ನಮ್ಮೆಲ್ಲರ ಆಶಯದಂತೆ ಬಿಗ್ ಬಾಸ್ ಐದನೇ ಸರಣಿಯಲ್ಲಿ, ವಿಜೇತರಾಗಿ ಚಂದನ ಶೆಟ್ಟಿ ಹೊರಗೆ ಬಂದಾಗಿದೆ. ಹಾಸನದಲ್ಲಿ ಅವರ ಫ್ಯಾನ್ ಗಳಿಂದ ಅದ್ದೂರಿ ಸ್ವಾಗತವೂ ಸಿಕ್ಕಿದೆ. ಇತ್ತ ಬೆಂಗಳೂರಿನಲ್ಲಿ ಚಂದನ್, ಸ್ವಿಫ್ಟ್ ಕಾರು ಉದ್ಘಾಟನಾ ಸಮಾರಂಭದಲ್ಲಿ ರಿಬ್ಬುನ್ ಕತ್ತರಿಸಿದ್ದೂ ಆಯಿತು. ಚಂದನ ಅವರು ಅಂದು ಕೊಂಡಿದ್ದಕ್ಕಿಂತಲೂ ಹೆಚ್ಚು ಫ್ಯಾನ್ಸ ಬಳಗವು ಹೊರಗೆ ಸಿಕ್ಕಿತ್ತು. ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಶೋತೃಗಳಿಗೆ ಹಾಡಿನ ಸುರಿಮಳೆಯೇ ಮಾಡುತ್ತಾರೆ ಎಂದು ಕೊಂಡಿದ್ದೆವು.
ಆಕೃತಿಕನ್ನಡದ ಹಿಂದಿನ ಸಂಚಿಕೆಯ ಲೇಖನದಲ್ಲಿ ಚಂದನವರ ಬಗ್ಗೆ ನಾನೇ ಹೊಗಳಿ ಬರೆದಿದ್ದೆ. ‘ಟಕಿಲಾ’ ಹಾಡಿನ ನಂತರ ಈ ಹುಡುಗ ಮುಂದೆ ಯಾವ ಹಾಡು ರಿಲೀಸ ಮಾಡುತ್ತಾನೆ ಅಂದು ಕಾದು ಕೂತವರಿಗೆ ನಿರಾಸೆ ಆಗಿರುವದಂತೂ ನಿಜ. ಈಗವರು ಸದ್ದಿಲ್ಲದೇ ‘ಮಾಸ್ಟರ ಡಾನ್ಸ್’ ತೀರ್ಪುಗಾರರ ಖುರ್ಚಿ ಏರಿದ್ದಾರೆ. ಎಲ್ಲೋ ಒಂದು ಕಡೆ ಆ ಕುರ್ಚಿಗೇ ನ್ಯಾಯ ಸಿಕ್ಕಿಲ್ಲ ಎಂಬ ಮಾತುಗಳು ಶುರುವಾಗಿವೆ . ಆ ಡ್ಯಾನ್ಸ ತೀರ್ಪುಗಾರನ ಕುರ್ಚಿಗೆ ವಿನೋದ ರಾಜನಂಥವರು ಆಗಿದ್ದರೆ ಸರಿ ಇತ್ತೇ ಎನ್ನುವ ಪ್ರಶ್ನೆ ಇನ್ನೊಂದು ಕಡೆ.
ತೀರ್ಪುಗಾರನ ಸ್ಥಾನ ಎನ್ನುವುದು ಅತಿ ಉನ್ನತವಾದ, ಸ್ಪರ್ಧೆಗೆ ಗೌರವ ತರುವಂತದ್ದು. ಸ್ಪರ್ಧಿಗಳು ವೇದಿಕೆಯಲ್ಲಿ ತಪ್ಪು ಮಾಡಿದಾಗ ಅವುಗಳನ್ನು ತಿದ್ದಲು ನುರಿತ, ಅನುಭವಿ ತೀರ್ಪುಗಾರರ ಅವಶ್ಯಕತೆ ಇದೆ. ಇತ್ತೀಚೆಗೆ ಕನ್ನಡ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ತೀರ್ಪುಗಾರರಲ್ಲಿಯೇ ನ್ಯೂನ್ಯತೆಗಳು ಎದ್ದು ಕಾಣುತ್ತಿವೆ. ಡ್ಯಾನ್ಸ ರಿಯಾಲಿಟಿ ಶೋ ಗಳಿಗೆ ಡ್ಯಾನ್ಸ ಗಂಧವೇ ಇಲ್ಲದ, ಹಾಡಿನ ರಿಯಾಲಿಟಿ ಶೋ ನಲ್ಲಿ ಹಾಡಿನ ರಾಗ- ತಾಳ ತಿಳಿಯದ ತೀರ್ಪುಗಾರರನ್ನು ನೋಡಿದಾಗ ಅಸಮಾಧಾನ ಆಗುತ್ತದೆ.
ಚಂದನವರನ್ನು ತೀರ್ಪುಗಾರನ ಕುರ್ಚಿಯಲ್ಲಿ ನೋಡಿದಾಗ ಯಾಕೋ ಇರುಸು ಮುರುಸಾಯಿತು. ಅವರನ್ನು ಒಳ್ಳೆ ಗಾಯಕ, ಒಳ್ಳೆ ವ್ಯಕ್ತಿ , ಎಲ್ಲೊ ಒಂದು ಕಡೆ ಹಾಸ್ಯದಲ್ಲಿ ಒಳ್ಳೆಯ ಆಸಕ್ತಿ ಉಳ್ಳವರೆಂದು ತಿಳಿದಿದ್ದೆವು. ಆದರೆ ಇವರಲ್ಲಿ ಡ್ಯಾನ್ಸ್ ಅನುಭವದ ಯಾವ ಲಕ್ಷಣಗಳು ಕಾಣಲಿಲ್ಲ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಮಯೂರಿ, ಶ್ರುತಿ ಹರಿಹರನ್ ಅವರುಗಳ ಜೊತೆ ತೀರ್ಪುಗಾರರಲ್ಲಿ ಇವರು ಒಬ್ಬರಾಗಿದ್ದಾರೆ. ಶೋ ನ ಎರಡು ಕಂತುಗಳನ್ನು ವೀಕ್ಷಿಸಿದಾಗ ಶ್ರುತಿ, ಮಯೂರಿಯವರಲ್ಲಿ ನೃತ್ಯದ ನಂಟು ಕಾಣುತ್ತದೆ. ಆದರೆ ಚಂದನ ಶೋನಲ್ಲಿ ತೀರ್ಪು ನೀಡುವಾಗ ಎಲ್ಲೋ ಒಂದು ಕಡೆ ಗೊಂದಲಗಳು ಹಾಗೂ ಇಬ್ಬರು ತೀರ್ಪುಗಾರರ ನಡುವೆ ಸಿಲುಕಿ ಅಸಹಾಯಕರಂತೆ ಕಾಣುತ್ತಾರೆ.
ಈ ಹಿಂದೆ ನಟಿ ಚಂದ್ರಿಕಾ ಅವರು ಡ್ಯಾನ್ಸ್ ರಿಯಾಲಿಟಿ ಶೋ ನಲ್ಲಿ ತೀರ್ಪುಗಾರರಾಗುವ ಮೂಲಕ ಕನ್ನಡ ಕಿರುತೆರೆಗೆ ವಾಪಸ್ಸಾಗಿದ್ದರು. ನಂತರ ಅವರು ಬಿಗ್ ಬಾಸ್ ಶೋ ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡರು. ಕೊನೆಗೆ ಡ್ಯಾನ್ಸ್ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಯಾಗಿ ಸೋತು ಹೋದರು. ಕರು ಎತ್ತಲ್ಲ ಎಂಬ ಮಾತು ಎಂದೆಂದೂ ಸತ್ಯ. ಕನ್ನಡದಲ್ಲಿ ದಶಕಗಳಿಂದ ದುಡಿಯುತ್ತಿರುವ ಸಾಕಷ್ಟು ನೃತ್ಯ ಗುರುಗಳಿದ್ದಾರೆ ಅಂಥವರಲ್ಲಿ ಯಾರೂ ವಾಹಿನಿಯವರ ಕಣ್ಣಿಗೆ ಬೀಳುವುದಿಲ್ಲವೇ? ಕಾರ್ಯಕ್ರಮದ ಗುಣಮಟ್ಟ ಎಲ್ಲ ರೀತಿ ಇಂದಲೂ ತೂಕದ್ದು ಆಗಿರಬೇಕು ಅಂದರೆ ಅನುಭವಿಗಳನ್ನು ನೋಡಿ ಇಂಥ ಕುರ್ಚಿಗಳಲ್ಲಿ ಕೂಡಿಸಬೇಕು. ಚಂದನ್ ಶೆಟ್ಟಿ ಇನ್ನು ಬೆಳೆಯ ಬೇಕಾದವರು, ಕಲೆಯಬೇಕಾದವರು. ಚಂದನ್ ಶೆಟ್ಟಿ ಅವರೇ ನಯವಾಗಿ ಈ ಸ್ಥಾನವನ್ನು ತಿರಸ್ಕರಿಸಬಹುದಿತ್ತು. ಏನು ಮಾಡುವುದು? ಏನು ಕೊಟ್ಟರೂ ಜನ ನೋಡುತ್ತಾರೆ ಎಂಬ ಹಮ್ಮು ವಾಹಿನಿಯವರಿಗೆ ಇದೆಯಲ್ಲ.
ಅದೇ ತಪ್ಪು ಮತ್ತೆ ಮರುಕಳಿಸದಿರಲಿ ಎನ್ನುವುದು ನನ್ನ ಆಶಯ. ಯಾವುದೊ ವೇದಿಕೆಯಲ್ಲಿ ಸಿಕ್ಕ ಜನಪ್ರಿಯತೆಯನ್ನು, ಇನ್ನೊಂದು ವೇದಿಕೆಯಲ್ಲಿ ಏನ್ ಕ್ಯಾಶ್ ಮಾಡಿಕೊಳ್ಳುವುದು ಸರಿಯಲ್ಲ.
– ವೀಕ್ಷಕಿ