‘ಬಳಿಯುತ್ತೇನೆ ಬಣ್ಣ ಕಣ್ಣ ಹನಿಯ…ಗುರುತು ಕಣ್ಮರೆಯಾಗುವವರೆಗೆ’…. ಕವಿ ವಿಮಲಾ ಪದಮಗೊಂಡ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಈ ನಗು
ಸುಮ್ಮನೆ ಬೆಳೆದಿಲ್ಲ ,
ನೋವಿನ ಗೋರಿಯೊಳಗೆ
ಕಣ್ಣೀರು ಹೆಣವಾಗಿ
ಅದರ ಸಮಾಧಿಯ ಮೇಲೆ
ಬೆಳೆದು ನಿಂತ ಬಾಡದ
ಹೂಗಿಡವಾಗಿದೆ,
ಬಳಿಯುತ್ತೇನೆ ಬಣ್ಣ ಕಣ್ಣ ಹನಿಯ
ಗುರುತು ಕಣ್ಮರೆಯಾಗುವವರೆಗೆ…
ಉಲ್ಲಾಸ ಉಕ್ಕೇರಿದ್ದು
ಜೀವನ ಮುದ್ದು ಮಾಡಿ
ಸಂತೋಷದ ತೂಗುಯ್ಯಾಲೆಯಲ್ಲಿ
ತೂಗಿದಾಗಲ್ಲ ,
ಎತ್ತರದಿಂದ ಪ್ರಪಾತಕ್ಕೆ ತಳ್ಳಿ
ಮೈಗೆ
ಗಾಯವಾಗದಂತೆ ಮತ್ತೆ ಮೇಲೆತ್ತಿದಾಗ
ಆಗ
ನಿರಾಸೆಗಳಿಗೆ ಆಸರೆ ನೀಡದೆ
ಬಣ್ಣ ಬಳಿಯಲು ಸಜ್ಜಾಗಿ ನಿಂತೆ…
ಅಮಾವಾಸ್ಯೆಯ ಕತ್ತಲೆಯಲಿ
ಬೆಳಕಿನ ಹಾಲನುಂಡು
ಇಂದು ಮಿನುಗುವ
ಚುಕ್ಕಿ
ಈ ಬದುಕು ,
ಬಳಿಯುತ್ತೇನೆ ಹೊಳೆಯುವ ಬಣ್ಣ
ಕರಿ ಛಾಯೆ ಕರಗುವವರೆಗೆ…!!
- ವಿಮಲಾ ಪದಮಗೊಂಡ