ಎಲ್ಲಿದೆ ಸರ್ಕಾರಿ ದವಾಖಾನೆ? – ವಿಕಾಸ್. ಫ್. ಮಡಿವಾಳರ

ಬಡವನಿಗೆ ವರದಾನವಾಗಬೇಕಿದ್ದ ಸರ್ಕಾರಿ ದವಾಖಾನೆಗಳು ಈಗ ಬಡವನಿಗೆ ಕುತ್ತಾಗಿದೆ ಎಂದರೆ ತಪ್ಪಲ್ಲ, ಸರ್ಕಾರಿ ದವಾಖಾನೆಗಳ ಉದ್ದಾರಕ್ಕಾಗಿ ನಮ್ಮ ಸರ್ಕಾರ ನೀರಂತೆ ಖರ್ಚು ಮಾಡುತ್ತಿದ್ದು, ಆ ದುಡ್ಡು ದಾವಾಖಾನೆಯ ಉದ್ದಾರಕ್ಕೊ ಅಥವಾ ಕೆಲವು ಸರ್ಕಾರಿ ನೌಕರರ ಮನೆ ಉದ್ದಾರಕ್ಕೊ ಎಂಬುದು ಯಕ್ಷ ಪ್ರಶ್ನೆಯಾಗಿದೆ, ಯುವ ಲೇಖಕ ವಿಕಾಸ್. ಫ್. ಮಡಿವಾಳರ ಲೇಖನಿಯಲ್ಲಿ ಒಂದು ಚಿಂತನ ಲೇಖನ, ಮುಂದೆ ಓದಿ ಮತ್ತು ತಪ್ಪದೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ…

ಎಲ್ಲಿದೆ ಸರ್ಕಾರಿ ದವಾಖಾನೆ ( ದೇವದೂತರ ನಡುವೆಯೊ, ಯಮದೂತರ ನಡುವೆಯೊ )

ಕಣ್ಣಿಗೆ ಬಟ್ಟೆ ಕಟ್ಟಿ ಆಟ ಆಡುವುದು ನಮ್ಮ ಬಾಲ್ಯದ ಸವಿನೆನಪುಗಳು. ಬಟ್ಟೆಯನ್ನು ಕಣ್ಣಿಗೆ ಕಟ್ಟಿದಾಗ ಆಗುವ ಭಯ, ಕಿವಿಗೆ ಕೇಳುವ ಚೀರಾಟ, ಮುಂದೆ ಏನಿದೆ?! ಎಂದು ತಿಳಿಯದೆ ಹೆಜ್ಜೆ ಇಡಲಾಗದೆ ಒಳಗೊಳಗೆ ಭಯಪಡುವ ನಮ್ಮನ್ನು ನೋಡಿ ನಗುವ ಜನರು, ಆ ದಿನಗಳೆ ಬೇರೆ ಇತ್ತು. ಈಗ ಆ ಆಟವನ್ನು ನಮ್ಮ ಸರ್ಕಾರಿ ದವಾಖಾನೆಗಳು ನಮ್ಮ ಜೊತೆ ಆಡುತ್ತಿವೆ ಎನ್ನುವುದು ಮುಜುಗರದ ಸಂಗತಿಯಾಗಿದೆ.

ಕೆಲ ದಿನಗಳ ಹಿಂದೆ ಆದ ಒಂದು ಸಣ್ಣ ಅಪಘಾತದಲ್ಲಿ ನನ್ನ ಕೈ ಮುರಿದಿತ್ತು. ಅಲ್ಲೆ ಸ್ವಲ್ಪ ದೂರದಲ್ಲಿದ್ದ ಸರ್ಕಾರಿ ದಾವಾಖಾನೆಗೆ ದಾಖಲಾದೆ. ತುರ್ತು ಪರಿಸ್ಥಿತಿ ಕೊಠಡಿಯಲ್ಲಿ ನರಳಾಡುತ್ತಿದ್ದ ನನ್ನನ್ನು ನೋಡಲು ಯಾರು ಬರಲೆ ಇಲ್ಲ. ಕೊನೆಗೆ ಪುಟ್ಟ ಪುಟ್ಟ ಹೆಜ್ಜೆ ಇಡುತ್ತ ಬಂದ ನರ್ಸ್ ಒಬ್ಬಳು ಮುಗುಳು ನಗುತ್ತಾ ” ಡಾಕ್ಟರು ಇವತ್ತು ಬರಲ್ಲ, ನಾಳೆ ಬರುತ್ತಾರೆ ” ಎಂದಳು. ದಿಕ್ಕೆ ಕಾಣದ ನಮಗೆ ಕೊನೆಪಕ್ಷ ಎಕ್ಸ್ -ರೇ ಆದರೂ ಮಾಡಿಸೋಣ ಎಂದುಕೊಂಡರೆ, ದವಾಖಾನೆಯಲ್ಲಿ ಎಕ್ಸ್ -ರೇ ಹಾಳಾಗಿದ್ದ ಸಂಗತಿ ಗೊತ್ತಾಯಿತು. ಸುಮ್ಮನೆ ಒಂದೆರಡು ನೋವಿನ ಗುಳಿಗೆ ಕೊಟ್ಟು, ಇಂಜೆಕ್ಷನ್ ಮಾಡಿ, ದೊಡ್ಡ ಆಸ್ಪತ್ರೆಗೆ ಹೋಗಿ ಎಂದು ಹೊರಗಡೆ ನೂಕಿದರು. ಅಲ್ಲಿಂದ 50 ಕಿಮೀ ದೂರದ ಖಾಸಗಿ ದವಾಖಾನೆಯಲ್ಲಿ ಚಿಕಿತ್ಸೆಗೊಳಗಾದೆ. ಸಂಜೆ ಅಪಘಾತವಾದರೆ ಮದ್ಯರಾತ್ರಿ ಚಿಕಿತ್ಸೆ ಶುರುವಾಗಿತ್ತು.

ಫೋಟೋ ಕೃಪೆ : sinceindependence

ಪ್ರತಿಯೊಂದು ಜಿಲ್ಲೆ, ತಾಲೂಕು, ಹೋಬಳಿಯಲ್ಲಿ ಸರ್ಕಾರಿ ದವಾಖಾನೆಗಳಿವೆ. ಜಿಲ್ಲಾ ಮಟ್ಟದಲ್ಲಿ ಕೆಲವೊಂದು ಸೌಲಭ್ಯಗಳು ಸಿಗಬಹುದು, ಆದರೆ ತಾಲೂಕು ಮತ್ತು ಹೋಬಳಿಯಲ್ಲಂತು ಕುಂದು ಕೊರತೆಗಳ ದೊಡ್ಡ ಪಟ್ಟಿ ನೋಡಬಹುದು. ಹಳ್ಳಿ ಮತ್ತು ಹೋಬಳಿಗಳ ದವಾಖಾನೆಗಳು ಸದಾಕಾಲ ಮುಚ್ಚಿದ್ದೆ ಕಾಣುತ್ತದೆ. ದವಾಖಾನೆಯ ಮುಂದೆ ರೋಗಿಗಳಿಗಿಂತ ದನ ಕರುಗಳೆ ಹೆಚ್ಚಾಗಿ ಕಾಣುತ್ತವೆ. ಬೆಳಗ್ಗೆ ಬಂದು ಹಾಜರಿ ನೀಡುವ ವೈದ್ಯರು ಮತ್ತೆ ಯಾವಾಗ ದಾವಾಖಾನೆಗೆ ಕಾಲಿಡುತ್ತಾರೊ ಏನೊ?. ಇನ್ನು ತಾಲೂಕು ದವಾಖಾನೆಗಳ ಬಗ್ಗೆ ಹೇಳುವಂತಿಲ್ಲ. ಸ್ವಚ್ಚ ಭಾರತ ಅಭಿಯಾನವನ್ನು ದವಾಖಾನೆಯಲ್ಲೆ ನೋಡಬೇಕು. ಮೆಟ್ಟಿಲುಗಳ ಸಂದಿಯಲ್ಲಿ, ಗೋಡೆಗಳ ಸಂದಿಯಲ್ಲಿ ಕಾಣುವ ಎಲೆ ಅಡಿಕೆ ಗುಟುಕಾಗಳ ಅಲಂಕಾರ, ನಮ್ಮನ್ನು ಬಾ ಎಂದು ಕರೆಯುತ್ತವೆ. ಇದು ಕಟ್ಟಡಗಳ ವಿಶೇಷತೆಯ ಬಗ್ಗೆಯಾದರೆ, ನರ್ಸ್ ಹಾಗೂ ವೈದ್ಯರ ಬಗ್ಗೆ ಒಂದು ಪುಸ್ತಕವನ್ನೆ ಬರೆಯಬಹುದು. ಜೀವ ಉಳಿಸುವ ವೈದ್ಯರು ಆಸ್ಪತ್ರೆಗಿಂತ, ಮನೆಯಲ್ಲಿ ಹೆಚ್ಚಾಗಿ ಕಾಣುವರು. ಕೆಲ ವೈದ್ಯರಂತು ರೋಗಿಗಳ ಮೈ ಮುಟ್ಟಿದರೆ ತಮಗೆಲ್ಲಿ ರೋಗ ಬರುವುದೆಂಬ ಭೀತಿಯಲ್ಲಿ, ದೂರದಲ್ಲೆ ನಿಂತು ಔಷದಿ ಕೊಡುತ್ತಾರೆ. ಕೆಲವರಂತು ದಾವಾಖಾನೆಗೆ ಹಾಜರಿ ನೀಡಿ ಒಂದೆರಡು ತಾಸು ರೋಗಿಗಳನ್ನು ನೋಡುವಂತೆ ನಟಿಸಿ ತಮ್ಮ ಖಾಸಗಿ ದಾವಾಖಾನೆಗೆ ಹೋಗಿಬಿಡುತ್ತಾರೆ. ಇನ್ನು  ನರ್ಸ್ ಗಳ ಬಗ್ಗೆ ಹೇಳಬೇಕೆ!. ರೋಗಿಗಳ ಕಾಳಜಿ ವಹಿಸುವುದನ್ನು ಬಿಟ್ಟು, ಫೋನಿನಲ್ಲಿ ಅಥವಾ ಅವರದೆ ಲೋಕದಲ್ಲಿ ಮುಳುಗಿರುತ್ತಾರೆ. ಜೀವ ಉಳಿಸುವವರೆ ಇತರಹ ನಿರ್ಲಕ್ಷ ಮಾಡಿದರೆ ನಾವು ದೇವರ ಮೊರೆ ಹೋಗಲೆಬೇಕು. ಅದು ನಡೆದುಕೊಂಡೊ ಅಥವಾ ಮಲಗಿಕೊಂಡೊ ಎಂಬುದು ದವಾಖಾನೆಯ ಕೈಯಲ್ಲಿದೆ.

ಫೋಟೋ ಕೃಪೆ : indianexpress

ಸರ್ಕಾರಿ ದವಾಖಾನೆಗಳ ಉದ್ದಾರಕ್ಕಾಗಿ ನಮ್ಮ ಸರ್ಕಾರ ನೀರಂತೆ ಖರ್ಚು ಮಾಡುತ್ತಿದೆ. ಆ ದುಡ್ಡು ದಾವಾಖಾನೆಯ ಉದ್ದಾರಕ್ಕೊ ಅಥವಾ ಕೆಲವು ಸರ್ಕಾರಿ ನೌಕರರ ಮನೆ ಉದ್ದಾರಕ್ಕೊ ಎಂಬುದು ನನ್ನ ಪ್ರಶ್ನೆ. ಸರ್ಕಾರದ ಕೆಲಸ ದೇವರ ಕೆಲಸ ಎಂದು ಹೇಳುವ ಅವರು ಅದೆ ಸರ್ಕಾರದ ದುಡ್ಡನ್ನು ಮನೆಯ ಉದ್ದಾರಕ್ಕೆ ಜೇಬಲ್ಲಿ ತುಂಬಿಸಿಕೊಳ್ಳುತ್ತಿದ್ದಾರೆ. ಜೀವ ಉಳಿಸುವವರೆ ಜೀವ ತಗೆಯಲು ನಿಂತರೆ ಏನು ಮಾಡಬೇಕು. ಸಿರಿವಂತರು ಖಾಸಗಿ ಆಸ್ಪತ್ರೆಯ ದಾರಿ ಹಿಡಿಯಬಹುದು, ಆದರೆ ಒಂದು ಹೊತ್ತಿನ ಊಟಕ್ಕೆ ದಿನವಿಡಿ ದುಡಿಯುವ ಬಡವರ ಕಷ್ಟವನ್ನು ಯಾರು ಕೇಳುತ್ತಾರೆ?.

ಬಡವನಿಗೆ ವಾರದಾನವಾಗಬೇಕಿದ್ದ ಸರ್ಕಾರಿ ದವಾಖಾನೆಗಳು ಈಗ ಬಡವನಿಗೆ ಕುತ್ತಾಗಿದೆ ಎಂದರೆ ಸಂದೇಹವಿಲ್ಲ. ನಮ್ಮ ಪ್ರಾಣವನ್ನು ಉಳಿಸಬೇಕಾದ ಆಸ್ಪತ್ರೆಯಲ್ಲಿ ಕುಂದು ಕೊರತೆಗಳು ಎದ್ದು ಕಾಣುತ್ತಿವೆ. ಯಾವ ಉದ್ದೇಶಕ್ಕಾಗಿ ಸರ್ಕಾರಿ ದವಾಖಾನೆಗಳು ನಿರ್ಮಾಣವಾದವೊ ಆ ಉದ್ದೇಶ ಮಾಯವಾಗಿ ತುಂಬಾ ವರ್ಷಗಳು ಕಳೆದಿವೆ. ಈ ನಡುವೆ ಎಷ್ಟು ಜೀವ ಮರೆಯಾದವೊ? ಎಷ್ಟು ಮನೆದೀಪ ಆರಿಹೋಗಿ ಬೀದಿಗೆ ಬಂದವೊ? ನಾ ಅರಿಯೆ. ಈಗಲಾದರೂ ನಮ್ಮ ಸರ್ಕಾರ ಇದರ ಬಗ್ಗೆ ಪರಿಶೀಲಿಸಬೇಕೆಂಬುದು ನನ್ನ ವಿನಂತಿ..

ಇಂತಿ ನಿಮ್ಮ ಪ್ರೀತಿಯ


  • ವಿಕಾಸ್. ಫ್. ಮಡಿವಾಳರ, ಹಾನಗಲ್.

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW