ಜರ್ಮನಿಯ ನಾಝಿಗಳ ಕ್ರೌರ್ಯ ಕಂಡು ನಲುಗಿದಳು ಈ  ಹದಿಮೂರರ ಬಾಲೆ

ನಾನು ತೀರ ಭಾವುಕನಾದದ್ದು ಎರಡು ಬಾರಿ.

ದೆಹಲಿಯಲ್ಲಿ ಗಾಂಧೀಜಿಯ ಎದೆಗೆ ಗುಂಡು ಬಿದ್ದ ಜಾಗ ನೋಡಿದಾಗ.

ಮತ್ತು ಆಮ್‌ಸ್ಟರ್‌ ಡ್ಯಾಮಿನಲ್ಲಿರುವ ‘ ಆ್ಯನ್ನೀ ಫ್ರಾಂಕ್‌ ಹೌಸ್‌ ‘ ನಲ್ಲಿ ಕಾಲಿಟ್ಟಾಗ.

* ಹೂಲಿಶೇಖರ

ಎಳೆ ಹರೆಯದ ಬಾಲಕಿಗೇಕೆ ಇಂಥ ದುರಂತ ಸಾವು?

ಜಗತ್ತು ಕಣ್ಣು ತೆರೆಯುವ ಮುನ್ನವೇ ಆಕೆ ಸೇರಿದ್ದಳು ಸಾವಿನ ಮನೆ

ಜರ್ಮನಿಯ ನಾಝಿಗಳ ಕ್ರೌರ್ಯ ಕಂಡು ನಲುಗಿದಳು ಈ ಹದಿಮೂರರ ಬಾಲೆ.

ಡಚ್‌ ಹುಡುಗಿ ‘ ಆ್ಯನ್ನೀ ಫ್ರಾಂಕ ‘ ಳ ದುರಂತ ಕತೆ.

ಈಗ ನಾಲ್ಕು ವರ್ಷದ ಹಿಂದೆ ನಾನು ನೆದರ್‌ ಲ್ಯಾಂಡಿಗೆ ಹೋದಾಗ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಒಂದೂವರೆ ತಿಂಗಳು ಉಳಿದಿದ್ದೆ. ಈ ನಗರ ನೆದರ್‌ಲ್ಯಾಡಿನ ದೊಡ್ಡ ನಗರ. ಮತ್ತು ಸಮುದ್ರ ಮಟ್ಟದಿಂದ ಏಳು ಅಡಿ ಕೆಳಗಿರುವ ನಗರ. ಅದರಿಂದ ಇಲ್ಲಿ ರಸ್ತೆಗಳಿಗಿಂತ ಕೆನಾಲ್‌ಗಳೇ ಸಂಪರ್ಕ ಮಾರ್ಗಗಳು. ಒಂದು ರೀತಿ ನೀರಿನಲ್ಲಿ ತೇಲುವ ನಗರವಿದು. ಇಲ್ಲಿ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ನೆದರಲ್ಯಾಂಡ್‌ ಐತಿಹಾಸಿಕವಾಗಿಯೂ ಪ್ರಸಿದ್ಧವಾದುದು. ಅಲ್ಲಿಯ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಜಗತ್ತಿನ ಅತಿ ದೊಡ್ಡ ನಿಲ್ದಾಣಗಳಲ್ಲಿ ಒಂದಾಗಿದೆ. ಇಲ್ಲಿಯ ಪ್ರವಾಸ ಖುಶಿ ಕೊಡುವಂಥದ್ದು.

ಯಾರು ಈ ಆ್ಯನ್ನೀ ಫ್ರಾಂಕ್‌ ?

ಆದರೆ ಅದೊಂದು ದಿನ ಅಲ್ಲಿಯ ಗೆಳೆಯ ಮತ್ತು ಆಮ್‌ಸ್ಟರ್‌ ಡ್ಯಾಮಿನಲ್ಲಿ ಟೂರಿಸ್ಟ ಕಂಪನಿ ನಡೆಸುತ್ತಿರುವ ಮಿಸ್ಟರ್‌. ಕ್ರಿಸ್‌ ‘ ಆ್ಯನ್ನೀ ಫ್ರಾಂಕ್‌ ಹೌಸ್‌’ ನೋಡದೆ ಹೋಗಬೇಡಿ ಎಂದು ಹೇಳಿದರು. ನನಗೆ ಆ್ಯನ್ನೀ ಫ್ರಾಂಕ್‌ ಳ ಬಗ್ಗೆ ಏನೂ ಗೊತ್ತಿರಲಿಲ್ಲ. ಆದರೆ ಅವಳ ಕುರಿತು ಬಂದಿದ್ದ ಒಂದು ಇಂಗ್ಲೀಷ್‌ ಸಿನಿಮಾ ನೋಡಿದ್ದೆ. ಮತ್ತು ಅದರ ನಂತರ ಅವಳ ಬಗ್ಗೆ ಕೌತುಕಗೊಂಡಿದ್ದೆ. ಈಗ ಸ್ನೇಹಿತ ಕ್ರಿಸ್‌ ಹೇಳಿದ್ದರಿಂದ ಆ್ಯನ್‌ ಫ್ರಾಂಕಳ ಮನೆ ನೋಡಿಯೇ ಬರಬೇಕೆಂದು ನಿರ್ಧರಿಸಿದೆ. ಆಮಸ್ಟರ್‌ಡ್ಯಾಂ ನಗರದ ಕೇಂದ್ರ ಮಾರುಕಟ್ಟೆ ವೆಸ್ಟರ್‌ ಕೇಕ್‌ ಸಮೀಪವೇ ಈ ಮನೆ ಇದೆ. ಪ್ರಿಸ್ಟರ್‌ ಗೇಟ್‌ ಕೆನಾಲ್‌ಗೆ ಹೊಂದಿಕೊಂಡು ಬಲಬದಿಗೆ ಇರುವ ನಾಲ್ಕನೆಯ ಮನೆಯೇ ಇದು.

ನಾನು, ನನ್ನ ಶ್ರೀಮತಿ, ಮಗ ಹರೀಶ್‌, ಸೊಸೆ ದೀಪಾ ೧೪ ನೇ ನಂಬರಿನ ಟ್ರಾಮ್‌ ಹತ್ತಿ ನೇರವಾಗಿ ವೆಸ್ಟರ್‌ಕೇಕ್‌ಗೆ ಬಂದೆವು. ಅಲ್ಲಿಂದ ತುಸು ದೂರದಲ್ಲಿಯೇ ಇತ್ತು ಪ್ರಿಸ್ಟರ್‌ಗೇಟ್‌ ಕೆನಾಲ್‌. ನಡೆದುಕೊಂಡೇ ಹೋದೆವು. ಅಷ್ಟರಲ್ಲಿ ಆ್ಯನ್‌ ಫ್ರಾಂಕ್‌ ಬಗ್ಗೆ ತಿಳಿದ ಜನ ಮನೆ ಪ್ರವೇಶಿಸಲು ಸಾಲುಗಟ್ಟಿ ನಿಂತಿದ್ದರು. ನಾವೂ ಸಾಲಿನಲ್ಲಿಯೇ ಒಳಗೆ ಹೊದೆವು. ದಿನಕ್ಕೆ ಸುಮಾರು ಸಾವಿರ ಜನ ಜಗತ್ತಿನ ಮೂಲೆ-ಮೂಲೆಗಳಿಂದ ಆ್ಯನ್‌ ಮನೆ ನೋಡಲು ಬರುತ್ತಾರಂತೆ. ನಾವು ಒಳಗೆ ಕಾಲಿಡುತ್ತಿದ್ದಂತೆಯೇ. ಎದುರಿಗೆ ಕಂಡದ್ದು ಹಿಟ್ಲರನ ಸೇನೆಯಿಂದ ಬಚ್ಚಿಟ್ಟುಕೊಳ್ಳಲು ಬಾಗಿಲಿಗೆ ಅಡ್ಡ ನಿಲ್ಲಿಸುತ್ತಿದ್ದ ದೊಡ್ಡ ಬುಕ್‌ ಸೆಲ್ಫ. ಅದು ಹಾಗೇ ಇದೆ. ಅಲ್ಲಿಂದಲೇ ಆ್ಯನ್ನೀ ಳ ಬದುಕಿನ ಚಿತ್ರ ಸಾಲುಗಟ್ಟಿ ನಮ್ಮ ಮುಂದೆ ಬಂದು ನಿಲ್ಲುತ್ತದೆ. ಎರಡು ವರ್ಷ ಕಾಲ ಈ ಬುಕ್‌ರಾಕ್‌ನ ಹಿಂದೆಯ್ಡೇ ಅಡಗಿಕೊಂಡಿದ್ದರು ಆ್ಯನ್ನೀ, ಆಕೆಯ ಅಕ್ಕ ಮಾರ್ಗೋಟ್‌, ತಾಯಿ ಎಡಿತ್‌ ಮತ್ತು ತಂದೆ ಒಟ್ಟೋ ಫ್ರಾಂಕ್‌. ಹಾವಿನ ಹೆಡೆಯ ಕೆಳಗೆ ಉಸಿರಾಡುತ್ತಿದ್ದ ಈ ನಾಲ್ಕೂ ಜೀವಗಳ ಮಾನಸಿಕ ನೋವು, ಭಯ ಕಲ್ಪನೆಗೂ ಮೀರಿದ್ದು.

ನಾಝೀ ಸೇನೆಗೆ ಹೆದರಿ ಪಲಾಯನ

Photo Credit – Wikipedia

ಆ್ಯನ್ನೀ ಫ್ರಾಂಕ್‌ ಎಂಬ ಡಚ್‌ ಹುಡುಗಿ. ತಂದೆ ಒಟ್ಟೋ ಫ್ರಾಂಕ್‌ ವ್ಯಾಪಾರ ನಿಮಿತ್ತ ಜರ್ಮನಿಗೆ ಹೋಗಿ ಅಲ್ಲಿಯ ಸಿಟಿಜನ್‌ಶಿಪ್‌ ಹೊಂದಿದ್ದರು. ಆ್ಯನ್ನೀ ಫ್ರಾಂಕ್‌ ಹುಟ್ಟಿದ್ದು ಫ್ರಾಂಕಫರ್ಟ್ನನಲ್ಲಿ. ಆದರೆ ಎರಡನೇ ಮಹಾ ಯುದ್ಧ ಆರಂಭವಾಗುತ್ತಲೇ ಹಿಟ್ಲರನ ನಾಝೀ ಸೇನೆ ಇಂಥವರನ್ನು ದೇಶದಲ್ಲಿ ಹುಡುಕಿ ಅವರ ಸಿಟಿಝನ್‌ಶಿಪ್‌ ರದ್ದುಗೊಳಿಸಿ, ಮಕ್ಕಳು-ಮಹಿಳೆಯರು-ವೃದ್ಧರೆನ್ನದೆ ಕೊಲ್ಲತೊಡಗಿತು. ಅದರಿಂದ ಹೆದರಿದ ಒಟ್ಟೋ ಫ್ರಾಂಕ್‌, ಜರ್ಮನಿಯ ನಾಗರಿಕತೆಯನ್ನು ತೊರೆದದ್ದಲ್ಲದೆ, ಹಿಟ್ಲರನ ಸೇನೆಯಿಂದ ಬಚಾವಾಗಲು ಕುಟುಂಬ ಸಮೇತ ನೆದರ್‌ಲ್ಯಾಂಡಿನ ಆಮ್‌ಸ್ಟರ್‌ ಡ್ಯಾಮಿಗೆ ಓಡಿಬಂದರು. ಆದರೆ ಜರ್ಮನಿಯಿಂದ ಬಂದ ಕಾರಣಕ್ಕೆ ಡಚ್‌ ಮಾತೃ ಭಾಷೆಯಾಗಿದ್ದರೂ ಇಲ್ಲಿಯೂ ಅವರಿಗೆ ಸಿಟಿಝನ್‌ಶಿಪ್‌ ಸಿಗಲಿಲ್ಲ. ಒಟ್ಟೋ ಕುಟುಂಬ ಯಾವುದೇ ದೇಶದ ಸಿಟಿಝನ್‌ಶಿಪ್‌ ಇಲ್ಲದೆ ಬದುಕುವ ಸ್ಥಿತಿ ಬಂತು. ಅದು ಕೊನೆಯವರೆಗೂ ಸಿಗಲಿಲ್ಲ. ಇನ್ನೂ ದುರ್ದೈವದ ಸಂಗತಿಯೆಂದರೆ ಹಿಟ್ಲರ್‌ ಎರಡನೇ ಮಹಾಯುದ್ಧದ ಹೊತ್ತಿಗೆ ನೆದರ್‌ಲ್ಯಾಂಡಿನ ಆಮ್‌ಸ್ಟರ್‌ ಡ್ಯಾಮ್‌ ನಗರವನ್ನೂ ಕೈವಶಮಾಡಿಕೊಂಡ. ನಗರದಲ್ಲಿದ್ದ ಡಚ್ಚರನ್ನು ಹೊರ ಹಾಕಲು ನಿರ್ಧರಿಸಿ ಕಂಡ ಕಂಡಲ್ಲಿ ಅಂಥವರನ್ನು ಹಿಡಿದು ನಾಯಿಗಳಂತೆ ಎಳೆದೊಯ್ಯತೊಡಗಿದರು ಅವನ ಸೈನಿಕರು. ಇದರಿಂದ ಒಟ್ಟೋ ಕುಟುಂಬ, ಜೀವ ಭಯದಿಂದ ಅಡಗು ತಾಣದಲ್ಲಿರುವುದು ಅನಿವಾರ್ಯವಾಯಿತು.

ಆ್ಯನ್ನೀ ಫ್ರಾಂಕ್‌ ಹೌಸ್‌

Photo Credit – Wikipedia

ಹದಿಮೂರು ವರ್ಷದ ಆ್ಯನ್ನೀ ಫ್ರಾಂಕ್‌ ಮತ್ತು ಅವಳ ಕುಟುಂಬ ಅಡಗಿಕೊಂಡ ಮನೆಯೇ ಈಗ ‘ ಆ್ಯನ್ನೀ ಫ್ರಾಂಕ್‌ ಹೌಸ್‌’ ಎಂದು ಪ್ರಸಿದ್ಧವಾಗಿದೆ. ಎರಡು ವರ್ಷಗಳ ಕಾಲ ಈ ಫ್ರಾಂಕ್‌ ಕುಟುಂಬ ಈ ಮನೆಯಲ್ಲಿ ಬಚ್ಚಿಟ್ಟು ಕೊಂಡಿತ್ತು. ಆಗ ಆ್ಯನ್ನೀಗೆ ಕೇವಲ ಹದಿಮೂರು ವರ್ಷ ಮಾತ್ರ. ಕೊನೆಗೆ ಆಕೆ ಮತ್ತು ಆಕೆಯ ಕುಟುಂಬ ಕೊಲೆಗಡುಕ ನಾಝಿಗಳಿಗೆ ಸೆರೆಯಾದದ್ದೂ ಇದೇ ಮನೆಯಲ್ಲಿ. ಇವಳ ಕುಟುಂಬ ಅಂದರೆ ತಂದೆ ಒಟ್ಟೋ ಫ್ರಾಂಕ್‌. ತಾಯಿ ಎಡಿತ್‌ ಫ್ರಾಂಕ್‌. ಅಕ್ಕ ಮಾರ್ಗೋಟ್‌ ಫ್ರಾಂಕ್‌ ಮಾತ್ರ. ಇವರೆಲ್ಲರನ್ನು ಸೆರೆ ಹಿಡಿದ ಹಿಟ್ಲರನ ಸೇನೆ ಜರ್ಮನಿಯ ಬರ್ಗನ್‌- ಬಲ್ಸೆನ್‌ ಎಂಬ ಕೈದಿಗಳ ನರಕ ಶಿಬಿರಕ್ಕೆ ಕಳಿಸುತ್ತದೆ. ಈ ಕೈದಿಗಳ ಶಿಬಿರವೆಂದರೆ ಯಾತನಾ ಶಿಬಿರವೆ. ಯಾತನಾ ಶಿಬಿರವೆಂದರೆ ಇಲ್ಲಿ ಒಳಗೆ ಹೋದವರು ಯಾರೂ ಜೀವಂತವಾಗಿ ಹೊರಬಂದದ್ದೇ ಇಲ್ಲ. ಬಂದದ್ದು ಈ ಸೆರೆಯಾಳುಗಳ ರಾಶಿ ರಾಶಿ ಹೆಣಗಳು. ಟ್ರಕ್ಕಿನಲ್ಲಿ ತುಂಬಿ-ತುಂಬಿ ತಂದ ಈ ಹೆಣಗಳ ರಾಶಿಗಳನ್ನು ಕಸದಂತೆ ಒಂದು ದೊಡ್ಡ ಗುಂಡಿಗಳಿಗೆ ಸುರಿದು ಮುಚ್ಚಲಾಗುತ್ತಿತ್ತು. ಅದು ನೋಡಲು ಅತ್ಯಂತ ಘೋರವಾಗಿರುತ್ತಿತ್ತು.

ಆ್ಯನ್ನೀ ಫ್ರಾಂಕ್‌ಳ ಡೈರಿ

Photo Credit – Wikipedia

ಆ್ಯನ್ನೀ ಗೆ ೧೩ ರ ಹುಟ್ಟುಹಬ್ಬದ ಹೊತ್ತಿಗೆ ಮಗಳಿಗೆ ಕಾಣಿಕೆ ಕೊಡಲು ಅಪ್ಪ ಒಟ್ಟೋ ಹತ್ತಿರ ಏನೂ ಇರಲಿಲ್ಲ. ಆತ ಒಂದು ಡೈರಿಯನ್ನು ಕೊಟ್ಟನಷ್ಟೆ. ಈ ಡೈರಿ ಮುಂದೆ ಅವಳ ಜೀವನದಲ್ಲಿ ಅದೆಂಥ ದಾಖಲೆಯಾಯಿತೆಂದರೆ ಹಿಟ್ಲರ್‌ನ ಕ್ರೌರ್ಯದ ಮುಖವನ್ನು ನೋಡಲು ಮುಂದೆ ಇಡೀ ಜಗತ್ತಿಗೇ ಸಾಧ್ಯವಾಯಿತು. ಆ ಕಾರಣಕ್ಕೇ ಆ್ಯನ್ನೀ ಜನರ ಹೃದಯದಲ್ಲಿ ಕೂತು ಬಿಟ್ಟಳು. ಎರಡು ವರ್ಷಗಳ ಗುಪ್ತವಾಸದಲ್ಲಿ ಈ ಹುಡುಗಿ ನಾಝೀ ಸೇನೆ ನಡೆಸಿದ ದೌರ್ಜನ್ಯಗಳನ್ನು ಕಣ್ಣಾರೆ ಕಂಡು ಅದನ್ನೆಲ್ಲ ಈ ಡೈರಿಯಲ್ಲಿ ಬರೆದಿಟ್ಟಿದ್ದಾಳೆ. ಎಂಥ ಸ್ಥಿತಿಯಲ್ಲೂ ಮನಸ್ಸಿನ ಹತೋಟಿಯನ್ನು ಮೀರದೆ ಕಣ್ಣು ಮುಂದಿನ ಘಟನೆಗಳನ್ನು ಡೈರಿಯಲ್ಲಿ ಬರೆದಿಟ್ಟಳು ಆ್ಯನ್ನೀ ಫ್ರಾಂಕ್‌. ೧೯೪೫ ರಲ್ಲಿ ಹಿಟ್ಲರನ ಸೇನೆ ಈ ಕುಟುಂಬವನ್ನು ಬಂಧಿಸುತ್ತದೆ. ಆಗ ಆ್ಯನ್‌ ಫ್ರಾಂಕ್‌ಗೆ ೧೫ ವರ್ಷ. ಆಕೆಯ ಅಕ್ಕ ಮಾರ್ಗೋಟಾಳಿಗೆ ೧೮ ವರ್ಷ.

Photo Credit – Wikipedia

ಆ ಮರಣ ಶಿಬಿರದಲ್ಲಿ ಏನು ನಡೆಯಿತೆಂದು ಯಾರಿಗೂ ಗೊತ್ತಿಲ್ಲ. ಮುಂದೆ ಅಲ್ಲಿಂದ ಅದೇಗೋ ಹೊರ ಬಂದವರು ತಂದೆ ಒಟ್ಟೋ ಮಾತ್ರ. ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಆ ಮರಣ ಶಿಬಿರದಲ್ಲಿಯೇ ಸಾಯುತ್ತಾರೆ. ಆ್ಯನ್ನೀ ಮತ್ತು ಆಕೆಯ ಅಕ್ಕ, ತಾಯಿ ಹೇಗೆ ಸತ್ತರೆಂದು ಬರೆಯಲು ಅವಳ ಬಳಿ ಡೈರಿ ಇರಲಿಲ್ಲ. ಸೇನೆಗೆ ಬಂಧಿಯಾಗುವ ಸಮಯದಲ್ಲಿ ಅದನ್ನು ಆ್ಯನ್ನೀ ಅಡಗುದಾಣದಲ್ಲಿಯೇ ಬಿಟ್ಟು ಬಂದಿರುತ್ತಾಳೆ. ಎದನ್ನು ಎಲ್ಲಿಟ್ಟಿದ್ದೇನೆಂದು ತಂದೆಗೆ ಮಾತ್ರ ತಿಳಿಸಿರುತ್ತಾಳೆ ಆ್ಯನ್ನೀ.

ಹಿಟ್ಲರ್‌ ಸತ್ತ ಮೇಲೆ

ಮುಂದೆ ಮಹಾ ಯುದ್ಧ ನಿಂತು, ಹಿಟ್ಲರನ ಸಾವಿನ ನಂತರ ಉಳಿದದ್ದು ಅವನ ಕ್ರೌರ್ಯ ಸಾರುವ ಈ ಡೈರಿ ಮಾತ್ರ. ಮರಣ ಶಿಬಿರದಿಂದ ಹೇಗೋ ತಪ್ಪಿಸಿಕೊಂಡು ಬಂದ ತಂದೆ ಒಟ್ಟೋ, ಮೊದಲು ಮಾಡಿದ್ದು ಆ ಡೈರಿಯನ್ನು ತನ್ನ ವಶಕ್ಕೆ ತಗೆದುಕೊಂಡಿದ್ದು. ಮುಂದೆ ಸಮಯ ನೋಡಿ ೧೯೫೨ ರಲ್ಲಿ ಅದನ್ನು ಆತನೇ ಮೊದಲ ಬಾರಿ ಇಂಗ್ಲೀಷ್‌ನಲ್ಲಿ ಪ್ರಕಟಿಸುತ್ತಾನೆ. ಆ್ಯನ್ನೀ ಫ್ರಾಂಕ್‌ ಡೈರಿ ಬರೆದದ್ದು ಡಚ್‌ ಭಾಷೆಯಲ್ಲಿ. ಅದು ಇಂಗ್ಷೀನಲ್ಲಿ ಪ್ರಕಟವಾಗುತ್ತಲೂ ಒಂದೇ ದಿನಕ್ಕೆ ಆ್ಯನ್ನೀ ಫ್ರಾಂಕ್‌ ಮತ್ತು ನಾಝಿಗಳ ಕ್ರೌರ್ಯ ಜಗತ್ತಿನಲ್ಲಿ ದೊಡ್ಡ ಸುದ್ದಿಯಾದುವು. ಈ ಡೈರಿ ಇದುವರೆಗೆ ಜಗತ್ತಿನ ಅರವತ್ತು ಭಾಷೆಗಳಲ್ಲಿ ಪ್ರಕಟವಾಗಿದೆ. ಅಷ್ಟರ ಮಟ್ಟಿಗೆ ಜಗತ್ತಿನ ಜನ ಆ್ಯನ್ನೀ ಫ್ರಾಂಕಳ ನೋವಿಗೆ ಮಿಡಿದಿದ್ದಾರೆ. ಹದಿ ಹರೆಯದ ಆ ಬಾಲಕಿ ಅಪ್ಪ ಕೊಟ್ಟ ಖಾಲೀ ಡೈರಿಯಲ್ಲಿ ತಾನು, ತನ್ನ ಕುಟುಂಬ ಅನುಭವಿಸಿದ ಯಾತನೆಯನ್ನು ಬರೆದಳು. ಆಮೇಲೆ ಅಪ್ಪ ಒಟ್ಟೋ ಆ ಡೈರಿಯನ್ನು ಮತ್ತೆ ಹಿಂಪಡೆಯುವ ರೀತಿ ಎಂಥವರ ಮನಸ್ಸನ್ನೂ ಕರಗಿಸುತ್ತದೆ.

ಅಪ್ಪ ಕೊಟ್ಟ ಆ ಡೈರಿಯಲ್ಲಿ ಹಿಟ್ಲರ ಜಗತ್ತಿಗೆ ನೀಡಿದ ಕ್ರೂರತೆ, ಬರ್ಬರತೆಯನ್ನು ಅದರಲ್ಲಿ ತುಂಬಿ ಕೊಟ್ಟಳು ಆ್ಯನ್ನೀ. ಅಪ್ಪನ ಮೂಲಕವೇ ಆ ಡೈರಿ ಜಗತ್ತಿನ ಕೋಟ್ಯಂತರ ಕಣ್ಣುಗಳನ್ನು ಒದ್ದೆ ಮಾಡಿತು. ಅವಳಿಗೆ ಹದಿನೈದು ತುಂಬಿದಾಗ ಆ ಹುಡುಗಿಯ ಬರ್ಥ್‌ ಡೇ ಆಚರಿಸಲು ಆ ಮರಣ ಶಿಬಿರದಲ್ಲಿ ಯಾರೂ ಇರಲಿಲ್ಲ. ಮತ್ತೊಂದು ನಾಯಿ ಸತ್ತಿತೆಂದು ನಾಝಿಗಳು ಅವಳ ಹೆಣವನ್ನು ಎಳೆದು ಟ್ರಕ್ಕಿಗೆ ತುಂಬಿಸಿದರಷ್ಟೆ. ಡೈರಿ ಬರೆದ ಆ ಹುಡುಗಿ ಸತ್ತ ನಿಖರ ದಿನಾಂಕ ಕೂಡ ದಾಖಲಾಗಲಿಲ್ಲ. ಸತ್ತದ್ದು ೧೯೪೫ ರ ಫೆಬ್ರುವರಿ ಅಥವಾ ಮಾರ್ಚ ಎಂದು ಶರಾ ಬರೆಯುತ್ತಾರೆ.

#ಹಣಣ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW