ಕವಿ ಡಾ. ಸಿದ್ಧಲಿಂಗಯ್ಯನವರು ಮೊನ್ನೆ ತಾವು ಕಂಡ ಒಂದು ಪ್ರಸಂಗವನ್ನು ಹೀಗೆ ಹೇಳಿದರು. ಒಮ್ಮೆ ಅವರು ಚೀರಾಪುಂಜಿಗೆ ಹೋಗಿದ್ದರಂತೆ. ಒಂದು ಸಣ್ಣ ಊರಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ ಒಂದು ಅಪರೂಪದ ಪ್ರಸಂಗವನ್ನು ನೋಡಿ ದಂಗಾದರಂತೆ. ಅದೇನಂದರೆ ಅಲ್ಲಿ ಒಂದು ಮದುವೆಯ ಮೆರವಣಿಗೆ ನಡೆದಿತ್ತು. ಮೆರವಣಿಗೆ ಮಧ್ಯದಲ್ಲಿ ಮದುಮಕ್ಕಳಿದ್ದರು. ಎಲ್ಲರೂ ಹೊಸಬಟ್ಟೆ ತೊಟ್ಟಿದ್ದರು. ಅಚ್ಚರಿಯ ಸಂಗತಿಯಂದರೆ ಮದುಮಕ್ಕಳ ಮುಂದಿದ್ದವರು ಹಾಡುತ್ತ, ಕುಣಿಯುತ್ತ ಸಾಗಿದ್ದರೆ, ಹಿಂದಿದ್ದವರು ಗೊಳೋ ಎಂದು ಅಳುತ್ತ ಸಾಗಿದ್ದರು. ಅಚ್ಚರಿಗೊಂಡ ಸಿದ್ಧಲಿಂಗಯ್ಯನವರು ಕಾರಿನ ಡ್ರೈವರ್‌ನನ್ನು ಕೇಳಿದರಂತೆ. ಏನಪ್ಪ ಇದು. ಮದುವೆ ಮೆರವಣಿಗೆಯಲ್ಲಿ ಮದುಮಕ್ಕಳ ಮುಂದಿದ್ದವರು ನಗುತ್ತಾ ಕೇಕೆ ಹಾಕುತ್ತ ಹೋಗ್ತಿದಾರೆ. ಹಿಂದಿದ್ದವರು ಮಾತ್ರ ಅಳ್ತಿದಾರೆ. ಇದೇನು ಮದುವೆ ಮೆರವಣಿಗೇನೋ ಇಲ್ಲಾ ಹೆಣದ ಮೆರವಣಿಗೇನೋ ಒಂದೂ ತಿಳೀತಿಲ್ಲ ನಂಗೆ. ಯಾಕಪ್ಪ ಹೀಗೆ ಎಂದರಂತೆ. ಅದಕ್ಕೆ ಚಾಲಕ ಹೇಳಿದ್ದು ಹೀಗೆ.
‘ ಅದು ಹಂಗಲ್ಲ ಸಾಬ್. ಮುಂದಿದ್ದವರು ಹೆಣ್ಣಿನವರು. ಕುಣೀತಾ, ಕೇಕೆ ಹಾಕುತ್ತ ಹೋಗುತ್ತಿದ್ದಾರೆ. ಹಿಂದಿದ್ದವರು ಗಂಡಿನವರು ಅವರು ಲಢಾಯೀ ಮೇ ಸೋತವರಂತೆ ಹೋಗ್ತಿದಾರೆ’
‘ ಅರೇ, ಎಲ್ಲಾ ಕಡೆ ಮದ್ವೆ ಆದ್ರೆ ಗಂಡಿನವರು ಕೇಕೆ ಹಾಕಿ ಕುಣೀತಾರೆ. ಇಲ್ಲಿ ನೋಡಿದ್ರೆ ಅಳ್ತಿದಾರೆ. ಅಳಬೇಕಾದವ್ರು ಹೆಣ್ಣಿನವ್ರು ಅಲ್ವೆ?’
‘ ಇಲ್ಲಾ ಸಾಬ್. ಇಲ್ಲಿ ಮದ್ವೆ ಆದ ಕೂಡಲೇ ಗಂಡು ಹೆಣ್ಣಿನ ಮನೆಗೆ ಹೋಗಬೇಕು. ಗಂಡನ್ನ ಹೆಣ್ಣಿನ ಮನೆಗೆ ಕಳಿಸ್ತಿದೀವಿ ಅಂತ ಅವ್ರೆಲ್ಲಾ ಅಳ್ತಾ ಹಿಂದಿನಿಂದ ಹೋಗ್ತಿದಾರೆ ಸಾಬ್. ಪಾಪ !.’
ಆಗ ತುಸು ನಕ್ಕ ಸಿದ್ಧಲಿಂಗಯ್ಯನವರು, – ‘ ಇದು ಸರಿ ಬಿಡು. ಎಲ್ಲಾ ಕಡೆ ಇದೇ ರೂಢಿಯೊಳಗೆ ಬಂದ್ರೆ ಇಡೀ ದೇಶಾನೇ ಮಾತೃಪ್ರಧಾನ ದೇಶ ಆಗುತ್ತೆ. ಹೆಣ್ಣುಮಕ್ಕಳು ಮುಂಚೂಣಿಯಲ್ಲಿದ್ದರೆ ಇಡೀ ದೇಶಾನೇ ಸಂಸ್ಕಾರವಂತ ದೇಶ ಆದೀತು’ ಅಂದರಂತೆ.
ಹೆಣ್ಣು ಸಂಸಾರದ ಕಣ್ಣು ಅನ್ನುವ ನಾವು ಇದನ್ನು ಒಪ್ಪಬೇಕಲ್ಲವೆ?
#ಆಕತನಯಸ