ಇಂಡಿಯಾ ಅಂದರೆ ಹಿಂದೀ…! ಹಿಂದೀ ಅಂದರೆ ಇಂಡಿಯಾ…!

ನನಗೆ ಈ ಪ್ರಶ್ನೆ ತೀವ್ರವಾಗಿ ಕಾಡಿದ್ದು ಇತ್ತೀಚೆಗೆ. ಮೂರು ತಿಂಗಳಿಂದ ನಾನು ದೆಹಲಿಯಲ್ಲಿದ್ದೇನೆ. ವರ್ಷದಲ್ಲಿ ಮೂರು ತಿಂಗಳಾದರೂ ದೆಹಲಿಯಲ್ಲಿದ್ದು ಹೋಗುತ್ತೇನೆ. ಮಗಳು ಅಳಿಯ ಮೊಮ್ಮಕ್ಕಳು ಇಲ್ಲಿಯೇ ವಾಸವಾಗಿದ್ದಾರೆ.

ಇಪ್ಪತ್ತೊಂದನೇ ಶತಮಾನದ ಈ ಕಾಲದಲ್ಲೂ ಬೆಂಗಳೂರು ಅಂದರೆ ಮದರಾಸು, ಕನ್ನಡಿಗರು ಅಂದರೆ ಮದರಾಸಿಗಳು ಆಗಿ ಹೋಗಿದೆ. ಕೆಳಸ್ಥರ ಮತ್ತು ಮಧ್ಯಮ ಸ್ಥರದ ಜನಜೀವನದಲ್ಲಿ ಕನ್ನಡದ ಬಗ್ಗೆ, ಕನ್ನಡ ನಾಡಿನ ಬಗ್ಗೆ ಇಲ್ಲಿನ ಜನಕ್ಕೆ ಏನೂ ಗೊತ್ತಿಲ್ಲ. ಅವರ ಭಾವನೆಯಲ್ಲಿ ದಕ್ಷಿಣದವರೆಂದರೆ ಇಲ್ಲಿ ಮದರಾಸಿಗಳು. ಅನಧಿಕೃತವಾಗಿ ಬೆಂಗಳೂರು ತಮಿಳರದು. ಕನ್ನಡಿಗರು ಬೆಂಗಳೂರಿಗೆ ವಲಸೆ ಬರುತ್ತಿರುವ ಕೂಲಿಗಳು. ಕನ್ನಡ ಅಂದರೆ ಅನಾದಿ ಕಾಲದ ಒಂದು ಪಂಗಡ ಅಷ್ಟೇ. ಅದಕ್ಕೆ ಇತಿಹಾಸವೇ ಇಲ್ಲ. ಇಂದೋ ನಾಳೆಯೋ ಸಾಯುವ ಭಾಷೆ. ತಮಿಳಿಗೆ ಮಾತ್ರ ದಕ್ಷಿಣಾಧಿಪತ್ಯದ ಶಕ್ತಿ ಇದೆ ಎಂದು ಇಲ್ಲಿಯ ಜನ ನಂಬಿದ್ದಾರೆ. ಅದು ನನ್ನ ಕಣ್ಣಿಗೂ ಕಂಡಿದೆ.

ಇದಕ್ಕೆ ಹಲವಾರು ಕಾರಣಗಳನ್ನೂ ಕೊಡಬಹುದು. ಇಲ್ಲಿ ನಾನು ಹೇಳಬೇಕೆಂದುದು ದೇಶದ ವಿಚಾರದಲ್ಲಿ ಹಿಂದಿಯವರ ಮನಸ್ಥಿತಿಯನ್ನು. ಅವರಿಗೆ ರಾಜಕೀಯವಾಗಿ ಉತ್ತರ ಭಾರತವೇ ಸಮಗ್ರ ಇಂಡಿಯಾ. ದಕ್ಷಿಣ ಏನೂ ಅಲ್ಲ ಎಂಬುದಕ್ಕೆ ಒಂದು ತಾಜಾ ಉದಾಹರಣೆ ಕೊಡುತ್ತಿದ್ದೇನೆ.

ದೆಹಲಿಯಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ನನ್ನ ಮೊಮ್ಮಗನಿಗೆ ಇತಿಹಾಸ ಓದುವುದೆಂದರೆ ತುಂಬ ಆಸಕ್ತಿ. ಅದಕ್ಕಾಗಿ ಮೊನ್ನೆ ಪ್ರಗತಿ ಮೈದಾನದಲ್ಲಿ ನಡೆಯುತ್ತಿದ್ದ ಪುಸ್ತಕ ಮೇಳದಿಂದ ಒಂದು ಪುಸ್ತಕ ಖರೀದಿಸಿ ತಂದ. ಅದು ಗ್ಲೋರಿಯಸ್‌ ಹಿಸ್ಟರಿ ಆಫ್‌ ಇಂಡಿಯಾ ಎಂಬ ಹೆಸರಿನದು.

ಅದು ದೆಹಲಿಯ ಅನುರಾಗ್‌ ಮೆಹ್ತಾ ಎನ್ನುವವರು ಮಕ್ಕಳಿಗಾಗಿ ಬರೆದ ಪುಸ್ತಕ. ಅವರದೇ ಪ್ರಕಾಶನ ಸಂಸ್ಥೆ ನಿತಾ ಮೆಹ್ತಾ ಪಬ್ಲಿಕೇಶನ್‌ ಅದನ್ನು ಪ್ರಕಟಿಸಿದೆ. ಲೇಖಕರ ಉದ್ದೇಶವೇನೋ ಮೆಚ್ಚುವಂಥದ್ದೇ. ನಮ್ಮ ಮಕ್ಕಳಿಗೆ ದೇಶದ ಇತಿಹಾಸ ಗೊತ್ತಿರಬೇಕು. ಅದನ್ನು ಮಕ್ಕಳು ಓದಬೇಕು. ಅವರು ಓದುವ ಹಾಗಿರಬೇಕು ಎಂದು ಬಣ್ಣದ ಚಿತ್ರಗಳನ್ನು ಆರ್ಟ ಪೇಪರಿನಲ್ಲಿ ಹಾಕಿ ಆಕರ್ಷಕವಾಗಿ ಮುದ್ರಿಸಿದ್ದಾರೆ. ನೋಡಿದರೆ ದೊಡ್ಡವರೂ ಓದಬೇಕು ಅನ್ನುವ ಹಾಗೆ ಪುಸ್ತಕ ಕುತೂಹಲ ಮೂಡಿಸುತ್ತದೆ. ಅಬಾಲವೃದ್ಧರು ದೇಶದ ಇತಿಹಾಸ ತಿಳಿಯಲು ಇಂಥ ಪುಸ್ತಕಗಳನ್ನು ಓದಬೇಕು. ಮತ್ತು ತಮ್ಮ ಮೊಮ್ಮಕ್ಕಳಿಗೆ ಓದುವ ಪ್ರೇರಣೆ ಮೂಡಿಸಲು ಇಂಥ ಸಾಕಷ್ಟು ಪುಸ್ತಕಗಳು ಬರಬೇಕು. ಹಿಂದಿಯಲ್ಲಂತೂ ಬಂದಿವೆ. ಕನ್ನಡದಲ್ಲಿ ನವ ಕರ್ನಾಟಕದವರು ಮತ್ತು ರಾಷ್ಟ್ರೋತ್ಥಾನದವರು ಇಂಥ ಪ್ರಯತ್ನ ಮಾಡಿದ್ದಾರೆ.

ಪ್ರಸಕ್ತ ನಾನು ಇಲ್ಲಿ ಉಲ್ಲೇಖಿಸಿರುವ ಗ್ಲೋರಿಯಸ್‌ ಹಿಸ್ಟರಿ ಆಫ್‌ ಇಂಡಿಯಾ ಪುಸ್ತಕದಲ್ಲಿ ಐದು ಸಾವಿರ ವರ್ಷಗಳ ಹಿಂದಿನ ಉತ್ತರ ಭಾರತದ ಇತಿಹಾಸವನ್ನು ಚರ್ಚಿಸಲಾಗಿದೆ.

ಹರಪ್ಪಾ-ಮೊಹೆಂಜೋದಾರೋ ಸಂಸ್ಕೃತಿಯಿಂದ ಹಿಡಿದು ನಂತರದ ನಾಗರಿಕತೆ ಬಗ್ಗೆ ಹೇಳಲಾಗಿದೆ. ಮತ್ತು ಅವುಗಳಿಗೆ ಸೂಕ್ತವಾದ ಬಣ್ಣದ ಚಿತ್ರಗಳನ್ನೂ ಬರೆಯಲಾಗಿದೆ. ಮೂರು ಸಾವಿರ ವರ್ಷಗಳ ಹಿಂದಿನ ಕಟ್ಟಡಗಳು, ಕೊಳಗಳು, ಬಾವಿಗಳ ನಿರ್ಮಾಣ ಹೇಗೆ ನಡೆಯುತೆಂದು ಹೇಳುತ್ತ ಹೋಗುತ್ತಾರೆ. ಸಿಂಧೂ ನದಿಯ ಉದ್ದಕ್ಕೂ ಇಂಥ ಪಟ್ಟಣಗಳ ನಿರ್ಮಾಣ ಆಗಿತ್ತು. ಇದಕ್ಕೆ ಸಿಂಧೂ [ಹಿಂದೂ] ನಾಗರಿಕತೆಯೆಂದೂ ಹೇಳಲಾಗುತ್ತದೆ. ಇದು ಮುಂದುವರೆದು ಸರಸ್ವತಿ ನದಿಗುಂಟ ನಾಗರಿಕತೆ ಬೆಳೆದು ಮುಂದೆ ಇದು ಹಿಂದೂ-ಸರಸ್ವತಿ ನಾಗರಿಕತೆಯಾಗಿಯೂ ಬೆಳೆಯುತ್ತದೆ.

ಭಾರತಕ್ಕೆ ಬಂದ ಮೊದಲ ವಿದೇಶಿಯರು ಆರ್ಯರು. ಅವರು ಮುಂಗೋಲಿಯಾ ಕಡೆಯಿಂದ ಬರುತ್ತಾರೆ. ಆರ್ಯರು ಬಂದಾಗ ಭಾರತದಲ್ಲಿ ಮೂಲನಿವಾಸಿಗಳೂ ಇದ್ದರು. ಅವರ ಜಾವನ ಕ್ರಮವು ಬೇರೆಯಾಗಿತ್ತು. ಅಷ್ಟನ್ನು ಹೇಳುವ ಈ ಪುಸ್ತಕ ದಕ್ಷಿಣ ಭಾರತದಲ್ಲಿ ಏನಿತ್ತು ಎಂದು ಹೇಳುವುದಿಲ್ಲ. ಇಲ್ಲಿಯೂ ಬುಡಕಟ್ಟು ಮೂಲ ನಿವಾಸಿಗಳಿದ್ದರು. ಅವರ ಬಗ್ಗೆ ಏನೂ ಹೇಳದೆ ಇಲ್ಲಿಯ ಲೇಖಕರು ಉತ್ತರ ಭಾರತದ ಇತಿಹಾಸವನ್ನು ಮಾತ್ರ ಹೇಳುತ್ತ ಹೋಗುತ್ತಾರೆ. ಬದಲಾಗಿ ಈ ಆರ್ಯರು ಕ್ಷತ್ರಿಯರಾಗಿ, ಪುರೋಹಿತರಾಗಿ, ಧರ್ಮ ಗುರುಗಳಾಗಿ ಜನರನ್ನು ಗುಂಪು ಕಟ್ಟಿ ಒಡೆದು ಹಾಕುತ್ತಾರೆ. ಇವರೆಲ್ಲ ಮಾತಾಡುತ್ತಿದ್ದುದು ಸಂಸ್ಕೃತ ಇಲ್ಲ ಹಿಂದೀ ಭಾಷೆ. ಮುಂದೆ ಇವರೇ ಭಾಗಗಳಾಗಿ ದಕ್ಷಿಣದ ಕಡೆಗೆ ಹೋದರು ಎಂದು ಹೇಳಿ ಮುಗಿಸುತ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ಅದೇ ಸಮಯದಲ್ಲಿದ್ದ ಮೂಲ ನಿವಾಸಿಗಳ ಬಗೆಗಾಲೀ, ಅವರ ಭಾಷೆಯ ಬಗೆಗಾಗಲೀ, ಇಲ್ಲಿಯ ಸಮಾಜ ವ್ಯವಸ್ಥೆಯ ಬಗೆಗಾಲೀ ಏನೂ ಹೇಳುವುದಿಲ್ಲ. ದಶರಥ ಅಯೋಧ್ಯಲ್ಲಿ ಆಳುತ್ತಿದ್ದಾಗ ದಕ್ಷಿಣದಲ್ಲಿ ಬುಡಕಟ್ಟು ಅರಸರು ಆಳುತ್ತಿದ್ದರು. ಅವರಿಗೆ ಕಪಿಗಳು, ಜಾಂಬುವಂತರು[ ಕರಡಿಗಳು] ಇಲ್ಲಾ ರಾಕ್ಷಸರು ಎಂದು ಹೇಳಿ ಅವರ ಕತೆಯನ್ನು ಅಲ್ಲಿಗೇ ಮುಗಿಸಿಬಿಡುತ್ತಾರೆ.

ರಾಮಾಯಣ, ಮಹಾಭಾರತ ಕತೆ, ಕಾಳಿದಾಸನ ಕತೆ ಎಲ್ಲ ನಡೆಯುವುದು ಉತ್ತರದಲ್ಲಿ. ಅವುಗಳನ್ನೇ ದಕ್ಷಿಣ ಭಾರತದ ಕಡೆಗೆ ತಂದು ಜನಮಾನಸದಲ್ಲಿ ನಿಲ್ಲಿಸುತ್ತಾರೆ. ಆ ಕಾರಣಕ್ಕೇ ಉತ್ತರದವರು ದೇವರಾಗುತ್ತಾರೆ. ದಕ್ಷಿಣದವರು ರಾಕ್ಷಸರಾಗುತ್ತಾರೆ. ಇತಿಹಾಸದಲ್ಲಿ ರಾಕ್ಷಸರಿಗೆ ಹೆಚ್ಚು ಪುಟಗಳಿಲ್ಲ.ಇದನ್ನು ಗ್ಲೋರಿಯಸ್‌ ಹಿಸ್ಟರಿ ಆಫ್‌ ಇಂಡಿಯಾ ಅನ್ನುತ್ತಾರೆ.

ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು ಜನರನ್ನು ಗುಂಪುಗಳನ್ನಾಗಿ ಮಾಡಿ ಹಿಂದೂ ಸಮಾಜ ಕಟ್ಟಿದವರೇ ಈ ಆರ್ಯರು. ಈ ಕಲ್ಪನೆ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ. ಇಡೀ ಇಂಡಿಯಾದಲ್ಲೇ ಆರ್ಯರು ಬರುವ ಮೊದಲು ಇರಲಿಲ್ಲ. ಆದರೆ ಈ ಬಗ್ಗೆ ಸರಿಯಾಗಿ ಏನನ್ನೂ ಹೇಳದೆ ಉತ್ತರ ಭಾರತವನ್ನು ಮಾತ್ರ ಕೇಂದ್ರವಾಗಿಟ್ಟುಕೊಂಡು ಲೇಖಕರು ಈ ಪುಸ್ತಕ ರಚಿಸಿದ್ದಾರೆ.

ಆರ್ಯ ದೊರೆ ಕಾನಿಷ್ಕ ಪೇಶಾವರದಲ್ಲಿ ಆಳುತ್ತಿದ್ದ. ಇತ್ತ ಚಂದ್ರಗುಪ್ತ, ಅಶ್ವಘೋಷ, ಅಶೋಕ ಇವರೆಲ್ಲ ಮೂಲತಃ ಆರ್ಯರೇ. ಇವರ ಬಗ್ಗೆ ಸಾಕಷ್ಟು ರೋಚಕ ವಿವರಣೆ ಈ ಪುಸ್ತಕದಲ್ಲಿದೆ. ಆದರೆ ಅದೇ ಹೊತ್ತಿಗೆ ದಕ್ಷಿಣದಲ್ಲಿದ್ದ ರಾಷ್ಟ್ರಕೂಟರು, ಚಾಲುಕ್ಯರ ಬಗ್ಗೆ ಸಂಕ್ಷಿಪ್ತವಾಗಿ ಹೇಳುತ್ತಾರೆ. ದೆಹಲಿಯ ಮೊಘಲ್‌ ಸಾಮ್ರಾಜ್ಯದ ಬಗ್ಗೆ ವಿವರವಾಗಿ ಹೇಳುವ ಪುಸ್ತಕ ದಕ್ಷಿಣ ಭಾರತದ ಅರಸೊತ್ತಿಗೆಗಳ ಬಗ್ಗೆ ಏನೂ ಹೇಳುವುದಿಲ್ಲ. ಹೆಚ್ಚೆಂದರೆ ತಮಿಳಿನ ಚೋಳರು, ಪಲ್ಲವರ ಬಗ್ಗೆ ಒಂದೆರಡು ಸಾಲು ಬರುತ್ತದೆ. ಆದರೆ ಕನ್ನಡದ ಯಾವೊಬ್ಬ ಅರಸನ ಹೆಸರೂ ಇಲ್ಲಿ ಉಲ್ಲೇಖವಾಗಿಲ್ಲ.

ಬ್ರಿಟಿಷರ ವಿರುದ್ಧ ನಡೆದ ಹೋರಾಟದಲ್ಲಿ ಉತ್ತರದವರನ್ನು ಬಿಟ್ಟರೆ ದಕ್ಷಿಣದಿಂದ ಏನೂ ಆಗಿಲ್ಲ ಎಂಬಂತೆ ಇಲ್ಲಿ ನಮೂದಿಸಲಾಗಿದೆ. ಉತ್ತರದ ಅರಸ ಹರ್ಷವರ್ಧನನ್ನು ಹಾಡಿ ಹೊಗಳಿದ ಲೇಖಕರು ಅವನನ್ನು ಸೋಲಿಸಿದ ದಕ್ಷಿಣದ ಚಕ್ರವರ್ತಿ ಇಮ್ಮಡಿ ಪುಲಿಕೇಶಿಯ ಬಗ್ಗೆ ಒಂದು ಸಾಲು ಬರೆದು ಮುಗಿಸುತ್ತಾರೆ. ಉತ್ತರದ ಅರಸರ ಬಗ್ಗೆ ಕೊಡುವ ವಿವರಣೆಗಳು ದಕ್ಷಿಣ ರಾಜರಿಗೆ ದಕ್ಕಿಲ್ಲ. ಇತಿಹಾಸ ಮರೆಮಾಚಿದರೆ ಮುಂದೆ ನಮ್ಮ ಮಕ್ಕಳು ಇಡೀ ಹಿಂದೂಸ್ತಾನಕ್ಕೆ ಯಾವ ಗೌರವ ಕೊಟ್ಟಾರು. ಇಂಡಿಯಾದ ಇತಿಹಾಸವೆಂದರೆ ದಿಲ್ಲೀ ಆಳಿದ ಮುಸ್ಲಿಮರ ಅಥವಾ ಹಿಂದೀ ರಾಜರ ಇತಿಹಾಸವಲ್ಲ ಎಂದು ಮಕ್ಕಳಿಗೆ ಪ್ರಾಮಾಣಿಕವಾಗಿ ತಿಳಿಸಬೇಡವೆ.

ದಕ್ಷಿಣ ಭಾರತಕ್ಕೂ ಭವ್ಯ ಇತಿಹಾಸವಿದೆ ಎಂದು ಉತ್ತರದ ಮಕ್ಕಳು ಓದಬೇಕು. ಉತ್ತರದಲ್ಲಿ ನಡೆದ ಸಮಗ್ರ ಬ್ರಿಟಿಷ ವಿರೋಧಿ ಹೋರಾಟವನ್ನು ನಾವೆಲ್ಲ ಓದುತ್ತೇವೆ. ಆದರೆ ಕರ್ನಾಟಕದಲ್ಲಿ ಇಂಗ್ರೇಜಿಗಳ ವಿರುದ್ಧ ಹೋರಾಡಿದ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ನರಗುಂದ ಬಾಬಾ ಸಾಹೇಬ, ಮುಂಡರಗಿ ಭೀಮರಾಯ ಹೀಗೆ ಇನ್ನೂ ಅನೇಕ ಸಂಸ್ಥಾನಿಕರ ಹೋರಾಟಕ್ಕೆ ಮನ್ನಣೆಯೇ ಇಲ್ಲ. ತಮಿಳಿನ ವೀರಪಾಂಡ್ಯ ಕಟ್ಟುಬೊಮ್ಮನ್‌ ಹೆಸರು ಇಲ್ಲ. ಅದ್ಯಾವ ಕಾರಣಕ್ಕೋ. ಟೀಪು ಸುಲ್ತಾನ ಮಾತ್ರ ಉತ್ತರದವರಿಗೆ ಒಬ್ಬನೇ ಒಬ್ಬ ವೀರಯೋಧನಾಗಿ ಕಾಣುತ್ತಾನೆ. ಇತಿಹಾಸ ಬರೆಯುವವರು ಪ್ರಾಮಾಣಿಕರೂ ಆಗಿರಬೇಕು. ನಾಡಿಗೆ ನ್ಯಾಯ ನೀಡುವವರೂ ಆಗಿರಬೇಕು.

ಉತ್ತರದಲ್ಲಿ ಹಿಂದೀ ಭಾಷೆಯಿದೆ. ಅದೇ ನಮ್ಮ ರಾಷ್ಟ್ರಭಾಷೆಯೂ ಹೌದು. ಹಾಗೆಂದು ಹಿಂದಿಯೇ ಪರಮ ಶ್ರೇಷ್ಠ. ಉತ್ತರ ಭಾರತವೇ ಪರಮೋಚ್ಛ ಇಂಡಿಯಾ ಅನ್ನುವುದು ತಪ್ಪು. ನಾವು ದಕ್ಷಿಣದವರು ಉತ್ತರ ಭಾರತದ ಬಗ್ಗೆ ತಿಳಿಯಲು ಕುತೂಹಲಿಗಳಾಗಿರುತ್ತೇವೆ. ಹಾಗೆಯೇ ಉತ್ತರದವರು ಕೂಡ ದಕ್ಷಿಣದ ಬಗ್ಗೆ ತಿಳಿಯವ ಪ್ರಯತ್ನ ಮಾಡಬೇಕು. ಅಂಥ ಪ್ರಯತ್ನವನ್ನು ಹಿಂದೀ ಲೇಖಕರೂ ಮಾಡಬೇಕು.

ಈ ಪುಸ್ತಕದ ಉದ್ದೇಶ ಮೆಚ್ಚುವಂಥದ್ದು. ಆದರೆ ಇಂಥ ಪುಸ್ತಕಗಳ ಮೂಲಕ ದಕ್ಷಿಣ ಭಾರತವನ್ನು ಕಡೆಗಣಿಸುವುದು ಅಕ್ಷಮ್ಯ. ಭವಿಷ್ಯದಲ್ಲಿ ದೇಶದ ಮಕ್ಕಳು ದಕ್ಷಿಣ ಭಾರತವನ್ನು ಕಡೆಗಣಿಸದಂತಾಗಲಿ. ಹಾಗೇ ಮಾಡುವುದು ಹಿಂದೀ ಲೇಖಕರ ಜವಾಬ್ದಾರಿಯೂ ಆಗಿದೆ. ದೇಶದ ಇತಿಹಾಸವೆಂದರೆ ಸಮಗ್ರವಾಗಿರಬೇಕು. ಇದನ್ನು ಹಿಂದೀ ಲೇಖಕರು ಅರಿಯಲಿ.

ಲೇಖನ : ಹೂಲಿಶೇಖರ

(ಖ್ಯಾತ ಚಿತ್ರಸಂಭಾಷಣೆಕಾರರು-ನಾಟಕಕಾರರು )

aakritikannada@gmail.com

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW