ಪ್ರವಾಸ ಕಥನ : ಶಾಲಿನಿ ಪ್ರದೀಪ್
ಅಕ್ಕನ ಮನೆ ಅಪಾರ್ಟ್ಮೆಂಟ್ ನ ೨೧ನೇಯ ಮಹಡಿಯಲ್ಲಿದ್ದರಿಂದ
ಅಲ್ಲಿನ ಸೂರ್ಯೋಧಯ ಇನ್ನೊಂದು ರೀತಿಯ ಅನುಭವ ನೀಡಿತು. ಮಂಜಿನಂತೆ ಕಾಣುವ ದಟ್ಟವಾದ ಮಾಲಿನ್ಯಭರಿತವಾದ ಹೊಗೆಯಿಂದ ಅಲ್ಲಿನ ಸೂರ್ಯೋಧಯವನ್ನು ಕಾಣುವುದೇ ಕಷ್ಟ. ವಾಯುಮಾಲಿನ್ಯ ಹೆಚ್ಚಿದ್ದಾಗವಂತೂ ಸೂರ್ಯ ಕಾಣುವುದೇ ಬೆಳಗ್ಗಿನ ೧೦ ಗಂಟೆಯ ನಂತರ. ಅಲ್ಲಿನ ಮಾಲಿನ್ಯದ ಭಯಕ್ಕೆ ಬಾಯಿ, ಮೂಗು ಮುಚ್ಚುವಂತೆ ಮಾಸ್ಕ ಹಾಕಿಕೊಂಡು ಓಡಾಡುವ ಜನರನ್ನು ನೋಡಿ. ಬೆಂಗಳೂರಿನಲ್ಲಿರುವ ನಾವು ಎಷ್ಟು ಪುಣ್ಯವಂತರಲ್ಲ ಎಂದು ದೇವರನೊಮ್ಮೆ ನೆನಸಿಕೊಂಡೆ.
ಆ ಬಿಸಿಲಿಗೆ ಹೊರಗೆ ಹೋಗಲು ಮನಸ್ಸಿರದಿದ್ದರು ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲೇಬೇಕೆನ್ನುವ ಹಂಬಲಕ್ಕೆ ದೆಹಲಿಯ ಸುತ್ತಮುತ್ತಲಿರುವ ಕೆಂಪುಕೋಟೆ, ಕುತುಬ್ ಭಿನಾರ ಸೇರಿದಂತೆಹಲವಾರು ಸ್ಥಳಗಳನ್ನು ನೋಡಿಕೊಂಡು ಬಂದೆವು. ಅಲ್ಲಿನ ಐತಿಹಾಸಿಕ ಸ್ಥಳಗಳು ಮೈ ರೋಮಾಂಚನಗೊಳಿಸಿದರೆ, ಇನ್ನೊಂದೆಡೆ ಅಲ್ಲಿನ ಜನರ ಬದುಕಿನ ಬವಣೆ ಮನಕಲುಕಿತು. ಬೆಂಗಳೂರಿನಲ್ಲಿ ಬಡವರೆಂದರೆ ಮನೆಯ ಕೆಲಸದರು,ಕಸ ಒಯ್ಯುವರು ಎಂದಷ್ಟೇ ನಾವು ಭಾವಿಸಿದ್ದೇವೆ. ಒಮ್ಮೆ ದೆಹಲಿಯಲ್ಲಿನ ಮನೆ ಕೆಲಸದವರನ್ನು, ಸಣ್ಣ-ಪುಟ್ಟ ಕೆಲಸ ಮಾಡುವವರ ಬದುಕನ್ನು ಒಂದು ಸಾರಿ ಕಣ್ಣಾಡಿಸಿದರೆ ಬೆಂಗಳೂರಿನಲ್ಲಿ ಬಡವರು ಇದ್ದಾರೆಯೇ?ಎನ್ನುವ ಪ್ರಶ್ನೆ ಕಾಡುತ್ತದೆ. ದೆಹಲಿಯಲ್ಲಿಇರುವುದು ಕೇವಲ ಬಡವರಲ್ಲ ಕಡುಬಡವರು. ಹರಿದ ಬಟ್ಟೆ, ಕೆದರಿದ ಕೂದಲು, ಕಾಲಿಗೆ ಚಪ್ಪಲಿಗಳಿಲ್ಲದೆ ತನ್ನ ತೋಳಬಲದಲ್ಲಿ ಹಿಂದೆ ಕೂತ ವ್ಯಕ್ತಿಯನ್ನು ಆತ ಹೇಳಿದ ಸ್ಥಳಕ್ಕೆ ಕರೆದೊಯ್ಯುವ ರಿಕ್ಷಾವಾಲಾ,ಡೆಂಗ್ಯೂ ಭಯವಿಲ್ಲದೆ ದೊಡ್ಡ ಮೋರಿಗಳ ಪಕ್ಕದಲ್ಲಿ ಕೂತು ಬಟ್ಟೆ ಹೊಲೆಯುವ ವ್ಯಕ್ತಿ, ಮರಕ್ಕೆ ಕನ್ನಡಿ ನೇತುಹಾಕಿಕೊಂಡು ಒಂದು ಕುರ್ಚಿ ಇಟ್ಟುಕೊಂಡು ಖಿರಾಕಿಗಳಿಗಾಗಿ ಕಾಯುವ ಹೇರ್ ಕಟಿಂಗ್ ಮಾಡುವ ವ್ಯಕ್ತಿಗಳ ಬದುಕನ್ನು ನೋಡಿದರೆ ಮನಸ್ಸು ಕರಗುತ್ತದೆ. ಜೊತೆಗೆ ಚಳಿಯೆನ್ನದೆ,ಬಿಸಿಲೆನ್ನದೆ ಕಷ್ಟ ಪಟ್ಟು ದುಡಿಯುವ ಆ ಕೈಗಳಿಗೆ ಶಾಭಾಸ್ ಹೇಳಬೇಕೆನ್ನಿಸುತ್ತದೆ.
ದೆಹಲಿಯಲ್ಲಿ ಆದ ಭೂಕಂಪದ ಅನುಭವದ ಬಗ್ಗೆ ನಿಮ್ಮ ಮುಂದೆ ಹೇಳಲೇಬೇಕು.ಅಲ್ಲಿ ಬೇಸಿಗೆಯಲ್ಲಿ ಭೂಕಂಪವು ಸರ್ವೇ ಸಾಮಾನ್ಯವೆಂದು ಅಲ್ಲಿಯ ಜನ ಹೇಳುತ್ತಾರೆ. ಆದರೆ ಬೆಂಗಳೂರಿನಲ್ಲಿ ಹಾಯಾಗಿದ್ದ ನಮ್ಮಂತವರಿಗೆ ಭೂಕಂಪ ಹೆಸರು ಕೇಳೇ ಮೈ ನಡುಗುತ್ತದೆ. ಅಂಥದರಲ್ಲಿ ಭೂಕಂಪದ ಅನುಭವ ಪಡೆಯುವುದೆಂದರೆ ಹೇಗಾಗಿರುವುದು ಬೇಡ ನೀವೇ ಯೋಚಿಸಿ. ಬೆಳಗ್ಗೆ ೧೦ ಗಂಟೆಗೆ ಅಕ್ಕನ ಅಪಾರ್ಟ್ಮೆಂಟ್ ನಲ್ಲಿದ್ದೆವು. ಅಪಾರ್ಟ್ಮೆಂಟ್ ನಡುಗಿದಂತಾಯಿತು. ಮೊದಲ ಬಾರಿಗೆ ಆದಾಗ ‘ಒಹ್ ಭ್ರಮೆ…’ ಎಂದುಕೊಂಡೆವು. ಸ್ನಾನಕ್ಕೆಂದು ಬಾತ್ ರೂಮ್ ಬಾಗಿಲ ಕೊಂಡಿ ಆಗತಾನೆ ಹಾಕಿದಷ್ಟೇ . ಅಕ್ಕ ಬಾಗಿಲು ಮುರಿಯುವಂತೆ ಬಾಗಿಲನ್ನು ಬಡೆದು ಭೂಕಂಪ ಆಗ್ತಿದೆ. ಬೇಗ ಹೊರಗೆ ಬಾ ಎನ್ನುವುದೇ ತಡ ಸಧ್ಯ ಬಟ್ಟೆ ತಗೆದಿರಲಿಲ್ಲ. ಎದ್ದೋ-ಬಿದ್ದೋ ಬಾಗಿಲು ತಗೆದು ಮಕ್ಕಳನ್ನೆಲ್ಲಾ ಎಳೆದುಕೊಂಡು ೨೧ ಮಹಡಿಯಿಂದ ಮೆಟ್ಟಿಲಲ್ಲೆ ಇಳಿದು ಹೊರಗೆ ಬಂದು ಉಸಿರು ಹಾಕಿದ್ದೆ ಹಾಕಿದ್ದು.ಮನುಷ್ಯ ತನ್ನ ಜೀವದ ಮೇಲೆ ಎಷ್ಟು ಪ್ರೀತಿ ಇಟ್ಟುಕೊಂಡಿರುತ್ತಾನೆ ಎಂದು ಅಂದು ತಿಳಿಯಿತು. ಭೂಕಂಪ ಸಂಭವಿಸಿದರೆ ಸುತ್ತಲೂ ಸರ್ವನಾಶವಾಗಲು ಕೇವಲ ಒಂದೇ ಸೆಕೆಂಡ್ ಸಾಕು. ಆದರೆ ನಾವುಗಳು ೨೧ನೆಯ ಮಹಡಿಯಿಂದ ಇಳಿದು ನಮ್ಮ ಜೀವ ಉಳಿಸಿಕೊಂಡವಲ್ಲ ಎಂದು ಅಂದು ಹಿಗ್ಗಿದೆವು ಆದರೆ ಅದನ್ನು ಇಂದು ನೆನಸಿಕೊಂಡರೆ ನಮ್ಮ ದಡ್ಡತನಕ್ಕೆ ಈಗ ನಗು ಬರುತ್ತದೆ.
ಭೂಕಂಪ ಸಂಭವಿಸಿದ ದಿನ ರಾತ್ರಿಯಾದರೂ ಅಪಾರ್ಟ್ಮೆಂಟ್ ಒಳಗೆ ಹೋಗಲು ಧೈರ್ಯವೇ ಸಾಲಲಿಲ್ಲ.ಅಷ್ಟೊಂದು ಭಯ ನಮ್ಮನ್ನಾವರಿಸಿಬಿಟ್ಟಿತು. ನಮ್ಮ ಹೊಟ್ಟೆಯ ಪರಿವೇ ಇರಲಿಲ್ಲ. ಆದರೆ ನಮ್ಮ ಮಕ್ಕಳ ಹೊಟ್ಟೆ ನೋಡಬೇಕಲ್ಲ. ಯಾರೋ ಅಪರಿಚಿತರು ಭೂಕಂಪ ನಿಂತಿದೆ ಎಂದು ಧೈರ್ಯ ತುಂಬಿದ ಮೇಲೆ ನಾವೆಲ್ಲಾ ಅಪಾರ್ಟ್ಮೆಂಟ್ ಒಳಗೆ ನುಗ್ಗಿದೆವು.
ಬದುಕಿನ ಎಲ್ಲಾ ರೀತಿಯ ಅನುಭವಗಳನ್ನೂ ದೆಹಲಿಯೊಂದೇ ನೀಡಬಲ್ಲದು ಎನ್ನುವುದಕ್ಕೆ ಭೂಕಂಪವು ಒಂದು ಸಾಕ್ಷಿ. ಭಯದಿಂದ ಅಂದು ರಾತ್ರಿ ಊಟ ಮಾಡಲು ಮನಸ್ಸಾಗಲಿಲ್ಲ. ಏನೋ ಹಾಲು ಕುಡಿದು ಮಲಗಿದರಾಯಿತು ಎಂದು ಹಾಲಿನ ಲೋಟ ತುಟಿಗೆ ಇಟ್ಟಿದಷ್ಟೇ. ಬಂತು ನೋಡಿ ಡಂ ಎನ್ನುವ ಸದ್ದು. ಆ ಸುದ್ದು ಕೇಳಿದ್ದು ಒಂದು ಬಾರಿಯಲ್ಲ. ಅದು ಬರೋಬ್ಬರಿ ನಾಲ್ಕು ಬಾರಿ. ಈ ದೆಹಲಿ ನಮಗೆ ಮತ್ತೇನೇನೋ ತೋರಿಸುತ್ತದೆಯೋ?.. ದೇವರೇ! ಎಂದು ಭಯದಲ್ಲೇ ಅಕ್ಕ-ಭಾವನಿಗೆ ಏನಿದು ಶಬ್ದ ಎಂದು ಕೇಳಿದೆ. ಅವರು ಕೆಳಗಿನ ಸೆಕ್ಯುರಿಟಿಗೆ ಫೋನ್ ಮಾಡಿ ಕೇಳಿದರೆ ಅಪಾರ್ಟ್ಮೆಂಟ್ ಕೆಳಗೆ ರೌಡಿಯೊಬ್ಬ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದ ಇನ್ನೊಬ್ಬ ರೌಡಿಗೆ ಗುಂಡಿಕ್ಕಿ ಕೊಲೆ ಮಾಡಿರುವ ಮಾಹಿತಿ ಬಂತು. ಬೆಂಗಳೂರಿನಲ್ಲಿ ಒಬ್ಬ ಸಣ್ಣ ಕಳ್ಳನನ್ನು ನಾನು ನೋಡಿರಲಿಲ್ಲ.ಇಲ್ಲಿ ಕೊಲೆಗಡುಕನಾದರೂ ನೋಡೇಬಿಡೋಣ ಎಂದು ಅಪಾರ್ಟ್ಮೆಂಟ್ ಕೆಳಗೆ ಹೋಗಿ ನೋಡಿದರೆ,ಕೊಲೆ ಮಾಡಿದವನು ೩೦೦ ಜನ ಸೆಕ್ಯೂರಿಟಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದ. ಸತ್ತವನ ಪಕ್ಕ ಅವನ ಹೆಂಡತಿ ಅಳುತ್ತ ಕೂತಿದ್ದಳು. ರೌಡಿಯ ಹೆಂಡತಿ ಯಾವತ್ತಿದ್ದರೂ ಮುಂಡೆಯೇ ಎನ್ನುವ ಮಾತಿದೆ. ದ್ವೇಷಕ್ಕೆ ದ್ವೇಷ ಬೆಳೆದು ಅವಳ ಗಂಡ ಬಲಿಯಾಗಿದ್ದ. ಆದರೆ ಆಶ್ಚರ್ಯವೆಂದರೆ ಅಪಾರ್ಟ್ಮೆಂಟ್ ನ ಒಳಗೆ ಬಂದು ಕೊಲೆ ಮಾಡುವುದು ಅಷ್ಟು ಸುಲಭವಲ್ಲ.ಏಕೆಂದರೆ ೩೦ ಟವರ್ ಇರುವ ದೊಡ್ಡ ಅಪಾರ್ಟ್ಮೆಂಟ್ ಅದು.ಅಲ್ಲಿ ದೊಡ್ಡ ರೌಡಿಗಳಿಂದ ಹಿಡಿದು ದೊಡ್ಡ -ದೊಡ್ಡ ಸೆಲೆಬ್ರೆಟಿಗಳವರೆಗೂ ಅದೇ ಅಪಾರ್ಟ್ಮೆಂಟ್ ನಲ್ಲಿ ನೆಲೆಸಿದ್ದಾರೆ. ಕ್ರಿಕೆಟ್ ಆಟಗಾರ ಮೊಮ್ಮದ ಶಮ್ಮಿ ಕೂಡಾ ಅದೇ ಅಪಾರ್ಟ್ಮೆಂಟ್ ನಲ್ಲೇ ನೆಲೆಸಿದ್ದಾರೆ.
ಆ ಅಪಾರ್ಟ್ಮೆಂಟ್ ಸುತ್ತ ೩೦೦ ಜನ ಸೆಕ್ಯುರಿಟಿಯ ಕಾವಲಿದ್ದು, ಪ್ರತಿಯೊಬ್ಬ ಸೆಕ್ಯೂರಿಟಿಯ ಕೈಯಲ್ಲಿ ಭದ್ರತೆಗಾಗಿ ಗನ್ ನೀಡಲಾಗಿದೆ. ಇಷ್ಟೆಲ್ಲ ಭದ್ರತೆಯ ಕಣ್ಣು ತಪ್ಪಿಸಿ ಅಪಾರ್ಟ್ಮೆಂಟ್ ಒಳಗೆ ಬಂದು ಕೊಲೆ ಮಾಡಿದ್ದ. ಪೂರ್ವನಿಯೋಜಿತ ಪ್ಲಾನ್ ನಿಂದಲೇ ಈ ಕೊಲೆ ಮಾಡಲಾಗಿತ್ತು. ಅಪಾರ್ಟ್ಮೆಂಟ್
ನಲ್ಲಿ ನಡೆದ ಈ ಕೊಲೆ ಒಂದು ಉದಾಹರಣೆಯಷ್ಟೇಯಷ್ಟೇ. ಅಲ್ಲಿ ಹೆಣ್ಣು ಮಕ್ಕಳಿಗಾಗಲಿ, ಮಕ್ಕಳಿಗಾಗಲಿ ಯಾರಿಗೂ ಯಾರ ರಕ್ಷಣೆಯೂ ಇಲ್ಲ.ಅಲ್ಲಿ ರಸ್ತೆಯಲ್ಲಿ ಓಡಾಡುವ ಕಾರ್ ಗಳನ್ನು ಒಂದು ಸಾರಿ ಕಣ್ಣಾಡಿಸಿದರೆ ಸಾಕು. ಗುಜರಿ ಕಾರುಗಳೇ ಹೆಚ್ಚಾಗಿ ಕಾಣುತ್ತವೆ. ಯಾರೇ ಬಂದು ಕಾರಿಗೆ ಗುದ್ದಿದರು ಮರುಮಾತಾಡುವಂತಿಲ್ಲ.ಯಾರ ಬಳಿ ಯಾವ ಮಾರಾಕಾಸ್ತ್ರವಿರುತ್ತದೆ ಎಂದು ಯಾರಿಗೂ ತಿಳಿದಿರುವುದಿಲ್ಲ. ಅಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡೇ ಓಡಾಡಬೇಕು. ಅಲ್ಲಿಯ ಗುಂಡಾಗಳಿಗೆ ದೊಡ್ಡ ದೊಡ್ಡ ರಾಜಕೀಯ ಜನರ ಶ್ರೀರಕ್ಷೆ ಇರುವುದರಿಂದ ಅಲ್ಲಿಯ ಪೊಲೀಸ್ ರು ಅಸಹಾಯಕರೆಂದು ಅಲ್ಲಿಯ ಜನ ಮಾತಾಡಿಕೊಳ್ಳುತ್ತಾರೆ.
ಹೇಗೋ ನಮ್ಮ ದೆಹಲಿಯ ಪ್ರವಾಸ ಮುಗಿಯಿತು. ‘ಇರುವುದನ್ನು ಬಿಟ್ಟು,ಇಲ್ಲದ ಕಡೆಗೆ…’ಎನ್ನುವ ಮಾತಿದೆ. ಬೆಂಗಳೂರಿನಲ್ಲಿದ್ದಾಗ ನಮ್ಮ ನೆಲೆಯ ಬಗ್ಗೆ ಮಹತ್ವ ತಿಳಿದಿರಲಿಲ್ಲ. ಒಮ್ಮೆ ದೆಹಲಿ ಹೋಗಿ ಬಂದ ಮೇಲೆ ನಮ್ಮ ಬೆಂಗಳೂರಿನ ಸೌಂದರ್ಯ ಇಂಚು-ಇಂಚು ನನ್ನ ಕಣ್ಣ ಮುಂದೆ ಕಾಣತೊಡಗಿದವು. ಬೆಂಗಳೂರಿನಷ್ಟು ಸುಂದರವಾದ,ಹಸಿರು ನಗರ ಇನ್ನೊಂದಿಲ್ಲ. ನಮ್ಮ ನಗರವನ್ನು ಸ್ವಚ್ಛವಾಗಿ, ಸುಂದರಾಗಿ ಇಟ್ಟುಕೊಳ್ಳಬೇಕು ಎನ್ನಿಸಿದ್ದು,ದೆಹಲಿಯನ್ನು ನೋಡಿದ ಮೇಲೆ. ಅಂದಿನಿಂದ ನನ್ನ ಮನೆಯ ಸುತ್ತ ಗಿಡ ನೆಡುವುದು, ಗಿಡ ಕೊಡುವ ಕೆಲಸದಲ್ಲಿ ಭಾಗಿಯಾಗಿದ್ದೇನೆ.
ಹೇಗೋ ನಮ್ಮ ದೆಹಲಿ ಟ್ರಿಪ್ ಚನ್ನಾಗಿತ್ತು ಎನ್ನುವುದಕ್ಕಿಂತ ಸಾಹಸಮಯವಾಗಿತ್ತು ಎಂದರೆ ಸೂಕ್ತ. ದೆಹಲಿಯ ಜನ ಅದರಲ್ಲೂ ಸಣ್ಣ -ಸಣ್ಣ ಮಕ್ಕಳು ಬದಲಾಗುವ ಅಲ್ಲಿಯ ವಾತಾವರಣಗಳಿಗೆ ತಕ್ಕಂತೆ, ಯಾವುದಕ್ಕೂ ಅಂಜದೆ ಗಟ್ಟಿಯಾಗಿ ಎದುರು ನಿಂತು ಜೀವನ ನಡೆಸುತ್ತಾರೆ. ಜೊತೆಗೆ ನಮ್ಮ ಗಡಿನಾಡ ಯೋಧರು ದೆಹಲಿಗಿಂತ ದೊಡ್ಡ-ದೊಡ್ಡ ಸಮಸ್ಯೆಗಳನ್ನು ಎದುರಿಸುತ್ತಾರೆ ಎನ್ನುವ ಅರಿವನ್ನು ಮೂಡಿಸಿದ್ದು ನನ್ನ ದೆಹಲಿಯ ಪ್ರಯಾಣ. ಅಲ್ಲಿಯ ಬದುಕಿನ ಬವಣೆಗಳನ್ನು ಹತ್ತಿರದಿಂದ ನೋಡಿದ ಮೇಲೆ ದೆಹಲಿಯ ಜನತೆಗೆ ಮತ್ತು ನಮ್ಮ ಯೋಧರಿಗೆ ಒಂದು ಸಲಾಂ ಹೇಳಲೇಬೇಕು. ಆದರೆ ನೀವು ಕೂಡಾ ದೆಹಲಿಗೆ ಹೋಗಿ ಬನ್ನಿಮತ್ತು ತಪ್ಪದೆನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.