– ಹೂಲಿಶೇಖರ
ಕನ್ನಡದ ಸಣ್ಣ ಕತೆಗಾರರೂ, ಕಾದಂಬರಿಕಾರರೂ, ನಾಟಕಕಾರರೂ ಆದ ಮಾಸ್ತಿ ವೆಂಕಟೇಶ್ ಅಯ್ಯಂಗಾರರು ಹುಟ್ಟಿ ಈ ಜೂನ್ ಆರಕ್ಕೆ ನೂರಾ ಇಪ್ಪತ್ತೇಳು ವರ್ಷ. ಕನ್ನಡದ ಸಣ್ಣ ಕತೆಗೊಂದು ಹೊಸ ಆಯಾಮ ನೀಡಿದ ಮಾಸ್ತಿಯವರು ಕನ್ನಡದ ಆಸ್ತಿ ಎಂದೇ ಪ್ರಸಿದ್ಧರು. ೧೮೯೧ ಜೂನ್ ಆರರಂದು ಹೊಸಹಳ್ಳಿ ಎಂಬ ಊರಲ್ಲಿ ಹುಟ್ಟುತ್ತಾರೆ. ಅಚ್ಚರಿಯೆಂದರೆ ಅವರು ತೀರಿಕೊಂಡದ್ದೂ ಜೂನ್ ಆರರಂದೇ. ಅದು ೧೯೮೬ ರಲ್ಲಿ. ಸುಮಾರು ತೊಂಭತೈದು ವರ್ಷಗಳ ಸುದೀರ್ಘ ಬದುಕು ಸವೆಸಿದ ಮಾಸ್ತಿಯವರು ೧೯೧೪ ರಲ್ಲಿ ಮದರಾಸು ವಿಶ್ವವಿದ್ಯಾಲನಿಲಯದಿಂದ ಪದವಿ ಪಡೆದರು. ತದನಂತರ ಮೈಸೂರು ಸರಕಾರದ ನಾಗರಿಕ ಸೇವೆಯಲ್ಲಿ ಕೆಲಸ ಮಾಡುತ್ತಾರೆ. ಜಿಲ್ಲಾಧಿಕಾರಿಗಳಾಗಿ ಅವರು ಮಾಡಿದ ಹಲವು ಜನೋಪಯೋಗಿ ಕಾರ್ಯಗಳು ರಾಜ್ಯದಲ್ಲಿ ಅವರಿಗೊಂದು ವಿಶಿಷ್ಠ ಸ್ಥಾನ ಕಲ್ಪಿಸುತ್ತವೆ. ಶಿಸ್ತಿನ ಮತ್ತು ನಿಷ್ಠುರ ಅಧಿಕಾರಿಗಳಾಗಿ ಮಾಸ್ತಿಯವರು ಮಾಡಿದ ಕಾರ್ಯಗಳು ಜನ ಮನ್ನಣೆ ಗಳಿಸಿವೆ. ಸರಕಾರಿ ಅಧಕಾರಿಗಳಾದರೂ ಅವರಿಗೆ ಸಾಹಿತ್ಯದಲ್ಲಿ ಇದ್ದ ಅನುಪಮ ಆಸಕ್ತಿ ಬಹು ಬೇಗನೆ ಅವರನ್ನು ಉನ್ನತ ಸ್ಥಾನಕ್ಕೇರಿಸುತ್ತದೆ. ಇಪ್ಪತ್ತಾರು ವರ್ಷ ಸರಕಾರೀ ಸೇವೆ ಮಾಡಿ ನಂತರ ಹಲವು ಕಾರಣಗಳಿಗಾಗಿ ಸ್ವಯಂ ನಿವೃತ್ತಿ ಪಡೆಯುತ್ತಾರೆ ಮಾಸ್ತಿ.
ಆಧುನಿಕ ಸಣ್ಣ ಕತೆಯ ಜನಕ
ಮಾಸ್ತಿಯವರು ಮೊದಲು ಬರೆದದ್ದು ಸಣ್ಣ ಕತೆಗಳನ್ನು. ರಂಗನ ಮದುವೆ ಅವರ ಮೊದಲ ಕತೆ [೧೯೧೦]ಯಾದರೆ ಮಾತುಗಾರ ರಾಮಣ್ಣ [೧೯೧೫] ಅವರ ಕೊನೆಯ ಕತೆ. ಈ ನಡುವೆ ಮೊಸರಿನ ಮಂಗಮ್ಮ, ಸುಬ್ಬಣ್ಣ ಮುಂತಾದ ಮನಮಿಡಿವ ಕತೆಗಳನ್ನು ಮಾಸ್ತಿಯವರು ಬರೆಯುತ್ತಾರೆ. ಮಾಸ್ತಿಯವರು ಕತೆ ಹೇಳುವ ರೀತಿಯೇ ಆಪ್ತವಾಗಿರುತ್ತದೆ. ಅವರು ಒಂದು ಪಾತ್ರವನ್ನು ಮೊದಲು ಸೃಷ್ಟಿಸಿ ನಂತರ ಆ ಪಾತ್ರದ ಮೂಲಕ ಇನ್ನೊಂದು ಪಾತ್ರದ ಕತೆ ಹೇಳಿಸುತ್ತಾರೆ. ಸುಬ್ಬಣ್ಣ, ಮೊಸರಿನ ಮಂಗಮ್ಮ, ರಂಗನ ಮದುವೆ, ಮಾತುಗಾರ ರಾಮಣ್ಣ, ಮುಂತಾದ ಕತೆಗಳಲ್ಲಿ ಮಾಸ್ತಿಯವರು ಕತೆ ಹೇಳುವ ರೀತಿ ಹೊಸ ಬಗೆಯದ್ದು ಮತ್ತು ಅವರದ್ದೇ ಆದ ತಂತ್ರವನ್ನು ಒಳಗೊಂಡಿರುತ್ತದೆ. ಇತರರು ನೇರವಾಗಿ ಕತಾ ವಸ್ತುವಿಗೆ ಇಲ್ಲ ಪಾತ್ರಕ್ಕೆ ಕೈ ಹಾಕಿದರೆ ಮಾಸ್ತಿಯವರು ಇನ್ನೊಂದು ಪಾತ್ರದ ಮೂಲಕ ಕತೆಯನ್ನು ಮುಟ್ಟುತ್ತಾರೆ. ಸರಳ ಭಾಷೆ, ಹಾಗೂ ಸಹಜತೆಯಿಂದ ಕತೆ ತಕ್ಷಣವೇ ಮನಕ್ಕೆ ತಟ್ಟುತ್ತದೆ. ಆಡಂಬರವನ್ನು ಅವರೆಲ್ಲೂ ಬಳಸುವುದಿಲ್ಲ. ಕೃತ್ರಿಮತೆಯಿಂದ ಯಾವತ್ತೂ ದೂರವಾಗುವ ಅವರು ಕತೆಯನ್ನು ತುಂಬ ಆಪ್ತತೆಯಿಂದ ನಿರೂಪಿಸುತ್ತಾರೆ. ಅದರಿಂದ ಓದುಗ ಕ್ಷಣ ಮಾತ್ರದಲ್ಲಿ ಕತೆಯೊಳಗೆ ಇಳಿಯುತ್ತಾನೆ. ಅದರಿಂದಲೇ ಮಾಸ್ತಿಯವರ ಕತೆಗಳು ಎಲ್ಲ ವರ್ಗದ, ಎಲ್ಲ ವಯೋಮಾನದ ಓದುಗರನ್ನು ಹಿಡಿದಿಟ್ಟವು ಎಂದೇ ಹೇಳಬೇಕು.
ಮಾಸ್ತಿಯವರ ನಾಟಕ ಕಾಕನ ಕೋಟೆ ರಂಗದಲ್ಲಿ ಅತ್ಯಂತ ಯಶ್ವಿಯಾದ ನಾಟಕ. ಮೈಸೂರು ಅರಸರು ಮತ್ತು ಕಾಡಿನಲ್ಲಿರುವ ಜೇನು ಕುರುಬರ ಸಂಬಂಧಗಳನ್ನು ಬೆಸೆಯುವ ಈ ನಾಟಕ ಸಿನಿಮಾ ಆಗಿಯೂ ಪ್ರಸಿದ್ಧವಾಗಿದೆ.
ಅವರ ಜನಪ್ರಿಯ ಕಾದಂಬರಿ ಚಿಕವೀರರಾಜೇಂದ್ರ ಮಾಸ್ತಿಯವರಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಮುಂದೆ ೧೯೮೩ ರಲ್ಲಿ ಇದೇ ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿಯೂ ಲಭಿಸಿತು. ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರು ರಾಜಸೇವಾಸಕ್ತ ಎಂಬ ಬಿರುದು ನೀಡಿ ಗೌರವಿಸಿದ್ದಾರೆ. ಇವರು ಇಂಗ್ಲೀಷಿನಲ್ಲಿಯೂ ಹದಿನೇಳು ಕೃತಿಗಳನ್ನು ರಚಿಸಿದ್ದಾರೆ. ಒಟ್ಟು ೧೨೩ ಪುಸ್ತಕಗಳನ್ನು ಬರೆದಿರುವ ಮಾಸ್ತಿಯವರಿಗೆ ಕನ್ನಡಿಗರು- ಮಾಸ್ತಿ ಕನ್ನಡದ ಆಸ್ತಿ ಎಂಬ ಅಂತರಂಗದ ಪ್ರಶಸ್ತಿ ನೀಡಿದರು. ಕನ್ನಡಿಗರ ಪಾಲಿಗೆ ಸಣ್ಣ ಕತೆಯ ಜನಕರೆಂದು ಗೌರವಿಸಲ್ಪಟ್ಟ ಮಾಸ್ತಿಯವರು ೧೯೮೬ ಜೂನ್ ಆರರಂದು ಇಹಲೋಕ ಯಾತ್ರೆ ಮುಗಿಸಿದರು.
#ಸಹತಯ