ʻಬೆಂಗಳೂರು ಕಲರ್ಸ್‌’ ಪುಸ್ತಕ ಪರಿಚಯಈ ಬೆಂಗಳೂರಿಗೆ ಒಂದು ಆತ್ಮವಿದೆ.ಅದಕ್ಕೆ ಹುಟ್ಟೂ ಇಲ್ಲ, ಸಾವೂ ಇಲ್ಲ.ಬೆಂಗಳೂರಿನ ವಿವಿಧ ಬಡಾವಣೆಗಳು ಅದು ಬೆಂಗಳೂರಿನ ಕಥೆ ಎಂದಾಗ ಸ್ವಲ್ಪ ಕುತೂಹಲ ಮೂಡಿತು. ಭಾನುವಾರ, ನನ್ನ ಪುಸ್ತಕದ ಜೊತೆ ʻಬೆಂಗಳೂರು ಕಲರ್ಸ್‌’ ಸಹ ಬಿಡುಗಡೆಯಾದಾಗ, ಅದನ್ನು ಓದಿದೆ. ಬೆಂಗಳೂರಿನ ಚರಿತ್ರೆಯನ್ನು ಹುಡುಕುತ್ತಾ ಅಡ್ಡಾಡುವ ಮೇಘನಾ ಪರಿ ಇಷ್ಟವಾಯಿತು. ಮೇಘನಾ ಅವರ ʻಬೆಂಗಳೂರು ಕಲರ್ಸ್‌’  ಪುಸ್ತಕದ ಕುರಿತು ಪತ್ರಕರ್ತ ಮಾಕೋನಹಳ್ಳಿ ವಿನಯ್‌ ಮಾಧವ್ ಅವರು ಸುದೀರ್ಘ ಲೇಖನ.

ಹತ್ತು-ಹದಿನೈದು ವರ್ಷಗಳ ಹಿಂದೆ ಅಂತ ಕಾಣುತ್ತೆ — ಒಂದು ಅಪರಿಚಿತ ನಂಬರ್‌ ನಿಂದ ಫೋನ್‌ ಬಂತು. ʻಸಾರ್‌, ನನ್ನ ಹೆಸರು ರಾಮಸ್ವಾಮಿ ಅಂತ. ನಾನು ಕೃಷ್ಣಗಿರಿ ಹತ್ತಿರದ ಒಂದು ಹಳ್ಳಿಯವನು. ನಮ್ಮ ಹಳ್ಳಿಯಲ್ಲಿ ಎಲ್ಲರೂ ಕನ್ನಡ ಮಾತನಾಡುವವರೇ. ನಾವು ಕೆಂಪೇಗೌಡರ ಕಾಲದಲ್ಲಿ, ಬೆಂಗಳೂರು ಬಿಟ್ಟು ಅಲ್ಲಿಗೆ ಬಂದವರಂತೆ. ನಮ್ಮ ಊರಿನ ಚರಿತ್ರೆ ಬಗ್ಗೆ ನಿಮಗೆ ಹೆಚ್ಚಿನ ವಿವರ ತಿಳಿದಿರಬಹುದು ಎಂದು ಯಾರೋ ಹೇಳಿದರು. ನಿಮಗೇನಾದರೂ ಗೊತ್ತಾ?ʼ ಎಂದು ಕೇಳಿದರು.

ʻಹೀಗೆ ಕೇಳಿದರೆ ಗೊತ್ತಾಗುವುದು ಕಷ್ಟ. ಆಗಿನ ಕಾಲದಲ್ಲಿ ಎಷ್ಟೋ ಜನ ಬೆಂಗಳೂರಿಗೆ ಬರ್ತಾ ಇದ್ರು ಮತ್ತೆ ಇಲ್ಲಿಂದ ಹೋಗ್ತಾನೂ ಇದ್ರು. ಅದೂ ಅಲ್ದೆ, ಅಲ್ಲಿ ಮೂವರು ಕೆಂಪೇಗೌಡರು, ಒಬ್ಬರು ಕೆಂಪನಾಚೇಗೌಡರು, ಮೂವರು ಕೆಂಪವೀರೇ ಗೌಡರು ಬರ್ತಾರೆ. ಅಷ್ಟು ಜನರಲ್ಲಿ ಯಾರ ಕಾಲ? ಹೋಗಲು ಕಾರಣವೇನು? ಇವುಗಳ ವಿವರ ಇದ್ದರೆ, ನನ್ನ ಹತ್ತಿರ ಇರುವ ಕೆಲವು ಪುಸ್ತಕಗಳಲ್ಲಿ ನೋಡಿ ಹೇಳಬಹುದು,ʼ ಎಂದು ಹೇಳಿದೆ.

ʻಅದು ಕೆಂಪೇಗೌಡರ ಕಾಲದ್ದಂತೆ. ಅವರು ಯುದ್ದದಲ್ಲಿ ಸೋತಾಗ, ಇಬ್ರಾಹಿಂ ಅನ್ನೋ ಸೇನಾಧಿಪತಿ, ರಾತ್ರಿ ಊಟದಲ್ಲಿ ದನದ ಮಾಂಸ ತಿನ್ನಿಸಿ, ಇವರನ್ನು ಮತಾಂತರ ಮಾಡೋಕೆ ಯೋಚನೆ ಮಾಡಿದ್ದನಂತೆ. ಆಗ ಕೆಂಪೇಗೌಡರು, ಊರವರನ್ನೆಲ್ಲ ಕರೆದುಕೊಂಡು ಮೇಕೆದಾಟಿಗೆ ಓಡಿಹೋಗಿ, ಊರವರನ್ನು ನದಿ ದಾಟಿಸಿ, ವಾಪಾಸು ಬಂದರಂತೆ. ಊರವರು ದಾಟುವವರೆಗೆ ನಿಧಾನವಾಗಿ ಹರಿಯುತ್ತಿದ್ದ ನದಿ, ಇಬ್ರಾಹಿಂ ಮತ್ತು ಅವನ ಸೈನಿಕರು ಬರುವ ಹೊತ್ತಿಗೆ ಪ್ರವಾಹ ಬಂದಂತೆ ಹರಿಯಲು ಆರಂಭಿಸಿತಂತೆ. ಆಮೇಲೆ ಕೆಂಪೇಗೌಡರು ಮಾಗಡಿಯನ್ನು ವಶಪಡಿಸಿಕೊಂಡರೆ, ನದಿ ದಾಟಿದ ಊರವರು ಬಂದು ನಮ್ಮ ಹಳ್ಳಿಯಲ್ಲಿ ನೆಲೆಸಿದರಂತೆ. ಅದರ ಬಗ್ಗೆ ವಿವರ ಬೇಕಿತ್ತು,ʼ ಎಂದರು.

ʻಅದು ಇಮ್ಮಡಿ ಕೆಂಪೇಗೌಡರ ಕಾಲದ್ದು ಅಂತ ಕಾಣುತ್ತೆ. ನನ್ನ ಹತ್ತಿರ ಏಳೆಂಟು ಪುಸ್ತಕಗಳದ್ದವು. ಒಂದೆರೆಡು ಪುಸ್ತಕಗಳನ್ನು ಸ್ನೇಹಿತರು ತೆಗೆದುಕೊಂಡು ಹೋಗಿದ್ದಾರೆ. ಉಳಿದ ಪುಸ್ತಕದಲ್ಲಿ ನೋಡುತ್ತೇನೆ. ಅದರಲ್ಲಿ ಇದ್ದರೆ, ಅದನ್ನು ಬರೆದವರನ್ನು ನೀವು ನೋಡಬೇಕಾಗುತ್ತದೆ. ಅವರ ಹತ್ತಿರ ಹೆಚ್ಚಿನ ವಿವರಗಳಿರುತ್ತವೆ,ʼ ಎಂದು ಹೇಳಿದೆ.

ಈ ಫೋನ್‌ ಬರುವ ಐದು ವರ್ಷಗಳ ಮುಂಚೆ ಅಂತ ಕಾಣುತ್ತೆ. ಸರ್ಕಾರವು ಮಾತೆತ್ತಿದರೆ ʻನಾಡ ಪ್ರಭುʼ, ʻಬೆಂಗಳೂರು ನಿರ್ಮಾತʻಎಂದು ಹೇಳುತ್ತಾ, ಬೆಂಗಳೂರಿನಲ್ಲಿ ಬರುವ ಎಲ್ಲಾ ಹೊಸ ಯೋಜನೆಗಳಿಗೆ ಕೆಂಪೇಗೌಡರ ಹೆಸರು ಇಡುತ್ತಿದ್ದದ್ದು ಸಹಜ. ಕೆಂಪೇಗೌಡರ ಬಗ್ಗೆ ಅಲ್ಪ-ಸ್ವಲ್ಪ ಕೇಳಿ ತಿಳಿದುಕೊಂಡಿದ್ದ ನನಗೆ ಇದ್ದ ಜಿಜ್ಞಾಸೆ ಎಂದರೆ, ಮಾಗಡಿ, ಯಲಹಂಕ ಮತ್ತು ಬೆಂಗಳೂರು ಎಂಬ ಮೂರೂ ಊರುಗಳ ನಿರ್ಮಾತ ಕೆಂಪೇಗೌಡನೇ? ಹಾಗಿದ್ದರೆ, ಊರು ಕಟ್ಟುವ ಕೆಲಸ ಬಿಟ್ಟರೆ, ಇವನು ಇನ್ನೇನು ಮಾಡಿದ? ಸರಿ… ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಅಂಗಡಿಗೆ ಹೋಗಿ, ಕೆಂಪೇಗೌಡ ಅಧ್ಯಯನ ಪೀಠ ಹೊರತಂದ ಮೂರ್ನಾಲ್ಕು ಪುಸ್ತಕಗಳನ್ನು ಕೊಂಡು ತಂದು, ಕೆಂಪೇಗೌಡರ ಬಗ್ಗೆ ಓದೋಕೆ ಶುರು ಮಾಡಿದೆ. ನಾನು ಅಲ್ಲಿಯವರೆಗೆ ತಿಳಿದುಕೊಂಡಿದ್ದು, ಕೆಂಪೇಗೌಡನ ವಂಶಸ್ಥರು ತಮಿಳುನಾಡಿನ ತಿರುವಣ್ಣಾಮಲೈ ಕಡೆಯಿಂದ ವಲಸೆ ಬಂದವರು ಎಂದು. ಆದರೆ, ಯಾವುದೇ ಪುಸ್ತಕದಲ್ಲಿ ಆ ಊರಿನ ಹೆಸರೇ ಇರಲಿಲ್ಲ.
ಮುಂದೆ ಓದುತ್ತಾ ಹೋದಂತೆ, ಬೆಂಗಳೂರು ಎನ್ನುವ ಊರು ಹೇಗೆ ರಣಭೈರೇಗೌಡರಿಂದ ಆರಂಭವಾಗಿ, ಒಬ್ಬರು ಕೆಂಪನಂಜೇಗೌಡ, ಮೂವರು ಕೆಂಪೇಗೌಡರು, ಮೂವರು ಕೆಂಪವೀರಪ್ಪ ಗೌಡರೂ ಸೇರಿದಂತೆ, ೧೧ ತಲೆಮಾರು ಆಡಳಿತ ನಡೆಸಿದರು ಎನ್ನುವ ವಿವರ ಸಿಕ್ಕಿತು. ಆಗ ನನಗೆ ಬೆಂಗಳೂರು ಮತ್ತು ಕೆಂಪೇಗೌಡರ ವಂಶಸ್ಥರ ಬಗ್ಗೆ ಸಿಕ್ಕಿದ ಐದಾರು ಪುಸ್ತಕಗಳಲ್ಲಿ, ಕೆಲವಾರು ಜನಪದ ಕಥೆಗಳೂ ಸೇರಿ, ಹಲವನ್ನು ಕೆಂಪೇಗೌಡ ಆಧ್ಯಯನ ಪೀಠ ʻಆಧಾರ ರಹಿತʼ ಎಂದು ತಳ್ಳಿಹಾಕಿದೆ.

ಅದರಲ್ಲಿ ಬಹಳ ಮುಖ್ಯವಾದದ್ದು, ಬೆಂಗಳೂರಿನ ಕೋಟೆಯ ಬಾಗಿಲು ನಿಲ್ಲುತ್ತಿರಲಿಲ್ಲವೆಂದು, ಕೆಂಪೇಗೌಡರ ಗರ್ಭಿಣಿ ಸೊಸೆ ಲಕ್ಷ್ಮಿದೇವಮ್ಮ ತನ್ನ ಕೊರಳನ್ನು ಕಡಿದುಕೊಂಡು ಬಲಿದಾನ ನೀಡಿದ್ದು. ನಂತರ, ಕೋರಮಂಗಲದಲ್ಲಿ, ಆಕೆಯ ಸ್ಮಾರಕವಾಗಿ ದೇವಸ್ಥಾನ ಕಟ್ಟಿದ್ದು. ಏಕೆಂದರೆ, ಕೋರಮಂಗಲದ ದೇವಸ್ಥಾನ ಬಹಳ ಇತ್ತೀಚಿನದಾಗಿದೆ ಎಂದು ಕಾರಣ ನೀಡಿದ್ದಾರೆ.
ಇನ್ನುಳಿದಂತೆ, ಸೋಮೇಶ್ವರ ದೇವಸ್ಥಾನದ ಬಗ್ಗೆಯೂ ಎರಡು ಜನಪದ ಕಥೆಗಳಿವೆ. ವಿಜಯನಗರ ಸ್ಥಾಪಕರಾದ ಹಕ್ಕ-ಬುಕ್ಕರ ಕಥೆಯಲ್ಲಿ ಬರುವಂತೆ, ಮೊಲವೊಂದು ನಾಯಿಯ ಮೇಲೆ ದಾಳಿಮಾಡಿದ್ದನ್ನು ನೋಡಿ, ಇದು ಗಂಡುಮೆಟ್ಟಿನ ನಾಡು ಎಂದು ಊರು ಕಟ್ಟಲು ತೀರ್ಮಾನಿಸಿದನು. ಇನ್ನೊಂದು ಕಥೆಯಲ್ಲಿ, ಕೆಂಪೇಗೌಡರ ಕನಸಿನಲ್ಲಿ ಈಶ್ವರನು ಬಂದು, ಹಲಸೂರಿನ ಕೆರೆ ದಂಡೆಯ ಮರಳಿನಲ್ಲಿ ತಾನು ಹೂತು ಹೋಗಿರುವುದಾಗಿಯೂ, ತನ್ನ ಜೊತೆ ಏಳು ಕೊಪ್ಪರಿಗೆ ಚಿನ್ನ ಇರುವುದಾಗಿಯೂ ಹೇಳಿದನಂತೆ. ಅದರಂತೆ, ಕೆರೆಯ ದಡದ ಮರಳಿನಲ್ಲಿ ಚಿನ್ನ ಮತ್ತು ಈಶ್ವರ ಸಿಕ್ಕಿದಾಗ, ಕೆಂಪೇಗೌಡರು ಸೋಮೇಶ್ವರ ದೇವಸ್ಥಾನ ಕಟ್ಟುತ್ತಾರೆ.

ಕೆಂಪೇಗೌಡರು ಬೆಂಗಳೂರು ನಿರ್ಮಾಣ ಮಾಡುವುದಕ್ಕಿಂತ ಮುಂಚೆಯೇ ಎಷ್ಟೋ ದೇವಾಲಯಗಳು ನಿರ್ಮಾಣವಾದರೆ, ನಂತರದ ದಿನದಲ್ಲಿ, ಅವರ ವಂಶದ ಆಡಳಿತ ಕಾಲದಲ್ಲಿ 44 ದೇವಸ್ಥಾನಗಳನ್ನು ಜನಗಳೇ ಕಟ್ಟುತ್ತಾರೆ. ಇದರಲ್ಲಿ ಬೇರೆ ಬೇರೆ ಜಾತಿಯವರು, ತಮ್ಮ ಜಾತಿಗಳ ನೆನಪಿಗಾಗಿ ಕಟ್ಟಿಸಿದ್ದಾರೆ.

ಎಲ್ಲದ್ದಕ್ಕಿಂತ ಆಶ್ಚರ್ಯವಾಗಿದ್ದು, ಕೆಂಪೇಗೌಡರ ಕುಟುಂಬದವರು ಬೆಂಗಳೂರಿಗೆ ವಲಸೆ ಬಂದಿದ್ದು ಮತ್ತು ಇಮ್ಮಡಿ ಕೆಂಪೇಗೌಡರು ಪಲಾಯನ ಮಾಡಿದಾಗ, ಒಂದೇ ರೀತಿಯ ಎರಡು ಜನಪದ ಕಥೆಗಳು ಇದ್ದವು. ರಣಭೈರೇಗೌಡರು, ಕುಟುಂಬ ಸಮೇತ ನದಿ ದಾಟಿ ಬೆಂಗಳೂರಿಗೆ ಬಂದರು ಎಂದಿದೆ. ಒಂದು ಪುಸ್ತಕದಲ್ಲಿ ಮಾತ್ರ ಅದು ಪಾಲಾರ್‌ ನದಿ ಎಂದಿದೆ. ಅಲೆಮಾರಿ ಪಂಗಡದ ಮುಖ್ಯಸ್ಥನ ಕಾಕದೃಷ್ಟಿಯಿಂದ ತಮ್ಮ ಮಗಳಾದ ದೊಡ್ಡಮ್ಮನನ್ನು ರಕ್ಷಿಸಲು ಓಡಿ ಬಂದರಂತೆ. ದಾರಿಯಲ್ಲಿ ಇದ್ದ ತುಂಬಿ ಹರಿಯುತ್ತಿದ್ದ ನದಿಗೆ ದೊಡ್ಡಮ್ಮ ಕೈಮುಗಿದು ಬೇಡಿಕೊಂಡಾಗ, ಅದು ಎರಡು ಭಾಗವಾಗಿ ದಾರಿ ಬಿಟ್ಟಿತಂತೆ. ಇವರು ದಾಟಿದ ಮೇಲೆ, ಮತ್ತೆ ತುಂಬಿ ಹರಿಯಲು ಶುರು ಮಾಡಿತಂತೆ.

ಎರಡನೇ ಕಥೆ ಎಂದರೆ, ಇಮ್ಮಡಿ ಕೆಂಪೇಗೌಡರು ಮಾಗಡಿ ವಶಪಡಿಸಿಕೊಂಡಾಗ, ಬಿಜಾಪುರದ ಸೇನಾಧಿಪತಿ ರಣದುಲ್ಲಾ ಖಾನ್‌ ದಂಡೆತ್ತಿ ಬಂದು, ಅವರನ್ನು ಸೋಲಿಸುತ್ತಾನೆ. ಆಗ, ಅವತಿಯಲ್ಲಿದ್ದ ಬಹಮನಿ ಸುಲ್ತಾನರ ಸೇನೆ ಬಿಡಾರದಲ್ಲಿ, ಇಬ್ರಾಹಿಂ ಸಾಹೇಬ ಎಂಬ ಕಿಲ್ಲೇದಾರ, ಕೆಂಪೇಗೌಡರನ್ನು ಸಂಧಾನ ಮಾತುಕಥೆಗೆ ಆಹ್ವಾನಿಸುತ್ತಾರೆ. ರಾತ್ರಿ ಊಟಕ್ಕೆ ಹೋದ ಕೆಂಪೇಗೌಡರು ಮತ್ತು ಅವರ ಮಿತ್ರರು, ಒಂದು ಡೇರೆಯಲ್ಲಿ ಕಾಯುತ್ತಾ ಕುಳಿತಾಗ, ಒಂದು ಪೆಟಾರಿಯ ಮುಚ್ಚುಳವನ್ನು ಎತ್ತಿ ನೋಡುತ್ತಾರೆ. ಅದರೊಲಗೆ ದನದ ತಲೆ ಇರುವುದನ್ನು ನೋಡಿ, ತಮ್ಮನ್ನು ಮತಾಂತರ ಮಾಡುತ್ತಾರೆ ಎಂದು ಹೆದರಿಕೊಳ್ಳುತ್ತಾರೆ. ಊರಲ್ಲಿ ಸೂತಕದ ನೆಪ ಹೇಳಿ, ಸಂಧಾನ ಮಾತುಕಥೆ ಮುಗಿಸಿ, ಬೆಂಗಳೂರಿಗೆ ಹಿಂದುರುಗುತ್ತಾರೆ. ರಾತ್ರೋ ರಾತ್ರಿ, ತಮ್ಮವರನ್ನೆಲ್ಲ ಕರೆದುಕೊಂಡು ತಮಿಳುನಾಡಿನತ್ತ ಹೊರಡುತ್ತಾರೆ. ವಿಷಯ ತಿಳಿದ ಇಬ್ರಾಹಿಂ ಸಾಹೇಬ, ಅವರನ್ನು ಬೆನ್ನಟ್ಟುತ್ತಾನೆ. ಅಷ್ಟರಲ್ಲಿ, ಕೆಂಪೇಗೌಡರ ಹಿಂಬಾಲಕರು ನದಿ ದಾಟಿರುತ್ತಾರೆ ಮತ್ತು ಅವರು ದಾಟಿದ ತಕ್ಷಣ ಪ್ರವಾಹ ಉಂಟಾಗುತ್ತದೆ ಎಂದಿತ್ತು. ಆದರೆ ಚರಿತ್ರೆಯಲ್ಲಿ ಮಾತ್ರ, ಬೆಂಗಳೂರು ಯುದ್ದದಲ್ಲಿ ಸೋತ ಕೆಂಪೇಗೌಡರು, ಕಪ್ಪ-ಕಾಣಿಕೆ ಕೊಡುವ ಕರಾರಿಗೆ ಒಪ್ಪಿ, ಮಾಗಡಿ ಮತ್ತು ಸಾಮಂತಿ ದುರ್ಗದಿಂದ ಆಡಳಿತ ನಡೆಸುತ್ತಾರೆ ಎಂದಿತ್ತು.

ಇವೆರೆಡು ಕಥೆಗಳು ನೆನಪಿನಲ್ಲಿ ಉಳಿದಿದ್ದರೂ, ಯಾವ ಪುಸ್ತಕದಲ್ಲಿ ಓದಿದ್ದು ಎನ್ನುವುದು ನೆನಪಿಗೆ ಬರಲಿಲ್ಲ. ಏಕೆಂದರೆ, ಪ್ರತಿ ಪುಸ್ತಕದಲ್ಲೂ ಸಾಮಾನ್ಯ ಅಂಶಗಳು ಬಹಳಷ್ಟಿದ್ದವು. ಎಲ್ಲಾ ಪುಸ್ತಕ ತಿರುವಿ ಹಾಕಿದರೂ, ಮೊದಲನೇ ಕಥೆ ಒಂದು ಕಡೆ ಸಿಕ್ಕಿತೇ ಹೊರತು, ಎರಡನೆಯ ಕಥೆ ಸಿಗಲಿಲ್ಲ. ಬಹುಃಶ, ನಾನು ಸ್ನೇಹಿತರಿಗೆ ಕೊಟ್ಟ ಯಾವುದೋ ಒಂದು ಪುಸ್ತಕದಲ್ಲಿತ್ತು ಎಂದು ಕಾಣುತ್ತೆ. ರಾಮಸ್ವಾಮಿಯವರಿಗೆ ಅದನ್ನು ಹೇಳಿ, ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಡಾ ಜಾನಕಿಯವರನ್ನು ಭೇಟಿಯಾಗುವಂತೆ ಹೇಳಿದೆ. ಆದರೆ, ಜನಪದ ಕಥೆಗಳನ್ನು ಚರಿತ್ರಾಕಾರರು ಪುರಸ್ಕರಿಸುವುದನ್ನು ಇಲ್ಲಿಯವರೆಗೆ ನಾನು ನೋಡಿಲ್ಲ. ಕೆಂಪೇಗೌಡರ ಅಧ್ಯಯನ ಪೀಠದಿಂದ ಏನೂ ಸಹಾಯವಾಗಲಿಲ್ಲ ಎಂದು ಮುಂದೊಂದು ದಿನ ರಾಮಸ್ವಾಮಿಯವರು ನನಗೆ ಫೋನ್‌ ಮಾಡಿ ಹೇಳಿದರು.ಅಂದಿನಿಂದಲೂ ನನಗೆ ಕಾಡುತ್ತಿದ್ದ ಪ್ರಶ್ನೆ ಎಂದರೆ, ಈ ಬೆಂಗಳೂರು ನನಗೇಕೆ ಸ್ವಂತವಾಗಲಿಲ್ಲ? 1989ನೇ ಇಸವಿಯಲ್ಲಿ ಬೆಂಗಳೂರಿಗೆ ಬಂದು, ಇಲ್ಲಿ ಬದುಕು ಕಟ್ಟಿಕೊಂಡು, ಬೆಂಗಳೂರಿನ ಹುಡುಗಿಯನ್ನೇ ಕಟ್ಟಿಕೊಂಡರೂ, ಎಂದೂ ಬೆಂಗಳೂರು ನನ್ನದಾಗಲಿಲ್ಲ. ನಾನು ಮೂಡಿಗೆರೆಯವನಾಗಿಯೇ ಬದುಕಿದೆ ಮತ್ತು ಗುರುತೇ ಸಿಗದಷ್ಟು ಬದಲಾಗಿರುವ ನನ್ನ ಮೂಡಿಗೆರೆಗೆ ಒಂದು ದಿನ ವಾಪಾಸು ಹೋಗಿ, ನನ್ನ ನೆನಪಿನಂಗಳದ ಮೂಡಿಗೆರೆಯ ತೋಟದಲ್ಲಿ, ಯಾವುದೋ ಮರದ ಕೆಳಗೆ ಕುಳಿತುಕೊಂಡು, ಕಣ್ಮರೆಯಾಗಿರುವ ಏಡಿ, ಮೀನುಗಳನ್ನು ಹಿಡಿಯುವ ಕನಸು ಕಾಣುತ್ತಲೇ ಇರುತ್ತೇನೆ.

ಈ ಬೆಂಗಳೂರಿಗೆ ಒಂದು ಆತ್ಮವಿದೆ. ಅದು ದ್ವೈತ ಸಿದ್ದಾಂತದ ಆತ್ಮದಂತೆ. ಭೌತಶಾಸ್ತ್ರದಲ್ಲಿ ಬರುವ ಶಕ್ತಿಯಂತೆ. ಅದಕ್ಕೆ ಹುಟ್ಟೂ ಇಲ್ಲ, ಸಾವೂ ಇಲ್ಲ. ಒಂದು ರೂಪದಿಂದ, ಇನ್ನೊಂದು ರೂಪು ಪಡೆಯುತ್ತದೆ. ಹೊಯ್ಸಳರ ವೀರಬಲ್ಲಾಳನ ಕಾಲದಿಂದ, ಬ್ರಿಟಿಷ್‌ ಆಳ್ವಿಕೆಯವರೆಗೆ ಮತ್ತು ಸ್ವಾತಂತ್ರ್ಯಾ ನಂತರದ ಪ್ರಜಾಪ್ರಭುತ್ವದಲ್ಲಿ ಎಷ್ಟೋ ರೂಪ ಬದಲಿಸಿದೆ. ತನ್ನ ಮೂಲ ಸ್ವರೂಪದ ಸರ್ವನಾಶ ಕಂಡಿದೆ. ದೊಡ್ಡ ಹಣ್ಣು ಬಿಡುವ ಮರದಂತೆ, ಎಲ್ಲೆಲ್ಲಿಂದಲೋ ಬಂದವರಿಗೆ ಬದುಕು ಕಟ್ಟಿಕೊಟ್ಟ ಬೆಂಗಳೂರಿನ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ ಎನ್ನುವುದೇ ನನ್ನ ಭಾವನೆ.
ಈ ಬೆಂಗಳೂರು ಯಾರದು? ಎನ್ನುವ ಪ್ರಶ್ನೆಗೆ ನನ್ನ ಹತ್ತಿರ ಉತ್ತರವಿಲ್ಲ. ಇಲ್ಲಿರುವ ತಿಗಳರು, ಕುಂಚಿಟಿಗರು, ಅಗ್ರಹಾರಗಳ ಬ್ರಾಹ್ಮಣರು, ಶೆಟ್ಟರು, ಒಕ್ಕಲಿಗರು…. ಹೀಗೇ ಪಟ್ಟಿ ಉದ್ದವಾಗಿ ಬೆಳೆಯುತ್ತಾ ಹೋದರೂ, ಅವರಿಗೆಲ್ಲಾ ಒಂದು ಪೂರ್ಣಪ್ರಮಾಣದ ಸ್ವಂತಿಕೆ ಇದೆ ಎನ್ನುವುದು ಕಷ್ಟ. ಬೆಂಗಳೂರಿನಲ್ಲಿ ಸ್ವಂತಿಕೆ ಇರುವುದು ದುಡ್ಡು ಮಾಡಿದವರಿಗೆ ಮತ್ತು ಜಾಗತಿಕವಾಗಿ ಗುರುತಿಸಲ್ಪಟ್ಟವರಿಗೆ.
ಕರಗದಂಥಹ ಹಬ್ಬವಾದಾಗ ಮಾತ್ರ ತಿಗಳರು ಎನ್ನುವ ಜಾತಿಗೆ ಸ್ವಲ್ಪ ಪ್ರಾಮುಖ್ಯತೆ ಬರುತ್ತದೆ.

ಈ ಪ್ರಶ್ನೆಗೆ ಮೊದಲು ಉತ್ತರ ದೊರೆತದ್ದು, ತನ್ನನ್ನು ʻ#ಜಯನಗರದ_ಹುಡುಗಿʼ ಎಂದೇ ಕರೆದುಕೊಂಡು ಓಡಾಡುತ್ತಿದ್ದ ಮೇಘನಾ ಸುಧೀಂದ್ರಳಿಂದ. ಜೋಗಿಯವರ ಪುಸ್ತಕ ಒಂದರ ಬಿಡುಗಡೆ ಸಮಯದಲ್ಲಿ, ʻನೀವು ಹೊರಗಿನವರು, ನಮ್ಮನ್ನು ಎಂದರೆ ಬೆಂಗಳೂರಿನವರನ್ನು ಹೇಗೆ ನೋಡುತ್ತೀರಿ?ʼ ಎಂಬ ಪ್ರಶ್ನೆ ಕೇಳಿದಳು. ಆಗ ಮೇಘನಾ ನನಗೆ ಅಷ್ಟೊಂದು ಪರಿಚಯವಿರಲಿಲ್ಲ. ಕಾರ್ಯಕ್ರಮ ಮುಗಿದ ಮೇಲೆ, ʻಬೆಂಗಳೂರಿನವರನ್ನು ಹೇಗೆ ನೋಡ್ತೀವೋ ಗೊತ್ತಿಲ್ಲ. ಆದರೆ, ಬೆಂಗಳೂರು ಹುಡುಗಿಯರನ್ನು ಹೇಗೆ ನೋಡ್ತೀವಿ ಅಂತ ಗೊತ್ತು. ಅದನ್ನು ಬರೀತ್ತೀನಿ,ʼ ಎಂದು ಮುಗುಳ್ನಕ್ಕೆ.
ಈ ‘ಜಯನಗರದ ಹುಡುಗಿ’ #ಬೆಂಗಳೂರು_ಕಲರ್ಸ್‌ ಎನ್ನೋ ಪುಸ್ತಕ ಬರೆದಾಗ ನಾನು ಸ್ವಲ್ಪ ಉದಾಸೀನ ಮಾಡಿದ್ದು ನಿಜ. ಬೆಂಗಳೂರಿನ ವಿವಿಧ ಬಡಾವಣೆಗಳು ಅದು ಬೆಂಗಳೂರಿನ ಕಥೆ ಎಂದಾಗ ಸ್ವಲ್ಪ ಕುತೂಹಲ ಮೂಡಿತು. ಭಾನುವಾರ, ನನ್ನ ಪುಸ್ತಕದ ಜೊತೆ ʻಬೆಂಗಳೂರು ಕಲರ್ಸ್‌’ ಸಹ ಬಿಡುಗಡೆಯಾದಾಗ, ಅದನ್ನು ಓದಿದೆ. ಬೆಂಗಳೂರಿನ ಚರಿತ್ರೆಯನ್ನು ಹುಡುಕುತ್ತಾ ಅಡ್ಡಾಡುವ ಮೇಘನಾ ಪರಿ ಇಷ್ಟವಾಯಿತು.
ನಾನು ಚರಿತ್ರೆಯಂತೆ ಓದಿದ್ದನ್ನು, ಅವಳು ಹುಡುಕುತ್ತಾ ಹೋಗುತ್ತಾಳೆ. ಅಲ್ಲಿ, ಬೆಂಗಳೂರಿನ ಎಷ್ಟೋ ʻಕ್ಯಾರೆಕ್ಟರ್‌ʼ ಗಳು ಬಂದು, ಬೆಂಗಳೂರಿನ ಚರಿತ್ರೆ ಹೇಳುತ್ತಾ ಹೋಗುತ್ತವೆ. ಅದನ್ನು ಮೂರು ಹಂತಗಳಲ್ಲಿ ಹೇಳುತ್ತಾರೆ. ಅಲ್ಲಿ ಮೇಘನಾ ಪೀಳಿಗೆಯ ಸ್ನೇಹಿತರು, ಅವರ ಭಾವನೆಗಳೂ ಸೇರಿವೆ. ಅದರ ಜೊತೆ, ಅವಳ ಕುಟುಂಬವನ್ನೂ ತಂದಿದ್ದಾಳೆ. ಇತ್ತೀಚೆಗೆ ಅಗಲಿದ ತನ್ನ ತಂದೆ ಸುಧೀಂದ್ರ ಹಾಲ್ದೋಡ್ಡೇರಿಯವರನ್ನು ಕಡೆಯವರೆಗೆ ಜೊತೆಯಲ್ಲಿಟ್ಟುಕೊಂಡು, ಪುಸ್ತಕದ ಕೊನೆಯಲ್ಲಿ ಕಳುಹಿಸಿಕೊಟ್ಟಿದ್ದಾಳೆ.

ಬೆಂಗಳೂರಿನಂತೆ, ಈ ಪುಸ್ತಕಕ್ಕೂ ಒಂದು ಆತ್ಮವಿದೆ. ಆ ಆತ್ಮದಲ್ಲಿ, ಮೇಘನಾ ಮತ್ತು ಬೆಂಗಳೂರಿನಲ್ಲಿ ಬೆಳೆದ ಎಷ್ಟೋ ಹೆಣ್ಣುಮಕ್ಕಳ ಭಾವನೆಗಳಿವೆ. ಗಂಡಸರ ಭಾವನೆ? ನನಗೆ ಗೊತ್ತಿಲ್ಲ. ಬೆಂಗಳೂರನ್ನು ಇಷ್ಟೊಂದು ಪ್ರೀತಿಸುವ ಮತ್ತು ಭಾವನಾತ್ಮಕವಾಗಿ ಹಚ್ಚಿಕೊಳ್ಳುವ ಗಂಡಸರು ನನಗೆ ಇನ್ನೂ ಸಿಕ್ಕಿಲ್ಲ. ಮೇಘನಾಳ ತುಂಟತನ ಮತ್ತು ಮುಗ್ದತೆ ಪುಸ್ತಕದಲ್ಲಿ ಢಾಳಾಗಿ ಗೋಚರಿಸುತ್ತದೆ.

ಚಾರಿತ್ರಿಕವಾಗಿ ಈ ಪುಸ್ತಕದಲ್ಲಿ ಬಂದಿರುವ ಅಂಶಗಳು ನನಗೆ ಗೊತ್ತಿದ್ದರೂ, ಭಾವನಾತ್ಮಕವಾಗಿ ಎಲ್ಲರನ್ನೂ ಓದಿಸಿಕೊಂಡು ಹೋಗುವ ಪುಸ್ತಕ ಇದು. ಇಷ್ಟವಾಯಿತು…..

  • ಮಾಕೋನಹಳ್ಳಿ ವಿನಯ್‌ ಮಾಧವ್ (ಪತ್ರಕರ್ತರು,ಲೇಖಕರು)

5 1 vote
Article Rating

Leave a Reply

1 Comment
Inline Feedbacks
View all comments
ರಘುರಾಂ

ತುಂಬ ಚೆನ್ನಾಗಿದೆ. ಎಷ್ಟೊಂದು ಮಾಹಿತಿ ಇದೆ. ಧನ್ಯವಾದಗಳು.

Home
News
Search
All Articles
Videos
About
1
0
Would love your thoughts, please comment.x
()
x
%d bloggers like this:
Aakruti Kannada

FREE
VIEW