ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ ಕವಿ ಕೊಟ್ರೇಶ್ ಅರಸೀಕೆರೆ ಈ ಕೆಳಗಿನ ಕವನವನ್ನು ವಾಚಿಸಿದರು, ಆ ಸುಂದರ ಕವನ ಓದುಗರ ಮುಂದಿದೆ, ತಪ್ಪದೆ ಓದಿ…
ಈ ನೆಲದ ಮಣ್ಣು ಮೆಟ್ಟಿದಾಕ್ಷಣ
ಶರೀಫರ ಪದ ಕೇಳುತ್ತದೆ
ಪದ ಪದಗಳು ಕಿವಿಗೆ ಬೀಳುತ್ತಲೇ ಗೋವಿಂದ ಭಟ್ಟರ ನೆನಪಾಗುತ್ತದೆ
ಶಿಷ್ಯನ ಸಾನಿಧ್ಯದಲಿ ಗುರು ನೆನಪಾಗುತ್ತಾನೆ
ಗುರುವಿನ ಸ್ಪರ್ಶದಲಿ ಶಿಷ್ಯನೂ
ಈ ಸ್ಪರ್ಶದ ಮಾಂತ್ರಿಕತೆ ದೊರಕದ
ದಿನ
ಈ ನೆಲದಲ್ಲಿ ಈ ಗುರು ಶಿಷ್ಯರು ಕಾಣುವುದಿಲ್ಲ
ಪ್ರತಿಮೆ, ರೂಪಕ, ಲಯ,ನಾದವಿಲ್ಲದ
ಪದ್ಯದಂತೆ
ಗಂಧ ಮತ್ತು ಅತ್ತರು
ಜನಿವಾರ ಮತ್ತು ಟೋಪಿ
ತತ್ವಪದ ಮತ್ತು ಆಜಾನ್
ಯಾವುವೂ ಬೇರೆ ಬೇರೆಯಲ್ಲ
ರಹೀಮನನ್ನು ಅರಿಯದವರಿಗೆ ರಾಮ
ಅರ್ಥವಾಗುವುದಿಲ್ಲ
ಕನಕನು ಅರ್ಥವಾಗದವರಿಗೆ ಕೃಷ್ಣನು
ಅರಿವಾಗುವುದಿಲ್ಲ
ಶರೀಫರನ್ನು ಕಾಣದ ಕಂಗಳಿಗೆ ಇಲ್ಲಿ
ಗೋವಿಂದ ಭಟ್ಟರು ಕಾಣುವುದಿಲ್ಲ
ಶರೀಫರಾಗುವುದು, ಗೋವಿಂದ ಭಟ್ಟರಾಗುವುದು ಸುಮ್ಮನಲ್ಲ
ಇವೆಲ್ಲವೂ ವಂಶವಾಹಿನಿಗಳಲ್ಲಿ
ಹರಿಯುವುದೂ ಇಲ್ಲ
ನೆಲದ ಬಾಳ್ವೆಯೇ ಬೆಳಕು ತೋರಿಸುತ್ತದೆ
ಇವೆಲ್ಲವೂ ಗೊತ್ತಾಗದವರಿಗೆ ಈ ನೆಲವು ಗೊತ್ತಾಗುವುದಿಲ್ಲ
ಅವರೆಲ್ಲರೂ ಈ ನೆಲಕ್ಕೆ ಸಲ್ಲುವುದಿಲ್ಲ
ಮತ್ತು
ಅವರ್ಯಾರೂ ಇಲ್ಲಿಯವರಲ್ಲ
ಈ ನೆಲದ ಸ್ಪರ್ಶ ಅವರಿಗೆ ದಕ್ಕುವುದೂ ಇಲ್ಲ
- ಕೊಟ್ರೇಶ್ ಅರಸೀಕೆರೆ