ಸನ್ಯಾಸಿ ಆಗಲು ಹೊರಟೆ

ಆಗ ೧೯೫೮-೫೯ ರ ಇಸವಿ. ನನಗಿನ್ನೂ ಎಂಟು ವರ್ಷ. ನಮ್ಮ ಊರಲ್ಲಿ ಆಗ ಸಣ್ಣಾಟಗಳು, ದೊಡ್ಡಾಟಗಳು ಯಥೇಚ್ಛವಾಗಿ ನಡೆಯುತ್ತಿದ್ದವು. ಊರ ಮಠದ ಜಾತ್ರೆಯ ಸಂದರ್ಭದಲ್ಲಿ ಕಂಪನಿ ನಾಟಕಗಳು ಬರುತ್ತಿದ್ದವು. ನಾಟಕಗಳಿಗೆ ಟಿಕೀಟು ಇರುತ್ತಿದ್ದವು. ಖುರ್ಚಿಯಾದರೆ ನಾಲ್ಕಾಣೆ. ಚಾಪೆಗೆ ಎರಡಾಣೆ. ನೆಲ ಒಂದಾಣೆ. ನನ್ನ ಅಪ್ಪನು ನಾಟಕ ಪ್ರೇಮಿ. ಆತ ಯಾವಾಗಲೂ ಒಂದಾಣೆ ನೆಲಕ್ಕೆ ಟಿಕೀಟ ತಗೆಸಿ ನಾಟಕ ನೋಡಿ ಬರುತ್ತಿದ್ದ. ಒಂದಿನ ನಾನು ಹಠಕ್ಕೆ ಬಿದ್ದು ಅಪ್ಪನೊಡನೆ ನಾಟಕ ನೋಡಲು ಹೋದೆ. ಹುಡುಗ ಅಂದರೂ ಕೇಳಲಿಲ್ಲ.ಒಂದಾಣೆ ವಸೂಲು ಮಾಡಿಕೊಂಡೇ ಟಿಕೀಟ ಕೊಟ್ಟರು. ಅವತ್ತಿನ ನಾಟಕದ ಹೆಸರು ‘ಮಹಾರಥಿ ಕರ್ಣ’ ಪೌರಾಣಿಕ ನಾಟಕ. ಅದೇ ನಾನು ನೋಡಿದ ಪ್ರಥಮ ನಾಟಕ. ಅದು ಯಾವ ಕಂಪನಿ ಎಂಬುದು ಈಗ ನೆನಪಿಲ್ಲ. ಅಲ್ಲಿಂದ ಸುರು ಆಯಿತು ನೋಡಿ. ನಾಟಕದ ಗೀಳು. ನನಗೆ ಗೊತ್ತಿಲ್ಲದಂತೆ ಕರ್ಣ ನನ್ನನ್ನು ಆವರಿಸತೊಡಗಿದ. ನನಗೆ ನಾನೇ ಕರ್ಣ ಅಂದುಕೊಳ್ಳುತ್ತ ಗುಡ್ಡದ ವಾರಿ ಹಿಡಿದು ತಿರುಗಾಡತೊಡಗಿದೆ. ಮನೆಯಲ್ಲಿ ನನ್ನ ಪ್ರೀತಿಯ ಆಡುಮರಿಯೊಂದಿತ್ತು.ಅದಕ್ಕೆ ಪರುವ ಎಂದೂ ಹೆಸರಿಟ್ಟಿದ್ದೆ. ಅದಕ್ಕೆ ಎಲೆ ತೊಪ್ಪಲು ತಂದು ಹಾಕುವುದು, ನೀರು ಕುಡಿಸುವುದು, ಕೆರೆಗೆ ಒಯ್ದು ಮೈ ತೊಳೆಯುವುದು ನನ್ನ ಪಾಲಿಗೆ ದಿನದ ಕೆಲಸವಾಗಿತ್ತು.

ಹೀಗೆ ಒಮ್ಮೆಗುಡ್ಡದ ಕೆಳಗಿನ ಬಕ್ಕನ ಬಾವಿಗೆ ನೀರು ಕುಡಿಸಲೆಂದು ಪರುವನನ್ನು ಕರೆದುಕೊಂಡು ಹೋಗಿದ್ದೆ. ಅಲ್ಲಿಯೇ ಆ ಸಾಧುವಿನ ದರ್ಶನವಾಯಿತು. ಅಲ್ಲಿದ್ದ ಶಿವಲಿಂಗ ಗುಡಿಯಿಂದ ಹೊರ ಬಂದ ಸಾಧು ನನ್ನನ್ನು ದಿಟ್ಟಿಸಿ ನೋಡಿ ಹೇಳಿದ. ಏನಲೇ ತಮ್ಮ, ಏನ್ ನಿನ್ನ ಹೆಸ್ರು. ಎಂದು ಕೇಳಿದ ನೇರವಾಗಿ.

ಶೇಕಣ್ಣರೀ…

ಯಾರ ಪೈಕಿ? ಎಲೈತಿ ಮನಿ – ಎಂದೆಲ್ಲ ವಿವರ ಕೇಳಿದ. ಏನನಿಸಿತೋ. ಹತ್ತಿರ ಬಂದು ತಲೆ ಸವರಿದ. ನನಗೆ ಯಾವ ಹೆದರಿಕೆಯೂ ಆಗಲಿಲ್ಲ. ಜಾತ್ರೆಗಳಲ್ಲಿ ಇಂಥ ಅನೇಕ ಸಾಧುಗಳನ್ನು ನೋಡಿದ್ದೆ.

ದೊಡ್ಡ ಲಕ್ಷಣ ಐತಿ ನಿನ್ನಕಣ್ಣಾಗ. ಬರತಿಯೇನು ನನ್ನ ಹಿಂದಿಂದ? ನಿನ್ನ ಸ್ವಾಮಿ ಮಾಡ್ತೀನಿ. ನನಗೆ ಅಚ್ಚರಿ ಅನಿಸಿತು. ಗಾಬರಿಯಾಗಲಿಲ್ಲ. ಏನಾದರೂ ತಿನ್ನಲು ಕೊಡುತ್ತಾನೇನೋ ಅದಕ್ಕೆ ಕರೆಯುತ್ತಿದ್ದಾನೆ ಅಂದುಕೊಂಡೆ. ಎಲ್ಲಿಗೆ, ಎಂದು ಕೇಳದೆ ಬರತೀನ್ರಿ ಅಂದು ಬಿಟ್ಟೆ. ಅವನಿಗೆ ಅಷ್ಟೇ ಸಾಕಾಯಿತೇನೋ. ಅದಕ್ಕೇ ಅವನು ನಿನ್ನ ಮನಿಗೆ ಕರಕೊಂಡು ನಡಿ. ಅಂದ. ಸಾಧು-ಸಜ್ಜನರ ಮೇಲೆ ಅಪ್ಪನಿಗೂ ಗೌರವ ಇತ್ತು. ನಾನು ತಲೆ ಅಲ್ಲಾಡಿಸಿದೆ. ಆಡಿನ ಮರಿ ಪರುವನೋದಿಗೆ ಸಾಧುವನ್ನು ಕರೆದುಕೊಂಡು ಮನೆಯತ್ತ ನಡೆದೆ. ಅಪ್ಪ ಮನೆಗೆ ಬಂದ ಸಾಧುವನ್ನು ನೋಡಿ ಕಾಲು ಬಿದ್ದು ನಮಸ್ಕರಿಸಿದ. ಹಾಸಿದ ಕಂಬಳಿ ಮೇಲೆ ಕೂತ ಸಾಧು ಅಪ್ಪನನ್ನು ನೋಡಿ ಹೇಳಿದ.

ನಾವು ಉಳವಿ ಕಡೆಯಿಂದ ಬಂದೇವಿ. ತಪಸ್ಸು ಮಾಡೂದಕ್ಕ ಗುಡ್ಡಾ-ಗುಡ್ಡಾ ಅಲೆದಾಡುದಕ್ಕ ಹತ್ತೀವಿ. ನಮ್ಮ ಸೇವಾ ಮಾಡೂದಕ್ಕ ಯೋಗ್ಯ ಶಿಷ್ಯನ ಹುಡುಕತಿದ್ವಿ ಆರು ತಿಂಗಳಿಂದ. ಇವತ್ತ ಸಿಕ್ಕಾನ. ನನಗ ನಿಮ್ಮ ಮಗ ಬೇಕು. ನಮ್ಮ ಸೇವಾ ಮಾಡೂದಕ್ಕ. ಮುಂದ ಅವನ್ನ ದೊಡ್ಡ ಸಾಧೂನ ಮಾಡತೀನಿ. ಪವಾಡ ಪುರುಷೂನ್ನ ಮಾಡತೇವಿ, ಸತ್ಪುರಷನ ಮಾಡತೇವಿ ಅಂದಾಗ ಅಪ್ಪ ದಿಮ್ಮನೆ ಕುಳಿತು ಬಿಟ್ಟ. ಆದರೆ ನನ್ನಲ್ಲಿ ಒಂದು ಆಸೆ ಚಿಗುರಿತು. ನಾನು ಸಾಧು ಆದರೆ ಎಲ್ಲರೂ ನನ್ನ ಬಳಿ ಬರುತ್ತಾರೆ. ನಮಸ್ಕಾರ ಮಾಡುತ್ತಾರೆ. ಎಲ್ಲರಿಗೂ ಆಶೀರ್ವಾದ ಮಾಡುತ್ತೇನೆ. ಏನೇನೊ ಕಲ್ಪಿಸಿಕೊಂಡೆ.

ಇಲ್ಲಿ ನಾವೊಂದು ಮಠ ಕಟ್ಟಿಸಬೇಕು. ಮಠ ಅಂದಮ್ಯಾಲ ಗುರುವಿನ ಜೋಡಿ ಪಟ್ಟದ ಶಿಷ್ಯನೂ ಬೇಕ ಬೇಕು. ಇವಂಗ ಶಿವಕುಮಾರಸ್ವಾಮಿ ಅಂತ ಕರೀತೀವಿ. ಮುಂದ ದೊಡ್ಡ ಸ್ವಾಮಿ ಆಗತಾನ.

ಏನೇನೊ ಹೇಳಿದರು ಸಾಧು. ಅಪ್ಪನಿಗೆ ಮಂಕುಬೂದಿ ಎರಚಿದಂತಾಗಿತ್ತು. ದಿಮ್ಮನೆ ಕುಳಿತುಬಿಟ್ಟ. ನನಗು ಏನೂ ತಿಳಿಯಲಿಲ್ಲ. ಸಾಧು ನನ್ನನ್ನು ಗುಡ್ಡದ ಕಡೆ ಕರೆದುಕೊಂಡು ನಡದೇ ಬಿಟ್ಟ. ನಾನು ಅವನ ಹಿಂದೆ ಹೊರಟೇ ಬಿಟ್ಟೆ.

ಗುಡ್ಡದಲ್ಲಿರುವ ಕೊಳ್ಳದ ಸಿದ್ದಪ್ಪನ ಗುಡಿ ನೋಡಲು ಚಿಕ್ಕದು. ಮೇಲಿನಿಂದ ನೀರು ಬೀಳುತ್ತದೆ. ಅದರೊಳಗೆ ಒಂದು ಗವಿ. ಅಲ್ಲಿ ಸಿದ್ದಪ್ಪ ಎಂದು ಕರೆಯಲ್ಪಡುವ ಒಂದು ಕಲ್ಲಿದೆ. ಅದೇ ಅಲ್ಲಿನ ದೇವರು. ಸಾಧು ನನ್ನನ್ನು ಅಲ್ಲಿಗೆ ಕರೆ ತಂದವ ನನ್ನನ್ನು ಮುಂದೆ ಕೂಡ್ರಿಸಿಕೊಂಡು ಹೇಳಿದ. ಇವತ್ತಿನಿಂದ ನಿನಗ ಅಪ್ಪ-ಅಣ್ಣ ಯಾರು ಇಲ್ಲ. ಎಲ್ಲ ನಿನ್ನ ಪಾಲಿಗೆ ಸತ್ತರು. ಗುರುವಿನ ಗುಲಾಮನಾಗು. ಎಲ್ಲ ಸಿಗತೈತಿ ನಿನಗ. ಅಂದು ಕೊರಳಿಗೆ ಒಂದು ರುದ್ರಾಕ್ಷಿ ಕಟ್ಟಿದ. ನಾನು ಏನಾಗುತ್ತಿದ್ದೇನೆ ಎಂಬ ಕಲ್ಪನೇಯೂ ನನಗೆ ಬರಲಿಲ್ಲ. ಮುಂದಿದ್ದ ವಿಭೂತಿಯನ್ನು ಮೈಗೆ ಸವರಿಸಿಕೊಂಡು ಸಾಧುವಿನ ಮುಖ ನೋಡುತ್ತಾ ಕುಳಿತೆ. ಅವನ ಮುಖದಲ್ಲಿ ನೂರಾರು ಬೆಕ್ಕುಗಳು ಕಂಡವು.ಅವು ಒಮ್ಮೊಮ್ಮೆ ಹುಲಿಯಾಗಿ, ಚಿರತೆಯಾಗಿ, ಕಾಡು ಬೆಕ್ಕಾಗಿ ಕಂಡವು. ನೋಡುತ್ತ, ನೋಡುತ್ತ ಕಣ್ಣಿಗೆ ಕತ್ತಲು ಕವಿಯಿತು.

ಇತ್ತ ಊರಲ್ಲಿ ದೊಡ್ಡ ಕೋಲಾಹಲ. ಮ್ಯಾಲಿನ ಮನಿ ಹುಡುಗ ಶೇಕಪ್ಪ ಸಾಧು ಆಗೂದಕ್ಕೆ ಗುಡ್ಡಾ ಬಿದ್ದನ ಅಂತ ಸುದ್ದಿ. ಯಾರೋ ಮಹಾತ್ಮಾರು ಅವನನ್ನು ಕರೆದುಕೊಂಡು ಹೋಗಿದ್ದಾರೆ ಎಂಬ ಒಳ ಮಾತುಗಳು. ಸುದ್ದಿ ನನ್ನ ಸಾಲಿ ಗುರುಗಳಾದ ಯ.ರಾ. ಮರಕುಂಬಿ ಗುರುಗಳ ತನಕ ಹೋಯಿತು. ಅವತ್ತು ಮಧ್ಯಾಹ್ನ ಸಾಲಿಯಿಂದ ಸೀದಾ ಅವರು ನಮ್ಮ ಮನೆಗೆ ಬಂದರಂತೆ. ಅಪ್ಪನ ಬಾಯಿಂದ ಎಲ್ಲಾ ಕೇಳಿದ್ದಾರೆ. ಅಪ್ಪನ ಭೋಳೇತನಕ್ಕೆ ಮರುಗಿದ್ದಾರೆ. ಕೊನೆಗೆ ಅವರು ಹೇಳಿದ್ದು ಒಂದೇ ಮಾತು. ಶೇಕಪ್ಪ ಮುಂದ ಏನರ ಆಗಲಿ. ಮೊದ್ಲು ಸಾಲೀ ಕಲೀಲಿ. ಅಕ್ಷರ ಜ್ಞಾನ ಇಲ್ಲದಿದ್ದರೆ ಸಾಧೂ ಜೀವನ ವ್ಯಥ೯ ಅಂದರಂತೆ. ಅದೇನಾಯಿತೋ. ಅಪ್ಪನಿಗೆ ಅದೂ ಸರಿ ಅನ್ನಿಸಿತು. ರೊಯ್ಯನೆ ಗುಡ್ಡದ ಕಡೆ ಬಂದ ಅಪ್ಪ ಆಗಲೇ ಬಟ್ಟೆ ತ್ಯಜಿಸಿ ಕೌಪೀನ ಮೇಲಿದ್ದ ನನ್ನನ್ನು ಎಬ್ಬಸಿಕೊಂಡು ಊರಿನತ್ತ ಹೊರಟೇ ಬಿಟ್ಟ.ಅದನ್ನು ನೋಡುತ್ತಿದ್ದ ಸಾಧೂ ಗಾಬರಿಯಿಂದ ತಡೆಯಲು ಹೋದ. ಅಪ್ಪ ಎತ್ತರದ ದನಿಯಲ್ಲಿ ಹೇಳಿದ.

ಊರ ಮಂದಿ ಹೇಳ್ಯಾರ. ಶೇಕಪ್ಪ ಮದಲ ಅಕ್ಷರ ಕಲಿಬೇಕು ಅಂತ. ಅದಕ್ಕ ಅಕ್ಷರ ಕಲಿಸಿ ಎರಡು ವರ್ಷದ ಮ್ಯಾಲ ಯೋಚನಾ ಮಾಡಿ ಹೇಳತೀನಿ. ಊರ ಮಂದಿ ಗುಡ್ಡದ ತಳದಾಗ ಶೇಕಪ್ಪನ ದಾರೀ ನೋಡಿಕೋತ ನಿಂತಾರ. ನೀವು ಅಲ್ಲಿ ಬಂದರ ಪರಿಸ್ಥಿತಿ ವಿಕೋಪಕ್ಕೆ ಹೋಗೂ ಹಂಗೈತಿ ಅಂದ.

ಸಾಧುನ ಮುಖದಲ್ಲಿ ಗಾಬರಿ ಮೂಡಿತು.ಕವಲು ದಾರಿಯಲ್ಲಿ ನಿಂತಿದ್ದ ನನ್ನ ಜೀವನ ಬೇರೆ ಕಡೆ ತಿರುಗಿತು. ಇದಕ್ಕೆ ಕಾರಣರಾದವರು ನನ್ನ ಪ್ರಾಥಮಿಕ ಶಾಲೆಯ ವಿದ್ಯಾ ಗುರುಗಳಾದ ಯ.ರಾ.ಮರುಕುಂಬಿಯವರು. ಅವರು ಈಗ ನಿವೃತ್ತರಾಗಿ ಇಪ್ಪತೈದು ವರ್ಷಗಳಾಗಿವೆ. ಅವರು ನನ್ನ ಪಾಲಿಗೆ ಬರಿ ಅಕ್ಷರದ ಗುರುಗಳಲ್ಲ. ಜೀವನದ ಗುರುಗಳಾಗಿದ್ದಾರೆ.

(ಮುಂದುವರೆಯುತ್ತದೆ)

#ನನಪನಸರಳ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW