ರಕ್ತದ ಮಡುವಿನಲ್ಲಿ ವ್ಯಕ್ತಿಯೋರ್ವ ಕೊಲೆಯಾಗಿ ನೆಲೆದ ಮೇಲೆ ಬಿದ್ದಿದ್ದಾನೆ. ಅವನ ಸಾವಿನ ಸುತ್ತ ಎಷ್ಟೆಲ್ಲ ಬಾಗಿಲುಗಳು ಮುಚ್ಚಿದ್ದವೋ ಆ ಬಾಗಿಲಗಳನ್ನೆಲ್ಲಾ ಕವಲುದಾರಿ ಸಿನಿಮಾದ ಕಥಾನಾಯಕ ಒಂದೊಂದಾಗಿ ತೆರೆಯುತ್ತಾ ಹೋಗುತ್ತಾನೆ. ಕವಲು ದಾರಿ ಸಿನಿಮಾ ಪಕ್ಕಾ ಪತ್ತೇದಾರಿ ಸಿನಿಮಾ ಅಂತಲೇ ಹೇಳಬಹುದು. ಸಿನಿಮಾದ ಕೊನೆಯವರೆಗೂ ಕೊಲೆಗಡುಕ ಯಾರು ಎನ್ನುವುದನ್ನು ತುಂಬಾನೇ ಗೌಪ್ಯವಾಗಿ ಕಾಪಾಡುವಲ್ಲಿ ಚಿತ್ರಕತೆಕಾರ ಮತ್ತು ನಿರ್ದೇಶಕ ಹೇಮಂತ್ ರಾವ್ ಅವರ ಪ್ರಯತ್ನ ಯಶಸ್ವಿಯಾಗಿದೆ.
ಈ ಸಿನಿಮಾದ ಇನ್ನೊಂದು ವಿಶೇಷತೆ ಎಂದರೆ ಪತ್ತೇದಾರಿ ಜೊತೆಗೆ ಹಾರರ್ ಎಫೆಕ್ಟ್ ಇದೆ. ಒಂದು ದೃಶ್ಯ ಮರೆಯಾಚುತ್ತಿದ್ದಂತೆ ಮತ್ತೊಂದು ದೃಶ್ಯ, ಬಿಡುವಿಲ್ಲದೆ ಪ್ರೇಕ್ಷಕರನ್ನು ಭಯದಲ್ಲಿಯೇ ಕೂರಿಸುತ್ತದೆ. ಚಿಕ್ಕ ಮಕ್ಕಳಿಗಂತೂ ತೆರೆದು ಕಣ್ಣುಗಳಿಂದ ಈ ಸಿನಿಮಾವನ್ನು ನೋಡಲು ಸಾಧ್ಯವೇ ಇಲ್ಲ. ಅಷ್ಟರ ಮಟ್ಟಿಗೆ ಭಯವನ್ನು ಅದ್ವೆತ್ ಮೂರ್ತಿ ಅವರ ಕ್ಯಾಮೆರಾ ಕಣ್ಣುಗಳು ಸೆರೆಹಿಡಿದಿದೆ. ಜೊತೆಗೆ ಲೈಟ್ ಪ್ರಭಾವವು ಶೋರಾಗಿದೆ.
ನಮ್ಮ ದೇಶದಲ್ಲಿ ಪ್ರತಿಯೊಂದು ಹುದ್ದೆಗಳಿಗೆ ಇಂತಿಷ್ಟೇ ಅರ್ಹತೆಗಳು ಬೇಕು ಎನ್ನುವ ಮಾನದಂಡಗಳಿವೆ. ಆದರೆ ರಾಜಕಾರಣದಲ್ಲಿ ಯಾವುದೇ ಮಾನದಂಡಗಳು ಇಲ್ಲದೆ ಇರುವುದು ಬೇಸರದ ಸಂಗತಿ. ಹಾಗಾಗಿ ಆ ಹುದ್ದೆಗೆ ಕಳ್ಳರು, ಸುಳ್ಳರು, ಕೊಲೆಗಡುಕರು ಯಾರಾದರೂ ಬಂದು ಸೇರಿಕೊಳ್ಳಬಹುದು ಎನ್ನುವ ಕಟು ಸತ್ಯವನ್ನು ಪ್ರೇಕ್ಷಕರಿಗೆ ಸಿನಿಮಾದ ಮುಖಾಂತರ ನಿರ್ದೇಶಕ ಹೇಮಂತ್ ರಾವ್ ಇನ್ನಷ್ಟು ಮನದಟ್ಟು ಮಾಡಿದ್ದಾರೆ.
ನಾಯಕನ ಪಾತ್ರದಾರಿ ರಿಷಿ ಅವರು ತಮ್ಮ ಎತ್ತರ, ತೂಕದ ಮೈ ಮತ್ತು ಗಡಸು ಧ್ವನಿಯಿಂದ ಸಿನಿಮಾದಲ್ಲಿನ ತಮ್ಮ ಟ್ರಾಫಿಕ್ ಪೊಲೀಸ್ ಪಾತ್ರದಲ್ಲಿ ಸಂಪೂರ್ಣವಾಗಿ ಇಳಿದು ಬಿಟ್ಟಿದ್ದಾರೆ. ಅವರ ಸಹಜ ಅಭಿನಯ ಎಲ್ಲರಿಗೂ ಇಷ್ಟವಾಗುತ್ತದೆ. ಅವರ ಪಾತ್ರಕ್ಕೆ ಸಾಥ್ ನೀಡಿದಂತಹ ಅಚ್ಯುತ್ ರಾವ್ ಅವರ ಅಭಿನಯ ಕೂಡ ಮೆಚ್ಚಬೇಕು. ಅಚ್ಯುತ್ ರಾವ್ ಅವರ ಬಗ್ಗೆ ಒಂದೆರಡು ಮಾತು ಹೆಚ್ಚಾಗಿ ಹೇಳಬೇಕೆಂದರೆ ಸಿನಿಮಾಕ್ಕಾಗಿ ಅಚ್ಯುತ ಅವರನ್ನು ಆಯ್ಕೆ ಮಾಡಿ ಕೊಳ್ಳುತ್ತಾರೋ ಅಥವಾ ಅಚ್ಯುತ್ ಅವರಿಗಾಗಿ ಸಿನಿಮಾದಲ್ಲಿ ಪಾತ್ರ ಮೀಸಲು ಇಟ್ಟಿರುತ್ತಾರೋ ಗೊತ್ತಿಲ್ಲ. ಪ್ರತಿ ಸಿನಿಮಾದಲ್ಲೂ ಅವರಿಗೊಂದು ಪಾತ್ರವಿರುತ್ತದೆ. ಒಂದು ರೀತಿಯ ಬ್ಯುಸಿ ಪೋಷಕ ನಟ ಎನ್ನಬಹುದು. ಅವರಿಗೆ ಯಾವುದೇ ಪಾತ್ರವನ್ನೇ ಕೊಡಲಿ ಅದಕ್ಕೆ ‘ನಾನು ಸಿದ್ದ’ ಎನ್ನುವಂತೆ ಅವರ ಪಾತ್ರಕ್ಕೆ ಜೀವ ತುಂಬುತ್ತಾರೆ. ಈ ಸಿನಿಮಾದಲ್ಲಿಯೂ ತಮ್ಮ ಅಭಿನಯದಿಂದ ಎಲ್ಲ ಪಾತ್ರಗಳನ್ನು ಸಡ್ದೆ ಹೊಡೆದಿದ್ದಾರೆ.
ಸಿನಿಮಾದಲ್ಲಿ ಸುಮನ್ ರಂಗನಾಥ್ ನೋಡಿದಾಕ್ಷಣ ಬಿಟ್ಟ ಕಣ್ಣು ಬಿಟ್ಟ ಹಾಗೆಯೇ ಇರಬೇಕು ಎಂದೆನ್ನಿಸುತ್ತದೆ. ಅವರ ಅಂದ – ಚಂದಕ್ಕೆ ಬೇಗನೆ ಬೆರಗಾಗಿ ಬಿಡುತ್ತೇವೆ. ಅವರ ಎಂಟ್ರಿ ಚಿಕ್ಕದಾದರೂ, ಪಡ್ಡೆ ಹುಡುಗರ ಹೃದಯ ಝಲ್ ಎನ್ನುವ ಗ್ಲಾಮರಸ್ ಅವರಿಗಿದೆ. ಸಿನಿಮಾದಲ್ಲಿ ಸಖತ್ ಹಾಟ್ ಆಗಿ ಕಾಣುತ್ತಾರೆ. ಇನ್ನು ಸಿನಿಮಾದ ನಾಯಕಿ ರೋಶ್ನಿ ಪ್ರಕಾಶ ಸಿಂಪಲ್ ಬ್ಯೂಟಿ, ಮುಗ್ಧ ಪಾತ್ರವನ್ನು ಚನ್ನಾಗಿ ನಿಭಾಯಿಸಿದ್ದಾರೆ.
ನಮ್ಮ ಎವರ್ ಗ್ರೀನ್ ನಟ ಅನಂತ್ ನಾಗ್ ಅವರ ಬಗ್ಗೆ ಹೇಳಬೇಕೆಂದರೆ ಸಿನಿಮಾಕ್ಕೆ ಅವರೇ ಒಂದು ದೊಡ್ಡ ಕಳಶವಿದ್ದಂತೆ. ಈ ಸಿನಿಮಾದಲ್ಲಿ ಅವರು ಯಾವುದೋ ಕೆಟ್ಟ ಗಳಿಗೆಯಲ್ಲಿ ಕುಡಿತಕ್ಕೆ ದಾಸರಾಗಿರುತ್ತಾರೆ. ಒಂದು ದೃಶ್ಯದಲ್ಲಿ ಕುಡುಕನಾಗಿ ಕಂಡರೆ ಮತ್ತೊಂದು ದೃಶ್ಯದಲ್ಲಿ ಸಭ್ಯ ವ್ಯಕ್ತಿಯಾಗಿ ಕಾಣುತ್ತಾರೆ. ಒಂದೇ ಸಿನಿಮಾದಲ್ಲಿ ಅವರ ಎರೆರಡು ಮುಖಗಳನ್ನು ಒಟ್ಟೊಟ್ಟಿಗೆ ನೋಡಬಹುದು.
ಸಿನಿಮಾದಲ್ಲಿ ಭಾವನೆಗೆ ಹತ್ತಿರವಾದ ದೃಶ್ಯವೆಂದರೆ ಅನಂತ ನಾಗ್ ಅವರ ಪಾತ್ರ ಆಂಬುಲೆನ್ಸ್ ನಲ್ಲಿ ಸಾವು ಬದುಕಿನ ಮಧ್ಯೆ ಹೊರಡುವಾಗ ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿ ಕೊಂಡಾಗ ನಾಯಕ ‘ಈ ದೇಶದಲ್ಲಿ ಆಂಬುಲೆನ್ಸ್ ಗೂ ದಾರಿ ಇಲ್ಲ’ ಎಂದಾಗ ಪ್ರೇಕ್ಷಕರ ಕಣ್ಣಚ್ಚಿನಲ್ಲಿದ್ದ ಕಣ್ಣೀರಿನ ಕಟ್ಟೆ ಒಡೆಯುತ್ತದೆ. ಇನ್ನೊಂದು ಅನಂತ್ ಸರ್ ಗೆ ೭೦ ವರ್ಷ ವಯಸ್ಸು. ಅವರ ಅಭಿನಯಕ್ಕೆ ಇಷ್ಟೋತ್ತಿಗಾಗಲೇ ಡಾಕ್ಟರೇಟ್, ಪದ್ಮಶ್ರೀ ಗೌರವಗಳು ಬರಬೇಕಿತ್ತು. ಆದರೆ ಅವುಗಳ್ಯಾವವೂ ಇನ್ನು ಅವರಿಗೆ ಬಂದಿಲ್ಲವಲ್ಲ ಎನ್ನುವ ಕ್ರೋಧ ಸಿನಿಮಾ ನೋಡುವಾಗ ಉಕ್ಕಿ ಬರುತ್ತದೆ.
ತಾವೊಬ್ಬರೇ ಬೆಳೆದರೆ ಸಾಕು ಎನ್ನುವ ಇಂದಿನ ಕಾಲದಲ್ಲಿ, ಬೇರೆ ಪ್ರತಿಭೆಗಳಿಗೂ ಪ್ರೋತ್ಸಾಹಿಸಿದ ನಿರ್ಮಾಪಕರಾದ ಅಶ್ವಿನಿ ಪುನೀತ್ ರಾಜಕುಮಾರ ಅವರಿಗೆ ಈ ಸಿನಿಮಾವನ್ನು ನೋಡಿದ ಮೇಲೆ ಧನ್ಯವಾದಗಳು ಹೇಳಬೇಕು ಅನ್ನಿಸುತ್ತದೆ. ಸಿನಿಮಾದಲ್ಲಿ ಯಾವುದಕ್ಕೂ ರಾಜಿ ಆಗದೆ ಸಿನಿಮಾವನ್ನು ತೆರೆಯ ಮೇಲೆ ಅದ್ಭುತವಾಗಿ ಮೂಡುವಲ್ಲಿ ಅವರ ಪಾಲು ದೊಡ್ಡದಾಗಿದೆ. ಅವರ ಪ್ರೊಡಕ್ಷನ್ ನಿಂದ ಇನ್ನಷ್ಟು ಒಳ್ಳೆಯ ಸಿನಿಮಾಗಳು, ಹೊಸ ಪ್ರತಿಭೆಗಳು ತೆರೆಯ ಮೇಲೆ ಬರಲಿ ಎನ್ನುವುದು ನನ್ನ ಆಶಯ. ಚರಣ ರಾಜ್ ಅವರ ಸಂಗೀತ ನಿರ್ದೇಶನ ಸಿನಿಮಾಕ್ಕೆ ಇನ್ನಷ್ಟು ಕುಮ್ಮಕ್ಕು ಕೊಡುತ್ತದೆ.ಮತ್ತು ಪುನೀತ್ ರಾಜಕುಮಾರ್ ಅವರ ಟೈಟಲ್ ಸಾಂಗ್ ಸೈಲೆಂಟ್ ಆಗಿ ಸಿನಿಮಾಕ್ಕೆ ಕಿಕ್ ಕೊಡುತ್ತದೆ.
ಸಿನಿಮಾದಲ್ಲಿ ನಕಾರಾತ್ಮ ವಿಷಯವೆಂದರೆ ಸಂಭಾಷಣೆಯಲ್ಲಿ ಇನ್ನಷ್ಟು ಗಟ್ಟಿತನ ತರಬಹುದಿತ್ತು ಸಿನಿಮಾ ಪೂರ್ತಿ ಗಾಂಭೀರ್ಯವಿರುವುದರಿಂದ ಸ್ವಲ್ಪ ಮಟ್ಟಿಗೆ ಪ್ರೇಕ್ಷಕರ ತಲೆ ಅತ್ತಿತ್ತ ಹೊರಳಾಡುತ್ತದೆ. ಸ್ವಲ್ಪ ಕಾಮಿಡಿ ದೃಶ್ಯಗಳನ್ನು ಜೋಡಿಸಿದ್ದರೇ ಸ್ವಲ್ಪ ಮಜಾ ಬರುತ್ತಿತ್ತು. ಆದರೆ ಸಿನಿಮಾಕ್ಕೆ ಹಾಕಿದ ಶ್ರಮವನ್ನು ತೆರೆಯ ಮೇಲೆ ನೋಡಿದಾಗ ಅದನ್ನೆಲ್ಲ ಗಣನೆಗೆ ತಗೆದುಕೊಳ್ಳುವಂತಿಲ್ಲ.
ಈ ಸಿನಿಮಾವನ್ನು ನೋಡುವಾಗ ಅಕ್ಕ-ಪಕ್ಕದಲ್ಲಿದ್ದವರು ಚಪ್ಪಾಳೆ ಹೊಡೆಯುತ್ತಿದ್ದರು. ವಾಹ್ ಅನ್ನುತ್ತಿದ್ದರು. ನಿಧಾನಕ್ಕೆ ನಾನು ಕೂಡ ಅವರಂತೆ ಚಪ್ಪಾಳೆ ಹಾಕಿದೆ, ಕೇಕೆ ಹಾಕಿದೆ. ಕ್ರಮೇಣ ಇಡಿ ಚಿತ್ರಮಂದಿರವನ್ನೇ ಚಪ್ಪಾಳೆಯಲ್ಲಿ ಮುಳುಗಿಸಿತು. ಅಷ್ಟರ ಮಟ್ಟಿಗೆ ಪ್ರೇಕ್ಷಕರನ್ನು ಸಿನಿಮಾ ಹಿಡಿದಿಟ್ಟಿತು.
ಒಟ್ಟಾರೆ ನಾನು ನೋಡಿದ ಈ ವಾರದ ‘ಕ’ ಅಕ್ಷರದಿಂದ ಆರಂಭವಾದ ಶಿವರಾಜ್ ಕುಮಾರ್ ಅಭಿನಯದ ‘ಕವಚ’ ಮತ್ತು ಪುನೀತ್ ರಾಜ್ ಕುಮಾರ ಅವರ ನಿರ್ಮಾಣದ ‘ಕವಲುದಾರಿ’ ಎರಡೂ ಸಿನಿಮಾ ಸೂಪರ್ ಆಗಿತ್ತು. ಅಣ್ಣ-ತಮ್ಮನ ಎರಡೂ ಸಿನಿಮಾಗಳು ಜೊತೆ ಜೊತೆಗೆ ಯಶಸ್ಸಿನತ್ತ ಹೆಜ್ಜೆ ಇಡುತ್ತಿವೆ ಎನ್ನುವ ಖುಷಿ. ಮತ್ತು ತಮ್ಮ ತಮ್ಮ ಸಿನಿಮಾಗಳಲ್ಲಿ ಇಬ್ಬರು ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ್ದು ಡಬಲ್ ಖುಷಿ ಕೊಟ್ಟಿತು ಎನ್ನಬಹುದು. ನಿಜಕ್ಕೂ ಎಲ್ಲರಿಗೂ ಖುಷಿ ನೀಡುವಂತ ಎರಡೂ ಸಿನಿಮಾ.
ಲೇಖನ : ಶಾಲಿನಿ ಪ್ರದೀಪ್