ಡಾ. ಚಂದ್ರಶೇಖರ್ ಕಂಬಾರರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮೇಲೆ ಮೊದಲ ಬಾರಿ ಹಮ್ಮಿಕೊಂಡ ಕಾರ್ಯಕ್ರಮವಿದು. ಎರಡು ದಿನಗಳ ಕಾಲ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ನಡೆದ ಈ ಕಾರ್ಯಕ್ರಮಗಳಲ್ಲಿ ಮೂರು ಬಹುಭಾಷಾ ಕವಿಗೋಷ್ಠಿಗಳು, ಒಂದು ವಿಚಾರ ಸಂಕಿರಣ ಮತ್ತು ಒಂದು ಕಥಾ ವಾಚನ ಗೋಷ್ಠಿ ನಡೆದವು. ಈಶಾನ್ಯ ರಾಜ್ಯಗಳು ಮತ್ತು ದಕ್ಷಿಣ ರಾಜ್ಯಗಳ ಸುಮಾರು ನಲವತ್ತು ಪ್ರಸಿದ್ಧ ಲೇಖಕಿಯರು ಇದರಲ್ಲಿ ಭಾಗವಹಿಸಿದ್ದರು. ಆಸಾಮಿ, ಬೋಡೋ, ನೇಪಾಳಿ, ಮಣಿಪುರಿ, ಕನ್ನಡ, ತೆಲುಗು, ಮಲಯಾಳಿ, ತಮಿಳು, ಕೊಡವ ಮುಂತಾದ ಭಾಷೆಗಳನ್ನು ಇವರು ಪ್ರತಿನಿಧಿಸಿದರು.
ಆಕಾಡೆಮಿಯ ಅಧ್ಯಕ್ಷರಾದ ಡಾ. ಚಂದ್ರಶೇಖರ್ ಕಂಬಾರರು ಅಧ್ಯಕ್ಷತೆ ವಹಿಸಿದ ಈ ಕಾರ್ಯಕ್ರಮವನ್ನು ಕನ್ನಡ ಲೇಖಕಿ ನಾಡೋಜ ಡಾ. ಕಮಲಾ ಹಂಪನಾ ಅವರು ಉದ್ಘಾಟಿಸಿದರು. ಕೇರಳದ ಪ್ರಸಿದ್ಧ ಇಂಗ್ಲಿಷ್ ಲೇಖಕಿ ಅನಿತಾ ನಾಯರ್ ಆಶಯ ಭಾಷಣ ಮಾಡಿದರು. ಕನ್ನಡದ ಕವಿ ಡಾ. ಸಿದ್ಧಲಿಂಗಯ್ಯನವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿ ಶ್ರೀ ಕೆ. ಶ್ರೀನಿವಾಸ ರಾವ್ ಸ್ವಾಗತಿಸಿದರು, ಪ್ರಾದೇಶಿಕ ಕಾರ್ಯದರ್ಶಿ ಶ್ರೀ ಎಸ್.ಪಿ. ಮಹಾಲಿಂಗೇಶ್ವರ ವಂದಿಸಿದರು.
#ಆಕತನಯಸ