ಪ್ಲಾಸ್ಟಿಕ್ ಬಳಕೆಯಿಂದ ಮನುಷ್ಯನಿಗಷ್ಟೇ ಅಲ್ಲ, ಪ್ರಾಣಿಗಳಿಗೂ ತೊಂದರೆ ಆಗುತ್ತೆ ಅನ್ನೋದು ಎಲ್ಲರಿಗೂ ತಿಳಿದ ವಿಚಾರ, ಅಷ್ಟೆಲ್ಲ ತಿಳಿದರು ಪ್ಲಾಸ್ಟಿಕ್ ನ್ನು ಎಲ್ಲೆಂದರಲ್ಲಿ ಬಿಸಾಕಿ ಬರುತ್ತೇವೆ. ಗೋಕರ್ಣದಲ್ಲಿ ಪ್ಲಾಸ್ಟಿಕ್ ಬಗ್ಗೆ ನನಗೆ ಅನಿಸಿದೆ ವಿಚಾರಗಳನ್ನು ನನ್ನ ಗೋಕರ್ಣ ಪ್ರವಾಸ ಕಥನದಲ್ಲಿ ಓದುಗರೊಂದಿಗೆ ಹಂಚಿಕೊಂಡಿದ್ದೇನೆ. ಮತ್ತು ಪ್ಲಾಸ್ಟಿಕ್ ಮುಕ್ತ ಪ್ರವಾಸ ತಾಣ ನಮ್ಮದಾಗಿರಲಿ…ತಪ್ಪದೆ ಮುಂದೆ ಓದಿ…
ಪ್ರವಾಸ ಹೋಗೋ ಜಾಗ ಸ್ವಚ್ಛವಾಗಿರಬೇಕು, ಅಂದ -ಚಂದವಾಗಿರಬೇಕು , ಯಾವ ರೂಮ್ ಚೆನ್ನಾಗಿದೆ, ಯಾವುದಕ್ಕೆ ಹೆಚ್ಚು ಜನ ರೇಟಿಂಗ್ ಕೊಟ್ಟಿದ್ದಾರೆ ಈ ಎಲ್ಲವನ್ನು ಪರೀಕ್ಷಿಸಿ ಕೊನೆಗೆ ಜಾಸ್ತಿ ದುಡ್ಡು ಹೋದ್ರು ಪರವಾಗಿಲ್ಲ ಉಳ್ಕೊಕೆ ಒಳ್ಳೆ ಜಾಗ ನೋಡಿ ಒಂದು ಕಡೆ ಬುಕ್ ಮಾಡ್ತೀವಿ. ಇದು ಎಲ್ಲ ಪ್ರವಾಸಿಗರು ಮೊದಲು ಯೋಚಿಸುವ ರೀತಿ.
ನಾವು ಕೂಡಾ ರೇಟಿಂಗ್, ಫೋಟೋಸ್ ನೋಡಿ ರೂಮ್ ಆನ್ಲೈನ್ ಯಿಂದ ನಮಸ್ತೆ ಯೋಗ ರೆಸಾರ್ಟನಲ್ಲಿ ಬುಕ್ ಮಾಡಿದ್ವಿ. ಜೊತೆಗೆ ಗೂಗಲ್ ನಲ್ಲಿ ಗೋಕರ್ಣದ ಸುತ್ತಲೂ ಪ್ರೇಕ್ಷನೀಯ ಸ್ಥಳಗಳು ಏನಿದೆ ಅಂತ ಪತ್ತೆ ಹಚ್ಚಿದ್ವಿ.
ರೆಸಾರ್ಟ್ ಹೋದಾಗ ಫೋಟೋ, ರೇಟಿಂಗ್ ಕೊಟ್ಟಂತೆ ಸೂಪರ್ ಆಗಿಯೇ ಇತ್ತು. ಇದರ ಬಗ್ಗೆ ಮಾತೇನು ಇಲ್ಲ.. ಆದ್ರೆ ನಾವು ಹೋಗುವ ಜಾಗ ಸ್ವಚ್ಛ ,ಚಂದ ಕಾಣಬೇಕು ಅಂತ ಹೇಗೆ ನಾವು ಬಯಸ್ತೀವೋ… ಹಾಗೆ ಅಲ್ಲಿಗೆ ಹೋಗಿ ವಾಪಾಸ್ ಬರುವಾಗ ನಮ್ಮಿಂದ ಗಲೀಜು ಆಗದಂತೆ ನೋಡಿಕೊಳ್ಳುವುದು ಕೂಡಾ ನಮ್ಮ ಕರ್ತವ್ಯ ಅಲ್ಲವೇ?. ಒಂದು ಪ್ರವಾಸಿ ತಾಣಕ್ಕೆ ಹೋದಾಗ ಅಲ್ಲಿಯ ಪ್ರಕೃತಿಯನ್ನು ಸ್ವಾಧಿಸಿದ ಮೇಲೆ ಆ ಪ್ರಕೃತಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದು ಕೂಡ ಮಾನವೀಯತೆ. ನಾನು ಗೋಕರ್ಣ ಓಡಾಡುವಾಗ ಎಲ್ಲೆಂದರಲ್ಲಿ ನೀರಿನ ಬಾಟಲ್, ಮದ್ಯಪಾನದ ಬಾಟಲ್ ಗಳ ರಾಶಿ ನೋಡಿ ಬೇಸರವಾಯಿತು.
ಗೋಕರ್ಣ ಸುಂದರವಾದ ರಮಣೀಯ ಸ್ಥಳ. ಅಂತಹ ಸ್ಥಳದಲ್ಲಿ ರಾಶಿಗಂಟಲೇ ಬಾಟಲಿ ನೋಡಿ ಪ್ರವಾಸಿಗರ ಮೇಲೆ ಮೊದಲು ಸಿಟ್ಟು ಬಂತು, ಆಮೇಲೆ ಇಷ್ಟೊಂದು ತ್ಯಾಜ್ಯದ ರಾಶಿ ಕಣ್ಣಿಗೆ ಕಂಡರೂ ಅಲ್ಲಿಯ ಸ್ಥಳೀಯ ಜನ ಹೇಗೆ ವಿಲೇವಾರಿ ಮಾಡದೇ ಇಟ್ಟುಕೊಂಡಿದ್ದಾರೆ ಎನ್ನುವುದು ಆಶ್ಚರ್ಯವೂ ಕೂಡಾ ಆಯಿತು.
ಪ್ಲಾಸ್ಟಿಕ್ ಬಾಟಲಿ ಪರಿಸರಕ್ಕೆ ಹಾನಿಯಾಗುತ್ತೆ ಎನ್ನುವುದರ ಬಗ್ಗೆ ಹಲವಾರು ಜಾಗೃತಿ ಕಾರ್ಯಕ್ರಮಗಳ ಮೂಲಕ ಸರ್ಕಾರ ಜನರಿಗೆ ಅರಿವು ಮೂಡಿಸುತ್ತಾ ಬಂದಿದ್ದರೂ ಕೂಡಾ ಪ್ರವಾಸಿಗರು ಎಲ್ಲೆಂದರಲ್ಲಿ ಬಾಟಲಿ ಎಸೆಯುತ್ತಿರುವುದು ಸರಿಯಲ್ಲ …ಇನ್ನೊಂದು ಇಲ್ಲಿ ಕಸ ಹಾಕಬೇಡಿ ಅಂತ ಗೋಕರ್ಣದಲ್ಲಿ ಎಲ್ಲ ಕಡೆ ದೊಡ್ಡದಾಗಿ ಫಲಕಗಳನ್ನು ಮಾತ್ರ ಹಾಕಿದ್ದಾರೆ, ಆದರೆ ಪ್ರವಾಸಿಗರಿಗೆ ಅನುಕೂಲವಾಗುವಂತೆ ಎಲ್ಲಿಯೂ ಕಸದ ಬುಟ್ಟಿಗಳನ್ನು ಇಟ್ಟಿಲ್ಲ. ಜನ ಮೊದಲೇ ಸೋಂಬೇರಿಗಳು ಕಸದ ಬುಟ್ಟಿ ಇಟ್ಟಿಲ್ಲ ಅಂದ್ರೆ ಹುಡುಕೊಂಡು ಹಾಕೋದು ದೂರದ ಮಾತು, ಅದರ ಬದಲು ಹತ್ತಿರ ಹತ್ತಿರ ಕಸದ ಬುಟ್ಟಿಗಳನ್ನು ಇಟ್ಟರೆ ಜನ ಖಂಡಿತಾ ಪ್ಲಾಸ್ಟಿಕ್ ಗಳನ್ನೂ ಬುಟ್ಟಿಯಲ್ಲಿ ಹಾಕುತ್ತಾರೆ. ಅದನ್ನು ಬಿಟ್ಟು ಕಸದ ಬುಟ್ಟಿ ಇಡದೆ ಹೋದರೆ ಪ್ರವಾಸಿಗರು ಮೋಜು, ಮಸ್ತಿ ಮಾಡಿ ತಾವು ತಿಂದು ತೇಗಿದ ಉಳಿದ ವಸ್ತುಗಳನ್ನು ಅಲ್ಲಿನ ಜನರಿಗೆ ಬಿಟ್ಟು ಹೋಗುತ್ತಾರೆ. ತೊಂದರೆಯಾಗುವುದು ಯಾರಿಗೆ ?…ಒಮ್ಮೆ ಯೋಚಿಸಿ .
ನಾನು ವೈಯನಾಡು ಹೋದಾಗ ಅಲ್ಲಿನ ಪ್ರವಾಸಿತಾಣದಲ್ಲಿ ಹೆಜ್ಜೆ ಹೆಜ್ಜೆಗೂ ಕಸದ ಬುಟ್ಟಿಗಳನ್ನು ನೋಡಿದ್ದೇ ಮತ್ತು ಕಸ ತುಂಬುತ್ತಿದ್ದಂತೆ ಸ್ವಚ್ಛ ಮಾಡಲು ಒಬ್ಬರನ್ನು ಖಾಯಂ ಆಗಿ ನೇಮಕ ಮಾಡಿದ್ದರು, ಅಲ್ಲಲ್ಲಿ ಬಾಟಲಿ ಸಂಗ್ರಹಣೆಗಾಗಿ ದೊಡ್ಡದಾದ ಪ್ಲಾಸ್ಟಿಕ್ ಗೂಡುಗಳನ್ನು ಮಾಡಿದ್ದೂ ನೋಡಿದೆ. ಪ್ರವಾಸಿಗರು ಹೆಚ್ಚಾಗಿ ಬರುವ ಗೋಕರ್ಣದಲ್ಲಿ ಆ ರೀತಿಯ ವ್ಯವಸ್ಥೆ ನಾನು ಎಲ್ಲಿಯೂ ಕಾಣಲಿಲ್ಲ. ಪ್ಲಾಸ್ಟಿಕ್ ಮರುಬಳಕೆ ಕೇಂದ್ರಗಳ ಘಟಕವನ್ನು ಗೋಕರ್ಣದಲ್ಲಿ ಹಾಗು ಇತರೆ ಪ್ರವಾಸಿತಾಣದಲ್ಲಿ ನೇಮಿಸಿದರೆ ಪ್ಲಾಸ್ಟಿಕ್ ಮುಕ್ತ ಪ್ರವಾಸಿತಾಣಗಳು ನಮ್ಮ ಕರ್ನಾಟಕದಲ್ಲಿ ಕಾಣಬಹುದು. ಇದರ ಬಗ್ಗೆ ಅಲ್ಲಿಯ ಸ್ಥಳೀಯ ರಾಜಕಾರಣಿಗಳು, ಜನ ಯೋಚಿಸಿದರೆ ಒಳ್ಳೆಯದು .
(ವೈಯನಾಡಿನಲ್ಲಿ ಪ್ಲಾಸ್ಟಿಕ್ ಸಂಗ್ರಹಿಸಲು ಮಾಡಿದಂತಹ ಒಂದು ಗೂಡು)
ಪುಸ್ತಕ ಓದಿದ ಮಾತ್ರಕ್ಕೆ ಶಿಕ್ಷಣ ಬರೋಲ್ಲ. ಅಂತರಾತ್ಮದಲ್ಲಿ ಕಲಿಕೆ ಗುಣ ಇರಬೇಕು. ಶಾಲೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಬಗ್ಗೆ ಎಷ್ಟೇ ಪಾಠಗಳಲ್ಲಿ ಕಲಿತರು ನಾವು ಮಾಡುವ ಕೆಲಸ ಅಶಿಕ್ಷಿತರಂತೆ ಎನ್ನುವುದು ಗೋಕರ್ಣದಲ್ಲಿ ನೋಡಿ ಬಂದೆ.
ನಾನು ನೀರಿನ ಖಾಲಿ ಬಾಟಲಿಗಳನ್ನು ಏನು ಮಾಡಿದೆ ಎಂದು ನಿಮ್ಮ ಮುಂದೆ ಹೇಳುತ್ತೇನೆ, ಮನೆಯಿಂದ ಹೊರಡುವಾಗ ಕಸದ ದೊಡ್ಡ ಕವರ್ ಕಾರಿನಲ್ಲಿ ಇಟ್ಟಿದ್ದೆ. ಖಾಲಿ ಆದ ಬಾಟಲಿಗಳನ್ನೆಲ್ಲ ಆ ಕವರ್ ನಲ್ಲಿ ತುಂಬುತ್ತಾ ಹೋದೆ. ನನ್ನ ಮಕ್ಕಳು ಅದನ್ನು ನೋಡಿ ಅಮ್ಮ …ಏನಿದು ಚಿಂದಿ ಆರಿಸೋರು ತರ ಎಲ್ಲ ಖಾಲಿ ಬಾಟಲ್ ಗಳನ್ನ ಕಾರ್ ನಲ್ಲಿ ತುಂಬುತ್ತಾ ಇದ್ದೀಯ?… ಅಂತ ಪ್ರಶ್ನೆ ಮಾಡಿ ನಕ್ಕರು. ಅವರಿಗೆ ಹೇಳಿದೆ ಇಲ್ಲಿ ಎಲ್ಲೆಂದರಲ್ಲಿ ಬಾಟಲಿ ಎಸೆಯೋದು ಸರಿ ಅಲ್ಲ. ಅದರ ಬದಲು ನಾವು ಕುಡಿದ ಖಾಲಿ ಬಾಟಲಿಗಳನ್ನ ಈ ಕವರಲ್ಲಿ ತುಂಬಿ ಜಾಸ್ತಿ ಆದ್ಮೇಲೆ ರದ್ದಿ ಅಂಗಡಿಯಲ್ಲಿ ಕೊಟ್ರೆ ದುಡ್ಡು ಬರುತ್ತೆ, ಆ ದುಡ್ಡಲ್ಲಿ ನೀವು ಚಾಕಲೇಟ್ ತಗೋಬಹುದಲ್ಲ ಅಂದೇ. ಮಕ್ಕಳಿಗೆ ಎಲ್ಲಿಲ್ಲದ ಸಂತೋಷ ಆಯ್ತು. ಅವರು ಕೂಡಾ ನನ್ನ ಕೆಲಸಕ್ಕೆ ಕೈ ಜೋಡಿಸಿದರು.
ನಮ್ಮ ಪ್ರವಾಸ ಮುಗಿಸಿ ಬೆಂಗಳೂರು ಬರುವಷ್ಟರಲ್ಲಿ ಎರಡು ಕವರ್ ಪೂರ್ತಿ ಬಾಟಲಿಗಳು ತುಂಬಿದ್ದವು. ಅದನ್ನು ರದ್ದಿ ಅಂಗಡಿಗೆ ಹೋಗಿ ಕೊಟ್ಟೆ, ಕೆಜಿಗೆ ೧೦ ರೂಪಾಯಿ ಹೇಳಿದ. ೫ ಕೆಜಿ ಇತ್ತು, ೫೦ ರೂಪಾಯಿ ಬಂತು. ಆ ದುಡ್ಡಲ್ಲಿ ಮಕ್ಕಳು ಚಾಕಲೇಟ್ ತಗೆದುಕೊಂಡು ಬಂದ್ರು. ಇದು ಗೋಕರ್ಣದಲ್ಲಿನ ಒಂದು ಪ್ಲಾಸ್ಟಿಕ್ ಬಾಟಲಿ ಕತೆಯಾಗಿತ್ತು.
ಪ್ರವಾಸ ಇನ್ನೂ ಮುಗಿದಿಲ್ಲ…………
- ಶಾಲಿನಿ ಹೂಲಿ ಪ್ರದೀಪ್