– ಶಾಲಿನಿ ಪ್ರದೀಪ್
ದೊಡ್ಡ ಪರದೆ ಮೇಲೆ ಸಿನಿಮಾ ನೋಡುವಾಗ ನಾನು ಸಹ ಈ ಥರ ಹೀರೊ ಆಗಬೇಕು. ದೊಡ್ಡ ವೇದಿಕೆಯಲ್ಲಿಒಬ್ಬ ದೊಡ್ಡ ಗಾಯಕ ಹಾಡುವಾಗ ನಾನು ದೊಡ್ಡ ಗಾಯಕನಾಗಬೇಕು ಎನ್ನುವ ಹಲವಾರು ಆಸೆಗಳು ಹುಟ್ಟುವುದು ಸಹಜ. ಇಂತಹ ಆಸೆಗಳಿಗೆ ಪುಷ್ಟಿ ನೀಡುವಂತೆ ಹಲವಾರು ರಿಯಾಲಿಟಿ ಶೋಗಳು ತನ್ನತ್ತ ಕೈ ಬಿಸಿ ಕರೆಯುತ್ತಿವೆ.
ಮೊನ್ನೆ ಕನ್ನಡ ಖಾಸಗಿ ವಾಹಿನಿಯೊಂದರಲ್ಲಿ ‘ಕನ್ನಡ ಕೋಗಿಲೆ’ ಎನ್ನುವ ಹಾಡಿನ ಆಡಿಷನ್ ಗೆ ಕರೆಯಲಾಗಿತ್ತು. ನನಗೂ ಆಡಿಷನ್ ಹೋಗುವ ಆಸೆಯೇನೋ ಇತ್ತು ನಿಜ. ಆದರೆ ನನಗಿದ್ದದ್ದೂ ಅಲ್ಪ-ಸ್ವಲ್ಪ ಸಂಗೀತದ ಜ್ಞಾನ. ಹಾಗಾಗಿ ನಾನು ಹೆದರಿ ಹೋಗಲಿಲ್ಲ. ಆದರೆ ನನ್ನ ಸ್ನೇಹಿತೆ ಒಳ್ಳೆಯ ಹಾಡುಗಾರ್ತಿ. ನನ್ನ ಬದಲಾಗಿ ಆಕೆಯನ್ನೇ ಅಲ್ಲಿಗೆ ಎಳೆದುಕೊಂಡು ಹೋದೆ.
ವಾಹಿನಿ ನೀಡಿದ್ದ ಓಡಿಷನ್ ಜಾಗಕ್ಕೆ ಬೆಳಗ್ಗೆ ೯ ಗಂಟೆಗೆ ಹೋದೆವು. ಗೇಟಿನ ಹೊರಬದಿಯಲ್ಲಿ ದೊಡ್ಡದಾದ ಚಂದನ ಶೆಟ್ಟಿಯ ಫೋಟೋ ಫ್ಲೆಕ್ಸ್ ಕಟ್ಟಲಾಗಿತ್ತು. ಆ ಫ್ಲೆಕ್ಸ್ ನೋಡಿ ಇನ್ನೂ ಉತ್ಸಾಹ ಹೆಚ್ಚಾಗಿ ಒಳಗೆ ಹೋದೆವು. ಅಷ್ಟೋತ್ತಿಗಾಗಲೇ ಸ್ಪರ್ಧಿಗಳ ದೊಡ್ಡಕ್ಯೂ ಇತ್ತು. ಆ ಕ್ಯೂ ನೋಡಿದ್ದೇ ತಡ ನನ್ನ ಸ್ನೇಹಿತೆ ‘ಅಯ್ಯೋ ಇಷ್ಟು ದೊಡ್ಡ ಕ್ಯೂ, ನಮ್ಮ ಸರದಿ ಬರಲು ತುಂಬಾ ಹೊತ್ತಾಗುತ್ತೆ. ಬೇಡ ಮನೆಗೆ ಹೋಗೋಣ’ ಎಂದು ರಾಗ ತಗೆದಳು. ನಾನು ಆಕೆಗೆ ಬೈದು ‘ನೋಡು… ಶ್ರೇಯಾ ಘೋಷಾಲ್, ಕನ್ನಡದಲ್ಲಿ ಸಿಂಧೂ ನಾಗರಾಜ್ ಸೇರಿದಂತೆ ಹಲವಾರು ದೊಡ್ಡ ದೊಡ್ಡ ಗಾಯಕರು ಈ ಥರ ಕ್ಯೂಲ್ಲಿ ನಿಂತೇ ಮುಂದೆ ಬಂದಿದ್ದು ಸುಮ್ನೆ ಬಂದು ನಿಂತ್ಕೋ’ ಅಂದೇ. ಬಹುಶ ಆಕೆಗೂ ಆಸೆ ಹುಟ್ಟಿತು ಅಂತ ಕಾಣುತ್ತೆ ತಿರುಗಿ ಮಾತಾಡದೆ ಸುಮ್ಮನೆ ಬಂದು ಕ್ಯೂ ನಲ್ಲಿ ನಿಂತಳು.
ಆ ಕ್ಯೂನಲ್ಲಿ ನಿಂತು ನಿಂತು ಕಾಲುಗಳು ಸಹ ಪದ ಹಾಡಲಾರಂಭಿಸಿ ದ್ದವು. ಕೊನೆಗೆ ನನ್ನ ಗೆಳತಿಯ ಸರದಿ ಬಂದಾಗ ಬಹುಶ ೧೧.೩೦ ಆಗಿರಬೇಕು. ಆ ಕ್ಯೂ ಕೇವಲ ಆಡಿಷನ್ ಫಾರ್ಮ್ ತಗೆದುಕೊಳ್ಳುವುದ ಕಷ್ಟೇ ಆಗಿತ್ತು. ಆಕೆಗೆ ಕೊಟ್ಟ ನಂಬರ್ ೩೫೬. ಫಾರ್ಮ್ ಭರ್ತಿ ಮಾಡಿದ ಅನಂತರ ಆಡಿಷನ್ ಕೊಡಲು ಮತ್ತೆ ಕಾಯಬೇಕಾಗಿತ್ತು.
ಇದರ ಮಧ್ಯೆದಲ್ಲಿ ಹೇಳಿಕೊಳ್ಳಲಾಗದ ಒಂದು ತೊಳಲಾಟ, ಒಂದು ರೀತಿಯ ಭಯ ನಮ್ಮನ್ನು ಆವರಿಸಿ ಬಿಟ್ಟಿತ್ತು. ತಿಂಡಿ, ಊಟದ ಪರಿವೆಯೂ ಇರಲಿಲ್ಲ. ಇದು ನಮಗಷ್ಟೇ ಅಲ್ಲ ಅಲ್ಲಿಗೆ ಬಂದವರ ಪ್ರತಿಯೊಬ್ಬರ ಕಣ್ಣಲ್ಲೂ ನೂರಾರು ಆಸೆಗಳು, ಮನಸ್ಸಿನಲ್ಲಿ ಆತಂಕಗಳು ಕಾಡಿದವು.
ಈ ಆಡಿಷನ್ ಗೆ ಕೆಲವರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದಿದ್ದರೆ, ಇನ್ನೂ ಕೆಲವರು ಗಂಡನನ್ನು ಇಲ್ಲವೇ ಹೆಂಡತಿಯನ್ನು ಕರೆದುಕೊಂಡು ಬಂದಿದ್ದರು. ಕೇವಲ ಸ್ಪರ್ಧಿಗಳಿಗಷ್ಟೇ ಅಲ್ಲ ಅವರ ಜೊತೆಗೆ ಬಂದವರಿಗೂ ಹಾಟ್ ಸೀಟ್ ಮೇಲೆ ಕೂತ ಅನುಭವ.
ಇದು ಬರಿ ಆಡಿಷನ್ ಫಾರ್ಮ್ ಸಿಕ್ಕವರ ಕತೆಯಾದರೆ, ಇನ್ನೊಂದೆಡೆ ಆಡಿಷನ್ ಫಾರ್ಮ್ ಗಾಗಿ ಕಾಯುತ್ತಾ ನಿಂತವರ ಕತೆ ಬೇರೆ. ಕೊಡೆ ಹಿಡಿದು, ತಲೆಗೆ ಕೈ ವಸ್ತ್ರ ಹಾಕಿಕೊಂಡು ಆ ಮಧ್ಯಾಹ್ನದ ಉರಿ ಬಿಸಿಲೆನ್ನದೇ ಕ್ಯೂ ನಲ್ಲಿ ನಿಂತಿದ್ದರು. ಆ ಕ್ಯೂ ನೋಡಿ ಹೇಗೋ ನಮಗೇನೋ ಆಡಿಷನ್ ಫಾರ್ಮ್ ಬೇಗ ಕೈ ಸಿಕ್ಕಿತಲ್ಲಾ ಎನ್ನುವ ಸ್ವಲ್ಪ ಮಟ್ಟಿಗೇನೋ ಸಂತೋಷ ಇತ್ತು.
ಅಲ್ಲಿ ಕಾಯುತ್ತಾ ಕೂತಾಗ ಒಂದು ವಿಷಯವನಂತೂ ಗಮನಿಸಿದೇನೆಂದರೆ ಯಾವುದೇ ಸ್ಪರ್ಧಿ ಆಡಿಷನ್ ಕೋಣೆಯಿಂದ ಹೊರ ಬರುವುದೇ ತಡ ಅವರನ್ನು ಹೊರಗಿದ್ದ ಸ್ಪರ್ಧಿಗಳು ಮುತ್ತಿಗೆ ಹಾಕಿ ಬಿಡುತ್ತಿದ್ದರು. ಅವರ ಮೇಲೆ ಪ್ರಶ್ನೆಗಳ ಸುರಿಮಳೆ ಎನ್ನಬಹುದು. ಅದಕ್ಕೆ ಅವರು ದೊಡ್ಡ ಯುದ್ಧ ಮುಗಿಸಿ ಬಂದಂತೆ ತಮ್ಮ ಅನುಭವವನ್ನು ಹೇಳುತ್ತಿದ್ದರು. ಅದಕ್ಕೆ ಸರಿಯಾಗಿ ಹೊರಗಿನ ಸ್ಪರ್ಧಿಗಳು ಇನ್ನಷ್ಟು ತಯಾರಿ ಮಾಡಿಕೊಳ್ಳುತ್ತಿದ್ದರು. ಇನ್ನೂ ಕೆಲವರು ಕಿವಿಗೆ ಹೆಡ್ ಫೋನ್ ಹಾಕಿಕೊಂಡು ಹಾಡಿನ ಅಭ್ಯಾಸವನ್ನು ಮಾಡುತ್ತಿದ್ದರು.
ಅಲ್ಲಿ ಬಂದವರಲ್ಲಿ ಕೆಲವರಿಗೆ ಸಂಗೀತದ ಗಂಧವೇ ಇರಲಿಲ್ಲ. ಇನ್ನೂ ಕೆಲವರಿಗೆ ತಮ್ಮ ಸಂಗೀತದ ಪ್ರತಿಭೆಯನ್ನು ತೋರಿಸಲು ‘ಕನ್ನಡದ ಕೋಗಿಲೆ’ ಸರಿಯಾದ ವೇದಿಕೆ ಅನಿಸಿತು. ಅಷ್ಟು ಚನ್ನಾಗಿ ಅವರು ಗುನುಗುತ್ತಿದ್ದ ಧ್ವನಿಯಲ್ಲಿಯೇ ಗೊತ್ತಾಗುತ್ತಿತ್ತು.
ನಮ್ಮ ಕರ್ನಾಟಕದಲ್ಲಿ ಯಾವ ಪ್ರತಿಭೆಗೂ ಕೊರತೆ ಇಲ್ಲ. ಕನ್ನಡದ ಸಿನಿಮಾಗಳಿಗೆ ಹೊರಗಿನಿಂದ ಘಟಾನು ಗಟಿಯರನ್ನು ಕರೆಸಿ ಹಾಡಿಸುವ ಬದಲು ಈ ರೀತಿ ಆಡಿಷನ್ ಮಾಡಿ ಪ್ರತಿಭೆಗಳನ್ನು ಹೆಕ್ಕಿ ಅವಕಾಶ ಕೊಟ್ಟರೆ ನಮ್ಮ ಕನ್ನಡದ ಮಕ್ಕಳು ಮುಂದೆ ಬರುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂದು ಆಡಿಷನ್ ನಿಂದ ತಿಳಿಯಿತು.
ಅಲ್ಲಿ ಆದ ಇನ್ನೊಂದು ಅನುಭವದ ಬಗ್ಗೆ ಹೇಳುವುದಾದರೆ ಅಷ್ಟು ಸ್ಪರ್ಧಿಗಳ ಜಾತ್ರೆಯಲ್ಲಿ ಪ್ರತಿಭೆಗಳನ್ನು ಹೆಕ್ಕುವುದು ಎಲ್ಲೊ ಒಂದು ಕಡೆ ಅನುಮಾನವೇ. ತೀರ್ಪುಗಾರನ ತಾಳ್ಮೆ ಚೆನ್ನಾಗಿದ್ದರೆ ಪ್ರತಿಭೆಗಳು ಮುಂದಕ್ಕೆ ಹೋಗುತ್ತಾರೆ. ಅವನ ತಾಳ್ಮೆ ಕೆಟ್ಟಿದ್ದರೆ ಮುಗಿತು ಒಳ್ಳೆಯ ಪ್ರತಿಭೆಗಳು ಕಾಣೆಯಾಗುತ್ತಾರೆ. ಹಾಗೆ ಈ ಆಡಿಷನ್ ನಲ್ಲಿಯೂ ಎಷ್ಟೋ ಸ್ಪರ್ಧಿಗಳಿಗೆ ಆಗಿರಬಹುದು.
‘ಕನ್ನಡ ಕೋಗಿಲೆ’ ನನಗೆ ಮತ್ತು ನನ್ನ ಗೆಳತಿಗೆ ಮೊದಲ ಆಡಿಷನ್ ವಾದರೂ ಹೊಸ ಹುರುಪು, ಒಳ್ಳೆಯ ಅನುಭವ ನೀಡಿತು.
ಅಂದ ಹಾಗೆ ನನ್ನ ಗೆಳತಿ ಆಡಿಷನ್ ಕತೆ ಏನಾಯಿತು ಎನ್ನುವ ಪ್ರಶ್ನೆ ನಿಮಗಿರಬಹುದು. ಅವಳು ಮೊದಲ ಸುತ್ತು ಮುಗಿಸಿ ಎರಡನೇ ಸುತ್ತಿಗೆ ಹೋಗಿದ್ದಾಳೆ. ನಿಮ್ಮೆಲ್ಲರ ಆಶೀರ್ವಾದ ಇದ್ದಾರೆ ‘ಕನ್ನಡ ಕೋಗಿಲೆ ಆಗುತ್ತಲೇ’.ಇಲ್ಲವಾದರೆ ಮನೆ ಕೋಗಿಲೆಯಂತೂ ಆಗಿರುತ್ತಾಳೆ.
#ಪರತಭ #ಆಕತನಯಸ