ಮೈಸೂರಿನ ಸೌಂದರ್ಯ ಬರೀ ಅರಮನೆ, ಚಾಮುಂಡಿ ಬೆಟ್ಟ, ಕೆ.ಆರ್.ಎಸ್ ಅಥವಾ ಮೃಗಾಲಯಗಳಷ್ಟೇ ಅಲ್ಲ.ಇಲ್ಲಿನ ಅವಧೂತ ಪೀಠವು ಕೂಡಾ ಒಂದು. ಈ ಸ್ಥಳವು ಎಷ್ಟೋ ಜನರಿಗೆ ತಿಳಿದಿಲ್ಲ. ಈ ಅವಧೂತ ಪೀಠವು ಚಾಮುಂಡಿ ಬೆಟ್ಟಕ್ಕೆ ಹೋಗುವ ಸಾಲು ಮೆಟ್ಟಿಲುಗಳ ದಾರಿಯಲ್ಲಿದೆ.
ಈ ಅವಧೂತ ಪೀಠದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ನಿರ್ಮಿಸಿರುವ ಒಂದು ಶುಕ ವನವಿದೆ. ಈ ವನವನ್ನು ೨೦೧೨ ರಲ್ಲಿ ಆರಂಭಿಸಲಾಯಿತು. ಒಂದು ಎಕರೆ ಜಾಗವನ್ನು ಇದಕ್ಕಾಗಿ ಬಳಸಲಾಗಿದೆ. ಈ ವನದಲ್ಲಿ ೪೬೮ ವಿವಿಧ ಜಾತಿಯ, ವಿವಿಧ ಬಣ್ಣದ ಶುಕಗಳಿದ್ದು,ನೋಡುಗರನ್ನು ಮಂತ್ರ ಮುಗ್ದರನ್ನಾಗಿ ಮಾಡುತ್ತವೆ. ಮಕ್ಕಳಿಗಂತೂ ಗಿಳಿವಿಂಡುಗಳು ತನ್ನತ್ತ ಕೈ ಬೀಸಿ ಕರೆಯುತ್ತವೆ. ನೋಡಲು ಆ ಗಿಳಿಗಳ ಅಂದವೇ ಚಂದ.
Credits – SGS Birds
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಚಿಕ್ಕ ವಯಸ್ಸಿನಿಂದಲೂ ಹಸುಕರು ಪ್ರಾಣಿ ಸಂಕುಲದಲ್ಲಿ ಬೆಳೆದವರು. ಅವರ ಈ ಪ್ರಾಣಿ ಪ್ರೀತಿಗೆ ಈ ಶುಕವನ ಆರಂಭವಾಯಿತಂತೆ. ಕೇವಲ ಶುಕಗಳನ್ನು ಸಂಗ್ರಹಿಸುವುದಷ್ಟೇ ಅಲ್ಲದೆ ಕಾಯಿಲೆಗೆ ತುತ್ತಾದ ಮತ್ತು ಸಾಕಿದವರಿಂದ ನಿರ್ಲಕ್ಷಕ್ಕೆ ಒಳಗಾದ ಶುಕಗಳನ್ನು ತಮ್ಮ ಆಶ್ರಮದಲ್ಲಿ ಚಿಕಿತ್ಸೆ ನೀಡಿ, ಆಶ್ರಯವೂ ನೀಡಿದ್ದಾರೆ. ಶುಕಗಳನ್ನು ನೋಡಿಕೊಳ್ಳಲು ಸಿಬಂದ್ದಿಗಳನ್ನು ನೇಮಿಸಲಾಗಿದ್ದು, ಅವರಿಗೆ ತರಬೇತಿಯನ್ನು ಸಹ ನೀಡಿದ್ದಾರೆ. ಅತಿ ಹೆಚ್ಚು ಶುಕಗಳನ್ನು ಹೊಂದಿರುವುದಕ್ಕೆ ಸ್ವಾಮೀಜಿಯ ಹೆಸರನ್ನು ಗಿನ್ನಿಸ್ ದಾಖಲೆಯಲ್ಲಿ ಬರೆಯಲಾಗಿದೆ.
Credits – SGS Birds
ಇಲ್ಲಿ ವೀಕ್ಷಿಸಲು ಹೋದ ಪ್ರವಾಸಿಗರನ್ನು ಎಷ್ಟೋ ಶುಕಗಳು ಮಾತನಾಡಿಸುತ್ತವೆ. ಹಲೋ, ಹ್ಯಾಪಿ ಬರ್ತ್ ಡೇ ಅಪ್ಪಾಜಿ, ದತ್ತಾ ಹೀಗೆ ಹಲವಾರು ಮಾತುಗಳನ್ನು ಅವುಗಳ ಬಾಯಿಂದ ಕೇಳಿ ಸಂತೋಷ ಪಡಬಹುದು. ಅಲ್ಲಿ ಪ್ರತಿಯೊಂದು ಶುಕಗಳಿಗೆ ಹೆಸರಿಡಲಾಗಿದೆ. ನಮ್ಮ ಮಕ್ಕಳನ್ನು ಕರೆದಾಗ ಉತ್ತರ ಬರದೆಯೇ ಇರಬಹುದು. ಆದರೆ ಈ ಶುಕಗಳನ್ನುಅವುಗಳ ಹೆಸರಿನಿಂದ ಕರೆದಾಗ ವಿಭಿನ್ನವಾಗಿ ತಲೆಯಾಡಿಸುತ್ತವೆ ಅಥವಾ ‘ಓ’ ಗೊಡುತ್ತವೆ. ಅವುಗಳು ಪ್ರತಿಕ್ರಿಯಿಸಿದಾಗ ನೋಡಲು ಹೋದ ನಮಗೆ, ಮಕ್ಕಳಿಗೆ ಮನದಾನಂದವಾಗುತ್ತದೆ.
ಶುಕಗಳೊಂದಿಗೆ ಫೋಟೋ ತಗೆಸಿಕೊಳ್ಳಬೇಕೆಂದರೆ ಶ್ರೀ ಮಠಕ್ಕೆ ಕಾಣಿಕೆ ಸಲ್ಲಿಸಬೇಕಾಗುತ್ತದೆ. ಇಲ್ಲಿಂದ ಸಂಗ್ರಹವಾಗುವ ದೇಣಿಗೆ ಹಣವನ್ನು ಶುಕಗಳ ಆರೈಕೆಗೆ ಬಳಸಿಕೊಳ್ಳಾಗುತ್ತದೆ. ಏನೇ ಆಗಲಿ ಈ ಶುಕಗಳ ಸೌಂದರ್ಯವನ್ನು ಒಮ್ಮೆಯಾದರೂ ಹತ್ತಿರದಿಂದ ನೋಡಲೇಬೇಕು.
ಬೊನ್ಸಾಹಿ ಗಿಡದ ರೆಕಾರ್ಡ್:
ಗಿಡ – ಮರಗಳಲ್ಲಿ ಆಸಕ್ತಿಯಿರುವವರಿಗೆ ಈ ಆಶ್ರಮದಲ್ಲಿ ಬೊನ್ಸಾಹಿ ಗಾರ್ಡನ್ ಕೂಡಾ ಒಂದು ಆಕರ್ಷಣೀಯ ಕೇಂದ್ರ ಬಿಂದುವಾಗಿದೆ. ಡಿಸೆಂಬರ ೨೦೧೬ರಲ್ಲಿ ಎರಡು ದಿನದ ಅಂತಾರಾಷ್ಟ್ರೀಯ ಮಟ್ಟದ ಬೊನ್ಸಾಹಿ ಪ್ರದರ್ಶನವನ್ನು ನಡೆಸಲಾಗಿತ್ತು.
ಈ ಪ್ರದರ್ಶನದಲ್ಲಿ ಮುಂಬೈ, ಪುಣೆ, ಭೋಪಾಲ್, ಜಬಲ್ಪುರ, ಬೆಂಗಳೂರು ಮತ್ತು ಮೈಸೂರ್ ಗಳಿಂದ ಒಟ್ಟು ೨,೬೪೯ ಬೊನ್ಸಾಹಿ ಗಿಡಗಳನ್ನು ತರಿಸಲಾಗಿತ್ತು. ಮತ್ತು ೫೦೦ ಸ್ಪರ್ಧಿಗಳು ಈ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಜಗತ್ತಿನಲ್ಲಿಯೇ ಅತಿ ಹೆಚ್ಚು ಬೊನ್ಸಾಹಿ ಗಿಡಗಳ ಪ್ರದರ್ಶನ ಇದಾಗಿದ್ದರಿಂದ ಇದು ಕೂಡಾ ಗಿನ್ನಿಸ ದಾಖಲೆಯ ಪುಟವನ್ನು ಸೇರಿದೆ.
#ಆಕತನಯಸ