ಕನ್ನಡಿಗರ ಅಡುಗೆ ಮತ್ತು ಊಟ

aakritikannada@gmail.com

ಹಳ್ಳಿಗಳು ಇಂದಿಗೂ ಒಂದು ಬಗೆಯ ಸಂಸ್ಕೃತಿ ಪರಂಪರೆಯನ್ನು ಕಾಯ್ದುಕೊಂಡು ಬಂದ ಮನೆತನಗಳು ಇರುವ ಜನರ ವಾಸಸ್ಥಾನವಾಗಿವೆ. ಪ್ರತಿ ವರ್ಷವೂ ಎಲ್ಲರ ಮನೆಗಳಲ್ಲೂ ಏನಾದರೊಂದು ಹಬ್ಬ, ಮದುವೆ, ಮುಂಜಿವೆಗಳಂಥ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಬಂಧು-ಬಳಗ, ಸ್ನೇಹಿತರು, ಅತಿಥಿಗಳು ಎಲ್ಲ ಸೋರಿ ನೂರಾರು ಜನ ಊಟಕ್ಕೆ ಕಾಡುವ ಸಂಪ್ರದಾಯ ಇದ್ದೇ ಇದೆ. ಇಲ್ಲಿ ಸವಿಯೂಗಳ ಪ್ರಾಬಲ್ಯವೇ ಜಾಸ್ತಿ. ಒಮದು ಹಳ್ಲಿಯಲ್ಲಿ ಇಂಥದೊಂದು ಸಾಮೂಹಿಕ ಸವಿಯೂಟ ಇದೆಯೆಂದರೆ ಉಳಿದ ಮನೆಗಳ ಒಲೆಗಳು ಅವತ್ತು ಉರಿಯುವದಿಲ್ಲವೆಂದೇ ಅರ್ಥ. ಅವತ್ತಿನ ಸಿಹಿಯೂಟದ ಪದಾರ್ಥಗಳು ಅಲ್ಲಿಯ ಜನಜೀವನದಂತೆ, ರೀತಿ-ನೀತಿಗಳಂತೆ ನಡೆಯಲೇಬೇಕು. ಊಟಕ್ಕೆ ಕುಳಿತಾಗ ಶ್ಲೋಕ-ಪದ್ಯಗಳನ್ನು ಹೇಳುವ ಕಾರ್ಯಕ್ರಮ ಇರಲೇಬೇಕು. ಹಳ್ಲಿಯಸಾಮೂಹಿಕ ಸಿಹಿಯೂದಲ್ಲಿ ಭಾಗವಹಿಸುವವರಿಗೆ ಗೊತ್ತಿರುವ ಪದ್ಯಗಳು. ಅದರಲ್ಲೂ ‘ಸಹನಾವವತು, ಸಹನೌ ಭುನಕ್ತು ‘ ಶ್ಲೋಕ ಹೇಳದೆಯಾರೂ ಊಟ ಮಾಡುತ್ತಿರಲಿಲ್ಲ. ಅದರೊಟ್ಟಿಗೆ ಕೆಳಗಿನ ಪದ್ಯ ಇಲ್ಲದ ಊಟದ ಪಂಕ್ತಿ ಮುಂದೆ ಸಾಗುವುದಿಲ್ಲವೆಂದೇ ಹೇಳಬಹುದು. ಅದೆoದರೆ-

‘ ಬುಂದೇ ಮಂಡಿಗೆ ಖೀರು ಕಾಗದೆ ದಳೇ

ಮೇಲಾದ ಬೇಸನ್ನು ಬಾ-

ಸುಂದೀ ಸಾಖರ ವಾಂಗೀಭಾತುಗಳು ಮೇಣ್‌

ಶ್ರೀಖಂಡ ಗುಳ್ಳೋರಿಗೆ-

ಅಂದಂಬೀರುವ ಚಕ್ಲಿ -ಕೋಡುಬಳೆಗಳ್‌

ಪಾತ್ರಸ್ಥವಾಗಲ್ಕೆ ತಾಂ

ಒಂದೊಂದೋ ಬಹು ರಮ್ಯವಾಗಿ ಮರೆಗುಂ

ಅಂಬೋಡೆ ಚಿತ್ರಾನ್ನಗಳ್‌-‘

ಅಂದಿನ ಸವಿಯೂಟದ ಸಮಾರಂಭಗಳಲ್ಲಿ ತಯಾರಿಸುತ್ತಿದ್ದ ಪಕ್ವಾನ್ನಗಳ ನಾಮಮಾಲಿಕೆ ಯಿದು. ಇದರ ಭಾಷಾ ಪ್ರಯೋಗವನ್ನು ನೋಡಿದರೆ ಅಂದಿನ ಯಾವುದೋ ಅಜ್ಞಾತ ಕವಿ ಇದನ್ನು ರಚಿಸಿದನೆಂದು ಕಾಣುತ್ತದೆ.ಉತ್ತರ ಕರ್ನಾಟಕದ ಗಡಿ ಪ್ರದೇಶಗಳಲ್ಲಿರುವ ಊಟದ ಪರಂಪರೆ ಇಲ್ಲಿದೆ. ಇದರಲ್ಲಿ ಕನ್ನಡದ ಊಟದ ಪರಂಪರೆಯಲ್ಲಿ ಪೇಶ್ವೆಯರ ಕಾಲದ ಅಡುಗೆಗಳೂ ಸೇರಿಕೊಂಡಿವೆ. ಇದನ್ನರಿತೇ ಕನ್ನಡದಲ್ಲಿ ಸೂಪ ಶಾಸ್ತ್ರ, ಅಥವಾ ಪಾಕ ಶಾಸ್ತ್ರ ಮೂಡಿ ಬಂದಿವೆ.

ಜಯಬಂಧು ನಂದನನ ಸೂಪ ಶಾಸ್ತ್ರ

ಕ್ರಿ.ಶ. ಎಂಟನೆಯ ಶತಮಾನದಲ್ಲಿಯೇ ಜಯಬಂಧುನಂದನ ಎಂಬ ಕವಿಯು ಚಂಪೂ ಕಾವ್ಯ ಶೈಲಿಯಲ್ಲಿ ಸೂಪ ಶಾಸ್ತ್ರ ರಚಿಸಿದ್ದಾನೆ. ಇದು ಅಚ್ಚಾಗಿ ಇನ್ನೂ ಬೆಲಕಿಗೆ ಬಂದಿಲ್ಲ. ಬಂದರೆ ೮ನೆಯ ಶತಮಾನದ ಕನ್ನಡಿಗರ ಅಡುಗೆಯ ವೈವಿಧ್ಯ, ಆಗಿನ ಪಾಕ ಪದ್ಧತಿ ಎಲ್ಲರಿಗೂ ಗೊತ್ತಾಗಬಹುದು. ಕನ್ನಡದ ಕವಿ ಚರಿತಕಾರರು ಮಾದರಿಗಾಗಿ ಕೊಟ್ಟ ಮೂರು ಪದ್ಯಗಳಲ್ಲಿ ಆ ಕಾಲದ ಲಡ್ಡುಗೆ, ಇಡ್ಡರಿಗೆ, ಪಾಲುಂಡೆ ಎಂಬ ಸವಿ ತಿನಿಸುಗಳ ತಯಾರಿಕೆ ಕ್ರಮ ನಮಗೂ ಗೊತ್ತಾಗಬಹುದು.

ಲಡ್ಡುಗೆ

‘ ಕಾಸಿದ ಪಾಲೊಳಿಕ್ಕಿ ಮೊಸರಂ ನರೆಪೊಳ್ತೆಸವಂತೆಮತ್ತೆಯುಂ ‘

ಎಂದು ಬರೆದ ಜಯಬಂಧುನಂದನ ಮುಂದುವರೆಸುತ್ತಾನೆ.

ಕನ್ನಡಿಗರ ಪಾಕ ಪದ್ಧತಿಯಲ್ಲಿ ಲಡ್ಡುಗೆ ಎಂಬ ಹೆಸರು ಎಂದಿನಿಂದಲೂ ಗೊತ್ತಿದೆ. ಇಂದಿಗೂ ಬ್ರಾಹ್ಮಣರ ಮದುವೆಗಳಲ್ಲಿ ಲಡ್ಡುಗೆ ಇಲ್ಲದೇ ಮದುವೆಯೂಟವಿಲ್ಲ. ಉಪನಯನದ ದಿನ ಬ್ರಹ್ಮಚಾರಿಗೆ ಹಾಕುವ ಮಾತೃಭಿಕ್ಷೆಗಳಲ್ಲಿ ಲಡ್ಡುಗೆ ಇರಲೇ ಬೇಕು. ಅದು ನಿಯಮವೂ ಆಗಿದೆ. ಆದರೆ ಇಂದಿನ ಲಡ್ಡುಗೆಗೆ ಜಯಬಂಧುನನು ಹೇಳಿರುವ ಕಳಮ ಚೂರ್ಣವನ್ನು ಬಳಸುವುದಿಲ್ಲ. ಕಾಲಾಂತರದಲ್ಲಿ ಅದು ಬದಲಾಗಿರಬೇಕು.

ಇಡ್ಡರಿಗೆ

‘ ಅರೆದುರ್ದಿನ ಬೇಳೆಯನೊಂದಿರೆ! ಮೊಸರಲಿ ನೀರೊಳಿಂಗು ಜೀರಿಗೆ ಕೊತ್ತಂ!!

ಬರಿ ಮೆಣಸಲ್ಲಂ ಬೆರಸಿ ! ಡ್ಡರಿಗೆಯನಡೆ ತಂಪನಿಂಪು ಮಂತಳೆದಿರ್ಕುಂ!! ‘

ಇಂದಿನ ಇಡ್ಡಲಿಗೆಯಂತೆ ಕವಿಯು ಹೇಳಿದ ಇಡ್ಡರಿಗೆಯಲ್ಲಿ ಅಕ್ಕಿಯ ರವೆಯು ಕೂಡಿರುವುದಿಲ್ಲ. ಮೆಣಸಿನ ಬದಲು ಇಂದಿನವರು ಹಸಿ ಮೆಣಸಿನ ಕಾಯನ್ನು ಬಳಸುತ್ತಾರೆ. ಕನ್ನಡಿಗರ ಹಳೆಯ ಕಾಲದ ಅಡುಗೆ ಪದ್ಧತಿಯಲ್ಲಿ ಮೆಣಸಿನ ಕಾಯಿಗೆ ಸ್ಥಾನವೇ ಇಲ್ಲ. ಜಯಬಂಧನನ ಇಡ್ಡರಿಗೆಗಳ ವಿಧಾನವನ್ನು ನೋಡಿದರೆ ಅವು ಮಸಾಲೆ ಇಡ್ಡರಿಗೆಗಳಾಗಿರಬೇಕೆಂದು ತಿಳಿಯತ್ತದೆ.

ಪಾಲುಂಡೆ

ಇದನ್ನು ಮಾಡುವ ರೀತಿಯನ್ನು ಹೇಳುವ ಪದ್ಯ ಲಿಖಿತ ರೂಪದಲ್ಲಿ ಸಿಕ್ಕಿಲ್ಲ. ತುರು ಅಥವಾ ಎಮ್ಮೆಯ ಹಾಲಿನಲ್ಲಿ ತುರುವೆಯ ಬೇರನ್ನು ಹಾಕಿ ಅರ್ಧ ಅಟ್ಟಿಸುವಂತೆ ಚೆನ್ನಾಗಿ ಮರಳಿಸಬೇಕಂತೆ. ಆಮೇಲೆ ಅಳತೆಯರಿತು ತುಪ್ಪವನ್ನು ಅದರಲ್ಲಿ ಬೆರೆಸಬೇಕಂತೆ. ಸಕ್ಕರೆಯಂತೂ ಬೇಕೇ ಬೇಕು. ಬಳಿಕ ಏಲಕ್ಕಿ, ಜಾಜೀಕಾಯಿ, ಜಾಜೀಪತ್ರೆಗಳ ಚೂರ್ಣವನ್ನು ಬೆರೆಸಬೇಕು. ನಂತರ ಹದದ ಕಂಪನ್ನು ಅರಿತುಕೊಂಡು, ಉಂಡೆಗಳನ್ನು ಮಾಡಬೇಕಂತೆ. ಇದರ ರುಚಿ ಅಮೃತಕ್ಕೆ ಸಮಾನವಾದುದು ಎಂದು ಕವಿಯು ಬಣ್ಣಿಸುತ್ತಾನೆ. ಇಂದಿನ ಪೇಡೆ ಈ ಹಾಲುಂಡೆಯ ಆಧುನಿಕ ರೂಪವಾಗಿರಬಹುದು.

[ಮುಂದುವರೆಯುತ್ತದೆ]

ಆಧಾರಃ ಡಾ. ಬೆಟಗೇರಿ ಕೃಷ್ಣಶರ್ಮ ಅವರ ‘ ಸಾಹಿತ್ಯ ವಿಹಾರ ‘ ಪುಸ್ತಕ

#ಬಯರಚ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW