ನನ್ನೆದೆಯ ಮಹಲಿನ ಒಡೆಯ…ನೀನೆಂದು ಖಾತರಿಗೊಳಿಸಿದೆ…ಶೋಭಾ ಆರ್ ಅವರು ಬರೆದಿರುವ ಸುಂದರ ಕವನದ ಸಾಲುಗಳನ್ನು ತಪ್ಪದೆ ಮುಂದೆ ಓದಿ…
ನಿನ್ನೊಲವ ಕಳೆದುಕೊಳ್ಳುವೆನೆಂಬ
ಭಯದಿ ಬೆದರಿತ್ತೀ ಮನವು
ನಿನ್ನೊಲವಿನ ನಿರೀಕ್ಷೆಯಲ್ಲೇ
ಕಾಯುತ್ತಿದ್ದೆ ಪ್ರತಿ ಕ್ಷಣವು
ಇಹದ ಪರಿವನ್ನೇ ಮರೆಸುವಷ್ಟು
ಒಲವಧಾರೆ ಹರಿಸಿ
ನಿನ್ನೆದೆಯ ಹೃದಯ ಮಂದಿರದಿ
ನನ್ನ ಸೆರೆಯಾಗಿಸಿದೆ
ಎನ್ಮನದ ನೋವನ್ನೆಲ್ಲ
ನಿನ್ನ ಸುಮಧುರ ನುಡಿಯಿಂದಳಿಸಿ
ನನ್ನೆದೆಯ ಮಹಲಿನ ಒಡೆಯ
ನೀನೆಂದು ಖಾತರಿಗೊಳಿಸಿದೆ
ನಾನಿರುವುದೇ ನಿನಗೆಂದು
ಅಭಯವೊಂದ ತೊಡಿಸಿ
ಸಂಭ್ರಮದ ಹೊಳೆಯನ್ನೇ ಹರಿಸಿದೆ
ಈ ನಿನ್ನ ಅನಿರೀಕ್ಷಿತ ಭೇಟಿ……….!
ನಿನ್ನೀ ಅನಿರೀಕ್ಷಿತ ಭೇಟಿಯಲ್ಲಿ
ಜಗದಿರುವೂ ಮರೆತುಹೋಗಿದೆ ಒಲವೆ
ಏನಾಗುತ್ತಿದೆಯೆಂದು ಅರಿಯುವಷ್ಟರಲ್ಲಿ
ನಾ ನಿನ್ನ ತೋಳಲ್ಲಿ ಬಂಧಿಯಾಗಿರುವೆ
ನನ್ನುಸಿರಿರುವ ಪ್ರತಿಕ್ಷಣವೂ ಹೀಗೆಯೆ
ಇರಲೆಂದು ಬಯಸಿಹುದೆನ್ನ ಮನವು
ಜನುಮ ಜನುಮಕೂ ನಿನ್ನೊಲವೇ
ಬೇಕೆಂದು ನುಡಿಯುತಿಹುದೆನ್ನ ಹೃನ್ಮನವು||
- ಶೋಭಾ ಆರ್