ಕಾಳುಮೆಣಸಿನ ರಾಣಿಯ ಕಾನೂರು ಕೋಟೆಯ ಕುರಿತಾದ ಕಾದಂಬರಿಯನ್ನು ಲೇಖಕ ಡಾ.ಗಜಾನನ ಶರ್ಮಾ ಅವರು ಪುಸ್ತಕರೂಪದಲ್ಲಿ ಹೊರತರಲಿದ್ದಾರೆ…ರೋಚಕ ಕಾದಂಬರಿ ಒಂದಷ್ಟು ತುಣುಕು ಓದುಗರಿಗೆ ಆಕೃತಿಕನ್ನಡ ನೀಡುತ್ತಿದೆ…
ಕಾನೂರು ಘಟ್ಟದ ದಟ್ಟಡವಿಯ ನಡುವಲ್ಲಿ ಪೋರ್ಚುಗೀಸ್ ಗವರ್ನರ್ ಡಾನ್ ಲೂಯಿಸ್ ಡೆ ಅಟಾಯಿಡೆಯನ್ನು ಅಟ್ಟಾಡಿಸಿ ಸೋಲುಣ್ಣಿಸಿದ ರಾಣಿ ಚೆನ್ನಭೈರಾದೇವಿ.
೧೫೬೦ರಲ್ಲಿ ಗೋವೆಯಲ್ಲಿ ಇನ್ಕ್ವಿಸಿಶನ್ ಕೋರ್ಟ್ ( ಧಾರ್ಮಿಕ ವಿಚಾರಣಾ ನ್ಯಾಯಾಲಯ) ಸ್ಥಾಪನೆ ಮಾಡಿ ಮತಾಂತರ ಪ್ರಕ್ರಿಯೆಗೆ ಹೆಚ್ಚು ಕುಮ್ಮುಕ್ಕು ನೀಡಿದ ಪೋರ್ಚುಗಲ್ ಆಡಳಿತ, ಅದಕ್ಕೆ ಮತ್ತಷ್ಟು ವೇಗದ ಚಾಲನೆ ನೀಡಲು, ೧೫೬೯ ರ ಸೆಪ್ಟೆಂಬರ್ ಹತ್ತರಂದು ಗೋವೆಯ ವೈಸ್ರಾಯ್ ಹುದ್ದೆಯನ್ನು ಲೂಯಿಸ್ ಡೆ ಅಟಾಯಿಡೆ ಎಂಬ ನುರಿತ ಸೇನಾನಿಗೆ ಒಪ್ಪಿಸಿತು. ಅಟಾಯಿಡೆ ‘ಪವಿತ್ರ ರೋಮನ್ ಸೇನೆ’ಯ ಧರ್ಮಯುದ್ಧದಲ್ಲಿ ಮುಂಚೂಣಿಯಲ್ಲಿ ನಿಂತು ಜಯ ಸಾಧಿಸಿದ ಅಪ್ರತಿಮ ವೀರ. ವ್ಯೂಹರಚನೆಯಲ್ಲಿ ಚಾಣಾಕ್ಷನೆಂದು ಹೆಸರು ಪಡೆದ ರಣಕೋವಿದ. ಅಧಿಕಾರವನ್ನು ಹಿಡಿದ ಆರಂಭದಲ್ಲೇ ಆತ ಇಂಡಿಯಾದ ರಾಜಕೀಯ ಪರಿಸ್ಥಿತಿಯ ಕುರಿತು ವಿಶ್ಲೇಷಿಸಿದ.
ತಾನು ಬರುವುದಕ್ಕೆ ಕೇವಲ ನಾಲ್ಕು ವರ್ಷಗಳ ಮೊದಲು, (೧೫೬೫) ಅದುವರೆಗೂ ಪರಸ್ಪರ ಕಚ್ಚಾಡುತ್ತಿದ್ದ ಬಹುಮನಿ ಸುಲ್ತಾನರು ಒಗ್ಗೂಡಿ ರಕ್ಕಸತಂಗಡಿ ಎಂಬಲ್ಲಿ ವಿಜಯನಗರವನ್ನು ಮಣಿಸುವಲ್ಲಿ ಮಹಮ್ಮದೀಯರ ಧಾರ್ಮಿಕ ಮನೋಭಾವ ಕೆಲಸಮಾಡಿತ್ತು ಎಂಬುದನ್ನು ಗ್ರಹಿಸಿದ. ಆತನ ಗ್ರಹಿಕೆಗೆ ಅನುಗುಣವಾಗಿ ಗೇರುಸೊಪ್ಪೆಯ ರಾಣಿ, “ಗೋವೆಯ ಪರಂಗಿಗಳು ಮತಾಂತರ ಪ್ರಕ್ರಿಯೆಯನ್ನು ಗೋವೆಯ ಹೊರಗಿನ ಹಿಂದೂ ಮತ್ತು ಮಹಮ್ಮದೀಯ ರಾಜ್ಯಗಳಿಗೂ ವಿಸ್ತರಿಸಲು ಹುನ್ನಾರ ಹೂಡಿದ್ದಾರೆ” ಎಂದು ಬಿಜಾಪುರದ ಆದಿಲ್ ಶಾಹಿಗೆ ಬರೆದ ಪತ್ರ, ಮಹಮ್ಮದೀಯ ಅರಸರ ನಡುವೆ ಹರಿದಾಡಿ ಅದು ತಮ್ಮ ವಿರುದ್ಧ ಒಂದುಗೂಡಲು ಬಹುದೊಡ್ಡ ಅಸ್ತ್ರವಾಗುತ್ತಿದೆಯೆಂಬ ಸೂಕ್ಷ್ಮವನ್ನು ಅರಿತುಕೊಂಡ. ಮಳೆ ಮಾರುತಗಳು ದೂರಾಗುತ್ತಿದ್ದಂತೆ ಗೋವೆಯ ಗಗನಾಂಗಣದಲ್ಲಿ ಯುದ್ಧದ ಕಾರ್ಮೋಡ ಕವಿಯುವ ಮುನ್ಸೂಚನೆಯನ್ನು ಗ್ರಹಿಸಿದ ಅಟಾಯಿಡೆ ಯುದ್ಧದ ಪೂರ್ವತಯಾರಿಗಿಳಿದ. ಕಲ್ಲೀಕೋಟೆಯ ಜಾಮೋರಿನ್, ಬಿಜಾಪುರದ ಆದಿಲ್ ಶಾಹಿ ಮತ್ತು ಗುಜರಾತಿನ ಸುಲ್ತಾನನ ಜೊತೆಗೆ ನಗಿರೆಯಂತಹ ಹಲವು ಸಣ್ಣಪುಟ್ಟ ಅರಸರೂ ತಮ್ಮ ವಿರುದ್ಧ ಒಂದುಗೂಡುತ್ತಿರುವ ಬೇಹುಗಾರರ ವರದಿಯ ಕುರಿತು ಜಾಗೃತನಾಗಿ ತನ್ನ ಸೈನ್ಯ ಸಂಘಟನೆಗೆ ಮುಂದಾದ.
ಅಟಾಯಿಡೆ ಪೋರ್ಚುಗೀಸ್ ಇಂಡಿಯಾದ ವೈಸ್ರಾಯ್ ಹುದ್ದೆಗೆ ಪೋರ್ಚುಗಲ್ ದೊರೆ ಸೆಬಾಸ್ಟೀನ್ ಮತ್ತು ಆತನ ಪಾದ್ರಿಗಳ ನೆಚ್ಚಿನ ಆಯ್ಕೆಯಾಗಿದ್ದ. ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಅಟಾಯಿಡೆ, ಇಂಡಿಯಾದ ಪ್ರಕ್ಷುಬ್ಧ ಪರಿಸ್ಥಿತಿಯನ್ನು ವಿವರಿಸಿ ದೊರೆಗೊಂದು ಮಹತ್ವದ ಪತ್ರ ಬರೆದ. ಜಿಂಟೂ ( ಹಿಂದೂ)ಗಳು ಮತ್ತು ಮೂರ ( ಮುಸಲ್ಮಾನ) ರೆಲ್ಲ ಒಟ್ಟಾಗಿ ಗೋವೆಯನ್ನು ವಶಪಡಿಸಿಕೊಳ್ಳಲು ಹವಣಿಸುತ್ತಿದ್ದು, ಅದನ್ನು ಬಗ್ಗು ಬಡಿದು ಇಂಡಿಯಾದಲ್ಲಿ ಪೋರ್ಚುಗೀಸರ ನೆಲೆಯನ್ನು ಗಟ್ಟಿಗೊಳಿಸಲು ಹೆಚ್ಚು ಸಂಖ್ಯೆಯ ಸಮರನೌಕೆಗಳನ್ನು ಹಾಗೂ ಸಾಕಷ್ಟು ನುರಿತ ಯೋಧರನ್ನು ಕಳಿಸಿಕೊಡಲು ಒತ್ತಾಯಿಸಿದ. ತನ್ನ ಪ್ರಭಾವ ಬೀರಿ ಶೀಘ್ರವಾಗಿ ನೌಕೆಗಳನ್ನು ತರಿಸಿಕೊಂಡು ಯುದ್ಧಕ್ಕೆ ಸುಸಜ್ಜಿತ ಸೈನ್ಯವನ್ನು ಸಜ್ಜುಗೊಳಿಸಿದ. ಮಹಾಯುದ್ದದ ಮೊದಲಹೆಜ್ಜೆಯಾಗಿ ನಗಿರೆಯ ರಾಣಿಗೆ ಬುದ್ಧಿ ಕಲಿಸಬಯಸಿ, 1569ರ ನವೆಂಬರ್ ಹನ್ನೆರಡರಂದು ಎಪ್ಪತ್ತು ಸಮರ ನೌಕೆಗಳೂ ಸೇರಿದಂತೆ ಒಟ್ಟು ನೂರಾ ಮೂವತ್ತು ಹಡಗು ಮತ್ತು ಎರಡೂವರೆ ಸಾವಿರ ಶಸ್ತ್ರಸಜ್ಜಿತ ಯೋಧರ ಜೊತೆ ಹೊನ್ನಾವರವನ್ನು ಮುತ್ತಲು ಹೊರಟ.
ಬೇಹುಗಾರರ ಮೂಲಕ ಲೂಯಿಸ್ ಅಟಾಯಿಡೆ ಯುದ್ದಸಿದ್ದನಾಗುತ್ತಿರುವ ವಿಷಯವನ್ನು ತಿಳಿದುಕೊಂಡ ಚೆನ್ನಭೈರಾದೇವಿಯೂ ಗಡಿರಕ್ಷಣೆಗೆ ಕಟಿಬದ್ಧಳಾಗಿ ನಿಂತಿದ್ದಳು. ಶರಾವತಿ ನದಿಯ ಉತ್ತರಭಾಗದ ಆಯಕಟ್ಟಿನ ಸ್ಥಳದಲ್ಲಿದ್ದ ಹೊನ್ನಾವರದ ಕೋಟೆಯ ತಡೆಗೋಡೆಗಳನ್ನು ಭದ್ರಗೊಳಿಸಿ, ಕಾವಲು ಗೋಪುರಗಳನ್ನು ದುರಸ್ತಿಗೊಳಿಸಿದಳು. ಹಣ್ಕೋಣದಿಂದ ಚಿತ್ತಾಕುಲದ ಅಂಚಿನವರೆಗೂ ಇದ್ದ ತನ್ನ ಗಡಿಗ್ರಾಮದ ದಳಪತಿಗಳಿಗೆ ಸನ್ನದ್ಧರಾಗಿರಲು ಸೂಚಿಸಿ ಹೊಗೆವಡ್ಡಿ ಮತ್ತು ಹಾಡುವಳ್ಳಿಗಳಲ್ಲಿ ಬೀಡುಬಿಟ್ಟಿದ್ದ ಹೆಚ್ಚುವರಿ ಸೇನೆಯನ್ನು ಕರೆಸಿ ಹೊನ್ನಾವರ ಮತ್ತು ಗೇರುಸೊಪ್ಪೆಗಳಲ್ಲಿ ನೆಲೆಗೊಳಿಸಿದಳು. ಬೇಹುಗಾರರ ಮೂಲಕ ಪರಂಗಿಯವರ ನೌಕಾದಳದ ಸಾಮರ್ಥ್ಯವನ್ನು ತಿಳಿದುಕೊಂಡ ಭೈರಾದೇವಿ ಸಮುದ್ರಯುದ್ಧದಲ್ಲಿ ಸದ್ಯದ ಮಟ್ಟಿಗೆ ಅವರನ್ನು ಸೋಲಿಸುವುದು ಕಠಿಣವೆಂಬುದನ್ನು ಗ್ರಹಿಸಿ, ಅವರನ್ನು ಸಮುದ್ರದಿಂದ ಮೇಲಕ್ಕೆ ಬರುವಂತೆ ಮಾಡಲು ಉಪಾಯವೊಂದನ್ನು ಹುಡುಕಿಕೊಂಡು, ತಾನಾಗಿ ಮೇಲೆ ಬೀಳಬಾರದೆಂಬ ತನ್ನ ಸಮರನೀತಿಗೆ ಬದ್ಧಳಾಗಿ ಅಟಾಯಿಡೆಯನ್ನು ಕಾಯತೊಡಗಿದಳು.
೧೫೬೯ ರ ನವೆಂಬರ್ ಇಪ್ಪತ್ತರಂದು ಹೊನ್ನಾವರವನ್ನು ತಲುಪಿದ ಅಟಾಯಿಡೆ, ರಾಣಿಯೇ ಮೊದಲು ಆಕ್ರಮಿಸಲೆಂದು ಸಮುದ್ರದಲ್ಲೇ ಒಂದು ದಿನ ಕಾದ. ಆದರೂ ರಾಣಿ ಸಮುದ್ರಯುದ್ಧಕ್ಕೆ ಇಳಿಯದಿದ್ದುದನ್ನು ಗಮನಿಸಿ, ಸುಮಾರು ಎರಡು ಸಾವಿರ ಸೈನಿಕರನ್ನು ಹೊನ್ನಾವರ ಕೋಟೆಯನ್ನು ಆಕ್ರಮಿಸಲು ಕಳಿಸಿದ. ಕಡಿದಾದ ಗುಡ್ಡದ ತುದಿಯಲ್ಲಿದ್ದ ಕೋಟೆಯನ್ನು ಬೇಧಿಸಲಾಗದೆ ಪರಂಗಿ ಸೈನ್ಯ ಕಂಗೆಟ್ಟಿತು. ಮೇಲ್ಭಾಗಲ್ಲಿ ಕೋಟೆಯನ್ನು ಕಾಯುತ್ತಿದ್ದ ನಗಿರೆಯ ಐನೂರಕ್ಕೂ ಹೆಚ್ಚು ಸೈನಿಕರು ಪರಂಗಿ ಸೈನಿಕರಿಗೆ ಘಟ್ಟವೇರಲು ಬಿಡದೆ ಆಕ್ರಮಣ ನಡೆಸಿದರು. ಕೆಳಗಿನಿಂದ ಪಿರಂಗಿ ಉಡಾಯಿಸಿದರೂ ಎತ್ತರದಲ್ಲಿದ್ದ ಕೋಟೆಯ ಮೇಲೆ ಅದು ನಿರೀಕ್ಷಿತ ಪರಿಣಾಮ ಉಂಟುಮಾಡಲಿಲ್ಲ. ಮೂರು ದಿನ ಕಳೆದರೂ ಕೋಟೆಯನ್ನು ಬೇಧಿಸಲು ಸಾಧ್ಯವಾಗದ ಪರಂಗಿಗಳ ಗಮನ ಹೊನ್ನಾವರ ಪಟ್ಟಣದತ್ತ ತಿರುಗಿತು. ಪಟ್ಟಣಗಳನ್ನು ಸುಟ್ಟುರುಹುವುದರಲ್ಲಿ ಪರಂಗಿಗಳಿಗಿದ್ದ ಪರಿಣಿತಿಯನ್ನು ಅರಿತಿದ್ದ ರಾಣಿ ತಮ್ಮವರ ಜೀವಹಾನಿಯನ್ನು ತಡೆಯಲು ಮೊದಲೇ ಪಟ್ಟಣವನ್ನು ತೆರವುಗೊಳಿಸಿದ್ದಳು. ಹಾಗಿದ್ದೂ ಪರಂಗಿಗಳು ಕಂಡಕಂಡಲ್ಲಿ ಬೆಂಕಿ ಹಚ್ಚಿದರು. ಕಟ್ಟಡಗಳನ್ನು ಉಡಾಯಿಸಿದರು.
ಈ ನಡುವೆ ಕೆಲವು ಬೇಹುಗಾರರನ್ನು ಕಳುಹಿಸಿ ಹಳ್ಳಿಗರ ಮೂಲಕ ಕೋಟೆಗುಡ್ಡವನ್ನು ಏರುವ ಒಳಮಾರ್ಗವನ್ನು ತಿಳಿದುಕೊಂಡರು. ಮತ್ತಷ್ಟು ಬಲದೊಡನೆ ರಹಸ್ಯವಾಗಿ ಕೋಟೆಗುಡ್ಡವನ್ನೇರಿ ಕೋಟೆಯನ್ನು ಮುತ್ತಿ ಅದನ್ನು ಬೇಧಿಸುವಲ್ಲಿ ಯಶಸ್ವಿಯಾದರು. ಕೋಟೆಯ ದಂಡನಾಯಕ ಕಂಟಪ್ಪನಾಯಕ ತನ್ನ ಸೈನ್ಯದ ಸಮೇತ ಪಲಾಯನಗೈದ. ( ಇದು ನಗಿರೆಯವರ ಉದ್ದೇಶಪೂರ್ವಕ ಕೃತ್ಯವಾಗಿತ್ತು) ಗೆದ್ದೆವೆಂದು ಕೋಟೆಯನ್ನು ನುಗ್ಗಿದ ಪರಂಗಿಗಳಿಗೆ ನಿರಾಶೆ ಕಾದಿತ್ತು. ಕೆಲವು ಮುರಿದ ಪಿರಂಗಿ ತುಂಡುಗಳನ್ನು ಬಿಟ್ಟರೆ ಕೋಟೆ ಪೂರ್ಣ ಬರಿದಾಗಿತ್ತು. ಹಾಗಿದ್ದೂ ಹೊನ್ನಾವರ ತಮ್ಮ ವಶವಾಯಿತೆಂದು ಹಿಗ್ಗಿದ ಪರಂಗಿಗಳು, ವಾರ್ಷಿಕವಾಗಿ ನವೆಂಬರ್ ಇಪ್ಪತ್ತೈದರಂದು ತಾವು ಆಚರಿಸುವ ಸೇಂಟ್ ಕ್ಯಾಥರೀನ್ ಉತ್ಸವವನ್ನು ಕೋಟೆಯೊಳಗೇ ಆಚರಿಸಿ, ತಿಂದುಂಡು ಕುಡಿದು ಕುಣಿದು ಕುಪ್ಪಳಿಸಿದರು. ಜಾರ್ಜ್ ಡೇ ಮೌರಾನನ್ನು ಕೋಟೆಯ ಕಪ್ತಾನನ್ನಾಗಿ ನೇಮಕ ಮಾಡಿದ ಅಟಾಯಿಡೆ ಅಲ್ಲಿ ನಾಲ್ಕುನೂರು ಸೈನಿಕರನ್ನು ಕಾವಲಿಗಿಟ್ಟ. ಕೋಟೆಯನ್ನು ಗೆದ್ದು ರಾಣಿಯನ್ನು ಸೋಲಿಸಿದೆನೆಂದು ಭಾವಿಸಿದ ಅಟಾಯಿಡೆ, ಕಪ್ಪವನ್ನು ಕೊಡಲು ರಾಣಿಗೆ ಸಂದೇಶ ಕಳಿಸಿದ. ಅವನ ಪ್ರಕಾರ ಹತ್ತು ವರ್ಷದ ಕಪ್ಪವಲ್ಲದೆ ರಾಣಿಯು ಪ್ರತಿ ವರ್ಷ ಖಂಡಿಗೆ ಇಪ್ಪತ್ತೆರಡೂವರೆ ಪಗೋಡದಂತೆ ಒಂದು ಹಡಗು ತುಂಬುವಷ್ಟು ಕಾಳುಮೆಣಸು, ಜೊತೆಗೆ ಇಪ್ಪತ್ತು ಸಾವಿರ ಕ್ರುಜೊಡೋದಷ್ಟು ಯುದ್ಧದ ವೆಚ್ಚ ಭರಿಸಬೇಕಿತ್ತು.
“ಬರಿದಾಗಿದ್ದ ಕೋಟೆ ಪ್ರವೇಶಿಸುವುದು ಪೌರುಷವಲ್ಲ. ಸಾಮರ್ಥ್ಯವಿದ್ದರೆ ಕಾನೂರುಕೋಟೆಯಲ್ಲಿರುವ ನನ್ನನ್ನು ಸೋಲಿಸಿ ಕಪ್ಪವನ್ನು ಕೊಂಡುಹೋಗೆಂದು” ರಾಣಿ ಮರುಸಂದೇಶ ಕಳುಹಿಸಿದಳು. ಸಿಟ್ಟಿನಿಂದ ಉರಿದೆದ್ದ ಅಟಾಯಿಡೆ, ‘ಕೌ ಕಿ ಲಾದ್ರ ನೊ ಮೊರ್ದೆ’ (ಬೊಗಳುವ ನಾಯಿ ಕಚ್ಚದು) ಎಂದು ತನ್ನ ಪೋರ್ಚುಗೀಸ್ ಭಾಷೆಯಲ್ಲಿ ರಾಣಿಯನ್ನು ಅಪಹಾಸ್ಯ ಮಾಡುತ್ತ, ತಕ್ಷಣ ನಗಿರೆ ಸೈನ್ಯವನ್ನು ಬೆನ್ನಟ್ಟಿ ರಾಣಿಯನ್ನು ಹಿಡಿದು ಹೆಡೆಮುರಿ ಕಟ್ಟಿರೆಂದು ತನ್ನ ಕಪ್ತಾನನಿಗೆ ಆದೇಶಿಸಿದ. ಬೇಕೆಂದೇ ಪರಂಗಿಗಳಿಗೆ ಕಾಣುವಂತೆ ಶರಾವತಿ ನದಿಯಲ್ಲಿ ನಾವೆಯೇರಿ ಹೋಗುತ್ತಿದ್ದ ಗೇರುಸೊಪ್ಪೆ ಸೈನಿಕರನ್ನು ಪರಂಗಿಸೈನ್ಯ ಬೆನ್ನಟ್ಟಿ ಹೊರಟಿತು. ಅಟಾಯಿಡೆ ತಾನು ಮತ್ತು ಕ್ಯಾಪ್ಟನ್ ಡಿಸಿಲ್ವಾ ನದಿಯಲ್ಲಿ ಹೋಗುವ ತಂಡದ ನೇತೃತ್ವ ವಹಿಸಿಕೊಂಡು, ಕ್ಯಾಪ್ಟನ್ ಕಪೆಡ್ರೋ ಮೆಂಜಿಸ್ ನೇತೃತ್ವದಲ್ಲಿ ಇನ್ನೊಂದು ತಂಡ ಶರಾವತಿಯ ದಕ್ಷಿಣದಂಡೆಯ ರಸ್ತೆಯ ಮೂಲಕ ಅವರನ್ನು ಬೆನ್ನಟ್ಟುವಂತೆ ಆದೇಶಿಸಿದ. ಕುದುರೆ ಸವಾರರು, ಬಂದೂಕು ತುಕಡಿ, ಆಹಾರ ಮತ್ತು ಬಿಡಾರ ಸಾಮಗ್ರಿಗಳ ಗಾಡಿಗಳಿಗೆ ರಸ್ತೆಯ ಮೂಲಕ ನಗಿರೆಗೆ ಬರಲು ಸೂಚಿಸಿದ. ನದಿಯಲ್ಲಿ ಬೆನ್ನಟ್ಟಿ ಹೊರಟವರಿಗೆ ಹೈಗುಂದದ ಬಳಿ ಗೇರುಸೊಪ್ಪೆಯ ಸೈನಿಕರ ನಾವೆಗಳು ಕಾಣಿಸಿಕೊಂಡರು. ಪರಂಗಿಗಳು ಅವರನ್ನು ಹಿಡಿದೇಬಿಟ್ಟೆವೆಂದು ಬೆನ್ನಟ್ಟಿದರು.
ಅಳ್ಳಂಕಿಯ ಬಳಿ ಇನ್ನೇನು ಕೈಗೆಟಕಿದರು ಎನ್ನುವಷ್ಟರಲ್ಲಿ ನಗಿರೆಯ ಸೈನಿಕರು ಇವರೆದುರೇ ನಾವೆಯಿಳಿದು ಎಡದಂಡೆಯಲ್ಲಿ ಓಡುತ್ತಿರುವುದು ಕಾಣಿಸಿತು. ಹೇಡಿಗಳೆಂದು ಅವರನ್ನು ಹೀಗಳೆಯುತ್ತ ಪರಂಗಿಸೈನ್ಯ ಬೆಂಬತ್ತಿತು. ನಗಿರೆ ಸೈನಿಕರು ಒಂದು ಜಾಗದಲ್ಲಿ ನಿಂತು, ‘ಈಗೋಡಿ’ ಎಂದು ಕೂಗಿದರು. ಮರೆಯಲ್ಲಿ ಬೀಡು ಬಿಟ್ಟಿದ್ದ ಪಡೆಯೊಂದು ಸದ್ದಿಲ್ಲದೆ ಎದ್ದು ಬಂದು ಮುಂದಿನ ಸಾಲಿನ ಹಲವು ಪರಂಗಿ ಯೋಧರನ್ನು ಸೆರೆಹಿಡಿದು ಮರೆಯಾಯಿತು. ಮತ್ತೆ ಸ್ವಲ್ಪ ದೂರ ಓಡಿದ ನಗಿರೆ ಸೈನಿಕರು ‘ಬೇಗೋಡಿ’ ಎಂದು ಕೂಗಿದರು. ಅಲ್ಲಿಯೂ ಮರೆಯಲ್ಲಿದ್ದ ಒಂದಿಷ್ಟು ಸೈನಿಕರು ಎದ್ದು ಬಂದು ಕೆಲವು ಪರಂಗಿ ಸೈನಿಕರನ್ನು ಸೆರೆಹಿಡಿದು ಕೊಂಡೊಯ್ದರು. ಮುಂದೆ ಮತ್ತೊಂದೆಡೆ, ‘ಕುಂತೋಡಿ’ ಎಂದು ಕೂಗಿ ಇನ್ನೊಂದಿಷ್ಟು ಪರಂಗಿಗಳನ್ನು ಸೆರೆಹಿಡಿದು ಹಿಡಿದೊಯ್ದರು. ಈ ವಿಚಿತ್ರ ಅರ್ಥವಾಗದೆ ಅಟಾಯಿಡೆ ಕಂಗಾಲಾದ. ತನ್ನ ಕಪ್ತಾನನ್ನು ಕರೆದು, ಇವತ್ತಿನ ಮಟ್ಟಿಗೆ ಬೆನ್ನಟ್ಟುವ ವ್ಯರ್ಥಸಾಹಸವನ್ನು ನಿಲ್ಲಿಸಿ ಸೂಕ್ತ ಸ್ಥಳದಲ್ಲಿ ಸೈನ್ಯಕ್ಕೆ ತಂಗಲು ವ್ಯವಸ್ಥೆ ಮಾಡುವಂತೆ ಮತ್ತು ಕಾನೂರು ಕೋಟೆ ಎಷ್ಟು ದೂರದಲ್ಲಿದೆಯೆಂಬ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದ. ಅಷ್ಟರಲ್ಲಿ ಹೊನ್ನಾವರದಿಂದ ಆಹಾರ ಸಾಮಗ್ರಿಗಳನ್ನು ಹೊತ್ತ ಗಾಡಿಗಳು ಬಂದು ತಲುಪಿದ್ದವು.
ಪೆಡ್ರೋ ಮೆಂಜಿಸ್ ತನ್ನ ಸೈನಿಕರೊಡನೆ ನಾಗೋಡಿ ಕಡೆಯಿಂದ ಕಾನೂರು ಕೋಟೆಗೆ ಲಗ್ಗೆ ಹಾಕಲು ಹೋದನೆಂದು ತಿಳಿಯಿತು. ನಗಿರೆಯ ಸಮೀಪದಲ್ಲಿದ್ದ ಜಿನಬೈಲು ಎಂಬ ಹಳ್ಳಿಯಲ್ಲಿ ಪರಂಗಿ ಸೈನ್ಯ ಬಿಡಾರ ಹೂಡಿತು. ‘ಈಗೋಡಿ, ಎಂದು ಕೂಗಿದರು. ಮರೆಯಲ್ಲಿ ಬೀಡು ಬಿಟ್ಟಿದ್ದ ಪಡೆಯೊಂದು ಸದ್ದಿಲ್ಲದೆ ಎದ್ದು ಬಂದು ಮುಂದಿನ ಸಾಲಿನ ಹಲವು ಪರಂಗಿ ಯೋಧರನ್ನು ಸೆರೆಹಿಡಿದು ಮರೆಯಾಯಿತು. ಮತ್ತೆ ಸ್ವಲ್ಪ ದೂರ ಓಡಿದ ನಗಿರೆ ಸೈನಿಕರು ‘ಬೇಗೋಡಿ’ ಎಂದು ಕೂಗಿದರು. ಅಲ್ಲಿಯೂ ಮರೆಯಲ್ಲಿದ್ದ ಒಂದಿಷ್ಟು ಸೈನಿಕರು ಎದ್ದು ಬಂದು ಕೆಲವು ಪರಂಗಿ ಸೈನಿಕರನ್ನು ಸೆರೆಹಿಡಿದು ಕೊಂಡೊಯ್ದರು. ಮುಂದೆ ಮತ್ತೊಂದೆಡೆ, ‘ಕುಂತೋಡಿ’ ಎಂದು ಕೂಗಿ ಇನ್ನೊಂದಿಷ್ಟು ಪರಂಗಿಗಳನ್ನು ಸೆರೆಹಿಡಿದು ಹಿಡಿದೊಯ್ದರು. ಈ ವಿಚಿತ್ರ ಅರ್ಥವಾಗದೆ ಅಟಾಯಿಡೆ ಕಂಗಾಲಾದ. ತನ್ನ ಕಪ್ತಾನನ್ನು ಕರೆದು, ಇವತ್ತಿನ ಮಟ್ಟಿಗೆ ಬೆನ್ನಟ್ಟುವ ವ್ಯರ್ಥಸಾಹಸವನ್ನು ನಿಲ್ಲಿಸಿ ಸೂಕ್ತ ಸ್ಥಳದಲ್ಲಿ ಸೈನ್ಯಕ್ಕೆ ತಂಗಲು ವ್ಯವಸ್ಥೆ ಮಾಡುವಂತೆ ಮತ್ತು ಕಾನೂರು ಕೋಟೆ ಎಷ್ಟು ದೂರದಲ್ಲಿದೆಯೆಂಬ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದ. ಅಷ್ಟರಲ್ಲಿ ಹೊನ್ನಾವರದಿಂದ ಆಹಾರ ಸಾಮಗ್ರಿಗಳನ್ನು ಹೊತ್ತ ಗಾಡಿಗಳು ಬಂದು ತಲುಪಿದ್ದವು.
ಪೆಡ್ರೋ ಮೆಂಜಿಸ್ ತನ್ನ ಸೈನಿಕರೊಡನೆ ನಾಗೋಡಿ ಕಡೆಯಿಂದ ಕಾನೂರು ಕೋಟೆಗೆ ಲಗ್ಗೆ ಹಾಕಲು ಹೋದನೆಂದು ತಿಳಿಯಿತು. ನಗಿರೆಯ ಸಮೀಪದಲ್ಲಿದ್ದ ಜಿನಬೈಲು ಎಂಬ ಹಳ್ಳಿಯಲ್ಲಿ ಪರಂಗಿ ಸೈನ್ಯ ಬಿಡಾರ ಹೂಡಿತು. ‘ಈಗೋಡಿ, ಕುಂತೋಡಿ ಬೇಗೋಡಿ ಎಂಬುದೆಲ್ಲ ಹಳ್ಳಿಯ ಹೆಸರುಗಳೆಂದೂ, ಹಾಗೆ ಕೂಗಿ ತಮ್ಮವರಿಗೆ ಸೂಚನೆ ರವಾನಿಸಿ, ಬೆನ್ನಟ್ಟಿ ಬರುತ್ತಿರುವ ಪರಂಗಿ ಸೈನಿಕರನ್ನು ಸೆರೆಹಿಡಿಯಲು ಅದು ನಗಿರೆಯವರು ಹೂಡಿದ್ದ ಉಪಾಯವೆಂದೂ ಬೇಹುಗಾರರು ತಿಳಿಸಿದಾಗ ಅಟಾಯಿಡೆ ಕೈ ಕೈ ಹಿಸುಕಿಕೊಂಡ. ಕೋಪ ಇಮ್ಮಡಿಸಿತು. ಮರುದಿನದ ಸಂಜೆಯೊಳಗೆ ರಾಣಿಯನ್ನು ಹಿಡಿದು ಹೆಡೆಮುರಿ ಕಟ್ಟುವ ಸಂಕಲ್ಪ ತೊಟ್ಟ. ಅದುವರೆಗೆ ತನ್ನ ಸೈನ್ಯದ ಒಟ್ಟು ಇನ್ನೂರು ಸೈನಿಕರು ನಗಿರೆಯವರಿಗೆ ಸೆರೆಸಿಕ್ಕಿದ್ದು ಆತನ ಆಕ್ರೋಶಕ್ಕೆ ಕಾರಣವಾಗಿತ್ತು.
ಮುಂದೊರೆಯುವುದು…
- ಡಾ.ಗಜಾನನ ಶರ್ಮಾ