‘ಬಿಗ್ ಬಾಸ್’ ಅನ್‌ಸೀನ್ ಅವತಾರಗಳು – ಹಿರಿಯೂರು ಪ್ರಕಾಶ್

”ಬಿಗ್ ಬಾಸ್ ಗೆ‌ ಸೆಲೆಕ್ಟ್ ಆಗಲು ಬೇಕಾದ ಅರ್ಹತೆಗಳೇನು?.ನಿಮ್ಮಲ್ಲಿ ಯಾವ ವಿಶೇಷ ಪ್ರತಿಭೆಯಿಲ್ಲದಿದ್ದರೂ ಓಕೆ, ಆದರೆ ಸೋಷಿಯಲ್‌ ಮೀಡಿಯಾದಲ್ಲಿ‌ ಅಥವಾ ಸಾರ್ವಜನಿಕ ಬದುಕಿನಲ್ಲಿ ನೀವು ಸಕತ್ ಕಾಂಟ್ರೋವರ್ಷಿಯಲ್ ಆಗಿ ಪ್ರಚಾರ ಸಿಕ್ರೆ ಸಾಕು” – ಹಿರಿಯೂರು ಪ್ರಕಾಶ್, ಮುಂದೆ ಓದಿ…

ಜಸ್ಟ್ ಮಾತ್ ಮಾತಲ್ಲಿ……!!

ನದಿಮೂಲ- ಋಷಿಮೂಲ ಕೆದಕಬಾರದಂತೆ ! ಹಾಗೆಯೇ‌ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ , ಆರುವಾರಗಳ ಓಟಿಟಿ ಮುಗಿದ ನಂತರ ಮುಂದಿನ ಒಂಭತ್ತನೇ ಆವೃತ್ತಿಗೂ ಸಜ್ಜಾಗಿರುವ “ಬಿಗ್ ಬಾಸ್ ” ಎಂಬ ರಿಯಲ್ ಅಲ್ಲದ ರಿಯಾಲಿಟೊ ಷೋನ ಮೂಲ, ಬಾಲ ಉದ್ದೇಶ ಗಳನ್ನು ಕೇಳಲೇ ಹೋಗಬಾರದು. ಕೇಳಿದರೂ ಅದು ನಮಗೆ ಅರ್ಥಾನೂ ಆಗೋಲ್ಲ ಅಥವಾ ಕ್ಲಾರಿಫ಼ೈನೂ ಸಿಗೋಲ್ಲ. ಹೀಗಾಗಿಯೇ ಮನರಂಜನೆ, ಸಂದೇಶ, ಖುಷಿ, ಕಲಿಕೆ, ಟೈಂಪಾಸು,….. ಈ ಯಾವುದೇ ಒಂದು‌ ನಿರ್ದಿಷ್ಟ‌ ಕಾರಣಗಳಿಲ್ಲದಿದ್ದರೂ ಜನ ಈ ಬಿಗ್ ಬಾಸ್ ಷೋ ಅನ್ನು ಎಲ್ಲಾ ಭಾಷೆಯಲ್ಲೂ ಗೆಲ್ಲಿಸಿದ್ದಾರೆಂದರೆ ಇಂತಹಾ ಷೋಗಳ ಕುರಿತು ನೀವು ಯಾವುದೇ ವೈಚಾರಿಕ‌ ಪ್ರಶ್ನೆಗಳನ್ನು ಎತ್ತುವಂತಿಲ್ಲ.

ಇಷ್ಟಿದ್ದೂ ಟೀವಿಯಲ್ಲಿ ಈ ಕಾರ್ಯಕ್ರಮದ ಪ್ರಸಾರಕ್ಕೆ ಟಿ.ಆರ್. ಪಿ ಸಕತ್ತಾಗೇ ಸಿಗುತ್ತೆ , ಅಲ್ಲಿ ಭಾಗವಹಿಸುವ ಸ್ಪರ್ಧಿಗಳು ರಾತ್ರೋರಾತ್ರಿ ಸ್ಟಾರ್ ಗಳಾಗಿ ಬಿಡುವ ಅಲೆಯಲ್ಲಿ ತೇಲಾಡುತ್ತಾ ಹೊರಪ್ರಪಂಚಕ್ಕೆ ಬಂದು ಅವರಿದ್ದಿದ್ದು‌ ಭ್ರಮಾಲೋಕ ಎಂದು ಅರಿವಾಗಲು ಅವರಿಗೆ ಒಂದೆರೆಡು ತಿಂಗಳಾದರೂ ಬೇಕು. ಅದಾವುದಾದರೂ ಇರಲಿ ಬಿಡಲಿ, ಏನಿಲ್ಲವೆಂದರೂ ಬಿಗ್ ಬಾಸ್ ನ ಆರಂಭದ ಷೋನಿಂದ ಹಿಡಿದು ಇಂದಿನವರೆಗೂ ಅದರ‌ ನಿರೂಪಕರಾಗಿರುವವರ‌ ಜೇಬಂತೂ ಭರ್ತಿ ತುಂಬುತ್ತೆ. ಎಷ್ಟೇ ಆಗಲೀ ಇದು‌ ನಮ್ಮ‌ ನೆಚ್ಚಿನ “ಕಿಚ್ಚ” ನ್ ಟೈಮ್..ಕಣ್ರೀ !
ಬಿಗ್ ಬಾಸ್ ನಂತಹ ಷೋಗಳ ಹಿಂದಿನ ಉದ್ದೇಶಗಳ ಬಗ್ಗೆ ಮಾತಾಡೋದರಲ್ಲಿ ಅರ್ಥವೇ ಇಲ್ಲ, ವ್ಯರ್ಥವೇ ಎಲ್ಲ . ಇಷ್ಟಾದ್ತೂ ಅವ್ರು ಹೇಳೋದು ” ಇದು ತಮಾಷೇನೇ‌ ಅಲ್ಲ ‘! ಅಂತ.
ಈ ಷೋನ ಸ್ಪರ್ಧಿಗಳು, ಅವರ ಅರ್ಹತೆ ಮತ್ತು ಅವರ ನಿರೀಕ್ಷೆಗಳ ಬಗೆಗೆ ಸುಮ್ಮನೇ ಗಮನಿಸಿದರೆ ಸಮಾಜಕ್ಕೆ ಅದರಲ್ಲೂ ಯುವ ಜನತೆಗೆ, ಪಡ್ಡೆಗಳಿಗೆ ಇವರೆಲ್ಲಾ ಯಾವ ಮೇಲ್ಪಂಕ್ತಿಯನ್ನು ಹಾಕಿ ಕೊಡುತ್ತಿದ್ದಾರೆಂಬ ಬಗ್ಗೆ ಭಯ ಶುರುವಾಗುತ್ತೆ‌ . ಈ ಬಗ್ಗೆ ತುಂಬಾ ಸೀರಿಯಸ್ ಆದ ಥಾಟ್ ಪ್ರಾಸೆಸ್ ವೇಸ್ಟ್ ಅಂತ ಗೊತ್ತಿದ್ದೂ ಈ ಬಗ್ಗೆ ಎರಡು ಸಾಲುಗಳು ನಿಮ್ಮೊಂದಿಗೆ ಹಂಚಿಕೊಳ್ಳದಿದ್ದರೆ ಎಲ್ಲೋ ಒಂದು ಕಡೆ ತಪ್ಪೆನಿಸಿಬಿಡುತ್ತದೆ.

ಫೋಟೋ ಕೃಪೆ : english.sakshi

ನೀವು ಈ ಕಾರ್ಯಕ್ರಮಕ್ಕೆ ಆಯ್ಕೆಯಾಗುವ ಸ್ಪರ್ಧಿಗಳನ್ನು ಆರಂಭದ ಎಪಿಸೋಡಿನಿಂದ ಗಮನಿಸುತ್ತಾ ಬಂದಿದ್ದಲ್ಲಿ ಒಂದು‌ ವಿಷಯ ಸ್ಪಷ್ಟವಾಗಿ ಅರ್ಥವಾಗುತ್ತೆ. ಅದೆಂದರೆ ಇಲ್ಲಿ ಆಯ್ಕೆಯ ಮಾನದಂಡ ಪೂರ್ತಿಯಾಗಿ ನಿಮ್ಮ ಪ್ರತಿಭೆ, ಸಾಧನೆ, ಕೌಶಲ್ಯ ಅಥವಾ ಒಳ್ಳೆಯತನ ವಷ್ಟೇ ‌ಅಲ್ಲ. ಅದಕ್ಕಿಂತಲೂ ಹೆಚ್ಚಿಗೆ ಇಲ್ಲಿ ಬೇಕಾಗಿರುವುದು ನೀವೆಷ್ಟು ನಿಮ್ಮ ಕುಕೃತ್ಯ ಅಥವಾ ಕುಚೇಷ್ಟೆಗಳಿಂದ , ವಿವಾದ -ವಿಕೃತಿಗಳಿಂದ ವಿಶ್ವವಿಖ್ಯಾತಿಯಾಗಿದ್ದೀರಿ ಎಂಬುದು ಮುಖ್ಯವಾಗುತ್ತದೆ. ಹೀಗಾಗಿಯೇ ಟ್ರೋಲ್ ಗಳಿಂದ, ವೈಯಕ್ತಿಕ ತಪರಾಕಿಗಳಿಂದ ಅಥವಾ ರಂಗುರಂಗಿನ ವಿವಾದಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಮುನ್ನೆಲೆಗೆ ಬಂದಿರುವ ಮಹಾನ್ ಪ್ರತಿಭಾವಂತರೇ ಇಲ್ಲಿ ಹೆಚ್ಚು.

ಆರಂಭದಲ್ಲಿ ಹತ್ತರಲ್ಲಿ ಒಬ್ಬರಂತೆ‌ ಇದ್ದ ಈ ರೀತಿಯ ವ್ಯಕ್ತಿತ್ವದ ಸ್ಪರ್ಧಿಗಳು ಇಂದು ಹತ್ತರಲ್ಲಿ ಒಬ್ಬ ಕಿರಿಕ್ ರಹಿತ ಸ್ಪರ್ಧಿಯನ್ನು‌ ಹುಡುಕುವಂತಿದೆ. ಒಟ್ಟಾರೆ, ಬೇಡದ ವಿಚಾರಗಳ ವಿವಾದಗಳಿಂದ ಜನಪ್ರಿಯ ರಾಗಿದ್ದೇವೆಂಬ‌ ಹುಸಿ‌ ಭ್ರಮೆಯಲ್ಲಿ ಮುಳುಗಿರುವ ಬಹುತೇಕ ಅರೆಬೆಂದ‌ ಮನಸುಗಳ ಹರೆಯದ ಹೈದರೇ ಇಲ್ಲಿನ ಮೋಸ್ಟ್ ವಾಂಟೆಡ್ ಕೆಂಟೆಸ್ಟೆಂಟ್ಸ್ !

ಇದ್ದುಕೊಳ್ಳಲಿ‌ ಬಿಡಿ ! ಟೀವಿ ಚಾನೆಲ್‌ನವರಿಗೂ, ಈ ಷೋಗೆ ಬಂಡವಾಳ ಹಾಕಿರುವವರಿಗೂ ಹಾಕಿದ ದುಡ್ಡು ಲಾಭ-ಬಡ್ಡಿ ಸಹಿತ ವಾಪಾಸು‌ ಬರ ಬೇಕಲ್ಲವೇ ? ಹೀಗಾಗಿ ಜನಗಳ ಟೇಸ್ಟೂ, ಟೈಮ್ ವೇಸ್ಟೂ ಏನಂತ ಅವರ ನಾಡಿಮಿಡಿತ ಚೆನ್ನಾಗಿ ಗೊತ್ತಿರೋದ್ರಿಂದಲೇ ನೀವ್ ಏನಾದ್ರೂ ಬಡ್ಕೊಳ್ಳಿ ” ನಾವಿರೋದು ಹೀಗೆ” ಎಂದು ಆತ್ಮವಿಶ್ವಾಸದಿಂದ ವರ್ಷ ವರ್ಷ ಯಶಸ್ವಿಯಾಗಿ ‌ಮುನ್ನುಗ್ಗುತ್ತಿದ್ದಾರೆ.

ಈಗ ಅತಿ ಮುಖ್ಯ ವಿಷಯಕ್ಕೆ ಬರುತ್ತೇನೆ.

ಈ ಬಾರಿಯ ಬಿಗ್ ಬಾಸ್ ಒಂಭತ್ತನೇ ಆವೃತ್ತಿಗಾಗಿ ಓಟಿಟಿಯಲ್ಲಿ ಆರುವಾರಗಳ ಮಿನಿ‌ಬಿಗ್ ಬಾಸ್ ಶುರುವಾಗಿದೆ. ಇಲ್ಲಿನ ಹದಿನಾರು ಸ್ಪರ್ಧಿಗಳಲ್ಲಿ ಕೊನೆಗೆ ಕೆಲವರನ್ನು ಮಾತ್ರ ಅವರ ಸಾಧನೆಯ ಆಧಾರದಲ್ಲಿ ಮುಖ್ಯ ಷೋಗೆ ಆರಿಸುತ್ತಾರಂತೆ. ಅಂದರೆ ಇಂದು‌ ಪ್ರಿಲಿಮಿನರಿ ಟೆಸ್ಟ್ ಇದ್ದಂತೆ.‌ ಈ ಓಟಿಟಿ ಆರಂಭದಲ್ಲಿ ಸ್ಪರ್ಧಿಗಳ ಪರಿಚಯ ಮಾಡಿಕೊಡುವಾಗ ” ನಿಮ್ಮ‌ ಜೀವನದಲ್ಲಿ ಮರೆಯಲಾಗದ ಘಟನೆ ಯಾವುದು ” ಎಂಬ ಸಾಮಾನ್ಯ ಪ್ರಶ್ನೆಯನ್ನು‌ ನಿರೂಪಕ ಕೇಳುತ್ತಾರೆ. ಅದಕ್ಕೆ ಒಬ್ಬೊಬ್ಬರೂ ಕೊಟ್ಟ ಉತ್ತರ ನೋಡಿ‌ ನಿಜಕ್ಕೂ ದಂಗಾಗಿ ಹೋಗಬೇಕಾಯಿತು. ಸಾಮಾನ್ಯವಾಗಿ ಮರೆಯಲಾಗದ ಘಟನೆಯೆಂದರೆ ಅವರ ಕಷ್ಟದ ದಿನಗಳು, ಬಾಲ್ಯ ಅಪಮಾನವನ್ನು‌ ನುಂಗಿದ್ದು, ಸಾಧನೆ, ಗೌರವ, ಪ್ರಶಸ್ತಿ, ರೆಕಗ್ನಿಷನ್ ಇತ್ಯಾದಿಗಳನ್ನು‌ ನಿರೀಕ್ಷೆ ಮಾಡಿದ್ದರೆ ಅದು ಮುಠಾಳತನವೆಂಬಂತೆ ಕೆಲವರು ಉತ್ತರಿಸಿದ್ದರು.

ಬಿಗ್ ಭಾಷೆಯಲ್ಲಿಯೇ ಹೇಳುವುದಾದರೆ ಅವರಲ್ಲಿ ಕೆಲವರು ಕೊಟ್ಟ ಉತ್ತರದ ಝಲಕ್ ಗಳನ್ನು‌, “ಅನ್ ಸೀನ್ ಅವತಾರ” ಗಳನ್ನೂ ‘ಡೀಪ್ ಆಗಿ ನೋಡಿ’ !

” ಪರಿಚಯದ ವ್ಯಕ್ತಿ ಜೊತೆ ಖಾಸಗಿ ಕ್ಷಣಗಳ ವಿಡಿಯೋ ಲೀಕ್ ಆಗಿ ಹೋಗಿದೆ ಆದರೆ ಇನ್ನೊಂದು‌ ತುಂಬಾ ಸೆನ್ಸಿಟೀವ್ ಬರಲಿದೆಯೆಂಬ‌ ಭಯವಿದೆ.
-ಇದು ಒಬ್ಬರ ಸಾಧನೆಯಾದರೆ,

” ಮದುವೆಯಾದ ವ್ಯಕ್ತಿ ಜತೆ ಎರಡು ವರ್ಷಗಳ ಕಾಲ ಆತನ ಬೆಂಬಲಕ್ಕಾಗಿ ರಿಲೇಷನ್ ಶಿಪ್ ನಲ್ಲಿದ್ದೆ. ಅದು ಅನಿವಾರ್ಯವಾಗಿತ್ತು !
-ಇದು ಮತ್ತೊಬ್ಬರ ಸಮರ್ಥನೆ.

” ಏಳನೇ ಕ್ಲಾಸಿನಲ್ಲೇ ಕ್ರಷ್ ಆಗಿ ಆ ಹುಡುಗಿ ನಿರಾಕರಿಸಿದ ಕೋಪಕ್ಕೆ ಆಕೆಯ ಹೆಸರನ್ನು ‌ಮ್ಯಾಗಜ಼ೀನ್ ನ ಬೆತ್ತಲೆ ಫೋಟೊ ಮೇಲೆ ಬರೆದು ನೋಟೀಸ್ ಬೋರ್ಡ್ ಮೇಲೆ‌ ಅಂಟಿಸಿದ್ದೆ”.
-ಇದು ಇನ್ನೊಬ್ಬನ‌ ಮಹತ್ಸಾಧನೆ.

” ನನ್ನ ಕತ್ತು ಹಿಸುಕಿ ನನ್ನನ್ನು ಝಾಡಿಸಿ ಒದ್ದ ಎಕ್ಸ್ ಬಾಯ್ ಫ಼್ರೆಂಡ್ ಜೊತೆ ರಿಲೇಷನ್ ಶಿಪ್ ನಲ್ಲಿದ್ದೆ”
-ಇದು ಮತ್ತೊಬ್ಬರ ಮನೋವೇದನೆ.

” ನಮ್ಮ ತಾತ ಮುತ್ತಾದಂದು ಐದಾರು ಸಾವಿರ‌ಕೋಟಿ ಆಸ್ತಿ‌ ಇದೆ ”
-ಇದು ಅಂಕಿ ಸಂಖ್ಯೆಗಳನ್ನು ಹೇಳುವವರೊಬ್ಬರ ಬಡಿವಾರ !

ಹೀಗೆ…. ಹೇಳುತ್ತಾ ಹೋದರೆ ಕೇವಲ ಇವರ ವೈಯಕ್ತಿಕ ಜೀವನದ ಹಸಿ‌ಬಿಸಿ ಅನೈತಿಕ ವಿಚಾರಗಳನ್ನೇ ಮರೆಯಲಾಗದ ಘಟನೆಗಳು ಅಥವಾ ಮಹತ್ಸಾಧನೆಗಳು ಎಂಬಂತೆ‌ ಬಿಂಬಿಸುವ ಸಾರ್ವಜನಿಕ ಪರಂಪರೆಗೆ ಈ ತರಹದ ಷೋಗಳು ವೇದಿಕೆಯಾಗುತ್ತಿವೆಯೇ ಎಂಬ ಅನುಮಾನ‌ ಕಾಡುತ್ತಿದೆ. ಈ ತರಹದ ದೃಶ್ಯಗಳನ್ನು‌ ನೋಡಿದಾಗ ಸೀಸನ್‌ ಮೂರರಲ್ಲಿ ಭಾಗವಹಿಸಿದ್ದ ಹುಚ್ಚ ವೆಂಕಟ್ ಎಂಬುವರ ಹೆಸರಲ್ಲಿ ಮಾತ್ರವೇ ಹುಚ್ಚುತನವಿತ್ತಷ್ಟೆ ಎನಿಸಿಬಿಡುತ್ತದೆ . ಬಿಗ್ ಬಾಸ್ ನೋಡುವವರಲ್ಲಿ‌ ಬಹುಪಾಲು ಯುವಕರು, ಹದಿಹರೆಯದವರೇ ಹೆಚ್ಚು. ಈ ಮಹಾನ್ ಸೆಲೆಬ್ರಿಟಿ ಸ್ಪರ್ಧಿಗಳು ತಮ್ಮ ಬದುಕಿನ ಅಮೋಘ ಘಟನೆಗಳನ್ನು, ಘನಂದಾರಿ ಸಾಹಸಗಳನ್ನು ಅನಾಮತ್ತಾಗಿ ಅನಾವರಣ ಮಾಡಿದ ಪರಿಣಾಮವೇನಾದರೂ ಇದನ್ನು‌ ನೋಡುವ ‌ಪಡ್ಡೆಗಳು , ಹದಿಹರೆಯದವರ ಮೇಲೆ ಬೀರಿ ಅವರೂ ಸಹ ಮುಂದೆ ತಮ್ಮ ಜೀವನದ ಮಹತ್ವದ ಘಟನೆಗಳಿಗೆ ಇದೇ ರೀತಿಯ ದೃಷ್ಟಾಂತಗಳನ್ನೇ ಮಾದರಿಯಾಗಿಟ್ಟುಕೊಂಡಲ್ಲಿ…. ಅಲ್ಲಿಗೆ ಸಾಮಾಜಿಕ ಸ್ವಾಸ್ಥ್ಯ ನೆಗೆದುಬಿದ್ದು‌ ನೆಲ್ಲಿಕಾಯಿಯಾದಂತೆ !!

ನೋಡುಗರ ಅಭಿರುಚಿಗೆ ತಕ್ಕಂತೆ ಸ್ಪರ್ಧಿಗಳು , ಸ್ಪರ್ಧಿಗಳ ಅರ್ಹತೆಗೆ ತಕ್ಕಂತೆ ಸ್ಪರ್ಧೆಗಳು , ಸ್ಪರ್ಧೆಗಳಿಗೆ ತಕ್ಕಂತೆ ಸನ್ಮಾನಗಳು..ಇವೆಲ್ಲವೂ ಯಾರು ಏನೇ ಮಾಡಿದರೂ ಸಾಂಗೋಪಾಂಗವಾಗಿ ಸಲೀಸಾಗಿ ನೆಡೆಯುವ ಸೀನ್‌ಗಳೇ ಎಲ್ಲೆಡೆ ವಿಜೃಂಭಿಸುವಾಗ ಸಾಮಾಜಿಕ ಸ್ವಾಸ್ಥ್ಯ , ನೈತಿಕ ನಿಯಮ, ಕನಿಷ್ಠ ಸಾಮಾಜಿಕ ಬದ್ದತೆ… ಇಂತಹಾ ಪದಗಳು ಬಳಸಲೂ ಸಿನಿಕತನವೆನಿಸುವಷ್ಟು ಸವಕಲಾಗಿ ಹಳ್ಳ ಹಿಡಿದಿರುವುದನ್ನು ಸಾಂಸ್ಕೃತಿಕ ದುರಂತವೆನ್ನುವಿರೋ ಅಥವಾ ನೈತಿಕ ಅಧಃ ಪತನವೆನ್ನುವಿರೋ….. ಅದನ್ನು ಟಿ.ಆರ್.ಪಿ ಹಿಂದೆ ಬೀಳುವ ಆಯೋಜಕರಿಗೂ, ಮತ್ತದರ ಉತ್ತೇಜಕರಾದ ನೋಡುಗರ ವಿವೇಚನೆಗೂ…..

“ಜಸ್ಟ್ ಮಾತ್ ಮಾತಲ್ಲಿ” ಯೇ ಬಿಟ್ಟಿದ್ದೇನೆ.

** ಮರೆಯುವ ಮುನ್ನ **

ಸಾಮಾಜಿಕ ಸಂದೇಶ, ನೈತಿಕ ಜವಾಬ್ದಾರಿ ಹಾಗೆ ಹೀಗೆ ಅಂತೆಲ್ಲಾ ಹೇಳಿ ಕೊರೆದು ಕಿರಿಕ್ ಮಾಡೋದು ಈ‌ ಬರಹದ ಉದ್ದೇಶ ಅಲ್ಲ. ನಿಜಕ್ಕೂ ನನಗೂ ಗೊತ್ತು. ಬೇರೆ ಯಾರೋ ಹದಿನಾರು ಜನ ವಿವಾದರಹಿತ, ಸಾತ್ವಿಕ ಸಾಧಕರನ್ನು ಆಯ್ಕೆ ಮಾಡಿ ಬಿಗ್ ಬಾಸ್ ಮಾಡಿದ್ರೆ, ಆಗ ಹತ್ತೇ ದಿನದಲ್ಲಿ ಷೋ ಖತಂ ಆಗುತ್ತೆ ಅಂತ ! ಹಾಗಂತ ಸದಭಿರುಚಿಯ ಕಾರ್ಯಕ್ರಮಗಳನ್ನು ಕನ್ನಡಿಗರು ಎಂದೂ ಕೈ‌ಬಿಟ್ಟಿಲ್ಲ. ಬೇಕಾದರೆ ಕನ್ನಡದ ಕೋಟ್ಯಾಧಿಪತಿ, ಸರಿಗಮಪ, ಡ್ರಾಮಾ ಜೂನಿಯರ್ಸ್, ಮಜಾ ಟಾಕೀಸ್ ಗಳ ಅದ್ಭುತ ಯಶಸ್ಸನ್ನು ಒಮ್ಮೆ ನೋಡಿ. ಬಿಗ್ ಬಾಸ್ ಮನೆಯಲ್ಲಿ‌ ಬರೀ ಕಿತ್ತಾಟ, ಗುದ್ದಾಟ , ಚಿಲ್ಲರೆ‌ಬುದ್ದಿ, ಸೆಕ್ಸು, ಸೈಕೋ, ಕಿರಿಕ್ಕು, ಚಾಡಿ, ಕುತಂತ್ರ, ಕೆದಕು, ಇವಿಷ್ಟನ್ನು‌ ಗೇಮ್ ಗಳ ರೂಪದಲ್ಲಿ ನೋಡುವುದನ್ನು ಬಿಟ್ಟರೆ ಬೇರೆ ಸಕಾರಾತ್ಮಕ ಅಥವಾ ನೂತನ ಅಂಶಗಳನ್ನು ತುಂಬುವ ಕ್ರಿಯಾಶೀಲತೆ ಎನ್ನುವುದು ಸತ್ತು‌ ಸುಡುಗಾಡು ಸೇರಿದೆಯೇ ಎಂಬ ಡೌಟು ಕಾಡುತ್ತೆ.

ಬಿಗ್ ಬಾಸ್ ಗೆ‌ ಸೆಲೆಕ್ಟ್ ಆಗಲು ಬೇಕಾದ ಅರ್ಹತೆಗಳೇನು ಎಂಬುದು ರಾಜ್ಯದ ಯಾವುದೇ ಮೂಲೆಯಲ್ಲಿನ ಬಾಲಕನಿಗೂ ಗೊತ್ತು.‌ ನಿಮ್ಮಲ್ಲಿ ಯಾವ ವಿಶೇಷ ಪ್ರತಿಭೆಯಿಲ್ಲದಿದ್ದರೂ ಓಕೆ, ಆದರೆ ಸೋಷಿಯಲ್‌ ಮೀಡಿಯಾದಲ್ಲಿ‌ ಅಥವಾ ಸಾರ್ವಜನಿಕ ಬದುಕಿನಲ್ಲಿ ನೀವು ಸಕತ್ ಕಾಂಟ್ರೋವರ್ಷಿಯಲ್ ಆಗಿ ಪ್ರಚಾರ ಸಿಕ್ರೆ ಸಾಕು ! ಆದ್ರೂ ಇವರದ್ದು “ನಾಟಕಕ್ಕೆ ಇಲ್ಲಿ‌ ಜಾಗಾನೇ ಇಲ್ಲ” ಎಂಬ ಸ್ಲೋಗನ್ನು !

ಇದಿಷ್ಟೆ ಆಗಿದ್ರೆ ಓಕೆ. ಆದರೆ ಅವರ ವೈಯಕ್ತಿಕ ಬದುಕಿನ ತಪರಾಕಿಗಳನ್ನೇ ಸಾಧನೆ -ವೇದನೆ ಯೆಂಬಂತೆ ಪ್ರೊಜೆಕ್ಟ್ ಮಾಡುವ ಇಂತಹಾ‌ ವೇದಿಕೆಗಳು ಬರಲಿರುವ ಸಾಂಸ್ಕೃತಿಕ ಭಯೋತ್ಪಾದನೆಗೆ‌ ಮುನ್ನುಡಿಯಿದ್ದಂತೇನೋ ಎಂಬಂತೆ‌ ಅನಿಸುತ್ತದೆ……!
ಅನಿಸುವುದಿಲ್ಲವೇ…….??

ಲಾಸ್ಟ್ ಪಂಚ್

” ಯಾವುದೇ ರೂಪದಲ್ಲಿಯಾಗಲೀ ಸಮಾಜಕ್ಕೆ ತಪ್ಪು ಸಂದೇಶ ಕೊಡುವುದಕ್ಕಿಂತ ತೆಪ್ಪಗಿರುವುದೇ ಸಮಾಜಕ್ಕೆ ನಾವು ಮಾಡುವ ಬಹುದೊಡ್ಡ ಉಪಕಾರ ”

ಪ್ರೀತಿಯಿಂದ…


  • ಹಿರಿಯೂರು ಪ್ರಕಾಶ್  (ಲೇಖಕರು, ಚಿಂತಕರು)

 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW