ಕಾಗದದಲ್ಲಿ ಕಲೆ ಅರಳಿಸುವ ಕಲಾವಿದ ಅರುಣ್‌ ದೇಸಾಯಿ

ಬಣ್ಣದ ಕುಂಚದಲ್ಲಿ, ಮಣ್ಣಿನಲ್ಲಿ, ಲೋಹಗಳಲ್ಲಿ, ಬಟ್ಟೆಯಲ್ಲಿ ಕಲೆಯನ್ನು ಅರಳಿಸುವ ಸೋಜಿಗವನ್ನು ಕಂಡಿದ್ದೇವೆ. ಆದರೆ ಚೂರು ಕಾಗದವನ್ನು ಕಂಡರೆ ಕಲೆಯ ಬಲೆಯನ್ನೇ ಹೆಣೆಯುವ ಕಲಾವಿದರನ್ನು ಕಂಡದ್ದು ಅಪರೂಪ. ಅಂಥ ಕಲಾವಿದ ಇಲ್ಲಿದ್ದಾರೆ ನೋಡಿ. ಇವರದು ವಿಶಿಷ್ಟ ಕಾಗದ ಕಲೆ. ಎಲ್ಲಿಯಾದರೂ ಕಾಗದ ಬಿದ್ದಿದ್ದರೆ ನಾವು ಅದಕ್ಕೆ ರದ್ದಿ ಅನ್ನುತ್ತೇವೆ. ಅದನ್ನೆತ್ತಿ ಡಸ್ಟ ಬಿನ್ನಿಗೆ ಹಾಕುತ್ತೇವೆ. ಆದರೆ ಇವರು ಎಲ್ಲಿಯಾದರೂ ಕಾಗದದ ಚೂರು ಸಿಕ್ಕೀತೇನೋ ಎಂದು ಹುಡುಕುತ್ತಿರುತ್ತಾರೆ. ಸಿಕ್ಕ ಕಾಗದ ಚೂರಿನಲ್ಲಿಯೇ ಕ್ಷಣ ಮಾತ್ರದಲ್ಲಿ ಹೂವು, ಪ್ರಾಣಿ, ಪಕ್ಷಿ, ನೆನಪಿನ ಗೋಪುರಗಳನ್ನು ಆಕರ್ಷಕವಾಗಿ ಕಟ್ಟಿ ಕೊಡುತ್ತಾರೆ. ಕಲ್ಪನೆ ಮತ್ತು ಕಲ್ಪಕತೆಯನ್ನು ಸಮೀಕರಿಸಿ ನಮ್ಮ ಮುಂದೆ ಒಂದು ಅದ್ಭುತ ಕಲಾ ಲೋಕವನ್ನೇ ತಂದಿಡುವ ಅರುಣ್‌ ದೇಸಾಯಿ ಈಗಾಗಲೇ ರಾಷ್ಟ್ರ ಮತ್ತು ಅಂತರ್‌ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯನ್ನೂ ಗಳಿಸಿದ್ದಾರೆ.

ಇಂದು ಅನೇಕ ದೊಡ್ಡ ದೊಡ್ಡ ಮಾಲ್‌ಗಳಲ್ಲಿ, ಕಾರ್ಪೋರೇಟ್‌ ಕಂಪನಿಗಳ ಸಭಾಭವನಗಳಲ್ಲಿ, ಸಿ.ಇ.ಓ.ಗಳ ಕೊಠಡಿಗಳಲ್ಲಿ ಇವರು ಅರಳಿಸಿದ ಕಾಗದ ಕಲೆ ಪ್ರತಿಷ್ಠೆಯ ಸಂಕೇತದಂತೆ ರಾರಾಜಿಸುತ್ತಿವೆ. ಇತ್ತೀಚೆಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಇವರ ಕಾಗದ ಕಲೆಗೆ ಬೇಡಿಕೆ ಬರುತ್ತಿರುವುದು ಹೆಮ್ಮೆಯ ಸಂಗತಿ. ಅಮೇರಿಕ, ಫ್ರಾನ್ಸ, ಇಟಲಿ, ಆಷ್ಟ್ರೇಲಿಯಾಗಳಿಗೆ ಇವರು ತಯಾರಿಸಿದ ಕಾಗದದಲ್ಲಿನ ಕುಸುರಿನ ಕೆಲಸ ರಫ್ತಾಗಿವೆ. ನಮ್ಮ ದೇಶದಲ್ಲಿಯೇ ಇಂಥದೊಂದು ಕಲೆಯನ್ನು ಕರಗತ ಮಾಡಿಕೊಂಡವರು ಅರುಣ್‌ ದೇಸಾಯಿಯನ್ನು ಬಿಟ್ಟರೆ ಬೇರೆ ಯಾರೂ ಇಲ್ಲವೆಂದೇ ಹೇಳಬೇಕು. ಒಂದು ಚಿಕ್ಕ ಕತ್ತರಿ, ಮುರಿದ ಬ್ಲೇಡು ಕೈಯಲ್ಲಿ ಹಿಡಿದು ಇಡೀ ದೇಶವನ್ನೇ ಸುತ್ತಿ ಬಂದ ಅರುಣ್‌ ದೇಸಾಯಿ ತಾವು ಹೋದ ಕಡೆ ತಮ್ಮ ಕಾಗದ ಕಲೆಯನ್ನು ಪರಿಚಯಿಸಿ ಎಲ್ಲರಲ್ಲೂ ಅಚ್ಚರಿ ಹುಟ್ಟಿಸಿದ್ದಾರೆ.

ಕ್ರಾಫ್ಟ ಒಂದು ಕಲೆಯೇ ಅಲ್ಲ ಎಂದು ಕೆಲವರು ಹೀಗಳಿದದ್ದೂ ಉಂಟು. ಪಕ್ಕದಲ್ಲೇ ಇದ್ದರೂ ಇನ್ನಷ್ಟು ಪಕ್ಕಕ್ಕೆ ತಳ್ಳುವುದು ನಮ್ಮಲ್ಲಿ ಕೆಲವರ ಜಾಯಮಾನವೇನೋ. ಯಾವುದಕ್ಕೂ ಅಳುಕದೆ, ಪ್ರಶಸ್ತಿ ಶಹಭಾಸ್‌ಗಿರಿಗಳ ಬೆನ್ನು ಹತ್ತದೆ ಮುನ್ನಡೆಯುತ್ತಿರುವ ಇವರು ಅಪ್ಪಟ ಕಲಾವಿದರು. ಇವರನ್ನು ಈಗ ಆಕೃತಿ ಕನ್ನಡ ಡಾಟ್‌ ಕಾಮ್‌ ಪರಿಚಯಿಸುತ್ತಿದೆ.

ಅರುಣ ದೇಸಾಯಿಯವರು ಮೂಲತಹ ಹುಬ್ಬಳ್ಳಿಯವರು. ನಗರ ಸಭೆಯ ಲ್ಯಾಮಿಂಗ್ಟನ್‌ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಮುಂದೆ ಹುಬ್ಬಳ್ಳಿಯಲ್ಲಿ ಫಾರ್ಮಾ ಪದವಿ ಗಳಿಸಿದರು. ಪದವಿ ಪಡೆದ ನಂತರ ಒಂದು ವರ್ಷ ಕೆಲಸವಿಲ್ಲದೆ ಅಲೆದಾಡಿದ್ದೂ ಇದೆ. ಆಗ ಪ್ರಿಂಟಿಂಗ್‌ ಪ್ರೆಸ್‌ಗಳ ಬಳಿ ಹೋಗಿ ಅಲ್ಲಿ ಕತ್ತರಿಸಿ ಕಸಕ್ಕೆ ಹಾಕುತ್ತಿದ್ದ ಕಾಗದದ ಚೂರುಗಳನ್ನು ಹೆಕ್ಕಿಕೊಂಡು ಬಂದು ಗುಡ್ಡೆ ಹಾಕಿಕೊಳ್ಳುವುದು ಹವ್ಯಾಸವಾಯಿತು. ಕಾರಣವೆಂದರೆ ಈ ಕಾಗದದ ಚೂರುಗಳಿಂದ ತಮಗೆ ತಿಳಿದಂತೆ ನಾನಾ ಆಕಾರದ ಆಕೃತಿಗಳನ್ನು ಸಿದ್ಧಪಡಿಸುವುದು ಇವರ ಆಸಕ್ತಿಯ ವಿಷಯವಾಯಿತು. ಇಂಥ ಕಾಗದದ ಚೂರುಗಳು ಅರುಣ ದೇಸಾಯಿಯವರ ಕಲಾಕೃತಿಗಳ ತಯಾರಿಕೆಗಾಗಿ ಅಭ್ಯಾಸ ಮಾಡಿಕೊಳ್ಳಲು ಸಹಾಯಕವಾದವು. ಅವುಗಳನ್ನು ಕತ್ತರಿಸುವುದು, ಫೋಲ್ಡಿಂಗ್‌ ಮಾಡುವುದು, ಅವುಗಳಿಗೆ ನಾನಾ ರೂಪ ಕೊಡುವುದು ಇವರ ನಿತ್ಯ ಹವ್ಯಾಸವಾಯಿತು. ಅವು ಇವರ ಕೆಲಸಕ್ಕೆ ಸಹಾಯಕಾರಿಯಾಗಿದ್ದವು. ಹಾಗೆಂದೇ ಎಲ್ಲಿಯಾದರೂ ಕಾಗದದ ಚೂರು ಕಂಡರೆ ಸಾಕು. ಇವರ ಕಲ್ಪನಾ ಶಕ್ತಿಗೆ ಏನೋ ಒಂದು ಆಖಾಡ ಸಿಕ್ಕಂತಾಗುತ್ತಿತ್ತು. ಇವರ ತಾಯಿಯವರೂ ಇಂಥ ಕಲೆಯಲ್ಲಿ ಮೊದಲಿನಿಂದ ಆಸಕ್ತಿಯಿದ್ದವರು. ಅವರ ಪ್ರಭಾವ ತಮ್ಮ ಮೇಲೆ ಸಾಕಷ್ಟಿದೆ ಎಂದು ಹೇಳುತ್ತಾರೆ.

ಆದರೆ ಇಂಥ ಕಾಗದದೊಡನೆ ಆಟವಾಡುವುದು ಒಂದು ಹವ್ಯಾಸವಾಗಿತ್ತೇ ಹೊರತು ಅದು ಅನ್ನಕ್ಕೆ ದಾರಿಯಾಗಿರಲಿಲ್ಲ. ಬದುಕುವುದಕ್ಕೆ ಏನಾದರೂ ಕೆಲಸ ಮಾಡಲೇ ಬೇಕಾಗಿತ್ತು. ಕಲಿತಿದ್ದು ಫಾರ್ಮಾ. ಅದರ ಹೆಸರು ಹೇಳಿಕೊಂಡು ಹದಿನೇಳು ವರ್ಷ ಕೆಲಸ ಮಾಡಿದರು. ಆದರೆ ಮನಸ್ಸು ಮಾತ್ರ ಕಾಗದಗಳನ್ನು ಕಂಡರೆ ಸಾಕು. ಆವುಗಳಿಗೆ ಆಕಾರ ಕೊಡಲು ತುಡಿಯುತ್ತಿತ್ತು. ಅದರಲ್ಲಿ ಸಿಗುವಷ್ಟು ಆನಂದ ಬೇರೆಯೆಲ್ಲಿಯೂ ಸಿಗುತ್ತಿರಲಿಲ್ಲ. ಹದಿನೇಳು ವರ್ಷ ಫಾರ್ಮಾ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ಅದರಲ್ಲಿ ತೃಪ್ತಿ ಸಿಗಲಿಲ್ಲ. ಕ್ರಾಫ್ಟನಲ್ಲಿ ಇನ್ನಷ್ಟು ಸಾಧನೆ ಮಾಡಲು ಮನಸ್ಸು ತುಡಿಯುತ್ತಿತ್ತು. ತಾನು ಮಾಡುತ್ತಿದ್ದ ಕೆಲಸವನ್ನೇ ಒಂದು ಥೀಮ್‌ ಮಾಡಿಕೊಂಡು ಕಾಗದದಲ್ಲಿ ಕ್ರಾಫ್ಟ ಕಲೆಯನ್ನು ಅರಳಿಸತೊಡಗಿದರು.

ಎಷ್ಟೋ ಕಡೆ ಶಾಲಾ ಮಕ್ಕಳಿಗೆ ಇದರ ಬಗ್ಗೆ ಪಾಠವನ್ನೂ ಮಾಡಿ ಬಂದರು. ಹೋದ ಕಡೆಯಲ್ಲೆಲ್ಲ ಪ್ರಶಂಸೆಯ ಸುರಿಮಳೆಯಾಯಿತು. ಶಾಲೆಯಲ್ಲಿ ಪಾಠ ಹೇಳುವುದರ ಜತೆಗೆ ಈ ಕ್ರಾಫ್ಟ ಕಲೆಯೊಂದಿಗೆ ವಿಷಯ ಬೋಧಿಸಿದರೆ ಮಕ್ಕಳ ಮನಸ್ಸಿಗೆ ತಕ್ಷಣ ಹಿಡಿಯುತ್ತದೆ ಎಂದು ಅರಿವಿಗೆ ಬಂತು. ಅದಕ್ಕಾಗಿ ಹಲವು ಶಾಲೆಗಳೊಂದಿಗೆ ಒಡಂಬಡಿಕೆಯನ್ನೂ ಮಾಡಿಕೊಂಡರು. ಶಾಲೆಗಳು ಮೊದಲು ಅನುಮಾನಿಸಿದರೂ ಅರುಣರ ಕೈ ಚಳಕಕ್ಕೆ ಮಾರು ಹೋಗಿ ಒಪ್ಪಿಕೊಂಡರು. ಅದೇ ಕಾರಣವೋ ಏನೋ. ಹದಿನೇಳು ವರ್ಷ ಕೆಲಸ ಮಾಡಿದ ಫಾರ್ಮಾ ಕ್ಷೇತ್ರದ ಕೆಲಸವನ್ನು ಬಿಟ್ಟು ಪೂರ್ಣ ಪ್ರಮಾಣದಲ್ಲಿ ಈ ಕಲೆಯೊಂದಿಗೆ ಕಲಿಕೆ ಮತ್ತು ಕಲಿಸುವುದನ್ನು ಆರಂಭಿಸಿದರು.

ಈ ಸಂದರ್ಭದಲ್ಲಿ ಟೈಮ್ಸ ಆಫ್‌ ಇಂಡಿಯಾ ಸಹಕಾರದೊಂದಿಗೆ ಈ ಕಲೆ ಕುರಿತು ಮಕ್ಕಳಿಗಾಗಿ ಅನೇಕ ಶಿಬಿರಗಳನ್ನು ಹಮ್ಮಿಕೊಂಡರು. ಕಾಗದವನ್ನು ಹೇಗೆ, ಎಲ್ಲಿ, ಯಾಕೆ ಬಳಸಬೇಕು ಎಂಬ ಜಾಣ್ಮೆ ಇದ್ದರೆ ಅಲ್ಲಿಯೇ ಕಲೆ ಅರಳುತ್ತದೆ. ಕಲ್ಪನೆಯೊಂದಿಗೆ ಒಂದಷ್ಟು ಟೆಕ್ನಿಕ್‌ ಬಳಸಿದರೆ ಸಾಕು. ನಿಮ್ಮ ಕೈಯಲ್ಲಿರುವುದು ಬರೀ ಕಾಗದವಲ್ಲ. ನೀವು ಬಯಸಿದ ಹಾಗೆ ಅರಳುವ ಕಲಾಕೃತಿಯಾಗಿ ಮೂಡುತ್ತದೆ. ಇದನ್ನು ಬರೀ ಫನ್‌ಗಾಗಿ ಮಾಡುವುದಲ್ಲ. ಮಾಡುತ್ತ- ಮಾಡುತ್ತ ಫನ್‌ ತಾನಾಗೇ ಹುಟ್ಟಿಕೊಳ್ಳುತ್ತದೆ. ಇದಕ್ಕೆ ಸಿಲೆಬಸ್‌ ಅಂತ ಇರುವುದಿಲ್ಲ. ಸ್ವ ಆಸಕ್ತಿ ಇದಕ್ಕೆ ಮುಖ್ಯ. ನನಗೆ ಬಂದ ಜನರ ಪ್ರಶಂಸೆಗಳೇ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿವೆ.

ಆದರೆ ರಾಜ್ಯ ಮಟ್ಟದ ಕಲಾ ಸಂತೆಯಲ್ಲಿ ಭಾಗವಹಿಸಬೇಕೆಂದು ತುಂಬ ಆಸೆ ಪಟ್ಟಿದ್ದೆ. ಅದಕ್ಕಾಗಿ ಬೆಂಗಳೂರಲ್ಲಿ ನಡೆಯುತ್ತಿದ್ದ ಕಲಾ ಸಂತೆಯಲ್ಲಿ ನನ್ನ ಕಲಾಕೃಗಳನ್ನು ಪ್ರದರ್ಶಿಸಬೇಕೆಂದು ಅನಿಸಿತು. ಅದಕ್ಕಾಗಿ ಅಲ್ಲಿ ಸಂಬಂಧಪಟ್ಟವರನ್ನು ಭೇಟಿಯಾಗಿ ಅವಕಾಶ ಕೇಳಿದಾಗ ಅಲ್ಲಿಯವರ ಮಾತು ನನ್ನನ್ನು ದಂಗುಬಡಿಸಿತು. ಅವರು ನನ್ನದು ಕಲೆಯೇ ಅಲ್ಲ. ಕ್ರಾಫ್ಟ ಈಜ್‌ ನಾಟ್‌ ಎ ಆರ್ಟ ಅಂದು ತಿರಸ್ಕರಿಸಿ ಬಿಟ್ಟರು. ಕಲಾ ಸಂಸ್ಥೆಯೊಂದು ಹೀಗೆ ಹೇಳಿದಾಗ ಅಂಥ ಸಂಸ್ಥೆಯ ಬಗ್ಗೆಯೇ ನನಗೆ ಜಿಗುಪ್ಸೆ ಬಂದು ಬಿಟ್ಟಿತು. ಯಾರೋ ಒಬ್ಬರು ನಮ್ಮನ್ನು ಗುರುತಿಸಲಿಲ್ಲ ಎಂದರೇನಾಯಿತು? ನಮ್ಮನ್ನು ಗುರುತಿಸಲು ಇನ್ನೂ ಜನರಿದ್ದಾರೆ ಎಂಬ ನಂಬಿಕೆ ನನ್ನದು. ಒಂದು ಬಾಗಿಲು ಮುಚ್ಚದರೇನಾಯಿತು. ತೆರೆದುಕೊಳ್ಳಲು ಸಾವಿರ ಬಾಗಿಲುಗಳಿವೆ ಎಂದು ನಾನು ಇತರ ಕಲಾವಿದರಿಗೆ ಹೇಳ ಬಯಸುತ್ತೇನೆ.

ಇಂದು ನನ್ನ ಕ್ರಾಫ್ಟ ಆರ್ಟನ್ನು ಜಗತ್ತಿನ ಇತರ ಕಡೆ ಕುತೂಹಲದಿಂದ ನೋಡುವ ಕಣ್ಣುಗಳು ಹುಟ್ಟಿಕೊಂಡಿವೆ. ಅಮೇರಿಕ, ಇಟಲಿ, ಇಂಡೋನೇಶಿಯಾ, ಪ್ರಾನ್ಸ ಮುಂತಾದ ಕಡೆ ನನ್ನ ಕಾಗದ ಕಲೆಯ ಕೃತಿಗಳು ಮಾರಾಟವಾಗಿವೆ. ಮತ್ತು ಅತ್ತ ಕಡೆಯಿಂದ ಬೇಡಿಕೆಗಳು ಬರುತ್ತಿವೆ. .ಅದಕ್ಕಾಗಿ ಈಗ ಇದರಲ್ಲೂ ಹೊಸತು ಹುಡುಕುತ್ತಿದ್ದೇನೆ. ಅನ್ನುವ ಅರುಣ ದೇಸಾಯರು ಅದಕ್ಕಾಗಿ ವಿಶೇಷ ಕಾಗದಗಳನ್ನು ವಿದೇಶದಿಂದಲೇ ತರಿಸುತ್ತಿದ್ದಾರೆ. ಕತ್ತರಿಸಲು ಅನುಕೂಲವಲ್ಲದಂಥ ಕಾಗದ ನಮ್ಮ ದೇಶದಲ್ಲಿ ಉತ್ಪಾದಿಸಲ್ಪಡುತ್ತಿವೆ. ಯಾಕಂದರೆ ಇಲ್ಲಿ ಕಾಗದ ಹುಟ್ಟುವುದೇ ಪ್ರಿಂಟ್‌ ಮೀಡಿಯಾಗಾಗಿ ಮಾತ್ರ. ಇಂಥ ಕಾಗದದಲ್ಲಿ ಯಾವುದೇ ತಾಳಿಕೆಯಾಗಲೀ, ಬಾಳಿಕೆಯಾಗಲೀ ಇರುವುದಿಲ್ಲ. ಇವನ್ನು ಕೇವಲ ಪ್ರಯೋಗ ಮಾಡುವುದಕ್ಕೆ ಮಾತ್ರ ಬಳಸುತ್ತೇನೆ. ಯಾಕಂದರೆ ಕಲಾಕೃತಿಗಾಗಿ ಆಯ್ಕೆ ಮಾಡಿಕೊಂಡ ಒಂದು ಕಾಗದವನ್ನು ಒಮ್ಮೆ ಕತ್ತರಿಸಿದರೆ ಮುಗಿಯಿತು. ಅದು ಕಲಾಕೃತಿಯೇ ಆಗಬೇಕು. ಅದಾಗದಿದ್ದರೆ ಅದು ರದ್ದಿಯೇ. ಆದ್ದರಿಂದ ಪೂರ್ವಭಾವಿ ಸಿದ್ಧತೆ, ಎಚ್ಚರಿಕೆ ಇಟ್ಟುಕೊಂಡೇ ನಾನು ಕಾಗದಕ್ಕೆ ಕೈ ಹಚ್ಚುವುದು.

ನಾನು ಕಲಾಕೃತಿಗಾಗಿ ಬಳಸುವ ಕಾಗದ ಇಂಡೋನೇಶಿಯದಿಂದ ಆಮದು ಮಾಡಿಕೊಂಡಿದ್ದು. ಮತ್ತೆ ಇಟಲಿಯಿಂದಲೂ ತರಿಸಿಕೊಳ್ಳುತ್ತೇನೆ. ಕಾರ್ಪೋರೇಟ ವಲಯಗಳೇ ನನ್ನ ಗ್ರಾಹಕರು. ಅವರು ಕಲಾಕೃತಿಯ ಬೆಲೆಯ ಬಗ್ಗೆ ಚೌಕಾಸಿ ಮಾಡುವುದಿಲ್ಲ. ಅವರಿಗೆ ಕ್ವಾಲಿಟಿ ಬೇಕು ಅಷ್ಟೇ. ವೆಚ್ಚ ಹೆಚ್ಚು ಅನ್ನಿಸಿದರೂ ಈ ಕಾಗದ ಕತ್ತರಿಸಲು ಅನುಕೂಲವಿದೆ. ಅಂದುಕೊಂಡ ಕರ್ವೇಚರಗೆ ಒಗ್ಗುತ್ತವೆ. ಅಲ್ಲದೆ ಮೂಲದಲ್ಲಿ ಅದರ ತಯಾರಿಕೆಯಲ್ಲಿಯೇ ಅದಕ್ಕೆ ಗಟ್ಟಿತನ ಇರುವುದರಿಂದ ತಯಾರಿಸಿದ ಆಕೃತಿ ಬಹು ಕಾಲ ಬಾಳುತ್ತದೆ.

ನನ್ನ ಕಲೆಯಲ್ಲಿ ಏನಿದೆ ಎಂದು ನೋಡುಗರೇ ಹೇಳಬೇಕು. ನಾನು ಏನು ಯೋಚಿಸಿದರೂ ಮತ್ತು ಮಾಡಿದರೂ ಶ್ರದ್ಧೆ ವಹಿಸುತ್ತೇನೆ. ಯಾಕಂದರೆ ಕಲೆಯನ್ನು ಯಾರೂ ಡೌನ್‌ಲೋಡ್‌ ಮಾಡಲಾಗುವುದಿಲ್ಲ. ಅದನ್ನು ನಾವೇ ಮಾಡಬೇಕು. ನಾವೇ ಅನುಭವಿಸಬೇಕು.

ಈಗದು ನನಗೆ ಕಾಗದ ಕ್ರಾಫ್ಟ ಕಲೆ ವೃತ್ತಿಯಾಗಿದೆ. ಅದು ಬದುಕೇ ಆಗಿದೆ ಅನ್ನಿ. ಕೈ ಬೆರಳು ಆಡುವ ತನಕ ಕತ್ತರಿ, ಮತ್ತು ಕಾಗದಗಳೊಂದಿಗೆ ಆಟವಾಡುತ್ತೇನೆ ಅನ್ನುತ್ತಾರೆ ಅರುಣ್‌ ದೇಸಾಯಿ.

ಅವರ ಕಲಾಕೃತಿಗಳನ್ನು ನೋಡಿ ನಾವು ಬೆರಗಾಗಿದ್ದೇವೆ. ಒಂದು ರೀತಿ ಇದು ಮಾಡರ್ನ ಗುಡಿ ಕೈಗಾರಿಕೆ ಥರಹ. ಅವರ ಬೆರಳುಗಳ ಶಕ್ತಿ ನಿರಂತರವಾಗಿರಲಿ, ಅವರ ಬೆರಳಿಂದ ಅರಳಿದ ಕಲೆ ಸಾಗರದಾಚೆ ದಾಖಲೆ ಮೂಡಿಸಲಿ. ಅದಕ್ಕೂ ಮೊದಲು ನಮ್ಮವರು ಇವರನ್ನು ಗುರುತಿಸುವಂತಾಗಲಿ ಎಂದು ಆಕೃತಿ ಕನ್ನಡ ಡಾಟ್‌ ಕಾಮ್‌

ಹಾರೈಸುತ್ತದೆ.

#ಪರತಭ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW