ನಮಗಿದು ಸಾರ್ಥಕ ಭಾವ

ಆಕೃತಿ ಕನ್ನಡ ಮ್ಯಾಗಝಿನ್‌ ನಲ್ಲಿ ನಮ್ಮ ಓದುಗರಾದ ಶ್ರೀಮತಿ ಕಾವ್ಯಾ ದೇವರಾಜ್‌ ಅವರು ಬರೆದ ನೀಳ್ಗತೆ ನಮ್ಮ ನಿರೀಕ್ಷೆ ಮೀರಿ ಓದುಗರ ಗಮನ ಸೆಳೆದಿದೆ. ನೂರಾರು ಜನ ಆಕೃತಿ ಕನ್ನಡ ಮ್ಯಾಗಝಿನ್‌ನ ಓದುಗರು ಕತೆಯನ್ನು ಓದಿ ಪ್ರತಿಕ್ರಿಯಿಸಿದ್ದಾರೆ. ಒಂದು ಕೃತಿಯ ಯಶಸ್ಸಿಗೆ ಇದಕ್ಕಿಂತ ಇನ್ನೇನು ಬೇಕು? ಅಷ್ಟಕ್ಕೂ ಕಾವ್ಯಾರವರು ಮೊದಲ ಬಾರಿ ಕತೆ ಬರೆದಿದ್ದಾರೆ. ಸುಪ್ತ ಪ್ರತಿಭೆಯನ್ನು ಬೆಳಕಿಗೆ ತಂದ ಸಾರ್ಥಕ ಭಾವ ಆಕೃತಿ ಕನ್ನಡಕ್ಕಿದೆ. ತನ್ನ ಮೊದಲ ಕತೆಗೆ ಸಿಕ್ಕ ಇಂಥ ಅಗಾಧ ಬೆಂಬಲಕ್ಕೆ ಶ್ರೀಮತಿ ಕಾವ್ಯಾ ದೇವರಾಜ್‌ ಮೂಕ ವಿಸ್ಮಿತರಾಗಿದ್ದಾರೆ. ಬೆಲೆ ಕಟ್ಟಲಾಗದ ಸಂತೋಷವಿದೆ. ಇಲ್ಲಿ ಕಾವ್ಯಾ ತಮ್ಮ ಈ ಕತೆ ರೂಪಗೊಂಡ ಬಗ್ಗೆ ಮತ್ತು ನಂತರದ ಸಂಗತಿಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. –ಸಂಪಾದಕರು

*****

ಕಾವ್ಯಾ ಹೇಳುವುದು ಹೀಗೆ…

ಆಕೃತಿ ಕನ್ನಡ ಮ್ಯಾಗಝಿನ್‌ ಎಲ್ಲಾ ಓದುಗರಿಗೆ ತುಂಬು ಮನದ ಧನ್ಯವಾದಗಳು. ಪ್ರಿಯರೇ, ನಿರೀಕ್ಷೆ ಇಟ್ಟುಕೊಂಡು ಮಾಡುವ ಕೆಲಸಗಳಿಗಿಂತ ನಿರೀಕ್ಷೆ ಇಲ್ಲದೆ ಮಾಡುವ ಕಾರ್ಯಗಳು ಅದ್ಭುತ ಯಶಸ್ಸು ಗಳಿಸುತ್ತವೆ ಎಂಬುದಕ್ಕೆ ನಾನು ಬರೆದ ‘ಅನಾಮಿಕಳ ಆತ್ಮ ವೃತ್ತಾಂತ’ ಕತೆಯೇ ಒಂದು ಒಳ್ಳೆಯ ಉದಾಹರಣೆ. ನೀವು ನನ್ನ ಮೊದಲ ಕತೆಗೆ ಕೊಟ್ಟ ಪ್ರತಿಕ್ರಿಯೆಗಳಿಗೆ ನಾನು ತುಂಬ ಆಭಾರಿಯಾಗಿದ್ದೇನೆ. ನಾನು ಮತ್ತೆ ಈ ಪುಟ್ಟ ಲೇಖನ ಬರೆಯುವುದಕ್ಕೆ ಎರಡು ಕಾರಣಗಳಿವೆ. ಒಂದು ಈ ಕತೆ ಹುಟ್ಟಿದ ಸಂದರ್ಭ ಮತ್ತು ಈ ಕತೆಯಲ್ಲಿ ಬಿಟ್ಟ ಮತ್ತು ಅಗೋಚರವಾದ ಒಂದು ಪಾತ್ರದ ಬಗ್ಗೆ ಹೇಳದಿದ್ದರೆ ನನಗೆ ನಾನೇ ಮೋಸ ಮಾಡಿಕೊಂಡಂತೆ. ಇದು ಸತ್ಯ ಕತೆಯಾದದ್ದರಿಂದ ಹೇಳಲೇ ಬೇಕು. ಅದಕ್ಕಾಗಿ ಸಂಪಾದಕರ ಕ್ಷಮೆ ಕೋರಿ ಈ ಲೇಖನ ಪ್ರಕಟಿಸಲು ಕೋರಿದ್ದೇನೆ.

ಎಷ್ಟೋ ವರ್ಷಗಳಿಂದ ಬಚ್ಚಿಟ್ಟುಕೊಂಡಿದ್ದ ಭಾವನೆಗಳನ್ನು ಆಕೃತಿ ಮೂಲಕ ನಿಮ್ಮ ಮುಂದೆ ತಂದಿಟ್ಟದ್ದು ಒಂದು ಅನಿರೀಕ್ಷಿತ ಸಂಗತಿ. ಅದನ್ನೋದಿದ ನೀವು ಕೊಟ್ಟ ಪ್ರಶಂಸೆ, ನನ್ನ ಭಾವನೆಗೆ ಸ್ಪಂದಿಸಿದ ರೀತಿಗೆ ಮನಸ್ಸು ಹಗುರವಾಗಿದೆ. ಕನ್ನಡದಲ್ಲಿ ನನಗಿಂತ ಮೊದಲು ಅದೆಷ್ಟೋ ಹಿರಿಯರು ಕತೆಗಳನ್ನು ಬರೆದಿದ್ದಾರೆ. ಅವರ ಸಾಧನೆ ಗಮನಿಸಿದರೆ ನನ್ನದು ಏನೂ ಅಲ್ಲ. ನಿಮ್ಮ ಮೆಚ್ಚುಗೆ ನನಗೆ ಮುಂದಿನ ಮೆಟ್ಟಲೇರಲು ಆತ್ಮ ಸ್ಥೈರ್ಯ ಮೂಡಿಸಿದೆ ಎಂದು ವಿನಮ್ರಳಾಗಿ ಹೇಳುತ್ತೇನೆ. ನನಗೆ ಅಚ್ಚರಿಯಾಗುತ್ತದೆ. ಈ ಕತೆಯನ್ನು ಓದಿದ ಅನೇಕರು . ಇದು ತಮ್ಮ ಜೀವನದ ಕತೆಯೇನೋ ಎಂದು ಸ್ಪಂದಿಸಿದ್ದಾರೆ. ಕಣ್ಣೀರೂ ಹಾಕಿದ್ದಾರೆ. ಕೆಲವರು ನನ್ನ ನೋವಿಗೂ ಸ್ಪಂದಿಸಿ ಕರೆ ಮಾಡಿದ್ದಾರೆ. ಮೆಸೇಜುಗಳನ್ನು ಕಳಿಸಿದ್ದಾರೆ. ತಮ್ಮ ಭಾವನೆಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಇಲ್ಲಿಯವರೆಗೆ ನನ್ನ ನೋವುಗಳು ನನ್ನ ಮತ್ತು ನನ್ನ ಕುಂಬಕ್ಕೆ ಸೀಮಿತ ಎಂದು ಭಾವಿಸಿದ್ದೆ. ಆದರೆ ಈ ಕತೆಯ ಮುಖಾಂತರ ನನಗಿಂತಲೂ ಹೆಚ್ಚಿನ ನೋವಿರುವವರು ಇನ್ನೂ ಆಚೆ ಇದ್ದಾರೆ ಅನಿಸಿತು. ನೋವಿನ ನೋವು, ನೋವಿದ್ದವರಿಗಷ್ಟೇ ಗೊತ್ತು. ನಾವೆಲ್ಲ ಸಮಾನ ನೋವಿನವರು. ಸಮಾನ ಮನಸ್ಕಿನವರು.

ಇದರ ನಡುವೆಯೂ ಕೆಲವರು ಈ ಕತೆಯನ್ನು ಓದಿ ತಮ್ಮ ಉದ್ದೇಶಕ್ಕೆ ಬಳಸಿಕೊಳ್ಳಲೂ ಯತ್ನಿಸಿದರು ಎಂದು ವಿಷಾದದಿಂದ ಹೇಳಬೇಕಾಗಿದೆ. ಇದರಿಂದ ಒಂದು ಮುಖದ ಹಿಂದಿನ ಹಲವಾರು ಮುಖವಾಡಗಳ ಪರಿಚಯವೂ ಆಯಿತು.

ನಾನು ಈ ಕತೆಯನ್ನು ಬರೆಯುವಾಗ ಇದು ಓದುಗರ ಮನಸ್ಸಿನ ಮೇಲೆ ಇಷ್ಟೊಂದು ಪರಿಣಾಮ ಬೀರುತ್ತದೆ ಎಂದು ಅನಿಸಿರಲಿಲ್ಲ. ಕತೆ ಓದುವಾಗ ಕೆಲವರು ಬಿಕ್ಕಿ ಅತ್ತದ್ದೂ ಇದೆ. ಮತ್ತೆ ಕೆಲವರು ಬಿಕ್ಕಿ ಅಳತ್ತಿರುವ ಸೆಲ್ಫೀ ತಗೆದು ಕಳಿಸಿದ್ದಾರೆ. ಅದು ನನಗೆ ನಗು- ಅಳು ಎರಡನ್ನೂ ಒಟ್ಟಿಗೇ ತಂದಿತು. ಇವರಿಗೆ ನಾನು ಹೇಗೆ ಉತ್ತರ ಕೊಡಬೇಕೆಂದು ತಿಳಿಯದೆ ಮೂಕಳಾದೆ. ಮತ್ತೆ ಕೆಲವರು ನನಗೆ ಅಪರಿಚಿತರಿದ್ದರೂ ನನಗೆ ಸಮಾಧಾನ ಮತ್ತು ಕತೆ ಬರವಣಿಗೆಗೆ ಮೆಚ್ಚಿ ಕಳಿಸಿದ ಸಂದೇಶಗಳಿಗೆ ನಾನು ಋಣಿಯಾಗಿದ್ದೇನೆ. ಧಾರವಾಡದ ವೆಂಕಟೇಶ ಬೀಡಿ, ಹಾವೇರಿಯ ರಾಘವೇಂದ್ರ ಕಬಾಡಿಯವರು, ಬೆಂಗಳೂರಿನ ದೀಪೂ ಹೂಲಿ, ಉಷಾ ಹೆಚ್‌. ಎಸ್‌., ರವಿ, ಸಂಜಯ್‌ ಮಂಜುನಾಥ್‌, ಬೆಳಗಾವಿಯ ಯು.ರು.ಪಾಟೀಲ, ಮೆಚ್ಚಿ ಬರೆದಿದ್ದಾರೆ. ನನ್ನ ಅತ್ತೆಯವರಾದ ಸರ್ವಮಂಗಳಾ ರವರ ಉತ್ತೇಜನವೂ ಕಾರಣ. ನನ್ನ ಕುಟುಂಬ ವರ್ಗದ ಸಲಹೆ, ಪ್ರೋತ್ಸಾಹಗಳು ಬರವಣಿಗೆಯ ಮೆಟ್ಟಿಲು ಮೇಲೆ ನಿಲ್ಲಲು ಕಾರಣವಾಗಿವೆ.

ನಿಮಗೆ ತಿಳಿದಿರುವ ಹಾಗೆ ಇದಕ್ಕೂ ಮೊದಲು ನಾನು ಯಾವುದೇ ಕತೆ- ಲೇಖನಗಳನ್ನು ಬರೆದವಳಲ್ಲ. ಬರೆಯುವ ಯೋಚನೆ ಇರಲಿ ಅದರ ಬಗ್ಗೆ ಯಾವ ಗಂಧ ಗಾಳಿಯೂ ನನಗೆ ಗೊತ್ತಿರಲಿಲ್ಲ. ಆದರೆ ನಾನು ಕತೆ ಬರೆಯಬಲ್ಲೆ ಎಂದು ನನ್ನಲ್ಲಿ ಆತ್ಮ ವಿಶ್ವಾಸ ಕೊಟ್ಟಾಕೆ ನನ್ನ ಸ್ನೇಹಿತೆ ಶಾಲಿನಿ ಪ್ರದೀಪ್‌. ಆಕೆ ಎಂ.ಎ. ಜರ್ನಾಲಿಜಂ ಮಾಡಿದಾಕೆ. ಸಾಹಿತ್ಯದ ಬಗ್ಗೆ ಒಲವು ಇದ್ದಾಕೆ. ಬರವಣಿಗೆ ನನ್ನಿಂದ ಸಾಧ್ಯ ಎಂಬ ಆಕೆ ಹೇಳಿ ಏನಾದರೂ ಬರೆ ಎಂದು ಪ್ರೇರೇಪಿಸಿದಳು. ನಾವಿಬ್ಬರೂ ಕೆಲವು ವರ್ಷಗಳಿಂದ ಸ್ನೇಹಿತೆಯರಾಗಿದ್ದೇವೆ. ನಮ್ಮಿಬ್ಬರ ಮಾತಿನಲ್ಲಿ ಪರಸ್ಪರ ಕುಟುಂಬಗಳ ಬಗ್ಗೆ ಹೆಚ್ಚು ಮಾತು ಬರದಿದ್ದರೂ ಆಗಾಗ ನಾನು ನನ್ನ ತಂದೆ ತಾಯಿಯರ ಬಗ್ಗೆ ಪ್ರಾಸ್ತಾಪಿಸುತ್ತಿದ್ದೆ. ಮಾತಿನಲ್ಲಿ ನನ್ನ ತಂಗಿಯೂ ಬರುತ್ತಿದ್ದಳು. ಆಗ ನನ್ನ ತಂದೆಯ ವಾತ್ಸಲ್ಯ ಗುಣ ಕೇಳಿದ ಶಾಲಿನಿ ಹೇ! ಅವರ ಬಗ್ಗೆ ಏನಾದರೂ ಬರೀಯೆ ಎಂದಳು. ನನಗೆ ಬರವಣಿಗೆ ಗೊತ್ತಿಲ್ಲ ಅಂದರೂ ಬಿಡದೆ ನೀನು ಬರೀದಿದ್ರೆ ನಾನು ಬರೀತಿನಿ ನೋಡು ಅಂದಳು. ನನಗೆ ಆಶ್ಚರ್ಯವಾಯಿತು. ನನ್ನ ತಂದೆಯ ಆಗಾಧ ಪ್ರೀತಿ-ವಾತ್ಯಲ್ಯಗಳನ್ನುಂಡ ನಾನೇ ಬರೆಯುತ್ತೇನೆಂದು ಹೇಳಿಬಿಟ್ಟೆ. ಅಲ್ಲಿಗೆ ಸುರುವಾಯಿತು ನೋಡಿ ಲೇಖನ. ಊರಲ್ಲಿ ಅಪ್ಪನಿಗೆ ಬೇರೆಯವರು ಕೊಡುತ್ತಿದ್ದ ಗೌರವ, ಪ್ರೀತಿ ಎಲ್ಲ ಕಣ್ಣುಂದೆ ಕಟ್ಟಿದವು. ಅದರ ಜತೆಗೆ ಅಮ್ಮನ ಮೇಲೆ ಅವರಿಟ್ಟಿದ್ದ ಪ್ರೀತಿಗೆ ಮೇರೆಯೇ ಇರಲಿಲ್ಲ. ಅಮ್ಮ ಅವರ ಪ್ರಾಣವೇ ಆಗಿದ್ದಳು. ಎಲ್ಲವನ್ನೂ ಕಣ್ಮಾರೆ ಕಂಡಿದ್ದ ನಾನು ಬರೆಯಲು ಸುರು ಮಾಡಿದೆ. ಶಾಲಿನಿಗೆ ಹೇಳಿದಾಗ ಸಂತಸಪಟ್ಟಳು. ಆದರೆ ನನಗೆ ಕತೆ ಬರೆದೂ ಗೊತ್ತಿಲ್ಲ. ಲೇಖನ ಬರೆದೂ ಗೊತ್ತಿಲ್ಲ. ನಾನು ಬರೆಯತೊಡಗಿದ್ದು ಲೇಖನವೋ, ಇಲ್ಲಾ ಕತೆಯೋ ಒಂದೂ ಗೊತ್ತಾಗಲಿಲ್ಲ. ಪತ್ರಕರ್ತೆ ಶಾಲಿನಿಗೆ ತೋರಿಸಿದರೆ ನಕ್ಕು ಬಿಡುತ್ತಾಳೆ ಅಂದುಕೊಂಡೆ. ಹೇಳಿ-ಕೇಳಿ ಶಾಲಿನಿ ಪತ್ರಿಕೋದ್ಯಮದಲ್ಲಿ ಪದವಿ ಪಡೆದವಳು. ನನ್ನನ್ನು ಸುಮ್ಮನೇ ಬಿಡದೆ ನನ್ನ ಬರವಣಿಗೆಯ ಪ್ರಗತಿಯ ಎಲ್ಲಿಗೆ ಬಂತು ಎಂದು ನೋಡಲು ತಾನೇ ಬೆಂಬತ್ತಿದಳು. ನಾನು ಸ್ನೇಹಿತೆಯ ಭಯಕ್ಕಾಗಿ ಹಾಗೂ-ಹೀಗೂ ಬರೆದು ಆಕೆಯ ಕೈಗೆ ಕೊಟ್ಟು ಉಸ್ಸಪ್ಪ! ಅಂದೆ.

ಆದರೆ ನನಗೆ ಗೊತ್ತಿರಲಿಲ್ಲ. ಶಾಲಿನಯ ತಂದೆ ಒಬ್ಬ ದೊಡ್ಡ ಸಾಹಿತಿ ಎಂಬುದು. ಟಿವಿ ಧಾರಾವಾಹಿಗಳ ಸಂಭಾಷಣಾಕಾರರೂ ಅಂತ ಗೊತ್ತಿರಲಿಲ್ಲ. ಇದುವರೆಗೆ ಅವರು ಹದಿನೇಳು ಮೆಗಾ ಧಾರಾವಾಹಿಗಳ ಸಂಭಾಷಣೆಗಾರರು ಎಂದು ತಿಳಿದಾಗ ಅಚ್ಚರಿಪಟ್ಟೆ. ಶಾಲಿನಿ ನನ್ನ ಈ ಲೇಖನವನ್ನು ತನ್ನ ತಂದೆಯ ಕೈಗೆ ಓದಲುಕೊಟ್ಟಿದ್ದಳು. ಅಷ್ಟು ಹೆಸರು ಮಾಡಿದ ಸಾಹಿತಿಯಾದರೂ ಸ್ವಲ್ಪವೂ ಅಹಂ ಇಲ್ಲದ ಅವರು ನನ್ನಂಥ ಹೊಸಬಳ ಲೇಖನವನ್ನು ಬಿಡದೆ ಒಂದೇ ಮೆಟ್ಟಿನಲ್ಲಿ ಕೂತು ಒದಿದರಂತೆ. ನಂತರ ಅವರೆ ಸಂಪಾದಕರಾಗಿದ್ದ ಆಕೃತಿ ಕನ್ನಡ ಡಾಟ್‌ ಕಾಮ್‌ ಪತ್ರಿಕೆಯಲ್ಲಿ ಪ್ರಕಟಿಸುತ್ತೇನೆಂದು ಹೇಳಿಯೇ ಬಿಟ್ಟರಂತೆ. ನನಗೋ ಅಚ್ಚರಿ ಮತ್ತು ಸಂತಸ ಒಟ್ಟಿಗೆ. ಮತ್ತು ಅವರು ತಡಮಾಡದೆ ನನ್ನ ಕತೆಗೆ ಮೆರುಗು ಕೊಟ್ಟು, ತಪ್ಪುಗಳನ್ನು ತಿದ್ದಿ-ತೀಡಿ, ಅದಕ್ಕೊಂದು ಹೊಸ ಆಯಾಮ ಕೊಟ್ಟು ತಮ್ಮ ವೆಬ್‌ ಮ್ಯಾಗಝಿನ್ ನಲ್ಲಿ ಪ್ರಕಾಶಿಸಿಯೇ ಬಿಟ್ಟರು.

ಅವರೇ ನೂರಾರು ಕತೆಗಳನ್ನು ಬರೆದಿರುವ, ಜನಪ್ರಿಯ ಕಾದಂಬರಿಗಳನ್ನು ಬರೆದಿರುವ, ಪ್ರಸಿದ್ಧ ನಾಟಕಗಳನ್ನು ಬರೆದಿರುವ, ಟಿವಿ ಧಾರಾವಾಹಿಗಳ ಸಂಭಾಷಣಾಕಾರರೂ ಆಗಿರುವ ಶ್ರೀ ಹೂಲಿ ಶೇಖರ್‌ ಅವರು. ಅವರ ಈ ಹೊಸಬರನ್ನು ಬೆಳೆಸುವ ಸಾಹಿತ್ಯ ಪ್ರೀತಿಗೆ ನಾನು ಋಣಿಯಾಗಿದ್ದೇನೆ.

ನನ್ನ ಬರವಣಿಗೆ ಸಮಯದಲ್ಲಿ ನನಗೆ ಬೆಂಬಲವಾಗಿ ನಿಂತ ನನ್ನ ಪತಿ ದೇವರಾಜ್‌ ಅವರಿಗೆ, ನನ್ನ ಕುಟುಂಬದವರಿಗೆ, ಮತ್ತು ಸಹೃದಯಿ ಓದುಗರಿಗೆ ನನ್ನ ಧನ್ಯವಾದಗಳು.

ಕತೆಯಲ್ಲಿ ಬಿಟ್ಟು ಹೋದ ಆ ಒಂದು ಪಾತ್ರ

ಬರವಣಿಗೆ ಹಂತದಲ್ಲಿ ಎಂಥ ತಪ್ಪು ಮಾಡಿಬಿಟ್ಟೆ ಗೊತ್ತಾ. ಇದು ಸತ್ಯ ಕತೆ ಅಂತ ಗೊತ್ತಿದ್ದರೂ ಇದರಲ್ಲಿ ಬರುವ ಮತ್ತು ಪ್ರಮುಖವಾಗಿ ನಿಲ್ಲುವ ಒಂದು ಪಾತ್ರಕ್ಕೆ ಸರಿಯಾಗಿ ನ್ಯಾಯವನ್ನೇ ಒದಗಿಸಲಿಲ್ಲ. ಅದು ನನ್ನ ತಂಗಿಯ ಪಾತ್ರ. ನನ್ನ ಪ್ರೀತಿಯ ತುಂಟ ತಂಗಿ ಕಲ್ಪ. ನಾನು ಅಪ್ಪನ ಮೆಚ್ಚಿನವಳಾದರೆ ಕಲ್ಪ ಅಮ್ಮನ ಮೆಚ್ಚಿನ ಮಗಳಾಗಿದ್ದಳು. ಅದರಿಂದ ಯಾವಾಗಲೂ ಆಕೆ ಅಮ್ಮನ ಬಳಿಯೇ ಇರುತ್ತಿದ್ದಳು. ಅಕ್ಕ-ತಂಗಿಯರ ನಡುವೆ ಜಗಳ. ಕಚ್ಚಾಟ ಇಲ್ಲದಿರುತ್ತಿರಲಿಲ್ಲ. ಆದರೆ ನಮ್ಮಿಬ್ಬರ ಅನೋನ್ಯತೆಗೆ ಏನೂ ತೊಂದರೆಯಿರಲಿಲ್ಲ.

ನನ್ನ ತುಂಟ ತಂಗಿ ಬೆಳೆಯುತ್ತಾ, ನನಗೆ ಸ್ನೇಹಿತೆಯೂ ಆದಳು. ಕೆಲವು ಸಂದರ್ಭದಲ್ಲಿ ಮಾರ್ಗದರ್ಶಕಳೂ ಆದಳು. ನಾನು ಮದುವೆಯಾಗಿ ಬೆಂಗಳೂರಿಗೆ ಬಂದ ಮೇಲೆ ಅಮ್ಮನನ್ನು ನೋಡಿಕೊಳ್ಳಲೆಂದೇ ಕಾಲೇಜು ವ್ಯಾಸಂಗವನ್ನೂ ಬಿಟ್ಟಳು. ಅಮ್ಮನ ಮುದ್ದಿನ ಮಗಳು ಅಮ್ಮನಿಗೆ ತಾಯಿಯಾಗಿ ನಿಂತಳು. ಅಮ್ಮನ ಆರೈಕೆಯಲ್ಲಿ ಅಪ್ಪನ ನಂತರ ಅವಳದೇ ಹೆಚ್ಚಿನ ಪಾಲಿದೆ. ನನಗೆ ಅವಳಿ ಮಕ್ಕಳಾದ ನಂತರ ಅಮ್ಮ ಹಾಸಿಗೆ ಹಿಡಿದ ಕಾರಣ ನಮ್ಮನ್ನು ನೋಡುವ ಜವಾಬ್ದಾರಿ ಆಕೆಯ ಹೆಗಲಿಗೆ ಬಿತ್ತು. ಒಂದು ಮಗುವನನ್ನು ನೋಡಿಕೊಳ್ಳಲೇ ಹೆಣಗುವ ಈ ಕಾಲದಲ್ಲಿ ಹಾಸಿಗೆ ಹಿಡಿದ ಅಮ್ಮ ಮತ್ತು ನನ್ನೆರಡು ಮಕ್ಕಳನ್ನು ಆಕೆ ನೋಡಿಕೊಂಡ ಪರಿ ಇನ್ನೂ ನನ್ನ ಕಣ್ಣ ಮುಂದಿದೆ. ಕಲ್ಪ ತೋರಿದ ಆ ಪ್ರೀತಿ, ವಾತ್ಸಲ್ಯ ಯಾವ ಜನ್ಮದ ಋಣವೋ. ಆಕೆ ತನ್ನ ಕನಸು, ಕಾಲೇಜು ಎಲ್ಲವನ್ನೂ ಬದಿಗೊತ್ತಿ ನನ್ನ ಮಕ್ಕಳನ್ನು ನೋಡಿಕೊಂಡಳು. ನನ್ನ ಮಕ್ಕಳು ಇಂದಿಗೂ ಚಿಕ್ಕಮ್ಮನನ್ನೇ ಹೆಚ್ಚು ನೆನಪಿಸಿಕೊಳ್ಳುತ್ತವೆ.

ಇನ್ನೊಂದು ಮಾತಿದೆ. ಅದನ್ನು ಹೇಳಿದರೆ ಕಣ್ಣಲ್ಲಿಯ ನೀರು ತನ್ನಿಂದ ತಾನೇ ಉರುಳುತ್ತವೆ. ನಾನು ಬರೆದ ಕತೆ ಅಪ್ಪ – ಅಮ್ಮನದು. ಕತೆಯನ್ನು ಓದಲು ಅಮ್ಮ ಈ ಜಗತ್ತಿನಲ್ಲಿಲ್ಲ. ಆದರೆ ಅಪ್ಪ?

ಅಪ್ಪನಿಗೆ ನಾನು ಬರೆದ ಕತೆಯ ಬಗ್ಗೆ ಹೇಳುವಂತಿಲ್ಲ. ಈಗಾಗಲೇ ಅಮ್ಮನನ್ನು ಕಳೆದುಕೊಂಡ ದೊಡ್ಡ ನೋವಿನಲ್ಲಿರುವ ಅವರಿಗೆ ಈ ಕತೆಯನ್ನು ಓದಲು ಕೊಟ್ಟರೆ ಏನಾಗುತ್ತದೋ ಎಂಬ ಆತಂಕ ನನ್ನದು. ಹಾಗಾಗಿ ನನ್ನ ಕತೆಯನ್ನು ಅವರಿಗೆ ಓದಲು ಕೊಟ್ಟಿಲ್ಲ. ಇದರ ಬಗ್ಗೆ ಅವರಿಗೆ ಗೊತ್ತಾಗಬಾರದು ಎಂದು ಎಚ್ಚರಿಕೆ ವಹಿಸಿದ್ದೇವೆ. ಎಂಥ ಸಂಕಟ ನನ್ನದು. ಒಂದು ಕಡೆ ಬರೆದ ಕತೆ ಓದುಗರ ಮೆಚ್ಚುಗೆ ಗಳಿಸಿತು. ಇನ್ನೊಂದು ಕಡೆ ಅಪ್ಪನಿಗೆ ಇದರ ಬಗ್ಗೆ ಹೇಳಲೂ ಆಗದ ದುರಂತ ನೋವು ನನ್ನದು. ಇದನ್ನು ತೋರಿಸಿ ನನ್ನ ಪ್ರೀತಿಯ ಅಪ್ಪನಿಗೆ ಮತ್ತೆ ದುಃಖ ಕೊಡಲಾರೆ. ಈ ಕಥಾ ಪ್ರಸಂಗ ಮತ್ತು ಆಕೃತಿ ಕನ್ನಡ ಡಾಟ್‌ ಕಾಮ್‌ ನನ್ನ ಜೀವನದಲ್ಲಿ ಮರೆಯಲಾರದ ಹಲವು ಸಂಗತಿಗಳನ್ನು ಕೊಟ್ಟಿವೆ.

#ಸಣಣಕತ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW