ಪ್ರಕಾಶಕರುಃ ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಇಲಾಖೆ, ಡಾ.ಬಿ.ಆರ್.ಅಂಬೇಡ್ಕರ ಸಂಶೋಧನಾ ಸಂಸ್ಥೆ,
ಡಾ.ಬಿ.ಆರ್.ಅಂಬೇಡ್ಕರ ಭವನ, ವಸಂತ ನಗರ, ಬೆಂಗಳೂರು
ಪುಟಗಳುಃ ೨೨೪, ಬೆಲೆಃ ರೂ. ೧೦೦, ೨೦೧೭
ಲೇಖಕ ಬಿ.ಪಿ.ಮಹೇಂದ್ರಕುಮಾರರು ಪರಿಸರ ಪ್ರೇಮಿ. ಉತ್ತಮ ವಾಗ್ಮಿ. ಬುಡುಕಟ್ಟು ಜನಾಂಗಗಳ ಕುರಿತು
ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಅವರ ಹಿತ ರಕ್ಷಣೆಗಾಗಿ ಅವಿರತ ಹೋರಾಟ ನಡೆಸಿದ್ದಾರೆ.
ಅಲಕ್ಷಿತ ಬುಡಕಟ್ಟುಗಳ ಮೂಭೂತ ಹಕ್ಕುಗಳು, ಮತ್ತು ಅದರ ಸಾಂಸ್ಕೃತಿಕ ಅಸ್ಮಿತೆಗಳ ಅಸ್ತಿತ್ವಕ್ಕಾಗಿ
ತಮ್ಮ ವೃತ್ತಿಯನ್ನೂ ತೊರೆದು, ಹೋರಾಟದ ಬದುಕಿಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟುಗಳೊಂದಿಗೆ ಇದ್ದು, ಅವರ ಕಾಡಿನೊಳಗಿನ ಹಕ್ಕುಗಳಿಗಾಗಿ
ಎರಡು ದಶಕಗಳಿಂದ ತಮ್ಮನ್ನು ಸತತವಾಗಿ ಹೋರಾಟಕ್ಕೆ ಅರ್ಪಿಸಿಕೊಂಡಿದ್ದಾರೆ.
೧೯೮೬ ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಮತ್ತು ಪತ್ರಿಕೋದ್ಯಮ ಪದವಿಗಳನ್ನು
ಪಡೆದ ಮಹೇಂದ್ರ ಅವರು ನಂತರ ಚಳ್ಳಕೆರೆ ಮತ್ತು ಶಿರಾ ಕಾಲೇಜುಗಳಲ್ಲಿ ಸಸ್ಯ ಶಾಸ್ತ್ರದ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ನಂತರ ಬಿರ್ಲಾ ಪಾಲಿಬೈರ್ ನಲ್ಲಿ ಅರಣ್ಯಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ.
ನಂತರ ೧೯೯೫ ರಲ್ಲಿ ಗ್ರೀನ ಇಂಡಿಯಾ ಎಂಬ ಸ್ವಯಂ ಸೇವಾ ಸಂಸ್ಥೆ ರಚಿಸಿಕೊಂಡು ಉತ್ತರ ಕನ್ನಡ ಜಿಲ್ಲೆಯ
ಬುಡಕಟ್ಟು ಜನಾಂಗಗಳ ಹಕ್ಕುಗಳಿಗಾಗಿ ಹೋರಾಡುತ್ತ ಬಂದಿದ್ದಾರೆ. ದಾಂಡೇಲಿಯ
ಪ್ರಜಾವಾಣಿ ಪತ್ರಿಕೆಯ ವರದಿಗಾರನಾಗಿಯೂ ಕೆಲಸ ಮಾಡಿದ ಇವರು ನಿಷ್ಠ ವರದಿಗಾಗಿ
ಹೆಸರಾದವರು. ಬುಡಕಟ್ಟು ಜನಾಂಗಗಳ
ಬಗ್ಗೆ ಅನೇಕ ಲೇಖನಗಳನ್ನು ಬರೆದ ಇವರು ಹೊರ ಜಗತ್ತಿಗೆ ಅವರನ್ನು ಪರಿಚಯಿಸುವ ಕಾರ್ಯ ಮಾಡಿದ್ದಾರೆ.
ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ‘ ಬುಡಕಟ್ಟುಗಳಲ್ಲಿ ಸೀಮಾ ಪದ್ಧತಿಃ ತಾತ್ವಿಕ ವಿವೇಚನೆ’
ಕುರಿತು ಮಹಾ ಪ್ರಬಂಧ [ಪಿ.ಎಚ್.ಡಿಗಾಗಿ] ಬರೆಯುವದರಲ್ಲಿ ಮಗ್ನರಾಗಿದ್ದಾರೆ.
ಏನಿದು ಪುಸ್ತಕ?
ಪರಿಶಿಷ್ಟ ಜಾತಿಗಳಲ್ಲಿನ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ, ಮತ್ತು ಅತಿ ಸೂಕ್ಷ್ಮಸಮುದಾಯಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ವ್ಯಾಪಕ ಅಧ್ಯಯನ ಮತ್ತು ಅವರ ಜೀವನ ಕ್ರಮ ಕುರಿತಂತೆ ಅನೇಕ ಪುಸ್ತಕಗಳನ್ನು ಕರ್ನಾಟಕ ಸರಕಾರವು ಸಮಾಜಕಲ್ಯಾಣ ಇಲಾಖೆಯಡಿ ಡಾ. ಬಿ.ಆರ್. ಅಂಬೇಡಕರ ಸಂಶೋಧನಾ ಸಂಸ್ಥೆಯ ಮೂಲಕ ಪ್ರಕಟಿಸಿದೆ. ಈ ಎಲ್ಲ ಪುಸ್ತಕಗಳನ್ನು ತಜ್ಞರಿಂದ ಬರೆಸಿ ಪ್ರಕಟಿಸಲಾಗಿದೆ. ಹಿಂದುಳಿದ ಮತ್ತು ಅಲೆಮಾರಿ ಜನಾಂಗಗಳಾದ ಬುಡ್ಗ ಜಂಗಮ, ಸುಡುಗಾಡು ಸಿದ್ದ, ಮಾಂಗ್ ಗಾರುಡಿ, ಪಂಬದ, ಮಾಲ ಸನ್ಯಾಸಿ, ಮಾಸ್ತಿಕರು, ಮದಾರಿ, ಅಸಾದಿ, ಹಂದಿಜೋಗಿ, ಭಂಗಿ, ಗೋಸಂಗಿ, ಹೀಗೆ ಹತ್ತು ಹಲವು ನಶಿಸಿ ಹೋಗುತ್ತಿರುವ ಜನಾಂಗಗಳ ಬಗ್ಗೆ ಬರೆಸಲಾಗಿದೆ. ಅವುಗಳ ಸಾಲಿನಲ್ಲೇ ಈಗ ಬಂದಿರುವ ಪುಸ್ತಕ ಹಳ್ಳೇರು ಜನಾಂಗದ ಕುರಿತಾದದ್ದು. ಈ ಸಂಪುಟಗಳ ಬರಹಗಾರರಿಗೆ ಮಾರ್ಗದರ್ಶನ ನೀಡಿದವರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜೀ ಅಧ್ಯಕ್ಷರಾದ ಡಾ. ಸಿ.ಎಸ್. ದ್ವಾರಕಾನಾಥ್ ಅವರು. ಇದಕ್ಕೆ ಬೆಂಬಲವಾಗಿ ನಿಂತವರು ಡಾ.ಬಿ.ಆರ್.ಅಂಬೇಡಕರ ಸಂಶೋಧನಾ ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರೋ. ಆರ್. ಅನುರಾಧ ಪಟೇಲ್ ಅವರು.
#ಪಸತಕ