ಒಂದು ಊದುಕಡ್ಡಿ ಉರಿದು
ಮುಗಿಯುವ ವೇಳೆಯಲ್ಲಿ
ಗುಡ್ಡಗಳು ರೆಕ್ಕೆ ತಳೆದು ಹಾರಬಹುದು
ಯಾವುದೋ ಭರತವನೇರಿ ದಂಡೆಗೆ
ಬಂದು ಓಲಿ ನಿಂತ ಹಡಗು
ಇನ್ನೊಂದು
ಅಲೆಯನೇರಿ ತೇಲೀತು
ಹಕ್ಕಿಯೊಂದು ಥಟ್ಟನೇ ಚಿಮ್ಮಿ
ಅವಕಾಶದಲ್ಲಿ ಪಲ್ಟಿ ಹೊಡೆಯಬಹುದು
ತಾರೆತಾರೆಗಳು ಡಿಕ್ಕಿಯಾಗಿ
ಬೆಳಕಿನ ದೂಳು ಕವಿದೀತು
ಮತ್ತು-
ಕವಿತೆಯೊಂದು ಸೀದಾ ಎದ್ದು
ಎದೆಗೆ ಬಂದು ಬಿಡಬಹುದು
ಅಥವಾ- ಏನೂ ಆಗದೇ
ಇರಬಹುದು
ಊದುಕಡ್ಡಿ ಮೌನದಲ್ಲಿ ದಹಿಸಿ
ಇಷ್ಟು ಸುಗಂಧ ಉಳಿಸುತ್ತ
ಬೂದಿಯಾಗುತ್ತದೆ
ನನಗೋ ಹೊಗೆಗೆ
ಅಲರ್ಜಿ
ಭಯಂಕರ ಸೀನು !
#ಕವನ