ಶುಭನುಡಿ, ರವಿತೇಜನ ಮುಕ್ತಕಗಳು ಪುಸ್ತಕ ಬಿಡುಗಡೆ ಸಮಾರಂಭ

ಕವಿ ಬೆಂ.ಶ್ರೀ ರವೀಂದ್ರ ಮತ್ತು ಡಾ.ಶುಭಶ್ರೀ ಪ್ರಸಾದ್ ಅವರ ಪುಸ್ತಕ ಬಿಡುಗಡೆ ಸಮಾರಂಭ ಇದೇ ಜೂನ್ ೧೧,೨೦೨೩ ರಂದು, ಬಿ ಎಂ ಶ್ರೀ ಸಭಾಂಗಣ,ಏನ್ ಆರ್ ಕಾಲೋನಿಯಲ್ಲಿ ಇದ್ದು ಎಲ್ಲರೂ ತಪ್ಪದೆ ಕಾರ್ಯಕ್ರಮಕ್ಕೆ ಬನ್ನಿ…

“ಶುಭನುಡಿಯೇ ಶಕುನದ ಹಕ್ಕಿ ಶುಭ ನುಡಿಯೇ…..” ಹಾಡು ಕೇಳದವರು ಯಾರು? ವರಕವಿ ದ.ರಾ.ಬೇಂದ್ರೆಯವರ ಕವನ ಆಕಾಶವಾಣಿ ಭದ್ರಾವತಿಯಿಂದ ಬೆಳಿಗ್ಗೆ ಏಳು ಗಂಟೆಗೆ ಹತ್ತು ನಿಮಿಷ ಮುಂಚೆ ತೇಲಿ ಬರುತ್ತಿದ್ದಾಗ ತಲೆ ತೂಗೂತ್ತಾ ಹಾಸಿಗೆಯಿಂದ ಎಳುತ್ತಿದ್ದೆ. ಹಾಡಿನಲ್ಲಿ ಬರುವಂತೆ ಮಲೆನಾಡಿನ ಊರಲ್ಲಿ ಬೆಳಗಿನ ತಂಗಾಳಿಗೆ ಕೊರತೆ ಇರಲಿಲ್ಲ. ಹಕ್ಕಿಗಳು ಚಿಲಿ ಪಲಿ ಶಬ್ದ ಒಂದು ಕಡೆಯಾದರೆ, ಬೆಳಿಗ್ಗೆ ಮುಂಜಾನೆಯೇ ಹಾಲಕ್ಕಿ ಶುಭನುಡಿಯುತ್ತಾ ಹೋಗುತ್ತಿದ್ದರೆ ಆ ಮಾತು ನಿಜವಾಗುತ್ತದೆ ಎಂಬ ನಂಬಿಕೆಯಿತ್ತು.

ಆ ದಿನಗಳು ಕಳೆದು ರೊಟ್ಟಿಯನ್ನು ಸಂಪಾದಿಸಲು ಪಟ್ಟಣ ಸೇರಿಕೊಂಡಾಗ ಹಕ್ಕಿಗಳ ಶಬ್ದ ದೂರವಾಗಿ ಬೆಳಿಗ್ಗೆ ಕೈಯಲ್ಲಿ ದಿನ ಪತ್ರಿಕೆಯ ಒಂದು ಮೂಲೆಯಲ್ಲಿ ಇರುವ ‘ಸುಭಾಷಿತ’ ಓದುವ ಅಭ್ಯಾಸ ಬಂತು. ಈ ಸುಭಾಷಿತ ಮೊದಲು ಬರೆದವರು ಯಾರು ಗೊತ್ತಿಲ್ಲ. ಬಹುಶಃ ಜಾನಪದದ ಬಳುವಳಿಯೇ ಇರಬಹುದು. ಈ ಸುಭಾಷಿತಗಳು ಕೆಲವೊಮ್ಮೆ ನಾವು ಇರುವ ಮನಸ್ಥಿತಿಗೆ ನೇರವಾಗಿ ಹೊಂದಾಣಿಕೆಯಾಗಿ ನಮಗೋಸ್ಕರವೇ ಬರೆದಿದ್ದೇನೋ ಅನಿಸಿದ್ದು ಉಂಟು. ಆಗ ಅದರ ಸಂದೇಶ ಕೆಲವೊಂದು ತಳಮಳಗಳನ್ನು ಕಡಿಮೆ ಮಾಡಲು ಸಹಾಯ ಮಾಡಿದ್ದು ಇದೆ. ಈಗ ಆ ದಿನಗಳೂ ಕಳೆದು ಬೆಳಿಗ್ಗೆ ಕಾಫಿಯ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಸಂದೇಶಗಳನ್ನು ನೋಡುವ ಅಭ್ಯಾಸ ಬಂದಿದೆ! ‘ಸುಭಾಷಿತ’ದ ಜಾಗದಲ್ಲಿ ‘ಶುಭನುಡಿ’ ಬಂದಿದೆ!

ನಾವೇನೆ ಮಾಡುತ್ತಿರಲಿ, ನಮ್ಮ ಯೋಚನೆಗಳು ನಮ್ಮನ್ನು ಸದಾ ಹಿಂಬಾಲಿಸುತ್ತಿರುತ್ತವೆ. ಅವು ಯಾವಾಗ ಮುಂದೆ ಬಂದು ನಿಲ್ಲುತ್ತವೆಯೋ ಗೊತ್ತಿಲ್ಲ. ಈಗಂತೂ ಶಾಲೆಗೆ ಮಕ್ಕಳನ್ನು ಸೇರಿಸುವ ಸಮಯ. ಕೆಲವು ಮಕ್ಕಳಿಗೆ ಧೈರ್ಯವಿಲ್ಲ. ಮಕ್ಕಳು ಮೊದಲಿಗೆ ಅಳುತ್ತಾ ಶಾಲೆಗೆ ಸಾಗುವುದು ಸಾಮಾನ್ಯ ದೃಶ್ಯ. ಆಗ ನೆನಪಿಗೆ ಬಂದಿದ್ದು ನೋಡಿ ಈ ‘ಶುಭನುಡಿ’.

“ಧೈರ್ಯವಿರೆ ಹಿಮಾಲಯವೇರಬಹುದು ಭಯವಿರೆ ಗುಂಡೂಕಲ್ಲೂ ಬೃಹತ್ತು ದೃಡತಯೇ ಊರುಗೋಲು ಶುಭಕರಿ”

ಅಂತೂ ಮಕ್ಕಳನ್ನು ಶಾಲೆಗೆ ಧೈರ್ಯ ತುಂಬಿ ಕಳಿಸಿದ್ದಾಯಿತು. ಶಾಲೆಗೆ ಕಳುಹಿಸಿದರಾಯಿತೆ ಈಗೀನ ಕಾಲದಲ್ಲಿ?. ಶಾಲೆಯ ಶುಲ್ಕ ಜಾಸ್ತಿಯಾದಂತೆ ಮನೆ ಪಾಠದ ಅವಶ್ಯಕತೆ ಜಾಸ್ತಿ ಆಗುವುದು ಈಗಿನ ಪರಿಸ್ಥಿತಿ! ನಾವೇ ಅವರಿಗೆ ಸಾಧನೆಯ ದಾರಿ ತೋರಬೇಕು ಎಂದುಕೊಂಡಾಗ ನೆನಪಾಗಿದ್ದು ಕಲಂ ಸಾಹೇಬ್ರು ಹೇಳಿದ ಮಾತು ‘ದೊಡ್ಡ ಕನಸು ಕಾಣಿ’ ಎಂದು. ಆಗ ನೆನಪಾಗಿದ್ದೇ ಈ ಶುಭನುಡಿ.

“ಕನಸಿರದೆ ಮುನ್ನಡೆಯೇ
ಕಲ್ಪನೆಯಿರದೆ ಕಾವ್ಯವೇ
ಆಕಾಂಕ್ಷೆಯಿರದೆ ಸಾಧನೆಯೇ
ಶುಭಕರಿ”

ಅಂತೂ ಮಕ್ಕಳಿಗೆ ಶಾಲೆಯ ದಾರಿ ತೋರಿಸಿ ಕೂತುಕೊಂಡಾಗ ‘ದೇಶ ಸುತ್ತು ಕೋಶ ಓದು’ ಎಂದು ಕೇಳಿದ್ದು ನೆನಪಾಯಿತು. ಸರಿ ಊರು ಸುತ್ತಲೂ ಶಾಲೆಯ ರಜೆ ದಿನಗಳಲ್ಲಿ ಎಲ್ಲರ ಜೊತೆ ಹೊರಟಿದ್ದು ಆಯಿತು. ಹೋಟಲ್ ರೂಂನಲ್ಲಿ ಬೆಲ್ ಮಾಡಿದರೆ ಬರುವ ‘ರೂಂ ಬಾಯ್’ ಗೆ ಅದು ಬೇಕು, ಇದು ಬೇಕು ಎಂದು ಹೇಳುವುದರಲ್ಲಿ ಏನೋ ಸಂಭ್ರಮ ಮಕ್ಕಳಿಗೆ. ಊರನ್ನು ಕಾರು, ಬಸ್, ರೈಲುಗಳಲ್ಲಿ ಸುತ್ತಿ ಸಂತೋಷದಿಂದ ಚಿತ್ರವಿಚಿತ್ರಗಳನ್ನು ನೋಡಿಕೊಂಡು ಅಂತೂ ಮನೆಗೆ ಒಂದು ವಾರದ ನಂತರ ಹಿಂತಿರುಗಿ ರಾತ್ರಿ ಹನ್ನೆರಡು ಗಂಟೆಗೆ ಬಂದಾಗ ನೆನಪಿಗೆ ಬರುವುದೇ ಈ ಶುಭನುಡಿ.

“ಎಷ್ಟು ಊರು ಸುತ್ತಿದರೂ
ನಮ್ಮ ತಾವೆ ನೆಮ್ಮದಿತಾಣ
ನೆಲದ ಸೊಗಡೆ ಹಿರಿಶಕ್ತಿ ಶುಭಕರಿ”

ಬೆಳಿಗ್ಗೆ ಎದ್ದು ಒಂದು ವಾರದ ನಂತರ ದೇವರ ಗೂಡಿನ ಹತ್ತಿರ ಹೋದರೆ ಅಲ್ಲಿ ನೈವೇದ್ಯ ಮಾಡಿ ಇಟ್ಟಿದ್ದ ಸಕ್ಕರೆ ಬಟ್ಟಲಿನ ಹತ್ತಿರ ಇರುವೆಯ ಸಾಲು ಕಾಣಿಸಿತು. ಬಹುಮಹಡಿ ಕಟ್ಟಡದಲ್ಲಿ ಎರಡನೇಯ ಮಹಡಿಯಲ್ಲಿದ್ದರೂ ಈ ಇರುವೆಗಳಿಗೆ ದಾರಿ ತೋರಿಸಿದವರು ಯಾರು? ಆದರ ಸಾಲಿನ ದಾರಿ ಹಿಡಿದುಕೊಂಡು ಹೋದಾಗ ಅದು ಬಾಲ್ಕನಿಗೆ ಕರೆದುಕೊಂಡು ಹೋಯಿತು. ಅದು ಅಲ್ಲಿರುವ ಪೈಪ್ ಕೆಳಗೆ ಇಳಿದು ಹೋಗುತ್ತಿತ್ತು. ಅದರ ಜೊತೆಗೆ ಹತ್ತಿರದಲ್ಲೇ ಪಾರಿವಾಳಗಳ ಗುಂಪೊಂದು ಹಾರಿಹೋಗಿ ಪಕ್ಕದ ರಸ್ತೆಯಲ್ಲಿ ಯಾರೋ ಹಾಕಿದ ಕಾಳುಗಳನ್ನು ಸುತ್ತುವರಿದಿತ್ತು. ಆಗ ನೋಡಿ ನೆನಪಾಗಿದ್ದೇ ಈ ಶುಭನುಡಿ.

“ಮೇಲಿರುವ ಹದ್ದಿಗೂ ಉಣಿಸಿದೆ
ನೆಲದಿರುವ ಇರುವೆಗೂ ತಿನಸಿದೆ
ಸೃಷ್ಟಿಯಲಿ ಸಕಲರಿಗೂ ಬದುಕಿದೆ
ಶುಭಕರಿ”

ಆ ಸಮಯದಲ್ಲೇ ಬಂದ ಮನೆಕೆಲಸದ ಗೌರಮ್ಮ, ಐದನೇಯ ಮಹಡಿಯ ‘ರುಕ್ಮಿಣಿ ಆಂಟಿ’ ಮೊನ್ನೆ ರಾತ್ರಿ ಆಚಾನಕ್ಕಾಗಿ ಉಸಿರಾಟದ ತೊಂದರೆ ಆದಾಗ, ಅವರನ್ನು ಮನೆಯ ಹತ್ತಿರ ಇರುವ ‘ಮೈ3 ಆಸ್ಪತ್ರೆ’ ಸೇರಿಸಿದರು. ಅಲ್ಲಿ ತಜ್ಞ ವೈದ್ಯರಾದ ಸೈಮನ್ ಡಿಸೋಜರವರು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಮಾಡಿದರು ಎಂದು ವಾರದ ಕಥೆ ನನ್ನ ಮನದನ್ನೆ ಹತ್ತಿರ ಹೇಳಿದ್ದು ನನ್ನ ಕಿವಿಗೂ ಬಿತ್ತು. ಆಗ ನನಗೆ ನೆನಪಾಗಿದ್ದು,

“ವೈದ್ಯೆಕೇಂ ಜಾತಿಮತ
ಕರುಣೆಗೇಂ ಕುಲಗೋತ್ರ
ಮನುಜತ್ವವೆ ಬೆಳಕು ಶುಭಕರಿ”

ಅಂತೂ ಮನೆ ಸ್ವಚ್ಛ ಮಾಡಿ, ಕೂತು ದಿನ ಪತ್ರಿಕೆ ತೆಗೆದಾಗ ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿರುವ ವರದಿ ಕಣ್ಣಿಗೆ ಬಿತ್ತು. ಅನೇಕ ದೇಶಗಳಲ್ಲಿ ಇಂದು ಹಣದುಬ್ಬರದಿಂದ ಬೆಲೆ ಏರಿಕೆ ಸಮಸ್ಯೆ ಬೃಹುದಾಕಾರವಾಗಿ ಬೆಳೆದಿದೆ. ಇನ್ನೊಂದೆಡೆ ಉಕ್ರೈನ್ -ರಷ್ಯಾ ನಡುವೆ ನಡೆದಿರುವ ಯುದ್ಧ ಬಹಳಷ್ಟು ಸಮಸ್ಯೆಗಳನ್ನು ಸೃಷ್ಟಿಸಿದೆ. ಮತ್ತೊಂದೆಡೆ ಸೋಮಾಲಿಯದಂತಹ ದೇಶಗಳಲ್ಲಿ ಪೌಷ್ಟಿಕಾಂಶದ ಕೊರತೆಯಿಂದ ಜನರು ತೊಂದರೆಗೆ ಒಳಗಾಗಿದ್ದಾರೆ. ಇದರ ಜೊತೆಗೆ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆ ಬೆಳೆಯ ಇಳುವರಿಯ ಮೇಲೆ ಪರಿಣಾಮ ಬೀರುತ್ತಿದೆ. ಎಂಟು ನೂರು ಕೋಟಿ ಜನರಿಗೆ ಆಹಾರ ಒದಗಿಸುವ ಸಮಸ್ಯೆ ಸಾಮಾನ್ಯವಲ್ಲ. ಇವೆಲ್ಲಾ ಹೀಗೆ ಮುಂದುವರೆದರೆ ……. ಒಂದು ಗಂಭೀರ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ಲೇಖನ ಅದಾಗಿತ್ತು. ಹಣವನ್ನು ಮುದ್ರಿಸಬಹುದು ಅಥವ ಸಾಲ ಮಾಡಬಹುದು. ಆದರೆ ಆಹಾರವನ್ನು ‘3ಡಿ ಪ್ರಿಂಟ್’ ಮಾಡಲು ಆಗಲ್ಲವಲ್ಲ ಅನಿಸಿತು. ಆಗ ನೆನಪಾಗಿದ್ದೆ

“ರಾಶಿ ಸುರಿದರೂ ಉಣಲಾಗದು
ನಾಣ್ಯ
ಪೇರಿಸಿದ ನೋಟು ಪೇಯವಲ್ಲ
ಹಣಕಾಸಿನ ಮಿತಿಯನರಿ ಶುಭಕರಿ”

ಹೀಗೆ ನಮ್ಮ ಪ್ರತಿನಿತ್ಯದ ಬದುಕಿನಲಿ ಈ ‘ಶುಭನುಡಿ’ಗಳು ಕೆಲವೊಮ್ಮೆ ಮನಸ್ಸಿಗೆ ಸಾಂತ್ವನ ನೀಡುತ್ತದೆ, ಕೆಲವೊಮ್ಮೆ ಚಿಂತನೆಗೆ ದೂಡುತ್ತದೆ, ಕೆಲವೊಮ್ಮೆ ಸತ್ಯ ದರ್ಶನ ಮಾಡಿಸುತ್ತದೆ, , ಕೆಲವೊಮ್ಮೆ ಮುಂದಿನ ದಾರಿ ತೋರಿಸುತ್ತದೆ. ಹಾಗಾಗಿಯೇ ಶ್ರೀರವಿಂದ್ರರವರು ಶುಭನುಡಿಗೆ ಒಂದು ವರ್ಷವಾದಾಗ ಹೇಳಿದ್ದರು:

“ಅಭಿನಂದನೆಗಳು ಶುಭಕರಿಯೆ
ಸಂಪತ್ತು ನಿನ್ನೀ ನನ್ನೀ
ಶುಭನುಡಿಯು
ಬಾಳದೋಣಿಗೆ ಅಂಬಿಗನ ಹುಟ್ಟು
ರವಿತೇಜ”

ಈಗ ‘ಶುಭನುಡಿ’ಗಳು ಪುಸ್ತಕ ರೂಪದಲ್ಲಿ ಎಲ್ಲರಿಗೂ ಸಿಗುತ್ತಿರುವುದು ಸಂತಸದ ವಿಷಯ. ಈ ಸಂದರ್ಭದಲ್ಲಿ ಡಾ.ಶುಭಶ್ರೀ ಪ್ರಸಾದ್ ರವರಿಗೆ ಹಾರ್ದಿಕ ಅಭಿನಂದನೆಗಳು.

****

‘ರವಿತೇಜನ ಮುಕ್ತಕಗಳು.’

ಶ್ರೀ ರವೀಂದ್ರರವರು ಈ ಮೊದಲು ಮಕ್ಕಳ ಸಾಹಿತ್ಯ ‘ ಆದಿಯೂ ನೆಟ್ ಪಾಠವೂ..’ದಲ್ಲಿ ಪುಣ್ಯ ಕೋಟಿ ಗೋವನ್ನು ಬದುಕಿಸಿ ತಾನು ಪ್ರಾಣ ಬಿಟ್ಟ ಹುಲಿಯ ಕಂದನಿಗೆ ತನಗೆ ಬೇಟೆಯಾಟವ ಕಲಿಸುವವರು ಯಾರು? ಎಂದು ಕೇಳಿದ್ದರು. ನಂತರ ಶ್ರೀ ರಂಗರಾಜನ್ ಬರೆದ ‘ಇಬ್ಬನಿ’ಗೆ ಸಂವಾದಿಯಾಗಿ ಬರೆದ ‘ಬನಿ’ಯಲ್ಲಿ

“ಬದಲು ಕ್ಷಣಕ್ಷಣವು
ನವಾನ್ವೇಷಣೆ ಕಣವು
ಜೀವನಗತಿಚಕ್ರ ಸರಾಗ
ಬೆರೆತು ಬೆಳೆ ಅನುರಾಗ.”

ಎಂದಿದ್ದರು. ಈ ತರಹದ ಸಾಲುಗಳ ಮೂಲಕ ಜೀವನದಲ್ಲಿ ಪ್ರೀತಿಯ ಮಹತ್ವ ತೋರಿಸಿದ್ದರು.

ಈಗ ಬರುತ್ತಿರುವ ‘ರವಿತೇಜನ ಮುಕ್ತಕಗಳು’ ಯಾವ ವಿಷಯದ ಬಗ್ಗೆ ಎಂಬ ಕುತೂಹಲ ಇದೆ.

ಬೆಳಿಗ್ಗೆ ಎದ್ದ ತಕ್ಷಣ ಶುಭನುಡಿ ಓದುತ್ತಿದ್ದೆ. ಆಗ ರವಿ ಪೂರ್ವದಲ್ಲಿ ಪ್ರತ್ಯಕ್ಷ ನಾಗಿರುತ್ತಿದ್ದ. ಆ ರವಿ ಹೊರಗಣ್ಣು ತೆಗೆಸಿದರೆ, ‘ಶುಭನುಡಿ’ ಮೂಲಕ ಒಣಗಣ್ಣು ತೆರೆಸುವ ಪ್ರಯತ್ನವಿತ್ತು. ಈಗ ಈ ರವಿಯ ಕಿರಣಗಳಿಂದ ಬರುವ ಬೆಳಕು ಹೊಸ ಜೀವನಕ್ಕೆ ಆಶಾಕಿರಣಗಳಾಗಿ ಒಳಗಣ್ಣು ತೋರಿದ ದಾರಿಯಲ್ಲಿ ನಡೆಯುವ ರೀತಿ ತೋರಿಸಬಹುದೇ? ಗೊತ್ತಿಲ್ಲ!

ಶ್ರೀಯುತ ರವೀಂದ್ರರ ಪುಸ್ತಕ ಬಿಡುಗಡೆಯ ಸಮಯದಲ್ಲಿ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ.

ಎರಡೂ ಪುಸ್ತಕಗಳನ್ನು ಓದಲು ಉತ್ಸುಕನಾಗಿದ್ದೇನೆ. ಎಲ್ಲರೂ ಬನ್ನಿ. ಜೊತೆಯಲ್ಲಿ ಬೆನ್ನುಡಿಯಲ್ಲಿ ಶ್ರೀ ಎಂ.ಎಸ್. ಎನ್.ರವರು ಬರೆದಂತೆ ‘ಹುರಿಗಾಳು’ ಮೆಲ್ಲುತ್ತಾ ‘ಶುಭನುಡಿ’ ಕೇಳೋಣ.


  • ಎನ್.ವಿ.ರಘುರಾಂ – ನಿವೃತ್ತ ಅಧೀಕ್ಷಕ ಅಭಯಂತರ(ವಿದ್ಯುತ್) ಕ.ವಿ.ನಿ.ನಿ.

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW