ಕಾಲೇಜಿನಿಂದ ಬಂದದ್ದೇ ತಡ. ಪುಸ್ತಕಗಳನ್ನು ಎಸೆದವಳೇ ಹಾಸಿಗೆ ಮೇಲೆ ಉರುಳಿ ಬಿಕ್ಕಳಿಸತೊಡಗಿದಳು ರೇಣುಕಾ. ಕಣ್ಣಿಂದ ಉದುರುತ್ತಿದ್ದ ಕಣ್ಣಿಂದ ಉದುರಿದ ಒಂದೊಂದು ಮಾತುಗಳಲ್ಲೂ ಸಹಪಾಠಿಗಳು ಆಡಿದ ವ್ಯಂಗ್ಯದ ಮಾತುಗಳು. ತಾನೇಕೆ ಹೀಗೆ ದೇವರೆ. ಎಲ್ಲರಂತೆ ತನಗೂ ನಿರಾಂತಕವಾದ ಜೀವನವನ್ನು ಕರುಣಿಸಬಾರದಿತ್ತೆ? ದಿನದಿಂದ ದಿನಕ್ಕೆ ಮನೆ ಎಂಬುದು ನರಕವಾಗುತ್ತಿದೆ. ಬಿಕ್ಕಿದಳು ರೇಣುಕಾ.
ಇತ್ತ ಪಡಸಾಲೆಯಲ್ಲಿ ಕೂತು ಹೂಮಾಲೆ ಕಟ್ಟುತ್ತಿದ್ದ ತಾಯಿ ಯಲ್ಲವ್ವ ಮಗಳನ್ನು ಕಣ್ಣಂಚಿನಲ್ಲೇ ನೋಡಿದಳು. ತುಸು ಅಸಮಾಧಾನದಿಂದಲೇ ಹೇಳಿದಳು.
ಹೋಗು. ಮಾರೀ ತೊಳ್ಕೊಂಡು ಉಣ್ಣೋಗ ನಮ್ಮವ್ವಾ. ಕಣ್ಣೀರು ಅನ್ನೂವು ತಡಾಕೀಲೆ ತುಳುಕತಾವು ನೋಡು ನಿನಗ.
ಅದನ್ನು ಕೇಳಿಸಿಕೊಂಡ ರೇಣುಕಾ ಏನೂ ಮಾತಾಡದೆ ಒಳಗೇ ಅವ್ವನನ್ನು ಬಯ್ದುಕೊಂಡಳು. ಮತ್ತು ಪುಸ್ತಕ ತೆರೆದು ಓದುವಳಂತೆ ಅದರಲ್ಲಿ ದೃಷ್ಟಿ ನೆಟ್ಟಳು. ಅಷ್ಟರಲ್ಲಿ ಅವ್ವ ಕೈಯಲ್ಲಿದ್ದ ಕೆಲಸ ಬಿಟ್ಟು ಎದ್ದು ಹಿತ್ತಲ ಕಡೆಗೆ ನಡೆದಿದ್ದಳು.
ರೇಣುಕಾ ಒಮ್ಮೆ ಅವ್ವನತ್ತ ನೋಡಿದಳು. ಯಾಕೋ ಮನಸ್ಸು ಕಹಿ ಅನಿಸಿತು. ಹೆಚ್ಚು ಹೊತ್ತು ಹಾಗೇ ನೋಡಲಾಗಲಿಲ್ಲ. ಅವ್ವ ಕೈ-ಕಾಲು- ಮುಖ ತೊಳೆದಿಕೊಂಡು ಬಂದವಳೇ ಹೇಳಿದಳು.
ಎದ್ದು ಬಾ. ಉಣ್ಣು ಅಂದ್ರ ಕೇಳಲಿಲ್ಲೇನು. ಬಾ. ನಾನ ರೊಟ್ಟೀ ಹಚ್ಚಿ ಕೊಡತೀನಿ – ಅನ್ನುತ್ತ ಅಡುಗೇ ಕೋಣೆಗೆ ಹೋದಳು. ರೇಣು ಅನಿವಾರ್ಯವಾಗಿ ಎದ್ದು ತಾನೂ ಅವ್ವನ ಹಿಂದಿನಿಂದ ಹೋದಳು.
ಊಟ ಮಾಡುವಾಗ ಇಬ್ಬರ ನಡುವೆ ದಿವ್ಯ ಮೌನ. ಅವಳ ಪಾಡಿಗೆ ಅವಳು, ಇವಳ ಪಾಡಿಗೆ ಇವಳು ಊಟ ಮಾಡಿದರು. ಅವರವರ ತಟ್ಟೆಯನ್ನು ಎತ್ತಿಕೊಂಡು ಹಿತ್ತಲಲ್ಲಿಟ್ಟು ಬಂದರು. ಅವ್ವ ಯಲ್ಲವ್ವನಿಗೆ ನಿದ್ದೆ ಆವರಿಸಿತು. ಇಬ್ಬರಿಗೂ ಚಾಪೆ ಹಾಸಿ ತಾನು ಉರುಳಿಕೊಂಡಳು. ರೇಣುಕಾ ಅವ್ವನನ್ನು ನೋಡುತ್ತಲೇ ಗೆಳತಿಯರು ಹೇಳಿದ ಮಾತುಗಳನ್ನು ನೆನಸಿಕೊಂಡಳು. ಅವ್ವ ವಿಚಿತ್ರವಾಗಿ ಕಂಡಳು.
ಯಲ್ಲವ್ವನಿಗೆ ಅದ್ಯಾಕೋ ನಿದ್ದೆ ಬೇಗ ಹತ್ತಲಿಲ್ಲ. ಕಣ್ಣ ರೆಪ್ಪೆಯಲ್ಲಿ ತನ್ನ ಜೀವನದ ಹರುಕು-ಮುರುಕು ಚಿತ್ರಗಳು ನಿಧಾನವಾಗಿ ಮೂಡಿ ಬಂದವು. ಮನಸ್ಸು ಹದಿನೈದು ವರ್ಷದ ಹಿಂದಕ್ಕೆ ಹೋಯಿತು. ಸಂಗಪ್ಪನಿಗೂ ತನಗೂ ಲಗ್ನ ಆದದ್ದೊಂದೇ ತನ್ನ ಜೀವನದ ಏಕೈಕ ಸಂಭ್ರಮ. ಆಮೇಲೇ ಗೊತ್ತಾಯಿತು. ಗಂಡ ತನ್ನ ಯಾವ ಭಾವನೆಗಳಿಗೂ ಸ್ಪಂದಿಸವ ಮನುಷ್ಯ ಅಲ್ಲ ಎಂಬುದು. ಹಾಗಾಗಿ ತಾನು ಬಾಯಿ ಜೋರು ಮಾಡಿಕೊಂಡಳು. ನಾಲಿಗೆ ತುದಿಯಿಂದಲೇ ಗಂಡನನ್ನು ಆಟ ಆಡಿಸತೊಡಗಿದಳು. ಯಲ್ಲವ್ವ ಅಂದರೆ ಬಾಯ್ಬಡುಕಿ ಎಂದು ಸುತ್ತ-ಮುತ್ತಿನ ಜನ ಹೆಸರಿಟ್ಟರು. ಅಂಥ ಹೊತ್ತಲ್ಲೇ ಯಲ್ಲವ್ವ ಬಸಿರಾದದ್ದು. ಅದು ಅವಳಿಗೆ ಕೋಡು ತರಿಸಿತೇನೋ. ಗಂಡನೆಂಬ ಪ್ರಾಣಿಯನ್ನು ಬಯ್ದೂ ಬಯ್ದೂ ಉಪ್ಪು ಹಾಕಿಟ್ಟಳು. ಕೊನೆಗೆ ಇವಳ ಕಾಟ ತಡೆಯಲಾರದೆ ಸಂಗಪ್ಪ ರಾತ್ರೋರಾತ್ರಿ ಎಲ್ಲವನ್ನೂ ತ್ಯಜಿಸಿ, ಮನೆ ಬಿಟ್ಟು ಓಡಿ ಹೋದ.
ಯಲ್ಲವ್ವನಿಗೆ ಅದೇನೂ ದೊಡ್ಡ ಸಂಗತಿಯಾಗಲಿಲ್ಲ. ಜೀವನದಲ್ಲಿ ಹೇಡಿಯಾಗಿದ್ದ ಗಂಡ ಸಂಗಪ್ಪ ಇಂಥ ನಿರ್ಧಾರ ತಗೆದುಕೊಳ್ಳು ತ್ತಾನೆಂದು ತನಗೆ ಅನಿಸಿತ್ತು. ಆದರೆ ತಾನು ಬಸುರಿಯಾಗಿದ್ದಾಗಲೇ ಹೀಗೆ ತನ್ನನ್ನು ಬಿಟ್ಟು ಓಡಿ ಹೋಗುತ್ತಾನೆಂದು ಅನಿಸಿರಲಿಲ್ಲ. ಹೇಡಿನ್ನ ತಂದು. ಹೆಂಡತಿಯನ್ನು ಬಾಳಿಸಲಾರದ ಗಂಡ ಇದ್ದರೆಷ್ಟು, ಹೋದರೆಷ್ಟು. ಯಲ್ಲವ್ವ ಗಟ್ಟಿಯಾದಳು.
ಹೇಗೂ ತವರು ಮನಯಿಂದ ಅಪ್ಪ ತನಗೆಂದು ಕೊಟ್ಟಿದ್ದ ಎರಡೆಕರೆ ಹೊಲ ಇತ್ತಲ್ಲ. ಅಷ್ಟು ಸಾಕು ಜೀವ ಹಿಡಿಯುವದಕ್ಕೆ. ಹೆಣ್ಣಿಗೆ ಧೈರ್ಯವೊಂದಿದ್ದರೆ ಏನೆಲ್ಲ ಸಾಧಿಸಬಲ್ಲಳು. ತೋರಿಸುತ್ತೇನೆಂದು ನೆಲ ಬಡಿದಳು.
ಯಲ್ಲಮ್ಮ ಎರಡೆಕರೆ ಹೊಲದಲ್ಲಿ ತರಕಾರಿ ಬೆಳೆದಳು. ಕಾಕಡ ಗಡ ಹಾಕಿ ಹೂ ಬೆಳೆದಳು. ಸರಿ ಸಮಯಕ್ಕೆ ಹೆಣ್ಣು ಮಗುವಿಗೆ ಜನ್ಮವನ್ನೂ ಇತ್ತಳು. ಮಗು ತನ್ನಂತೆಯೇ ಆಗಬೇಕೆಂದು ರೇಣುಕಾ ಎಂದೂ ಹೆಸರಿಟ್ಟಳು. ಹೂ ಮಾಲೆ ಕಟ್ಟಿ ಪಕ್ಕದ ಹನುಮಪ್ಪನ ಗುಡಿ ಮುಂದೆ ಕೂತು ವ್ಯಾಪಾರಕ್ಕೂ ಇಳಿದಳು. ಈಗ ಹಾದಿಯಲ್ಲಿ ಹೋಗುವವರ ಕಣ್ಣು ಯಲ್ಲವ್ವನ ಮೇಲೆ. ಹಾದಿ ಮೇಲಿನ ಹೂವನ್ನು ಎಲ್ಲರೂ ನೋಡುವವರೆ. ಆದರೆ ಯಲ್ಲವ್ವ ಯಾವುದಕ್ಕೂ ಹೆದರಲಿಲ್ಲ. ಮೊದಲೇ ಹರಕು ಬಾಯಿ. ಅದಕ್ಕೆ ಮೊಂಡು ಧೈರ್ಯವೂ ಸೇರಿ ಈಗ ಯಲ್ಲವ್ವ ಅಂದರೆ ಗಂಡಸರು ಹತ್ತಿರ ಬಂದು ಮಾತಾಡಲು ಹೆದರುತ್ತಿದ್ದರು.
ಕಾಲ ಸರಿಯುತ್ತಿತ್ತು. ರೇಣುಕಾ ಈಗ ದೊಡ್ಡವಳಾಗಿದ್ದಾಳೆ. ಆಗು-ಹೋಗುಗಳನ್ನು ಅರ್ಥ ಮಾಡಿಕೊಳ್ಳುವ ಪ್ರಬುದ್ಧತೆಯನ್ನೂ ಪಡೆದಿದ್ದಾಳೆ. ಯಲ್ಲವ್ವನಿಗೆ ಅದೇನಾಗಿತ್ತೋ. ಯಾವುದೋ ಸಂದರ್ಭದಲ್ಲಿ ಮನಸ್ಸು ಸೋತು ಡ್ರೈವರ್ ಬಾಳಪ್ಪನೊಂದಿಗೆ ಕೂಡಿಕೆ ಮಾಡಿಕೊಂಡು ಬಿಟ್ಟಳು. ತನ್ನ ಅಪ್ಪನನ್ನು ಓಡಿಸಿ ಅವ್ವ ಹೀಗೆ ಬಾಳಪ್ಪನೊಂದಿಗೆ ಇರುವುದನ್ನು ರೇಣುಕಾ ಇಷ್ಟಪಡಲಿಲ್ಲ. ಒಳಗೊಳಗೇ ಆಕೆಗೆ ಅವ್ವ ಅಂದರೆ ತಾತ್ಸಾರ ಸುರುವಾಗತೊಡಗಿತು. ಇದೇ ಕಾರಣಕ್ಕೆ ತನ್ನ ಸ್ನೇಹಿತೆಯರು ತನ್ನನ್ನು ಹಗುರವಾಗಿ ಕಾಣುತ್ತಿದ್ದರು. ಎಲ್ಲರ ಕಣ್ಣಲ್ಲಿ ತಾನು ಇಂಥವಳ ಮಗಳು ಎಂದು ಹಂಗಿಸಿಕೊಳ್ಳಬೇಕಾಗಿ ಬಂದಾಗ ರೇಣುಕಾಳ ಮನಸ್ಸು ಉರಿಯತೊಡಗಿತು. ಅವ್ವನ ಜೊತೆಗಿನ ಸಂಬಂಧದ ಅಂತರ ಹೆಚ್ಚಾಗತೊಡಗಿತು. ಅವ್ವ ಏನು ಹೇಳಿದರೂ ಒಲ್ಲೆ- ಬ್ಯಾಡ ಅನ್ನುತ್ತಿದ್ದಳು. ಇದು ಯಲ್ಲವ್ವನಿಗೆ ಚಿಂತೆ ಸುರು ಮಾಡಿತ್ತು.
ಅದೊಂದು ದಿನ ರೇಣುಕಾ ಕಾಲೇಜಿನಿಂದ ಮನೆ ಬಾಗಿಲಿಗೆ ಬಂದಿದ್ದಾಳೆ. ಒಳಗೆ ಅವ್ವ ಯಲ್ಲವ್ವನ ದನಿ ದೊಡ್ಡದಾಗಿ ಕೇಳುತ್ತಿತ್ತು. ಹಾಗೇ ಬಾಳಪ್ಪನ ದನಿಯೂ ಅಷ್ಟೇ ಜೋರಾಗಿ ಕೇಳುತ್ತಿತ್ತು. ರೇಣುಕಾಗೆ ಅಚ್ಚರಿ ಮತ್ತು ಆತಂಕ ಒಟ್ಟಿಗೇ. ಅಲ್ಲೇ ನಿಂತು ಒಳಗಿನ ಮಾತು ಕೇಳತೊಡಗಿದಳು. ಬಾಳಪ್ಪ ಜೋರಾಗಿ ಒದರಾಡುತ್ತಿದ್ದ.
ಏಯ್. ಹೆಚ್ಚ ಬಾಯಿ ಮಾಡಬ್ಯಾಡ. ನಿನ್ನ ಮಗಳ ಲಗ್ನಾ ಮಾಡೂದು ನನ್ನ ಕೂಡೇತಿ. ನಾನು ನಿನ್ನ ಜೋಡೀ ಕೂಡಿಕೀ ಮಾಡ್ಕೊಂಡೇನಿ ಅಂದ್ರ ಇಲ್ಲಿರೂದು ಎಲ್ಲಾ ನಂದನ. ಮೊದಲ ಆ ಎರಡೆಕರೆ ಹೊಲಾನ ನನ್ನ ಹೆಸರೀಗೆ ಬರೀ. ತಾಯೀ ಮಗಳನ್ನ ಹೂವಿನಂಗ ನೋಡ್ಕೋತೀನಿ.
ಅದನ್ನು ಕೇಳಿದ ಯಲ್ಲವ್ವನ ಪಿತ್ತ ನೆತ್ತಿಗೇರಿತ್ತು. – ಏನ ಹಲಾಲಖೋರ್. ಆ ಹೊಲಾ ಏನ ನಿಮ್ಮಪ್ಪ ಗಳಿಸಿ ಕೊಟ್ಟಾನ? ನನ್ನ ತವರ ಮನೀಯಾವ್ರು ನನಗ ಕೊಟ್ಟಾರ ಅದನ್ನ. ನನ್ನ ಮಗಳೀಗೆ ಬರದೇನಿ ಅದನ್ನ. ನಿನಗ ಹೆಂಗ ಕೊಡ್ಲೋ ಭಾಡ್ಯಾ…ಬಿಡಾಡಿ ನಾಯೀಯಂಥಾವ್ನ.
ಅವ್ವ ಹಾಗಂದಾಗ ಬಾಳಪ್ಪನದೂ ಏರು ದನಿಯಾಯಿತು. ಮುರುಕ್ಷಣ ಅದೇನು ನಡೆಯಿತೋ. ರಪ ರಪ ಬಡಿಗೆಯ ಸದ್ದು ಕೇಳಿ ರೇಣು ಗಾಬರಿಯಾದಳು. ಅಲ್ಲಿ ನಿಲ್ಲದೆ ಒಳಗೆ ಓಡಿದಳು. ಅಲ್ಲಿಯ ದೃಶ್ಯ ಕಂಡು ಆವಾಕ್ಕಾದಳು. ಬಾಳಪ್ಪ ನೆಲಕ್ಕೆ ಬಿದ್ದಿದ್ದಾನೆ. ಯಲ್ಲವ್ವ ಅವನ ಎದೆ ಮೇಲೆ ಕಾಲಿಟ್ಟು ಮಹಿಷಮರ್ದಿನಿಯಂತೆ ಕಾಣುತ್ತಿದ್ದಾಳೆ. ಆಗಲೇ ಬಾಳಪ್ಪನ ತಲೆ ಒಡೆದು ರಕ್ತ ಬರುತ್ತಿದೆ. ಇನ್ನು ಸುಮ್ಮನಿದ್ದರೆ ಬಾಳಪ್ಪ ಸತ್ತೇ ಹೋಗುತ್ತಾನೇನೋ. ಗಾಬರಿಯಾದ ರೇಣುಕಾ ಅವ್ವನನ್ನು ತೆಕ್ಕೆ ಬಡಿದು ನಿಂತಳು. ಅಷ್ಟೇ ಸಾಕಾಯಿತೇನೋ. ಬಾಳಪ್ಪ ಗಡಿಬಡಿಸಿ ಎದ್ದವನೇ ಸತ್ತೆ ಎಂದು ಅಲ್ಲಿ ನಿಲ್ಲದೆ ಹೊರಗೆ ಓಡಿ ಹೋಗೇ ಬಿಟ್ಟ.
ಆವೇಶದಲ್ಲಿದ್ದ ಯಲ್ಲವ್ವ ಏದುಸುರು ಬಿಡುತ್ತಿದ್ದಳು. ಮಗಳನ್ನು ಕಂಡವಳೇ ಬಿಗಿದಪ್ಪಿಕೊಂಡು ಅಳತೊಡಗಿದಳು. ಈಗ ರೇಣುಕಾ ಯೋಚಿಸಿದಳು. ಬದುಕಿನುದ್ದಕ್ಕೂ ಅವ್ವ ಏನೆಲ್ಲ ಕಷ್ಟ ಅನುಭವಿಸಿದ್ದಾಳೆ. ಈಗ ಹೊಲವನ್ನೂ ಸಹ ನನ್ನ ಹೆಸರಿಗೇ ಬರೆದಿದ್ದಾಳೆ. ಅಂಥ ಅವ್ವನ ಬಗ್ಗೆ ತಾನು ಹೀಗೆ ಯೋಚಿಸಿದ್ದು ಸರಿಯೇ ಎಂದು ತನಗೆ ತಾನೇ ಪ್ರಶ್ನೆ ಮಾಡಿಕೊಳ್ಳುತ್ತಾಳೆ. ಈಗ ತನಗೂ ಅಳು ತಡೆಯಲಾಗಿಲ್ಲ. ತಾನೂ ಗಟ್ಟಿಯಾಗಿ ಅವ್ವನನ್ನು ಹಿಡಿದು ಅಳುತ್ತಾಳೆ. ಕ್ಷಣ ಹೊತ್ತು ಇಬ್ಬರ ಅಳು ದನಿ ಅಲ್ಲಿ ಹೆಪ್ಪುಗಟ್ಟುತ್ತದೆ. ರೇಣುಕಾ ಅವ್ವನ ಹಣೆಯ ಮೇಲಿನ ಬೆವರು ಒರೆಸುತ್ತ ಹೇಳುತ್ತಾಳೆ.
ಅವ್ವಾ… ಖರೇ ಹೇಳತೀನವಾ. ನನಗ ಅಪ್ಪ- ಅವ್ವ ಎಲ್ಲಾ ನೀನ. ನಿನ್ನನ್ನ ನಾನು ತಪ್ಪು ತಿಳಕೊಂಡು ನನಗ ನಾನ ಅನ್ಯಾಯ ಮಾಡಿಕೊಂಡ್ನಿ. ಖರೇ ಅಂದ್ರ ನೀನು ನನಗ ದೇವ್ರು ಅದೀ ನೋಡು… ಅನ್ನುತ್ತ ಮತ್ತೆ ಬಿಗಿದಪ್ಪಿಕೊಂಡಳು. ತಾನು ಸುಟ್ಟು ಮಕ್ಕಳಿಗೆ ಬೆಳಕಾಗುವ ಅವ್ವನ ಮುಂದೆ ಇನ್ಯಾವ ದೇವರು. ಮನಸ್ಸಲ್ಲೇ ಅವ್ವನನ್ನು ತುಂಬಿಕೊಂಡಳು.
#ಸಣಣಕತ