ಸಾಹಿತ್ಯ, ಸಿನಿಮಾ, ರಂಗಭೂಮಿಯ ಶ್ರೇಷ್ಠತೆಯ ಹಿಂದೆ ಇದ್ದವರು
ಸಿನಿಮಾ ನಿರ್ದೇಶಕ ಟಿ. ಎಸ್. ರಂಗಾ ಅವರು- ಟಿ. ಎಸ್. ನಾಗಾಭರಣ
* ಹೂಲಿ ಶೇಖರ
ಇತ್ತೀಚೆಗೆ ನಮ್ಮನ್ನಗಲಿದ ಪ್ರತಿಭಾವಂತ ಚಿತ್ರ ನಿರ್ದೇಶಕ ಟಿ. ಎಸ್. ರಂಗಾ ಅವರನ್ನು ನೆನಪಿಸುವ ಕಾರ್ಯಕ್ರಮ ಮೊನ್ನೆ ಬೆಂಗಳೂರಿನಲ್ಲಿ ನಡೆಯಿತು. ರಂಗಾ ಅವರ ಗೆಳೆಯರು ಸೇರಿ ಆಯೋಜಿಸಿದ ಈ ಕಾರ್ಯಕ್ರಮ ಬೆಂಗಳೂರಿನ ಸುಚಿತ್ರದ ಬಾನು ನೆನಪಿನ ಅಂಗಳದಲ್ಲಿ ನಡೆಯಿತು. ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ ಮತ್ತು ಸುಚಿತ್ರ ಫಿಲ್ಮ ಸೊಸೈಟಿ ಇವರ ಆಶ್ರಯದಲ್ಲಿ ನಡೆಯಿತು.
ಶ್ರೀ ಹೆಚ್.ಜಿ.ಸೋಮಶೇಖರ್, ಮತ್ತು ಟಿ.ಎಸ್.ನಾಗಾಭರಣ, ಟಿ.ಎನ್. ಸೀತಾರಾಮ, ಅನಿಲ್ ದೇಸಾಯಿ ರಂಗಾ ಅವರನ್ನು ಕುರಿತು ಮಾತಾಡಿದರು.
ಅಪ್ಪಟ ಸಜ್ಜನ ಮತ್ತು ಸಾತ್ವಿಕ ರಾಜಕಾರಿಣಿ ಟಿ.ಆರ್. ಶಾಮಣ್ಣನವರ ಪುತ್ರರಾದ ರಂಗಾ ಅವರು ಮನಸ್ಸು ಮಾಡಿದ್ದರೆ ಅಪ್ಪನ ಪ್ರಭಾವದಿಂದ ಕೆಲಸಕ್ಕೆ ಸೇರಿ ಜೀವನದ ಭದ್ರತೆ ಮಾಡಿಕೊಳ್ಳಬಹುದಿತ್ತು. ಆದರೆ ಕನಸುಗಾರ ರಂಗಾ ಜೀವನವನ್ನು ಅಷ್ಟು ಹಗುರವಾಗಿ ತಗೆದುಕೊಂಡವರಲ್ಲ. ರಂಗಭೂಮಿ ಮತ್ತು ಸಿನಿಮಾಗಳ ಕನಸಿನ ಬಣ್ಣ ತುಂಬಿಕೊಂಡಿದ್ದ ರಂಗಾ ಮೊದಲು ಮೊಳೆ ಹೊಡೆದದ್ದು ನಾಟಕಗಳಿಗೆ. ಎಪ್ಪತ್ತರ ದಶಕದಲ್ಲಿ ಬೆನಕ ತಂಡದೊಡನೆ ತಮ್ಮನ್ನು ಗುರುತಿಸಿಕೊಂಡು ಎಲ್ಲರಂತೆ ಕಲಾಕ್ಷೇತ್ರದ ಮೆಟ್ಟಿಲು ಮೇಲೆ ಕೂತು ಎದ್ದು ಬಂದವರು. ಒಳ್ಳೆಯ ಸಂಘಟಕ ಎಂದು ಹೆಸರು ಗಳಿಸಿದವರು. ಅದುವರೆಗೆ ಪ್ರೊಸಿನಯಂ ನಲ್ಲೇ ನಡೆಯುತ್ತಿದ್ದ ನಾಟಕಗಳನ್ನು ಬಯಲಿಗೆ ತಂದವರು ಟ್.ಎಸ್.ರಂಗಾ ಅವರು. ಆ ಕಾಲದಲ್ಲೇ ಬಯಲು ರಂಗೋತ್ಸವ ಆಟೋಜಿಸಿ ಎಲ್ಲರ ಹುಬ್ಬೇರಿಸಿದರು.
ನಾನು ಮೊದಲು ಸಿನಿಮಾ ಸಹವಾಸಕ್ಕೆ ಬಿದ್ದದ್ದು ಟಿ.ಎಸ್. ರಂಗಾ ಅವರ ಕಾರಣದಿಂದ. ಅವರು ಮೊದಲ ಸಿನಿಮಾ ಸುರು ಮಾಡಿದಾಗ ನಾನು ಅವರ ಬಳಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ. ಆಗ ನಮಗಿದ್ದ ಸಂಭ್ರಮ ಹೇಳತೀರದು. ಆಗ ನಾನು ರಂಗಾ ಅವರ ಬಳಿ ಸಿನಿಮಾ ಭಾಷೆ ಕಲಿತೆ ಎಂದು ಹೇಳಿಕೊಳ್ಳಲು ಅಭಿಮಾನವೆನಿಸುತ್ತಿದೆ.
ಬೆನಕ ನಾಟಕ ತಂಡದಲ್ಲಿ ಹೆಸರು ಮಾಡಿದ್ದ ನಾಗಾಭರಣ, ಸುಂದರರಾಜ, ಗಿರೀಶ್ ಕಾಸರವಳ್ಳಿ, ವೈಶಾಲಿ, ಪ್ರಮೀಳಾ ಜೋಷಾಯ್, ಕೋಕಿಲ ಮೋಹನ್, ಇವರೆಲ್ಲರ ಜೊತೆ ಟಿ.ಎಸ್.ರಂಗಾ ಕೂಡ ಒಬ್ಬರಾಗಿದ್ದರು. ಬಿ.ವಿ.ಕಾರಂತರಷ್ಟೇ ಅಲ್ಲ. ಪಿ. ಲಂಕೇಶರ ಆಪ್ತ ಬಳಗದಲ್ಲೂ ಗುರುತಿಸಿಕೊಂಡಿದ್ದರು. ಇವರು ನಾಗಾಭರಣರ ಗ್ರಹಣಕ್ಕೆ ಮೊದಲ ಬಾರಿ ರಚಿಸಿದ ಚಿತ್ರ ಕತೆಗೆ ರಾಷ್ಠ್ರ ಪ್ರಶಸ್ತಿ ಗಿಟ್ಟಿಸಿದರು. ಇವರು ಪ್ರಥಮವಾಗಿ ನಿರ್ದೇಶಿಸಿದ ಚಿತ್ರ ಆಲನಹಳ್ಳಿ ಕೃಷ್ಣ ಅವರ ಕತೆಯಾಧಾರಿತ ‘ ಗೀಜಗನ ಗೂಡು’ ಆನಂತರ ರಂ. ಶಾ ಅವರ ಕಾದಂಬರಿಯಾಧಾರಿತ .’ ಸಾವಿತ್ರಿ ಚಿತ್ರ ಮಾಡಿದರು. ‘ ಇವೆರಡೂ ಅದ್ಭುತ ಚಿತ್ರಗಳೆನಿಸಿದವು. ಇವು ರಂಗಾ ಅವರ ಪ್ರತಿಭೆಯನ್ನು ಬಸಿದು ಮಾಡಿದ ಚಿತ್ರಗಳು. ಆನಂತರ ಅವರು ಗಿದ್ ಎಂಬ ಹಿಂದೀ ಚಿತ್ರ ಮಾಡಿದರು. ಈ ಚಿತ್ರದಲ್ಲಿ ಹಿಂದಿ ಚಿತ್ರೋದ್ಯಮದ ಗಣ್ಯರಾದ ಓಂ ಪುರಿ, ನಾನಾ ಪಾಟೇಕರ, ಸ್ಮಿತಾ ಪಾಟೀಲ ಅವರು ನಟಿಸಿದ್ದರು. ಸಾಕ್ಷ್ಯ ಚಿತ್ರವೊಂದರಲ್ಲಿ ಉಮಾಶ್ರೀಯವರನ್ನು ಮೊದಲ ಬಾರಿ ಕೆಮರಾ ಎದುರು ನಿಲ್ಲಿಸಿದ್ದು ಟಿ.ಎಸ್.ರಂಗಾ ಅವರು.
ರಂಗಾ ಅವರು ಮಾಜೀ ಮುಖ್ಯ ಮಂತ್ರಿಗಳಾದ ರಾಮಕೃಷ್ಣ ಹೆಗಡೆ, ಮಂತ್ರಿಗಳಾದ ಜೀವರಾಜ ಆಳ್ವ, ಎಂಪಿ ಪ್ರಕಾಶ, ವಿ.ಎಸ್ ಕೃಷ್ಣ ಅಯ್ಯರ್, ಅವರ ತೀರಾ ಆತ್ಮೀಯರಾಗಿದ್ದರು.
ಟಿ.ಎಸ್.ರಂಗಾ ಅವರಿಗೆ ಉತ್ತರ ಕರ್ನಾಟಕ ಅಂದರೆ ಪಂಚಪ್ರಾಣ. ಅಲ್ಲಿಯ ಲೋಕೇಶನ್ ಅವರನ್ನು ಕಟ್ಟಿ ಹಾಕಿತ್ತು. ಅವರ ಎಲ್ಲ ಚಿತ್ರಗಳನ್ನು ಅಲ್ಲಿಯೇ ಚಿತ್ರೀಕರಿಸಿದರು. ಸಾವಿತ್ರಿ ಸಿನಿಮಾ ಮಾಡುವಾಗ ಅದರಲ್ಲಿ ನಾಯಕಿ ಪಾತ್ರ ಮಾಡಿದ ಅಶ್ವಿನಿಯವರನ್ನೇ ಮದುವೆಯಾದರು. ರಂಗಾ ಅವರಿಗೆ ರಂಗಭೂಮಿ ಮತ್ತು ಸಿನಿಮಾಗಳ ಬಗ್ಗೆ ಅದ್ಭುತ ಕಲ್ಪನೆಯಿತ್ತು. ಭಿನ್ನ ನೋಟವಿತ್ತು.
#ಸನಮ