ಏನಾಗಿದೆ ನಮ್ಮ ವಿದ್ಯಾವಂತರಿಗೆ?

ಮಾತಾಡುವ ಮಂದಿ ಮತಗಟ್ಟೆಗೆ ಯಾಕೆ ಬರುತ್ತಿಲ್ಲ?

* ಹೂಲಿ ಶೇಖರ್‌

aakritiknnada@gmail.com

ವಿಧಾನ ಸಭೆಯ ಚುನಾವಣೆಗಳು ಮುಗಿದಿವೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಯುದ್ಧಾನಂತರದ ಆಯಾಸದಲ್ಲಿ ಸುಸ್ತು ಹೊಡೆದ ಸೈನಿಕರಂತೆ ಸೋತ ಸಂಕಟದಲ್ಲಿ, ಇಲ್ಲ ಗೆದ್ದ ಸಂಭ್ರಮದಲ್ಲಿ ಎಂದಿನ ದಿನಚರಿಯಲ್ಲಿ ಸೇರಿ ಹೋಗಿದ್ದಾರೆ. ಉಕ್ಕಿ ಹರಿಯುತ್ತಿದ್ದ ನದಿಗೆ ನೆರೆ ಇಳಿದು ಹೋದಂತಾಗಿದೆ. ತಳ ಮಟ್ಟದಲ್ಲಿ ಇಂದು ಯಾರೂ ರಾಜಕೀಯದ ಬಗ್ಗೆ ಮಾತಾಡುತ್ತಿಲ್ಲ. ಚುನಾವಣೆಯ ಪೂರ್ವದಲ್ಲಿ ಸಾಮಾನ್ಯ ಪ್ರಜೆಗಳಿಗೆ ಆವೇಶ ಹುಟ್ಟಿಸಿದ ಯಾವ ಸಂಗತಿಗಳೂ ಈಗಿಲ್ಲ. ಅರಸ ಯಾರಾದರೇನು. ರಾಗಿ ಬೀಸುವುದು ತಪ್ಪಲಿಲ್ಲ ಅನ್ನುವ ಹಾಗಾಗಿದೆ.

ನಮ್ಮ ಭಾರತೀಯ ಸಂದರ್ಭದಲ್ಲಿ ರಾಜಕೀಯವನ್ನು ಹೆಚ್ಚು ಹಚ್ಚಿಕೊಂಡವರು ಆಳುವವರು ಮತ್ತು ಆಳಿಸಿಕೊಳ್ಳುವವರು. ಅರ್ಥಾತ್‌ ಕೆಳ ವರ್ಗದವರು. ಕೆಳ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಸುರುವಾಗುತ್ತದೆ ನೋಡಿ. ಮತದಾರರೇ ಆಳುವ ದೊರೆ. ಮತದಾರರೇ ದೇವರು, ಮತದಾರರೇ ನಮಗೆ ತಂದೆ. ನಾವು ಆಯ್ಕೆಯಾದರೆ ನಮ್ಮ ಆಡಳಿತ ವಿಧಾನ ಸೌಧದಿಂದಲ್ಲ. ಮತದಾರರ ಬೀದಿಗಳಿಂದ. ನಾವು ನಿಮ್ಮ ಮನೆಯ ಮಕ್ಕಳು ಇತ್ಯಾದಿ ಉದ್ಘೋಷಗಳು ನಾಯಕರಿಂದ ಸುರವಾಗುತ್ತವೆ.

ಈ ಮತದಾರರೂ ಅಷ್ಟೆ. ಟೊಂಕ ಕಟ್ಟಿ ಪಕ್ಷಗಳ ಪರವಾಗಿ ಹೊಡೆದಾಡುತ್ತಾರೆ. ಈ ಸಲ ಪಕ್ಷಗಳ ಹೊಡೆದಾಟದಲ್ಲಿ ಕೆಲವು ಕಡೆ ಕಾರ್ಯಕರ್ತರ ಹೆಣಗಳೂ ಬಿದ್ದಿವೆ. ಗೆಳೆಯರು ವೈರಿಗಳಾಗಿದ್ದಾರೆ. ಕೆಲವು ಕಡೆಗಂತೂ ಒಂದು ಮನೆಯಲ್ಲಿ ಎರಡು-ಮೂರು ಪಕ್ಷಗಳಾಗಿ ಮನೆಗಳೂ ಒಡೆದಿವೆ. ಗಂಡ ಒಂದು ಪಕ್ಷ. ಹೆಂಡತಿ ಇನ್ನೊಂದು ಪಕ್ಷ. ಮಕ್ಕಳು ದೊಡ್ಡವರಿದ್ದರೆ ಅವರದೊಂದು ಪಕ್ಷ. ಅಭಿವ್ಯಕ್ತಿ ಸ್ವಾತಂತ್ಯ ಎಲ್ಲರಿಗೂ ನೋಡಿ. ಮತದಾನ ಆಗುವವರೆಗೂ ಎಲ್ಲವೂ ತಾರಕಕ್ಕೇರುತ್ತದೆ. ಪಕ್ಷಗಳ ನಾಯಕರು ಇಂಥದ್ದಕ್ಕೆಲ್ಲ ತುಪ್ಪ ಸುರಿಯುತ್ತಲೇ ಇರುತ್ತಾರೆ. ದೇಶ ಪ್ರೇಮಕ್ಕಿಂತ ಪಕ್ಷ ಪ್ರೇಮಕ್ಕೆ ಗೊಬ್ಬರ ಹಾಕುತ್ತಲೇ ಇರುತ್ತಾರೆ.

ಇಂಥದ್ದನ್ನೆಲ್ಲ ನಾವು ನೋಡಿದ್ದೇವೆ. ಆದರೆ ಮತದಾನ ಮುಗಿಯುತ್ತಿದ್ದಂತೆ ಇವರ ನಾಯಕರು ವಿಶ್ರಾಂತಿಗಾಗಿ ರೆಸಾರ್ಟ ಸೇರುತ್ತಾರೆ. ಕೆಲವರು ವಿದೇಶಗಳಿಗೆ ಹನಿಮೂನ್‌ ಟ್ರಿಪ್ಪೂ ಹಾಕಿಕೊಳ್ಳುತ್ತಾರೆ. ಆದರೆ ಈ ಮತದಾರ ಬಂಧುಗಳು ಹೋಗುವುದೆಲ್ಲಿ., ಮುರಿದುಕೊಂಡ ಮನಸ್ಸುಗಳಿಗೆ ಮುಲಾಮು ಹಚ್ಚಿಕೊಳ್ಳುತ್ತ, ಅದೇ ಮುರುಕು ಮನೆಯಲ್ಲಿ ಹಿಟ್ಟು ತಿರುವುತ್ತ ಕೂಡುತ್ತಾರೆ. ಐದು ವರ್ಷದ ಸುಗ್ಗಿ ಮುಗಿದಿರುತ್ತದೆ. ಆದರೆ ಇವರಿಗೆ ಚುನಾವಣೆ ಗಾಯ ಮಾಯಲು ಇನ್ನೂ ಸಮಯ ಬೇಕಾಗಿರುತ್ತದೆ. ಇವರನ್ನು ಕೇಳುವವರೇ ಇರುವುದಿಲ್ಲ. ಮನೆ ಮತ್ತೆ ಮನೆಯಂತಾಗಲು ಎರಡು ವರ್ಷಗಳಾದರೂ ಬೇಕು ಇವರಿಗೆ.

ಅತ್ತ ಗೆದ್ದವರು ಅಧಿಕಾರ ಹಿಡಿಯಲು ಒಂದಾಗುತ್ತಾರೆ. ನಾವೆಲ್ಲ ಭಾಯೀ… ಭಾಯೀ ಅನ್ನುತ್ತ ಅಪ್ಪಿಕೊಳ್ಳುತ್ತಾರೆ. ಇವರಿಗಾಗಿ ಬಡಿದಾಡಿ ಮನಸ್ಸು ಮುರಿದುಕೊಂಡ ಬಡಪಾಯಿ ಮತದಾರ ಮಾತ್ರ ಪೆಚ್ಚಾಗಿ ನೋಡುತ್ತಾನೆ. ಇದು ಚುನಾವಣೆಯ ವ್ಯಂಗ್ಯ ಎಂದು ಇವನಿಗೆ ಗೊತ್ತಾಗುವುದೇ ಇಲ್ಲ. ಚುನಾವಣೆಯಲ್ಲಿ ಇವರೊಂದಿಗೆ ಊಟ ಮಾಡಿದ, ಇವರ ಮನೆಯಲ್ಲಿ ನೀರು ಕುಡಿದ ನಾಯಕರು ಯಾರೂ ನಂತರ ಇವರ ಕೈಗೇ ಸಿಗುವುದಿಲ್ಲ.

ಅದು ಇವರಿಗೂ ಗೊತ್ತು. ಗೆದ್ದವರು ಯಾರೂ ಕೈಗೆ ಸಿಗುವುದಿಲ್ಲ ಎಂದು. ಉರಿವ ಮನೆಯಲ್ಲಿ ಹಿರಿದಷ್ಟೇ ಗಳ ನಮ್ಮದು ಎಂದು ಭಾವಿಸುತ್ತಾರೆ. ಅದಕ್ಕೇ ಚುನಾವಣೆ ಎಂಬುದೊಂದು ಸುಗ್ಗಿ ಅಂದುಕೊಳ್ಳುತ್ತಾರೆ. ಅದಕ್ಕೇ ರಾಜಕೀಯ ವ್ಯಕ್ತಿಗಳು ಈ ವರ್ಗವನ್ನು ಕಾಲಾಳುಗಳಂತೆ ಬಳಸಿಕೊಂಡು ಚುನಾವಣೆ ನಂತರ ಬಿಸಾಕುತ್ತಾರೆ.

ಮಧ್ಯಮ ವರ್ಗದವರ ಕತೆಯೇ ಬೇರೆ. ಮಧ್ಯಮ ವರ್ಗದವರೆಂದರೆ ಒಂದಷ್ಟು ಪದವಿ ಓದಿದವರು. ಸರಕಾರಿ, ಅರೆ ಸರಕಾರೀ, ಇಲ್ಲ ಖಾಸಗೀ ಕ್ಷೇತ್ರದಲ್ಲಿ ಕೆಲಸ ಮಾಡುವವರು. ಅಲ್ಲಿರಲಾರೆ, ಇಲ್ಲಿಯೂ ಇರಲಾರೆ ಎಂಬಂಥ ಅಂತರ್‌ ಪಿಶಾಚಿಗಳು. ಸರಕಾರಕ್ಕೆ ಪ್ರಾಮಾಣಿಕವಾಗಿ ತೆರಿಗೆ ಕಟ್ಟಿ ಕೈಕೈ ಹಿಸಿಕುಕೊಳ್ಳುವ ತತ್ರಾಪಿಗಳು. ಸಂಬಳ ಹೆಚ್ಚು ಮಾಡಿ, ಸರಿಯಾದ ರಸ್ತೆ ಮಾಡಿ, ಕುಡಿಯಲು ನೀರು ಕೊಡಿ, ಟ್ರಾಫಿಕ್‌ ಕಡಿಮೆ ಮಾಡಿ, ವಸತಿ ವ್ಯವಸ್ಥೆ ಮಾಡಿ ಎಂದು ಗೋಗರೆಯುವವರು. ನ್ಯಾಯವಾದ ಸಮರ್ಥ ಸರಕಾರ ಬರಬೇಕು ಅನ್ನುವವರೂ ಇವರೇ. ಅವರೇನು ಮಾಡಿದರು. ಇವರೇನು ಮಾಡಿದರು. ಮುಂದೇನು ಮಾಡಬಲ್ಲರು ಎಂದು ತಲೆ ಕೆರೆದುಕೊಂಡು ಚರ್ಚಿಸಿ ಮಾಧ್ಯಮಗಳಲ್ಲಿ ಅಲ್ಲೋಲ ಕಲ್ಲೋಲ ಮಾಡುವವರೂ ಇವರೇ.

ಆದರೆ ಚುನಾವಣೆ ದಿನ ನೋಡಿ. ಒಂದು ದಿನ ರಜೆ ಸಿಕ್ಕಿತೆಂದು ಓಟನ್ನೂ ಹಾಕದೆ ಊರನ್ನೇ ಬಿಟ್ಟು ಹೆಂಡತಿ ಮಕ್ಕಳೊಂದಿಗೆ ವೀಕೆಂಡ್‌ ಮಸ್ತಿಗೆ ತೆರಳುವವರೇ ಈ ಜನ. ಇವರಿಗೆ ಓಟು ಹಾಕುವುದು, ಅದಕ್ಕೆಂದು ಸಾಲಿನಲ್ಲಿ ನಿಲ್ಲುವುದು ಅವಮಾನದ ಸಂಗತಿ. ಅದು ಗೊತ್ತಿದ್ದೇ ರಾಜಕೀಯ ನಾಯಕರು ಇಂಥವರನ್ನು ಲೆಕ್ಕಕ್ಕೇ ತಗೆದುಕೊಳ್ಳುವುದಿಲ್ಲ. ತಮಗೆ ಓಟು ಹಾಕುವವರು ಯಾರೆಂದು ಅವರಿಗೆ ಚನ್ನಾಗಿ ಗೊತ್ತಿದೆ. ಅದಕ್ಕಾಗಿ ಈ ಮಧ್ಯಮ ವರ್ಗವನ್ನು ಯಾರೂ ಗಮನಕ್ಕೇ ತಗೆದುಕೊಳ್ಳುವುದಿಲ್ಲ. ಇವರು ಬರೀ ತೆರಿಗೆ ಕಟ್ಟುವುದಕ್ಕೇ ಲಾಯಕ್ಕು ಅಂದುಕೊಳ್ಳುತ್ತಾರೆ.

ನೋಡಿ ಒಂದು ಲೆಕ್ಕದ ಪ್ರಕಾರ ಈ ಬಾರಿ ಚುನಾವಣೆಯಲ್ಲಿ ಬೆಂಗಳೂರು ನಗರವೊಂದರಲ್ಲೇ ಸುಮಾರು ಮೂವತೈದು ಲಕ್ಷ ಮತದಾರರು ಓಟೇ ಮಾಡಿಲ್ಲವಂತೆ. ಅವರೆಲ್ಲ ವೀಕ್‌ ಎಂಡ್‌ ಪಾರ್ಟಿ ಮಾಡಲು ಹೊರಗೆ ಹೋಗಿದ್ದರಂತೆ. ಇನ್ನು ಒಂದು ವರದಿ ಪ್ರಕಾರ ಮುಸ್ಲಿಮರು ಶೇಕಡಾ ತೊಂಭತ್ತರಷ್ಟು ಮತದಾನ ಮಾಡಿದ್ದರೆ, ಕ್ರಿಶ್ಚಿಯನ್ನರು ಶೇ.ಎಂಭತ್ತೈದರಷ್ಟು ಮತದಾನ ಮಾಡಿದ್ದಾರಂತೆ. ಹಿಂದುಗಳು ಮಾತ್ರ ಶೇ.ಐವತ್ತನಾಲ್ಕುರಷ್ಟು ಮಾತ್ರ ಮಾಡಿದ್ದಾರಂತೆ. ಇವರಿಗೆ ಅವತ್ತು ರಜೆಯನ್ನೂ ಕೊಡಲಾಗಿತ್ತು. ಈಗ ನೋಡಿ ಯಾರಿಗೆ ಎಷ್ಟು ರಾಜಕೀಯಪ್ರಜ್ಞೆ ಇದೆ ಎಂದು. ಮಾತಾಡುವುದಷ್ಟೇ ತಮ್ಮ ಕೆಲಸ, ಓಟು ಮಾಡುವುದಲ್ಲ ಎಂದು ಭಾವಿಸಿರುವ ಇಂಥ ಜನ ಮಾತಾಡುತ್ತಲೇ ಇರುತ್ತಾರೆ. ಮಳೆಗಾಲದ ಕಪ್ಪೆಗಳಂತೆ. ಇವರು ಹೀಗೇ ಮಾತಾಡಿಕೊಂಡಿರಲಿ. ಓಟೂ ಮಾಡದಿರಲಿ ಎಂದು ರಾಜಕೀಯ ಕುಹಕಿಗಳು ಕದ್ದು ಮಾತಾಡುತ್ತಾರೆ. ನಗುತ್ತಾರೆ.

ರಾಜಕೀಯ ಚಿತ್ರ ಬದಲಾಗುವುದು ಇಂಥ ಮಧ್ಯಮ ವರ್ಗದ ಜನರಿಂದಲೇ. ಇವರು ಮಲಗಿದರೆ ಇವರ ಪಾಲಿಗೆ ಮಲಗುವ ಸರಕಾರ ಬರುತ್ತದೆ. ಎಚ್ಚರಾದರೆ ಇವರ ಪಾಲಿಗೆ ಎಚ್ಚರಿಕೆ ಸರಕಾರ ಬರುತ್ತದೆ. ಆಯ್ಕೆ ಇವರಿಗೆ ಬಿಟ್ಟದ್ದು. ಇವರು ಓಟು ಹಾಕಿದರೂ ಸೈ. ಹಾಕದಿದ್ದರೂ ಸೈ. ಸರಕಾರವೊಂದು ಬಂದೇ ಬರುತ್ತದೆ.

#ಹಗಉಟ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW