ಯಾರಿಗೆ ಯಾರು ಮಾದರಿಯೋ ಪುರಂದರ ವಿಠಲಾ?

ಕಸಾಪಕ್ಕೆ ರಾಜಕಾರಣಿಗಳೇ ಮಾದರಿ?

* ಹೂಲಿಶೇಖರ

ಕಸಾಪ ಆಜೀವ ಸದಸ್ಯರು ಮತ್ತು ಮಾಜಿ ತಾಲೂಕಾಧ್ಯಕ್ಷರು

ಎಮ್ಮೆಲ್ಲೆ, ಎಮ್ಮೆಲ್ಸಿಗಳ ಕಾಲಾವಧಿ ಐದು ವರ್ಷ. ನಮಗೇಕೆ ಮೂರು ವರ್ಷ? ನಾವೂ ಚುನಾಯಿತರು. ನಮಗೂ ಕೊಡಿ ಐದು ವರ್ಷ. ಇದು ಕಸಾಪದ ಅಧ್ಯಕ್ಷರುಗಳ ಬೇಡಿಕೆ. ಸಧ್ಯಕ್ಕೆ ಅವರಿಗೆ ಅವಧಿ ನಂತರ ಮಾಶಾಸನವಿದೆ. ನಮಗೇಕಿಲ್ಲ ಎಂದು ಕೇಳಿಲ್ಲ. ಶಾಸನ ಸಭೆಗಳ ಆಡಳಿತಾವಧಿ ಐದು ವರ್ಷವಿದೆ. ತಮ್ಮದು ಅಧಿಕಾರ ಎಂದು ಹೇಳಿಕೊಳ್ಳುತ್ತಿರುವ ಈ ಅಧ್ಯಕ್ಷರುಗಳು ತಮ್ಮ ಆಡಳಿತಾವಧಿಯನ್ನು ವಿಸ್ತರಿಸಿಕೊಳ್ಳಲು ಪರಿಷತ್ತಿನ ಬೈಲಾವನ್ನೇ ತಿದ್ದುಪಡಿ ಮಾಡಲು ಹೊರಟಿದ್ದಾರೆ. ಇಂಥ ನಡವಳಿಕೆ ಸಾಹಿತ್ಯ ಪರಿಷತ್ತಿನಂಥ ಸರಸ್ವತಿ ದೇಗುಲದಲ್ಲಿ ನಡೆಯುತ್ತಿರುವುದು ಯಾವ ಕಾರಣಕ್ಕೆ ಎಂದು ಗೊತ್ತಾಗುತ್ತಿಲ್ಲ.

ರಾಜಕಾರಿಣಿಗಳ ಅವಧಿ ಸಂವಿಧಾನ ಬದ್ಧವಾದುದು. ಅವರು ನೇರವಾಗಿ ಜನರ ಬಳಿಗೆ ಹೋಗಿ ಸರಕಾರದ ಪರವಾಗಿ, ಸರಕಾರದ ಮೂಲಕ ಜನರ ಕೆಲಸ ಮಾಡಬೇಕಾಗುತ್ತದೆ. ಆದರೆ ಇಲ್ಲಿ ಇವರು ಕಸಾಪದಲ್ಲಿ ಯಾರಿಗಾಗಿ, ಯಾರ ಮೇಲೆ ಅಧಿಕಾರ ಚಲಾಯಿಸುತ್ತಾರೆ? ಯಾರ ಸಹಾಯಕ್ಕೆ ನುಗ್ಗುತ್ತಾರೆ? ಪರಿಷತ್ತಿಗೆ ಸರಕಾರದಿಂದ ಆರ್ಥಿಕ ನೆರವು ಬೇಕು ಎಂದು ದಶಕಗಳಿಂದ ಹೋರಾಡಿದ ಯಾರೂ ಈ ಥರ ಯೋಚಿಸಿರಲಿಕ್ಕಿಲ್ಲ. ಆಗ ಅನುದಾನ ಕೇಳಿದವರು ಪರಿಷತ್ತಿನ ಅಧ್ಯಕ್ಷರುಗಳ ಅವಧಿಯನ್ನು ಐದು ವರ್ಷಕ್ಕೆ ಏರಿಸಿ ಎಂದು ಎಲ್ಲಿಯೂ ಹೇಳಲಿಲ್ಲ. ಯಾವಾಗ ಸರಸ್ವತಿ ಮಂದಿರಕ್ಕೆ ಲಕ್ಷ್ಮಿಯ ಪ್ರವೇಶವಾಯಿತೋ ಆಯಿತು ನೋಡಿ ಆಗ ಚಿತ್ತ ಚಂಚಲ. ಲಕ್ಷ್ಮಿ ಇದ್ದ ಕಡೆ ಸರಸ್ವತಿ ಇರುವುದಿಲ್ಲವಂತೆ. ಅನುದಾನಗಳಿಲ್ಲದ ಕಾಲದಲ್ಲಿ ಪರಿಷತ್ತಿಗೆ ಸದಸ್ಯರನ್ನಾಗಿ ಮಾಡಿಕೊಳ್ಳಲು ಹೆಣಗಾಡಬೇಕಾಗಿತ್ತು. ಕೆಲವು ಜಿಲ್ಲೆಗಳಲ್ಲಿ ಸದಸ್ಯರ ಸಂಖ್ಯೆ ಐವತ್ತೂ ಮೀರಿರಲಿಲ್ಲ. ಅನುದಾನ ಸಿಕ್ಕಿದ್ದೇ ತಡ. ಬೆಲ್ಲ ಇದ್ದ ಕಡೆ ನೊಣ ಹಾರಾಡುವಂತೆ ಈಗ ಎಲ್ಲ ಕಡೆ ಸ್ಥಿತಿ. ಜನವರಿಯಿಂದ ಮಾರ್ಚ ತನಕ ಸಮ್ಮೇಳನಗಳದ್ದೇ ಹಾವಳಿ. ಯಾರಿಗೆ ಬೇಕೋ ಬೇಡವೋ. ಬಜೆಟ್ಟಿನಲ್ಲಿ ಬಂದು ಕೂತಿರುವ ಅನುದಾನವನ್ನು ಮಾರ್ಚ ಒಳಗೆ ಮುಗಿಸಬೇಕು. ಹಾಗಾಗಿ ಇವು ಸಾಹಿತ್ಯ ಸಮ್ಮೇಳನಗಳಾಗುವ ಬದಲು ಮಾರ್ಚ ಸಮ್ಮೇಳನಗಳಾಗುತ್ತಿರುವುದನ್ನು ನೋಡುತ್ತಿದ್ದೇವೆ.

ರಾಜ್ಯದಲ್ಲಿ ಕೇಂದ್ರ ಪರಿಷತ್ತಿನ ಅಧ್ಯಕ್ಷರು ಒಬ್ಬರು, ಮೂವತ್ತು ಜಿಲ್ಲೆಗಳ ಮೂವತ್ತು ಜಿಲ್ಲಾ ಅಧ್ಯಕ್ಷರು ಮತ್ತು ಈ ಜಿಲ್ಲಾ ಅಧ್ಯಕ್ಷರುಗಳು ಆರಿಸಿಕೊಂಡ ನೂರಾ ಎಂಭತ್ತು ತಾಲೂಕು ಅಧ್ಯಕ್ಷರುಗಳಿದ್ದಾರೆ. ಇದರ ಹೊರತಾಗಿ ಗಡಿನಾಡು ಅಧ್ಯಕ್ಷರು, ಹೊರನಾಡು ಅಧ್ಯಕ್ಷರು ಎಂದು ಇನ್ನಷ್ಟು ಅಧ್ಯಕ್ಷರಿದ್ದಾರೆ. ಒಟ್ಟು ಇನ್ನೂರಾ ಇಪ್ಪತ್ತಕ್ಕೂ ಹೆಚ್ಚು ಅಧ್ಯಕ್ಷರು ಪರಿಷತ್ತಿನಲ್ಲಿದ್ದಾರೆ. ಈ ಸಂಖ್ಯೆ ನಿಖರವಾಗಿಲ್ಲವಾದರೂ ಇಷ್ಟು ಸಂಖ್ಯೆಯ ಅಧ್ಯಕ್ಷರನ್ನು ಹೊಂದಿರುವ ಕಸಾಪ ದೊಡ್ಡ ಸಂಸ್ಥೆಯೇ ಸರಿ. ಇದೂ ಅಲ್ಲದೆ ರಾಜ್ಯ ಕಾರ್ಯಕಾರಿ, ಜಿಲ್ಲಾ ಕಾರ್ಯಕಾರಿ, ತಾಲೂಕು ಕಾರ್ಯಕಾರಿ, ಘಟಕಗಳ ಕಾರ್ಯಕಾರಿ ಎಂದು ದೊಡ್ಡ ಪಡೆಯೇ ರಾಜ್ಯದಲ್ಲಿದೆ. ಇವರಲ್ಲಿ ಕೆಲವರು ಸಮರ್ಥರು ಇದ್ದರೆ ಇನ್ನು ಕೆಲವರು ನಾಮ್‌ಕಾವಾಸ್ಥೆ ಇದ್ದವರೂ ಇದ್ದಾರೆ. ಅಂಥವರು ಪರಿಷತ್ತಿನ ಸಭೆಗಳಿಗೆ ಹಾಜರಾಗುವುದೇ ದೊಡ್ಡ ಕೆಲಸ ಅಂದುಕೊಂಡಿದ್ದಾರೆ.

ಇದುವರೆಗೆ ಕೇಂದ್ರ ಪರಿಷತ್ತು ಇರುವ ಬೆಂಗಳೂರಲ್ಲಿ ಸಾಮಾನ್ಯ ಸಭೆಗಳಾಗುತ್ತಿದ್ದವು. ಆದರೆ ಈ ಬಾರಿ ಈ ಸಭೆ ಕೋಟಾದಲ್ಲಿ ನಡೆಯಿತು. ಯಾಕೆ ಅಂತ ಗೊತ್ತಿಲ್ಲ. ಐದು ವರ್ಷದ ರಾಜಕಾರಿಣಿಗಳು ವಿಧಾನ ಸೌಧವನ್ನು ಇದ್ದಲ್ಲೇ ಇಟ್ಟಿದ್ದಾರೆ. ಆಡಳಿತದ ಶಕ್ತಿ ಸ್ಥಳ ಇರುವ ಕಡೆ ಜನ ಬರಬೇಕು. ಬರುತ್ತಾರೆ. ಮಹತ್ವದ ಬದಲಾವಣೆ ಇದ್ದಲ್ಲಿ ಹೆಚ್ಚು ಜನ ಸಭೆಗೆ ಬರಬೇಕು ಅಂದರೆ ಕೇಂದ್ರ ಪರಿಷತ್ತು ಇದ್ದಲ್ಲೇ ಅದು ನಡೆಯಬೇಕು. ಆದರೆ ಕೋಟಾದಲ್ಲಿ ಯಾಕೆ ನಡೆಯಿತೋ ಗೊತ್ತಿಲ್ಲ.

ಪತ್ರಿಕಾ ವರದಿಗಳು ಹೇಳಿದಂತೆ ಕೋಟಾದ ಸಭೆಗೆ ಹೋದವರ ಸಂಖ್ಯೆ ಎಂಟು ನೂರಾ ಎರಡು ಮಾತ್ರ. ಆದರೆ ಪರಿಷತ್ತಿನ ಸದಸ್ಯರ ಸಂಖ್ಯೆ ಮೂರು ಲಕ್ಷಕ್ಕೂ ಹೆಚ್ಚು. ಪರಿಷತ್ತಿನ ಬಹುತೇಕ ಆಡಳಿತ ಸಮಿತಿಯ ಜನರೇ ಅಲ್ಲಿ ಹಾಜರಾಗಿರುತ್ತಾರೆ. ಇಂಥವರೇ ಮೊನ್ನೆ ಕೋಟಾಕ್ಕೆ ಹೋದದ್ದು. ಇಂಥವರದ್ದೇ ಸಂಖ್ಯೆ ಹೆಚ್ಚೂ ಕಡಿಮೆ ೭೯೫. ಮೂರು ಲಕ್ಷಕ್ಕೂ ಹೆಚ್ಚು ಸದಸ್ಯರಿರುವ ಪರಿಷತ್ತಿನ ಸಾಮಾನ್ಯ ಸದಸ್ಯ ಯಾವ ದರ್ದಿಗೆ ಅಲ್ಲಿ ಹೋಗಬೇಕು? ದರ್ದು ಇದ್ದವರೇ ಅಲ್ಲಿಗೆ ಹೋಗಬೇಕಲ್ಲವೆ. ಹಾಗೆ ನೋಡಿದರೆ ಇದು ರಾಜಕಾರಣಿಗಳು ಹೂಡುವ ಅಧಿಕಾರ ಮೋಹಿ ರಣತಂತ್ರದ ಭಾಗವೇ ಆಗಿತ್ತು ಅನ್ನಬಹುದು. ಅಲ್ಲಿ ಸೇರಿದ್ದ ೮೦೨ ಸದಸ್ಯರಲ್ಲಿ ೭೯೫ ಮತಗಳು ನಿರ್ಣಯದ ಪರ ಬಿದ್ದಿವೆಯಂದರೆ ಸಾಮಾನ್ಯ ಸದಸ್ಯರಾರೂ ಅತ್ತ ಸುಳಿದಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ರಾಜರ ಕಾಲದಲ್ಲಿ ಸಾಹಿತ್ಯ ಅವರ ಆಶ್ರಯದಲ್ಲಿತ್ತು. ಅದು ವಂದಿ ಮಾಗಧರ ಕಾಲ. ರಾಜ ಆಗ ಸಾಹಿತಿಗಳಿಗೆ ದ್ರವ್ಯ ಮತ್ತು ಬಿರುದು ಬಾವಲಿ ಕೊಡುತ್ತಿದ್ದನೇ ಹೊರತು ಉಳಿದಂತೆ ಅವರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅದರಿಂದ ಉತ್ತೇಜಿತರಾದ ಕವಿಗಳು ರಾಜ ದೇವಾಂಶ ಸಂಭೂತನೆಂದು ಬರೆದರು. ಘೋಷ ವಾಕ್ಯಗಳನ್ನು ಹೇಳಿ ಪಂಡಿತರಾದರು. ಉಘೇ …! ಉಘೇ…! ಎಂದದ್ದಕ್ಕೆ ಮತ್ತೆ ಅವರ ಮೇಲೆ ರಾಜ ಹೊನ್ನಿನ ರಾಶಿಯನ್ನೇ ಸುರಿಯುತ್ತಿದ್ದ. ರಾಜ ನರ್ತಕಿಯರಿಗೂ ಇಂಥ ಪಂಡಿತರಿಗೂ ವ್ಯತ್ಯಾಸವೇ ಇರುತ್ತಿರಲಿಲ್ಲ. ಅವನು ಮಾಡುತ್ತಿದ್ದುದೂ ಅದನ್ನೇ. ಆಕೆ ಮಾಡುತ್ತಿದ್ದೂ ಅದನ್ನೇ.

ಪ್ರಸಕ್ತ ಅಧ್ಯಕ್ಷರುಗಳು ಚುನಾವಣೆ ಎದುರಿಸಿದ್ದು ಮೂರು ವರ್ಷದ ಅವಧಿಗೆ ಎಂದು. ಸದಸ್ಯರು ಓಟು ಹಾಕಿದ್ದೂ ಮೂರು ವರ್ಷ ಇದ್ದು ಬರಲಿ ಎಂದು. ಈಗ ಆಯ್ಕೆಗೊಂಡ ನಂತರ ಇದೇ ಜನ ತಮ್ಮ ಅವಧಿಯನ್ನು ತಾವೇ ರಾಜಕಾರಣಿಗಳ ಥರ ಐದು ವರ್ಷಕ್ಕೆ ಏರಿಸಿಕೊಂಡಿರುವುದು ನೈತಿಕವಾಗಿ ಸುತಾರಾಂ ಸರಿಯಲ್ಲ. ಮೂರು ವರ್ಷಕ್ಕೆ ಅವಧಿ ಪೂರೈಸಿ ಮತ್ತೆ ಇವರೇ ಮುಂದಿನ ಚುನಾವಣೆಯಲ್ಲಿ ಗೆದ್ದು ಬರವುದು ಬಿಟ್ಟು ಹೀಗೆ ಹಿಂಬಾಗಿಲಿನಿಂದ ಅವಧಿ ವಿಸ್ತರಿಸಿಕೊಂಡಿರುವುದು ಸಾಂಸ್ಕೃತಿಕ ಮನಸ್ಸುಗಳಿಗೆ ನೋವಾಗಿರುವುದಂತೂ ಖಂಡಿತ.

ಒಮ್ಮೆ ಅಧ್ಯಕ್ಷರಾದವರು ಇನ್ನೊಂದು ಅವಧಿಗೆ ಚುನಾವಣೆಗೆ ನಿಲ್ಲಬಾರದೆಂಬ ನಿಲುವಿಗೂ ಇವರ್ಯಾರೂ ಅಂಟಿಕೊಂಡಿಲ್ಲ. ಯಾಕಂದರೆ ಇವರಿಗೆ ರಾಜಕಾರಿಣಿಗಳೇ ಮಾದರಿ ಆದಲ್ಲಿ ಅಂಥದನ್ನು ಯೋಚಿಸುವ ಮನಸ್ಸು ಎಲ್ಲಿರುತ್ತದೆ. ಸರಕಾರದ ಸಹಾಯಧನ ಕತ್ತಿಯ ಅಲುಗಿನಂತೆ. ಅಲುಗಿನ ಹಿಡಿ ಹಿಡಿದರೆ ಉಪಯೋಗಕ್ಕೆ ಬರುತ್ತದೆ. ಮೊನೆ ಹಿಡಿದರೆ ಬೆರಳೇ ಕತ್ತರಿಸುತ್ತದೆ. ಇಲ್ಲಿ ಸಹಾಧನ ಕೆಂಜಗದ ಗೂಡಾಗಿ ಕೂತಿದೆ. ಜಾತಿ ರಾಜಕಾರಣ. ವೃತ್ತಿ ರಾಜಕಾರಣ, ಅಂತಸ್ತಿನ ರಾಜಕಾಣ, ಪ್ರಾದೇಶಿಕತೆಯ ರಾಜಕಾರಣ ಏನಿಲ್ಲ ಇಲ್ಲಿ? ಇಂಥ ಗೋಜಲಿನ ಸಂತೆಯಲ್ಲಿ ಹೊಸದು ಯೋಚಿಸುವ, ಹೊಸ ತಲೆಮಾರಿಗೆ ಅವಕಾಶ ನೀಡದ ಇಂಥ ಕುಟಿಲ ನೀತಿಗಳು ಪರಿಷತ್ತಿನ ಮೂಲೋದ್ದೇಶಕ್ಕೆ ಕತ್ತಿ ಸವರುತ್ತಿರುವುದು ವಿಷಾದದ ಸಂಗತಿ.

ಆದರೆ ರಾಜರ ಕಾಲದಲ್ಲೇ ಅಸ್ತಿತ್ವಕ್ಕೆ ಬಂದ ಕನ್ನಡ ಸಾಹಿತ್ಯ ಪರಿಷತ್ತು ಇಂಥ ತದ್ವಿರುದ್ಧ ಸಂಗತಿಗಳಿಂದ ಬೆಳೆದದ್ದೇ ತನ್ನ ಪಾವಿತ್ರತೆಯಿಂದ. ಜನೋಪಕಾರಿ ಮೈಸೂರು ಅರಸರು ಪರಿಷತ್ತನ್ನು ತಮ್ಮ ಆಸ್ಥಾನದಲ್ಲಿ ಇರಿಸಿಕೊಳ್ಳಲಿಲ್ಲ. ಅದನ್ನು ದೂರದಲ್ಲೇ ಇಟ್ಟು ಅದರ ಸ್ವಾಯತ್ತತೆಗೆ ಭಂಗ ಬಾರದಂತೆ ಬೆಳೆಸಿದರು. ಸಾಹಿತ್ಯ ಪರಿಷತ್ತಿನಲ್ಲಿ ಆಗ ಇದ್ದವರೆಲ್ಲ ಭಾಷೆ ಮತ್ತು ಸಾಹಿತ್ಯದ ಪರಿಚಾರಕರಾಗಿದ್ದರು. ರಾಜರ ಕಾಲದಲ್ಲಿದ್ದರೂ ವಂದಿ ಮಾಗಧರಾಗದೆ, ರಾಜ ನರ್ತಕಿಯರಾಗದೆ ಪರಿಷತ್ತು ತನ್ನ ಧೀಮಂತತೆಯನ್ನು ಸಾರಿತು. ಕಸಾಪದ ಸೂತ್ರ ಹಿಡಿದವರಿಗೆ ಘನತೆಯಿತ್ತು. ಕನ್ನಡ ಕೈಂಕರ್ಯ ಮಾಡಿದ ಅನುಭವ ಇತ್ತು.

ಈಗ ಬಿಡಿ. ಈಗ ಪ್ರಜಾ ಪ್ರಭುತ್ವ. ಅದರಡಿಯಲ್ಲಿ ಎಲ್ಲಕ್ಕೂ ನಿಯಮಗಳಿವೆ. ಕ.ಸಾ.ಪ ಸದ್ಯಸ್ಯರಾದ ಯಾರು ಬೇಕಾದವರೂ ಚುನಾವಣೆಗೆ ನಿಂತು ಗೆದ್ದು ಬರಬಹುದು. ಚುನಾವಣೆ ಅಂದರೆ ಗೊತ್ತಲ್ಲ. ಹಿಂದೆ ಯಾವತ್ತೂ ನಡೆಯದಿದ್ದ ತುರುಸು ಈಗ ಕಸಾಪ ಚುನಾವಣೆಗೆ ಬಂದಿದೆ. ಸಾಹಿತಿಯಾಗಿ ಎಷ್ಟೇ ಪ್ರಸಿದ್ಧಿ ಪಡೆದವರೂ ಇಂದು ಕಸಾಪ ಚುನಾವಣೆ ಅಂದರೆ ಬೆದರುತ್ತಾರೆ. ಇಲ್ಲ, ಅಸಹ್ಯ ಪಡುತ್ತಾರೆ. ಇತ್ತೀಚಿನ ವಾದವೆಂದರೆ ಕಸಾಪ ಅಂದರೆ ಕೇವಲ ಸಾಹಿತಿಗಳು ಇರುವ ಕೂಟವಲ್ಲ. ಬರೀ ಸಾಹಿತಿಗಳೇ ಪರಿಷತ್ತಿನಲ್ಲಿ ಇರಬೇಕೆಂದೂ ಇಲ್ಲ. ಅದು ಕನ್ನಡಿಗರ ಸಂಸ್ಥೆ. ಸದಸ್ಯರಾದ ಯಾವುದೇ ಕನ್ನಡಿಗ ಚುನಾವಣೆಗೆ ನಿಲ್ಲಬಹುದು. ಮತ್ತು ಗೆದ್ದೂ ಬರಬಹುದು. ಎಂಬ ಮಾತು ಸುರುವಾಗಿದೆ. ಅದು ಈಗ ಚುನಾವಣಾ ಪದ್ಧತಿ ಆಧಾರಿತವಾಗಿರುವುದರಿಂದ ಪ್ರಜಾಪ್ರಭುತ್ವದ ಹೆಸರು ಹೇಳಿಕೊಂಡು ಅದರ ರೂಪ ಬದಲಿಸಬಹುದು ಅನ್ನುವಂಥ ಸ್ಥಿತಿ ಈಗ ನಿರ್ಮಾಣವಾಗಿದೆ. ಈಗ ನಡೆದ ಕಸಾಪ ಸಾಮಾನ್ಯ ಸಭೆ ಮತ್ತು ಅದರ ನಿರ್ಣಯಗಳನ್ನು ಗಮನಿಸಿದರೆ ಪರಿಷತ್ತಿನ ರೂಪ ಬದಲಿಸುವ ಹಿಂದಿನ ಉದ್ದೇಶದ ಅರಿವಾಗುತ್ತದೆ.

ಇತ್ತೀಚೆಗೆ ರಾಜಕಾರಿಣಿಗಳು ಮೈಸೂರು ಅರಸರ ಜತೆಗೆ ತಮ್ಮನ್ನು ಹೋಲಿಸಿಕೊಳ್ಳತೊಡಗಿದ್ದಾರೆ. ಅವರನ್ನೇ ಮಾದರಿಯಾಗಿಟ್ಟುಕೊಂಡ ಪರಿಷತ್ತಿಗರು ಮುಂದೊಂದು ದಿನ ಕನ್ನಡದ ಕೈಂಕರ್ಯದಲ್ಲಿ ಮಹಾರಾಜರಿಗಿಂತ ತಾವೇ ಮೇಲು ಅನ್ನುವಂತಾಗದಿರಲಿ. ಸಾಹಿತ್ಯ ಪರಿಷತ್ತಿನ ಮಾನ ಕಾಪಾಡಲಿ. ಹಾಗಾದಲ್ಲಿ ಕನ್ನಡದ ಪ್ರಾತಿನಿಧಿಕ ಸಂಸ್ಥೆಯ ಮಾನವೂ ಉಳಿಯುತ್ತದೆ. ***

#ಸಹತಯ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW