ಮಾಸ್ತಿಯವರ ೧೨೭ ಜನ್ಮ ದಿನದ ನೆನಪಿಗೆ

– ಹೂಲಿಶೇಖರ

aakritikannada@gmail.com

www.aakritikannada.info

1972 ರ ಸುಮಾರಿನಲ್ಲಿ ನಾನು ಉತ್ತರ ಕನ್ನಡ ಜಿಲ್ಲೆಯ ಸೂಪಾದಲ್ಲಿ ಕೆಲಸ ಮಾಡುತ್ತಿದ್ದೆ. ಕೆಲಸಕ್ಕೆ ಸೇರಿ ಒಂದು ವರ್ಷವಾಗಿತ್ತು. ಆಗಾಗ ನಾನು ಪ್ರಜಾಮತ, ಮಲ್ಲಿಗೆ, ಕರ್ಮವೀರ ಪತ್ರಿಕೆಗಳಿಗೆ ಕತೆ ಬರೆದು ಕಳಿಸುತ್ತಿದ್ದೆ. ಅವು ಪ್ರಕಟವೂ ಆಗುತ್ತಿದ್ದವು. ಅದೇ ಕಾರಣವೇನೋ. ಆ ವರ್ಷ ಮೈಸೂರು ರಾಜ್ಯದ [ಆಗಿನ್ನೂ ರಾಜ್ಯದ ಹೆಸರು ಕರ್ನಾಟಕವೆಂದಾಗಿರಲಿಲ್ಲ] ಸಾಹಿತ್ಯ ಅಕಾಡೆಮಿಯು ಬೆಂಗಳೂರಿನಲ್ಲಿ ಹೊಸದಾಗಿ ಬರೆಯುತ್ತಿರುವ ಕತೆಗಾರರಿಗಾಗಿ ಹತ್ತು ದಿನಗಳ ಒಂದು ಕಥಾ ರಚನಾ ಶಿಬಿರವನ್ನು ಏರ್ಪಡಿಸಿತ್ತು. ರಾಜ್ಯದಿಂದ ಸುಮಾರು ಇಪ್ಪತ್ತು ಕತೆಗಾರರನ್ನು ಈ ಶಿಬಿರಕ್ಕೆ ಆಯ್ಕೆ ಮಾಡಲಾಗಿತ್ತು. ಉತ್ತರ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಒಬ್ಬನೇ ಒಬ್ಬ ಯುವ ಕತೆಗಾರನೆಂದರೆ ನಾನೊಬ್ಬನೆ.

ಸೂಪಾದಿಂದ ಬೆಂಗಳೂರಿಗೆ ಆಗ ಇದ್ದದ್ದು ಮೈಸೂರು ರಾಜ್ಯ ಸಾರಿಗೆ ಇಲಾಖೆಯ ಒಂದೇ ಒಂದು ಕೆಂಪು ಬಸ್ಸು. ಸೂಪಾದಿಂದ ಆಗ ಪ್ರಯಾಣ ದರ ಕೇವಲ ಇಪ್ಪತ್ತು ನಾಲ್ಕು ರೂಪಾಯಿ ಮಾತ್ರ. ಆಗ ಸೂಪಾದಲ್ಲಿ ಹೊಟೆಲ್ಲುಗಳಲ್ಲಿ ನಲವತ್ತು ಪೈಸೆಗೆ ಒಂದು ಪ್ಲೇಟು ಅನ್ನ ಸಾಂಬಾರು ಊಟ ಸಿಗುವ ಕಾಲ. ಆ ಇಪ್ಪತ್ನಾಲ್ಕು ರೂಪಾಯಿಗಳನ್ನು ಹೊಂದಿಸುವುದೇ ಭೋ ಕಷ್ಟ. ಅಂಥದ್ದರಲ್ಲಿ ಬೆಂಗಳೂರಿಗೆ ಹೋಗಿ ಬರುವುದು ಕನಸೇ ಆಗಿತ್ತು. ಹಾಗಾಗಿ ನಾನು ಬೆಂಗಳೂರನ್ನು ಒಮ್ಮೆ ಮಾತ್ರ ನೋಡಿದ್ದೆ. ಈಗ ಇನ್ನೊಂದು ಅವಕಾಶ ತಾನಾಗಿಯೇ ಒದಗಿ ಬಂದಿತ್ತು. ಕಥಾ ಶಿಬಿರಕ್ಕೆ ಹೋಗಲು ಸಂತೋಷ ದಿಂದಲೇ ನನ್ನ ಮೇಲಿನ ಅಧಿಕಾರಿಗಳಿಂದ ಒಪ್ಪಿಗೆಯನ್ನೂ ಪಡೆದೆ. ನನ್ನ ಬರವಣಿಗೆ ಅವರಿಗೆ ಅದು ತಾತ್ಸಾರದ ಕೆಲಸವಾಗಿತ್ತು. ಸೋಮಾರಿಗಳು ಮಾಡುವ ಕೆಲಸವಾಗಿತ್ತು.

ಸಾಹಿತ್ಯ ಅಕಾಡೆಮಿಯು ಶಿಬಿರಾರ್ಥಿಗಳಿಗಾಗಿ ವಾಸ್ತವ್ಯದ ವ್ಯವಸ್ಥೆ ಮಾಡಿರಲಿಲ್ಲ. ಊಟ- ತಿಂಡಿಗಳ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ದಿನಕ್ಕೆ ಇಂತಿಷ್ಟು ಕೊಡುತ್ತೇವೆ ಅಂದಿದ್ದರು. ಬೆಂಗಳೂರಲ್ಲಿ ದಿನದ

ಖರ್ಚಿಗೆ ಎಷ್ಟು ಬೇಕೆಂದು ನನಗೂ ಗೊತ್ತಿರಲಿಲ್ಲ. ಮಹಾ ಜಿಪುಣಾಗ್ರೇಸರನಂತೆ ಅಲ್ಲಿ ದಿನ ದೂಡಬೇಕಾಗಿತ್ತು. ಶಿಬಿರಕ್ಕೆ ನನ್ನ ಹಾಗೆ ಬಂದಿದ್ದ ಇಳಕಲ್ಲಿನ ವಿಶ್ವನಾಥ ವಂಶಾಕೃತ ಮಠ ಎಂಬವರನ್ನು ಪರಿಚಯ ಮಾಡಿಕೊಂಡು ಅವರ ಮೂಲಕ ಬೆಂಗಳೂರಿನ ಕೆಂಪಾಂಬುಧಿ ಕೆರೆ ಹತ್ತಿರ ಇದ್ದ [ಈಗಿನ ಮೆಜೆಸ್ಟಿಕ್‌] ಸರ್ಪಭೂಷಣ ಮಠದಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿಕೊಂಡೆ.

ನಾನು ಸೇರಿದ ಮೊದಲ ಸಾಹಿತ್ಯಶಿಬಿರ

ಈ ಕಥಾ ರಚನಾ ಶಿಬಿರವು ನಾನು ಭಾಗವಹಿಸಿದ ಮೊಟ್ಟ ಮೊದಲ ಶಿಬಿರವೂ ಆಗಿತ್ತು. ಹಾಗಾಗಿ ನನಗೆ ಕುತೂಹಲ, ಆತಂಕ ಹೆಚ್ಚಾಗಿತ್ತು. ಆ ಆತಂಕದಲ್ಲಿಯೇ ನಾನು ಮೊದಲ ದಿನ ಸಾಹಿತ್ಯ ಶಿಬಿರಕ್ಕೆ ಹೋದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕಥಾ ಶಿಬಿರವನ್ನು ಆಯೋಜಿಸಲಾಗಿತ್ತು. ಅಲ್ಲಿ ಸೇರಿದಾಗ ಎಷ್ಟೊಂದು ಸಂತಸವಾಯಿತು. ನನ್ನ ಹಾಗೆ ಶಿಬಿರಾರ್ಥಿಗಳಾಗಿ ಅಲ್ಲಿ ಬಂದವರು ಇಪ್ಪತ್ತು ಜನ. ಆಗಲೇ ತಮ್ಮ ಕತೆಗಳ ಮೂಲಕ ಪ್ರಸಿದ್ಧರಾದವರು ಕೆಲವರಿದ್ದರು. ಮತ್ತು ಶಿಬಿರದ ನಂತರ ಪ್ರಸಿದ್ಧರಾದ ಅನೇಕರಿದ್ದರು. ಕಾ.ತ.ಚಿಕ್ಕಣ್ಣ, ಕೆ.ವಿ.ರಾಜೇಶ್ವರಿ, ಮೈಸೂರಿನ ವಿಜಯಾ ಶಂಕರ್, ಈಚನೂರು ಶಾಂತಾ, ಈಚನೂರು ರಾಜರತ್ನಮ್‌, ಇನ್ನೂ ಅನೇಕರಿದ್ದರು.

ಈ ಶಿಬಿರಕ್ಕೆ ಪ್ರಖ್ಯಾತ ಸಾಹಿತ್ಯ ವಿಮರ್ಶಕರಾದ ಎಲ್‌.ಎಸ್‌.ಶೇಷಗಿರಿರಾವ್‌ ನಿರ್ದೇಶಕರಾಗಿಯೂ, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಮತ್ತು ಚಿ.ಶ್ರೀನಿವಾಸರಾಜು ಇವರು ಸಹ ನಿರ್ದೇಶಕರಾಗಿದ್ದರು. ಇವರೂ ಕೂಡ ಆ ಕಾಲದ ಪ್ರಸಿದ್ಧ ಸಾಹಿತ್ಯ ವಿಮರ್ಶಕರೆ. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಮಾಸ್ತಿ ವೆಂಕಟೇಶ್‌ ಅಯ್ಯಂಗಾರ, ಡಿ.ವಿ.ಜಿ.ಯವರ ಪುತ್ರರಾದ ಡಾ. ಬಿಜಿಎಲ್‌ ಸ್ವಾಮಿ, ಡಾ. ಗೋಪಾಲಕೃಷ್ಣ ಅಡಿಗ, ಪಿ. ಲಂಕೇಶ್‌, ಡಾ.ಶಾಂತಿನಾಥ ದೇಸಾಯಿ, ಕೇರಳದ ಶಂಕರ್‌ ಪಿಳ್ಳೆಯವರು ಹೀಗೆ ಅತಿರಥ ಮಹಾರಥರೇ ಇದ್ದರು. ನಾನು ಈ ಮಹನೀಯರ ಬಗ್ಗೆ ಕೇಳಿದ್ದೆನೇ ಹೊರತು ಯಾವತ್ತೂ ಇವರ್ಯಾರನ್ನೂ ನೋಡಿರಲಿಲ್ಲ. ಈಗ ಈ ಶಿಬಿರದ ನಿಮಿತ್ತ ಅವರೆಲ್ಲರೊಂದಿಗೆ ಬೆರೆಯುವ ಅವಕಾಶ ಸಿಕ್ಕಿತಲ್ಲ ಎಂದು ಹಿಗ್ಗಿದೆ. ಎಲ್.ಎಸ್‌.ಶೇಷಗಿರಿರಾಯರು ಕಥಾ ರಚನಾ ಸಾಹಿತ್ಯದಲ್ಲಿ ಅಗಾಧವಾದ ಪಾಂಡಿತ್ಯ ಹೊಂದಿದ್ದರು. ಅವರು ಕಥಾ ಸೃಷ್ಟಿ ಕುರಿತು ಹೇಳಿದ ಮಾತುಗಳು ಇವತ್ತಿಗೂ ನನಗೆ ಎಚ್ಚರಿಕೆಯ ಮಾರ್ಗದರ್ಶನಗಳಾಗಿವೆ. ಡಾ.ನರಹಳ್ಳಿ ಬಾಲಸುಹ್ರಹ್ಮಣ್ಯಂ ಅವರು ಮತ್ತು ಚಿ.ಶ್ರೀನಿವಾಸರಾಜು ಅವರೂ ನಮಗೆ ಕತಾ ರಚನೆಯ ಮಾರ್ಗಗಳ ಕುರಿತು ಅಪರೂಪದ ಸಲಹೆ ನೀಡುತ್ತಿದ್ದರು.

ದಿನಕ್ಕೊಬ್ಬರಂತೆ ಬರುತ್ತಿದ್ದ ಸಂಪನ್ಮೂಲ ವ್ಯಕ್ತಿಗಳೆಲ್ಲ ಅಪರೂಪದವರೇ ಆಗಿದ್ದರು. ಅವರೆಲ್ಲರೊಂದಿಗೆ ಚರ್ಚಿಸುವ, ಪ್ರಶೆಗಳನ್ನು ಇಡುವ ಅವಕಾಶ ನಮ್ಮದಾಗಿತ್ತು. ಶಿಬಿರದ ನಾಲ್ಕನೆಯ ದಿನ ಬಂದಿದ್ದ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರರು ನಮ್ಮನ್ನು ದಂಗು ಬಡಿಸಿದ ವ್ಯಕ್ತಿತ್ವದವರು. ನಾನು ಯಾವತ್ತೂ ಅವರನ್ನು ನೋಡಿರಲಿಲ್ಲ. ಅವರ ‘ ಮೊಸರಿನ ಮಂಗಮ್ಮ’ ಕತೆಯನ್ನು ಓದಿದ್ದೆ. ಆಗಿನ್ನೂ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿರಲಿಲ್ಲ. ಅವರು ಮೈಸೂರು ಸರಕಾರದಲ್ಲಿ ದೊಡ್ಡ ಹುದ್ದೆಯಲ್ಲಿದ್ದರು ಎಂದು ಅವತ್ತೇ ನನಗೆ ತಿಳಿದದ್ದು. ದೊಡ್ಡ ಸಜ್ಜನ ಮೂರ್ತಿ. ತುಂಬ ವಸ್ತು ನಿಷ್ಠರಾಗಿದ್ದರು. ಅವತ್ತು ನಮ್ಮ ಶಿಬಿರಾರ್ಥಿಯೊಬ್ಬರು ಅವರ ಕತೆಯೊಂದನ್ನು ಉಲ್ಲೇಖಿಸಿ ನೀವು ಜಾತಿ ಭೇದ ಮಾಡಿದ್ದೀರಿ ಎಂದಾಗ ಅವರು ತುಂಬ ನೊಂದುಕೊಂಡರು. ಎಲ್‌. ಎಸ್‌. ಶೇಷಗಿರಿರಾಯರು ಅದಕ್ಕೆ ಸಮಜಾಯಿಸಿ ಕೊಡಲು ಹೋದಾಗ ಮಾಸ್ತಿಯವರು ಹೇಳಿದ್ದು ಒಂದೇ ಉತ್ತರ. ‘ ಅವರು ನನ್ನ ನಂಬಿಕೆಯನ್ನು ಪ್ರಶ್ನಿಸಿದ್ದಾರೆ. ನಾಳೆ ಆ ಕತೆಯೊಂದಿಗೆ ನಾನು ಮತ್ತೆ ಬರುತ್ತೇನೆ. ಅದರಲ್ಲಿ ನನ್ನ ತಪ್ಪು ಇದ್ದರೆ ಇಲ್ಲಿಯೇ ಅವರ ಕ್ಷಮೆ ಕೇಳುತ್ತೇನೆ ‘ ಅಂದು ಎದ್ದು ಹೋದರು. ನಮಗೆ ಈ ಬಗ್ಗೆ ಮುಜುಗುರವಾಯಿತು. ಆ ಸ್ನೇಹಿತರೂ ಮರು ಮಾತಾಡಲಿಲ್ಲ.

ಮರುದಿನ ಶಿಬಿರ ಆರಂಭವಾಗುತ್ತಿದ್ದಂತೆ ಮಾಸ್ತಿಯವರು ಆ ಪುಸ್ತಕದೊಂದಿಗೆ ಬಂದರು. ಮತ್ತು ಆ ಕತೆಯನ್ನು ಎಲ್ಲರಿಗೂ ತೋರಿಸಿ ‘ ಸ್ನೇಹಿತರ ಮಾತು ಪುಷ್ಠೀಕರಿಸುವ ಮಾತೆಲ್ಲಿದೆ ನೋಡಿ.’ ಎಂದು ಎಲ್ಲರೆದುರು ಪುಸ್ತಕ ತೆರೆದು ಹಿಡಿದರು. ನಮಗ್ಯಾರಿಗೂ ಮಾತೇ ಬರಲಿಲ್ಲ. ತನ್ನ ತಪ್ಪಿನ ಅರಿವಾ ದೊಡನೆ ಸ್ನೇಹಿತರು ಅಲ್ಲೇ ಅವರ ಕಾಲಿಗೆರಗಿದರು. ಭಿನ್ನಾಭಿಪ್ರಾಯ ಅಲ್ಲೇ ಬಗೆ ಹರಿಯಿತು. ಆಗ ಮಾಸ್ತಿಯವರು ಹೇಳಿದ ಒಂದು ಮಾತು ಇವತ್ತಿಗೂ ನನ್ನ ನೆನಪಿನಲ್ಲಿದೆ.

”ಕತೆಗಾರನಾದವನು ಸಮಾಜಕ್ಕೆ, ಭಾಷೆಗೆ, ಅಂತಃಕರಣಕ್ಕೆ ಮತ್ತು ತನ್ನ ಆತ್ಮ ಸಾಕ್ಷಿಗೆ ನಿಷ್ಠನಾಗಿರಬೇಕು” ಎಂದದ್ದು. ಇವತ್ತಿಗೂ ನಾನು ಆ ದಾರಿಯಲ್ಲಿಯೇ ಸಾಗುವುದಕ್ಕೆ ಬಯಸುತ್ತೇನೆ. ***

#ನನಪನಸರಳ

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW