ಶ್ರೀದೇವಿಗೆ ಕಾಂಜೀವರಂ ಸೀರೆ, ಕನ್ನಡತಿಗೆ ನೂಲಿನ ಸೀರೆ….
ನನ್ನ ದಿನ ಶುರುವಾಗುವುದೇ ದಿನಪತ್ರಿಕೆ ಓದಿನ ಮೂಲಕ. ಅದು ಪ್ರಿಂಟ್ ಮೀಡಿಯಾ ಆಗಿಬಹುದು ಇಲ್ಲವೇ, ಎಲೆಕ್ಟ್ರಾನಿಕ್ ಮೀಡಿಯಾ ಆಗಿಬಹುದು. ದೇಶ – ವಿದೇಶ ಸುದ್ದಿಗಳನ್ನುಇಂಥ ಮಾಧ್ಯಮಗಳ ಮುಖಾಂತರ ತಿಳಿದುಕೊಳ್ಳುತ್ತೇವೆ.
ಈ ಮಾಧ್ಯಮಗಳು ಈಗ ಎಲ್ಲರ ಸಂಗಾತಿಗಳಾಗಿವೆ. ಈ ಮಾಧ್ಯಮಗಳನ್ನು ನಾವು ಎಷ್ಟರ ಮಟ್ಟಿಗೆ ನಂಬಿ ಹೋಗಿದ್ದೇವೆ ಎಂದರೆ ಅದರಲ್ಲಿ ಏನೇ ಸುದ್ದಿ ಬಂದರೂ ನಾವು ಮರು ಪ್ರಶ್ನಿಸದೆ ಅವರು ಹೇಳಿದ್ದೇ ಸತ್ಯ ಎಂದು ನಂಬಿ ಬಿಡುತ್ತೇವೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಮಾಧ್ಯಮಗಳೆ ನಮ್ಮನ್ನು ನಿಯಂತ್ರಿಸುತ್ತಿದ್ದವೇನೋ ಅನ್ನಿಸಿ ಹೋಗಿದೆ. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾಗುವ ಇಲ್ಲಾ ಬಿತ್ತರವಾಗುವ ಸುದ್ದಿಗಳು ಜನರನ್ನುಗೊಂದಲಕ್ಕೀಡು ಮಾಡುವ ಕೆಲಸ ಮಾಡುತ್ತಿವೆಯೇ? ಎನ್ನುವ ಪ್ರಶ್ನೆ ನನ್ನಲ್ಲಿ ಕಾಡುತ್ತಿದೆ.
ಮೊನ್ನೆ ನಟಿ ಶ್ರೀದೇವಿ ನಿಧನರಾದಾಗ ‘ಸ್ಪೋರ್ಟ್ಸ್ ಸೆಲೆಬ್ರೇಶನ್ ಕ್ಲಬ್’ ಹಾಲ್ ನಿಂದ ನೇರ ಪ್ರಸಾರ ನಮ್ಮ ಕನ್ನಡ ಮಾಧ್ಯಮದವರು ಕೊಟ್ಟಿದ್ದು ಎಲ್ಲೊ ಒಂದು ಕಡೆ ವಿಚಿತ್ರವೆನಿಸಿತು. ಶ್ರೀದೇವಿ ‘ರೂಪ ಕಿ ರಾಣಿ’ ನಿಜ. ಅಷ್ಟೇ ಅಲ್ಲ ಒಳ್ಳೆ ಅಭಿನೇತ್ರಿಯು ಹೌದು. ಆಕೆ ನಿಧನಳಾದ ವಿಷ್ಯ ನಂಬಲು ನನಗೂ ಕಷ್ಟವಾಯಿತು.
ಆದರೆ ಶ್ರೀದೇವಿ ನಿಧನಳಾದ ಸುದ್ದಿಯನ್ನು ನಮ್ಮ ಕನ್ನಡ ಮಾಧ್ಯಮದವರು ಎಷ್ಟರ ಮಟ್ಟಿಗೆ ಪ್ರಚಾರ ಕೊಟ್ಟರೆಂದರೆ ಆಕೆ ತೀರಿದ ಎರಡು ವಾರ ಕಳೆದರೂ ನಮ್ಮ ಕನ್ನಡ ಪತ್ರಿಕೆಯಿಂದ ಮಾಸಲಿಲ್ಲ. ಇರಲಿ. ಒಬ್ಬ ಅಭಿನೇತ್ರಿಗೆ ಗೌರವ ಸಲ್ಲಿಸಬೇಕಾದದ್ದು ಎಲ್ಲರ ಕರ್ತವ್ಯ. ಆದರೆ ಕನ್ನಡ ಪತ್ರಿಕೆಯ ಯಾವ ಪುಟ ತಿರುವಿದರೂ ಶ್ರೀದೇವಿಯದೇ ಸುದ್ದಿ. ಶ್ರೀದೇವಿ ಹುಟ್ಟಿದ್ದು ತಮಿಳನಾಡಿನಲ್ಲಿ, ಮಾತೃ ಭಾಷೆ ತಮಿಳು, ಕನ್ನಡದಲ್ಲಿ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ದೊಡ್ಡ ಅಭಿನೇತ್ರಿಯಾಗಿ ಬೆಳೆದದ್ದು ಬಾಲಿವುಡ್ ನಲ್ಲಿ. ಹೀಗಿರುವಾಗ ನಮ್ಮ ಕನ್ನಡ ಮಾಧ್ಯಮದಲ್ಲಿ ಶ್ರೀದೇವಿ ಹವಾ ಇಷ್ಟೊಂದು ಬೇಕಿತ್ತಾ?ಎನ್ನುವುದು ನನ್ನ ಪ್ರಶ್ನೆ.
ಶ್ರೀದೇವಿಯ ನಿಧನಕ್ಕೆ ಕೊಟ್ಟ ಪ್ರಚಾರ ಕನ್ನಡದ ನಟರಿಗೆ ಸಿಗಲಿಲ್ಲ ಎಂಬುದು ನನ್ನ ವ್ಯಥೆ. ಈ ಹಿಂದೆ ನಟ ಕಲ್ಯಾಣ ಕುಮಾರ ಹೆಂಡತಿ ರೇವತಿ ನಿಧನರಾದಾಗ ಆಗಲಿ, ‘ಎಡಕ್ಕಲು ಗುಡ್ಡದ ಮೇಲೆ’ ಸಿನಿಮಾದ ಖ್ಯಾತಿಯ ನಟ ಚಂದ್ರಶೇಖರ ಸತ್ತಾಗ ಸಿಕ್ಕಿಲ್ಲ. ಸಿನಿಮಾ ಮಾಧ್ಯಮದಲ್ಲಿ ತಮ್ಮದೇ ಹೊಸ ಛಾಪು ಮೂಡಿಸಿದ ಕಾಶಿನಾಥ ಅವರು ತೀರಿದಾಗಲೂ ಈ ಪರಿಯ ಪ್ರಚಾರ ನೀಡಲಿಲ್ಲ. ವಿಜಯವಿರ ಪುತ್ರ ಸಿನಿಮಾದ ಅರ.ಎನ್. ಸುಧರ್ಶನ್ ಅವರು ತೀರಿದಾಗ ಹೇಗೆ ಪ್ರಚಾರ ಕೊಟ್ಟರೆಂದು ನೋಡಿದ್ದೇವೆ. ಆದರೆ ಶ್ರೀದೇವಿ ಸತ್ತು ಎರಡು ವಾರವಾದರೂ ನಮ್ಮ ಕನ್ನಡದ ಪತ್ರಿಕೆಗಳು ಅಘಾತದಿಂದ ಹೊರಬಂದಿಲ್ಲ. ಅಂಕಣಕಾರರರು ತಪ್ಪಿದರೆ ಸಿನಿಮಾ ವಿಮರ್ಶಕರು ಇನ್ನೂ ಅವರ ಬಗ್ಗೆ ಬರೆಯುತ್ತಲೇ ಇದ್ದಾರೆ. ಶ್ರೀದೇವಿ ಕನ್ನಡಿಗನ ಮನೆ…ಮನದ ಬಾಗಿಲು ತಟ್ಟುತ್ತಲೇ ಇದ್ದಾಳೆ ಕನ್ನಡಿಗರಾದ ನಾವು ನಮ್ಮ ತಾಯಿಗೆ ಹರಕು ಸೀರೆ ಉಡಿಸಿ, ಪರ ಭಾಷೆ ತಾಯಿಗೆ ರೇಷ್ಮೆ ಸೀರೆ ಉಡಿಸಿ ಚಂದ ನೋಡುವ ಉದಾರಿಗಳು.
ಅಷ್ಟೇ ಅಲ್ಲ, ಮೊನ್ನೆ ಮಾರ್ಚ್ ೨ ರಂದು ನಕ್ಸಲ ವಿರುದ್ಧ ಕಾರ್ಯಾಚರಣೆ ನಡೆದಾಗ ಕನ್ನಡಿಗರಾದ, ತೆಲಂಗಾಣ ಪೊಲೀಸ್ ಇಲಾಖೆ ನಕ್ಸಲ ನಿಗ್ರಹ ಪಡೆ ಕಮಾಂಡೋ ಬಿ.ಸುಶೀಲಕುಮಾರ (೩೩) ವಿರಾಮರಣವನ್ನಪ್ಪಿದರು. ಆ ಸುದ್ದಿಯು ಶನಿವಾರ ಪತ್ರಿಕೆಯ ಮುಖ ಪುಟದಲ್ಲಿ ಚಿಕ್ಕದಾಗಿ ವರದಿಯಾಗಿತ್ತು. ಆ ಹುತಾತ್ಮ ಕನ್ನಡಿಗನಿಗೆ ನಮ್ಮ ರಾಜ್ಯ ಸರ್ಕಾರ ಅಗೌರವ ತೋರಿಸಿದ್ದು ಮತ್ತದೇ ಪತ್ರಿಕೆಗಳಲ್ಲಿ ಸುದ್ದಿಯಾಯಿತು. ವಿಚಿತ್ರ ನೋಡಿ. ಅವರು ಸೇವೆಯಲ್ಲಿದ್ದ ಪಕ್ಕದ ರಾಜ್ಯ ತೆಲಂಗಾಣ, ಯೋಧನ ಕುಟುಂಬಕ್ಕೆ ೬೦ ಲಕ್ಷ ರೂ., ಪತ್ನಿಗೆ ಸರಕಾರಿ ನೌಕರಿ ಮತ್ತು ಯೋಧನ ಅಂತಿಮ ಸಂಸ್ಕಾರಕ್ಕಾಗಿ ೩ಲಕ್ಷ ನೀಡಿದರು. ಆದರೆ ಈ ವಿಷಯ ಮಾಧ್ಯಮದರಿಗೆ ಇದು ಯಾಂತ್ರಿಕ ಸುದ್ದಿ ಆಯಿತು. ಮಹತ್ವದ್ದಾಗಲಿಲ್ಲ ಎನ್ನುವುದಕ್ಕೆ ಭಾನುವಾರ ಅವರ ಸುದ್ದಿ ಆರನೇ ಪುಟಕ್ಕೆ ಹೋದಾಗಲೇ ತಿಳಿಯಿತು. ಇದೇ ಸುದ್ದಿ ಎಲೆಕ್ಟ್ರಾನಿಕ ಮಾಧ್ಯಮಗಳಲ್ಲಿ ಅಥವಾ ಪ್ರಿಂಟ್ ಮಾಧ್ಯಮಗಳಲ್ಲಿ ನಿರಂತರವಾಗಿ ಪ್ರಸಾರವಾಗಿದ್ದರೆ ಅದರ ಕತೆಯೇ ಬೇರೆಯಾಗುತ್ತಿತ್ತೇನೋ.
ನಾನು ಈ ಹಿಂದೆ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿಯೊಬ್ಬರ ಸಂದರ್ಶನ ಮಾಡಿದ್ದೆ. ಆದರೆ ಪತ್ರಿಕೆಯ ಸಂಪಾದಕ ಮಹಾಶಯರು ಅದನ್ನು ಪ್ರಕಟಿಸಲು ನಿರಾಕರಿಸಿದರು. ನಾನು ಸಂದರ್ಶಿಸಿದ ವ್ಯಕ್ತಿಯ ಸಾಧನೆ ಯಾವುದೇ ಸಿನಿಮಾ ನಟರಿಗಿಂತ ಕಮ್ಮಿ ಇರಲಿಲ್ಲ. ಆದರೆ ಸಂಪಾದಕರು ಯಾವುದಕ್ಕೂ ಸುತರಾಂ ಒಪಲಿಲ್ಲ. ಅವರಿಗೆ ಸ್ಟಾರ್ ನಟರ ಸಂದರ್ಶನ ಅಥವಾ ಕ್ರೈಂ ಸುದ್ದಿ ಬೇಕಾಗಿತ್ತು.
ಇಲ್ಲಿ ತಾನು ಮಾಡಿದ್ದೇ ಅಡುಗೆ, ತಿಂದಿದ್ದೇ ಊಟ ಅನ್ನುವ ಹಾಗೆ ಮಾಧ್ಯಮದವರು ಮಾಡಿದ್ದೇ ವರದಿ, ಪ್ರೇಕ್ಷಕ ನೋಡಿದ್ದೇ ಸುದ್ದಿಯಾಗಿದೆ.
#ಕನನಡಗರ