ಮತ್ತದೇ ಹಿತದ ಗಾನದ ಪರಿಗೆ…
ನಿನ್ನ ಬೆರಳ ಹಿತವಾದ ಗೆರೆಗಳು ನನ್ನ ನಗ್ನ ಬೆನ್ನ
ಮೇಲೆ ಹರಿದಾಡುವ ಪರಿಯ ವರ್ಣಿಸಲು
ಪದಗಳ ಗೊಂದಲದಿ ಬಿದ್ದು.
ಕಣ್ಣ ಮುಂದೆಯೇ ಮುಸುಕಿದ್ದ
ಮಂಜು ಹರಿದು ಬೆಳಕ ಹೊನಲ
ತಿಳಿವು
ಹೊರಳಗಾನದ ಲಹರಿಯಲಿ
ಮೂಡಿದ್ದ ನಿನ್ನದೇ ರಾಗ ಹಳೆಯ ಹಾಡುಗಳ
ಪಲಕುವಾಗ ಮತ್ತೆ ಹದಿನಾರರ ನವಿಲಾಗಿ ಕುಣಿತ
ಕಣ್ಣ ತುಂಬಿದ ಕತ್ತಲೆಯ ಕಾವಳದೊಳಗೂ
ಬೆಳಕಿನ ಪಸೆ ಒಸರಿ ಮತ್ತೆ ಬದುಕುವ ತವಕ,
ಈ ಐವತ್ತರಾಚೆಯ ಬರಡು ಬಂಜರಿಗೂ
ನೂರೆಂಟು ಹರೆಯದ ಭಾವವುಕ್ಕಿಸುವ ನೀನು
ಏನೆಂಬುದೇ ಈಗಲೂ ತಿಳಿಯದ ನಾನು
ಶಬ್ದ ಮುಗ್ದ…
ಹೇಗೆ ಬರೆಯುವದು ಕವಿತೆ ….
ಕೋಳಿ ಕೂಗುವದರೊಳಗೆ ಒಲೆ
ಹೊತ್ತಿಸಬೇಕು, ಅಂಗಳದ ಕಸ ಗೂಡಿಸಬೇಕು.
ರಂಗೋಲಿ ಹಾಕಿ
ಎದ್ದ ಯಜಮಾನರಿಗೆ ಚಹಾ ಕೊಡಬೇಕು.
ಅಯ್ಯೋ! ತಡವಾಯಿತು. ಎನ್ನುತ್ತ ಹಿಟ್ಟು ನಾದಿ
ಚಪಾತಿಯೋ? ರೊಟ್ಟಿಯೋ? ಎರಡೆರಡು
ಲಟ್ಟಿಣಿಸಿ
ನಿದ್ದೆ ಹೊಡೆಯುವ ಮಕ್ಕಳನೆಬ್ಬಿಸಿ ಮುಖಕ್ಕೆ
ನೀರು ಗೊಜ್ಜಿ ಬಚ್ಚಲ ನುಗಿಸಬೇಕು,
ಪೇಪರು ಹಿಡಿದ ರಾಯರದು ಮುಗಿಯಿತೇನೆ? ಎಂಬ ವರಾತ.
ಏನಾದರೂ ತಿರುಗಿ ಅನ್ನಲಾದೀತೆ? ಬಾಗಿಲಿಗಿಟ್ಟ
ತುಂಬಿದ ಸೇರು ಒದ್ದು ಒಳಬಂದವಳು.
ದರ್ಮೆಚ ಅರ್ಥೇಚ ಪಾಲಿಸುತ್ತೇನೆಂದು
ಮಾತು ಕೊಟ್ಟವಳು.
ಮೈಮೇಲೆ ಎರಡು ಚರಿಗೆ ನೀರು
ಬೀಳುವುದರೊಳಗೆ ಯಜಮಾನರ ಗಾಡಿಯ
ಹಾರನ್ನು,
ಮಾಡಿದ್ದು ತಿನ್ನಲಾರದೆ ಎರಡು ತುತ್ತು ಡಬ್ಬಿಗೆ
ಸೇರಿಸಿ
ಶಾಲೆಯ ಬೆಲ್ಲಾದರೇ….ಓಡುವುದೊಂದೇ ದಾರಿ !
ದಿನವೆಲ್ಲ ನಿಂತೂ, ನಿಂತೂ
ನಡ ಚಣ ಚಣ
ಮನೆಗೆ ಬಂದ ಮೇಲಾದರೂ ಸಿಕ್ಕಿತೇ?
ಆರಾಮದ ಒಂದು ಕ್ಷಣ.
ವಾಹನದ ಸವಾರಿ ಮಾಡಿ ಆಫೀಸಿನಲ್ಲಿ ಪಟ್ಟಾಂಗ
ಹೊಡೆದು ದಣಿದವರು, ಮನೆಗೆ ಬಂದು
ಉಸ್ಸೆಂದು ಕುಳಿತವರು ಚಹಾಕ್ಕಾಗಿ
ಕಾಯುತ್ತಿದ್ದಾರೆ.
ಮಕ್ಕಳೋ ಹೋಮ್ ವರ್ಕ ಮಮ್ಮಿ ಎನ್ನುತ್ತ
ತಲೆ ತಿನ್ನುತ್ತವೆ !
ಎಲ್ಲಿ ಹೋದಿರಿ ಸಂಜೆ? ಎಂದು ಕೇಳಲಾದೀತೇ
ಇವರನ್ನು?
ಗಂಡಸರಿಗೆ ನೂರು ಕೆಲಸ ಕಟ್ಟಿಕೊಂಡು ಏನು
ಮಾಡುತ್ತಿ?……………
ಕೇಳಿರುವ ಮಾತೂ ತಾನೆ !
ಹೇಗೂ ಜೀಕುವ ಬಂಡಿಯ ನೊಗಕ್ಕೆ ಹೆಗಲು
ಕೊಟ್ಟವಳು
ಬಳಗ ಒಡೆಯಲಾದೀತೇ?
ಹಾಗೂ ಹೀಗೂ ಉಂಡದ್ದು ಎತ್ತಿ ಹೊರಗಿಟ್ಟು
ಹಾಸಿಗೆ ಎಂಬ ಹಂಸಮಂಚಕ್ಕೆ ಬರುವ ಹೊತ್ತಿಗೆ
ಗೋರ ಗೋರ ನಿದ್ದೆಯ ಜೋಗುಳ !
ಸಿಹಿನಿದ್ದೆ! ಶುಭರಾತ್ರಿ!
ಬಂದ ವಾಟ್ಸಪ್ ಗಳು
ಪುರುಸೊತ್ತಿಲ್ಲದವಳ ಕಂಡು
ವ್ಯಂಗ್ಯವಾಗಿ ನಕ್ಕಂತೆ !
ಬೆನ್ನು ನೆಲಕ್ಕೆ ಹಚ್ಚಿ ಮಗ್ಗುಲು
ಬದಲಿಸುವದೇ ದೊಡ್ಡದಾಗಿರುವಾಗ
ಎಲ್ಲಿಯ ಕವಿತೆ !
ನಿಮ್ಮ ಕವಿತೆ ಇಟ್ಟುಕೊಳ್ಳಿ
ನನಗಿದಷ್ಟೇ ಸಾಕು
#ಕವನ