ಕವಳ ತಿನ್ನುವ ಮಜವೇ ಬೇರೆ. ಮನೆಯ ಮುಂದೆ ದಾರಿಯ ಮೇಲೆ ಹೋಗುವವರನ್ನು ಕರೆದು “ಬಾ ಒಂದು ಕವಳ ಹಾಕಿಕೊಂಡು ಹೋಗು” ಎಂದು ಆಹ್ವಾನಿಸುವುದು ಮಲೆನಾಡಿಗರ ಆತಿಥ್ಯದ ಸಂಕೇತ. – ಬಾಣಾವರ ಶಿವಕುಮಾರ್, ಮುಂದೆ ಓದಿ…
ಮಲೆನಾಡು ಆದರಾತಿಥ್ಯಕ್ಕೆ ಹೆಸರುವಾಸಿಯಾಗಿದೆ. ಆದರಾತಿಥ್ಯದ ಒಂದು ಪ್ರಮುಖ ಪದ್ದತಿಯೆಂದರೆ ತಾಂಬೂಲ ಸೇವನೆ. ನಾವು ಅದಕ್ಕೆ ಕವಳ ಹಾಕುವುದು, ಎಲೆಯಡಿಕೆ ಹಾಕುವುದು ಎಂದೂ ಕರೆಯುತ್ತೇವೆ.
ಫೋಟೋ ಕೃಪೆ : google
ಹಳ್ಳಿಗಳ ಹವ್ಯಕರ ಮನೆಗಳಲ್ಲಿ ಜಗಲಿಯ ಕೂಡ್ರುವ ಭೈಠಕದಲ್ಲಿ ಒಂದು ಕವಳದ ಬಟ್ಟಲು ಅಥವಾ ತಬಕ,ಇಲ್ಲವೇ ಕವಳದ ಸಂಚಿಯೊಂದು ಇರಲೇಬೇಕು. ಬಂದವರು ಚಹ, ಕಾಫಿ ಸೇವನೆ ಅಥವಾ ಊಟದ ನಂತರ ಒಂದು ಕವಳ ಹಾಕಿ ಉಗಿಯಲೇಬೇಕು. ಕವಳದ ಬಟ್ಟಲು ಗಳಲ್ಲಿ ವೀಳ್ಯದೆಲೆ, ಸಿಗರುಬೆಟ್ಟೆ, ಸುಣ್ಣದ ಕೈ ಅಥವಾ ಸುಣ್ಣದ ಡಬ್ಬ, ಸುಣ್ಣದ ಅಂಡೆಯಾದರೆ ಒಂದು ಕಡೆ ಸುಣ್ಣ ಇನ್ನೊಂದು ಕಡೆ ತಂಬಾಕು ಇರುವುದು.ಇನ್ನು ಸಿಹಿ ಗವಳ ಹಾಕುವವರಿಗಾಗಿ ಕೊಬ್ಬರಿ, ಕಾಯಿ ತುಣುಕುಗಳೂ ಸಹ ಇರುವವು. ಹೆಂಗಸರಿಗಾಗಿ ಬೆಳೆ ಎಲೆಗಳೂ ಸಹ ಇರುವುದು.ಕವಳ ಹಾಕುವವರು ಒಂದು ಎಲೆಯನ್ನು ಎತ್ತಿ ತೊಟ್ಟು ಮುರಿದು, ಎಲೆಯ ತುದಿ ಚಿವುಟಿ, ಎಲೆಯ ಬೆನ್ನಿನ ತಿಳುವಾದ ಸಿಪ್ಪೆ ಸುಲಿದು ಬೆನ್ನಿಗೆ ಹದವಾಗಿ ಸುಣ್ಣ ಬಳಿದು ಅದರ ಮೇಲೆ ಕೊಚ್ಚಿದ ಅಡಿಕೆ ತುಂಡುಗಳನ್ನಿಟ್ಟು, ತಂಬಾಕು ಪ್ರಿಯರು ಒಂದು ಚೂರು ತಂಬಾಕು ಹಾಕಿದರೆ, ತಂಬಾಕು ಒಲ್ಲದವರು ಕೊಬ್ಬರಿತುರಿ ಅಥವಾ ಕಾಯಿಚೂರು ಹಾಕಿ ಮಡಚಿ ಬಾಯೊಳಗಿಟ್ಟು ಜಗಿಯಲು ಪ್ರಾರಂಭ ಮಾಡಿದರೆ ಅರ್ಧಗಂಟೆ ಮೌನಾಚರಣೆ ಮಾಡಲೇಬೇಕು. ಕವಳ ಹಾಕಿ ಮಾತನಾಡುವವರೂ ಇದ್ದಾರೆ. ಆದರೆ ಅಭ್ಯಾಸವಿಲ್ಲದವರು ಬಾಯಿತೆರೆದರೆ ಮೈಯೆಲ್ಲ ಕೆಂಪು ಕೆಂಪು ರಾಡಿ ! ಅರ್ಧಗಂಟೆ ಜಗಿದು ಉಗುಳಿದಾಗ ಬಾಯೆಲ್ಲ ರಂಗು ರಂಗು ! ರಸ ನುಂಗಿದರೆ ಅಭ್ಯಾಸವಿಲ್ಲದವರಿಗೆ ಬವಳಿ ಬರುವ ಸಾಧ್ಯತೆ ಇದೆ. ಅಂತೂ ಕವಳದ ಮಜವೇ ಬೇರೆ. ಮನೆಯ ಮುಂದೆ ದಾರಿಯ ಮೇಲೆ ಹೋಗುವವರನ್ನು ಕರೆದು “ಬಾ ಒಂದು ಕವಳ ಹಾಕಿಕೊಂಡು ಹೋಗು” ಎಂದು ಆಹ್ವಾನಿಸುವುದು ಮಲೆನಾಡಿಗರ ಆತಿಥ್ಯದ ಸಂಕೇತ.
ಫೋಟೋ ಕೃಪೆ : google
ಕೆಲಸದವರು ಕೆಲಸ ಮುಗಿಸಿ ಮನೆಗೆ ಹೋಗು ವಾಗ ಕವಳಕ್ಕೆ ಎರಡು ಅಡಿಕೆ ಕೊಡುವುದು ಹಳ್ಳಿಗರ ಪದ್ದತಿ. ಇದಕ್ಕೆ ತಾಂಬೂಲ ಸೇವನೆ ಎಂಬ ಗೌರವಯುತ ಹೆಸರಿದೆ. ಶಾಸ್ತ್ರದ ಪ್ರಕಾರ ಊಟದ ನಂತರ ತಾಂಬೂಲ ಸೇವನೆ ಆರೋಗ್ಯಕರ ಎನ್ನುವರು. ಇದು ಬಾಯಿಶುದ್ಧ ಮಾಡುವುದಲ್ಲದೇ ಜೀರ್ಣಕಾರಿ ಯೂ ಹೌದು ಎನ್ನುತ್ತಾರೆ.ಹಾಗಂತ ಬ್ರಹ್ಮಚಾರಿಗಳಿಗೆ ತಾಂಬೂಲ ಸೇವನೆಯ ಅಧಿಕಾರವಿಲ್ಲ. ಮದುವೆಯ ಸಂದರ್ಭದಲ್ಲಿ ಗ್ರಹಸ್ಥಾಶ್ರಮಕ್ಕೆ ಕಾಲಿಡುವ ವೇಳೆಯಲ್ಲಿ ವಧು ತಾಂಬೂಲ ತಯಾರಿಸಿ ವರನಿಗೆ ಕೊಡುವ ಒಂದು ಸಂಪ್ರದಾಯವಿದೆ. ಹಾಗೆಯೇ ವರನು ಎಲೆ ಕೌಳಿಗೆ ಮಾಡಿ ತೋರಿಸಬೇಕು. ಗ್ರಹಸ್ಥಾಶ್ರಮದ ಸ್ವೀಕಾರದ ನಂತರ ಎಲೆಯಡಿಕೆ ಹಾಕುವ ಅಧಿಕಾರ ಬರುವುದು. ಎಲೆಯಡಿಕೆಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಮಹತ್ವವಿದೆ. ಅದಕ್ಕೆ ಎಲೆಪಟ್ಟಿ ಎನ್ನುವರು. ಎರಡು ವೀಳ್ಯದೆಲೆಯ ಮೇಲೆ ಒಂದು ಇಡಿಯಡಿಕೆ ಇಡುವುದು ವಾಡಿಕೆ. ದಕ್ಷಿಣೆ ನೀಡುವಾಗ ಎಲೆಪಟ್ಟಿಯ ಮೇಲೆ ಹಣವಿಟ್ಟು ನೀರು ಬಿಟ್ಟ ಬಳಿಕವೇ ದಾನ ಮಾಡುವುದು. ಎಲೆ ಅಡಿಕೆಗೆ ವೀಳ್ಯವೆಂದು ಹೆಸರು.
ವೀಳ್ಯ ಕೊಡುವುದು ಎಂದರೆ ಯಾವುದಾದರು ಕೆಲಸ ಪ್ರಾರಂಭಕ್ಕೆ ಗುತ್ತಿಗೆ ಕೊಟ್ಟಂತೆ. ವೀಳ್ಯ ಸ್ವೀಕರಿಸಿದವರು ಕೆಲಸ ಮಾಡಲು ಮಾತು ಕೊಟ್ಟಂತೆ. ಅದರಿಂದ ತಪ್ಪಕೊಳ್ಳಲಾಗದು. ಒಂದು ರೀತಿಯಲ್ಲಿ ಇದು ಧಾರ್ಮಿಕ ಕಟ್ಟಳೆ ಇದ್ದಂತೆ. ಹೆಣ್ಣು ಗಂಡು ಮದುವೆಗೆ ಮೊದಲು ಮಾಡಿಕೊಳ್ಳುವ ಒಪ್ಪಂದಕ್ಕೆ ನಿಶ್ಚಯ ತಾಂಬೂಲ ಎಂದು ಹೆಸರು. ಅದನ್ನು ಬದಲಾಯಿಸಿ ಕೊಂಡ ಮೇಲೆ ಮದುವೆ ಮುರಿಯಲಾಗದು. ಹೀಗೆ ತಾಂಬೂಲ ಎಂದು ಕರೆಸಿಕೊಳ್ಳುವ ಎಲೆಯಡಿಕೆಗೆ ನಮ್ಮ ಜನ ಜೀವನದಲ್ಲಿ ಒಂದು ಗೌರವಯುತ ಸ್ಥಾನ ಪಡೆದಿದೆ.
- ಬಾಣಾವರ ಶಿವಕುಮಾರ್ (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್, ಲೇಖಕರು)