ಗೋಕರ್ಣ ಪ್ರವಾಸ ಕಥನ ಭಾಗ – ೫

ಗೋಕರ್ಣದಲ್ಲಿ ನೋಡಲೇಬೇಕಾದ ಸ್ಥಳಗಳಲ್ಲಿ ಗೋಗರ್ಭ ಗುಹೆ ಕೂಡ ಒಂದು. ಇಂದೊಂದು ಆಕರ್ಷಣೀಯ, ನೋಡುಗನನ್ನು ಮುಖ ಪ್ರೇಕ್ಷಕನನ್ನಾಗಿ ಮಾಡುವಂತೆ ಸ್ಥಳ ಅದು. ಇದರ ಬಗ್ಗೆ ಬಹಳಷ್ಟು ಜನಕ್ಕೆ ಮಾಹಿತಿ ಇಲ್ಲದೆ ಇರಬಹುದು, ಆದರೆ ಗೋಕರ್ಣಕ್ಕೆ ಹೋದಾಗ ತಪ್ಪದೆ ನೋಡಲೇ ಬೇಕಾದಂತಹ ಸ್ಥಳಗಳಲ್ಲಿ ಇದು ಕೂಡಾ ಒಂದಾಗಿದೆ…

ಗೋಕರ್ಣದ ಸೆಕೆಗೆ ಬೆವರು ಧಾರಾಕಾರವಾಗಿ ಹರಿಯುತ್ತಿದ್ದರೂ ಅದರಲ್ಲಿ ಒಂದು ರೀತಿಯ ಹಿತವಿತ್ತು, ಎಷ್ಟೇ ದೂರ ನಡೆದರೂ ಆಯಾಸವೆನ್ನಿಸುತ್ತಿರಲಿಲ್ಲ. ಹಾಗಾಗಿ ಗೋಕರ್ಣ ಪೂರ್ತಿ ನಡೆದಿದ್ದೇ ಹೆಚ್ಚು. ಗೋಕರ್ಣ ಸುತ್ತ ಮುತ್ತ ಎಲ್ಲ ಸ್ಥಳಗಳನ್ನು ಬಿಡದೆ ನೋಡಿದಮೇಲೆ ಬೆಂಗಳೂರಿಗೆ ವಾಪಾಸ್ ಹೊರಡುವ ಸಮಯ ಬಂತು, ಗಂಟು ಮೂಟೆ ಕಟ್ಟಿ ಎಲ್ಲವನ್ನು ಕಾರ್ ನಲ್ಲಿ ಹಾಕಿದೆ. ಗೋಕರ್ಣದಲ್ಲಿ ಓಡಾಡಿದ ಸುಮಧುರ ನೆನಪುಗಳನ್ನು ಹೊತ್ತು ಎಲ್ಲರೂ ಕಾರಲ್ಲಿ ಕೂತೆವು. ಪದ್ದಣ್ಣದು ಒಂದು ಕೆಟ್ಟ ಅಭ್ಯಾಸವಿದೆ. ಎಲ್ಲರೂ ಕಾರ್ ಹತ್ತಿ ಕೂತಮೇಲೆ ಮೊಬೈಲ್ ನಲ್ಲಿ ಮ್ಯಾಪ್ ಹುಡುಕ್ತಾ ಕೂಡೋದು, ಇಲ್ಲ…. ಆಫೀಸ್ ಗೆ ಮೇಲ್ ಮಾಡೋದು ಹೀಗೆ ಆ ಉರಿ ಬಿಸಿಲಿನಲ್ಲಿ ಕಾರ್ ಲ್ಲಿ ಕೂತು ಕೂರಿಸಿ ನಾವೆಲ್ಲ ಹಪ್ಪಳವಾದ ಮೇಲೆ ಕಾರ್ ಸ್ಟಾರ್ಟ್ ಆಗೋದು. ಅವತ್ತು ಕೂಡಾ ಕಾರ್ ಸ್ಟಾರ್ಟ್ ಆಗಲು ೧೫ ನಿಮಿಷ ಬೇಕಾಯಿತು.

ಪದ್ದಣ್ಣ ಮ್ಯಾಪ್ ಸೆಟ್ ಮಾಡಿ ಮ್ಯಾಪ್ ತೋರಿಸಿದ ದಾರಿಯನ್ನು ಹುಡುಕಿಕೊಂಡು ಕಾರ್ ಹೊರಟಿತು. ಸ್ವಲ್ಪ ದೂರಾ ಹೋಗುತ್ತಿದ್ದಂತೆ ಇದ್ದಕ್ಕಿಂದಂತೆ ಪದ್ದಣ್ಣ ಕಾರ್ ನಿಲ್ಲಿಸಿ, ಇಲ್ಲಿನ ಇನ್ನೊಂದು ನೋಡಲೇಬೇಕಾದ ಒಂದು ಜಾಗವನ್ನು ಮರೆತೇ ಬಿಟ್ಟಿದ್ದೆ ಅದನ್ನು ನೋಡಿಯೇ ಮುಂದೆ ಹೋಗೋಣ ಅಂತ ಕಾರ್ ವಾಪಾಸ್ ಹೋಳಿಸಿದ. ಮಕ್ಕಳು ‘ಯಾವ ಜಾಗ ಉಳೀತು, ಅಪ್ಪಾ…ಎಲ್ಲ ಮುಗಿಸಿದ್ದೀವಲ್ಲ ಮತ್ಯಾವುದು’ ಅಂತ ಕೇಳ್ತಿದ್ರು…..’ಬನ್ರೀ ಆ ಜಾಗ ತುಂಬಾ ಕುತೂಹಲಕಾರಿಯಾಗಿದೆ. ನೋಡೋಕೆ ನಿಮಗೆ ಅಚ್ಚರಿಯೂ ಆಗಬಹುದು’ ಅಂತ ಹೋಗುವ ಮೊದಲೇ ಜಾಗದ ಕುರಿತು ಸಾಕಷ್ಟು ಕತೆಗಳನ್ನ ಹೇಳಿ ಎಲ್ಲರಿಗೂ ಆದಷ್ಟು ಬೇಗ ಆ ಜಾಗಕ್ಕೆ ಹೋಗಲೇಬೇಕು ಎನ್ನುವಷ್ಟು ಕುತೂಹಲ ಸೃಷ್ಟಿಸಿದ್ದ.

ಆ ಜಾಗಕ್ಕೆ ಹೋಗುವ ದಾರಿ ನೋಡಿ ‘ನನ್ನ ಕಡೆಯಂತೂ ಆಗೋಲ್ಲ. ಸಾಕಷ್ಟು ಟ್ರಕ್ಕಿಂಗ್ ಮಾಡಿದ್ದೀನಿ. ಈಗಾಗಲೇ ಕಾಲುಗಳು ಪದ ಹೇಳ್ತಿವಿ. ನೀವು ಹೋಗಿ ಬನ್ನಿ, ನಾನು ಕಾರಲ್ಲೇ ಕೂತಿರುತ್ತೇನೆ’ ಎಂದು ಮಧ್ಯೆದಲ್ಲೇ ಕೈ ಎತ್ತಿದೆ. ಆದರೆ ಅಪ್ಪ ಮಕ್ಕಳು ಕೇಳಬೇಕಲ್ಲ. ‘ಎಲ್ಲೆಲ್ಲೋ ಟ್ರಕ್ಕಿಂಗ್ ಮಾಡಿದ್ದಿಯಾ. ನೋಡಬೇಕಾದ ಜಾಗದಲ್ಲಿ ಟ್ರಕ್ಕಿಂಗ್ ಆಗೋಲ್ಲ ಅಂದ್ರೆ ಹೆಂಗೆ, ಹೇಚ್ಛೇನು ಮಾತಾಡಬೇಡ ಸುಮ್ನೆ ನಡಿ’…. ಅಂತ ಪದ್ದಣ್ಣ ಆದೇಶ ನೀಡಿದ. ಇನ್ನೇನ್ನು ಬೇರೆ ದಾರಿಯಿಲ್ಲದೆ ಅಪ್ಪ ಮಕ್ಕಳು ಮುಂದೆ ಮುಂದೆ ಹೋಗುತ್ತಿದ್ದರೆ, ನಾನು ಹಿಂದಿಂದೆ ಹೊರಟೆ. ಸುತ್ತಲೂ ನನ್ನೆತ್ತರಕ್ಕೆ ಬೆಳೆದು ನಿಂತ ಒಣಗಿದ ಹುಲ್ಲು, ಮಧ್ಯ ಮಧ್ಯೆದಲ್ಲಿ ಮರಗಳನ್ನು ಬಿಟ್ಟರೆ ಅಲ್ಲಿ ಜನ ಸಂಚಾರವಿರಲಿಲ್ಲ . ‘ಪದ್ದಣ್ಣ… ಇದೊಂದು ದಂಡುಪಾಳ್ಯಕ್ಕೆ ಹೇಳಿ ಮಾಡಿಸಿದ ಜಾಗದಂತೆ ಕಾಣ್ತಿದೆ. ನನಗೇನು ಸರಿ ಕಾಣ್ತಿಲ್ಲ. ಸುಮ್ನೆ ಸೀದಾ ಬೆಂಗಳೂರಿಗೆ ನಡೆದ್ದಿದ್ರೆ ಆಗ್ತಿತ್ತು’, ಅಂತ ಗೊಣಗಿದೆ. ಅಪ್ಪ, ಮಕ್ಕಳು ಯಾರು ಕೇಳುವ ಪರಿಸ್ಥಿಯಲ್ಲಿ ಇರಲಿಲ್ಲ. ನಾನು ಮಾತಾಡಿ ವ್ಯರ್ಥ ಅಂತ ಕೂಡ್ಲೆ ಬೀಚ್ ಗೆ ಹತ್ತಿರವಾಗಿ, ೫೦ ಮೀಟರ್ ದೂರದಲ್ಲಿದ್ದ ಆ ಜಾಗಕ್ಕೆ ಬಾಯಿ ಮುಚ್ಚಿಕೊಂಡು ಅವರ ಹಿಂದಿಂದೆ ಹೊರಟೆ. ಹೇಚ್ಛೆನೂ ನಡೀಲಿಲ್ಲ. ಪದ್ದಣ್ಣ ನೋಡು ಇದೆ ಆ ಸುಂದರ ಸ್ಥಳ, ಇದನ್ನು ‘ಗೋಗರ್ಭ’ ಎಂದು ಕರೆಯುತ್ತಾರೆ. ಎಂದು ಗುಹೆಯ ಬಾಗಿಲ ಹೊರಗೆ ನಿಂತು ತೋರಿಸಿದ. ಗುಹೆಯ ಮೇಲೆ ದೊಡ್ಡದಾದ ನಾಮಫಲಕವಿಲ್ಲದಿದ್ದರು ಸುಣ್ಣದಿಂದ ಗೋಗರ್ಭ ಎಂದು ಯಾರೋ ಪುಣ್ಯಾತ್ಮರು ಕೈಯಲ್ಲೇ ಬರೆದಿದ್ದರು. ಹೊರಗಿನಿಂದ ಗುಹೆ ಚಿಕ್ಕದಾಗಿ ಕಂಡರೂ ಮೆಟ್ಟಿಲನ್ನು ಒಬ್ಬೊಬ್ಬರೇ ಇಳಿದು ಒಳಕ್ಕೆ ಹೋದಂತೆ ಗುಹೆ ವಿಶಾಲವಾಗಿ ಕಾಣಿಸಿತು, ನಿರ್ಜನ ಪ್ರದೇಶ, ಜೊತೆಗೆ ಗುಹೆಯ ಕಾಯಲು ಯಾರು ಕಾವಲುದಾರನಿಲ್ಲ. ನಾವು ಮಾಡಿದ್ದೆ ಆಟ ಅಂತ ಅಲ್ಲಿ ಕುಡಿದು ಬಿಸಾಕಿದ ಪ್ಲಾಸ್ಟಿಕ್ ನೀರಿನ ಬಾಟಲಿಗಳು, ಅದು ಇದು ಹೇಳುತ್ತಿತ್ತು.

‘ಏನೋ ಪದ್ದಣ್ಣ…. ಈ ತರ ಗುಹೆ ಗೋಕರ್ಣದಲ್ಲಿ ಇದೆ ಅಂತ ಜನಕ್ಕೆ ಗೊತ್ತಿದೆಯೋ ಇಲ್ವೋ…ಒಂದು ನರಪಿಳ್ಳೆನೂ ಕಾಣ್ತಿಲ್ಲ. ಹಾವು, ವಿಷಜಂತುಗಳಿರಬಹುದು ಹುಷಾರಪ್ಪಾ’…ಅಂದೇ. ‘ಎಲ್ಲದಕ್ಕೂ ಅಮ್ಮ ಹೆದರತ್ತಾಳೆ. ಕರಾಟೆ ಕಿಡ್ಸ್ ಇರಬೆಕಾದ್ರೆ ಯಾಕೆ ಭಯ…ಸುಮ್ನೆ ನಮ್ಮ ಹಿಂದೆ ಬಾ’ ಅಂತ ಮಕ್ಕಳು ಧೈರ್ಯ ತುಂಬುತ್ತಾ ನಡೆದರು.

ಗುಹೆಯ ಸುತ್ತಲೂ ಸೂಕ್ಷ್ಮವಾಗಿ ಗಮನಿಸಿದೆ. ಗುಹೆಗೆ ಹಲವಾರು ದಾರಿಗಳು ಕಣ್ಣಿಗೆ ಬಿದ್ದವು. ಅವುಗಳಲ್ಲಿ ಮುಖ್ಯ ಮೂರೂ ದಾರಿಗಳಲ್ಲಿ ಒಂದು ಕೋಟಿ ತೀರ್ಥಕ್ಕೆ ಹೋದರೆ, ಎರಡನೆಯದು ಆದಿ ಗೋಕರ್ಣ ಮತ್ತು ಮೂರನೆಯದು ಕಾಶಿವರೆಗೂ ಹೋಗುತ್ತದೆ ಎಂದು ಹೇಳಲಾಗುತ್ತದೆ. ಆ ಗುಹೆಯ ಇತರೆ ದಾರಿಗಳು ಎಲ್ಲಿ ಹೋಗುತ್ತೆ ಅಂತ ಪತ್ತೆ ಹಚ್ಚುವ ಹುಚ್ಚು ಪ್ರಯತ್ನ ನಾವು ಯಾರು ಮಾಡಲಿಲ್ಲ . ನೀವು ಕೂಡಾ ಮಾಡಬೇಡಿ . ಇದ್ದ ಒಂದೇ ದಾರಿಯಲ್ಲಿ ಹೆದರುತ್ತಾ ಒಳಕ್ಕೆ ಹೋಗಿದ್ದೆ, ಇನ್ನು ಗೊತ್ತಿಲ್ಲದ ದಾರಿಯಲ್ಲಿ ಹೋಗಿ ಅಪಾಯಕ್ಕೆ ಸಿಲುಕುವುದು ಬೇಡವೆಂದು ಮಕ್ಕಳಿಗೆ ಪದ್ದಣ್ಣನಿಗೆ ಎಚ್ಚರಿಸುತ್ತಲೇ ಇದ್ದೆ. ಮೆಟ್ಟಿಲು ಇಳಿದು ಎಡಕ್ಕೆ ತಿರುಗಿದಂತೆ ಕಿಂಡಿಯಿಂದ ಸೂರ್ಯನ ಕಿರಣಗಳು ನೇರವಾಗಿ ನೆಲಕ್ಕೆ ಬಿಳುತ್ತಿದ್ದದ್ದು ಕಾಣಿಸಿತು, ಆ ಸೂರ್ಯನ ಕಿರಣ ಬಿದ್ದದ್ದು ಶಿವ ತಪಸ್ಸು ಮಾಡಿದ ಸ್ಥಳದ ಮುಂದೆ ಅಂದರೆ ಶಿವನ ಲಿಂಗು ಪ್ರತಿಷ್ಠಾಪಿಸಿದ ಗರ್ಭಗುಡಿಯ ಮುಂದೆ.

ನೋಡುಗರಿಗೆ ಅಚ್ಚರಿಯಂತೆ ಕಂಡರೂ, ಅಲ್ಲಿ ಹೋಗಿ ಧ್ಯಾನ ಮಾಡುವುದರಿಂದ ಮನಸ್ಸು ಹಗುರವಾಗುತ್ತೆ ಎಂದು ಅಲ್ಲಿಯ ಜನ ಹೇಳುತ್ತಾರೆ. ನನಗೆ ಕಣ್ಣು ತೆರೆದು ಆ ಗುಹೆಯಲ್ಲಿ ಕೂಡುವುದೇ ಭಯವಾಗಿತ್ತು, ಇನ್ನು ಕಣ್ಣು ಮುಚ್ಚಿ ಧ್ಯಾನ ಮಾಡುವುದೆಂದರೆ ಅಸಾಧ್ಯ. ಹಾಗಾಗಿ  ಶಿವನಿಗೆ ಭಕ್ತಿಯಿಂದ ಕೈ ಮುಗಿದು ಎಲ್ಲರನ್ನು ಸೀದಾ ಹೊರಕ್ಕೆ ಕರೆದುಕೊಂಡು ಬಂದೆ, ಗುಹೆಯ ಬಂಡೆ ಹತ್ತಿ ಗರ್ಭ ಗುಡಿಯ ಮುಂದೆ ಬೀಳುತ್ತಿದ್ದ ಕಿಂಡಿಯತ್ತ ಹೋದೆವು. ದೊಡ್ಡದಾದ ಕಿಂಡಿಯಿತ್ತು, ಸೃಷ್ಟಿ ಕರ್ತನಿಗೆ ಏನಿದು ನಿನ್ನ ಲೀಲೆ…ಎಂದು ಮತ್ತೊಮ್ಮೆ ಸೃಷ್ಟಿಕರ್ತನಿಗೆ ನಮಿಸಿದೆ.

ಗೋಗರ್ಭಕ್ಕೆ ಹೋಗಿ ಶಿವನ ದರ್ಶನ ಪಡೆಯುವುದರಿಂದ ಪಾಪ ವಿಮೋಚನೆ ಆಗುತ್ತದೆ ಎಂದು ಅಲ್ಲಿಯ ಅರ್ಚಕರು ಹೇಳುತ್ತಾರೆ. ನಾವೆಲ್ಲ ಅಲ್ಲಿಗೆ ಹೋಗಿ ನಮ್ಮ ಪಾಪಗಳನ್ನೆಲ್ಲ ತೊಳೆದುಕೊಂಡು ಬಂದೆವು.

ಗೋಗರ್ಭ ಕತೆಯ ಹಿನ್ನೆಲೆ :  ಬ್ರಹ್ಮ,ವಿಷ್ಣು, ಮಹೇಶ್ವರ (ಶಿವ) ಈ ಮೂವರಲ್ಲಿ ಸೃಷ್ಟಿಕರ್ತನು ಯಾರು ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ, ಯಾರು ಅಧಿಕ ಹೊತ್ತು ತಪಸ್ಸು ಮಾಡಿ ಬರುತ್ತಾರೋ ಅವರೇ ಸೃಷ್ಟಿಕರ್ತರು ಎಂದು ಒಂದು ಒಪ್ಪಂದ ಮಾಡಿಕೊಂಡು, ಮೂರೂ ಜನ ಒಂದೊಂದು ಜಾಗದಲ್ಲಿ ತಪಸ್ಸು ಮಾಡುತ್ತಾರೆ.  ಬ್ರಹ್ಮ, ವಿಷ್ಣು ದೇವರು ತಪ್ಪಸ್ಸು ಮಾಡಿ ವಾಪಸ್ಸಾಗುತ್ತಾರೆ, ಆದರೆ ಶಿವ ಮಾತ್ರ ಪಾತಾಳದಲ್ಲಿ ಕೂತು ಮಾಡುತ್ತಾ ತಲ್ಲೀನನಾಗಿ ಕೂತಿರುತ್ತಾನೆ. ಆಗ ಬ್ರಹ್ಮನೇ ಸೃಷ್ಟಿಕರ್ತನಾಗಿ ಇಡೀ ಭೂಮಂಡಲವನ್ನು ಸೃಷ್ಟಿಸುತ್ತಾನೆ. ಆ ಸಂದರ್ಭದಲ್ಲಿ ಶಿವ ತಪ್ಪಸ್ಸಿನಿಂದ ಹೊರಕ್ಕೆ ಬರಲು ನೋಡುತ್ತಾನೆ. ಆಗ ಭೂಮಿ ಅಡ್ಡವಾಗಿರುತ್ತದೆ. ಆಗ ಶಿವ ದೇವಾ ಸಿಟ್ಟಿಗೆದ್ದು ಭೂಮಿಯನ್ನು ಭೇದಿಸಿ ಹೊರಗೆ ಬರಲು ಮುಂದಾದಾಗ ಭೂದೇವಿ ಆಕಳ ರೂಪ ತಾಳಿ ತನ್ನ ಕಿವಿಯ ಮೂಲಕ ಶಿವನಿಗೆ ಹೊರಗೆ ಬರಲು ದಾರಿ ಮಾಡಿಕೊಡುತ್ತಾಳೆ. ಹೀಗೆ ಶಿವ ದೇವಾ ಪಾತಾಳದಿಂದ ಹೊರಗೆ ಬಂದ ದಾರಿಯನ್ನು ಗೋಗರ್ಭ ಎನ್ನಲಾಗುತ್ತದೆ ಎಂದು ಕತೆಗಳು ಹೇಳುತ್ತವೆ.

ಇದೊಂದು ಅತ್ಯಂತ ಪುರಾತನ ಗುಹೆ ಎಂದು ಹೇಳಲಾಗುತ್ತದೆ, ಶಿವನ ಆತ್ಮಲಿಂಗವಿರುವ ಗೋಕರ್ಣದಲ್ಲಿ ಈ ಗುಹೆ ಇರುವುದು ಬಹುತೇಕ ಜನರಿಗೆ ತಿಳಿದಿರುವುದು ಅನುಮಾನ. ಏಕೆಂದರೆ ಪ್ರವಾಸೋದ್ಯಮದವರು ಇದರ ಬಗ್ಗೆ ಹೆಚ್ಚು ಕಾಳಜಿ ತೋರಿಸಿದಂತೆ ಕಾಣದು.

ಈ ಗುಹೆಯ ಬಗ್ಗೆ ಜಾಲತಾಣದಲ್ಲಿ ಮಾಹಿತಿ ಪಡೆದುಕೊಂಡವರು ಈ ಸ್ಥಳವನ್ನು ಹುಡುಕಿಕೊಂಡು ಹೋಗಿ ನೋಡುತ್ತಾರೆ. ತಿಳಿಯದವರು ಬೀಚ್, ದೇವಸ್ಥಾನಗಳನ್ನು ಸುತ್ತಿ ಹಾಗೆ ಊರಿನ ಹಾದಿ ಹಿಡಿಯುತ್ತಾರೆ. ಈ ಗುಹೆಯ ಬಗ್ಗೆ ಪ್ರವಾಸೋದ್ಯಮ ಹೆಚ್ಚು ಕಾಳಜಿ ತೋರಿಸಿ ಗುಹೆಯ ಮಹತ್ವ ಸಾರುವ ವಿವರದ ಫಲಕ, ಕಾವಲುದಾರನ್ನು ನೇಮಿಸಿದರೆ ಇದೊಂದು ದೊಡ್ಡ ಮಟ್ಟದ ಪ್ರವಾಸಿಗರನ್ನು ಸೆಳೆಯುವ ಕೇಂದ್ರವಾಗುವುದರಲ್ಲಿ ಅನುಮಾನವೇ ಇಲ್ಲ.

ಗೋಕರ್ಣ ನಮ್ಮ ಹೆಮ್ಮೆ, ಅದರ ಸೌಂದರ್ಯವನ್ನು ಕಾಪಾಡುವಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸೋಣ. ನಮ್ಮ ಗೋಕರ್ಣ ಪ್ರವಾಸ ಸುಖಕರವಾಗಿತ್ತು ಎಂದು ಹೇಳುತ್ತಾ ಇಲ್ಲಿಗೆ ನನ್ನ ಗೋಕರ್ಣ ಪ್ರವಾಸ ಕಥನ ಮುಗಿಸುತ್ತೇನೆ.


  • ಶಾಲಿನಿ ಹೂಲಿ ಪ್ರದೀಪ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW