ಯುಟಿರಿನ್ ಹೈಪೋಪ್ಲೇಶಿಯಾ ಎಂದರೇನು ?ತಿಳಿಯಿರಿ

ವಯಸ್ಸಿನ ಆಧಾರದ ಮೇಲೆ ಮತ್ತು ತಾಯ್ತನದ ನಂತರ ಮಹಿಳೆಯ ಗರ್ಭಕೋಶಯ ಗಾತ್ರ ಸ್ವಲ್ಪ ಹೆಚ್ಚು ಸಹಾ ಆಗಬಹುದು. ಒಂದು ವೇಳೆ ಪ್ರೌಢಾವಸ್ಥೆ ತಲುಪಿದರೂ ಗರ್ಭಕೋಶ 6cm ಕ್ಕಿಂತ ಹೆಚ್ಚು ಬೆಳೆಯಲು ಅಸಮರ್ಥವಾದರೆ ಅದೇ ಯುಟಿರಿನ್ ಹೈಪೋಪ್ಲೇಶಿಯಾ. ಈ ವಿಷಯದ ಕುರಿತು ಸುದರ್ಶನ್ ಪ್ರಸಾದ್ ಅವರು ಇನ್ನಷ್ಟು ವಿಷಯಗಳನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ಹೆಣ್ಣು ಮಗಳಾಗಿ ಭೂಮಿಗೆ ಬಂದು ತಾಯಿಯಾಗಿ ಹೋಗುತ್ತಾಳೆ ಎಂಬ ಮಾತಿದೆ. ಪ್ರತೀ ಹೆಣ್ಣಿಗೆ ತಾಯ್ತನ ಎನ್ನುವುದು ಒಂದು ವಿಶೇಷ ಅನುಭೂತಿ. ಆದರೆ ಅದರಿಂದಲೂ ವಂಚಿತರಾಗುವ ಅದೆಷ್ಟೋ ಹೆಣ್ಣುಮಕ್ಕಳು ನಮ್ಮ ನಡುವೆ ಇರುತ್ತಾರೆ. ಅದು ಅವರ ಆಯ್ಕೆಯಾಗಿದ್ದರೆ ಗೌರವಿಸುವುದು ನಮ್ಮ ಕರ್ತವ್ಯ ಹಾಗೆಯೇ ಅದೇ ಅವರ ಸಮಸ್ಯೆಯಾಗಿದ್ದರೆ ಕಿವಿಗೊಡುವುದು ಸಹಾ. ಇಂದು ಅಂತಹುದೇ ಒಂದು ತಾಯಿಯಾಗಲು ಬಯಸುವ ಹೆಣ್ಣಿನಲ್ಲಿ ಉಂಟಾಗುವ ದೈಹಿಕ ಅಡಚಣೆಯ ಕುರಿತು ಒಂದಿಷ್ಟು ಮಾತಾಡೋಣ. ಅದೇ ಯುಟಿರಿನ್ ಹೈಪೋಪ್ಲೇಷಿಯಾ.

ದೇಹದ ಯಾವುದೇ ಅಂಗ Hypoplasia ಕ್ಕೆ ಒಳಗಾಗುವುದು ಅಥವಾ hypoplastic ಆಗುವುದು ಎಂದರೆ ಬೆಳವಣಿಗೆ ಕುಂಠಿತವಾಗುವುದು ಎಂದರ್ಥ. ಜೀವಕೋಶಗಳು ದ್ವಿಗುಣಗೊಳ್ಳುವ ಸಾಮರ್ಥ್ಯ ಕಳೆದುಕೊಂಡು ಅಂಗಾಶ ಬೆಳವಣಿಗೆ ಹೊಂದದೇ ಇರುವುದು ಇದಕ್ಕೆ ಕಾರಣ. ಸಾಮಾನ್ಯವಾಗಿ ಒಬ್ಬ ವಯಸ್ಕ ಮಹಿಳೆಯ ಗರ್ಭಕೋಶ 7cm x 5 cm x 3cm ಗಾತ್ರ ಹೊಂದಿರುತ್ತದೆ. ವಯಸ್ಸಿನ ಆಧಾರದ ಮೇಲೆ ಮತ್ತು ತಾಯ್ತನದ ನಂತರ ಈ ಗಾತ್ರ ಸ್ವಲ್ಪ ಹೆಚ್ಚು ಸಹಾ ಆಗಬಹುದು. ಒಂದುವೇಳೆ ಪ್ರೌಢಾವಸ್ಥೆ ತಲುಪಿದರೂ ಗರ್ಭಕೋಶ 6cm ಕ್ಕಿಂತ ಹೆಚ್ಚು ಬೆಳೆಯಲು ಅಸಮರ್ಥವಾದರೆ ಅದೇ ಯುಟಿರಿನ್ ಹೈಪೋಪ್ಲೇಶಿಯಾ. ಜಗತ್ತಿನ ಸ್ತ್ರೀ ಜನಸಂಖ್ಯೆಯಲ್ಲಿ ಕೇವಲ 3% ಜನರಷ್ಟೇ ಈ ಸಮಸ್ಯೆಯಿಂದ ಬಳಲುವುದಾದರೂ ಅವರು ಎದುರಿಸುವ ವೈವಾಹಿಕ ಸಮಸ್ಯೆಗಳು, ಕೌಟುಂಬಿಕ ಅಸಮಾಧಾನಗಳು, ಸಾಮಾಜಿಕ ಅಸಮಾನತೆಗಳು ಎಲ್ಲವಕ್ಕೂ ಉತ್ತರ ಕಂಡುಕೊಳ್ಳಲೇಬೇಕು.

ಫೋಟೋ ಕೃಪೆ : fertilitytips

ಯುಟಿರಿನ್ ಹೈಪೋಪ್ಲೇಶಿಯಾ ಅಥವಾ Naive uterus ಎಂಬುದು ಎರಡು ರೀತಿಯಲ್ಲಿ ಕಂಡುಬರುತ್ತದೆ. ಭ್ರೂಣಾವಸ್ಥೆಯಲ್ಲಿ ಅಥವಾ ಜನಿಸಿದ ತಕ್ಷಣವೇ ಗರ್ಭಕೋಶದ ಬೆಳವಣಿಗೆ ನಿಂತುಹೋಗುವ Fetal uterus ಮತ್ತು ಬಾಲ್ಯಾವಸ್ಥೆಯಲ್ಲಿ ಬೆಳವಣಿಗೆ ಕುಠಿತವಾಗುವ Infantile uterus. ಮೊದಲನೆಯದರಲ್ಲಿ ಗರ್ಭಕೋಶ 4cm ಕ್ಕಿಂತ ಹೆಚ್ಚು ಬೆಳೆಯಲಾರದೇ ಶಾಶ್ವತ ಋತುಬಂಧ, ಬಂಜೆತನ ಮುಂತಾದ ಲಕ್ಷಣಗಳು ಕಂಡುಬಂದರೆ, ಎರಡನೆಯದರಲ್ಲಿ ಅನಿಯಮಿತ ಋತುಚಕ್ರ, ಬಂಜೆತನ, ಒಂದುವೇಳೆ ಗರ್ಭ ಧರಿಸಿದರೂ ಮರುಕಳಿಸುವ ಗರ್ಭಪಾತ, ಅವಧಿಪೂರ್ವ ಜನನ ಮುಂತಾದ ಲಕ್ಷಣಗಳನ್ನು ಕಾಣಬಹುದು. ಕೆಲವರಲ್ಲಿ ಈ ಲಕ್ಷಣಗಳ ಜೊತೆಜೊತೆಗೆ Ovarian hypoplasia, ಮತ್ತು Vaginal agenesis ಸಹಾ ಉಂಟಾಗಬಹುದು. ತೀರಾ ಕೆಲವರಲ್ಲಿ ಇದು Mayer-Rokitansky-Küster-Hauser syndrome ಎಂಬ ಖಾಯಿಲೆಯ ಲಕ್ಷಣವಾಗಿದ್ದು ಸಂತಾನೋತ್ಪತ್ತಿ ಅಂಗಗಳೇ ಬೆಳವಣಿಗೆ ಹೊಂದದೇ ಇರಬಹುದು ಅಥವಾ ಸಂಪೂರ್ಣವಾಗಿ ನಾಶವಾಗಿರಬಹುದು.

ಈ ಗರ್ಭಕೋಶದ ಹೈಪೋಪ್ಲೇಶಿಯಾ ಹುಟ್ಟಿನಿಂದಲೇ ಬರುವ ಸಮಸ್ಯೆ, ಆದ್ದರಿಂದ ಇದಕ್ಕೆ ನಿಖರವಾದ ಕಾರಣವೇನು ಎಂಬುದನ್ನು ಹೇಳುವುದು ಕಷ್ಟಸಾಧ್ಯ. ಆದರೂ ವೈದ್ಯಕೀಯ ಲೋಕ ಕಂಡುಕೊಂಡಿರುವಂತೆ..
1. ಗರ್ಭಿಣಿಯಾಗಿದ್ದಾಗ ತಾಯಿಯಲ್ಲಿ ಉಂಟಾಗುವ ಅಪೌಷ್ಟಿಕತೆ.
2. ಹೆಣ್ಣು ಮಗುವಿನ ಬಾಲ್ಯಾವಸ್ಥೆಯಲ್ಲಿ ಕಾಡುವ ಅಪೌಷ್ಟಿಕತೆ.
3. ಕುಟುಂಬದಲ್ಲಿ ಹೈಪೋಪ್ಲೇಶಿಯಾ ಇತಿಹಾಸ.
4. ಗರ್ಭಿಣಿ ಸ್ತ್ರೀಯರಲ್ಲಿ ಅತಿಯಾದ ಹಾರ್ಮೋನ್ ಸಮಸ್ಯೆಗಳು.
5. ಗರ್ಭಕೋಶದ ಗಡ್ಡೆ, ಕ್ಯಾನ್ಸರ್ ಇತ್ಯಾದಿ.
6. ಎಂಡೋಮೆಟ್ರಿಯಾಸಿಸ್ ನಂತಹಾ ಲಕ್ಷಣಗಳು.
7. ಗರ್ಭಕೋಶವನ್ನು ಸಂಕುಚನಗೊಳಿಸುವ ಪುನರಾವರ್ತಿತ ಗರ್ಭಪಾತಗಳು.
8. ಹಾರ್ಮೋನ್ ಸಮಸ್ಯೆಗಳು. ಹೈಪೋಥಾಲಮಸ್, ಥೈರಾಯ್ಡ್ ಮತ್ತು ಓವರಿಯನ್ ಗಡ್ಡೆಗಳು.
9. ಬಾಲ್ಯಾವಸ್ಥೆಯಲ್ಲಿ ಸಾಮರ್ಥ್ಯ ಮೀರಿದ ದೈಹಿಕ ಚಟುವಟಿಕೆ.
10. ಪೆಲ್ವಿಕ್ ಭಾಗಕ್ಕೆ ಏಟು ಬೀಳುವುದು ಮತ್ತು ಇನ್ಫೆಕ್ಷನ್ ಗಳು ಉಂಟಾಗುವುದು.
11. ಧೂಮಪಾನ, ಮಧ್ಯಪಾನ ಇತ್ಯಾದಿ…
ಯುಟಿರಿನ್ ಹೈಪೋಪ್ಲೇಶಿಯಾಕ್ಕೆ ಕಾರಣವಾಗಬಲ್ಲವು.

ಬಾಹ್ಯ ದೈಹಿಕ ರಚನೆಯಲ್ಲಿ ಯಾವುದೇ ಅಸಹಜ ಬದಲಾವಣೆಗಳೂ ಇಲ್ಲದಿರುವುದರಿಂದ ಬಾಲಕಿಯಾಗಿರುವಾಗಲೇ ಈ ಸಮಸ್ಯೆಯನ್ನು ಗುರುತಿಸುವುದು ಅಸಾಧ್ಯ. ಪ್ರೌಢಾವಸ್ಥೆಯಲ್ಲಿ ಸಹಜ ದೈಹಿಕ ಬದಲಾವಣೆಗಳು ಕಾಣದಿರುವುದು, ಬದಲಾವಣೆಗಳಿದ್ದರೂ ಋತುಚಕ್ರ ಕಾಣಿಸಿಕೊಳ್ಳದೇ ಇರುವುದು (Primary amenorrhea) ಇದರ ಅತೀ ಮುಖ್ಯ ಲಕ್ಷಣಗಳು. ಕೆಲವರಲ್ಲಿ ಹೈಪೋಪ್ಲೇಶಿಯಾ ಇದ್ದರೂ ಋತುಚಕ್ರ ಸಂಭವಿಸಬಹುದು, ಆದರೆ ಅದು ಅನಿಯಮಿತವಾಗಿ, ಅಸ್ವಾಭಾವಿಕವಾಗಿ ಮತ್ತು ಅತಿಯಾದ ನೋವಿನಿಂದ ಕೂಡಿದ್ದಾಗಿರುತ್ತದೆ ಎನ್ನಬಹುದು. (ಹಾರ್ಮೋನ್ ವೈಪರೀತ್ಯದಿಂದ ಉಂಟಾಗುವ ಋತುಚಕ್ರ ಸಮಸ್ಯೆಗಳನ್ನು ಹೈಪೋಪ್ಲೇಶಿಯಾ ಎನ್ನಲಾಗದು.)

ಫೋಟೋ ಕೃಪೆ : endocrineweb

ಮೇಲಿನ ಯಾವುದೇ ಲಕ್ಷಣಗಳು ಕಾಣಿಸಿಕೊಂಡಾಗ ಅಥವಾ ಪ್ರೌಢಾವಸ್ಥೆಗೆ ತಲುಪಿದಾಗೊಮ್ಮೆ ಮಕ್ಕಳ ತಜ್ಞರು ಅಥವಾ ಸ್ತ್ರೀರೋಗ ತಜ್ಞರ ಭೇಟಿ ಅವಶ್ಯಕ. ಸರಿಯಾದ ವಯಸ್ಸಿನಲ್ಲಿ ಋತುಚಕ್ರ ಆರಂಭವಾಗದೇ ಇದ್ದಲ್ಲಿ ಅಥವಾ ಇತರ ಹೈಪೋಪ್ಲೇಶಿಯಾ ಲಕ್ಷಣಗಳು ಕಂಡುಬಂದಲ್ಲಿ ರಕ್ತಪರೀಕ್ಷೆ, ಅಲ್ಟ್ರಾಸೌಂಡ್ ಮತ್ತು MRI ಸ್ಕಾನಿಂಗ್ ನಂತಹಾ ಪರೀಕ್ಷೆಗಳ ಮುಖಾಂತರ ಈ ಸಮಸ್ಯೆ ಇದೆಯೇ ಎಂದು ಖಚಿತಪಡಿಸಿಕೊಳ್ಳಬಹುದು. ಒಂದುವೇಳೆ ಆ ಹಂತದಲ್ಲಿಯೇ ಸಮಸ್ಯೆ ಧೃಡವಾದರೆ Progesterone – Estrogen ಹಾರ್ಮೋನ್ ಚಿಕಿತ್ಸೆಯ ಮುಖಾಂತರ ಗುಣಪಡಿಸಲು ಅವಕಾಶವಿದೆ. ಪ್ರೌಢಾವಸ್ಥೆಯನ್ನು ದಾಟಿದ ನಂತರ ಇದು ಶಾಶ್ವತ ಸಮಸ್ಯೆಯಾಗಿ ಉಳಿಯಬಹುದು.

ಒಂದುವೇಳೆ ಸಮಸ್ಯೆ Infantile uterus ಮಾತ್ರವೇ ಆಗಿದ್ದಲ್ಲಿ ಸ್ವಾಭಾವಿಕವಾಗಿ ಅಥವಾ ಕೆಲವೊಂದು ಚಿಕಿತ್ಸೆಯ ಸಹಾಯದಿಂದ ತಾಯಿಯಾಗಲು ಅವಕಾಶವಿದೆ. ಆದರೆ ಇದು ಹೈ ರಿಸ್ಕ್ ಪ್ರೆಗ್ನೆನ್ಸಿಯ ಸಾಲಿನಲ್ಲಿ ಬರುವುದರಿಂದ ವೈದ್ಯರಿಂದ ಸೂಕ್ತ ಸಲಹೆ ಪಡೆದು ಮುಂದುವರೆಯುವುದು ಉತ್ತಮ. ಗರ್ಭಾವಸ್ಥೆಯಿಂದ ಮಗುವಿನ ಜನನದವರೆಗಿನ ಆರೋಗ್ಯ ಕಾಳಜಿ ಅವಶ್ಯಕ. ಹುಟ್ಟಿದ ಪ್ರತೀ ಮಗುವನ್ನೂ ಬಾಲ್ಯಾವಸ್ಥೆಯಿಂದಲೇ ಅಪೌಷ್ಠಿಕತೆ ಕಾಡದಂತೆ ಬೆಳೆಸುವುದು ಸಹಾ ಅಷ್ಟೇ ಮುಖ್ಯ, ಏಕೆಂದರೆ ಉತ್ತಮ ಆಹಾರ ಕ್ರಮದಿಂದ ಸಹಾ ಈ ಸಮಸ್ಯೆಯನ್ನು ಸಾಧ್ಯವಾದಷ್ಟು ದೂರವಿಡಬಹುದು.


  • ಸುದರ್ಶನ್ ಪ್ರಸಾದ್

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW