ಕನ್ನಡ ಕಾವ್ಯ : ಆನಂದ ಝುಂಜರವಾಡ

ಕನ್ನಡ ಕಾವ್ಯವನ್ನು ಕುರಿತು ಹೊಸ ರೀತಿಯ ಅಧ್ಯಯನಕ್ಕೆ ಒಳಪಡಿಸುವ ಉದ್ದೇಶದಿಂದ, ನಮ್ಮ ನಡುವಿನ ಒಳ್ಳೆಯ ಲೇಖಕ ಕವಿ ಆನಂದ ಝುಂಜರವಾಡರಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿ ಬರೆಯಿಸಿ ಇದನ್ನು ಪ್ರಕಟಿಸಿದೆ. ಕನ್ನಡ ಕಾವ್ಯ ಪುಸ್ತಕದ ಕುರಿತು ಲೇಖಕರಾದ ರಘುನಾಥ ಕೃಷ್ಣಮಾಚಾರ್ ಅವರು ಬರೆದ ಒಂದು ಪುಸ್ತಕ ಪರಿಚಯ ತಪ್ಪದೆ ಓದಿ…

ಇದರಲ್ಲಿ ಎರಡು ಭಾಗಗಳು ಇದ್ದು ಮೊದಲ ಭಾಗವು ಕಾವ್ಯದ ಕುರಿತು ಬರೆದ ಅವರ ತಾತ್ವಿಕ ಅಂತರಶಿಸ್ತೀಯ ಚಿಂತನೆಯನ್ನು ಒಳಗೊಂಡಿದೆ. ಎರಡನೇ ಭಾಗದಲ್ಲಿ ಅವರು ಅದನ್ನು ಪ್ರಾಯೋಗಿಕ ರೂಪದಲ್ಲಿ ಕನ್ನಡ ಕಾವ್ಯಕ್ಕೆ ಅನ್ವಯಿಸಿ ಪರಿಶೀಲನೆ ನಡೆಸಿದ್ದಾರೆ.

ಅವರ ಮೊದಲ ಭಾಗದ ಚಿಂತನೆಯನ್ನು ಹೀಗೆ ಗ್ರಹಿಸಬಹುದು.ಕಾವ್ಯವನ್ನು ಸಾಂಪ್ರದಾಯಿಕವಾಗಿ ಛಂದಸ್ಸು, ಅಲಂಕಾರಗಳ ಮೂಲಕ ಅಧ್ಯಯನ ಮಾಡುವ ಬದಲಾಗಿ ಅದರಲ್ಲಿ ಅಂತರ್ಗತವಾಗಿ ಇರುವ ಲಯದ ಮೂಲಕ ಗ್ರಹಿಕೆ ಅನೇಕ ಒಳನೋಟಗಳಿಗೆ ಕಾರಣವಾಗುತ್ತದೆ.

ಉದಾಹರಣೆಗೆ ಕನ್ನಡದ ಮೊದಲ ಘಟ್ಟದ ಕಾವ್ಯ ಚಂಪೂವಿನ ಗದ್ಯ ಪದ್ಯ ಎಂದು ಬೇರೆ ಬೇರೆಯಾಗಿ ಗ್ರಹಿಸುವ ಬದಲಿಗೆ, ಒಂದೇ ಕಾವ್ಯದ ಹೆಣಿಗೆ ಎಂದು ಪರಿಗಣಿಸಿ, ಅದನ್ನು ಪಂಪನ ಆಗಮಿಕ ಮತ್ತು ಲೌಕಿಕ ವಿಂಗಡನೆಯನ್ನು ಗ್ರಹಿಸಲು ಬಳಸಬಹುದು. ಚಂಪೂ ಸಂಸ್ಕೃತದ ಮೂಲಕ ಕನ್ನಡಕ್ಕೆ ಬಂತು ಎನ್ನುವುದಕ್ಕಿಂತ, ಈಗಾಗಲೇ ಕವಿರಾಜಮಾರ್ಗಕಾರ ಉಲ್ಲೇಖ ಮಾಡಿದ ,’ಗದ್ಯ ಪದ್ಯಾಶ್ರಮ ಗುರುಗಳಿಂದ’ ಅದನ್ನು ಪಡೆದ ಸಾಧ್ಯತೆಯನ್ನು ಪರಿಶೀಲಿಸುವ ಅಗತ್ಯ ವಿದೆ .ಇದರಿಂದ ಅವನ ಕಾವ್ಯಗಳನ್ನು ಸಮಷ್ಟಿಯಾಗಿ ಅಧ್ಯಯನ ಮಾಡಲು ‌ಸಾಧ್ಯವಾಗುತ್ತದೆ.

ಅವರು ಕೃತಿಯ ಎರಡನೇ ಭಾಗವನ್ನು ಉಳಿದ ಛಂದೋಪ್ರಕಾರದ ರಚನೆಗಳಾದ ಷಟ್ಪದಿ, ಸಾಂಗತ್ಯ ತ್ರಿಪದಿಗಳಿಂದ ರಚಿತವಾದ ಕಾವ್ಯಗಳಿಗೆ ಅನ್ವಯಿಸುತ್ತದೆ. ಮೊದಲ ಘಟ್ಟ ಲೌಕಿಕ ,ಆಗಮಿಕ ಎಂದು ಇಬ್ಬಾಗಗೊಂಡಿದ್ದರೆ, ಮುಂದಿನದು ಭಕ್ತಿ ಕಾವ್ಯವಾದ್ದರಿಂದ ಈ ಇಬ್ಬಗೆಯ ತೊಡಕು ಪರಿಹಾರಗೊಂಡು ಎರಡನ್ನೂ ಒಂದರಲ್ಲೇ ಎರಕಹೊಯ್ದ ಲಯಗಾರಿಕೆಯನ್ನು ಬಳಸಲಾಗಿದೆ.
‌‌‌
ಇದಕ್ಕೆ ಅವರು ಕನ್ನಡದ ಎರಡು ಭಕ್ತಿ ಧಾರೆಗಳಾದ ವಚನ ಮತ್ತು ಕೀರ್ತನೆಗಳನ್ನು ತೆಗೆದುಕೊಂಡು ವಿಶ್ಲೇಷಣೆ ಮಾಡಿದ್ದಾರೆ. ಅವರ ಪ್ರಕಾರ ದಾಸರು ಏನು ಮಾಡಿದರು “ಬೆಟ್ಟಕ್ಕೆ ಚಳಿಯಾದೊಡೆ ಏನ ಹೊದಿಸುವರಯ್ಯ'” ಎಂದು ಬರೆಯಲಾರರು. ಏಕೆಂದರೆ ಅವರು ಪರಮಾತ್ಮನ ಲೀಲೆಯಲ್ಲಿ ಅನಂತವಾದ ವಿಶ್ವಾಸ ತಳೆದವರು. ಆದರೆ ವಚನಕಾರರು ಮನುಷ್ಯ ಪ್ರಯತ್ನದಲ್ಲಿ ನಂಬಿಕೆ ಇಟ್ಟುಕೊಂಡವರು. ಎನ್ನುತ್ತಾರೆ (ಆದರೆ ‘ನೀನೊಲಿದರೆ ಕೊರಡು ಕೊನರವುದಯ್ಯ’ ಎನ್ನುವ ಬಸವಣ್ಣನ ವಚನದ ಹಿಂದೆ ಇರುವ ಇದೇ ಬಗೆಯ ಧೋರಣೆ ಯನ್ನು ಗಮನಿಸಿಲ್ಲ) ‌‌‌
ವಚನಗಳನ್ನು ಹಾಡುತ್ತಿದ್ದರು ಎಂಬುದನ್ನು ಹರಿಹರನ ರಗಳೆಯಲ್ಲಿ ಬರುವ ” ಗೀತಮಂ ಪಾಡುತಂ’ ಎನ್ನುವ ಮಾತು ಧೃಡೀಕರಿಸುತ್ತದೆ. ಇದು ವಚನಗಳ ಲಯಬದ್ಧ ಹಾಡುಗಾರಿಕೆ ಆಗಿನ ಕಾಲದಲ್ಲಿ ಪ್ರಚಲಿತವಾಗಿತ್ತು ಎನ್ನುವುದಕ್ಕೆ ಸಾಕ್ಷಿ. ನಂತರ ಬಂದ ಭಕ್ತಿ ಕವಿ ಕಾವ್ಯಗಳಿಗೆ ಅವುಗಳ ಗಮಕವಾಚನದ ಕುರಿತು ಗಮನಸೆಳೆಯುತ್ತಾರೆ ಆದರೆ ಭರತೇಶ ವೈಭವದಲ್ಲಿ- ಇದನ್ನು ಜೈನರಲ್ಲಿ ಪರಿಪಾಠ ಇರುವುದರ ಕುರಿತು ಹಂಪನಾ ಉಲ್ಲೇಖ ಮಾಡಿದ್ದಾರೆ. ಯೋಗಭೋಗ ಸಮನ್ವಯ ಸಾಂಗತ್ಯ ಲಯದೊಳಗೆ ಪ್ರವೇಶ ಪಡೆದ ಕುರಿತು ಇನ್ನಷ್ಟು ವಿಚಾರ ಮಾಡುವ ಅಗತ್ಯವಿದೆ. ಅದರಂತೆ ಪಂಪನ ಭರತ ಮತ್ತು ರತ್ನಾಕರನ ಭರತರು ಚಂಪೂ ಮತ್ತು ಸಾಂಗತ್ಯ ಲಯಗಳನ್ನು ಒಳಗೊಂಡು ರೂಪುಗೊಂಡ ವಿನ್ಯಾಸಗಳ ಕುರಿತೂ ಪರಿಶೀಲಿಸಬಹುದು.

ಕನ್ನಡ ಕಾವ್ಯ ಪುಸ್ತಕದ ಲೇಖಕರು ಆನಂದ ಝುಂಜರವಾಡ

ಆಧುನಿಕ ಕಾವ್ಯದಲ್ಲಿ ಬೇಂದ್ರೆಯವರ ಮತ್ತು ಅಡಿಗರ ಕಾವ್ಯದ ಲಯಗಳನ್ನು ಮಾತ್ರ ಅಧ್ಯಯನಕ್ಕೆ ‌ಬಳಸಿಕೊಳ್ಳಲಾಗಿದೆ. ಬೇಂದ್ರೆಯವರಿಗೆ ಇದ್ದ ವೈದಿಕ ಮತ್ತು ಮರಾಠಿ,ಹಾಗೂ ಕನ್ನಡ ಕಾವ್ಯದ ಹಿನ್ನೆಲೆಗಳು ಅವರನ್ನು ವಿವಿಧ ಛಂದೋಲಯಗಳಿಗೆ ತೆರೆದುಕೊಂಡು, ಅವುಗಳಲ್ಲಿ ಪ್ರಯೋಗಶೀಲರಾಗುವಂತೆ ಮಾಡಿತು. ‘ರುದ್ರ ವಿಲಾಸ’ ಮತ್ತು ‘ಶಿವಕಾರುಣ್ಯ’ಗಳೆರಡು ಅವರ ಕಾವ್ಯದ ಜೀವನಾಡಿಗಳಾಗಿರುವುದನ್ನು ಗುರುತಿಸಲಾಗಿದೆ. ಅಡಿಗರಲ್ಲಿ ಇದ್ದ ಶುದ್ಧ ಕಾವ್ಯನಿಷ್ಠೆ ಅವರಿಂದ’ ಮೋಹನ ಮುರುಳಿ ‘ ಮತ್ತು ‘ಭೂಮಿಗೀತ’ದಂತಹ ಅಂತರ್ಮುಖಿ ಕಾವ್ಯದ ರಚನೆಗೆ ಕಾರಣವಾದರೆ ಅವರ ಬಹಿರ್ಮುಖತೆ, ಕಟ್ಟುವೆವು ನಾವು ‘ – ರೀತಿಯ ಸಮಾಜ ಮುಖಿ ರಚನೆಗೆ ಕಾರಣವಾಯಿತು. ‌‌‌

ಆಲಯ ಮತ್ತು ಬಯಲುಗಳನ್ನು ತಮ್ಮ ಕಾವ್ಯಲಯದಲ್ಲಿ ಹಾಸುಹೊಕ್ಕಾಗಿಸಿದಾಗ ಮಾತ್ರ ನೈಜ ಕಾವ್ಯದ ‌ಸಿದ್ದಿ ಎನ್ನುವ ನಿಲುವಿಗೆ ಲೇಖಕ ಬದ್ದರಾಗಿದ್ದಾರೆ. ಪಂಪ ಇದನ್ನೇ ಬಹುಶಃ’ ದೇಸಿಯೊಳ್ ಪುಗುವುದು ಪೊಕ್ಕು ಮಾರ್ಗದೊಳೆ ತಳ್ವುದು, ತಳ್ತೊಡೆ ಕಾವ್ಯ ಬಂಧಂ ಒಪ್ಪುಗುಂ’ ಎಂದಿರಬೇಕು.

ಈ ಕೃತಿಯ ಸಾಧನೆಗಳು:

೧. ಅನ್ಯಾನ್ಯ ಶಿಸ್ತುಗಳ ಮೂಲಕ ಕಾವ್ಯ ಪ್ರವೇಶದ ಸಾಧ್ಯತೆಗಳನ್ನು ಮೊದಲ ಬಾರಿಗೆ ತೋರಿಸಿಕೊಟ್ಟಿರುವುದು ( ಪಾಕಶಾಸ್ತ್ರದಿಂದ ಹಿಡಿದು, ವಿಜ್ಞಾನ, ಸಂಗೀತ , ಕಾಮಶಾಸ್ತ್ರ, ಭಾಷಾಶಾಸ್ತ್ರ ಇತ್ಯಾದಿ)
೨. ಅನ್ಯಭಾಷೆಗಳ ಮೂಲಕ ಕೂಡ ಕನ್ನಡ ಕಾವ್ಯ ಪ್ರವೇಶಕ್ಕೆ ದಾರಿಸೂಚನೆ( ಸಂಸ್ಕೃತ, ಮರಾಠಿ, ಗುಜರಾತಿ)
೩. ಲಯದ ಮೂಲಕ ಕನ್ನಡ ಕಾವ್ಯ ಅಧ್ಯಯನಕ್ಕೆ ಹೊಸ ಬಾಗಿಲನ್ನು ತೆರೆಯುವ ಮೂಲಕ ಹೊಸ ಆಸಕ್ತರಿಗೆ ಮಾರ್ಗದರ್ಶನ ಮಾಡಿರುವುದು.
೪. ಅನ್ಯಭಾಷೆಗಳ, ಶಿಸ್ತುಗಳ ಪಾರಿಭಾಷಿಕ ಪದಗಳನ್ನು ಯಥಾವತ್ ಬಳಸಿರುವುದು.

ಮಿತಿಗಳು ಎಂದು ಕರೆಯಬಹುದಾದರೆ :

೧. ಅನ್ಯಾನ್ಯ ಶಿಸ್ತುಗಳ ಪರಿಚಯ ಇಲ್ಲದವರಿಗೆ, ಅವರು ಬಳಸುವ ಪಾರಿಭಾಷಿಕ ಪದಗಳಿಂದ ಮೊದಲುಗೊಂಡು ಅವರಲ್ಲಿ ದಿಗ್ಭ್ರಮೆಯನ್ನು ಮೂಡಿಸುತ್ತದೆ.
೨: ಅಂತೆಯೇ ಅವರ ಅನ್ಯಭಾಷೆಗಳ ಮೂಲಕ ಪ್ರವೇಶ ಕೂಡ ಇದೇ ಬಗೆಯ ಅಪರಿಚತತೆಗೆ ಕಾರಣವಾಗುತ್ತದೆ.
೩. ಛಂದೋಲಯಗಳನ್ನು ಪ್ರಧಾನವಾಗಿ ಬಳಸುವ ಲೇಖಕರು ರಂ.ಶ್ರೀ .ಮುಗುಳಿಯವರ ‘ ಪ್ರಾಚೀನ ಕಾವ್ಯ ರೂಪಗಳು’ ಎನ್ನುವ ಮೂಲಭೂತ ಕೃತಿಯನ್ನು ಗಮನಕ್ಕೆ ತಂದುಕೊಂಡಂತೆ ಕಾಣುವುದಿಲ್ಲ.
೪. ಈಗಾಗಲೇ ಸಿದ್ದವಾಗಿರುವ ಕವಿರಾಜಮಾರ್ಗದ ಕರ್ತೃ ಶ್ರೀ ವಿಜಯ ಎಂಬುದನ್ನು ಬಿಟ್ಟು ಹಳೆಯ ನೃಪತುಂಗ ಎನ್ನುವ ಹೆಸರನ್ನು ಬಳಸಿರುವುದು ( ನನ್ನ ಗ್ರಹಿಕೆ ಸರಿಯಾಗಿ ಇದ್ದರೆ) .
ಮೂರು ದಶಕಗಳ ಹಿಂದೆ “ಕನ್ನಡಿಗಳು ಸಾಕು” ಎಂದು ನಮ್ಮ ಮೇಷ್ಟ್ರು ಡಾ.ಕೆ.ವಿ.ನಾರಾಯಣ ಅವರು ಪಾಶ್ಚಾತ್ಯ ಸಾಹಿತ್ಯದ ದುರ್ಬೀನನ ಮೂಲಕ ನಮ್ಮ ಸಾಹಿತ್ಯವನ್ನು ಅಳೆಯುವ ಪದ್ದತಿಯ ವಿರುದ್ಧ ಕೊಟ್ಟ ಕರೆ , ಇವರ ಮೂಲಕ ಇಂದು ಸಾರ್ಥಕವಾಗಿದೆ. ಇದು ಇತರ ದಕ್ಷಿಣ ಭಾರತದ ಭಾಷೆಗಳ ಜತೆಗೆ ನಡೆದರೆ ಆರೋಗ್ಯಕರ.ಅದಕ್ಕೆ ಬೇಕಾದ ತಳಹದಿಯನ್ನು ಅವರು ಭಾಷಾ ಭಾರತಿಯ ಅಧ್ಯಕ್ಷರಾಗಿ ರೂಪಿಸಿದರು. ಅದನ್ನು ಬಳಸಿಕೊಂಡು ಮಾಡಬಹುದಾದ ವಿಧಾನಕ್ಕೆ ಈ ಕೃತಿ ಒಂದು ಮುನ್ನುಡಿ ಇದ್ದಂತೆ. ಇಂತಹ ಕೃತಿ ಯನ್ನು ರಚಿಸಿದ ಲೇಖಕ ಆನಂದ ಝುಂಜರವಾಡರಿಗೂ ಪ್ರಕಟಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿಗೂ ಅಭಿನಂದನ.


  • ರಘುನಾಥ ಕೃಷ್ಣಮಾಚಾರ್ (ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು)

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Buy
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW