– ಸವಿತಾ ಪ್ರಭಾಕರ
”ರೀ…! ನಂಗೆ ಈ ಕಲರ್ ಇಷ್ಟ ಇಲ್ಲಾಂತ ಗೊತ್ತಿಲ್ವ ನಿಮ್ಗೆ? ಯಾಕ್ರೀ ತಂದ್ರೀ ಈ ಸೀರೇ?”
”ಅಯ್ಯೋ… ನನ್ನ ಸ್ನೇಹಿತನ ಜತೆ ಅಂಗಡೀಗೆ ಹೋಗಿದ್ದೆ. ಚನ್ನಾಗಿ ಕಾಣ್ತು. ತಂದೆ. ನಿನ್ನ ಕೇಳೋಕೆ ನೀನೆಲ್ಲಿದ್ದೆ. ಪೋನು ಬೇರೆ ಹತ್ರ ಇರೋಲ್ಲ ನಿಂಗೆ.”
”ನನ್ನ ಕರ್ಕೊಂಡೇ ಹೋಗಿ ತರಬಹುದಿತ್ತಲ್ಲ?”
”ನೋಡು ಇಷ್ಟವಾದ್ರೆ ಉಟ್ಕೋ. ಇಲ್ಲಾಂದ್ರೆ ಬಿಸಾಕು ಅಷ್ಟೆ.”
ಸಿಡುಕಿದ ಗಂಡ ಹೊರಗೆ ಹೊರಟು ಹೋದ.
ದೀಪ್ತಿ ಸೀರೆಯನ್ನು ಅಷ್ಟೇ ಕೋಪದಲ್ಲಿ ಮೂಲೆಗೆಸೆದಳು.
ಮೂರು ದಿನವಾಯಿತು. ಗಂಡ-ಹೆಂಡತಿ ನಡುವೆ ಮೌನಗೀತೆ. ಇವಳು ಚಪಾತಿ ಬೇಯಿಸುತ್ತ ತಟ್ಟೆಗೆ ಹಾಕುತ್ತಿದ್ದಳು. ಅವನು ಊಟ ಮಾಡುತ್ತಿದ್ದ. ಆಗೀಗ ಕೇಳುತ್ತಿದ್ದುದು ಟಿ.ವಿ. ಸದ್ದು ಮಾತ್ರ.
ಮತ್ತೆರಡು ದಿನ ಕಳೆದರೂ ಯಾವುದೇ ಬದಲಾವಣೆಯಾಗಲಿಲ್ಲ. ಯಾರೂ ಸೋಲಲೂ ಇಲ್ಲ.
ಮರುದಿನ ಬೆಳಿಗ್ಗೆ ಬೇಗ ಆಫೀಸೀಗೆ ಹೊರಟು ಹೋದ ಅರ್ಜುನ್. ತಿಂಡಿ ತಿನ್ನಲು ಬೇಜಾರಾಗಿ ಕೂತಿದ್ದಳು ದೀಪ್ತಿ.
”ಅಮ್ಮಾ…!” ಹೊರಗೆ ಯಾರದೋ ಕೂಗು ಕೇಳಿಸಿತು.
ದೀಪ್ತಿ ಎದ್ದು ಹೋಗಲು ಬೇಸರವಾಗಿ ಕೂತೇ ಇದ್ದಳು.
”ಅಮ್ಮಾ…! ಸ್ವಲ್ಪ ಬಾಗಿಲು ತಗೀತೀರಾ?…”
ಮತ್ತೆ ಕೇಳಿದ ಅದೇ ದನಿಯಿಂದಾಗಿ ಬೇಸರವಾಗಿ ಎದ್ದು ಹೋಗಿ ಬಾಗಿಲು ತರೆದಳು.
”ಏನಮ್ಮ? … ಏನು ಬೇಕಾಗಿತ್ತು ನಿಂಗೆ?”
”ಅಕ್ಕ. ಬೇಜಾರು ಮಾಡ್ಕೋಬೇಡಿ. ತುಂಬ ಕಷ್ಟದ ಬದುಕು ನಮ್ಮದು. ನನ್ನ ಗಂಡ ರಸ್ತೆ ಬದಿ ಸೊಪ್ಪು ಮಾರ್ತಿದ್ದ. ಈಗ ಕಾಲು ಮುರ್ಕೊಂಡು ಮನೇಲಿ ಕೂತವ್ನೆ. ಅದ್ಯಾವ್ನೋ ಬೈಕು ಗುದ್ದಿ ಹೋದ ಅಮ್ಮಾವ್ರೇ. ಪಾಪಿ ಜನ್ಮ ಬದಕ್ಕೊಳ್ತು.
ಅದಕ್ಕೆ ನಾನೇನಮ್ಮ ಮಾಡ್ಬೇಕು?”
”ಏನಿಲ್ಲಕ್ಕ. ನಾನೇ ಸೊಪ್ಪು ತರ್ತಿದ್ದೆ ಮಾರೋಕೆ ಅಂತ. ಒಂದು ಹಸು ನನ್ನನ್ನ ಅಟ್ಟಿಸಿಕೊಂಡು ಬಂತ್ರೆವ್ವಾ. ನಾನು ಗಾಬರಿಯಿಂದ ಓಡ್ದೆ. ನಿಮ್ಮನೆ ಮುಂದಿನ ಆ ಖಾಲಿ ಜಾಗದಲ್ಲಿ ಒಂದು ಮುಳ್ಳಿನ ಗಿಡದ ಪೊದೆ ಇದೆ ನೋಡಿ. ಅದಕ್ಕೆ ಸಿಕ್ಕಿ ಹಕ್ಕೊಂಡು ಬಿಡ್ತು ಈ ಸೀರೆ. ಹರಿದೇ ಹೋಯ್ತು ನೋಡಕ್ಕ. ಪಾಪ ನನ್ನ ಗಂಡ ಯಾರದೋ ಮನೇಲಿ ಕಾಡಿ ಬೇಡಿ ತಂದು ಕೊಟ್ಟಿದ್ದ ಅಕ್ಕಾ. ಈಗ ನೋಡಿ ಹರ್ದು ಹೋಗಿ ಮೈಯೆಲ್ಲಾ ಕಾಣ್ತಿದೆ. ಹೆಂಗಕ್ಕಾ ಗಂಡನ ಮುಂದೆ ಹೋಗಿ ನಿಂತ್ಕಳ್ಲಿ. ಯಾವುದಾದ್ರೂ ಹಳೇ ಸೀರೆ ಇದ್ರೆ ಕೊಡಿ ಅಕ್ಕಾ. ಉಟ್ಕೊಂಡು ಮನೇಗೆ ಹೋಗ್ತೀನಿ. ಬಸ್ನಲ್ಲಿ ಹೋಗಬೇಕು ಅಕ್ಕಾ. ಗಂಡಸ್ರ ಕಣ್ಣು ಕಂಬಳೀ ಹುಳು ಇದ್ದಂಗೆ. ಮುಜುಗುರ ಆಗ್ತಿದೆ ಅಕ್ಕಾ.”
ದೀಪ್ತಿ ಒಮ್ಮೆ ಆಕೆಯನ್ನು ನೋಡಿದಳು. ಹರಿದ ಸೀರೆಯಲ್ಲಿ ಮೈ ಮುದುಡಿಕೊಂಡಿದ್ದಳು. ಮರು ಮಾತಾಡದೆ ಒಳಗೆ ಹೋದಳು. ಕೈಲಿ ಒಂದು ಸೀರೆ. ಅದರ ಮೇಲೆ ಹತ್ತು ರೂಪಾಯಿಯ ಎರಡು ನೋಟು ಇಟ್ಟು ಹೊರ ಬಂದು ಆ ಹೆಂಗಸಿನ ಕೈಗಿತ್ತಳು. ಹೆಂಗಸಿನ ಕಣ್ಣಲ್ಲಿ ನೀರು ತುಂಬಿತು.
ಒಳಗೆ ಬಂದ ದೀಪ್ತಿ ಮೂಲೆಯಲ್ಲಿ ಬಿದ್ದಿದ್ದ ಗಂಡ ತಂದಿದ್ದ ಆ ಸೀರೆಯನ್ನು ನೋಡಿದಳು. ತಾನು ತಪ್ಪು ಮಾಡಿದೆ ಅನಿಸಿತು. ಪ್ರೀತಿಯಿಂದ ಅದನ್ನು ಮುಟ್ಟಿ ನೋಡಿದಳು. ಗಂಡ ಪ್ರೀತಿಯಿಂದ ತಂದು ಕೊಟ್ಟದ್ದಕ್ಕೆ ಬೆಲೆ ಕಟ್ಟಾಲಾಗದು. ಆಕೆಯ ಗಂಡ ಬೇಡಿ ತಂದು ಕೊಟ್ಟಿದ್ದ. ಆದರೆ ತನ್ನ ಗಂಡ ದುಡಿದು ಸಂಪಾದಿಸಿದ ಹಣದಿಂದ ತಂದು ಕೊಟ್ಟಿದ್ದಾನೆ. ಇದಕ್ಕೆ ಹೆಸರಿಡುವುದೇ? ಸೀರೆಯನ್ನು ಕಣ್ಣಿಗೊತ್ತಿಕೊಂಡಳು. ಬೆರಳುಗಳು ಸೀರೆಯನ್ನು ನೇವರಿಸಿದವು.
ಸಂಜೆ ಅರ್ಜುನ್ ಆಫೀಸೀನಿಂದ ಬಂದಾಗ ದೀಪ್ತಿ ಆ ರೇಶ್ಮೆ ಸೀರೆಯುಟ್ಟುಗೇಟಿನ ಬಳಿ ನಿಂತಿದ್ದಳು. ಅವಳ ನಗು ಮುಖವನ್ನು ಕಂಡು ಅವನ ಮುಖದಲ್ಲೂ ನಗು ಅರಳಿತು.
#ಮನಕತ