ನಾ ಓದಿನ ‘ಎಲ್ಲರೊಳಗೊಂದಾಗಿ’ ಪುಸ್ತಕ ಪರಿಚಯ

ಕವಯತ್ರಿ ಜ್ಯೋತಿ ಡಿ. ಬೊಮ್ಮಾರವರು ಬರೆದಿರುವ “ಎಲ್ಲರೊಳಗೊಂದಾಗಿ” ಕವನ ಸಂಕಲನದ ಕುರಿತು ಅಭಿಜ್ಞಾ ಪಿ.ಎಮ್.ಗೌಡ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಮುಂದೆ ಓದಿ…

ಪುಸ್ತಕ : ಎಲ್ಲರೊಳಗೊಂದಾಗಿ
ಲೇಖಕರು : ಜ್ಯೋತಿ ಡಿ ಬೊಮ್ಮಾ
ಬೆಲೆ : ರೂ. ೧೦೦/-
ಕೃತಿಗಾಗಿ ಸಂಪರ್ಕಿಸಿ :  96116 76175

ಕವಿತೆ ಬರೆವುದೆಂದರೆ…….

ಹಸು ಕೆಚ್ಚಲಿಗೆ ಬಾಯಿಟ್ಟ
ಕರು ಹಾಲು ಹೀರುವುದಕ್ಕಾಗಿ
ಸಂಜೆ ಕೆಂಬಾರನ ಕಾಯುವಂತಿದೆಯಲ್ಲ
ಹಾಗಿರಬೇಕು ನಮ್ಮೊಳಗಿನ ಕವಿತೆ ……!

“ಎಲ್ಲರೊಳಗೊಂದಾಗಿ”ಕವನಸಂಕಲದ ಜೊತೆಯಲ್ಲಿ ನಾನು ಕೂಡ ಸೇರಿಕೊಂಡು ಅದರೊಳಗೆಲ್ಲ ಈಜಿ ಸೊಗಸಾದ ಕವನಗಳೆಂಬ ಮುತ್ತುಗಳನ್ನು ಹೆಕ್ಕಿ ರುಚಿಸಿದಾಗಲೆ ತಿಳಿದದ್ದು, ಕವಿತೆ ಬರೆವುದೆಂದರೆ ಹೇಗೆ ಅಂತ. ಯಾಕೆ ಹೀಗೆ ಹೇಳುತಿರುವೆ ಎಂದರೆ ಕವಯತ್ರಿ ಶ್ರೀಮತಿ ಜ್ಯೋತಿ ಡಿ. ಬೊಮ್ಮಾ ರವರು ಬರೆದೆರುವ “ಎಲ್ಲರೊಳಗೊಂದಾಗಿ” ಕವನಸಂಕಲನದೊಳಗಿರುವ ಪ್ರತಿಯೊಂದು ಕವನಗಳನ್ನು ಓದುತ್ತಿದ್ದರೆ ನನಗೆ ಅನ್ನಿಸಿದ್ದು ಮಾತ್ರ ನಾ ಮೇಲೆ ಹೇಳಿರುವಂತೆ.

ಪ್ರತಿಯೊಂದು ಕವನಗಳು ಅರ್ಥಪೂರ್ಣ ಹಾಗು ಕೊರೋನಾದ ಪರಿಣಾಮದಿಂದಾದಂತಹ ವಸ್ತುಸ್ಥಿತಿಯನ್ನು ಮನಮುಟ್ಟುವಂತೆ ಬಿತ್ತರಿಸಿರುವರು.

ಜ್ಯೋತಿ ಬೊಮ್ಮಾ ರವರು ಬರೆದಿರುವ ಈ ಕವನಸಂಕಲನದಲ್ಲಿರುವ ಸುಮಾರು ಕವಿತೆಗಳು ಸಮಾಜವನ್ನು ತಲ್ಲಣಗೊಳಿಸಿದ ಮಹಾಮಾರಿ ಕೊರೋನಾದ ಘನಘೋರ ಪರಿಸ್ಥಿಗತಿಗಳಿಂದಾಗಿ ಮನುಕುಲಕ್ಕೆ ಮಾರಕವಾಗಿ ಪರಿಣಮಿಸಿದ ಕೊರೋನ ಹಾಗು ಮನುಷ್ಯನ ದಾರುಣ ಸ್ಥಿತಿಯ ಅನಾವರಣವನ್ನು ಕನ್ನಡಿಯೊಳಗಿನ ಬಿಂಬದಂತೆ ಬಿಂಬಿಸಿದ್ದಾರೆ. ಹಾಗೆಯೆ ರುಗ್ಣಗಳಿಂದ ಬಾಧೆಗೊಳಗಾಗಿರುವ ಸಮಾಜದ ವ್ಯವಸ್ಥೆ ಹಾಗು ಅಂದು ದೇಶದ ಚಿಂತಾಜನಕ ಸ್ಥಿತಿ ಹೇಗಿತ್ತೆಂಬುದನ್ನು ಇಲ್ಲಿನ ಕವಿತೆಗಳ ಸಾಲಿನ ಮೂಲಕವೇ ಓದುಗನೊಂದಿಗೆ ಮುಖಾಮುಖಿಯಾಗಿಸಿರುವುದಂತು ನಿಜಕ್ಕೂ  ಔಚಿತ್ಯಪೂರ್ಣವಾಗಿಸಿದೆ.

ಒಂದಷ್ಟು ಕವಿತೆಗಳಂತು ಸಾಮಾಜಿಕ ಪಿಡುಗು, ಬಾಲ್ಯವಿವಾಹ ,ಒಂಟಿದೇವರು ,ಪೂಜಿಸದಿರಿ ಹೀಗೆ ನಕಾರಾತ್ಮಕ ವಸ್ತುವಿಷಯಗಳ ಮೇಲು ಬೆಳಕು ಚಲ್ಲಿ ಅವುಗಳಿಂದ ಸಮಾಜದಲ್ಲಾಗುತ್ತಿರುವ ಪರಿವರ್ತನೆ ಜೊತೆಗೆ ಪರಿಣಾಮ, ಅದರೊಟ್ಟಿಗೆ ಪರಿಹಾರ ಸೂಚಿಸುವ ಸಾಲುಗಳಂತು ಅತ್ಯಂತ ಸೂಚ್ಯವಾಗಿ ಪ್ರಸ್ತುತಪಡಿಸಿದ್ದಾರೆ.ಹಾಗೆಯೆ ಕವಯಿತ್ರಿಯ ಕವಿತೆ ಕಟ್ಟುವ ಹಾಗು ಪ್ರತಿವಿಷಯಗಳನ್ನು ಸಂದರ್ಭಾನುಸಾರ ಓದುಗನಿಗೆ ಕವನಗಳ ಮೂಲಕ ಉಣಬಡಿಸುವ ಜಾಣ್ಮೆಯನ್ನು ಅವರ ಕವಿತೆಗಳ ಸಾಲುಗಳಿಂದ ತಿಳಿಯಬಹುದಾಗಿದೆ. ಈ ಮುಖೇನ ನಾವೆಲ್ಲರು ಕಣ್ಣಿದ್ದು ಕುರುಡರಾಗಿದ್ದು, ಕಿವಿಯಿದ್ದು ಕಿವುಡರಾಗಿದ್ದು ,ಬಾಯಿದ್ದು ಮೂಕರಾಗಿರುವ ದೃಶ್ಯವನ್ನು ತಮ್ಮ ಬರಹಗಳಲ್ಲಿ ಎತ್ತಿ ತೋರಿಸಿರುವರು ಅಂದರೆ ನಾವೆಲ್ಲ ಕಂಡೂ ಕಾಣದಂತಿರುವ ಲೋಕದ ಹಲವಾರು ಅಸಹ್ಯಗಳನ್ನು ಅದೇ ರೀತಿ ಅನಿವಾರ್ಯತೆ  ನಮಗೆ ಎಷ್ಟು..? ಹೇಗೆ ..? ಯಾಕೆ..?ಇದೆ ಎಂಬುದನ್ನು ಸ್ಪಷ್ಟವಾಗಿ, ಸ್ಫುಟವಾಗಿ ತೋರಿಸಿರುವುದನ್ನು ಅವರ ಸಾಲುಗಳಲ್ಲಿ ಕಾಣಬಹುದಾಗಿದೆ.ಹಾಗಾಗಿ ಈ ಕವನಸಂಕಲನವು ಒಂಥರ ವಿಶಿಷ್ಟವೂ ಹೌದೂ ವಿಭಿನ್ನವೂ ಹೌದೂ, ನವ್ಯತೆಯ ರೂಪದೊಂದಿಗೆ ಓದುಗನ ಕೌತುಕವನ್ನು ಹೆಚ್ಚಿಸಲು ಕಾರಣ ಇಲ್ಲಿನ ಕವಿತೆಗಳು. ಕವಯತ್ರಿಯ ಕವನಗಳು ಪ್ರತಿ ಓದುಗನನ್ನು ತನ್ನತ್ತ ಅಯಸ್ಕಾಂತದಂತೆ ಆವರಿಸಿಕೊಂಡು, ಬಿಡದೇ ಕಾಡುವ ಗುಣವನ್ನು ಹೊಂದಿವೆ ಎಂದರೆ ತಪ್ಪಾಗಲಾರದು.

ಇಲ್ಲಿನ ಕವಿತೆಗಳು ಕವಯತ್ರಿಯು ಕಂಡುಂಡ ಅನುಭವಗಳನ್ನು ತುಂಬಾ ಅದ್ಭುತವಾಗಿ ಹಾಗು ನೇರವಾಗಿ ಓದುಗನ ಮುಂದೆ ತಂದಿರುವುದಂತು ಖುಷಿಯಾಗುತಿದೆ.ಅವರು ಪ್ರೀತಿ ಪ್ರಣಯಕ್ಕೆ ಸಂಬಂಧಿಸಿದಂತೆ ಹಾಗೆ ಅರಿವು ಬಂಧಗಳಿಂದ ಮೇಳೈಸುವ ಸಾಲುಗಳು, ಬದುಕಿನ ಬವಣೆ ,ಜೀವ ಭಾವಗಳ ಸಂಚಲನ ,ಕಾಲ, ಕಾಲಚಕ್ರ ಹೀಗೆ ವಿಭಿನ್ನ ಮತ್ತು ವಿಶಿಷ್ಟವಾದ ರೀತಿಯಲ್ಲಿ ಓದುಗನೆದೆಯನ್ನು ಮುಟ್ಟುತಿವೆ ಎಂದರೆ ಉತ್ಪ್ರೇಕ್ಷೆಯ ಮಾತಲ್ಲ.ಇಲ್ಲಿರುವ ಹಲವಾರು ಕವನಗಳನ್ನೂ ಓದುತಿದ್ದರೆ ಮನಕ್ಕೆ ಅದೆಷ್ಟು ಆನಂದ ,ಸಂತಸ ಹೊಸ ಹೊಸ ವಿಷಯಗಳು ಪ್ರಸ್ತುತ ವಿಚಾರಧಾರೆಗಳಂತು ಆಪ್ಯಾಯಮಾನವಾಗಿದೆಯೆಂದರೆ ಅದು ನಿಜಕ್ಕೂ ಎಲ್ಲರೊಳಗೊಂದಾಗಿಯೆ ಸಾಗುತಿದೆ ಎಂಬ ಮಾತನ್ನು ಪುಷ್ಠೀಕರಿಸುತಿದೆ ಎಂದೆ ಹೇಳಬಹುದು.ಅದು ತಂಬೆಲರು ಸುಳಿದಂತೆ, ತಂಗದಿರನ ಹಾಲ್ಬೆಳಕು ಚೆಲ್ಲಿದಂತೆ, ಬೆಂಗದಿರನ ಮಯೂಖ ಸ್ಪರ್ಶಿಸುವಂತೆಯೆ ಕವಿತೆಯ ಸಾಲುಗಳು ಮೂಡಿಬಂದಿವೆ.ಕವಯತ್ರಿ ತಮ್ಮೊಳಗೆ ಉದ್ಭವಿಸುವ ಪ್ರಶ್ನೆಗಳು, ತಮಗಾದ ಅನುಭವ ಹಾಗೆ ತಮ್ಮ ಗಮನಕ್ಕೆ ಹೊಳೆದಂತಹ ಸಂಗತಿಗಳನ್ನೆಲ್ಲವನ್ನೂ ಕಾಮನಬಿಲ್ಲಿನಂತೆಯೆ ಚಿತ್ರಿಸಿದ್ದಾರೆ ಅದು ಹೇಗೆಂದರೆ ಓದುಗನನ್ನು ಮತ್ತೆ ಮತ್ತೆ ಸೆಳೆವಂತೆ …! ಇಲ್ಲಿ ಪ್ರತಿಯೊಂದು ವಿಚಾರವನ್ನು ಪರಾಮರ್ಶಿಸಿ ಅದರ ಸಾಧಕ ಬಾದಕಗಳನ್ನು ಗುರುತಿಸಿ ಮನಸೂರೆಗೊಳ್ಳುವಂತೆ ವಿವರಿಸುತ್ತ,ಅವುಗಳ ನೈಜಪರಿಸ್ಥಿತಿಯೊಂದಿಗೆ ಸಾಧ್ಯತೆಯನ್ನು ಕಂಡುಕೊಳ್ಳುವ ಪ್ರಯತ್ನವನ್ನು ಕವಯತ್ರಿ ಜ್ಯೋತಿ ಬೊಮ್ಮರವರು ತಮ್ಮ ಕವಿತೆಗಳಲ್ಲಿ ತಿಳಿಸಿದ್ದಾರೆ.

ಕವಯತ್ರಿಯ ಕೆಲವು ಕವನಗಳ ಸಾಲುಗಳು…

ಬದುಕು :

ಪಾಪಿ ಚಿರಾಯುವಂತೆ.ಮತ್ತೆ ಪುಣ್ಯ ಪ್ರಾಪ್ತಿಗಾಗಿ
ದಾನ ಧರ್ಮ ಹೋಮ ಪೂಜೆಗಳೇಕೆ.!
ಕೆಟ್ಟದ್ದೆ ವಿಜೃಂಭಿತ್ತಿರೆ
ಒಳ್ಳೆಯವರಾಗುವ ವ್ಯರ್ಥ ಪ್ರಯತ್ನವೇಕೆ..!
ಸತ್ಯದ ಮೇಲೆ ಸುಳ್ಳಿನ ಸವಾರಿ ಮಾಡುತ್ತಿರುವಾಗ
ಸತ್ಯವಂತರೆನಿಸಿಕೊಳ್ಳುವ ಬಯಕೆ ಏಕೆ.!

ಇಲ್ಲಿ ನೋಡಿ ಬಾಳೆಂಬ ಯಾನ ಅತೀ ದೀರ್ಘವೇನಲ್ಲ ಮೂರು ದಿನದಷ್ಟೆ.! ಅಷ್ಟರೊಳಗೆ ಮನುಷ್ಯನ ಸ್ವಾರ್ಥ ಅಬ್ಬಬ್ಬಾ.! ಹೇಳತೀರದು ಬೇಕು ,ಮತ್ತಷ್ಟು, ಮೊಗದಷ್ಟು, ಇನ್ನಷ್ಟು ಹೀಗೆ ಏರುತ್ತಿದ್ದರೆ ಬೇಕುಗಳಿಗಾಗಿ ಮಾಡಬಾರದ್ದು ಮಾಡಿ ಅದರ ಪಾಪ ತೊಳೆದುಕೊಳ್ಳಲು ಸೃಷ್ಟಿಕರ್ತನಿಗೆ ಲಂಚ ಕೊಡಲೊರಟರೆ  ಅಂದ್ರೆ ಈ ರೂಪದಲ್ಲಿ ಪುಣ್ಯಕ್ಷೇತ್ರಗಳ ದರ್ಶನ ,ಪೂಜೆ , ಪುರಸ್ಕಾರ, ಹೋಮ, ಹವನ ಮಾಡಿಸುವರು. ಏನ್ಮಾಡಿದ್ರೆ ಏನ್ಬಂತು ಸಿರಿ ಅಲ್ವಾ..! ಸ್ವಾರ್ಥ, ಮೋಸ, ವಂಚನೆ ಅನ್ನೋದು ಮೈಗೆ ಅಂಟಿಕೊಂಡಿರುವಾಗ ಪುಣ್ಯ ಎಲ್ಲಿಂದ ಬರಬೇಕು..? ಸತ್ಯವೆ ಇಲ್ಲ.ಎಲ್ಲವು ಸುಳ್ಳಿನ ಮಯ. ಸುಳ್ಳು ಸತ್ಯದ ಹೊದಿಕೆಯನ್ನು ಹೊದ್ದು ಮೆರೆಯುತ್ತಿದರೆ, ಸತ್ಯ ಯಾರ ಕಣ್ಣಿಗೆ ಬೀಳಲು ಸಾಧ್ಯ ಅಲ್ವಾ. ಈ ಸಾಲುಗಳನ್ನು ನಿಜ ತುಂಬಾ ಚನ್ನಾಗಿ ಬರೆದಿರುವರು ಬದುಕು ಹೇಗೆಲ್ಲ ಇರುತ್ತೆ?. ಹೇಗೆ ಪಾಠ ಕಲಿಸುತ್ತೆ?. ಅನ್ನೋದನ್ನು ನೇರವಾಗಿ ಪ್ರತಿಬಿಂಬಿಸಿದ್ದಾರೆ. ಬದುಕನ್ನು ಸಹ್ಯವಾಗಿಸುವ ಸತ್ಯಕ್ಕೆ ಕಾಲವಿಲ್ಲ. ಜೊತೆಗೆ ಅಹಮ್ಮಿಕೆ ಎಂಬ ವಿಷ ಸರ್ಪದೊಂದಿಗೆ ಮುನ್ನಡೆಯಲಾಗದು ಎಂಬುದನ್ನ ಸೂಕ್ಷ್ಮವಾಗಿ ತಿಳಿಸಿರುವರು.

ಅರಿವು : 

ನಿನ್ನಂತರಂಗದ ಅರಿವು ನಿನಗಿರಲಿ
ನಿಸ್ವಾರ್ಥದ ಹಾದಿ ಹಿಡಿ
ಕಾರಣವಿಲ್ಲದೆ ಇತ್ತ ಈ ಬದುಕಿಗೊಂದು
ಅರ್ಥಕೊಟ್ಟು ನಡಿ……

ಇಲ್ಲಿ, ನಿಸ್ವಾರ್ಥವನ್ನು ಅರಿವಿಗೆ ಸಮೀಕರಿಸಿ ನೋಡಿದಾಗ, ನಮ್ಮೊಳಗಿನ ಅರಿವನ್ನು ಜಾಗೃತಗೊಳಿಸಿಕೊಳ್ಳದಿದ್ದರೆ ನಮ್ಮ ಬದುಕಿಗೆ ಸಾರ್ಥಕತೆಯಿಲ್ಲದೆ ನಿಸ್ತೇಜವಾಗಿ ನೋಡಬೇಕಾದ ಅಸಹಾಯಕತೆ ಬಂದೊದಗುತ್ತದೆ- ಎಂದು ಕವಯತ್ರಿಯವರು ವಿಷಾದ ವ್ಯಕ್ತಪಡಿಸಿರುವುದನ್ನು ಕಾಣಬಹುದಾಗಿ ಅಂತೆಯೇ, ಈ ಕವನವು ಪೂರ್ಣ ನಮ್ಮೊಳಗಿನ ಅರಿವಿನ ಬಗ್ಗೆ ಸವಿಸ್ತಾರವಾಗಿ ಬಿಂಬಿತವಾಗಿದೆ.  ಅರಿವಿಲ್ಲದೆ ಬದುಕಿದರೆ ಬದುಕು ಸಾರ್ಥಕವಲ್ಲದೆ ದುರಂತವೇ ಸರಿ ಎಂಬುದನ್ನು ಕವನದ ಮೂಲಕ ಅರ್ಥಪೂರ್ಣವಾಗಿ ಹೇಳಿರುವರು…

ಪಿಡುಗು :

ದೇಶ ಭಾಷೆ ಜನ ಗಡಿಗಳನ್ನೊಂದು
ಬಿಡದೇ ತನ್ನ ಆಪೋಷನಕ್ಕೆ ತೆಗೆದುಕೊಳ್ಳುತ್ತಿರುವರು
ಆ ಒಂದು ವೈರಾಣು
ಜಗತ್ತನ್ನೆ ಗೆಲ್ಲಬಲ್ಲೆನೆಂಬ ಮನುಷ್ಯನ
ಬುದ್ಧಿಗೆ ಸೆಡ್ಡು ಹೊಡೆದು ವಿಜೃಭಿಸುತ್ತಿದೆ…

ಯಾವ ದೇಶ, ಭಾಷೆ, ಧರ್ಮ, ಜಾತಿ, ಗಡಿಯೆನ್ನದೆ ಯಾವುದನ್ನು, ಯಾರನ್ನು ಬಿಡದೆ ಕಾಡಿದ ದೊಡ್ಡ ಪಿಡುಗೆಂದರೆ ವೈರಾಣುವಾದ ಕೊರೊನಾ. ಇದು ಜೀವ ಜಗತ್ತಿಗೆ ಸವಾಲೊಡ್ಡುವುದರ ಜೊತೆಗೆ ಮನುಷ್ಯನಿಗೆ ಬದುಕುವ ಪಾಠವನ್ನು ಸಹ ಹೇಳಿಕೊಟ್ಟಿತ್ತು. ಮನುಷ್ಯ ಸಾಗುತ್ತಿರುವ ಓಘದಿಂದ ಬದುಕಿಗೆ ಕಡಿವಾಣ ಹಾಕಿಕೊಳ್ಳದಿದ್ದರೆ ಇಂತಹ ಆಘಾತಗಳು, ಆಪತ್ತುಗಳು ಇದೇ ಕೊನೆಯೇನಲ್ಲ ಎಂಬ ಸತ್ಯವನ್ನು ಬಹಿರಂಗಪಡಿಸಿತು. ಕನಿಷ್ಠ ಅವಶ್ಯಕತೆಗಳನ್ನಷ್ಟೇ ಪೂರೈಸಿಕೊಂಡು ಪ್ರಕೃತಿಯೊಂದಿಗೆ ಬದುಕುವ ಅನಿವಾರ್ಯವನ್ನು ಕೊರೋನವೆಂಬ ಮಹಾಮಾರಿ ಹೇಳಿಕೊಟ್ಟಿತು. ದುರಾಸೆ, ದುರಾಕ್ರಮಣಕ್ಕೆ ಮನುಷ್ಯ ತಕ್ಕ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಈ ವೈರಾಣು ತೋರಿಸಿಕೊಟ್ಟಿತು. ಮನುಷ್ಯನ ಬಳಿ ಅದೆಷ್ಟೆ ಕೋಟಿಗಳಿದ್ದರೇನು ಬಂತು ಭಾಗ್ಯ; ಆ ಹಣದಿಂದ ತಮ್ಮ ಜೀವವನ್ನು ಕೊಂಡುಕೊಳ್ಳಲಾಗುದು ಎಂಬ ಸತ್ಯದ ಅರಿವನ್ನುಂಟುಮಾಡಿತು. ಮಿತಿ ಇಲ್ಲದ ವೇಗವಾಗಿ ಬೆಳೆಯುತ್ತಿರುವ ನಗರಗಳು ಕೂಡ ಈ ವೈರಾಣುವಿಗೆ ತತ್ತರಿಸುತ್ತಿರುವಾಗ ಆರೋಗ್ಯವನ್ನು ಕಾಪಾಡಿಕೊಳ್ಳಲು ಭಾರತ ಹಳ್ಳಿಯ ಬದುಕೇ ಶ್ರೇಷ್ಠ ಬದುಕು ಎಂಬುದನ್ನು ತೋರಿಸಿಕೊಡಲು ಕಾರಣವಾಯಿತು. ಈ ಸತ್ಯವನ್ನು ಕವಯತ್ರಿಯ ಕವನಸಂಕಲದ  ಸಾಲುಗಳಲ್ಲಿ ಮಾರ್ಮಿಕವಾಗಿ ಹೇಳಿರುವರು.

ಸತ್ಯ :

ಕ್ರಮೇಣ
ಕಾಲ ತೆವಳುತ್ತ
ಮಕ್ಕಳು ಬೆಳೆದು ದೊಡ್ಡವರಾಗುತ್ತ
ತಮ್ಮ ಲೋಕದಲ್ಲಿ ವ್ಯಸ್ತರಾದಾಗ
ಇಷ್ಟು ದಿನ ಅವರಿಗಾಗಿ ಮೀಸಲಾದ ಜೀವಗಳು
ಈಗ ಒಂಟಿ….

ಇಂದು ಪೋಷಕರು ತಮ್ಮ ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗ ಮಾಡುತ; ಬದುಕು ಸವೆಸುತ್ತಿರುವರು. ಹೆತ್ತು-ಹೊತ್ತು ಉತ್ತಮವಾದ ಶಿಕ್ಷಣದಿಂದ ಹಿಡಿದು ಮಕ್ಕಳಿಗೆ ಬೇಕಾಗುವ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿಕೊಡುತ್ತಿರುವರು. ಆದರೆ; ಇದೆ ಮಕ್ಕಳು ದೊಡ್ಡವರಾದ ಮೇಲೆ ವಿದೇಶಕ್ಕೆ ಹಣ ಸಂಪಾದನೆಯ ನೆಪದಲ್ಲಿ ಪೋಷಕರು ತಂದೆ-ತಾಯಂದಿರನ್ನು ಮರೆತೇ ಹೋಗುತ್ತಿರುವರು.ಇದೆಷ್ಟು ಸತ್ಯ ಅಲ್ವಾ.ಪೋಷಕರು ತಮ್ಮ ಮಕ್ಕಳನ್ನು ಅವು ಅದೆಷ್ಟೆ ಗೋಳಾಡಿಸಿದರು ಬಿಡದೆ ಉತ್ತಮವಾಗಿ ಲಾಲನೆ ಪೋಷಣೆ ಮಾಡುವರು.ಆದರೆ ಇತ್ತೀಚಿನ ದಿನಮಾನಸದಲ್ಲಿ ಮಕ್ಕಳು ತಮ್ಮ ತಂದೆ ತಾಯಂದಿರನ್ನು ವೃದ್ಧಾಶ್ರಮಕ್ಕೆ ಸೇರಿಸಿ ಮನುಷ್ಯತ್ವವನ್ನೆ ಕಳೆದುಕೊಳ್ಳುತ್ತಿರುವರು. ಅವರ ಕೊನೆಯ ದಿನಗಳಲ್ಲಿ ಅವರಿಗೆ ನೋವೇ ಹೆಚ್ಚಾಗಿರುತ್ತದೆ.ಪ್ರಸ್ತುತವಾಗಿ ಅದೆಷ್ಟೋ ಕುಟುಂಬಗಳಲ್ಲಿ ಇಂತಹ ನೂರಾರು ಕಥೆಗಳನ್ನು ನೋಡುತ್ತಿದ್ದೇವೆ .ಇಂತವುಗಳು ಸತ್ಯವಾದ ವಸ್ತು ವಿಷಯದ ಮೇಲೆ ಬೆಳಕು ಚೆಲ್ಲುತ್ತಿರುವುದನ್ನು ನೋಡಬಹುದಾಗಿದೆ…

ಇನ್ನು ಈ ಸಂಕಲನದ ಶೀರ್ಷಿಕೆ ಆಗಿರುವ ‘ಎಲ್ಲರೊಳಗೊಂದಾಗಿ’ ಎಂಬ  ಕವಿತೆಯು ಕೂಡ ವಿಭಿನ್ನ ,ವಿಶಿಷ್ಟವಾದ ಅರ್ಥವನ್ನು ಧ್ವನಿಸುವುದರ ಮೂಲಕ ಓದುಗನನ್ನು ಚಿಂತೆಗೀಡು ಮಾಡುವುದು. “ಎಲ್ಲರೊಳಗೊಂದಾಗಿ’ಈ ಕವನಸಂಕಲನವೆಂಬ ಕಣಜದೊಳಗೆ ಮುತ್ತು, ರತ್ನ ,ವಜ್ರ ,ವೈಡೂರ್ಯಗಳಂತೆಯೆ ಅವರ ಕವನಗಳು ಅದ್ಭುತವಾಗ ರಂಜಿಸಲ್ಪಟ್ಟಿವೆ.
ಇದರೊಳಗೆ ಮುನುಷ್ಯನ ತುಡಿತ ,ಮಿಡಿತವೆಂಬ ತೂಗುಯ್ಯಾಲೆ, ಬದುಕು ,ಬದುಕಿನ ಚಿತ್ರಣ ಅದರ ಲೆಕ್ಕಾಚಾರಗಳ ಬಗ್ಗೆ ಇರುವ ವಿಚಾರಾಂಶಗಳೆಲ್ಲವು ತುಂಬಿ ತುಳುಕುತಿವೆ. ಇದರೊಳಗೆ ಒಟ್ಟು ೬೯ ಕವನಗಳಿದ್ದು  ಒಂದೊಂದು ಕವನಗಳು ಸಹ ವಿಭಿನ್ನ ಹಾಗು ವಿಶೇಷವಾಗಿ ರಚಿಸಲ್ಪಟ್ಟಿವೆ.ಭಾವಾಂತರಂಗ ಕಾಲಚಕ್ರದ ಸಂಚಲನ, ನಾನು ನೀನು ನಡುವೆ ‘ಕಳೆದುಕೊಂಡವರು’ ರೆಂಬ ಕವನ ತುಂಬಾ ಚನ್ನಾಗಿ ಮೂಡಿಬಂದಿವೆ..ಕೃತಜ್ಞತೆಯ ಆಳ, ಅರಿವು ಹೇಗಿರುತ್ತದ್ದೆಂಬ ಸತ್ಯ ,ನಮ್ಮೊಳಗಿನ ಗಟ್ಟಿತನ ಹಾಗು ಸ್ವಾಭಿಮಾನವನ್ನು ತೋರಿಸುವ ಬರಹಗಳು ಮೂಡಿಬಂದಿವೆ.ಪ್ರೀತಿ ,ಪ್ರೇಮ. ನೋವು, ನಲಿವುಗಳ ಅನಾವರಣ. ಸತ್ಯ, ಸುಳ್ಳುಗಳ ಬಗ್ಗೆ ಆತ್ಮಾವಲೋಕನ.ಹೊಗಳಿಕೆ, ತೆಗಳಿಕೆಗಳ ಬಿತ್ತರಿಕೆ. ನ್ಯಾಯ, ನಿಷ್ಟೆ, ಪ್ರಾಮಾಣಿಕತೆ, ಸತ್ಯದ ಅರಿವು. ಈ ಸಂಕಲನದಲ್ಲಿ ಮೂಡಿಬಂದಿರುವ ಅದ್ಭುತವಾದ ಭಾವಗೀತೆಗಳು  ಪುರಾಣಕ್ಕೆ ಸಂಬಂಧಿಸಿದ ವಿಷಯವಸ್ತುಗಳ ಬಗ್ಗೆ ನೈಜವರದಿಯನ್ನು ಕೊಟ್ಟಿರುವರು.

ಕವಯಿತ್ರಿಯ ಕವನಗಳಲ್ಲಿನ ಕುತೂಹಲತೆ, ಆರ್ದ್ರತೆ ,ಅದ್ಭುತವಾಗಿ ಮೂಡಿಬಂದಿವೆ. ಸಾಮಾಜಿಕ ತುಡಿತಗಳು, ಕಾಳಜಿ , ಪ್ರೀತಿ , ವಾತ್ಸಲ್ಯ ,ನೋವು, ನಲಿವು ,ಆತಂಕ ,ಆತುರ ,
ಕಾತುರ, ಹಂಬಲ ಹೀಗೆ ಹಲವಾರು ವಿಷಯ ವಸ್ತುಗಳನ್ನೊಳಗೊಂಡ ಸಾಲುಗಳು ಬಿತ್ತರಗೊಂಡಿದ್ದು, ಕವಿತೆಯು ಪ್ರತಿಮೆ, ರೂಪಕಗಳ ಮೂಲಕವೇ ಅಗಾಧವಾದುದನ್ನು ಹೇಳಲು ಪ್ರಯತ್ನಿಸುತ್ತದೆ ಎಂಬುವುದನ್ನು ತಿಳಿಯಬಹುದಾಗಿದೆ.ಹಾಗೆಯೆ ದುರಂತದಂಥಹ ನೋವು, ಹತಾಶೆ, ಸಂಕಟಗಳನ್ನು ಕವಯತ್ರಿಯ ಕವನಗಳಲ್ಲಿ ಓದಬಹುದು. ನಿಜಕ್ಕೂ ಅದ್ಭುತ, ಅಮೋಘ, ಅದ್ವಿತೀಯವೆನಿಸುತ್ತಿವೆ.ಕವಯಿತ್ರಿ ಬರೆದಿರುವ ಕಾವ್ಯದಲ್ಲಿ ಹತ್ತಾರು ವಿಧದಲ್ಲಿ ವಿಷಯವಸ್ತುಗಳು ಮೇಳೈಸುತ್ತಿವೆ.ಇವರ ಕವನಗಳಲ್ಲಿ ಹೆಚ್ಚಾಗಿ ಹರಿತ, ಲಲಿತ, ಕೌತುಕತೆ, ಮಾಧುರ‍್ಯ, ಮ್ಲಾನದ ದಾರಿಗಳನ್ನು ಆರಿಸಿಕೊಂಡು ತಮ್ಮ ಬರವಣಿಗೆಯೊಳಗೆ ತೋರಿಸಿರುವರು.ತಮ್ಮ ಕಾವ್ಯದ ಆಶಯಕ್ಕೆ ಎಲ್ಲೂ ಕೂಡ ಯಾವುದೇ ರೀತಿಯಲ್ಲೂ ಧಕ್ಕೆ ಬರದಂತೆ ಕಾಯ್ದುಕೊಂಡಿರುವರು.

ಕವಿತೆ ಕಟ್ಟಲು ಕವಿಗೆ ಆಸೆ, ಆಕಾಂಕ್ಷೆಗಳಿಗಿಂತಲೂ ಮುಖ್ಯವಾಗಿ ತಾಳ್ಮೆ ಇರಬೇಕು. ಇಲ್ಲಿ ಕವಯತ್ರಿ ಜ್ಯೋತಿ ಬೊಮ್ಮಾರವರ ಕವನಸಂಕಲನದ ಮಟ್ಟಿಗೆ ಹೇಳುವುದಾದರೆ ಇಲ್ಲಿ ಎಲ್ಲಾ ರೀತಿಯಿಂದಲೂ ಬರೆದ ಕವನಗಳನ್ನು ನೋಡಬಹುದಾಗಿದೆ.ಅಂದರೆ ಉತ್ಸಾಹ, ಹುರುಪು, ಉಲ್ಲಾಸ ,ಆಸೆ ,ಆಕಾಂಕ್ಷೆ, ಗಾಬರಿ ,ಭಯ ಎಲ್ಲದರ ಕವಿತೆಗಳು ಸಹ ಇಲ್ಲಿವೆ. ಇವೆಲ್ಲವನ್ನೂ ಗಮನಿಸಿದಾಗ ನನಗನ್ನಿಸಿದ್ದು ಇವರು ಭವಿಷ್ಯದಲ್ಲಿ ಇನ್ನೂ ಅತ್ಯುತ್ತಮವಾದ ಕವಿತೆಗಳನ್ನು ಓದುಗರಿಗೆ ನೀಡುತ್ತಾರೆ ಎಂಬುದರಲ್ಲಿ ಯಾವ ಸಂಶಯವಿಲ್ಲವೆಂಬುವುದು.

ಲಕ್ಷ್ಮಣ ಕೌಂಟೆ ಸರ್ ರವರು ಈ ಕವನಸಂಕಲನಕ್ಕೆ ತುಂಬಾ ಸೊಗಸಾಗಿ ಮುನ್ನುಡಿಯನ್ನು ಬರೆದಿರುವ.ಹಾಗೆಯೆ ಬೆನ್ನುಡಿಯನ್ನು ಹೆಸರಾಂತ ಗಝಲ್ ಕವಿಗಳಾದ ಸಿದ್ಧರಾಮ ಹೊನ್ಕಲ್ ಸರ್ ಸಹ ತುಂಬಾ ಸೊಗಸಾಗಿ ಬರೆದಿರುವರು.ಹೀಗೆಯೆ ತಮ್ಮ ಸಾಹಿತ್ಯ ಸೇವೆ ಮುಂದುವರಿಯಲಿ ಮೇಡಮ್..ಶುಭವಾಗಲಿ.ನಿಮ್ಮಿಂದ ಮತ್ತಷ್ಟು ಉತ್ಕೃಷ್ಟ ಮಟ್ಟದ ಸಂಕಲನಗಳು ಹೊರಬರುವಂತಾಗಲಿ, ಕನ್ನಡ ಸಾಹಿತ್ಯ ಸೇವೆಯನ್ನು ಈ ಮೂಲಕ ಮಗದಷ್ಟು ಮಾಡಿರೆಂದು ಹಾರೈಸುವೆ…


  • ಅಭಿಜ್ಞಾ ಪಿ.ಎಮ್.ಗೌಡ, ಮಂಡ್ಯ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW