ಅದೇ ಬಲಗೆನ್ನೆಯ ಮೇಲಿನ ಕಪ್ಪು ಮಚ್ಛೆ, ಅದೇ ನಗು ಮುಖ, ಅದೇ ಗಾಂಭೀರ್ಯ ಯಾವವೂ ನಾಗಾಭರಣರಲ್ಲಿ ಬದಲಾಗಿಲ್ಲ. ಬದಲಾಗಿದ್ದರೇ ಅವರ ವಯಸ್ಸಿನ ಸಂಖ್ಯೆಗಳು. ನಾಗಾಭರಣ ಅವರ ವಯಸ್ಸು ೬೨ ಆಗಲಿ…೭೨ ಆಗಲಿ… ಅವರಲ್ಲಿನ ಕ್ರಿಯಾಶೀಲತೆ, ಉತ್ಸಾಹ ಯಾವುದೂ ಮಾಸುವುದಿಲ್ಲ.
ನಾಗಾಭರಣವರು ಈಗ ತಾನೇ ೬೨ರ ಹರೆಯಕ್ಕೆ ಕಾಲಿಟ್ಟಿದ್ದಾರೆ. ಅವರು ನಿರ್ದೇಶಿಸಿದ ಎಷ್ಟೋ ಸಿನಿಮಾಗಳು ಬಿಟ್ಟ ಬಾಣದಂತೆ ಚಿತ್ರರಸಿಕರ ಹೃದಯದಲ್ಲಿ ನೆಲೆಯೂರಿವೆ. ಅವರು ಚಿತ್ರರಂಗಕ್ಕೆ ಬಂದು ಸಾಕಷ್ಟು ವರ್ಷಗಳೇ ಆಗಿವೆ. ಅವರು ಪಡೆದ ಅನುಭವಗಳ ಬುತ್ತಿ ದೊಡ್ಡದು. ನಾಗಭರಣ ಅವರ ಹೆಸರೇ ಹೇಳುವಂತೆ ಅವರ ಕೆಲಸಗಳು ಸಿನಿಮಾ ಜಗತ್ತಿನ ಆಭರಣಗಳೇ.
(ನಾಗಭರಣ ನಿರ್ದೇಶನದ ‘ಚಿನ್ನಾರಿ ಮುತ್ತಾ’ ಸಿನಿಮಾದ ದೃಶ್ಯ)
ಅವರು ನಿರ್ದೇಶಿಸಿದ ೩೪ ಸಿನಿಮಾಗಳಲ್ಲಿ ೧೯ ಪ್ರಮುಖ ಸಿನಿಮಾಗಳು ಮತ್ತು ನಾಲ್ಕು ಮಕ್ಕಳ ಸಿನಿಮಾಗಳಿಗೆ ರಾಜ್ಯ ಹಾಗು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನುತಂದುಕೊಟ್ಟಿವೆ. ಅದರಲ್ಲಿಯು ಅವರ ನಿರ್ದೇಶನದ ಮೊದಲ ಸಿನಿಮಾ ‘ಗ್ರಹಣ’ಕ್ಕಾಗಿ ರಾಷ್ಟ್ರಪ್ರಶಸ್ತಿ ಬಂದಿದ್ದು,ಅವರಲ್ಲಿನ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿತು.ಅನಂತರ ದಿನಗಳಲ್ಲಿ ನಾಗಾಭರಣ ನಿರ್ದೇಶಿಸಿದ ಬಹುತೇಕ ಸಿನಿಮಾಗಳು ಪ್ರಶಸ್ತಿಗೆ ಪಾತ್ರವಾದವು ಮತ್ತು ಅವರನ್ನು ಪ್ರಶಸ್ತಿಗಳ ನಿರ್ದೇಶಕ ಎನ್ನುವ ಮಟ್ಟಿಗೆ ಜನ ಅವರನ್ನು ನೋಡಲು ಶುರು ಮಾಡಿದರು. ನಾಗಾಭರಣ ಅವರು ಪ್ರಶಸ್ತಿಗಳಿಗಾಗಿ ಸಿನಿಮಾ ಮಾಡಿದವರಲ್ಲ. ಬದಲಾಗಿ ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಕತೆ, ಅತ್ಯುತ್ತಮ ಸಿನಿಮಾ ಎಂದೆಲ್ಲ ನಾಗಾಭರಣ ಅವರನ್ನು ಪ್ರಶಸ್ತಿಗಳೇ ಹುಡುಕಿಕೊಂಡು ಬಂದವು.
‘ಚಿನ್ನಾರಿ ಮುತ್ತಾ’ ಮಕ್ಕಳ ಸಿನಿಮಾದಿಂದ ರಾಜ್ ಕುಮಾರ್ ಅವರ ನಟನೆಯ ‘ಆಕಸ್ಮಿಕ’, ಶಿವರಾಜಕುಮಾರ್ ನಾಯಕನಾಗಿ ನಟಿಸಿದ ‘ಜನುಮದ ಜೋಡಿ’, ಪ್ರಕಾಶ್ ರೈ ಅಭಿನಯದ ‘ನಾಗಮಂಡಲ’, ಅಲಮೇಲಮ್ಮ’ ಹೀಗೆ ವಿಭಿನ್ನ ಕತೆಯುಳ್ಳ ಸಿನಿಮಾಗಳನ್ನು ಪ್ರೇಕ್ಷಕರಿಗೆ ಒಂದಾದ ಮೇಲೆ ಒಂದು ಕಂತಿನ ರೀತಿಯಲ್ಲಿ ಮನರಂಜನೆ ಕೊಟ್ಟವರು ನಾಗಾಭರಣ ಅವರು. ಅವರ ಸಿನಿಮಾಗಳಲ್ಲಿ ವಿದೇಶಿ ಆಡಂಬರಗಳನ್ನು ತೋರಿಸಲಿಲ್ಲ. ಬದಲಾಗಿ ಕರ್ನಾಟಕದ ಸೌಂದರ್ಯ ಮತ್ತು ಜಾನಪದ ಶೈಲಿಗಳಿಗೆ ಹೆಚ್ಚಾಗಿ ಒತ್ತು ಕೊಟ್ಟವರು. ನಮ್ಮದೇಸಿ ಕಲಾ ಸಂಸ್ಕೃತಿಯನ್ನು ಆಡಂಬರದಿಂದ ತೆರೆಯ ಮೇಲೆ ನೋಡಿ ಖುಷಿ ಪಡುವಂತೆ ಮತ್ತು ಹೆಮ್ಮೆ ಪಡುವಂತೆ ಮಾಡಿದರು. ನಾಗಾಭರಣ ಅವರ ಸಿನಿಮಾ ಇನ್ನೇನು ಚಿತ್ರ ಮಂದಿರಕ್ಕೆ ಬರುತ್ತಿದೆ ಎಂದರೆ ಸಾಕು ಎಲ್ಲರಿಗೂ ಸಂತೋಷ ನೀಡುತ್ತಿತ್ತು.ಅಷ್ಟರ ಮಟ್ಟಿಗೆ ನಾಗಾಭರಣ ಅವರು ಪ್ರೇಕ್ಷಕನ ಮನಸ್ಸನ್ನು ಗೆದ್ದುಬಿಟ್ಟಿದ್ದಾರೆ.
(ನಾಗಾಭರಣ ನಿರ್ದೇಶನದ ಜನುಮದ ಜೋಡಿ ಸಿನಿಮಾದ ಒಂದು ದೃಶ್ಯ)
ನಾಗಾಭರಣ ಅವರು ಎಷ್ಟೇ ಎತ್ತರಕ್ಕೆ ಬೆಳೆದರೂ’ನಾನು’ ಎನ್ನುವ ಅಹಂನ್ನು ಬೆಳೆಸಿಕೊಂಡವರಲ್ಲ. ರವೀಂದ್ರ ಕಲಾಕ್ಷೇತ್ರದಲ್ಲಿ ಸಾಮಾನ್ಯ ವ್ಯಕ್ತಿಯಂತೆ ಸ್ವಚ್ಚಂದವಾಗಿ ಓಡಾಡುತ್ತಾರೆ. ಕಾರಂತರ ಕ್ಯಾಂಟೀನ್ ನಲ್ಲಿ ಚಹಾ ಹೀರುತ್ತಾರೆ. ಸಾಂಸ್ಕೃತಿಕ- ರಂಗಭೂಮಿ ಕಾರ್ಯಕ್ರಮಗಳಲ್ಲಿಎಲ್ಲೆಂದರಲ್ಲಿ ಪ್ರತ್ಯಕ್ಷರಾಗುತ್ತಾರೆ.ಅವರು ಯಾವುದಕ್ಕೂ ತಮಗೆ ತಾವು ಗೆರೆ ಹಾಕಿಕೊಂಡವರಲ್ಲ. ಸ್ನೇಹದಲ್ಲೂ ಅಷ್ಟೇ ಹಿರಿಯರಿರಲ್ಲಿ-ಕಿರಿಯರಿರಲ್ಲಿ ಎಲ್ಲರೊಂದಿಗೆ ಬೆರೆತು ಅವರಲ್ಲಿ ಒಬ್ಬರಾಗುತ್ತಾರೆ. ಜೊತೆಗೆ ಸೂಕ್ಷ್ಮವಾಗಿ ಕೆಲವೊಂದು ವಿಷಯಗಳನ್ನು ಗ್ರಹಿಸಿ ಕಲಿಯುತ್ತಾರೆ.ಅವರಲ್ಲಿನ ಈ ಕಲಿಯುವಿಕೆಯ ದೊಡ್ಡ ಗುಣವೇ ಅವರನ್ನು ಸಿನಿಮಾರಂಗದಲ್ಲಿ ಬಹು ಎತ್ತರಕ್ಕೆ ಕೊಂಡೊಯ್ದಿದೆ.
ಅವರು ಸಿನಿಮಾ ಅಷ್ಟೇ ಅಲ್ಲ.ಕಿರುತೆರೆಯಲ್ಲಿಯೂ ದೇಸಿಯ ಸೊಗಡನ್ನು ಕೊಟ್ಟವರು.ಅವರ ಸಂಕ್ರಾಂತಿ ಧಾರವಾಹಿಯು ಮನೆಯ ಮನೆಯಲ್ಲೂ ಹುಚ್ಚೆಬ್ಬಿಸಿತು. ಅವರು ಧಾರಾವಾಹಿಯನ್ನೇ ಮಾಡಲಿ,ಸಿನಿಮಾವನ್ನೇ ಮಾಡಲಿ ಅವುಗಳಿಗೆ ಕತೆ, ಕಾದಂಬರಿಯೇ ಮೂಲವಾಗಿರುತ್ತದೆ. ಅವರ ಮೊದಲ ಪ್ರಾಮುಖ್ಯತೆ ಏನಿದ್ದರೂ ಕಥಾವಸ್ತುಯಾಗಿರುತ್ತದೆ. ಅನಂತರ ಪಾತ್ರಗಳು.ನಟನಿಗೆಂದೇ ಚಿತ್ರಕತೆ ಮಾಡಿದವರಲ್ಲ. ಕತೆಯೇ ಅವರ ನಿರ್ದೇಶನದಲ್ಲಿ ಜೀವಾಳ ಎನ್ನಬಹುದು. ಆ ಕಾರಣಕ್ಕಾಗಿಯೇ ಅವರ ಸಿನಿಮಾಗಳು ಹೆಚ್ಚು ಕಾಲ ಪ್ರೇಕ್ಷಕನ ಮನಸ್ಸಿನಲ್ಲಿ ಉಳಿದುಕೊಂಡಿವೆ.
ನಾಗಾಭರಣ ಅವರು ತುರಾತುರಿಯಾಗಿ ಸಿನಿಮಾ ಮಾಡಿ ಮುಗಿಸುವ ನಿರ್ದೇಶಕನಲ್ಲ ಸಿನಿಮಾಕ್ಕಾಗಿ ಸಾಕಷ್ಟು ಪೂರ್ವಭಾವಿ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಾರೆ. ಒಬ್ಬರೇ ಕೂತು ಬೇರೆ ಬೇರೆ ಭಾಷೆಗಳ ಚಿತ್ರಗಳನ್ನು ನೋಡುತ್ತಾರೆ.ಮನೆಯಲ್ಲಿನ ಪುಸ್ತಕಗಳ ರಾಶಿಯ ಮಧ್ಯದಲ್ಲಿ ಕೂತು ಟಿಪ್ಪಣಿ ಬರೆದುಕೊಳ್ಳುತ್ತಾರೆ.ನಾನು ಮಾಡಿದ್ದೆ ಸಿನಿಮಾ ಎಂದು ಹೋಗದೆ ಸಾಹಿತಿ,ಕವಿಗಳ ಜೊತೆ ಕೂತು ಚರ್ಚಿಸುತ್ತಾರೆ. ಕೊನೆಗೆ ತಮ್ಮದೇ ಕ್ರಿಯಾಶೀಲತೆಯಲ್ಲಿ ಸಿನಿಮಾ ತಯಾರಿ ಮಾಡಿ ಪ್ರೇಕ್ಷಕನ ಮುಂದೆ ತಂದಿಡುತ್ತಾರೆ. ಹೊಸ ನೋಟದ ಕ್ರಿಯಾಶೀಲ ನಿರ್ದೇಶಕರೆಂದರೆ ನಾಗಾಭರಣ ಎಂದು ಹೇಳಬಹುದು.
ಒಬ್ಬ ನಿರ್ದೇಶಕ ಪ್ರತಿ ಪಾತ್ರಗಳನ್ನು ಅನುಭವಿಸಿ ನಿರ್ದೇಶಿಸಬೇಕು. ಅಂದರೆ ಮಾತ್ರ ತೆರೆಯ ಮೇಲೆ ಒಂದು ಸಿನಿಮಾ ಅಥವಾ ಒಂದು ಧಾರವಾಹಿ ಅದ್ಭುತವಾಗಿ ಮೂಡಿಬರಲು ಸಾಧ್ಯ. ನಾಗಾಭರಣ ನಿರ್ದೇಶನ ಗೆಲ್ಲಲು ಅವರಲ್ಲಿನ ಅದ್ಬುತ ನಟನೊಬ್ಬ ಕಾರಣ ಎನ್ನಬಹುದು.
ಆದರೆ ಇತ್ತೀಚಿನ ದಿನಗಳಲ್ಲಿ ನಾಗಾಭರಣ ಅವರು ತೆರೆಯ ಮರೆಯಾಗಿದ್ದಾರೆ ಎನ್ನುವ ಮಾತುಗಳು ಕೇಳುತ್ತಿವೆ.ಆದರೆ ನಾಗಾಭರಣ ಹರಿಯುವ ನೀರಿದ್ದಂತೆ ಒಂದೇ ಕಡೆ ನಿಲ್ಲುವ ಪ್ರತಿಭೆಯಲ್ಲ.ತಮ್ಮನ್ನು ನಿರ್ದೇಶನಕಷ್ಟೇ ಸೀಮಿತ ಮಾಡಿಕೊಂಡವರಲ್ಲ. ಅವರಲ್ಲೊಬ್ಬ ನಟನಿದ್ದಾನೆ. ಈಗ ಧಾರಾವಾಹಿಗಳಲ್ಲೂ ನಟಿಸುತ್ತಿದ್ದಾರೆ.ಕೆಜಿಫ್ ಸಿನಿಮಾದಲ್ಲೂ ಅವರ ಅಭಿನಯವನ್ನು ನೋಡಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ಅವರಲ್ಲಿ ಒಬ್ಬ ರಂಗ ನಟನಿದ್ದಾನೆ. ನಾಗಾಭರಣ ಅವರಿಗೆ ಸಿನಿಮಾ ಮೇಲಿನ ಪ್ರೀತಿ ಎಷ್ಟಿದೆಯೋ, ಅಷ್ಟೇ ಪ್ರೀತಿ ರಂಗಭೂಮಿಯ ಮೇಲು ಇದೆ. ಆ ಕಾರಣಕ್ಕೆ ಕಿರುತೆರೆ,ಬೆಳ್ಳಿಪರದೆಯಲ್ಲಿ ಮರೆಯಾದರೆ ರಂಗಭೂಮಿಯಲ್ಲಿ ಎದ್ದು ನಿಲ್ಲುತ್ತಾರೆ. ರಂಗಭೂಮಿಯಲ್ಲಿ ಮರೆಯಾದರೆ, ಸಿನಿಮಾದಲ್ಲಿ ಎದ್ದು ನಿಲ್ಲುತ್ತಾರೆ. ಅವರು ರಂಗಭೂಮಿಯಲ್ಲಿಯೂ ಸಾಕಷ್ಟು ದುಡಿಯುತ್ತಿದ್ದಾರೆ ಮತ್ತುಅಲ್ಲಿಯೂ ಅಭಿಮಾನಿಗಳನ್ನು ಬೆಳೆಸಿಕೊಂಡಿದ್ದಾರೆ. ಬಿ.ವಿ.ಕಾರಂತರ ನಿರ್ಮಾಣದ ಬೆನಕ ನಾಟಕ ತಂಡದ ನಿರ್ದೇಶಕರಾಗಿ ೪೦ ವರ್ಷಗಳ ಕಾಲ ಮತ್ತು ಪ್ರೇಮ ಕಾರಂತರ ನಿರ್ಮಾಣದ ಬೆನಕ ಮಕ್ಕಳ ತಂಡದ ನಿರ್ದೇಶಕರಾಗಿ ೩೦ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ‘ಸಂಗ್ಯಾ- ಬಾಳ್ಯಾ’,’ಕತ್ತಲೆ ಬೆಳಕು’, ‘ಜೋಕುಮಾರ ಸ್ವಾಮಿ’,’ಸತ್ತವರ ನೆರಳು’ ಸೇರಿದಂತೆ ನೂರು ನಾಟಕಗಳ ಹತ್ತುಸಾವಿರ ಪ್ರದರ್ಶನಗಳಲ್ಲಿ ನಟರಾಗಿ,ನಿರ್ದೇಶಕರಾಗಿ,ಸಂಘಟನಾಕಾರರಾಗಿ ಕೆಲಸ ಮಾಡಿದ್ದಾರೆ. ರಂಗಭೂಮಿಯ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸರ್ಕಾರದಿಂದ ಬಂಗಾರದ ಪದಕ ಬಂದಿವೆ.
ಕರ್ನಾಟಕ ರಾಜ್ಯ ಸಿನಿಮಾ ಸಬ್ಸಿಡಿ ಕಮಿಟಿ ಅಧ್ಯಕ್ಷರಾಗಿ,ಕರ್ನಾಟಕ ಸಿನಿಮಾ ನಿರ್ದೇಶಕರ ಸಂಘದ ಅಧ್ಯಕ್ಷರಾಗಿ, ೨೦೦೮-೨೦೧೨ರವರೆಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಹೀಗೆ ಹಲವಾರು ಸ್ಥಾನವನ್ನುಅಲಂಕರಿಸಿದ್ದಾರೆ. ಭರಣ ಅಕಾಡೆಮಿ ಸಂಸ್ಥಾಪಕರಾಗಿ, ಶಿಕ್ಷಕರಾಗಿ ಸಿನಿಮಾ ಮತ್ತು ನಾಟಕಗಳಿಗೆ ಸಂಬಂಧಪಟ್ಟಂತೆ ನಟನೆ, ನಿರ್ದೇಶನದ ಬಗ್ಗೆ ಈ ಅಕಾಡೆಮಿಯ ಮೂಲಕ ಹೇಳಿಕೊಡುತ್ತಿದ್ದಾರೆ.
ಪ್ರತಿ ಗಂಡಿನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುವ ಮಾತಿದೆ. ಅದೇ ರೀತಿ ನಾಗಾಭರಣರ ಯಶಸ್ಸಿನ ಹಿಂದೆ ಅವರ ಅಧಾ೯೦ಗಿಣಿ ನಾಗಿಣಿ ಭರಣ ಅವರಿದ್ದಾರೆ.ನಾಗಿಣಿ ಭರಣ ಅವರು ಕೂಡಾ ಒಳ್ಳೆಯ ನಟಿ.ನಾಟಕಗಳಲ್ಲಿ ನಟಿಸಿದ್ದಾರೆ. ನಾಗಾಭರಣ ಅವರು ನಿರ್ದೇಶನಕ್ಕೆ ನಿಂತರೇ, ನಾಗಿಣಿ ಭರಣ ಅವರು ನಾಗಾಭರಣ ಅವರ ಬಲಗೈಯಾಗಿ ಗಂಡನ ಸಿನಿಮಾ, ನಾಟಕ, ಧಾರಾವಾಹಿಗಳಲ್ಲಿ ವಸ್ತ್ರವಿನ್ಯಾಸಕಿಯಾಗಿ ಕೆಲಸ ಮಾಡುತ್ತಾರೆ. ನಾಗಾಭರಣ ಅವರ ಯಶಸ್ಸಿನ ಹಾದಿಯಲ್ಲಿ ನಾಗಿಣಿಯವರ ಪಾತ್ರವನ್ನು ಮರೆಯುವಂತಿಲ್ಲ.
ಹೀಗೆ ನಾಗಾಭರಣ ಅವರು ನಿರಂತರವಾಗಿ ಬೆಳ್ಳಿ ಪರದೆ ಮತ್ತು ರಂಗಭೂಮಿಯ ಮೇಲೆ ಮಿಂಚಲಿ. ನಾಗಾಭರಣರ ಅನುಭವದ ಬುತ್ತಿ ಯುವ ನಿರ್ದೇಶಕರಿಗೆ, ಯುವ ಕಲಾವಿದರಿಗೆ ಮಾರ್ಗದರ್ಶನವಾಗಲಿ. ಇನ್ನಷ್ಟು ಕಲಾವಿದರು ಅವರ ಗರಡಿಯಲ್ಲಿ ಪಳಗಲಿ ಎಂದು ನಮ್ಮ ಆಕೃತಿ ಕನ್ನಡದ ಮೂಲಕ ಶುಭ ಹಾರೈಸುತ್ತೇನೆ.
- ಶಾಲಿನಿ ಹೂಲಿ ಪ್ರದೀಪ್