ವಿಜಾಪುರದ ಬಾರಾಕಮಾನ್ ಹಿಂದಿದೆ ಒಂದು ಕತೆ – ಟಿ.ಶಿವಕುಮಾರ್

ವಿಜಾಪುರದ ಬಾರಾಕಮಾನ ನೋಡಿದ್ದೀರಾ?…‘ಬಾರಾ ಕಮಾನ್’ ಎಂದರೆ 12 ಕಮಾನುಗಳು ಎಂದರ್ಥ. ಸುಲ್ತಾನರು ತಮ್ಮ ಗೋರಿಗಳನ್ನು ತಾವೇ ನಿರ್ಮಿಸಿಕೊಳ್ಳುತ್ತಿದ್ದರು. ಬಾರಾಕಮಾನ ಕುರಿತು ಲೇಖಕ ಟಿ.ಶಿವಕುಮಾರ್ ಅವರು ಬರೆದ ಒಂದು ಲೇಖನವನ್ನು ತಪ್ಪದೆ ಮುಂದೆ ಓದಿ…

ವ್ಹಾ!… ಏನಿದು ಯಾವುದೋ ಭೂಕಂಪ ಅಥವಾ ಬಾಂಬ್ ದಾಳಿಗೆ ಹಾನಿಗೀಡಾದ ಕಟ್ಟಡವೊಂದರ ಅವಶೇಷದಂತೆ ಕಾಣುತ್ತಿದೆಯಲ್ಲಾ. ಇದೇನು ಯಾವುದೇ ಬಾಂಬ್ ದಾಳಿಗೆ ಅಥವಾ ಭೂಕಂಪಕ್ಕೆ ತುತ್ತಾದ ಪ್ರದೇಶವಲ್ಲ ಇದು ವಿಜಾಪುರದ ಹೃದಯ ಭಾಗದಲ್ಲಿರುವ ಬಾರಾಕಮಾನ್.

ವಿಜಾಪುರದ ಸುಂದರ ಕಟ್ಟಡ ಗೋಲಗುಮ್ಮಟವನ್ನು ಕಟ್ಟಿಸಿದವನು ಮಹಮ್ಮದ್ ಷಾ (1626-56) ಅವನ ಮಗ ಎರಡನೆಯ ಅಲಿಷಾ ಗೋಲ ಗುಮ್ಮಟವನ್ನೇ ಮೀರಿಸುವ ಕಟ್ಟಡವೊಂದನ್ನು ಕಟ್ಟಲು ಪ್ರಯತ್ನಿಸಿದನೆಂಬುದು ಅನೇಕರಿಗೆ ತಿಳಿದಿರಲಿಕ್ಕಿಲ್ಲ !

‘ಬಾರಾ ಕಮಾನ್’ ಎಂದರೆ 12 ಕಮಾನುಗಳು ಎಂದರ್ಥ. ಆದರೆ ವಾಸ್ತವವಾಗಿ ಇದರಲ್ಲಿ ಒಟ್ಟು 360 ಕಮಾನುಗಳಿವೆ. ಈ ಕಟ್ಟಡದಲ್ಲಿ 12 ಅಂತಸ್ತುಗಳನ್ನು ಕಟ್ಟಿಸಲು ಉದ್ದೇಶಿಸಲಾಗಿತ್ತು. ಆದ್ದರಿಂದ ಇದನ್ನು ‘ಬಾರಾಅಂತಸ್ತ್’ ಎನ್ನುವ ಬದಲು ಜನರು ತಪ್ಪಾಗಿ ‘ಬಾರಾಕಮಾನ’ ಎಂದು ಕರೆಯುತ್ತಾರೆ.

ಮಹಮ್ಮದ್ ಷಾ ಗೋಲ ಗುಮ್ಮಟವನ್ನು ಕಟ್ಟಲು ಇರಾನ್‍ನಿಂದ ಮಾಲೀಕ್ ಸಂದಲ್ ಎಂಬ ಇಂಜಿನಿಯರ್ ನನ್ನು ಕರೆಸಿಕೊಂಡಿದ್ದ. ಅದೇ ಇಂಜಿನಿಯರ್ ಬಳಸಿಕೊಂಡು ಎರಡನೆಯ ಅಲಿ ಷಾ ತನ್ನ ಉದ್ದೇಶಿತ ಕಟ್ಟಡಕ್ಕೆ ಕೈ ಹಾಕಿದ ಗೋಲಗುಮ್ಮಟದಿಂದ ಸುಮಾರು ಒಂದೂವರೆ ಕಿ ಮೀ ದೂರದಲ್ಲಿ ಈ ಕಟ್ಟಡದ ನಿರ್ಮಾಣ ಕಾರ್ಯ ಆರಂಭವಾಯಿತು. ಹೊಸ ಕಟ್ಟಡದ ನೆರಳು ಗೋಲಗುಮ್ಮಟದ ಮೇಲೆ ಬೀಳುವಷ್ಟು ಎತ್ತದವಾಗಿರಬೇಕೆಂಬುದು ಎರಡನೆಯ ಅಲಿ ಷಾನ ಬಯಕೆಯಾಗಿತ್ತು.

ದುರ ದೃಷ್ಟವಶಾತ್ ಆಳ್ವಿಕೆಗೆ ಬಂದ 12ನೆಯ ವರ್ಷಕ್ಕೆ (1672) ಅವನು ತೀರಿಕೊಂಡ. ಸುಲ್ತಾನನ ಕನಸಿನ ಮಹಲು ಅಸ್ಥಿ ಪಂಜರದಂತೆ ಮೊದಲ ಅಂತಸ್ತಿನಲ್ಲೇ ಅಪೂರ್ಣವಾಗಿ ಉಳಿಯಿತು. ಕಾರಣ ಇದರ ತಳಪಾಯ ನಿರ್ಮಾಣಕ್ಕೇ ಬಹಳ ವರ್ಷಗಳು ಬೇಕಾದವು !

ಅಷ್ಟೊಂದು ಎತ್ತರದ ಕಟ್ಟಡಕ್ಕೆ ಅಷ್ಟೆ ಗಟ್ಟಿಯಾದ ತಳಪಾಯ ಬೇಕಲ್ಲವೇ? ಈ ಕಟ್ಟಡದ ತಳಪಾಯವೇ 40 ಅಡಿ ಎತ್ತರವಿದೆ. ಗೋಲಗುಮ್ಮಟದ ನಿರ್ಮಾಣಕ್ಕೆ 30 ವರ್ಷ ತಗಲಿದರೆ, ಇನ್ನು ಅದಕ್ಕಿಂತ ದೊಡ್ಡದಾದ ಈ ಕಟ್ಟಡವನ್ನು ಪೂರ್ಣಗೊಳಿಸಲು ಎಷ್ಟು ವರ್ಷ ಬೇಕಾಗಬಹುದೆಂದು ಒಮ್ಮೆ ಊಹಿಸಿ ನೋಡಿ ! ಎರಡನೆಯ ಅಲಿಯ ಅನಂತರ ಅಳ್ವಿಕೆಗೆ ಬಂದ ವಿಜಾಪುರದ ಕೊನೆಯ ಸುಲ್ತಾನ ಸಿಕಂದರ್ ಗೆ ರಾಜ್ಯವನ್ನು ಉಳಿಸಿಕೊಳ್ಳುವುದೇ ಕಷ್ಟದ ಕೆಲಸವಾಗಿತ್ತು. ಹಾಗಾಗಿ ಈ ಬೃಹತ್ ಕಟ್ಟಡದ ನಿರ್ಮಾಣ ಕಾರ್ಯವನ್ನು ಮುಂದುವರಿಸುವ ಸಾಹಸಕ್ಕೆ ಅವನು ಕೈ ಹಾಕಲಿಲ್ಲ.

ಗೋಳ ಗುಮ್ಮಟದ ಹೊರಗೋಡೆಯ ಸುತ್ತಳತೆ 156 ಅಡಿ ಇದ್ದರೆ, ಬಾರಾಕಮಾನಿನ ಸುತ್ತಳತೆ 215 ಅಡಿ ಇದೆ. ಚಚ್ಚೌಕ ಆಕಾರದ ಈ ಬೃಹತ್ ಕಟ್ಟಡಕ್ಕೆ ನೆಲಮಟ್ಟದಿಂದ 20 ಅಡಿ ಎತ್ತರದ ಜಗತಿ ಇದೆ. ಅದರ ಮೇಲೆ ಬೃಹತ್ ಕಮಾನುಗಳು ಮಾತ್ರ ನಿಂತಿವೆ. ಮೇಲಿನ ಛಾವಣಿ ಪೂರ್ಣಗೊಂಡಿಲ್ಲ.

ಈ ಕಮಾನುಗಳು ಕೋನಸಂಧಿಗಳನ್ನು ಕಳೆದುಕೊಂಡು ನಯವಾಗಿ ಬಾಗಿ ನಿಂತಿರುವುದು ಅದ್ಬುತವಾಗಿದೆ. ಈ ಕಮಾನುಗಳು ಚತುಷ್ಕೇಂದ್ ಮಾದರಿಯವು. ಅಂದರೆ, ನಾವು ಜಗತ್ತಿಯ ಮೇಲೆ ಎಲ್ಲಿ ನಿಂತು ನೋಡಿದರೂ ನಮ್ಮನ್ನು ಕೇಂದ್ರವಾಗಿಟ್ಟುಕೊಂಡು ಸುತ್ತಲೂ ನಾಲ್ಕು ಕಮಾನುಗಳನ್ನು ಕಾಣಬಹುದು. ಕೆಲವು ಕಮಾನುಗಳು ಅರ್ಧಕ್ಕೇ ನಿಂತಿವೆ. ಕಮಾನಿನ ತುದಿಯಲ್ಲಿ ಆಯತಾಕಾರದ ಚಪ್ಪಡಿ ಕಲ್ಲುಗಳನ್ನು ಯಾವುದೇ ಆಧಾರವಿಲ್ಲದೆ ಕೂರಿಸಿರುವುದು ಸಾಹಸವೇ ಸರಿ.

ಕಟ್ಟಡದ ಮಧ್ಯ ಭಾಗದಲ್ಲಿ ಎರಡನೆಯ ಅಲಿ ಷಾ ಅವನ ಪತ್ನಿ ಹಾಗೂ 11 ಜನ ಹೆಣ್ಣು ಮಕ್ಕಳ ಸಮಾಧಿಯ ಪ್ರತಿಕೃತಿಗಳಿವೆ. ನಿಜಾವಾದ ಸಮಾಧಿಗಳು ಕಟ್ಟಡದ ನೆಲಮಾಳಿಗೆಯಲ್ಲಿವೆ.

ಬಾರಾಕಮಾನಿಗೆ ‘ಎರಡನೆಯ ಅಲಿ ರೋಜಾ’ ಎಂದೂ ಕರೆಯುತ್ತಾರೆ. ವಿಜಾಪುರದ ಸುಲ್ತಾನರು ತಮ್ಮ ಗೋರಿ ಗಳನ್ನು ತಾವೇ ನಿರ್ಮಿಸಿಕೊಳ್ಳುತ್ತಿದ್ದರು. ಸತ್ತ ಮೇಲೆ ಬಂಧುಗಳು ಅವರನ್ನು ಅದರಲ್ಲಿ ಸಮಾಧಿ ಮಾಡುತ್ತಿದ್ದರು. ಹಾಗಾಗಿ ವಿಜಾಪುರದಲ್ಲಿ ಇಂತಹ ಅನೇಕ ಗೋರಿಗಳು ಕಾಣಸಿಗುತ್ತವೆ.

ಬಾರಾಕಮಾನ್ ಅರ್ಪೂಣ ಕಟ್ಟಡವಾಗಿದ್ದರೂ ವಿದೇಶೀ ಪ್ರವಾಸಿಗರಂತೂ ಈ ಕಟ್ಟಡವನ್ನು ಬಹಳ ಮೆಚ್ಚಿಕೊಳ್ಳುತ್ತಾರೆ. ಈ ಕಟ್ಟಡ ಪೂರ್ಣಗೊಂಡಿದ್ದರೆ ವಿಶ್ವದ ಮತ್ತೊಂದು ಅದ್ಬುತವಾಗುತ್ತಿತ್ತೇನೋ ?

ವಿಜಾಪುರಕ್ಕೆ ಬಂದವರು ಈ ಬಾರಾಕಮಾನ ನೋಡಬೇಕಾದ ಕಟ್ಟಡ.


  • ಚಿತ್ರ-ಲೇಖನ : ಟಿ.ಶಿವಕುಮಾರ್ – ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಳೇಶ್ವರ, (ತಾ) ಹಾನಗಲ್ಲ (ಜಿ) ಹಾವೇರಿ.

5 1 vote
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW