ಹಣ್ಣು ಹಣ್ಣಾದ ತಾಯಿ ಒಬ್ಬರು ಈ ವಯಸ್ಸಿನಲ್ಲೂ ದುಡಿಯುತ್ತಿದ್ದರು. ಅದನ್ನು ಕಂಡು, ವಿಚಾರಿಸಿದಾಗ ಅವರು ಹೇಳಿದ ಮಾತುಗಳನ್ನು ಮಥಿಸುತ್ತಿದ್ದಾಗ ವಸಂತ ಗಣೇಶ್ ಅವರ ಮನದಲ್ಲಿ ಹುಟ್ಟಿದ ಕವನ, ತಪ್ಪದೆ ಮುಂದೆ ಓದಿ…
ಬಾಲ್ಯದಲಿ ಪಿತನಿಂದ ರಕ್ಷಣೆ
ಯೌವನದಿ ಪತಿಯಿಂದ ರಕ್ಷಣೆ
ಮುಪ್ಪಿನಲಿ ಸುತನಿಂದ ರಕ್ಷಣೆ
ತ್ರಿಕಾಲಕೂ ಇರಬೇಕಂತೆ ರಕ್ಷಕನೊಬ್ಬ
ಹೀಗೆಂದವನೂ ರಕ್ಷಕರ ಪಡೆಯವನೇ ಒಬ್ಬ
ಮದಿರೆ ಮಾನಿನಿ ಜೂಜಾಟವೆಂಬೋ
ಲೋಲುಪ್ತತೆಯಲಿ ಮೈಮರೆತ ಆತ
ಪಿತನೆನಿಸಿದ್ದು ಹುಟ್ಟಿಗೆ ಕಾರಣ ಎಂದಷ್ಟೇ
ಹೊತ್ತೊತ್ತಿಗೆ ಹಿಟ್ಟು ಬಟ್ಟೆ ಎರಡಕ್ಷರವನು
ಕಲಿಸದೆ ಧಾರೆ ಎರೆದಿದ್ದು ತನ್ನಂತ ಮತ್ತೊಬ್ಬಗೆ
ರಕ್ಷಕನ ಕೈ ಬದಲಾಯ್ತು ಬೇರೇನೂ ಇಲ್ಲ
ದಿನವಿಡೀ ದುಡಿತ ಮೇಲಿಷ್ಟು ಹೊಡೆತ
ಪತಿಯೆಂಬ ಗತ್ತಿನಲಿ ಪ್ರತಿ ರಾತ್ರಿಯೂ
ನಡೆಸಿದ ದಾಳಿಗೆ ದೇಹ ಜರ್ಝರಿತ
ಪುತ್ರನ ಮೋಹದಲಿ ಸವೆದಿತ್ತು ಬದುಕು
ಎಳೆಗರು ಎತ್ತಾಯ್ತು, ಅಜ್ಜ ಅಪ್ಪನ ಪ್ರತಿರೂಪವಾಯ್ತು
ರಕ್ಷಿಸುವನೆಂಬ ಆಸೆ ಮಣ್ಣುಪಾಲಾಯ್ತು
ದುಡಿಯಲಾಗದ ದೇಹ, ಭಾರದ ಮಾತುಗಳಿಗೆ
ಮನ ಮೂಕವಾಯ್ತು
ಮೂರು ಕಾಲಕೂ ಸುಖವೆಂಬ ಪದವೇ
ಮರೀಚಿಕೆಯಾಯ್ತು
ಹೊತ್ತು ಹೊತ್ತಿಗೆ ತುತ್ತು ಇಡಲಾರದ ಪಿತ
ಕಾಮುಕರಿಂದ ರಕ್ಷಣೆಯ ನೀಡಲಾರದ ಪತಿ
ಮನಕೆ ಮುದ ನೀಡಲಾರದ ಪುತ್ರ…
ರಕ್ಷಣೆ ಎಂದರೆ ಅರ್ಥ ಇದೇ ಏನು?
ಸ್ವಾತಂತ್ರ್ಯದ ಅರ್ಥ ತಿಳಿಯಲು ಬಿಡಲಿಲ್ಲ…
ರಕ್ಷಣೆಯ ಹೊಣೆ ಒಬ್ಬನೂ ಹೊರಲಿಲ್ಲ
ಬದಲಾಯಿಸಬೇಕಾದ್ದು ಏನೀಗ
ಮನುಸ್ಮೃತಿಯ ನುಡಿಯೋ?
ಪಿತ ಪತಿ ಸುತನೋ?…
- ವಸಂತ ಗಣೇಶ್