ಮೂಡಲ ಮನೆಯ ದೇಶಮುಖ ಪಾತ್ರಧಾರಿ ಕೆ.ಎಸ್.ಎಲ್. ಸ್ವಾಮಿ (ರವಿ)

೨೦೦೪ ರಲ್ಲಿ ನಾನು ಮೂಡಲ ಮನೆಯ ಕತೆ- ಚಿತ್ರಕತೆ- ಸಂಭಾಷಣೆ ಬರೆಯಲು ಆರಂಭಿಸಿದಾಗ ಕೆ.ಎಸ್.ಎಲ್ ಸ್ವಾಮಿ (ರವಿ)ಯವರು ನನಗೆ ಮುಖತಃ ಪರಿಚಯವಾಗಿರಲಿಲ್ಲ. ಅದಕ್ಕೂ ಮೊದಲು ಅವರು ನಿರ್ದೇಶಿಸಿದ ಹಲವು ಚಿತ್ರಗಳನ್ನು ದಾಂಡೇಲಿಯಲ್ಲಿ ನೋಡಿದ್ದೆ. ಅವರ ‘ಶುಭ ಮಂಗಳ’ ಚಿತ್ರ ಮತ್ತು ಅವರೇ ಸ್ವತಃ ಹಾಡಿದ ‘ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು, ನಗುತಾದೆ ಭೂತಾಯಿ ಮನಸು, ಎಂಬ ಹಾಡು ಆ ಕಾಲಕ್ಕೆ ಜನಪ್ರಿಯವಾಗಿತ್ತು.

ಶುಭ ಮಂಗಳ, ಮಿಥಿಲೆಯ ಸೀತೆಯರು ಇತ್ಯಾದಿ ಸೇರಿ ನಲವತ್ತು ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದಾರೆ. ಒಂದು ಕಾಲದ ಪ್ರತಿಷ್ಠಿತ ನಿರ್ದೇಶಕರಲ್ಲಿ ಒಬ್ಬರಾಗಿದ್ದ ರವಿಯವರು ಅಪ್ಪಟ ಸಿನಿಮಾ ಪ್ರೇಮಿಯಾಗಿದ್ದರು ಬಹುಕಾಲ ಜಿ.ವಿ. ಅಯ್ಯರ ಅವರೊಂದಿಗಿದ್ದ ರವಿಯವರು ಸಿನಿಮಾ ಭಾಷೆಯನ್ನು ಕರಗತ ಮಾಡಿಕೊಂಡಿದ್ದರು. ಜಿ.ವಿ.ಅಯ್ಯರ್ ಅವರೆಂದರೆ ಅದೇನೋ ಭಕ್ತಿ ಭಾವ ಇವರಿಗೆ.  ಸಿನಿಮಾದಲ್ಲಿ ಭಾಷೆ, ಭಾವ, ಸಂಸ್ಕಾರ, ಸಂಗೀತ ಸಭ್ಯವಾಗಿರಬೇಕೆಂದು ಹೇಳುತ್ತಿದ್ದರು. 

ತಾವು ಮಾಡುತ್ತಿದ್ದ ಸಿನಿಮಾಗಳಲ್ಲಿ ಅದರ ಎಲ್ಲೆಯನ್ನು ಮೀರದ ಹಾಗೆ ನೋಡಿಕೊಳ್ಳುತ್ತಿದ್ದರು. ಇವರ ಸಿನಿಮಾಗಳಲ್ಲಿ ಕಥೆಯೇ ಪ್ರಧಾನ. ಪುಟ್ಟಣ್ಣನವರ ನಂತರ ಸಾಮಾಜಿಕ ಸದಭಿರುಚಿಯ ಹೆಚ್ಚು ಸಿನಿಮಾಗಳನ್ನು ಕೊಟ್ಟ ಹಿರಿಮೆ ರವಿಯವರಿಗೆ ಸಲ್ಲುತ್ತದೆ. ಹಾಗೆಂದೇ ಡಾ. ರಾಜಕುಮಾರವರಿಗೆ ಇವರ ಬಗ್ಗೆ ತುಂಬ ಗೌರವವಿತ್ತು. ಪುಟ್ಟಣ್ಣನವರು ತಮ್ಮ ಜೀವನದ ಕೊನೆಯಲ್ಲಿ ಅರ್ಧಕ್ಕೆ ನಿಲ್ಲಿಸಿ ಹೋದ ಕಟ್ಟ ಕಡೆಯ ಚಿತ್ರ ‘ಸಾವಿರ ಮೆಟ್ಟಿಲು’ ಅನ್ನು ನಂತರ ರವಿಯವರು ಕೈಗೆ ತಗೆದುಕೊಂಡು ಮುಗಿಸಿದರು.

ಇಂಥ ರವಿಯವರು ನಾನು ಕಥೆ-ಚಿತ್ರಕಥೆ- ಸಂಭಾಷಣೆ ಬರೆಯುತ್ತಿದ್ದ ಮೂಡಲ ಮನೆ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಲು ಬಂದದ್ದು ನನಗೆ ಹೆಮ್ಮೆಯೂ ಆಗಿತ್ತು. ಮೂಡಲ ಮನೆ ಧಾರಾವಾಹಿ ಈಟಿವಿ ವಾಹಿನಿಯ ಇನ್ ಹೌಸ ಕಾರ್ಯಕ್ರಮ. ಮೂಡಲ ಮನೆ ಧಾರಾವಾಹಿ ಈಟಿವಿ ವಾಹಿನಿಯ ಇನ್ ಹೌಸ ಕಾರ್ಯಕ್ರಮ. ವಾಹಿನಿಯೇ ಅದನ್ನು ನಿರ್ಮಿಸಿತ್ತು. ರಾಮೋಜಿಯವರೇ ಅದರ ನಿರ್ಮಾಪಕರಾಗಿದ್ದರು. ವೈಶಾಲಿ ಕಾಸರವಳ್ಳಿ ಧಾರಾವಾಹಿಯ ನಿರ್ದೇಶಕರಾಗಿ ಇನ್ನೂರ ಐವತ್ತು ಕಂತುಗಳ ನಂತರ ಅನಿವಾರ್ಯ ಕಾರಣಗಳಿಗಾಗಿ ಅವರು ಬಿಡಬೇಕಾಗಿ ಬಂತು. ನಾನು ಕಥೆ-ಚಿತ್ರಕಥೆ- ಸಂಭಾಷಣೆಯನ್ನು ಬರೆಯುತ್ತಿದ್ದೆ. ನಾಗರಾಜ ಆದವಾನಿ ಧಾರವಾಹಿ ಛಾಯಾಗ್ರಾಹಕರಾಗಿದ್ದರು. ನನ್ನ ಜೀವಮಾನದ ಮಹತ್ವಾಕಾಂಕ್ಷೆಯ ಧಾರಾವಾಹಿಯೂ ಇದಾಗಿತ್ತು.ಕತೆ-ಚಿತ್ರಕತೆ- ಸಂಭಾಷಣೆಯಲ್ಲಿ ನನಗೆ ಇಲ್ಲಿ ಸಿಕ್ಕಷ್ಟು ಸ್ವಾತಂತ್ರ್ಯ ಇನ್ಯಾವ ಕಡೆಯಲ್ಲೂ ಸಿಗಲಿಲ್ಲ. ಹಾಗಾಗಿ ನಾನು ಉತ್ತರ ಕರ್ನಾಟಕದ ನನ್ನ ಅನುಭವನ್ನೆಲ್ಲ ಇಲ್ಲಿ ಧಾರೆ ಎರೆಯಲು ಸಾಧ್ಯವಾಯಿತು. ಅದಕ್ಕೆ ನಾನು ಈ ಟಿವಿ ವಾಹಿನಿಗೆ ಕೃತಜ್ಞನಾಗಿದ್ದೇನೆ.

ಮೂಡಲ ಮನೆ ಧಾರಾಹಿಯ ಶೂಟಿಂಗ್ ನಡೆಯುತ್ತಿದ್ದುದು ಹಾವೇರಿ ಹತ್ತಿರದ ಹಂದಿಗನೂರು ವಾಡೆಯಲ್ಲಿ. ಅದೊಂದು ಸಣ್ಣ ಹಳ್ಳಿ. ಅಲ್ಲಿಂದ ಎಂಟು ಕಿಮಿ ದೂರವಿದ್ದ ಹೊಸರಿತ್ತಿ ಊರಲ್ಲಿ. ಎಲ್ಲ ಕಲಾವಿದರು ಮತ್ತು ತಂತ್ರಜ್ಞರಿಗೆ ಉಳಿಯಲು ಅಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಕಲಾವಿದರಲ್ಲಿ ರವಿಯವರು ಮಾತ್ರವಲ್ಲದೆ ರೇಣುಕಮ್ಮ ಮುರುಗೋಡು, ಸುನಿಲ್ ಪುರಾಣಿಕ, ಅಚ್ಚುತ್, ಪದ್ಮಜಾ ರಾವ್ ಮುಂತಾದ ನಟ-ನಟಿಯರಿದ್ದರು. ಸ್ಥಳೀಯ ಅನುಕೂಲಕ್ಕೆ ತಂಕ್ಕಂತೆ ಅಲ್ಲಿ ಎಲ್ಲರಿಗೂ ವಾಸ್ತವ್ಯ ಕಲ್ಪಿಸಲಾಗಿತ್ತು. ಊಟ-ತಿಂಡಿಗಾಗಿ ಕಾರಂತ್ ಮೆಸ್ ಇತ್ತು. ಇಲ್ಲಿದ್ದ ಅನಾನುಕೂಲತೆಗಳನ್ನೇ ಅನುಕೂಲಗಳೆಂದು ಸ್ವೀಕರಿಸಿ ಧಾರವಾಹಿ ತಂಡ ಉತ್ಸಾಹದಿಂದ ಕೆಲಸ ಮಾಡುತ್ತಿತ್ತು. ಇಲ್ಲಿ ರವಿಯವರಿಗೆ ಪ್ರತ್ಯೇಕ ಕೋಣೆಯನ್ನು ನೀಡಲಾಗಿತ್ತು. ನಾನು ಅಲ್ಲಿ ಹೋದಾಗಲೆಲ್ಲಾ ರವಿಯವರು ತಮ್ಮ ಕೋಣೆಯಲ್ಲೇ ನನ್ನನ್ನು ಉಳಿಸಿಕೊಳ್ಳಲು ಬಯಸುತ್ತಿದ್ದರು.  ಹಿರಿಯ ನಿರ್ದೇಶಕರು, ಚಿತ್ರರಂಗದ ಅಪಾರ ಜ್ಞಾನ, ಅನುಭವಗಳುಳ್ಳ ರವಿಯವರ ಕೋಣೆಯಲ್ಲೇ ನನಗೂ ಬೆಡ್ ವ್ಯವಸ್ಥೆ ಆಗಿತ್ತು. ದಿನದ ಶೂಟಿಂಗ್ ಮುಗಿಸಿ, ರಾತ್ರಿ ಊಟವನ್ನು ಎಲ್ಲರೊಂದಿಗೆ ಕೂತು ಉಂಡು, ಇಬ್ಬರೂ ಕೋಣೆಗೆ ಬರುತ್ತಿದ್ದೆವು. ಅಲ್ಲಿ ಇಬ್ಬರಿಗೂ ಮಂಚಗಳು ಇರಲಿಲ್ಲ. ನೆಲದ ಮೇಲೆ ಹಾಕಿದ ಬೆಡ್ ನಲ್ಲಿ ಮಲಗಿ ನಿದ್ದೆ ಬರುವ ತನಕ ರವಿಯವರು ತಮ್ಮ ಚಿತ್ರರಂಗದ ಅನುಭವದ ಒಂದೊಂದು ಪ್ರಸಂಗಗಳನ್ನು ರಸವತ್ತಾಗಿ ಹೇಳುತ್ತಿದ್ದರು. ಆಗಾಗ ಹಾಡುಗಳನ್ನು ಹೇಳುತ್ತಿದ್ದರು. ಅವರಿಗೆ ದಾಸರ ಪದಗಳೆಂದರೆ ಅತಿ ಹೆಚ್ಚು ಒಲವು. ಚಿತ್ರರಂಗಕ್ಕೆ ಅಪರಿಚಿತನಾದ ನಾನು ಅವುಗಳನ್ನು ಕೇಳಿ ಕುತೂಹಲಿಯಾಗಿದ್ದೆ. ನಿಜಕ್ಕೂ ರವಿಯವರು ಜ್ಞಾನದ ಭಂಡಾರವೇ ಆಗಿದ್ದರು. ಚಿತ್ರರಂಗದ ಬಗ್ಗೆ ಅವರಿಗಿದ್ದ ಅಭಿಮಾನ, ಪ್ರೀತಿ, ಕಳಕಳಿ ಕಂಡು ಹೆಮ್ಮೆಯಾಗಿತ್ತು. 

ಇಡೀ ತಂಡದಲ್ಲಿ ಬೆಳಿಗ್ಗೆ ತಿಂಡಿ ತಿಂದು ಎಲ್ಲರಕ್ಕಿಂತ ಮೊದಲು ಶೂಟಿಂಗ್ ಗೆ ತಯಾರಾಗುತ್ತಿದ್ದವರು ರವಿಯವರು. ಅದು ನಲವತ್ತು ವರ್ಷದ ಶಿಸ್ತು ಎಂದು ಹೇಳುತ್ತಿದ್ದರು. ಬಹುಶಃ ಈಗಿನವರಿಗೆ ಅದು ಮಾದರಿಯೂ ಹೌದು. ಶೂಟಿಂಗನಲ್ಲಿದ್ದಾಗ ರವಿಯವರು ಶಾಲಾ ಬಾಲಕನಂತೆ ಶಿಸ್ತಿನ ಸಿಪಾಯಿ ಆಗಿರುತ್ತಿದ್ದರು. ನಿರ್ದೇಶಕರು ಕೈಗೆ ಕೊಟ್ಟ ಸೀನ್ ಪ್ರತಿಯನ್ನು ಕೈಯಲ್ಲಿ ಹಿಡಿದು ಒಬ್ಬರೇ ಒಂದೆಡೆ ಕೂತು ಸಂಭಾಷಣೆ ಉರು ಹೊಡೆದು ಸಿದ್ಧರಾಗುತ್ತಿದ್ದರು. ಸಿನಿಮಾ ಶೂಟಿಂಗನಲ್ಲಿ ನಟರನ್ನು ಕೆಮರಾದೆದುರು ಸಿದ್ದ ಮಾಡುತ್ತಿದ್ದ ರವಿಯವರು ಇಲ್ಲಿ ಧಾರಾವಾಹಿ ನಿರ್ದೇಶಕರ ಸೂಚನೆಗಾಗಿ ಕಾಯುತ್ತಿದ್ದರು.

ನನಗೆ ಅಚ್ಚರಿ ಹುಟ್ಟಿಸಿದ ಸಂಗತಿಯೆಂದರೆ ಅವತ್ತು ಹೊಲದಲ್ಲಿ ನಡೆಯಬೇಕಾಗಿದ್ದ ಒಂದು ಸೀನ್ ಎರಡು ಪುಟಗಳಷ್ಟಿತ್ತು. ಎರಡು ಪುಟಗಳ ಸೀನ್ ಅಂದರೆ ಕಲಾವಿದರು ಏನಿಲ್ಲವೆಂದರೂ ಐದಾರು ಟೇಕ್ ಗಳನ್ನಾದರೂ ತಗೆದುಕೊಳ್ಳುತ್ತಾರೆ. ಆದರೆ ಅವತ್ತು ರವಿಯವರು ಒಂದೇ ಟೆಕ್ ನಲ್ಲಿ ಅಷ್ಟೂ ಸೀನ್ ಮಾಡಿ ಮುಗಿಸಿದಾಗ ಅಲ್ಲಿದ್ದ ಎಲ್ಲರಿಂದ ಚಪ್ಪಾಳೆಯ ಸುರಿಮಳೆ. ಉತ್ತರ ಕರ್ನಾಟಕ ಗ್ರಾಮ್ಯ ಭಾಷೆಯ ಆ ದೀರ್ಘ ಸಂಭಾಷಣೆಯನ್ನು ರವಿಯವರು ಭಾವ ಪೂರಕವಾಗಿ ಹೇಳಿದ್ದರು. ಈ ಶ್ರದ್ಧೆಯೇ ಇವರನ್ನು ಉತ್ತುಂಗಕ್ಕೆ ಏರಿಸಿತು. ಹಾಗಾಗಿ ಮೂಡಲ ಮನೆಯ ದೇಶಮುಖ ಪಾತ್ರವು ರವಿಯವರ ಹೆಸರನ್ನು ಧಾರಾವಾಹಿ ಇತಿಹಾಸದಲ್ಲಿ ಅಚ್ಚಳಿಯದಂತೆ ಉಳಿಸಿತು. ಈ ಧಾರಾವಾಹಿಗೆ ಸಂಭಾಷಣೆ ಬರೆದ ನನಗೂ ಸಂತೃಪ್ತಿ ತಂದುಕೊಟ್ಟಿತು. 

ರವಿಯವರ ಮಾಗಿದ ನಟನೆ, ಸಂಭಾಷಣೆಗೆ ಅವರು ತುಂಬಿದ ಜೀವ ಇವತ್ತಿಗೂ ಮೂಡಲ ಮನೆಯನ್ನು ಎತ್ತರದ ಸ್ಥಾನದಲ್ಲಿರಿಸಿದೆ. ಈ ಧಾರವಾಹಿ ಶೂಟಿಂಗ್ ಸಂದರ್ಭದಲ್ಲಿಯೇ ಇವರು ನಂಬಿದ್ದ, ಸದಾ ಗೌರವಿಸುತ್ತಿದ್ದ ಗುರು ಜಿ.ವಿ. ಅಯ್ಯರ್ ತೀರಿಕೊಂಡರು. ಅವತ್ತು ಸಂಜೆ ಸುದ್ದಿ ಬರುತ್ತಲೇ ಇನ್ನೂ ಮೇಕಪ್ ನಲ್ಲಿಯೇ ಇದ್ದ ರವಿಯವರು ಕ್ಯಾಮರಾ ಫ್ರೆಮಿನಿಂದ ಹೊರಬಂದು ಗಳಗಳನೇ ಅತ್ತು ಬಿಟ್ಟರು.  ನಂತರ ನಾವೇ ಅವರನ್ನು ಸಮಾಧಾನಿಸಿ ಬೆಂಗಳೂರಿಗೆ ಕಳಿಸಿಕೊಟ್ಟೆವು.

ರವಿಯವರು ಅತಿಯಾಗಿ ಹಚ್ಚಿಕೊಂಡಿದ್ದು ಬಿ.ವಿ.ರಾಧಾ ಅವರನ್ನು. ಆ ಕಾಲದಲ್ಲಿ ಚಿತ್ರರಂಗದ ಸುಂದರ ನಟಿಯಾಗಿದ್ದ ರಾಧಾರನ್ನು ಪ್ರೀತಿಸಿ ಮದುವೆಯಾದರು. ಅಪ್ಪಟ ಮಾಧ್ವ ಬ್ರಾಹ್ಮಣ ಸಂಪ್ರದಾಯಸ್ಥರಾಗಿದ್ದ ಅವರು ಗೌಡ ಸಮುದಾಯದ ರಾಧಾರನ್ನು ಮದುವೆಯಾಗಿ ಕೊನೆಯವರೆಗೂ ಅವರನ್ನು ಪ್ರೀತಿಸಿದರು. 

ಇಡೀ ಚಿತ್ರರಂಗದಲ್ಲಿ ಅಧಿಕಾರವಾಣಿಯಿಂದ ಮಾತಾಡಬಲ್ಲ ಅವರು ಡಾ. ರಾಜಕುಮಾರರ ಅಭಿಮಾನಿಯಾಗಿದ್ದರು. ನಟ ಶ್ರೀನಾಥ್ ಮತ್ತು ವಿಷ್ಣುವರ್ಧನ್ ಅವರಿಗೆ ನಿರ್ದೇಶಕ ರವಿಯವರೆಂದರೆ ಅಚ್ಚುಮೆಚ್ಚಾಗಿದ್ದರು. ಏನೇ ಇದ್ದರೂ ಮೂಡಲ ಮನೆ ಧಾರಾವಾಹಿ ಅವರಿಗೆ ದೊಡ್ಡ ಹೆಸರು ತಂದು ಕೊಟ್ಟಿತು. ಈಗಲೂ ಕೆ ಎಲ್ ಎಸ್ ಸ್ವಾಮಿ (ರವಿ) ಅಂದರೆ ಮೂಡಲ ಮನೆಯ ದೇಶಮುಖರೆಂದೇ ಪ್ರಸಿದ್ದರು. ಅಂಥದೊಂದು ಅದ್ಬುತ ಧಾರಾವಾಹಿಗೆ ಸಂಭಾಷಣೆ, ಕತೆ ಬರೆದ ನನಗೂ ಈ ಬಗ್ಗೆ ಹೆಮ್ಮೆಯಿದೆ.

– ಹೂಲಿಶೇಖರ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW