ತನ್ನ ತಳಮಳವ ನೀಗಿ ಕೊಳ್ಳಲಾಗದೆ ತನ್ನನ್ನೇ ನೀಗಿಕೊಂಡ ಗೆಳೆಯ ಹಿರಿಯೂರು ಎನ್ ಗಣೇಶ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲನಾಗಿದ್ದ ಗೆಳೆಯ ಎನ್. ಗಣೇಶ ತನ್ನ ತಳಮಳವ ನೀಗಿಕೊಳ್ಳಲಾಗದೆ ತನ್ನನ್ನೇ ಅಕಾಲಿಕವಾಗಿ ನೀಗಿಕೊಂಡಿದ್ದಾರೆ.
54 ರ ಮಧ್ಯವಯಸ್ಕ ಗಣೇಶ ನನಗೆ ಆತ್ಮೀಯ ಗೆಳೆಯನಾಗಿ ಕಳೆದ ಇಪ್ಪತ್ತೈದು ವರ್ಷಗಳ ಒಡನಾಟದಲ್ಲಿ ಸಾಹಿತ್ಯ ಅಧ್ಯಯನ ಅಧ್ಯಾಪನ ಸಂಶೋಧನೆಯ ನೆಲೆಗಳ ಅನೇಕ ನೆನಪುಗಳನ್ನು ನನ್ನಲ್ಲಿ ಉಳಿಸಿಹೋಗಿದ್ದಾರೆ. ಗಣೇಶನ ಪೂರ್ವಿಕರು ತಮಿಳುನಾಡಿನಿಂದ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಡ್ಯಾಂ ನಿರ್ಮಿಸಲು ಕಾರ್ಮಿಕರಾಗಿ ಹಿರಿಯೂರಿಗೆ ಬಂದು ನೆಲೆಸಿದರು. ಮಾರಿಕಣಿವೆ ಅಣೆಕಟ್ಟು ಕಟ್ಟಲು ಬಂದ ತಮಿಳು ಭಾಷಿಕ ಕೂಲಿ ಕಾರ್ಮಿಕರು, ಅಣೆಕಟ್ಟಿನ ನಾಲೆಗಳು ಎಲ್ಲೆಲ್ಲಿ ಹರಿಯುತ್ತವೆಂಬ ಜಲಾನಯನ ಪ್ರದೇಶದ ಮಾಹಿತಿಯನ್ನು ಮೊದಲೇ ಚೆನ್ನಾಗಿ ಅರಿತಿದ್ದ ಕಾರಣದಿಂದ ಅಂತಹ ನೀರುಣಿಕೆಯ ಜಮೀನು ಹಿಡಿದು, ಸರ್ಕಾರದಿಂದ ಭೂ-ಮಂಜೂರಾತಿ ಪಡೆದು ಸಾಗು ಮಾಡುತ್ತಾ ಇಲ್ಲಿಯೇ ನೆಲೆಸಿದರು. ಗಣೇಶ್ ಅವರ ಪೂರ್ವಿಕರ ಕುಟುಂಬವು ಕೂಡಾ ನೀರಾವರಿ ಭೂಹಿಡುವಳಿ ಹೊಂದಿ ಆರ್ಥಿಕವಾಗಿ ಸಬಲ ಕುಟುಂಬವಾಗಿ ಇಲ್ಲಿಯೇ ನೆಲೆ ನಿಂತಿತು. ಹಿರಿಯೂರಿನಲ್ಲಿ ಸ್ವಂತದ ಮನೆ ಮತ್ತು ಹಿರಿಯೂರಿನ ಹೊರವಲಯದಲ್ಲಿ ತೆಂಗಿನ ತೋಟ ಹೊಂದಿ, ಉಪನ್ಯಾಸಕ ವೃತಿಯಿಂದ ಕೈತುಂಬಾ ಸಂಬಳ ಪಡೆಯುತ್ತಿದ್ದ ಗಣೇಶ ಆರ್ಥಿಕವಾಗಿ ಅತ್ಯಂತ ಸಬಲರಾಗಿದ್ದರು. ರೈತಾಪಿ ಕುಟುಂಬದ ಗಣೇಶ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡು ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕರ ಹುದ್ದೆಗೆ ಸೇರಿ ಉತ್ತಮ ಉಪನ್ಯಾಸಕನಾಗಿ ಹೆಸರು ಪಡೆದಿದ್ದರು. ಮೊದಲಿನಿಂದಲೂ ಸಾಹಿತ್ಯಾಸಕ್ತಿ ಬೆಳೆಸಿಕೊಂಡಿದ್ದ ಗಣೇಶ, ನನ್ನನ್ನು ಭೇಟಿಯಾದಾಗಲೆಲ್ಲಾ ನನ್ನೊಂದಿಗೆ ಕನ್ನಡ ಇಂಗ್ಲಿಷ್ ತಮಿಳು ಸಾಹಿತ್ಯ ಕೃತಿಗಳನ್ನು ಕುರಿತು ಚರ್ಚಿಸುತ್ತಿದ್ದರು. 2000 ನೇ ಇಸವಿಯಲ್ಲಿ ‘ಆಸಾದಿ’ ಎಂಬ ನನ್ನ ಮೊದಲನೇ ಖಂಡಕಾವ್ಯ ಕೃತಿಯ ಬಿಡುಗಡೆ ಕಾರ್ಯಕ್ರಮಕ್ಕಾಗಿ ಹಿರಿಯೂರಿನಿಂದ ತುಮಕೂರಿಗೆ ಬಂದಿದ್ದರು. ನನ್ನ ಈ ಮೊದಲನೇ ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ತನಗೇ ಸಿಕ್ಕಿದಷ್ಟು ಸಂಭ್ರಮಿಸಿದ್ದರು ಗಣೇಶ್.
ಸಾಹಿತ್ಯದ ನಿತ್ಯಾಭ್ಯಾಸಿಯಾಗಿದ್ದ ಗಣೇಶ್, ಸಾಹಿತ್ಯವನ್ನು ರೂಪಿಸುವ ಪ್ರಯತ್ನಕ್ಕೆ ಎಂದಿಗೂ ತೊಡಗಲಿಲ್ಲ. ಆದರೆ ಇತ್ತೀಚೆಗೆ ಕಳೆದ ಏಪ್ರಿಲ್ ತಿಂಗಳ ಕೊನೆಯಲ್ಲಿ ನನಗೆ ಫೋನಾಯಿಸಿದ ಗಣೇಶ್, ಕೆಲವು ಆಯ್ದ ತಮಿಳು ಲೇಖಕರ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸುವ ಪ್ರಯತ್ನದಲ್ಲಿ ತನ್ನನ್ನು ತೊಡಗಿಸಿಕೊಂಡಿರುವುದಾಗಿ ಹೆಮ್ಮೆಯಿಂದ ಮಾತಾಡಿದರು. ಆ ಲೇಖನಗಳು ತಮಿಳುನಾಡಿನ ಕೊಂಗುವೆಲ್ಲಾಳ ಗೌಂಡರ್- ತೆನ್ಯಾಸಿ ಗೌಂಡರ್ ಸಮುದಾಯದ ಪ್ರಾಚೀನ ಇತಿಹಾಸ ಮತ್ತು ಸಾಹಿತ್ಯ ಕುರಿತಾದವುಗಳೆಂದು ಹೇಳಿದರು. ಮಾರನೇ ವಾರವೇ ತಾನು ಈವರೆಗೆ ಅನುವಾದಿಸಿದ್ದ ಕೆಲವು ಲೇಖನಗಳನ್ನು ಡಿಟಿಪಿ ಮಾಡಿಸಿ, ಕೃತಿಯ ಅಪೂರ್ಣ ಪ್ರತಿಯನ್ನು ನನಗೆ ಅಂಚೆಯ ಮೂಲಕ ಕಳಿಸಿಕೊಟ್ಟರು. ಆ ಕೃತಿಗೊಂದು ಆಕರ್ಷಕ ಶೀರ್ಷಿಕೆಯನ್ನು ಸೂಚಿಸಬೇಕೆಂತಲೂ, ನಾನೇ ಮುನ್ನುಡಿ ಬರೆದುಕೊಡಬೇಕೆಂತಲೂ ಪ್ರೀತಿಯಿಂದ ಕೇಳಿಕೊಂಡಿದ್ದರು.
ಪ್ರಾಂಶುಪಾಲರಾಗಿ ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಜವಗೊಂಡನಹಳ್ಳಿ ಸರ್ಕಾರಿ ಪಿಯು ಕಾಲೇಜಿನ ಕಾರ್ಯಭಾರದ ಒತ್ತಡದಿಂದ ಮತ್ತು ಕೆಲವು ವೈಯುಕ್ತಿಕ ಸಮಸ್ಯೆಗಳಿಂದ ಗಣೇಶ್ ತುಂಬಾ ನಲುಗಿದ್ದರಂತೆ. ಕೆಲವು ದಿನಗಳಿಂದ ಮನೋ ಖಿನ್ನತೆಗೆ ಒಳಗಾಗಿ ತಳಮಳಿಸುತ್ತಿದ್ದ ಗಣೇಶ್, ತನ್ನ ತಳಮಳವನ್ನು ನೀಗಿಕೊಳ್ಳುವ ಬದಲು, ನಿನ್ನೆ 07-06-2023 ರ ಬುಧವಾರ ರಾತ್ರಿ ತನ್ನನ್ನೇ ನೀಗಿಕೊಂಡಿದ್ದಾರೆ.
*****
ಗಣೇಶ್ ತಮಿಳಿನಿಂದ ಕನ್ನಡಕ್ಕೆ ಅನುವಾದಿಸುತ್ತಿದ್ದ ಲೇಖನಗಳು ಮುಖ್ಯವಾಗಿ ಕೊಂಗುನಾಡಿನ ಗಡಿ, ಕೊಂಗು ನಾಡಿನ ಮಕ್ಕಳು, ಕೊಂಗುವೆಲ್ಲಾಳ ಗೌಂಡರ್ ಗಳ ಐತಿಹಾಸಿಕ ಪ್ರಾಮುಖ್ಯತೆ, ತೊಳ್ಕಾಪಿಯಮ್, ಸಂಗಂ ಸಾಹಿತ್ಯದಲ್ಲಿ ವೇಲಿರ್ ಗಳ ಗುರುತು, ಕೊಂಗುನಾಡಿನ ಪ್ರಮುಖ ಗಿರಿಧಾಮಗಳು ಮತ್ತು ಚಾರಿತ್ರಿಕ ಸ್ಥಳಗಳು, ವೆಲ್ಲಾಳ ಗೌಂಡರುಗಳ ಕುಲಕೂಟಗಳು ಮತ್ತು ಆರಾಧ್ಯ ದೈವಗಳು, ವೆಲ್ಲಾಳ ಗೌಂಡರ್ ಸಮುದಾಯದ ಅರಸು ವಂಶಗಳು ಮುಂತಾದ ವಿಸ್ತಾರವಾದ ಹರಹನ್ನು ಹೊಂದಿವೆ.
ಗಣೇಶ್ ಅನುವಾದಿಸಿರುವ ಒಂದು ಕವಿತೆಯನ್ನು ನಿಮ್ಮ ಓದಿಗಾಗಿ ಹಾಗೂ ಗಣೇಶ್ ಅವರಿಗೆ ಸಲ್ಲಿಸುವ ಅಕ್ಷರ ನಮನಕ್ಕಾಗಿ ಹಂಚಿಕೊಳ್ಳುತ್ತಿದ್ದೇನೆ.
ಒಪ್ಪೇರಿ ಪಾಡು :
(ಸತ್ತವರ ಶೋಕಗೀತೆ)
ವಳತ್ತು ಸರೀಚೀಕಿ, ತ್ಯಾಂಬಳ್ ಪಡಂದದು,
ವಳತ್ತು ಸರೀಚೀಕಿ, ವಳತ್ತು ಪಟ್ಟ ತಾಯಾರ‌್ಕು,
ತ್ಯಾಂಬಿಳ್ ಪಡುಂದುದೆನ್ನ, ಸೆರಸೀಲಿಯ ಎರಂಗುಚಿನ್ನು
ವಡಕತ್ತಿ ಡಾಕ್ಟರು, ವಡಮಧುರೆ ರೇಡಿಯಾಳೇ
ವಲಪಡುತ್ತಿ ಕೂಟ್ಟಿವಂದು, ವಾಸಲಿಯೇ ಕೋರವೆಚ್ಚು
ತ್ಯಾಂಬೆಳುಕ್ಕು ತೇರುಂಜೂಸಿ, ಮಾತರಿಯುಂ
ತ್ಯಾಂಬೆಳುಕ್ಕು ಪೋಡುಮೆನ್ನ
ತ್ಯಾಂಬೆಳುಕ್ಕೆ ಪೋಟಾಳು
ತ್ಯಾಂಬೆಳುಕ್ಕು ಮರೆಯದನ್ನ
ಚೇರಾಸುಟ್ಟುತೀರಾದು
ಇಂಜಿ ಮಳೆ ಪೋಯಿ ನಾಂಗೆ ಇರುಕ್ಕುವರಂ ಕೇಟಾಳೂ
ಇಂಜಿ ಮಳೆ ಸೋಸಿಗಾರೆ
ಇರುಕ್ಕ ವರಮಿಲ್ಲೆಯಮ್ಮ
ಏಳುತ್ತೇ ಕಮ್ಮಿಯೆನ್ನಾಂ
ಕನ್ನಡಾನುವಾದ :
ಬೆಳೆಸಿ ದೊಡ್ಡವರನ್ನಾಗಿಸಿದವನು ಹೆಣವಾಗಿ ಮಲಗಿದ್ದಾನೆ
ಬೆಳೆಸಿ ದೊಡ್ಡವರಾಗಿಸಿದವನು ಬೆಳೆಸಿದ ಅಪ್ಪ ಅಮ್ಮನಿಗೆ ಹೆಣವಾಗಿದ್ದಾನೆ
ಚಿಕ್ಕ ವಯಸ್ಸಿನಲ್ಲೇ ಹೆಣವಾಗಿದ್ದಾನೆ.
ಉತ್ತರದಿಂದ ಡಾಕ್ಟರನ್ನು, ದಕ್ಷಿಣ ಮಧುರೈ ಪಂಡಿತರನ್ನು
ಬಲವಂತದಿಂದ ಕರೆಸಿ, ಅಂಗಳದಲ್ಲೇ ಕೂರಿಸಿ,
ಅವರಿಗೆ ತಿಳಿದ ಸೂಜಿ ಹಾಕಿಸಿ ಮಾತ್ರೆ ಕೊಡಿಸಿ,
ಆದ್ರೂ ಹೆಣ ಏಳಲಿಲ್ಲ, ರೋಗ ತೀರಲಿಲ್ಲ.
ಇಂತು ಮಲೆಗೋಗಿ ನಾವು ಬದುಕಲು ವರ ಕೇಳಿದರೂ,
ಇಂತು ಮಳೆ ಜ್ಯೋತಿಷಿ ಜ್ಯೋತಿಷ್ಯ ನುಡಿದರೂ
ಬದುಕಲು ನಮಗೆ ವರವಿಲ್ಲವಮ್ಮ
ಹಣೆ ಬರಹವೇ ಕೈಕೊಟ್ಟ ಬಳಿಕ
ರೋಗಬಿದ್ದು ಮಲಗಿದವನು
ಎನಿತು ಬೆಟ್ಟ ಅಡ್ಡ ಬಂದರೂ ನಿಲ್ಲುವನೇ ?
——–
ಹೋಗಿ ಬನ್ನಿ ಗಣೇಶ್… ನಮಸ್ಕಾರ
ಪ್ರೀತಿಯಿಂದ,
- ಡಾ.ವಡ್ಡಗೆರೆ ನಾಗರಾಜಯ್ಯ