ಕವಿತೆಯ ಪ್ರೇರಣೆ ಹಾಗೂ ಕೆಳಕಂಡ ಮಾಹಿತಿ :
ಕೆನ್ನೀಲಿಯಾಗುವುದು ಒಂದು ನೋವಿನ ಪ್ರಕ್ರಿಯೆ..ಹಿಂದೆ ಕೆನ್ನೀಲಿ ಬಣ್ಣವನ್ನು ಬಸವನಹುಳುವಿನ ಗ್ರಂಥಿಯಿಂದ ತಯಾರಿಸುತ್ತಿದ್ದರಂತೆ…ಉಳಿದ ಬಣ್ಣಗಳಷ್ಟು ಸರಳ ಸಹಜವಲ್ಲ. ಗುಬ್ಬಿ ಹೂ, ಗೊರಟೆ, ಹೊಳೆ ದಾಸವಾಳ ಇವೆಲ್ಲ ಕೆನ್ನೀಲಿ ಬಣ್ಣದ ಹೂಗಳು – ಎಂ.ಆರ್. ಕಮಲಾ, ಓದಿ ಮುಂದೆ….
ಕೆನ್ನೀಲಿ ಆಗುವುದೆಂದರೆ
ಅಗಸಕೆ ಮನದ ಬಣ್ಣ ಹಚ್ಚಿ
ಕಾಡಿಗೆಯ ಕಣ್ಣ ಹೊಳಪಲ್ಲಿ ರೆಕ್ಕೆ ಬಿಚ್ಚಿ
ಅನಂತತೆಯೆಡೆಗೆ ಹಕ್ಕಿಯಾಗಿ ಹಾರಿ
ಕಾಣೆಯಾಗುವುದು
ಕೆನ್ನೀಲಿ ಆಗುವುದೆಂದರೆ
ಬಸವಳಿದ ವಿಭ್ರಾಂತಿಗಳ
ಅಮಲಿನಿಂದ ಬಿಡುಗಡೆ ಹೊಂದಿ
ನಿರ್ಲಿಪ್ತ ಭಾವದಿ
ಹೂವಿನಂತಾಗಿ ಬಿರಿಯುವುದು
ಬೇರಾಗಿ ಹೃದಯದ ಮಣ್ಣಿನಲ್ಲಿ
ಕರಗುವುದು
ಕೆನ್ನೀಲಿ ಆಗುವುದೆಂದರೆ
ಕಾಣದ ಲೋಕವನ್ನು
ಇರದ ದಾರಿಯನ್ನು
ಯೋಗಿಯಂತೆ
ಅರಸುತ್ತ ಸಾಗುವುದು
ಕಂಡುಕೊಂಡ ಸತ್ಯವನ್ನು
ಕಂಡಂತೆ ಕಾಣಿಸುವುದು
ಕೆನ್ನೀಲಿ ಆಗುವುದೆಂದರೆ
ಕತ್ತಲ ಆಲಯದಿ
ಹಣತೆಯ ಬಳ್ಳಿಗೆ ಬೆಂಕಿಯ ಕಿಡಿ ತಾಕಿಸಿ
ಬಟ್ಟ ಬಯಲಾಗುವುದು
ಹುಟ್ಟನ್ನು ಸಾರ್ಥಕತೆಯ ಅರ್ಥದಿ ಬಾಳಿ
ಸಾವನ್ನು ಎದುರಲ್ಲಿ ಕಂಡು
ಸಂಭ್ರಮಿಸುವುದು
ಕೆನ್ನೀಲಿ ಆಗುವುದೆಂದರೆ
ಇಹದ ಮೋಹ ಮಾಯೆಯ
ಬಂಧ ಅನುಬಂಧಗಳ ತೊರೆದು
ಬಂಧನಗಳ ಬೇಲಿ ಕಿತ್ತೊಸೆದು
ನಿರಾಕಾಯ ರೂಪವಾಗಿ
ನೀಲಮೆಯಲಿ ಕರಗಿ
ದೈವಿಕ ಸುಗಂಧವಾಗುವುದು
- ಜಬೀವುಲ್ಲಾ ಎಂ. ಅಸದ್