ಅನೇಕರ ಜನ್ಮದಿನಾಂಕ ಜೂನ್ ಒಂದು ಆಗಿರುವುದು ಏಕೆ?… ಎನ್ನುವ ಪ್ರಶ್ನೆಯು ಅನೇಕರನ್ನು ಕಾಡಿದಂತಿದೆ. ಅದು ಕೆಲವರ ಕುತೂಹಲ, ತಮಾಷೆಯ ವಸ್ತು ಆದದ್ದೂ ಇದೆ. ಆದರೆ ಹಾಗಾಗಲು ಕಾರಣವಿದೆ ಎನ್ನುವುದು ಯಾರಿಗೂ ಸರಿಯಾಗಿ ಗೊತ್ತಿಲ್ಲ – ಸುಬ್ರಾಯ ಚೊಕ್ಕಾಡಿ, ತಪ್ಪದೆ ಮುಂದೆ ಓದಿ…
1961 ರಲ್ಲಿ ಕಡ್ಡಾಯ ಶಿಕ್ಷಣ ನೀತಿಯು ನಮ್ಮಲ್ಲಿ ಜಾರಿಗೆ ಬಂದು ಶಾಲೆಗೆ ಹೋಗದ ಮಕ್ಕಳ ಗಣತಿಯು ಆರಂಭವಾಯಿತು. ಡಿಸೆಂಬರ್ ತಿಂಗಳಲ್ಲಿ ಮೂರು ದಿನಗಳ ಗಣತಿಯನ್ನು ಶಿಕ್ಷಕರು ಪ್ರತೀ ಮನೆಗೆ ಭೇಟಿಕೊಟ್ಟು ಶಾಲೆಗಳಲ್ಲಿ ಸೇರಲು ಅರ್ಹರಾದ ಮಕ್ಕಳ ವಿವರಗಳನ್ನು ಸಂಗ್ರಹಿಸಿದರು.ಆಗ ಕೆಲವೇ ಮಂದಿ ಜಾತಕ ತಯಾರಿಸುವ ಮೂಲಕ ಜನ್ಮ ದಿನಾಂಕವನ್ನು ನೆನಪಿಟ್ಟುಕೊಂಡಿದ್ದರೂ ಉಳಿದ ಬಹುತೇಕರಲ್ಲಿ ಅಂಥ ಯಾವ ದಾಖಲೆಗಳೂ ಇರಲಿಲ್ಲ.
ಫೋಟೋ ಕೃಪೆ :GOOGLE
ಅದಕ್ಕಾಗಿ ಜನ್ಮದಿನಾಂಕವನ್ನು ದಾಖಲಿಸಲು ಒಂದು ಮಾರ್ಗ ಸೂಚಿಯನ್ನು ನೀಡಿತು.ಆ ಆದೇಶದಂತೆ ಮಗು ಹುಟ್ಟಿದ ವರ್ಷ ನೆನಪಿದ್ದು ಉಳಿದ ಯಾವುದೂ ನೆನಪಿಲ್ಲದಿದ್ದರೆ ಮಗುವಿನ ಜನ್ಮ ದಿನಾಂಕವು ಆ ವರ್ಷದ ಜೂನ್ ಒಂದು ಎಂದು ದಾಖಲಿಸಬೇಕೆಂದೂ, ವರ್ಷ, ತಿಂಗಳು ನೆನಪಿದ್ದು ದಿನಾಂಕ ಗೊತ್ತಿಲ್ಲದಿದ್ದರೆ ಆ ತಿಂಗಳ ಒಂದನೇ ತಾರೀಕೆಂದು ನಮೂದಿಸಬೇಕೆಂದೂ ಸೂಚಿಸಿತು. ಮಗು ಶಾಲೆಗೆ ಸೇರ್ಪಡೆಯಾಗುವ ಸಂದರ್ಭದಲ್ಲಿ ಈ ರೀತಿಯೇ ನಮೂದಿಸ ಬೇಕೆಂದು ಆದೇಶಿಸಿತು. ಅದರಂತೆ ಅನೇಕರ ಜನ್ಮ ದಿನಾಂಕ ಜೂನ್ ಒಂದು ಆಗಿರುತ್ತದೆ.
ಆಮೇಲೆ ಈ ನಿಯಮಗಳು ಮರೆಯಾಗಿ ಜಾತಕ ಅಥವಾ ಜನನ ಪ್ರಮಾಣ ಪತ್ರ ಹಾಜರು ಪಡಿಸುವ ನಿಯಮ ಜಾರಿಗೆ ಬಂತು. ಆಗ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯನಾಗಿದ್ದ ನಾನು ಈ ರೀತಿಯಲ್ಲೇ ಅನೇಕ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡದ್ದಿದೆ.ಈಗ ಅದೆಲ್ಲ ನೆನಪು ಮಾತ್ರ!
- ಸುಬ್ರಾಯ ಚೊಕ್ಕಾಡಿ