ಎಮ್ಮೆಯ ”ಆಸಿಡಿಟಿ” ಎಂದು ಕರೆಯಬಹುದು. ಎಮ್ಮೆ ಒಮ್ಮೆಯೇ “ಡಾಂ… ಡೂಂ.. ಡುಸ್ಕಿವಾಲಾ” ಎಂದು ಹೊಟ್ಟೆಯಲ್ಲಿ ಶೇಖರಣೆಯಾದ ಗ್ಯಾಸನ್ನು ಅದರ ನವರಂದ್ರಗಳಲ್ಲಿ ಒಂಭತ್ತನೇ ರಂದ್ರದಿಂದ ಸಶಬ್ಧವಾಗಿ ಹೊರಬಿಟ್ಟಿದ್ದರಿಂದ ವಾತಾವರಣವೆಲ್ಲಾ ಕಲುಷಿತವಾಗಿ ದುರ್ವಾಸನಾಮಯವಾಗಿದೆ. ಮುಂದೇನಾಯಿತು ಅನ್ನೋದನ್ನ ಡಾ. ಎನ್.ಬಿ.ಶ್ರೀಧರ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ ತಪ್ಪದೆ ಓದಿ..
ನನ್ನ ವೃತ್ತಿ ಜೀವನದ ಪ್ರಾರಂಭದ ದಿನಗಳವು. ಆ ದಿನ ಮಧ್ಯಾಹ್ನ ಎರಡು ಘಂಟೆ. ಕಲಘಟಗಿಯಲ್ಲಿ ಬಸಪ್ಪ ರೊಟ್ಟಿ ಖಾನಾವಳಿಯಲ್ಲಿ ರೊಟ್ಟಿ ಎಣೆಗಾಯಿ ಪಲ್ಯ ಹೋಳಿಗೆ ತುಪ್ಪ ಸೇವನೆ ನಡೆದು ಹೆಗ್ಗಣ ತಿಂದ ಹೆಬ್ಬಾವಾಗಿತ್ತು ಹೊಟ್ಟೆ. ಮಧ್ಯಾಹ್ನ ೧ ಗಂಟೆಯಿಂದ ೨ ಗಂಟೆ ನಮಗೆಲ್ಲಾ ಭೋಜನದ ವಿರಾಮ. ಇನ್ನೇನು ತೂಕಡಿಕೆ ಪ್ರಾರಂಭವಾಗಬೇಕು. ಅಷ್ಟರಲ್ಲೇ ಎಮ್ಮೆಯೊಂದರ ರಂಗ ಪ್ರವೇಶವಾಯಿತು. ಮಧ್ಯಾಹ್ನ ಎಮ್ಮೆ ದನ ತಂದವರಿಗಾಗಲೀ ಅಥವಾ ನಮಗಾಗಲೀ ಯಾವುದೇ ಅರ್ಜೆಂಟು ಎಂಬುದಿರಲಿಲ್ಲ. ಆ ರೈತ ಎಮ್ಮೆ ತಂದವನೂ ಸಹ ಆಗಷ್ಟೇ ಊಟ ಮಾಡಿರಬಹುದು. ಬಂದವನೇ ಆಸ್ಪತ್ರೆಯ ಆವರಣದಲ್ಲಿ ಯಾರೋ ಪುಣ್ಯಾತ್ಮರು ನೆಟ್ಟಿದ್ದ ಪುರಾತನ ಕಾಲದ ಹುಣಸೆ ಮರಕ್ಕೆ ಎಮ್ಮೆ ಕಟ್ಟಿ ಪಕ್ಕದಲ್ಲಿದ್ದ ಕಟ್ಟೆಯ ಮೇಲೆ ಪವಡಿಸಿ ಎಲೆ ಅಡಿಕೆಯ ಕವಳದ ಸಂಚಿ ಬಿಚ್ಚಿ ಒಂದೊಂದೇ ವೀಳ್ಯದೆಲೆ ಹೊರದೆಗೆದು ಅವುಗಳಿಗೆ ನವಿರಾಗಿ ಸುಣ್ಣ ಸವರಿ ಒಂದಿಷ್ಟು ಅಡಿಕೆ ತುಂಡುಗಳನ್ನು ಹಾಕಿ ಬಾಯಿಗೆ ಸುರಕೊಂಡು ಮೆಲ್ಲ ತೊಡಗಿದ. ಆರಾಮವಾಗಿ ಪವಡಿಸಿದವನಿಗೇನು ಘನಂದಾರಿ ಕೆಲಸ? ಮೂಗಿನ ಹೊರಳೆಯಲ್ಲಿ ಆಳವಾಗಿ ಕೈ ತೋರುಬೆರಳನ್ನು ಮೂಗಿನ ಹೊರಳೆಯಲ್ಲಿ ತೂರಿಸಿ ಬಳ್ಳಾರಿಯಲ್ಲಿ ಗಣಿಯನ್ನು ಬೃಹತ್ ಯಂತ್ರಗಳು ಅಗೆದ ಹಾಗೇ ಅಗೆಯುತ್ತಾ ಅದನ್ನು ಆಗಾಗ ಆಘ್ರಾಣಿಸುತ್ತಾ ಅದೇನೋ ಖುಷಿಯಲ್ಲಿದ್ದ. ಈ ನಿರಕ್ಷರ ಕುಕ್ಷಿ ರೈತನಿಗೇನು ಲಜ್ಜೆ? ಅತ್ಯಂತ ಖಾಸಗಿಯಾದ ಈ ಚಟವನ್ನು ನಮ್ಮಲ್ಲಿಯೇ ಅನೇಕ ವಿದ್ಯಾವಂತರೆನಿಸಿಕೊಂಡವರು ಸಾರ್ವಜನಿಕವಾಗಿಯೇ ತಮ್ಮ ತೋರುಬೆರಳನ್ನು ಮೂಗಿನೊಳಗೆ ತೂರಿಸಿ ಅಲ್ಲಿರುವ ಅರೆಗಟ್ಟಿಯಾದ ವಸ್ತುವನ್ನು ತೋರು ಬೆರಳಿನ ತುದಿಯಲ್ಲಿಟ್ಟು ಕೇರಂ ಕಾಯಿನ್ ಹೊಡೆಯುವ ವೇಗದಲ್ಲಿ ಹೊಡೆದಾಗ ಅದು ಮುಂದಿರುವ ಯಾರಿಗೋ ಅಥವಾ ಯಾವುದೋ ವಸ್ತುವಿಗೆ ಡಿಕ್ಕಿ ಹೊಡೆದು ಅದರಲ್ಲಿನ ಅಂಟಾದ ಸ್ವಭಾವದಿಂದ ಅಲ್ಲೇ ಅಂಟಿಕೊಂಡು ಒಣಗಿ ಉದುರಿ ಕಸ ಸೇರುತ್ತದೆ. ಕೆಲವರಿಗಂತೂ ಈ ಮೂಗನ್ನು ಸಾರ್ವಜನಿಕವಾಗಿಯೇ ಪದೇ ಪದೇ ಪೆರಟಿಕೊಳ್ಳುವುದು ಎಷ್ಟು ಅಭ್ಯಾಸವಾಗಿ ಹೋಗಿರುತ್ತದೆಯೆಂದರೆ ಸಭೆ ಸಮಾರಂಭಗಳಲ್ಲಿಯೂ ಸಹ “ಏಲಕ್ಕಿ”ಯಂತ ಆ ವಸ್ತುವನ್ನು ತೆಗೆದು ಅದನ್ನೇ ಒಮ್ಮೆ ಸಿಟ್ಟಿನಿಂದಲೋ ಪ್ರೀತಿಯಿಂದಲೋ ದಿಟ್ಟಿಸಿ ನೋಡಿ ಕುಳಿತ ಖುರ್ಚಿಗೋ ಅಥವಾ ಮೇಜಿಗೋ ತಗಲಿಸಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ.
ಫೋಟೋ ಕೃಪೆ : google
ಎಮ್ಮೆಯೂ ಸಹ ಮಾಲಕನ ಜೊತೆಯೇ ಕೊಳಕುತನಕ್ಕೆ ಡಬಲ್ ಪೈಪೋಟಿ ಮಾಡುವಂತೆ ತನ್ನ ನಾಲಿಗೆಯನ್ನು ದೀರ್ಘವಾಗಿ ಹೊರಗೆ ಸೆಳೆದು ಮೂಗಿನ ಹೊರಳೆಯ ಎಷ್ಟು ಸಾಧ್ಯವೋ ಅಷ್ಟು ಒಳಗೆ ಹಾಕಿ ಅಲ್ಲಿರುವ ದ್ರವವನ್ನು ಆಸ್ವಾದಿಸಿತು. ಬಹುಶ: ಯಾವ ರುಚಿಯಿತ್ತೋ? ಅದಕ್ಕೆ ಗೊತ್ತು. ನಾಲಿಗೆಯನ್ನು ಹೊರತೆಗೆದು ಮೂಗಿನ ಇನ್ನೊಂದು ಹೊರಳೆಯೊಳಗೆ ಎಷ್ಟು ಸಾಧ್ಯವೋ ಅಷ್ಟು ಆಳಕ್ಕೆ ಹಾಕಿ ಅಲ್ಲಿರುವ ದ್ರವವನ್ನೂ ಸರ್ರನೇ ಹೀರಿ ಆಸ್ವಾಧಿಸಿತು. ಇನ್ನೊಂದಿಷ್ಟು ಒಣ ದ್ರವರೂಪದ ವಸ್ತು ಅಲ್ಲೇ ಇತ್ತೇನೋ. ತನ್ನ ಒರಟಾದ ದೊರಗು ನಾಲಿಗೆಯನ್ನು ಒಂದಾದರ ಮೇಲೊಂದರಂತೆ ಪರ್ಯಾಯವಾಗಿ ಕಣ್ಣು ಮುಚ್ಚಿಕೊಂಡು ಸ್ವಶರೀರದ “ರಸ” ಸ್ವಾದ ಮಾಡುತ್ತಿತ್ತು. ಒಂತರಾ ತೃಪ್ತಿಯ ಭಾವ ಅದರ ಮುಖದ ಮೇಲೆ ಕಾಣಿಸಿತು. ಅಲಲಾ .. ಇದೇನಿದು?.. ಎಮ್ಮೆ ಮತ್ತದರ ಮಾಲಕ ಒಂದೇ ಕೆಲಸದಲ್ಲಿದ್ದಾರಲ್ಲ . ಬೇಗ ಕಳಿಸಬೇಕು ಇವರನ್ನು ಇಲ್ಲದಿದ್ದರೆ ನನಗೂ ಹಾಗೇ ಮಾಡುವ ಬಯಕೆ ಬಂದೀತು ಎಂದುಕೊಂಡು “ ಹಾಕ್ರಿ ಆ ಎಮ್ಮೆನ ಒಳಕ್ಕೆ ಅಂದೆ” ನಮ್ಮಾಸ್ಪತ್ರೆ ಜವಾನನೂ ಸಹ ಆಗಷ್ಟೇ ಊಟ ಮಾಡಿದವನು ತೋರು ಬೆರಳನ್ನು ಘೇಂಡಾಮೃಗದಂತೆ ತೆರೆದ ಬಾಯಲ್ಲಿ ಹಾಕಿ ಉಗುರಿನಿಂದ ಹಲ್ಲುಗಳ ಮಧ್ಯೆ ಸಿಕ್ಕಿ ಬಿದ್ದಿದ್ದ ಆಹಾರ ತುಣುಕನ್ನು ಕಷ್ಟ ಪಟ್ಟು ತೆಗೆಯುತ್ತಿದ್ದವನು ಅದಕ್ಕೆ ವ್ಯತ್ಯಯ ಬಂದಿರುವದರಿಂದ ಕೈಯನ್ನು ಪ್ರಷ್ಟಕ್ಕೆ ಒರೆಸಿಕೊಳ್ಳುತ್ತಾ ಬಂದ.
“ಸಾಹೇಬ್ರ..ಯಾಕೋ ಮೇವೇ ತಿನ್ವಲ್ತು. ಒಂದೀಟ್ ನೋಡ್ರಿ” ಎಂದೆನ್ನುತ್ತಾ ಜಾನುವಾರುಗಳನ್ನು ಕೂಡಿಹಾಕಲು ಇರುವ ಚೌಕಾಕಾರದ “ಟ್ರೆವಿಸ್” ಒಳಗೆ ದೂಡಲು ಪ್ರಯತ್ನಿಸಿದ. ಬಡಪಟ್ಟಿಗೆ ಬಗ್ಗೀತೇ ಎಮ್ಮೆ? . ಬಯಲು ಸೀಮೆಯ ಬಾರುಕೋಲಿನಿಂದ ಪ್ರಷ್ಟಕ್ಕೆ ಎರಡು ಬಿಸಿಯೇಟು ಹಾಕಿದರೂ ಜಪ್ಪಯ್ಯ ಅಂದರೂ ರೊಳ್ಳೆ ತೆಗೆದು ಟ್ರೆವಿಸಿನ ಮುಂದೆ ಶಿರಸಾಷ್ಟಾಂಗ ಹಾಕಿ ಮಲಗಿಯೇ ಬಿಟ್ಟಿತು. ಏಳಬೇ.. ಏಳಬೇ.. ಎಂದು ರೈತ ಎಷ್ಟು ರಮಿಸಿದರೂ ಎದ್ದೇಳದೇ ರಚ್ಚೆ ಹಿಡಿದಿತ್ತು. ಅಷ್ಟರಲ್ಲೇ ನಮ್ಮ ಶಿಷ್ಯ (ಈತನ ಬಗ್ಗೆ ಬರೆದಿದ್ದೆ… ಕೆಲವರಿಗೆ ನೆನಪಿರಬಹುದು.. ಅದೇ ಮರ್ಮಾಘಾತ…) ಬಂದವನೇ ’ಸಾರ್ ಇದಕ್ಕೆಲ್ಲ ಬಗ್ಗಲ್ಲ ಇದು. ವಿಶೇಷ ಮದ್ದು ಬೇಕು ಇದಕ್ಕೆ ಅನ್ನುತ್ತಾ ನಮ್ಮ ಮೆಡಿಸಿನ್ ಸ್ಟೋರ್ ರೂಮಿಗೆ ತೆರಳಿದ. ಅಲ್ಮೇರಾದಿಂದ ಒಟಿಸಿ ಎಂಬ ಕುಂಡೆಗೆ ಚುಚ್ಚಿದರೆ ಅಪಾರ ನೋವಾಗುವ ದಿವ್ಯೌಷಧಿಯನ್ನು ಸಿರಿಂಜಿನಲ್ಲಿ ಎಳೆದು ಅದರ ಪ್ರಷ್ಟ ಭಾಗಕ್ಕೆ ಚುಚ್ಚಿದ್ದೆ ತಡ.. ಎಮ್ಮೆ ಕರೆಂಟ್ ಹೊಡೆದ ಕಾಗೆಯ ಹಾಗೆ ದಡಬಡಿಸಿ ಎದ್ದಿದ್ದೇ ಸೀದಾ ಟ್ರೆವಿಸ್ಸಿನಲ್ಲಿ ಮುಂಬೈನ ಲೋಕಲ್ ಟ್ರೇನಿನಲ್ಲಿ ರಶ್ ಇರುವ ಸಮಯದಲ್ಲಿ ಬಾಗಿಲಿನ ಹತ್ತಿರ ನಿಂತರೆ ಜನ ತಾನಾಗಿಯೇ ದೂಡಿಕೊಂಡು ಒಳ ಸೇರಿಸುತ್ತಾರೆಯೋ ಹಾಗೇ ತಾನಾಗಿಯೇ ಒಳಗೆ ಸೇರಿತು.
ಫೋಟೋ ಕೃಪೆ : google
ಎಮ್ಮೆ ಮ್ಲಾನ ವದನನಾಗಿ ದೀನನಾಗಿ ಎಕ್ಸಾಂ ಹಾಲಿನಲ್ಲಿ ಏನೇನೂ ಓದದೇ ಬಂದ ಹುಡುಗ ಇನ್ವಿಜಿಲೇಟರನ್ನು ಅಗಾಗ ಒಂಥರಾ ಸ್ವಲ್ಪ ಕಾಪಿ ಮಾಡಲು ಬಿಟ್ಟರೆ ಸಾಕು ಎಂದು ಧೀನನಾಗಿ ನೋಡುವ ಹಾಗೇ ನಮ್ಮನ್ನೇ ದಿಟ್ಟಿಸುವ ಹಾಗಿತ್ತು. ಎಮ್ಮೆಯ ಹತ್ತಿರ ಹೋಗುತ್ತಾ ಇದ್ದ ಹಾಗೇ ಬಯಲಿನಲ್ಲಿ ಎಳೆದು ಹಾಕಿದ ಸತ್ತು ಹೋದ ದನದ ಶರೀರವು ಬಿಸಿಲಿಗೆ ಒಣಗಿ ಬರುವ ದುರ್ಗಂಧಂತೆ ದುರ್ವಾಸನೆ ಬಂತು. ಎಮ್ಮೆ ಶ್ರಾದ್ಧದ ಊಟ ಮಾಡಿ ಡರ್ರನೇ ತೇಗುವ ಭಟ್ಟರುಗಳ ಹಾಗೇ ತೇಗಿದ ಹೊಡೆತಕ್ಕೆ ಅದರ ಉದರದಲ್ಲಿರುವ ದುರ್ವಾಸನಾಯುಕ್ತ ಉಸಿರು ರಪ್ಪಂತ ಮೂಗಿಗೆ ರಾಚಿತು. ಮೂಗು ಮುಚ್ಚಿಕೊಂಡು ಎಮ್ಮೆಯ ಹತ್ತಿರ ಹೋದೆ. ಸಿರಿಂಜು, ಥರ್ಮಾಮೀಟರುಗಳೆಂಬ ನಮ್ಮ ಆಯುಧಗಳನ್ನು ಹಿಡಿದು, ಶುದ್ಧ ಮಲ್ಲಿಗೆಯ ಬಣ್ಣದ ನಿನ್ನೆಯಷ್ಟೇ ಒಗೆದು ಇಸ್ತ್ರಿ ಮಾಡಿ ಧರಿಸಿದ ಬಿಳಿ ಎಪ್ರಾನನ್ನು ನೋಡಿ ಹೆದರಿದ ಎಮ್ಮೆ ಅದರ ಶರೀರದಲ್ಲಿ ಅಳಿದುಳಿದ ಒಂದಿಷ್ಟು ಮೂತ್ರವನ್ನು ’ಜಿರಿಕ್ ಜಿರಿಕ್’ ಎಂದು ಸಶಬ್ಧದ ಮೂಲಕ ಖಾಲಿ ಮಾಡಿ ಬಾಲದ ಕುಚ್ಚಿನಲ್ಲಿ ಅದ್ದಿ ಬೀಸಿದ ಹೊಡೆತಕ್ಕೆ ನನ್ನ ಮೈಯೆಲ್ಲಾ ಸತ್ಯನಾರಾಯಣ ವೃತ ಮುಗಿಯುತ್ತಾ ಬಂದಾಗ ಭಟ್ಟರು ಮಾಡುವ ಪ್ರೋಕ್ಷಣೆಯಂತೆ ಸಿಂಪಡನೆಯಾಗಿ ಮೈಯೆಲ್ಲಾ ದುರ್ಗಂಧದ ಕೂಪವಾಯಿತು. ಬೇಸಿಗೆಯಲ್ಲಿ ಎಮ್ಮೆಗಳಿಗೆ ಶರೀರವನ್ನು ನೈಸರ್ಗಿಕವಾಗಿ ತಂಪುಗೊಳಿಸಲು ಇರುವುದು ಕೆಸರು ಗದ್ದೆ ಅಥವಾ “ತಾಲಿ” ಹೊಂಡ. ಸದಾ ಕಪ್ಪೆಗಳನ್ನು ಅಟ್ಟಿಸಿಕೊಂಡು ಹೋಗುವ ಕೇರೆ ಹಾವುಗಳಿರುವ, ಸೊಪ್ಪು ಸೊದೆಗಳು ಕೊಳೆತು ದುರ್ನಾತ ಬೀರುವ ಅರಲು ಕೆಸರು ಹೊಂಡವೇ ಈ ಎಮ್ಮೆಗಳ “ತಾಲಿ”ಹೊಂಡವೆಂದು ಗ್ರಾಮ್ಯ ಭಾಷೆಯಲ್ಲಿ ಕರೆಯುವ ಕೆಸರು ಪ್ರದೇಶ. ಇದರಲ್ಲಿ ಹೊರಳಾಡಿ “ತಾಲಿ” ಹೊಡೆದು ದುರ್ವಾಸನೆಯ ಸಗಣಿಯನ್ನು ಮೈಗೆಲ್ಲಾ ಹಚ್ಚಿಕೊಂಡು “ದಿಮ್ ರಂಗ” ಎಂದು ಸ್ವಚ್ಚಂದವಾಗಿ ಓಡಾಡಿಕೊಂಡಿರುವ ಈ ಎಮ್ಮೆಗಳಿಗೆ ತಾಲಿ ಹೊಂಡದಲ್ಲಿ ಬಿದ್ದೆದ್ದು ಗಂಟೆಗಟ್ಟಲೇ ಹೊರಳಾಡಿ ಆ ಗಲೀಜಿನಲ್ಲಿ ಬಿದ್ದೆದ್ದು ಬಂದರೆ ಮಾತ್ರ ಅವುಗಳ ಜೀವನ ಪಾವನ. ಈ ಎಮ್ಮೆಯೂ ಆಗಷ್ಟೇ ತಾಲಿ ಹೊಂಡದಲ್ಲಿ ಬಿದ್ದೆದ್ದು ಬಂದಿದ್ದರಿಂದ ಎಮ್ಮೆಯ ಮೈಯೆಲ್ಲಾ ಕೊಳೆತ ಮಣ್ಣಿನ ದುರ್ಗಂದ ಸೂಸಿ ಒಂದು ಮಣ ಕಪ್ಪು ಮಣ್ಣು ಅಂಟಿಕೊಂಡಿತ್ತು. ನಾನು ಎಮ್ಮೆಯ ಸಮೀಪ ನಿಂತು ಹೃದಯ ಬಡಿತ ಪರೀಕ್ಷಿಸುತ್ತಿದ್ದಾಗ ಎಮ್ಮೆಗೆ ಹೆದರಿಕೆಯಿಂದ ಅದರ “ಹೃದಯ” ಬಾಯಿಗೆ ಬಂತೇನೋ? ಅಥವಾ ಯಾರೋ ಅದರ ಪ್ರಷ್ಠಕ್ಕೆ ಇಂಜೆಕ್ಷನ್ ಚುಚ್ಚಿದ್ದರ ನೆನಪು ಬಂತೇನೋ. ಇದ್ದಕ್ಕಿದ್ದ ಹಾಗಿ ಕೊಸರಾಡಿ ಟ್ರೆವಿಸಿನ ಮುಂದಿನ ಸಲಾಕೆಯ ಮೇಲೇ ಹಾರಿ ಹೈಜಂಪ್ ಮಾಡ ಹೊರಟಿತು. ಅದರ ದೇಹ ಮತ್ತು ನನ್ನ ಬಿಳಿ ಎಪ್ರಾನಿನ ಮಧ್ಯೆ ತಿಕ್ಕಾಟವಾಗಿ ಅದರ ಸಕಲ ಮಣ್ಣಿನ ಗುಡ್ಡೆಯೂ ನನ್ನ ಬಟ್ಟೆಗಳಿಗೆ ವರ್ಗಾವಣೆಯಾಯಿತು.
ಫೋಟೋ ಕೃಪೆ : google
ಎಮ್ಮೆಯ ಸಗಣಿ ಹಾಕಿದರೆ ದುರ್ಗಂಧದಿಂದ ಕೂಡಿತ್ತು. ಸಗಣಿ ಹಾಕಲು ಅದು ತಿಣುಕಾಡುವಾಗ ಅದರ ಒಂಭತ್ತನೇ ದ್ವಾರಗಳಿಂದ ಹೊರಟ ಸಶಬ್ಧ ಸಹಿತ ಹೊರಟ ವಾಯು ಅದರ ವಾಯುಪ್ರಕೋಪವನ್ನು ಸ್ವಲ್ಪ ಕಡಿಮೆ ಮಾಡಿತು. ಅದರ ಬಾಯೆಲ್ಲ ಒಂಥರಾ ರಾತ್ರಿಯೆಲ್ಲಾ ನಾನ್ ವೆಜ್ ತಿಂದು ಬೆಳಿಗ್ಗೆ ಹಲ್ಲುಜ್ಜದೇ ಮುಂದೆ ಬಂದು ಬಾಯಿ ತೆಗೆದರೆ ಬರುವ ದುರ್ವಾಸನೆ. ರಸ್ತೆ ಬದಿಯ ಮನುಷ್ಯರ ಅಮೇಧ್ಯವೇನಾದರೂ ಅಭ್ಯಾಸ ಬಲದಿಂದ ಮೇದಿದೆಯೋ ಎಂದು ಪರೀಕ್ಷೆ ಮಾಡಿದೆ. ಈ ಎಮ್ಮೆಗಳಿಗೆ ರಸ್ತೆಯ ಬದಿಗೆಲ್ಲಾ ಬಯಲು ಶೌಚಾಲಯದ ಪರಿಣಾಮವಾಗಿ ಸಿಗುವ ಮನುಷ್ಯ ಅಮೇಧ್ಯವನ್ನು ಮೆಲ್ಲುವ ಚಟ. ಅದರಲ್ಲೂ ವಿವಿಧ ಆಕಾರದಲ್ಲಿ, ಗಾತ್ರದಲ್ಲಿ ರಸ್ತೆಬದಿಗೆ ಮಣ್ಣು ಸೇರಲು ಸಿದ್ಧವಾಗಿರುವ ವೆರೈಟಿಯಾಗಿರುವ ರುಚಿ ಹುಡುಕಲು ಈ ಎಮ್ಮೆಗಳು ಹೊರಡುವ ಈ ಎಮ್ಮೆಗಳು ಮುಖದ ಹತ್ತಿರ ಮೂತಿ ತಂದರೆ ಅಮೇಧ್ಯದ ದುರ್ವಾಸನೆ ಉಸಿರು ಗಟ್ಟಿಸುತ್ತಿತ್ತು. ಏನ್ರೀ? ಇದಕ್ಕೆ ಆ ತರದ ಚತವೇನಾರೂ ಇದೆಯೇ? ಎಂದು ಕೇಳಿದೆ. ಅದರ ಮಾಲಕ ತನ್ನ ಇರುವ ಎಲ್ಲಾ ಹಲ್ಲುಗಳನ್ನೂ ಪ್ರದರ್ಶಿಸಿ ನಗುತ್ತಾ “ಹೇ..ಹೇ.. ಇಲ್ರೀ ಸಾಹೇಬ್ರ.. ಎಮ್ಮಿ ಬಾಳ್ ಶಾಣ್ಯಾ ಐತ್ರಿ. ಆ ತರಾ ಚಟ ಇಲ್ರೀ” ಎಂದು ಎಮ್ಮೆಯ ಕಲ್ಯಾಣ ಗುಣದ ಬಗ್ಗೆ ಸರ್ಟಿಪಿಕೇಟ್ ನೀಡಿದ. ಆದರೂ “ಮಾಲಕರ ಮಾತನ್ನು ಯಾವಾಗಲೂ ನಂಬಲೇ ಬೇಡ” ಎಂದು ಮೆಡಿಸಿನ್ ಪಾಠ ಮಾಡುವಾಗ ಶಿಕ್ಷಕರು ಹೇಳಿದ್ದು ನೆನಪಿಗೆ ಬಂತು. ಕಾರಣ ಯಾರು ಏನೇ ಅಂದರೂ ಮೂತಿಯನ್ನು ತೊಳೆದೇ ನಾನು ಈ ಎಮ್ಮೆಗಳ ಪರೀಕ್ಷೆ ಮಾಡಿದ್ದೆ ಇಲ್ಲ. ಪರೀಕ್ಷೆ ಮಾಡಿ ಆ.. ತರಹದ್ದು ಏನೂ ಇಲ್ಲ, ಹಾಗಿದ್ದರೆ ಏನಿರಬಹುದು? ತಲೆ ಕೆಡಿಸಿಕೊಂಡೆ. ಯಾಕೋ ಸಂಶಯ ಬಂದು “ಏನಾದರೂ ನಿನ್ನೆ ಮೊನ್ನೆ ಅನ್ನ ಗಿನ್ನ ಹಾಕಿದ್ರೇನ್ರಿ? ಮದ್ವೆ ಮನೆ ಏನಾರೂ ಇತ್ತಾ? ಏನಾದ್ರೂ ಹಲಸಿನ ಹಣ್ಣು ಹಾಕಿದ್ರಾ? ಎಂದು ಕೇಳಿದೆ. ಆಗ ಹೊರಬಿತ್ತು ಗುಟ್ಟು. ಆತ “ಹೂನ್ರೀ ಸಾಹೇಬ್ರೆ.. ದೋಡ್ ಹಲಸಿನ್ ಹಣ್ ಇತ್ರೀ.. ಹಾಳಾಗ್ತೈತಿ ಅಂತ ಎಮ್ಮಿಗೇ ಹಾಕಿದ್ವ್ರೀ” ಎಂದು ಬಾಯಿ ಬಿಟ್ಟ. ನಿನ್ನೆಯೋ ಮೊನ್ನೆಯೋ ಹಲಸಿನ ಹಣ್ಣು ಮರದಲ್ಲಿ ಬಿಟ್ಟಿತ್ತಂತೆ. ಹುಲುಸಾಗಿ ಬೆಳೆದ ಹಲಸಿನ ಹಣ್ಣನ್ನು ಎಮ್ಮೆಗೆ ಹಾಕಿ ಬಿಟ್ಟಿದ್ದಾರೆ. ಎಮ್ಮೆಯ ಹೊಟ್ಟೆ ಎಂಬ ಬ್ರಹ್ಮಾಂಡ ಹಲಸಿನ ಹಣ್ಣಿನ ತೊಳೆಗಳ ಶರ್ಕರ ಪಿಷ್ಠದ ಲೋಡನ್ನು ತಾಳಲಾರದೇ ಹೊಟ್ಟೆ ಕೊಳೆತಂತಾಗಿ ಕಷ್ಟ ಪಟ್ಟಿದೆ.
ಹಲಸಿನ ಹಣ್ಣಿನ ತೊಳೆಗಳ ಶರ್ಕರ ಪಿಷ್ಟದ ಲೋಡು ಹೊಟ್ಟೆಯಲ್ಲಿಯಲ್ಲಿ ಒಮ್ಮೆಲೇ ಜಾಸ್ತಿ ಸಿಕ್ಕಾಗ ಹೊಟ್ಟೆಯಲ್ಲಿರುವ ಉಪಯುಕ್ತ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಅಸಂಖ್ಯಾತವಾಗಿ ಸ್ಪೋಟಗೊಂಡು ವಿಪರೀತವಾಗಿ ಲ್ಯಾಕ್ಟಿಕ್ ಆಮ್ಲ ಉತ್ಪಾದನೆ ಆಗಿಬಿಟ್ಟಿದೆ. ಆಮ್ಲವು ಹೊಟ್ಟೆಯ ಒಳಪದರವನ್ನು ಕೊರೆದು ರಕ್ತವನ್ನು ಸೇರಿ ಅಲ್ಲಿಯೂ ಆಮ್ಲೀಯತೆ ಜಾಸ್ತಿ ಆಗಿ ಹೊಟ್ಟೆಯ ಚಲನೆ ನಿಂತು ಹೋಗಿದೆ. ಇದನ್ನೇ ಎಮ್ಮೆಯ ”ಆಸಿಡಿಟಿ” ಎಂದು ಕರೆಯಬಹುದು. ಹೊಟ್ಟೆಯ ಒಳಪದರದ ಉರಿಯೂತ ಪ್ರಾರಂಭವಾಗುತ್ತದೆ. ಇದ್ದಕ್ಕಿದ್ದ ಹಾಗೇ ಬಂದು ವಕ್ಕರಿಸಿದ ಶರ್ಕರ ಪಿಷ್ಟವನ್ನು ಜೀರ್ಣ ಮಾಡಲಾಗದ ಕೋಟ್ಯಾನು ಕೋಟಿ ಸೂಕ್ಷ್ಮಾಣುಗಳು ನೆಗೆದು ಬಿದ್ದು ನೆಲ್ಲಿಕಾಯಿ ಆಗಿವೆ. ಮಿಥೇನ್ ಗ್ಯಾಸು ಮತ್ತು ಲ್ಯಾಕ್ಟಿಕ್ ಆಮ್ಲಗಳು ಸಣ್ಣ ಮತ್ತು ದೊಡ್ಡ ಕರುಳಿನಲ್ಲಿನ ಬ್ಯಾಕ್ಟಿರಿಯಾಗಳ ಬಾಯಿಗೆ ತುತ್ತಾಗಿ ಹೈಡ್ರೋಜನ್ ಸಲ್ಫೈಡ್ ಎಂಬ ದುರ್ವಾಸನಾ ಯುಕ್ತ ಅಸಹ್ಯ ಗ್ಯಾಸ್ ಉತ್ಪನ್ನವಾಗಿದೆ. ಕರುಳಿನ ಲಯ ಬದ್ಧ ಚಲನೆ ನಿಂತು ಎಲ್ಲಿ ಬೇಕಾದಲ್ಲಿ ಗ್ಯಾಸು ಬೆಂಗಳೂರಿನಲ್ಲಿ ಮನೆಯ ಪಕ್ಕವೇ ಪಾರ್ಕ್ ಮಾಡುವ ಕಾರುಗಳಂತೆ ಜಾಮ್ ಆಗಿದೆ. ಎಮ್ಮೆ ಒಮ್ಮೆಯೇ “ಡಾಂ… ಡೂಂ.. ಡುಸ್ಕಿವಾಲಾ” ಎಂದು ಹೊಟ್ಟೆಯಲ್ಲಿ ಶೇಖರಣೆಯಾದ ಗ್ಯಾಸನ್ನು ಅದರ ನವರಂದ್ರಗಳಲ್ಲಿ ಒಂಭತ್ತನೇ ರಂದ್ರದಿಂದ ಸಶಬ್ಧವಾಗಿ ಹೊರಬಿಟ್ಟಿದ್ದರಿಂದ ವಾತಾವರಣವೆಲ್ಲಾ ಕಲುಷಿತವಾಗಿ ದುರ್ವಾಸನಾಮಯವಾಗಿದೆ. ಇದರಿಂದ ಇದನ್ನು ಹೊಟ್ಟೆಯೊಳಗೆ ಹಲಸಿನ ಹೊಲಸು ಎನ್ನಬಹುದು.
ಅಂತೂ ಮುಖ್ಯ ಇಂಜಿನ್ ನಿಂತ ಎಮ್ಮೆಗೆ ಅವಶ್ಯ ಚಿಕಿತ್ಸೆ ಗ್ಲುಕೋಸ್ ಆದಿಯಾಗಿ ತರ ತರದ ಚಿಕಿತ್ಸೆ ನೀಡಿದ ನಂತರ ಕಿಕ್ಕು ಹೊಡೆದ ಮೇಲೆಯೇ ಸ್ಟರ್ಟಾಗುವ ಹಳೆ ಸ್ಕೂಟರಿನಂತೆ ಹುಶಾರಾಗಿ ಮೇವು ತಿಂದು ಮರಿ ಕರ ಹಾಕಿಕೊಂಡು ಹಾಲು ನೀಡುತ್ತಾ ಬಹಳ ಕಾಲ ಸುಖವಾಗಿ ಬದುಕಿತು ಎಮ್ಮೆ. ಹಲಸಿನ ಹಣ್ಣಿನ ಈ ಸೀಸನ್ನಿನಲ್ಲಿ ಎಲ್ಲಾದರೂ ಈ ಹಲಸಿನ ಹಣ್ಣನ್ನು ನೋಡಿದ ಕೂಡಲೇ ಎಮ್ಮೆಯಿಂದ ಹೊರಬಂದ ಹೊಲಸು ದುರ್ವಾಸನೆ ನೆನಪಾಗಿ ’ವ್ಯಾಕ್”ಎನ್ನುವಂತಾಗುತ್ತದೆ.
- ಡಾ. ಎನ್.ಬಿ.ಶ್ರೀಧರ – (ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ ಪಶುವೈದ್ಯಕೀಯ ಮಹಾವಿದ್ಯಾಲಯ) ಶಿವಮೊಗ್ಗ.