹೋಗಿದ್ದ ಇವರಿಗೆ ಕಾಲ್‌ ಮಾಡಿ ಅಳುತ್ತಲೇ ವಿಷಯ ತಿಳಿಸಿದೆ. ಅವರು ಸಮಾಧಾನ ಹೇಳಿ ಈಗಲೇ ಬಂದೆ ಅಂದರು. ಅಷ್ಟರಲ್ಲಿ ತಂಗಿ ಕಲ್ಪನ ಪೋನು ಮಾಡಿ ಹೇಳಿದಳು. ಅಕ್ಕಾ… ನೀನು ಭಾವನನ್ನ ಜೊತೆ ಬಂದುಬಿಡು. ಮಕ್ಕಳನ್ನೂ ಕರಕೊಂಡು ಬಾ. -ಎಂದು ಚುಟುಕಾಗಿ ಹೇಳಿ ಪೋನಿಟ್ಟಳು. ನನಗೆ ಇನ್ನೂ ಗಾಬರಿಯಾಗಿ ಹೋಯ್ತು. ಮನಸ್ಸು ವಿಲವಿಲ ಒದ್ದಾಡಿತು. ಅಷ್ಟರಲ್ಲಿ ಮನೆಗೆ ಇವರೂ ಬಂದರು. ಅವರಿಗೂ ಯೋಚನೆಯಾಗಿತ್ತು. ಬೆಂಗಳೂರ ಲ್ಲಿಯೇ ನನ್ನ ಚಿಕ್ಕಮ್ಮನ ಮಗನೂ ಬಂದಿದ್ದ. ಎಲ್ಲ ಯೋಚಿಸಿ ಒಂದು ನಿರ್ಧಾರಕ್ಕೆ ಬಂದೆವು. ಮಕ್ಕಳನ್ನು ಕರೆದೊಯ್ಯುವುದು ಬೇಡ.ಅಲ್ಲಿಯ ಪರಿಸ್ಥಿತಿ ಹೇಗಿರುತ್ತದೋ. ನನ್ನ ಪತಿ ಮಕ್ಕಳೊಂದಿಗೆಇಲ್ಲಿಯೇ ಇರಲಿ. ನಾನು ಚಿಕ್ಕಮ್ಮನ ಮಗನೊಂದಿಗೆ ಕಾರಿನಲ್ಲಿ ಹೋಗುವುದೆಂದು ತೀರ್ಮಾನವಾಯಿತು. ತಡ ಮಾಡಲಿಲ್ಲ. ನಾನು, ಆ ಅಣ್ಣನೊಂದಿಗೆ ಮೈಸೂರಿಗೆ ಆತಂಕದಲ್ಲೇ ಹೊರಟೆ. ಅಮ್ಮನಿಗೆ ಏನೂ ಆಗಿಲ್ಲ. ಸುಮ್ಮನೆ ಲೋವ್‌ ಬಿ.ಪಿ. ಆಗಿದೆಯಂತೆ. ಅಷ್ಟಕ್ಕೇ ಮಾವ ಹೆದರಿಸಿದರು. ಏನೇನೋ ಯೋಚಿಸಿದೆ ನಾನು.

ಇನ್ನೇನು ಮೈಸೂರು ಹತ್ತಿರ ಬಂತು. ಇದ್ದಕ್ಕಿದ್ದಂತೆ ಕಾರು ದೊಡ್ಡ ರಸ್ತೆ ಬಿಟ್ಟು, ಅಪ್ಪನ ಹಳ್ಳಿಯತ್ತ ತಿರುಗಿತು. ನಾನು ಏಕೆ ಎಂದು ಕೇಳಿದ್ದಕ್ಕೆ ಹಳ್ಳಿಯಿಂದ ನನ್ನ ಅವ್ವ-ಅಪ್ಪ ಬರ್ತಾರಂತೆ ದೊಡ್ಡಮ್ಮನ್ನ ನೋಡೋಕೆ. ಅವ್ರನ್ನೂ ಕರ್ಕೊಂಡು ಹೋಗೋಣ. ಅಂದು ಮೌನವಾಗಿ ಕಾರು ಓಡಿಸತೊಡಗಿದ. ನಾನು ಏನೋ ಮಾತಾಡದೆ ಕೂತೆ. ಮೈಸೂರಿಗೆ ಹೋಗಿ ಅಮ್ಮನನ್ನು ಯಾವಾಗ ನೋಡುತ್ತೇನೋ ಎಂದು ಸಂಕಟ ಪಡುತ್ತಿದ್ದವಳಿಗೆ ಅದು ನನ್ನ ಬಾಯಿ ಕಟ್ಟಿತು. ನಾನು ಅಪ್ಪನಿಗೆ ಕರೆ ಮಾಡುತ್ತಲೇ ಇದ್ದೆ. ಅವರು ಎತ್ತಲೇ ಇಲ್ಲ. ತಂಗಿಗೆ ಕರೆ ಮಾಡಿದೆ. ಅವಳಿಂದಲೂ ಉತ್ತರವಿಲ್ಲ. ಗಾಬರಿ ಹೆಚ್ಚಾಗುತ್ತಿತ್ತು.

ಊರು ಬಂತು. ನಾನು ಅಣ್ಣನಿಗೆ ಕಾರಿನಿಂದ ಇಳಿಯೋದು ಬೇಡ. ಚಿಕ್ಕಮ್ಮ-ಚಿಕ್ಕಪ್ಪ ಬೇಗ ಬರಲಿ ಅಂದೆ. ಮತ್ತು ನಾನು ಕಾರಿನಿಂದ ಇಳಿದವಳೇ ಚಿಕ್ಕಮ್ಮನನ್ನು ಕರೆತರಲು ದೌಡಾಯಿಸಿದೆ.

ಹೃದಯ ಛಿದ್ರವಾಗುವ ಸಮಯ

ಎರಡು ಹೆಜ್ಜೆ ಮುಂದಿಟ್ಟವಳು ಹಾಗೆ ನಿಂತೆ. ಹಾವು ಮೆಟ್ಟಿದಂತಾಯಿತು. ಮನೆಯ ಮುಂದೆ ಬೈಕುಗಳು, ಒಂದಷ್ಟು ಕಾರುಗಳು, ಸಾಲಾಗಿ ನಿಂತಿದ್ದವು, ನಾನು ಬಂದದ್ದು ನೋಡಿ ಅಲ್ಲಲ್ಲಿ ಗುಂಪುಗೂಡಿದ್ದವರು ನನ್ನನ್ನು ಮೌನವಾಗಿ ನೋಡುತ್ತಿದ್ದು ಈಟಿಯಂತೆ ಇರಿದಂತಾಯಿತು.ಮನೆಯತ್ತ ದೌಡಾಯಿಸಿದೆ. ನೋಡಿದರೆ ಮನೆ ಮನೆ ಮುಂದೆ ಅಂಗಳದಲ್ಲಿ ಒಂದು ಮಡಕೆಯಲ್ಲಿ ಬೆಂಕಿ ಹಾಕಿರುವುದು ಕಂಡಿತು. ನನ್ನ ಜಂಘಾ ಬಲವೇ ಉಡುಗಿತು. ಏನು. ಎಲ್ಲಿದ್ದೇನೆ ಎಂಬುದೇ ಅರ್ಥವಾಗಲಿಲ್ಲ. ನನಗೆ ಆ ಕ್ಷಣದಲ್ಲಿ ಅರ್ಥವಾದದ್ದು ಆ ದೇವರು ನಮಗೆ ಏನೋ ದ್ರೋಹ ಮಾಡಿದ್ದಾನೆ ಎಂದು. ಕಾಲು ನಡುಗಿ ಮುಂದೆ ಹೆಜ್ಜೆ ಇಡಲಾಗಲಿಲ್ಲ. ಅಲ್ಲೇ ಕುಸಿದು ಬಿದ್ದೆ. ತಕ್ಷಣ ಅಲ್ಲಿದ್ದ ಜನ ನನ್ನನ್ನು ಎತ್ತಿ ಕೂಡ್ರಿಸಿದರು ಕಾಲಿನ ಶಕ್ತಿಯೇ ಕಂದಿ ಹೋಗಿತ್ತು. ಸಮಾಧಾನ ಮಾಡಿ ರಟ್ಟೆ ಹಿಡಿದು ಮನೆಯ ಹೊರಕಟ್ಟೆಯ ಬಳಿ ಕರೆದೊಯ್ದರು. ಅಲ್ಲಿ ಅಮ್ಮ ಶವವಾಗಿ ಮಲಗಿದ್ದು ಕಂಡು ನನ್ನ ಹೃದಯವೇ ಬಾಯಿಗೆ ಬಂದು ಬಿಟ್ಟಿತು. ಕ್ಷಣ ಹೊತ್ತು ನನ್ನನ್ನು ಹಿಡಿಯುವುದು ಯಾರಿಂದಲೂ ಆಗಲಿಲ್ಲ. ಅವ್ವನ ಶವದ ಮೇಲೆ ಬಿದ್ದು ಹೊರಳಾಡಿದೆ. ಅಲ್ಲಿಯೇ ನನ್ನ ತಂಗಿ ಕಾವ್ಯ ಕೂತಿದ್ದಳು. ನನ್ನನ್ನು ನೋಡಿ ಆಕೆಯ ಅಳುವೂ ಹೆಚ್ಚಿತು. ನಮ್ಮನ್ನು ನೋಡಿ ಅಲ್ಲಿದ್ದವರ ಕಣ್ಣೀರ ಕೋಡಿ ಹರಿಯಿತು. ಅಮ್ಮ ನಮ್ಮನ್ನು ಅನಾಥರನ್ನಾಗಿ ಮಾಡಿ ಹೊರಟುಬಿಟ್ಟಿದ್ದಳು.

ಅಮ್ಮನ ಮುಖ ಶಾಂತವಾಗಿತ್ತು ಅವಳ ಮುಖ ನೋಡಿದ ನನಗೆ ಅಪ್ಪನ ನೆನಪಾಯಿತು. ಕಲ್ಪನಾಗೆ ಕೇಳಿದೆ. ಅಪ್ಪ ಎಲ್ಲಿ ಕಲ್ಪಾ ಅಂದೆ. ‘ ಅಕ್ಕಾ… ಈಗ ಅಪ್ಪನ ಬಳಿ ಹೋಗಬೇಡ ಅಂದಳು.’ ಅಪ್ಪ ದೂರದಲ್ಲಿ ಒಬ್ಬನೇ ಧಿಮ್ಮನೇ ಕೂತು ಬಿಟ್ಟಿದ್ದ. ತಡೆಯಲಾರದೆ ಅಪ್ಪನಿದ್ದ ಕಡೆ ಹೋದೆ. ಅಪ್ಪ ಅತ್ತೂ ಅತ್ತು ಕಣ್ಣು ಊದಿಕೊಂಡಿದ್ದವು. ಅಪ್ಪ ನನಗೆ ಮುಖ ಕೊಡದೆ ಅತ್ತ ಮುಖ ತಿರುಗಿಸಿದರು. ಗಾಯದ ಮೇಲೆ ಬರೆ ಎಳೆದಂತಾಯಿತು. ಕಣ್ಣಂಚಿನಲ್ಲಿ ತುಳುಕಾಡುತ್ತಿದ್ದ ನೀರನ್ನು ನಮಗೆ ತೋರಿಸಬಾರದೆಂದು ಅಪ್ಪ ಅತ್ತ ಹೊರಳಿದ್ದರು.

‘ ಬೆಳಿಗ್ಗೆ ಚಂದಾಗೇ ಇದ್ಲು ಕಂದಾ. ನಿನ್ನ ಜೊತೆ ಮಾತಾಡುವಾಗ್ಲೂ ಚಂದಾಗೇ ಇದ್ಲು. ಪ್ರಾಣ ಪಕ್ಷಿ ಹಾರೋಕ್‌ ಕುಂತಿತ್ತು ಅನ್ಸುತ್ತೆ. ಅದು ನಮ್ಗೆ ಗೊತ್ತಾಗ್ಲಿಲ್ಲ ಅಷ್ಟೇಯ’

ಅಪ್ಪ ಮಾತು ತಡೆದು ಬಿಕ್ಕದರು. ನಾನು ಅಪ್ಪನ ಬೆನ್ನು ನೇವರಿಸಿದೆ. ಕೇಳುವ ಕುತೂಹಲವಿತ್ತು. ಅಪ್ಪ ಮಾತು ಮುಂದುವರೆಸಿದರು. ತಮಾಷೆ ಮಾಡ್ದೆ ನಾನೇ. ತಿಂಡಿ ಕೊಡೋಕ್‌ ಹೋದೆ. ‘ ಹಾಯಾಗಿ ಕುಳಿತಿರು ರಾಣಿಯ ಹಾಗೆ ‘ ಅಂತ ಯಾಕೋ ಹಾಡ್ದೆ. ಕಲ್ಪಾ ಕಾಲೇಜಿಗೆ ಹೋಗಿತ್ತು.

‘ ಅವ್ಳು ಬಂದ್ಮೇಲೆ ನಾನು ಹೇರ್‌ ಕಟ್‌ಗೆ ಹೋಗ್ತೀನಿ. ನಾಳೆಯಿಂದ ಡ್ಯೂಟಿಗೆ ಹೋಗ್ತೀನಿ’

ಅಂದೆ. ಅಮ್ಮ ಯಾಕೋ ನನ್ನನ್ನ ನೋಡ್ತಾ ಕೂತು ಬಿಡ್ತು. ಏನೂ ಮಾತಾಡ್ಲಿಲ್ಲ. ನಾನು ಹೊರಗೆ ಹೋಗಿ ಹೇರ್‌ ಕಟ್‌ ಮಾಡಸ್ಕೊಂಡು ಬಂದೆ. ಅಮ್ಮ ನನ್ನೇ ನೋಡ್ತು. ರಾಜ್‌ಕುಮಾರನಂಗೆ ಕಾಣ್ತೀರ ಅಂತ್ಲೂ ಹೇಳ್ತು. ‘ ಬನ್ನಿ ಕೂದ್ಲು ಅದೆಷ್ಟು ಬೆಳ್ಳಗೆ ಕಾಣ್ತಿವೆ ನೋಡಿ. ನಾನೇ ಕಲರ್‌ ಹಾಕ್ತೀನಿ’ ಅಂದ್ಲು. ನಂಗೆ ಖುಷ್‌ ಆತು ಮಗಾ. ಅವಳ ಆರೋಗ್ಯ ಚಿಗುರ್ತು ಅನ್ನೋ ಆನಂದ. ಎದ್ದು ಕಲರ್‌ ತಂದು ಕೈಗೆ ಕೊಟ್ಟೆ. ಅವಳು ಮಂಡದ ಮ್ಯಾಲೆ. ನಾನು ಅವಳ ಮುಂದೆ ಕೆಳಗೆ ಕೂತು ತಲೆ ಅವಳ ಕೈಗೆ ಕೊಟ್ಟೆ. ನಿಧಾನವಾಗಿ ತಲೆಗೆ ಕಲರ್‌ ಹಚ್ಚೋಕ್‌ ಸುರು ಮಾಡ್ತು. ಹಾಗೇ ಇದ್ದಕ್ಕಿದ್ದಂತೆ- ‘ ರೀ… ನಂಗೇನೂ ಆಗಲ್ಲ ಅಲ್ವ? ‘ ಅಂದಳು ಅಳುಕಿನಿಂದ. ನಿಂಗೇನಾಗುತ್ತೆ? ಎಂತದೂ ಆಗೊಲ್ಲ. ಎಂದೆ ಭಂಡ ಧೈರ್ಯದಿಂದ. ಅಷ್ಟೇಯ. ಮತ್ತೆ ಅವಳಿಂದ ಮಾತಿಲ್ಲ. ನೋಡಿದರೆ ಅವಳ ಕೈಯಲ್ಲಿದ್ದ ಕಲರ್‌ ಬಟ್ಟಲು ಟಪ್‌ ಅಂತ ಕೆಳಗೆ ಬಿತ್ತು. ಗಡಿಬಿಡಿಸಿ ಹಿಂದಿರುಗಿ ನೋಡಿದೆ. ಅಮ್ಮ ನನಗೆ ಒರಗಿ ಬಿದ್ದಿದ್ದಳು. ತಲೆಯ ಕಲರ್‌ ಅವಳ ಬಟ್ಟೆಯನ್ನು ತೊಯಿಸಿತ್ತು. ಕಣ್ಣು ಮುಚ್ಚಿದ್ದಳು. ನಾನು ಗಾಬರಿಗೊಂಡು ಕುಸುಮ… ಕುಸುಮ ಎಂದು ಕೂಗಿ ನೀರು ಕುಡಿಸಲು ನೋಡಿದೆ. ಬಾಯಿಗೆ ಹಾಕಿದ ನೀರು ಹೊರಗೆ ಬಂತು. ಅಪ್ಪ ಮತ್ತೆ ಮಾತಾಡಲಿಲ್ಲ. ಬಹುಶಃ ಅಪ್ಪ ಅಮ್ಮನ ಬಾಯಿಗೆ ನೀರು ಹಾಕಿದಾಗಲೇ ಅಮ್ಮ ದೇವರ ಕುಸುಮವಾಗಿದ್ದಳು. ನಾನು ಅಪ್ಪನನ್ನು ಬಿಗಿದಪ್ಪಿಕೊಂಡು ಮತ್ತೊಮ್ಮೆ ಜೋರಾಗಿ ಅತ್ತು ಬಿಟ್ಟೆ.

 

3.8 5 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW