ಭೋಜಮ್ಮನ ದಿನಚರಿ ಕಲಿತ ಕತ್ತೆಗಳು ಅಮ್ಮೋರೇ…!

ಮೊನ್ನೆ ಚುನಾವಣೆಯ ಮರುದಿನ ಎಂದಿನಂತೆ ಮನೆಗೆಲಸದ ಭೋಜಮ್ಮ ಬೆಳಿಗ್ಗೇನೆ ಬಂದಳು. ಹೊರಬಾಗಿಲಿಗೆ ನೀರು ಹಾಕಿದವಳೇ ಸೀದಾ ಅಡುಗೇ ಮನೆಗೆ ಬಂದಳು. ಯಜಮಾನರಿಗೆ ಬೆಳಗಿನ ಕಾಫಿ ಸೋಸುತ್ತಿದ್ದ ಸುಶೀಲಮ್ಮ ಈಕೆಯನ್ನು ನೋಡಿ, ಬಂದೇನೇ ಭೋಜಮ್ಮ. ತಗೋ ಕಾಫಿ ಎನ್ನುತ್ತ ಆಕೆಗೊಂದು ಲೋಟ ಕೊಟ್ಟಳು. ಪ್ರತಿ ದಿನ ಭೋಜಮ್ಮನ ಮನೆಗೆಲಸ ಸುರುವಾಗುವುದೇ ಸುಶೀಲಮ್ಮ ಕೊಡುವ ಲೋಟ ಕಾಫಿಯಿಂದ. ಕಾಫಿ ಕುಡಿಯುತ್ತ ಊರಿನ ಹೊಸ ಹೊಸ ಸುದ್ದಿಯನ್ನು ಹೇಳದಿದ್ದರೆ ಆಕೆಗೆ ಕುಡಿದ ಕಾಫಿ ಮೈಗೆ ಹತ್ತುವುದಿಲ್ಲ.

‘ ಇವತ್ತೇನೇ ಸುದ್ದಿ ಭೋಜಮ್ಮ? ಮನೇಲಿ ಎಲೆಕ್ಶನ್‌ ಸ್ಪೇಶಲ್ಲೇನಾದ್ರೂ ಇತ್ತೇನೆ?’

‘ ಮನೇಲಿ ಇತ್ತು ಅಮ್ಮೋರೇ. ಆದ್ರೆ ನಿನ್ನೆ ಓಟು ಹಾಕೂಕೆ ಹೋಗಿದ್ದೆ ನೋಡಿ. ಅಬಬಬಾ… ಕೇಳ್ಬೇಡಿ. ಎಂಥಾ ಸುದ್ದಿ ಅಂತೀರಿ.’

ಭೋಜಮ್ಮ ದಿನವೂ ಸುದ್ದಿ ಹೇಳುವ ಮೊದಲು ಕೇಳ್ಬೇಡಿ ಅನ್ನುತ್ತಲೇ ಏನಾದರೂ ಹೇಳುತ್ತಲೇ ಇರುತ್ತಾಳೆ. ಈಗ ಸುಶೀಲಮ್ಮನಿಗೂ ಕುತೂಹಲ. ‘ ನಿನ್ನೆ ಏನಾತೇ…’ ಅನ್ನುತ್ತ ವಿವರ ಕೇಳಿದಳು. ಈಗ ಭೋಜಮ್ಮ ಹೇಳತೊಡಗಿದಳು.

‘ ಏನಾತೂಂತ ಕೇಳ್ಬೇಡಿ ಅಮ್ಮೋರೇ. ಅದು ಸಾಲು ಸಾಲಾ? ಹನುಮಂತನ ಬಾಲ ಕಣ್ರಮ್ಮ. ಎಷ್ಟುದ್ದ ಸಾಲು ಅಂತೀರಿ ಓಟು ಹಾಕೋಕೇ.’

‘ ಹೌದಾ? ಮತ್ತೆ ನಾವು ಹೋದಾಗ ಜನವೇ ಇರಲಿಲ್ಲವಲ್ಲ?’

‘ ಅಯ್ಯೋ…ನೀವು ಹೋದ ಗಳಿಗೆ ಚನ್ನಾಗಿತ್ತು. ಬೇಗ ಹೋಗಿ ಬಂದ್ರಿ. ನನ್ನ ಹಣೇಬರ ನೋಡಿ. ನಿಂತೇ… ನಿಂತೇ… ಒಂದೂವರೆ ತಾಸು ನಿಂತೆ. ಸಾಲು ಮುಂದೇ ಹೋಗ್ಲಿಲ್ಲಂತೀನಿ. ಯಾಕೆ ಅಂತ ಕೇಳಿ ಅಮ್ಮೋರೇ…’

‘ ಹೂಂ, ಕೇಳಿಸ್ಕೋತಿದೀನಿ ಹೇಳು.’

ಅದೇ ನೋಡಿ. ಆವಯ್ಯ ಹಂಗ ಮಾಡೋದಾ. ಕೆನ್ನೇಗೆ ನಾಕು ಬಿಗೀ ಬೇಕು ಅನ್ನಸ್ತು ನಂಗಂತೂ.

ಈಗ ಸುಶೀಲಮ್ಮನ ಕುತೂಹಲ ಇಮ್ಮಡಿಸಿತು.

‘ ನನ್ನ ಹಿಂದೇ ಇದ್ದ ಅವ್ನು. ಒಂದರವತ್ತು ಆಗಿರಬೇಕು. ಕೊಚ್ಚಿದ್ರೆ ಹತ್ತು ಮಂಕರಿ ಆಗ್ತಿದ್ದ ನೋಡಿ. ಅವ್ನ ಹಿಂದೆ ಅವ್ನ ಹೆಂಡ್ತಿ. ಮಗಳು ಇದ್ರು ಮೂರೂ ಜನ ಓಟು ಹಾಕುದಕ್ಕೇ ಬಂದವ್ರು. ಸರದೀಲಿ ನಿಂತೋವ್ನು ನಿಲ್ಲಬಾರ್ದ?’

‘ ಏನ್‌ ಮಾಡಿದ್ನು? ಪೋಲೀಸರಿದ್ದರಲ್ವಾ?’

‘ ಇದ್ರು ಕಣಮ್ಮ. ನಂಗೇನು ಮಾಡ್ತಾನೆ? ನಾನ್‌ ಬಿಡ್ತೀನಾ. ಅವ್ನೇ ಪೋಲೀಸಪ್ಪನ್ನ ಕರೆದ. ಹೆಂಗ ಗತ್ತು ತೋರಿಸಿದ ಅಂತೀರಿ.’

‘ ಹೇ ನಾನ್‌ ಕಣಪ್ಪ. ಪೋಲೀಸ್‌ ಗೊತ್ತಾಗಲಿಲ್ವ ನಾನು ಯಾರೂಂತ? ಏಸೀಪಿ ಕಣೋ ನಾನು. ಸೆಂಟ್ರಲ್‌ ಸ್ಟೇಶನ್ನಿನಲ್ಲಿ ನನ್ನ ನೋಡಿಲ್ವ?’

‘ ಕೂಡಲೇ ಪೋಲೀಸಪ್ಪನಿಗೆ ಅವನ ಗುರುತು ಸಿಗ್ಲಿಲ್ಲ. ಆದ್ರೆ ಏಸೀಪಿ ಅಂದದ್ದೇ ಬಂತು ನೋಡಿ. ನನ್ನ ಹಿಂದಿದ್ದ ಮೂರೂ ಜನರನ್ನ ಹಾಗೇ ಕರಕೊಂಡು ಸೀದ ಬಾಗ್ಲಿಗೇ ಹೋಗಿ ಬಿಡೋದ?’

‘ ಮತ್ತೆ ಕ್ಯೂ ಅನ್ನೋದಿತ್ತಲ್ವ?’

‘ ಅವ್ನಿಗೆಲ್ಲಿತ್ತು ಕ್ಯೂ. ಎಸೀಪಿ ಅಂತ ಕೇಳಿದ್ದೇ ಬಂತು. ಯಾರೂ ಪಿಟಕ್‌ ಅನ್ಲಿಲ್ಲ ಕಣ್ರವ್ವ. ಹೋದವ್ನು ಹೋಗೇ ಬಿಟ್ಟ. ನಾವು ನಿಂತವ್ರು ನಿಂತೇ ಬಿಟ್ವಿ. ಆಮೇಲೆ ಅವ್ನು ಬೊಟ್ಟೀಗೆ ಮಸಿ ಹಕ್ಕಂಡು ಮೀಸೆ ತಿರುವುತ್ತ ಹೊರಗೆ ಬಂದ. ಸರದಿ ಸಾಲಲ್ಲಿ ನಿಂತೋರು ಪೆಕ್ರ ಆಗಿ ನೋಡಿದ್ರು. ಯಾಕಂದ್ರೆ ಅವ್ನು ಸ್ಕೂಲನಲ್ಲಿ ಕಲ್ತು ಬಂದವ್ನು. ಅದೇನೋ ರಿಟೈಡ್ಡು ಏಸೀಪಿ ಬೇರೆ ಅಂತೆ. ಯಾರೂ ಕೇಳ್ಲಿಲ್ಲ. ಹಂಗೇ ಸೊಂಡೇ ಊದಿಸಿಕೊಂಡು ನಿಂತ್ವಿ ಅಮ್ಮೋರೇ.’

‘ ನೋಡು. ಆತ ನಿಜ ಏಸೀಪಿ ಆಗಿದ್ರೆ ಸಾಲಿನಲ್ಲಿ ನಿಂತೇ ಓಟು ಹಾಕ್ತಿದ್ದ. ಪೋಲೀಸರಿಗೆ ಶಿಸ್ತು ಇರತ್ತೆ.’

‘ ಅದು ಹೋಗ್ಲಿ. ಮುಂದೆ ನಮ್ಮ ಸಾಲು ಕದಲ್ತು ಅಂದ್ರಾ? ಅದೂ ಇಲ್ಲ. ಅದೇನಾತು ಅಂದ್ರೆ ನನ್ನ ಹಂದೆ ನಿಂತ ಮತ್ತೆ ಮೂರು ಮಂದಿ ಹೊಟ್ಟೆ ಮುಂದು ಮಾಡ್ಕೊಂಡು ಬಂದ್ರಿ ಕೇಳಿದ್ರೆ ನಮ್ಗೆ ಮೂವ್ಯಾಧಿ ಆಪರೇಶನ್ನು. ನಿಲ್ಲೋದಕ್ಕೆ ಆಗಲ್ಲ. ಆಪರೇಶನ್ನು ಕೇಸಿದ್ರೆ ಬೇಗ ಕಳ್ಸಿ ಅಂತ ರೂಲ್ಸು ಅದೆ ಅಂದು ನಮ್ಮನ್ನ ದಾಟ್ಕೊಂಡು ಹೋಗೇ ಬಿಡೋದಾ.

ಅಯ್ಯೋ ಶಿವ್ನೇ…’

‘ ಕೇಳ್ಬೇಡಿ. ಆಮೇಲೆ ಅವ್ರೇ ಓಟು ಹಾಕಿ ಹೊರಗೆ ಬಂದಾಗ ಹೆಂಗಿದ್ರು ಅಂತೀ. ಹೋರಿ… ಹೋರೀ ಥರ ಓಡ್ಕೊಂಡು ಹೊರಗೆ ಬಂದ್ರು. ನಂಗೇ ಕೋಪ ಅಂದ್ರೆ ಕೋಪ. ಏನ್‌ ಮಾಡ್ಲಿ. ಅವ್ರು ಕಲ್ತವ್ರು ನೋಡಿ.’

‘ ಸರಿ ಬಿಡು. ಕಡೆಗೆ ಸರದೀ ಸಾಲು ಮುಂದೆ ಹೋಯ್ತೇನೆ?’

‘ ಎಲ್ಲಿ ಹೋಯ್ತದೆ ಅಮ್ಮೋರೇ. ಆಮೇಲೆ ಬಂದ್ರು ನೋಡಿ ಇಬ್ರು. ವಯಸ್ಸಾದೋರು. ಕಂಕುಳಲ್ಲಿ ಒಂದು ಮಗೂ. ಕೈನಲ್ಲಿ ಒಂದು ಮಗೂ. ಯಾರೋ ಕೂಗಿದ್ರು. ಮುದುಕ್ರು. ಮಕ್ಕಳು ಇದ್ರೆ ಒಳಗೆ ಕಳ್ಸಿ ಅಂತ ರೂಲ್ಸು ಅದೆ. ಕಳ್ಸಿ ಅವ್ರನ್ನ.’

ಅದನ್ನು ಕೇಳಿದ್ದೇ ಬಂತು ನಾವೆಲ್ಲ ಪಕ್ಕಕ್ಕೆ ಜರುಗಿದ್ದೇ. ಅವರೆಲ್ಲ ಸೀದ ಓಟಿನ ಬಾಗ್ಲಕ್ಕೆ ಹೋದ್ರು.’

‘ ಪಾಪ ಬಿಡು. ಮುದುಕ್ರು -ಮಕ್ಳುಇದ್ರೆ ನಾವೇ ಸುಮ್ನಿರಬೇಕಲ್ವ?’

‘ ಅಯ್ಯೋ ಏನ್ ಕೇಳ್ತೀರ ಅಮ್ಮೋರೇ. ಇಡೀ ದಿನ ಆ ಪುಟ್ಟ ಮಕ್ಳು ಅಲ್ಲೇ ಓಡಾಡ್ತಿದ್ವು. ಯಾರ್ಯಾರದೋ ಕೈನಲ್ಲಿ. ಒಳಗೋದವ್ರು. ಹೊರಗೆ ಬಂದು ಇನ್ನಯಾರದೋ ಕೈಗೆ ಕೋಡೋರು. ಅವ್ರು ಮಕ್ಳಿವೆ. ರೂಲ್ಸಿದೆ ಅನನ್ನಕೊಂಡು ಓಟು ಹಾಕೋರು. ಹೊರಗೆ ಬಂದ್ಮೇಲೆ ಮತ್ತೆ ಇನ್ಯಾರದೋ ಕೈಗೆ ಕೋಡೋರು.’

‘ ಅಯ್ಯೋ ದೇವ್ರೆ. ಹಂಗಾ?’

‘ ನಾನೂ ಬರೋವಾಗ ಯಾವುದಾದ್ರೂ ಮಗೂನ್ನ ಎತ್ಕೊಂಡು ಬಂದಿದ್ರೆ ವೈನ್‌ ಇತ್ತು ಅನ್ನಿಸ್ತು ಅಮ್ಮೋರೇ.’

‘ ಕಾಲ ಕೆಟ್ಟು ಹೋಯ್ತು ಭೋಜಮ್ಮ.’

‘ ಕಾಲ ಕೆಟ್ಟದ್ದು ಯಾರಿಂದ ಅಂತೀರಾ? ನಮ್ಮಿಂದಂತೂ ಅಲ್ಲ ಕಣ್ರವ್ವ. ಕಲಿತ ಮಂದಿ ಸ್ಕೂಲು ಕಲಿತರಷ್ಟೇ ಶಿಸ್ತು ಕಲೀಲಿಲ್ಲ. ನಾವೇನೋ ಕಷ್ಟಪಟ್ಟು ಓಟು ಹಾಕಿದ್ವಿ. ಆದ್ರೆ ಬೆಂಗಳೂರಿನಲ್ಲಿರೂ ನೂರಕ್ಕೈವತ್ತು ಜನ ಕಲ್ತವರು ಓಟೇ ಹಾಕ್ಲಿಲ್ಲವಂತೆ. ಅವತ್ತು ಅವರೆಲ್ಲಾ ಕಾರ್‌ ತಗೊಂಡು ಜಾಲೀ ರೈಡೂ ಅಂತ ಹೋಗಿದ್ರಂತೆ. ನೋಡಿ.ಹಿಂಗಾದ್ರೆ ದೇಶದ ಬಗ್ಗೆ ಮಾತಾಡೋಕೆ ಇವ್ರಿಗೆ ನಾಲಿಗೆ ಹೆಂಗ್‌ ಆಡೀತು ಹೇಳಿ. ಕಲ್ತ್‌ ಕತ್ತೆಗಳು ಅಮ್ಮೋರೇ…’

ಭೋಜಮ್ಮನ ಮಾತು ಕೇಳಿ ಸುಶೀಲಮ್ಮ ಗಲಿಬಿಲಿಗೊಂಡಳು. ಆಕೆ ಹೇಳಿದ್ದು ನಿಜ. ಈ ವಿಷಯದಲ್ಲಿ ಎಜ್ಯುಕೇಟೆಡ್‌ ಮಂದಿ ಕಲಿತ ಕತ್ತೆಗಳಾಗುತ್ತಿದ್ದಾರೇನೋ.

‘ ಭೋಜಮ್ಮ ಮೆಲ್ಲಗೆ ಏಳುತ್ತ ಮನೇಲಿ ತುಂಬ ಕಸ ಬಿದ್ದಿದೆ. ಅಮ್ಮೋರೇ. ಊರ್‌ ಸುದ್ದಿ ನಮಗ್ಯಾಕೇ?’ ಅನ್ನುತ್ತ ಮೇಲೆದ್ದಳು.

#ಹಗಉಟ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW