‘ಅನಿಮ’ ಪ್ರಕಾಶನದಲ್ಲಿ ಮೂಡಿ ಬಂದ ಕವಿ ಚೀಮನಹಳ್ಳಿ ರಮೇಶ್ ಬಾಬು ಅವರ ಆಯ್ದ ಒಂದು ಕವನ ಓದುಗರಿಗಾಗಿ, ಓದಿ, ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ…
ಕತ್ತಲೆಂದರೇನೆ ಹಾಗೆ
ಕಪ್ಪು ಕಪ್ಪೆಂಬ ಮೂದಲಿಕೆ
ಕಪ್ಪೆನ್ನುವುದು ಬಣ್ಣವಷ್ಟೆ
ಕಾಮನಬಿಲ್ಲಿನಲ್ಲಿ ಕಪ್ಪಿಲ್ಲದಿರುವುದು
ಅಥವಾ ಕಾಣದಿರುವುದು
ಕತ್ತಲಿನ ತಪ್ಪೆ?
ಮತ್ತೆ ಹೇಗೆ ಹೇಳುವುದು…
ಎಲೆಗಳು ಉದುರುವ ಸದ್ದು
ತಾರೆಗಳು ಮಿನುಗುವ ಬಗೆ
ಸಕಲ ಜೀವಿಗಳ ಮಿಡಿತದ ನಗೆ
ಕತ್ತಲಿಗಷ್ಟೇ ಗೊತ್ತೆಂದು
ಇಷ್ಟಕ್ಕೂ
ಕತ್ತಲಿನ ಮತ್ತಿಗೆ ಮೋಹಗೊಂಡು
ಬೆಳಕು
ಕತ್ತಲನ್ನು ಕೂಡಿ ಬೆಳದಿಂಗಳನ್ನು ಹಡೆದಿರುವಾಗ
ಅದು ಯಾರ ಕುಡಿಯೆಂದು ಹೇಳುವುದು !
ಕಪ್ಪೆಂದರೆ ಕದವಿಕ್ಕುವ ಬಿಳಿಯೆಂದರೆ ಎದೆಯಿಕ್ಕುವ
ಕತ್ತಲು – ಬೆಳಕುಗಳ ಫಸಲನ್ನು
ಬೆಳಕಿನ ವಾರಸುದಾರಿಕೆಗೆ ವಹಿಸುವ
ವಕಾಲತ್ತುಗಳಿಗೆ ಹೇಗೆ ತಿಳಿದೀತು
ಕಪ್ಪು ನೆಲದ ಕಸುವೆಂದು !
ಮತ್ತು
ಎದೆಯನ್ನೆ ಕಾಣಿಸದೆ ಎದೆಹಾಲುಣಿಸುವ ಕಲೆ
ಕತ್ತಲೆಗೆ ಮಾತ್ರ ಗೊತ್ತೆಂದು !
- ಚೀಮನಹಳ್ಳಿ ರಮೇಶ್ ಬಾಬು (ಕವಿಗಳು, ಲೇಖಕರು)