ಇದ್ದೇವೆ.. ಹೀಗೆ ಇದ್ದೇವೆ.! ಕವನ – ಎ.ಎನ್.ರಮೇಶ್.ಗುಬ್ಬಿ

“ಇದು ನಮ್ಮದೇ ಮನಸ್ಥಿತಿಗಳ ಕವಿತೆ. ನಿತ್ಯ ನೋಡುವ ಬದುಕುಗಳ ಸತ್ಯ ಭಾವಗೀತೆ. ಆಧುನೀಕತೆ ಹಸಿರಾದಂತೆಲ್ಲಾ, ಅಂತಃಕರಣ ಬರಡಾಗುತ್ತಿದೆ. ನಾಗರೀಕತೆ ಹೆಚ್ಚಿದಂತೆಲ್ಲಾ ಭಾವ ಸಂವೇದನೆಗಳು ಬತ್ತಿ ಹೋಗುತ್ತಾ, ಬದುಕು ಅರ್ಥ ಕಳೆದುಕೊಳ್ಳುತ್ತಿದೆ. ಜೀವ-ಜೀವನದ ನಡೆ-ನುಡಿಗಳು ದಿಕ್ಕು ತಪ್ಪುತ್ತಿದೆ. ಈಗ ಎಲ್ಲರೂ ಹೀಗಾಗುತ್ತಿದ್ದೇವೆ. ಹೀಗೆಯೇ ಬದುಕುತ್ತಿದ್ದೇವೆ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ಏಕೋ ವಾತ್ಸಲ್ಯಕ್ಕೆ ಬದುಕುವುದಕ್ಕಿಂತಲೂ
ಹೆಚ್ಚಾಗಿ ಮಾತ್ಸರ್ಯಕ್ಕೆ ಬದುಕುತ್ತಿದ್ದೇವೆ.!
ನಮ್ಮ ಇಷ್ಟ ಅಗತ್ಯಕ್ಕೆ ಕೊಳ್ಳುವುದಕ್ಕಿಂತಲೂ
ಹುಚ್ಚಾಗಿ ಅಸೂಯೆಗೆ ಖರೀದಿಸುತ್ತಿದ್ದೇವೆ.!

ಕ್ಷೇಮ ಆಸ್ಥೆಗೆ ಮಾತನಾಡುವುದಕಿಂತಲೂ
ಲಾಭ ನಷ್ಟಗಳಿಗಷ್ಟೆ ಮಾತನಾಡುತ್ತಿದ್ದೇವೆ.!
ಬಂಧ ಬಾಂಧವ್ಯಗಳಿಗೆ ಬೆರೆವುದಕಿಂತಲೂ
ಸ್ವಾರ್ಥ ಸಾಧನೆಗಷ್ಟೆ ಬೆರೆಯುತ್ತಿದ್ದೇವೆ.!

ಅದೇಕೂ ಸಿದ್ದಿಗಾಗಿ ದುಡಿವುದಕ್ಕಿಂತಲೂ
ಪರರ ಜಿದ್ದಿಗಾಗಿ ದುಡಿಯುತ್ತಿದ್ದೇವೆ.!
ಪ್ರೀತಿ ನೀತಿಗಳಿಗಾಗಿ ನಡೆವುದಕ್ಕಿಂತಲೂ
ರೀತಿ ಭೀತಿಗಳಿಗಾಗಿ ನಡೆಯುತ್ತಿದ್ದೇವೆ.!

ಮುಕ್ತಿ ದರ್ಶನಕೆ ಪೂಜಿಸುವುದಕಿಂತಲೂ
ಭಕ್ತಿ ಪ್ರದರ್ಶನಕೆ ಪೂಜಿಸುತ್ತಿದ್ದೇವೆ.!
ಒಳಗಣ್ಣು ತೆರೆಯಲು ಧ್ಯಾನಿಸುವುದಕಿಂತಲೂ
ಜಗದಕಣ್ಣು ಕುಕ್ಕಲು ಧ್ಯಾನಿಸುತ್ತಿದ್ದೇವೆ.!

ಅಕ್ಕರೆ ಮಮತೆಗೆ ಉಪಕರಿಸುವುದಕಿಂತಲೂ
ಪ್ರಚಾರ ಕೀರ್ತಿಗಾಗಿ ಉಪಕರಿಸುತ್ತಿದ್ದೇವೆ.!
ಪರರಿಷ್ಟ ಪೂರೈಕೆಗೆ ಉಪಚರಿಸುವುದಕಿಂತಲೂ
ನಮ್ಮ ಸಿರಿ ತೋರಿಕೆಗೆ ಉಪಚರಿಸುತ್ತಿದ್ದೇವೆ.!

ತೃಪ್ತಿ ನೆಮ್ಮದಿಗಳಿಗೆ ಜೀವಿಸುವುದಕಿಂತಲೂ
ದಾಹ ದುರಾಸೆಗಳಿಗೆ ಜೀವಿಸುತ್ತಿದ್ದೇವೆ.!
ಪ್ರೀತಿ ಶಾಂತಿಗಳಿಗೆ ಉಸಿರಾಡುವುದಕಿಂತಲೂ
ರಾಗ ದ್ವೇಷಗಳಿಗೇ ಉಸಿರಾಡುತ್ತಿದ್ದೇವೆ.!


  • ಎ.ಎನ್.ರಮೇಶ್. ಗುಬ್ಬಿ –  ಲೇಖಕರು, ಕವಿಗಳು, ಕೈಗಾ. 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW